[ರಾಗ ಭೈರವಿ ಝಂಪೆತಾಳ

ಶರಧಿಯನು ಬಂಧಿಸಲು | ಬೇಕೆಂದು ಶ್ರೀರಾಮ |
ತರಣಿನಂದನನಿಂದ | ಕರೆಸಿದನು ನಳನ || ||೧೨೯||

ನಳ ನಿನ್ನ ಕೈಯಿಂದ | ಒಳಗೊಂಬುದೀ ಜಲಧಿ |
ಛಲದಿಂದ ತೋರು ಭುಜ | ಬಲ ಪರಾಕ್ರಮವ || ||೧೩೦||

ಎನೆ ಹಸಾದವೆನುತ್ತ | ಹನುಮ ಹಾರಿದ ಗಿರಿಯ |
ಕೊನೆಬೆರಳಿನಿಂದುಗಿದ | ಘನಬೇಗದಿಂದ || ||೧೩೧||

ಅಂಬುಧಿಯ ನೆತ್ತಿಯೊಳ | ಗದನಿಳುಹಿ ರಾಮನ ಪ |
ದಾಂಬುಜಕೆ ಕೈಮುಗಿವು | ತದನು ಬಂಧಿಸಿದ ||] ||೧೩೨||

ರಾಗ ಗೌಳೀಪಂತು ಏಕತಾಳ

ರಘುವೀರ ಪಾಹಿ ಪಾಹಿ ಮಾಂ | ಶ್ರೀರಾಮಚಂದ್ರ || ಪಲ್ಲವಿ ||

ಪುಂಡರೀಕಲೋಚನ ಭೂ | ಮಂಡಲಾದಿಸಂರಕ್ಷಣ |
ಖಂಡಲಪೂಜಿತ ಸುಪ್ರ | ಚಂಡಸಾಹಸಾಗ್ರಗಣ್ಯ || ||೧೩೩||

ಎನ್ನಿಂದಾಗುವಂಥ ಸೇವೆ | ಯನ್ನು ಕಟ್ಟು ಮಾಡಿಸು ಪ್ರ |
ಸನ್ನ ತ್ರೈಲೋಕ್ಯ ಮೂರುತಿ | ಎನ್ನ ಪಾಲಿಸೋ ವಿಶ್ವೇಶ || ||೧೩೪||

ರಾಗ ಗೌಳಮಲಹರಿ ಅಷ್ಟತಾಳ

ನಳ ನಿನ್ನ ಕೈಯಿಂದಾಗಲಿ ಸೇತು |
ಒಳಗೊಂಬುದೀಗ ಸಾಗರನೆಂದ ಮಾತು || ಪಲ್ಲವಿ ||

ಬೆಟ್ಟ ಬೆಟ್ಟವ ತಂದು | ಕೊಟ್ಟರೆ ಕಪಿಗಳು |
ಕಟ್ಟಿಗೆ ಹವಣಿಸಿ | ಚಂದದಿ ನೀ ಕೈ |
ಮುಟ್ಟಿ ಬಂಧಿಸಿದರೆ | ಮುಂದೆ ಲಂಕೆಗೆ ದಾರಿ |
ಕೊಟ್ಟೆನೆಂದೆನುತ ಸಾ | ಗರನೆಂದ ಮಾತು || ||೧೩೫||

ವನಜಲೋಚನನೆಂದ | ಮಾತ ಕೇಳುತಲಂದಾ |
ಹನುಮ ಹಾರಿದ ಪರ್ವ | ತವನೊಂದ ಕಿತ್ತು ||
ಕೊನೆಬೆರಳಿಂದುರು | ಳಿಸಿದರೆ ನಳ ತಂದು |
ವನಧಿಯೊಳಿಟ್ಟು ರಾ | ಘವಗೆ ಕೈ ಮುಗಿದ || ||೧೨೬||

ಚರಿತೆ (ಸಾಂಗತ್ಯ) ರೂಪಕತಾಳ

ಸುರರು ಪೂಮಳೆಗಳ ಕರೆದರು ರಾಮನ |
ಚರಣದೆಡೆಗೆ ನಮೋ ಎಂದು ||
ಭರದಿಂದ ಶತಬಲಿ ಮತ್ತೊಂದು ಗಿರಿತಂದು |
ಶರಧಿಯಲಿಟ್ಟು ಬೊಬ್ಬಿರಿದ || ||೧೩೭||

ನುಂಗಿತು ತಿಮಿಯೆಂಬ ಮೀನು ಪರ್ವತವ ತಿ |
ಮಿಂಗಿಲನದರ ನುಂಗಿದುದು ||
ಸಂಗಡ ತಿಮಿಯ ತಿಮಿಂಗಲ ಗಿರಿಸಹ |
ನುಂಗಿತು ಬಳಿಕೊಂದು ಮಕರ || ||೧೩೮||

ವೃಷಭ ಕೇಸರಿ ಗಜ ಗವಯ ಗವಾಕ್ಷ ಪ |
ನಸರು ಒಂದೊಂದು ಪರ್ವತವ ||
ವಸುಧೆಯಿಂದೆತ್ತಿ ಸಮುದ್ರದೊಳಿಡಲು ಭ |
ಕ್ಷಿಸಿ ಬಾಯ ಕಳೆಯೆ ಮೀನುಗಳು || ||೧೩೯||

ನೆಗಳು ನೀರೊಳಪ್ಪಾನೆಗಳು ನಾಯಿಗಳು ಮೀ |
ನುಗಳು ಕೋಳಿಗಳು ಕೋಣಗಳು ||
ಬಗೆಬಗೆ ಜೀವಜಂತುಗಳೀ ಧ್ವನಿ ಕೇಳಿ |
ಅಗಣಿತವಾಗಿ ಕೂಡಿದವು || ||೧೪೦||

ದಡಪರಿಯಂತ ಬಾಯ್ಗಳೆದು ಚಪ್ಪರಿಸುವ |
ಬಿಡುಗಣ್ಣ ಜಲಚರಾದಿಗಳ ||
ಕಡುಹಿನಬ್ಬರಕಂಜಿ ಸುಗ್ರೀವನಜಸುತ |
ನೊಡನೆ ಪೇಳಿದನೊಂದು ಮಾತ || ||೧೪೧||

ದ್ವಿಪದಿ

ಕಂಡಿರೇ ಜಾಂಬವರು ಕಡುವಿಚಿತ್ರಗಳ |
ತಂಡತಂಡದಿ ಗಿರಿಯ ತಿಂಬ ಮೀನುಗಳ || ||೧೪೨||

ನೂತನವಿದೇನೆಂದು ನೀವು ಕಂಡುದನು |
ಪ್ರೀತಿಯಿಂ ಪೇಳಿ ಮುಂದಣ ಕಾರ್ಯವನ್ನು || ||೧೪೩||

ಸಾಧಿಸುವುದೆಂತೀಗ ಸೇತುಬಂಧನವ |
ಹಾದಿಯನು ತೋರಿ ಹಿರಿಯರು ನೀವರಿವುದ || ||೧೪೪||

ಎಂದ ಮಾತನು ಕೇಳಿ ಯೆಲ್ಲವರು ಕಡೆಗೆ |
ಬಂದರಾ ನಳನೆಡೆಗೆ ತರಣಿಜನ ನುಡಿಗೆ || ||೧೪೫||

ರಾಗ ಕೇದಾರಗೌಳ ಅಷ್ಟತಾಳ

ತಂದು ತಂದಡಕಿದ ಪರ್ವತಗಳನೆಲ್ಲ |
ತಿಂದ ಮೀನುಗಳ ನೋಡಿ ||
ಬಂದನು ನಳ ರಾಮನೆಡೆಗೆ ಹೇರಂಬನ |
ನಿಂದು ಪ್ರಾರ್ಥಿಸಿದರೆಲ್ಲ || ||೧೪೬||

ಸಕಲ ವಿಘ್ನಗಳೆಲ್ಲ ಪರಿಹರಿಸಯ್ಯ ಮೂ |
ಷಿಕರೂಢ ನೀನೆಯೆಂದು ||
ಭಕುತಿಯಿಂದೆರಗಿ ಬೇಡುವೆವು ನೀರೊಳಗೆ ಕಂ |
ಟಕ ಬಾರದಂತೆ ಕಾಯೊ || ||೧೪೭||

ಚರಿತೆ ರಾಗ ಸೌರಾಷ್ಟ್ರ ರೂಪಕತಾಳ

ಕಟ್ಟುವ ಭಣಿತ ಇದಲ್ಲ ಸಮುದ್ರವ |
ಘಟ್ಯಾಗಿ ಇರಬೇಕು ಸೇತು ||
ಕಟ್ಟಿನ ಮೊದಲಿಂದ ಬುಡವ ಶೋಧಿಸಿಕೊಂಡು |
ಬೆಟ್ಟವನಿಡಲಿ ಕಲ್ಲಿನಲಿ || ||೧೪೮||

ಶತಯೋಜನಗಲವಿಸ್ತೀರ್ಣಕ್ಕೆ ಪಾಷಾಣ |
ತತಿಯಿಂದ ಸೂತ್ರ ಸಂಕಲೆಯ ||
ಜೊತೆಯಾಗಿ ಭದ್ರಗಟ್ಟಣೆ ಸಾರಣೆಧಾತು ||
ಮಿತಿಯಿಂದ ನಡೆಯಲಿ ಸೇತು || ||೧೪೯||

ಬೆಟ್ಟವ ತರುವವರಿವರು ತಂದರೆ ಕೆಳ |
ಗಿಟ್ಟು ನಳನ ಕರದೊಳಗೆ ||
ಕೊಟ್ಟು ಬಂಧಿಸುವವರಿವರೆಂದು ಸುಗ್ರೀವ |
ಕಟ್ಟಳೆಗಳನು ಮಾಡಿಸಿದ ||೧೫೦||

ಖಳರಿಂದ ತೊಡರಾಗ ಬಾರದಂತಾಚೆಯ |
ಬಳಿಯಲಿಟ್ಟರು ವಿಭೀಷಣನ ||
ಜಲಧಿಯ ಮಥನಕ್ಕೆ ನೂರ್ಮಡಿಯಲಿ ಬೊಬ್ಬೆ |
ಗಳಲಿ ಕಟ್ಟಿದರು ಸೇತುವನು || || ೧೫೧ ||

ಬಂಗಾಳ ಗೌಳ ಗುಜ್ಜರಿಯಂಗ ವಂಗ ಕ |
ಳಿಂಗ ಕಾಶಿ ಭೋಜ ದೇಶಗಳ ||
ಸಿಂಗಳ ದ್ವೀಪದ್ವೀಪಂಗಳಲ್ಲಿಯ ಪರ್ವ |
ತಂಗಳ ತಂದಡಕಿದರು || ೧೫೨ ||

ಒಂದರ ಮೇಲೊಂದು ತಂದು ತಂದಿಡುವಾಗ |
ಅಂದಾದ ನೀರ ಗರ್ಜನೆಗೆ ||
ಹಿಂದಿನ ಶರಧಿಯ ಮಥನಕೆ ಇದು ಮಿಗಿ |
ಲೆಂದರಾಕಾಶದಿ ಸುರರು || ೧೫೩ ||

ಕೊಟ್ಟ ಪರ್ವತಗಳ ಕಟ್ಟೆಗೆ ಸೇರಿಸಿ |
ಥಟ್ಟನೆ ಬರಬರಲೆನುತ ||
ಸಿಟ್ಟು ಮಾಡುವ ಬರಲಿಲ್ಲ ಬೇಗ ಎಂದಿ |
ನ್ನೆಷ್ಟರ ಶೌರ್ಯನೊ ನಳನು || ೧೫೪ ||

ವಾರ್ಧಕ

ಎನ್ನ ಮೇಲತಿ ಪ್ರೀತಿಯಿಂದ ಲಕ್ಷ್ಮಣನಂತೆ
ಮನ್ನಿಸುವ ಶ್ರೀರಾಮನದಕೆ ತನುವಿನೊಳು ಚೈ
ತನ್ಯವುಳ್ಳನಿತು ಸಾಹಸಪಡುವೆನೆಂದೆನುತ ಚಿಣ್ಣನಂಗದ ನಡೆದನು |
ತನ್ನೊಳಗೆ ತಾನೆಯೋಚಿಸಿಕೊಂಡು ನಡೆದು ಮು
ಕ್ಕಣ್ಣನಿಹ ಗಿರಿಯನೀಕ್ಷಿಸಿ ಬಳಿಕಲಾಗಲಾನ್
ಸಣ್ಣವನು ನಮಗಿದೇ ಸಾಕೆಂದು ಪಿಡಿದ ಬಗೆ ಶಿವ ಗಿರಿಜೆಗಿಂತೆಂದನು || ೧೫೫ ||

ರಾಗ ಕೇತಾರಗೌಳ ಅಷ್ಟತಾಳ

ನೋಡಿದೆಯಾ ಗೌರಿ ರಾಮನಾಟಕವನೀ |
ರೂಢಿಯೊಳತಿಶಯವು ||
ಕಾಡ ಮಂಗಗಳೆಲ್ಲ ಮನುಜರಂದದಲಿ ಪೇ |
ಚಾಡುವ ಪಂಥಗಳ || ೧೫೬||

ನಾಡ ಪರ್ವತವೆಲ್ಲ ಕಿತ್ತುಕೊಂಡೊಯ್ದು ಬೀ |
ಸಾಡಿ ಸಮುದ್ರದಲಿ ||
ಕೇಡುಬಂತಿದಕೊ ನಮ್ಮೀ ಗಿರಿಗೆನುತಲೆ |
ಜೋಡಾಗಿ ನಡೆತಂದರು || ೧೫೭ ||

ತರಳ ನೀನ್ಯಾರ ಹೇಳಿಕೆಯಿಂದ ನಾವಿದ್ದ |
ಗಿರಿಯ ಶಕ್ತಿಯಲಿ ಕೀಳ್ವೆ ||
ಮರುಳೆ ನಮ್ಮೊಡನಿರ್ದ ಗಣಗಳ ಪರಿಯ ನೀ |
ನರಿಯೆ ಬಿಟ್ಟತ್ತ ಸಾರೊ || ೧೫೮ ||

ಯಾರು ಹೇಳಿದರೆಂದು ನಮ್ಮನ್ನು ಕೇಳ್ವ ವಿ |
ಚಾರವೆಲ್ಲಿಂದ ಬಂತು ||
ಶ್ರೀರಾಮನವರು ಕಟ್ಟಿಸುವ ಸೇತುವೆಗಾಗಿ |
ಹೋರುವೆನಿದರೊಳಗೆ || ೧೫೯ ||

ಕಪಿಬಾಲ ಕೇಳು ಕೈಲಾಸದ ಮಹಿಮೆಯ |
ಗುಪಿತವನರಿಯೆ ನೀನು ||
ತ್ರಿಪುರಾರಿ ನಾನು ಪಾರ್ವತಿಯೆಂದಡಿವಳೀಗ |
ಕಪಟ ಮಾತಲ್ಲವಯ್ಯ || ೧೬೦ ||

ಹರನಾದಡೇನು ಶಂಕರನಾದಡೆನಗೆ ಗೋ |
ಚರವಿಲ್ಲ ಮತ್ತೊರ್ವರ ||
ತರಣಿನಂದನನಾಜ್ಞೆ ಕಂಡ ಪರ್ವತಗಳ |
ಹೊರುವುದೆ ಛಲ ನಮಗೆ || ||೧೬೧||

ದ್ವಿಪದಿ

ಕಂಡೆಯಾ ಗಿರಿಜಾತೆ ಕಡುವಿಚಿತ್ರಗಳ |
ಪುಂಡರೀಕಾಕ್ಷ ಶ್ರೀರಾಮ ಚರಿತೆಗಳ || ||೧೬೨||

ಕಾಡಗಿಡಗಳಲಿರುವ ಕಪಿಗಳೈತಂದು |
ಈಡರಿತು ನರರ ಸೇವೆಯ ಮಾಳ್ಪರಿಂದು || ||೧೬೩||

ಧರೆಯೊಳತಿ ಸೋಜಿಗವಿದೆನುತ ಸತಿಗೆಂದು |
ಮರಳಿಶಿವ ನುಡಿದನಾ ವಾನರನೊಳಂದು || ||೧೬೪||

ಏ ಕಪೀಶ್ವರ ಕೇಳು ಎನಗೂ ರಾಮನಿಗೂ |
ಏಕಸ್ವಭಾವಗಳು ಎಲ್ಲರರಿತಿಹರು || ||೧೬೫||

ಶಿವ ನಾನು, ಎನಗೆ ಸತಿ ಇವಳು ಗಿರಿಜಾತೆ |
ಪ್ಲವಗಪೋತಕ ಕೇಳು ಬದಲಿನ್ನು ಮಾತೇ || ||೧೬೬||

ಹರಿಹರರು ನಮ್ಮೊಳಗೆ ಭೇದವಿಕ್ಕಿದರೆ |
ಧರೆಯೊಳಿರುವರು ನರಕ ಹೊಂದದಿನ್ನಿಹರೆ || ||೧೬೭||

ರಾಮ ನಾರಾಯಣನು ನರನಾಗಿ ಬಂದು |
ಆ ಮಹಾರಾಕ್ಷಸರ ಕೊಲುವ ಬಗೆಗೆಂದು || ||೧೬೮||

ರಾಗ ಘಂಟಾರವ ಝಂಪೆತಾಳ

ಇಂದುಶೇಖರನೆತ್ತ | ಇನಕುಲಾಧಿಪನೆತ್ತ |
ಹೊಂದಿಕೆಯ ಮಾತಲ್ಲ | ಹೊಗಳಿ ಫಲವಿಲ್ಲ || ||೧೬೯||

ಎರಕವಾದರೆ ನೀವು | ಎನಗೆ ಮತ್ಸರವಿಲ್ಲ |
ತರಿಸೊಂದು ಗುರುತವನು | ತಿರಿಗಿ ಹೋಗುವೆನು || ||೧೭೦||

ಹೊರತಾಗಿ ಮಾತಿಲ್ಲ | ಹೋಗುವವ ನಾನಲ್ಲ |
ಬರಿಯ ಬೂಟುಗಳಿಂದ | ಬಳಲಲೇಕೆಂದ || ||೧೭೧||

ವಚನ || ಇಂತೆಂದು ಅಂಗದನಾಡಿನ ಮಾತಿಗೆ ಪರಮೇಶ್ವರನು ಸಂತೋಷಚಿತ್ತದಿಂದ ತಾನೇ ರಾಮಮೂರ್ತಿಯಾಗಿರಲು ಅಂಗದನದಂ ಕಂಡನದೆಂತೆನೆ –

ವಾರ್ಧಕ

ರಾಮಾವತಾರವಂ ನೆರೆಕಂಡು ಬೆರಗಾಗಿ
ಆ ಮಹಾಪರ್ವತವನಲ್ಲಿಯೇ ಬಿಟ್ಟಿದರ
ಸಾಮೀಪ್ಯದಲ್ಲಿರುವ ಉಪಪರ್ವತಂಗಳಂ ಧರಿಸುತಂಗದ ನಡೆದನು |
ಭೂಮಿಯನ್ನೇ ಹೊತ್ತು ತಂದನೋ ಎಂಬಂತೆ
ರಾಮಲಕ್ಷ್ಮಣರು ಕಂಡತಿಚೋದ್ಯಮಂ ಬಡಲು
ಪ್ರೇಮದಿಂ ನಳನ ಕೈಗಿಡಲು ನಡೆದುದು ಸೇತು ದಶಯೋಜನಾಂತರದಲಿ || ||೧೭೨||

ರಾಗ ತೋಡಿ (ಸಾಂಗತ್ಯ) ರೂಪಕತಾಳ

ಬಾಲನಂಗದನ ಸಾಹಸವನ್ನು ನೆರೆಕಂಡು |
ನೀಲನುತ್ತರಕಾಗಿ ಬಂದು ||
ಕೀಳಲು ಮಂದರಗಿರಿಯನ್ನು ಸುರರಂಜಿ |
ಕೇಳಿದರಾ ಕಪೀಶ್ವರನ || ||೧೭೩||

ತರುಚರಾಧಿಪ ಕೇಳ್ನೀನರಿಯೆಯ ಮಂದರ |
ಗಿರಿಯ ಸೌಭಾಗ್ಯಲಕ್ಷಣವ ||
ಸುರರಿಗೆ ಬೇಕಾದ ದಿವ್ಯವಸ್ತುಗಳು ಇ |
ಲ್ಲಿರುವವಿಂತೆಂಬ ವಾರ್ತೆಗಳು || ||೧೭೪||

ಭೂಮಿಯೊಳತಿರೇಕವಾದ ದುಶ್ಚರ್ಯವ |
ರಾಮಸೇವಕರು ಮಾಡುವರೆ ||
ಈ ಮಾತು ಕೇಳದೆ ಕೀಳ್ವಾಗ ನಾರದ |
ಮಾಮುನಿ ಬಂದು ಬೋಧಿಸಿದ || ||೧೭೫||

ಮತ್ತಾಗ ಮುನಿಯ ಮಾತಿನ ಮೇಲೆ ಬಿಟ್ಟಲ್ಲಿ |
ಸುತ್ತಣ ಗಿರಿಗಳ ಕಿತ್ತು ||
ಹೊತ್ತುಕೊಂಡೈತಂದು ಕೊಡಲು ಸಾಗಿತು ಸೇತು |
ಹತ್ತು ಯೋಜನದಗಲದಲಿ || ||೧೭೬||

ರಾಗ ಬಿಲಹರಿ ಏಕತಾಳ

ಇವರ ವಿಕ್ರಮ ಒಂದು ಕಡೆಗಿಡು ಕಮಲಸಂ |
ಭವಜಾತ ನೆನೆದಂಥ ಹವಣ ನೀ ನೋಡು ||
ತವಕದಿಂದೆದ್ದು ವಿಂಧ್ಯವ ದಾಟಿ ಮುಂದೆ ಜಾಂ |
ಬವರು ಸಂಧಿಸಿಕೊಂಡರೈ ಹಿಮವಂತನ || ||೧೭೭||

ನೆಗಹಿ ಜೋಲುವ ಜೂಲುಗೂದಲನಗಲಿಸಿ |
ಮಿಗೆ ತುದಿ ಮೊದಲ ನೋಡಿದರೆ ಅಜ್ಜಯ್ಯ ||
ನೆಗಹಲು ಚೈತನ್ಯವಿಲ್ಲ ವೃದ್ಧರು ನಾವು |
ನಗುವವರ್ನಕ್ಕರೆ ನಗಲೆಮಗಿದೇ ಸಾಕು || ||೧೭೮||

ವಾರ್ಧಕ

ಎರಡು ಸಾವಿರ ಯೋಜನಗಲ ಬಳಕೈವತ್ತ
ಯೆರಡು ಸಾವಿರ ಯೋಜನೋನ್ನತದ ಪರ್ವತವ
ನೆರಡು ಕೈಯಿಂದಲುಗಿ ಕೀಳುತಿರೆ ಸಪ್ತಸಾಗರ ಕಲಿಕಿ ನೆಲವದುರಿತು |
ಇರದಿದೇನಾಶ್ಚರ್ಯವೆಂದು ಮೇನಕೆದೇವಿ
ಬೆರಗಾಗಿ ಮನಗುಂದಿ ಭರದಿಂದ ನಡೆತಂದು
ಹಿರಿಯರಿದು ನೆನೆದ ಕಟ್ಟಾಳುತನ ಲೇಸೆಂದು ಹಿರಿಮನದೊಳಿಂತೆಂದಳು || ||೧೭೯||

ರಾಗ ಮಧ್ಯಮಾವತಿ ಏಕತಾಳ

ಏಕಿದ ಕೀಳುವೆ ಏ ಕಪೀಶ್ವರನೆ ಪಿ |
ನಾಕಿ ಶಂಕರಗೆ ಬೇಕಾದವ ನೀನು ||
ಲೋಕದೊಳಗೆ ಬಲು ಹಿರಿಯರಾದವರಿಂಥ |
ಕಾಕುಕೃತ್ಯವನಾಚರಿಸುವುದುಂಟೆ || ||೧೮೦||

ಶಿವನಿಗೆ ಮದುವೆಯಾದವಳೆನ್ನ ಮಗಳು ಮ |
ತ್ತಿವನೆನ್ನ ರಮಣ ಮೇನಕೆಯು ನಾನು ||
ದಿವಿಜರು ಸಹಿತಲಂಜುವರೆಮ್ಮ ಬಳಗಕ್ಕೆ |
ಪ್ಲವಗಾಧಿಪತಿ ನೀನೇ ನೋಡು ಸನ್ಮತದಿಂದ || ||೧೮೧||

ಮಾರವೈರಿಯ ಚಿತ್ತ ದೂರವಾಗುವದೆಂದು |
ಬೇರುಡಿಯದ ಹಾಗೆ ಮೆಲ್ಲನಲ್ಲಿರಿಸಿ ||
ನಾರಿ ನಮ್ಮಮ್ಮ ನೀ ಹೋಗೆನುತಲ್ಲಿದ್ದ |
ಬೇರೆ ಪರ್ವತಗಳ ಬಿಡಿಸಿದನಜಸುತ || ||೧೮೨||

ಶಿರದೊಳೆಂಟದ್ರಿಭುಜವೆರಡರೊಳ್ನಾಲ್ಕು ನಾಲ್ಕು |
ಕರದೊಳೊಂದೊಂದು ಕಂಕುಳೊಳಗೊಂದೊಂದು ||
ಚರಣದೋಳುರುಳಿಸಿ ಬಹುದ ಕಾಣುತಲಾಗ |
ಬೆರಳ ಮೂಗಿನೊಳಿಟ್ಟು ಶಿರವ ತೂಗಿದ ರಾಮ || ||೧೮೩||

ಮೊದಲಿಗರಿವರು ಮಾಡಿದ ಕಷ್ಟಕತಿಮೆಚ್ಚಿ |
ಇದಿರು ಬಂದಾಕ್ಷಣ ಭಯಭಕ್ತಿಯಿಂದ ||
ಮುದದಿ ಬೊಬ್ಬಿಡುತ ಕಟ್ಟಿಗೆ ಸೇರಿಸಲು ಸೇತು |
ಒದಗಿತು ಹಲವು ಯೋಜನದ ಪರ್ಯಂತ || ||೧೮೪||

ವಾರ್ಧಕ

ಶಿರದೊಳೆಂಟದ್ರಿ ಭುಜವೆರಡರಲಿ ನಾಲ್ಕು ನಿಜ
ಕರದಳೊಂದೊಂದು ಗಿರಿ ಕೌಂಕುಳೊಳಗೆರಡೆರಡು
ಚರಣಗಳಿನೆರಡೆರಡನುರುಳಿಸುತ ಭರದಿ ನಡೆತರುವ ಸಂಭ್ರಮವ ಕಂಡು |
ಬೆರಳ ಮೂಗಿನೊಳಿಟ್ಟು ಶಿರವ ತೂಗಿದ ರಾಮ
ತ್ವರಿತದೊಳಿದಿರ್ಬಂದು ನಳನಧಿಕಶಕ್ತಿಯಿಂ
ದಿರದೆ ಕೈಗೊಟ್ಟು ಕಟ್ಟಿಗೆ ಸೇರಿಸಲು ಸೇತು ಹಲವು ಯೋಜನ ನಡೆದದು ||] ||೧೮೫||

ರಾಗ ಸೌರಾಷ್ಟ್ರ ರೂಪಕತಾಳ

ಈ ಸರ ಬಗೆಯೆಲ್ಲ ಕಂಡನು ಮುಖ್ಯ ಪ್ರಾ |
ಣೇಶನ ಸುತ ಹನುಮಂತ ||
ಈ ಸಮಯದಿ ಸುಮ್ಮನಿದ್ದರೆ ಒಡೆಯಗೆ |
ಬೇಸರಾಗುವುದು ಚಿತ್ತದಲಿ || ||೧೮೬||

ಖಂಡ ಖಂಡವ ದಾಟಿ ಬಂದು ಹತ್ತಿರ ನಿಂದು |
ಕಂಡನೆ ಮೇರುಪರ್ವತವ ||
ಪುಂಡರೀಕಾಕ್ಷನ ಸೇವೆಗೀ ಗಿರಿಯನ್ನು |
ಕೊಂಡೊಯ್ದು ಕೊಡುವೆ ನಾ ನಳಗೆ || ||೧೮೭||

ಲಕ್ಷ ಯೋಜನದುದ್ದ ಮೇಲೆ ನೋಡಿದರೊಂದು |
ಲಕ್ಷ ಯೋಜನದ ವಿಸ್ತಾರ ||
ಲಕ್ಷ್ಮಣಾಗ್ರಜ ಕಂಡಿಂದೆನ್ನ ಕಷ್ಟಕೆ ಮೆಚ್ಚಿ |
ಸುಕ್ಷೇಮದಿಂದ ಪಾಲಿಸುವ || ||೧೮೮||

ಅಬ್ಬರಿಸುತ ಕೈಯ ಚಪ್ಪಳಿಸುತ ಹಾರಿ |
ಉಬ್ಬಿ ಶಕ್ತಿಯೊಳಲುಗಿದರೆ ||
ತಬ್ಬಿಬ್ಬಾಯಿತು ಸಪ್ತಲೋಕ ಮಾನಸದಿಂದ |
ಎಬ್ಬಿಸಿತಬುಜಸಂಭವನ || ||೧೮೯||

ವಾರ್ಧಕ

ಪ್ರಳಯ ಕಂಪನದಿಂದ ಸಡಿಲಿತೆನೆ ಸೇತು ಕಳ
ವಳ ಬೇಡ ಹನುಮಂತ ನಮ್ಮ ಸೇವೆಗೆ ಮಾಳ್ಪ
ಕೆಲಸವಿದು ಬೆದರಲ್ಯಾಕರೆನಿಮಿಷ ಮಾತ್ರದಲಿ ತಿಳಿಯಬಹುದೆಂದ ರಾಮ |
ನಳಿನಸಂಭವನಿತ್ತಲರಿದು ರಾಮನ ಕೆಲಸ
ದೊಳವು ಲೇಸೆನುತ ಹತ್ತಿರ ಬಂದು ನೋಡಿದನು
ಭಳಿರೆ ಹನುಮಂತ ಮೆಚ್ಚಿದೆ ನಿನಗೆ ನೀ ಮೂರ್ಖರೊಳಗೆ ಸಲೆ ಜಾಣನಹುದೋ || ||೧೯೦||

[ಕೆಲಸವಿದು ಇದನರಿಯಬಹುದು ಅರೆನಿಮಿಷದೊಳು
ಕಲಿಹನುಮನಾಗಮವನೆಂದೆನುತ ಬಲಿಮುಖರ
ಬಲದೊಳಗೆ ಸುಗ್ರೀವ ಜಾಂಬವಂತರ ಕೂಡೆ ಮಾತಾಡುತಿರಲಿತ್ತಲು |
ಜಲಜಸಂಭವನರಿತು ಬೆರಗಾಗಿ ತನ್ನ ಮನ
ದಲಿ ನೋಡಿದರೆ ಪ್ರಳಯ ದೂರವಿಹುದೆಂದೆನುತ
ಬಲು ಬೇಗ ನಡೆತಂದು ಪವನಸಂಜಾತನಂ ಕಂಡವನೊಳಿಂತೆಂದನು ||] ||೧೯೧||

ರಾಗ ಮೋಹನ ಏಕತಾಳ

ಜಾಣ ನೀನಹುದೊ ಕಪಿ | ನಿನ್ನಂಥ ಸುಪ್ರ |
ವೀಣರಿಲ್ಲೈ ಜಗದಿ ||
ಕಾಣಲಂಜುವರು ಗೀ | ರ್ವಾಣರೀ ಗಿರಿಯನ್ನು |
ತ್ರಾಣದಿಂದನೀ ಕೀಳುವೆನೆಂಬ ವಿ |
ಧಾನ ಒಳ್ಳಿತದಕೇನು ಮತ್ಸರವೆ || ||೧೯೨||

ಲೋಕ ಲೋಕಂಗಳಿಗೆಲ್ಲ | ಆಧಾರವಾದ |
ಶ್ರೀಕರ ಭೂಧರವ ||
ನೀ ಕೀಳಲಾಗಿ ಮತ್ತಿ | ನ್ನೇಕೆ ಸೇತುಗಳಲ್ಲಿ |
ಸಾಕಾರಿಸಿತು ಬ್ರಹ್ಮಾಂಡಚತುಷ್ಟಯ |
ಚಾಕರಿ ಸಂತೆಮಗೀ ಕೆಲಸದಲಿ || ||೧೯೩||

ಚಂದ್ರಾದಿತ್ಯಾದಿ ಗ್ರಹರ | ಕಾಲದ ಚಕ್ರ |
ನಿಂದಿರ್ಪುದೀ ಪ್ರಪಂಚ ||
ಮಂದರವಿದನು ನೀ | ನಿಂದು ಕಿತ್ತಿಡಲು ಮ |
ಹೇಂದ್ರಮುಖ್ಯ ಸುರವೃಂದ ಜಾನಕಿ ರಾಮ |
ಚಂದ್ರ ಸೇತುಸಹ ಮುಂದೆಲ್ಲಿಹುದೈ || ||೧೯೪||

ರಾಗ ಭೈರವಿ ಝಂಪೆತಾಳ

ಸರಸಿಜೋದ್ಭವ ಕೇಳು | ಸಾಕು ಕೋಪಿಸಬೇಡ |
ಅರಿತುಕೊಂಡೆನು ನಾನು | ಅಂತರಂಗವನು || ||೧೯೫||

ಬೇಕಾದ ಪರ್ವತವ | ನಾ ಕೊಂಡುಪೋದರೀ |
ಲೋಕಾನುಲೋಕಗಳು | ತಾ ಕೆಡುವವೈಸೆ || ||೧೯೬||

ಬಾಲವನು ಸಲೆ ಬಳಸಿ | ಕೊಂಡೊಯ್ವೆ ನೀ ಗಿರಿಯ
ಊಳಿಗವ ಮುಗಿಸಿ ತಹೆ | ಹಾಳಾಗದಂತೆ || ||೧೯೭||

ಎಂಬ ಮಾತಿನ ಮೇಲೊ | ಡಂಬಡಿಸಿದನು ಕಮಲ |
ಸಂಭವರ ಕೈ ವಿಡಿದು | ನಂಬಿಸಿದನಾಗ || ||೧೯೮||

ನಾಳೆ ನಮ್ಮೊಡೆತನವ | ಪಾಲಿಸುವ ನೀನಾದ |
ಮೇಲೆ ನಾ ಹೆಚ್ಚಿನ್ನು | ಹೇಳಿ ಫಲವೇನು || ||೧೯೯||

ತನ್ನ ಮನೆ ಬದುಕುಗಳ | ತಾನೆ ಕೆಡಿಸುವರುಂಟೆ |
ಇನ್ನು ನೀನೇ ನೋಡು | ನಿನ್ನ ಮನದೊಳಗೆ || ||೨೦೦||

ವಾರ್ಧಕ

ಮಾತಿನೊಳೊಡಂಬಡಿಸಿ ಕಮಲಸಂಭವನವನ
ಪ್ರೀತಿಯಲಿ ಸಂತಯ್ಸಿ ಇತ್ತ ಮಹಮೇರು ಸಂ
ಗಾತದೊಳಗಿರುವಂಥ ದ್ರುಪದಕಾಂಚನ ಬಿಡಿಸಿ ಪೊತ್ತ ನೂರೆಣಿಕೆಯಿಂದ |
ವಾತಸಂಭವನ ಸೇವಾಮಹಿಮೆಗೆಂದು ರಘು
ನಾಥಲಕ್ಷ್ಮಣರು ಪ್ರಸಂಗಿಸಲು ನಳನ ಕೈ
ಯಾತುವಿಗೆ ಪಸರಿಸಿತು ಹನುಮ ತಂದದರೊಳಗೆ ಸಂಪೂರ್ಣವಾಯ್ತು ಸೇತು || ||೨೦೧||

ರಾಗ ಸೌರಾಷ್ಟ್ರ ರೂಪಕತಾಳ

ತುಂಬಿತು ಸೇತು ಹೋ ಹೋ ಸಾಕು ತರಬೇಡ |
ವೆಂಬ ಬೊಬ್ಬೆಗಳ ಸಂಭ್ರಮಕ್ಕೆ ||
ಮುಂಬರಿದಲ್ಲ್ಯಲ್ಲೇ ಬಿಸುಟು ಸುಗ್ರೀವ ಪ |
ದಾಂಬುಜಕಭಿನಮಿಸಿದರು || ||೨೦೨||

ಕಲ್ಲೆಡೆಯಲಿ ಮಣ್ಣು ಜರಿದು ಬೀಳದ ತೆರ |
ನಲ್ಲಿಗಲ್ಲಿಗೆ ಭದ್ರವಾಗಿ ||
ಚೆಲ್ಲುತ್ತ ತೆರೆ ಬಡಿವಲ್ಲಿಗೊತ್ತೊತ್ತಾಗಿ |
ಕಲ್ಲಸಂಕಲೆಯನಿಕ್ಕಿದರು || ||೨೦೩||

ಪಂಕಜಾಂಬಕ ನಿಂತ ಪಾದದ ಬಳಿಯಿಂದ |
ಲಂಕೆಯ ದಡಪರಿಯಂತ |
ಸಂಕೋಲೆ ಸರಪಣಿ ಪಾಷಾಣ ಮಣ್ಣಿಂದ |
ಲಂಕರಿಸಿತು ಸೇತು ನಡೆದು || ||೨೦೪||

ಮಣ್ಣ ಸಾರಣೆ ಮೇಲುಗಟ್ಟು ತೋರಣಗಳ |
ಚಿನ್ನದ ಕಲಶ ಕನ್ನಡಿಯ ||
ಚೆನ್ನಾಗಿ ರಚಿಸಿದನಾ ವಿಶ್ವಕರ್ಮನ |
ಬಿನ್ನಾಣವೆಂತು ಹೆಚ್ಚಿನದು || ||೨೦೫||

ಮೊಳಗಿತು ಭೇರಿ ತಮ್ಮಟೆ ವಾದ್ಯ ಸುರಪುರ |
ದೊಳಗೆ ಕಟ್ಟಿದರು ತೋರಣವ ||
ನಳಿನಲೋಚನ ರಾಮ ಜಯ ಜಯವೆಂದು ಪೂ |
ಮಳೆಗಳ ಸುರಿದರಂಬರದಿ || ||೨೦೬||

ಭಾಮಿನಿ

ಕುಶನೆ ಕೇಳೈ ಪುಷ್ಯ ಶುದ್ಧದ
ದಶಮಿಯಲಿ ಪ್ರಾರಂಭವಾಯಿತು
ಪಸರಿಸಿತು ಸಂಪೂರ್ಣವಾಗಿ ತ್ರಯೋದಶಿಯೊಳಂದು |
ವಸುಧೆ ಬೆಳಗಿದಳೆಂಟು ದೆಸೆಯಲಿ
ಕುಸುಮಮಳೆಗಳ ಸುರಿದರಮರರು
ಪೆಸರಿಡಿಸಿತೀ ಸಂಧಿ ಕಣ್ವಪುರೇಶನೊಲವಿನಲಿ || ||೨೦೭||

|| ಸೇತುಬಂಧನ ಪ್ರಸಂಗ ಮುಗಿದುದು ||