ರಾಗ ಸೌರಾಷ್ಟ್ರ ಅಷ್ಟತಾಳ
ಕಂಡದ್ದು ನುಡಿದರೆ ಕೋಪ ವೆಗ್ಗಳಿಸುವ |
ದಣ್ಣದೇವ | ತನ್ನ |
ಮಂಡೆ ಘಟ್ಯೆನುತಲಿ ಮರಕೆ ಜೆಪ್ಪುವದುಂಟೆ |
ಅಣ್ಣದೇವ || ||೬೧||
ರೋಗಿಗೆ ಮದ್ದು ಬಾಯಿಗೆ ಸೊಗಸಪ್ಪುದೆ
ಅಣ್ಣದೇವ | ನಿನ |
ಗೀಗೆನ್ನ ನುಡಿ ವಿಷವಾಗಿ ಸಂಭವಿಸಿತೆ |
ಅಣ್ಣದೇವ || ||೬೨||
ಎಚ್ಚರಿತಿರುವರೆ ಸಮಯ ಬಂದೊದಗಿದೆ |
ಅಣ್ಣದೇವ | ಇಂಥ |
ಹುಚ್ಚು ಬುದ್ಧಿಯಲಿ ನೀ ಸಂದು ತಾ ಕೆಡಬೇಡ |
ಅಣ್ಣದೇವ || ||೬೩||
ಅಪ್ಪಡೆ ನಿನಗೆ ನಾಚಿಕೆಯೆನಗರುಹಯ್ಯ |
ಅಣ್ಣದೇವ | ನಾ ಕೊಂ |
ಡೊಪ್ಪಿಸಿಬರುವೆ ರಾಮನಿಗೆ ಜಾನಕಿಯನ್ನು |
ಅಣ್ಣದೇವ || ||೬೪||
ಧೂರ್ತರ ಮತ ನಿನಗಾಯ್ತೆಷ್ಟ ಪೇಳ್ದರೂ |
ಅಣ್ಣದೇವ | ಪುರು |
ಷಾರ್ಥವಿವಿಲ್ಲದೆ ವಂಶಕೆ ನೀರ ಕೊಡಿಸಿದೆ |
ಅಣ್ಣದೇವ || ||೬೫||
ದಾಶರಥಿಯ ಕೂಡೆ ಕಲಹ ಬೇಡೆಂದರೆ |
ಅಣ್ಣದೇವ | ವಿ |
ನಾಶಕಾಲಕೆ ಬುದ್ಧಿ ವಿಪರೀತವಾಯಿತೆ |
ಅಣ್ಣದೇವ || ||೬೬||
ಲೇಸು ಬಾರದು ನಿನಗಿದರಿಂದ ತಿಳಿದುಕೊ |
ಅಣ್ಣದೇವ | ಬೇಡ |
ನಾ ಸಾರಿದೆ ಗಂಟ ಕಟ್ಟಿಕೊ ಸೆರಗಿಲಿ |
ಅಣ್ಣದೇವ || ||೬೭||
ವಾರ್ಧಕ
ಕೂಗಿ ಗಗನದೊಳು ನಿಂದಗ್ರಜಗೆ ನೀತಿಯಂ
ಬೇಗದಲಿ ಪೇಳೆ ಖಳನಾಜ್ಞೆಯಿಂ ಪಟುಭಟರು
ತಾಗಿದರು ಖಡ್ಗ ತೋಮರ ಕುಂತ ಮೊದಲಾದ ನಾನಾವಿಧಾಸ್ತ್ರಗಳಲಿ |
ಭಾಗವತಜನಪರುಷ ಬಲುಭಟರ ನುಗ್ಗರೆದು
ಸಾಗರವನುತ್ತರಿಸಿ ಕಪಿಸೈನ್ಯಮಂ ಕಂಡು
ರಾಘವ ಪರಾಕು ಜಯ ಚಿತ್ತಾವಧಾನವೆಂಬಾಗ ರಥವಂ ಕಂಡರು || ||೬೮||
ರಾಗ ಕಾಂಭೋಜಿ ಝಂಪೆತಾಳ
ಆರಿವನು ಗಗನದಲಿ ಕೈ ಮುಗಿದು ನುತಿಗೆಯ್ವ |
ಶ್ರೀರಾಮ ಶರಣೆಂಬ ಶರಣ ||
ಮಾರುತಜ ನೀ ಹೋಗಿ ನೋಡಿ ಬಾರೆಂದೆನುತ |
ವೀರ ಸುಗ್ರೀವ ಕಳುಹಿದನು || ||೬೯||
ಬಂದು ಮಾತಾಡಿಸಿದ ನಾ ವಿಭೀಷಣನ ದಶ |
ಕಂಧರನ ಕಲಹಕಾರಣವ ||
ಹೊಂದಿಕೆಯ ತಿಳಿದು ರಘುಪತಿಗೆ ಸೂಚನೆಗೈಯ |
ಲಂದು ಪೊಡಮಡುತ ನಡೆತಂದ || ||೭೦||
ರಾಗ ಭೈರವಿ ತ್ರಿವುಡೆತಾಳ
ರಾಮ ರಾಮ | ದಶರಥ | ರಾಮ ರಾಮ || ಪಲ್ಲವಿ ||
ಕಾಮಪಿತಕಮಲಾಕ್ಷಸಾಗರ | ಭೀಮಬಲ ನಿಸ್ಸೀಮ ಸೀತಾ || ರಾಮ || ಅನುಪಲ್ಲವಿ ||
ವೀರವಿತರಣ ವಿಜಯ ಸದ್ಗುಣ
ಸಾರವರ ಕೇಯೂರಕಂಕಣ |
ಹಾರ ಶರಧಿಗಭೀರ ಖಳಸಂ |
ಹಾರ ಮತಿವಿಸ್ತಾರ ನತಮಂ |
ದಾರ ಶಾಸ್ತ್ರವಿಚಾರ ಧರ್ಮೋ |
ದ್ಧಾರ ನಿಗಮವಿದೂರ ನಿತ್ಯವಿ |
ಚಾರ ಶುಭದಯಸಾರ ಪಾರಾ |
ವಾರ ಕರುಣಾಪಾರ ಶ್ರೀ ರಘು | ರಾಮ ರಾಮ || ||೭೧||
ತಂದೆಯಾಡಿದ ಮಾತಿಗೋಸುಗ |
ಬಂದೆ ಪಂಚವಟಿಪ್ರದೇಶದಿ |
ನಿಂದೆ ಖರದೂಷಣರ ರಣದಲಿ |
ಕೊಂದೆ ಮಾಯಾಹರಿಣವನು ಎಸೆ |
ದಂದೆ ಸೀತೆಯನೊಯ್ದ ರಾವಣ |
ನೆಂದು ಬಿನ್ನೈಸಿದ ಜಟಾಯುವ |
ನಂದು ಕಾಯ್ದ ಮಹಾತ್ಮನಾ ನಡೆ |
ತಂದೆ ಸಲಹೊ ಪರಾಕು ಜಯಜಯ || ರಾಮ ರಾಮ || ||೭೨||
ಭಾಮಿನಿ
ಫಣಿಶಯನ ಪರಮಾತ್ಮ ಮಾಧವ
ತ್ರಿಣಯಸಖ ತ್ರೈಜಗದ ರಕ್ಷಕ
ಪ್ರಣವರೂಪ ಪರೇಶ ನಾರಾಯಣ ನಮೋಯೆಂದು |
ಮಣಿಯುತೈತಹ ಮಂತ್ರಿಗಳಸಹ
ವನಜಲೋಚನ ಕಾಣುತಲೆ ಲ
ಕ್ಷ್ಮಣನ ನೋಡಲು ಕರವ ಮುಗಿದಾ ಹನುಮನಿಂತೆಂದ || ||೭೩||
ರಾಗ ಎರುಕಲ ಕಾಂಭೋಜಿ ಅಷ್ಟತಾಳ
ದೇವ ಚಿತ್ತೈಸಯ್ಯ ಬಂದ ರಾಕ್ಷಸನೀತ |
ರಾವಣನ ಸಹಜಾತ | ಸಜ್ಜನರೊಳು |
ಕೋವಿದನತಿ ಪ್ರಖ್ಯಾತ || ||೭೪||
ಇಂದ್ರಜಿತನು ಕಟ್ಟಿ ತಂದಾಗಳಿವನ ಮಾ |
ತಿಂದ ಬಿಟ್ಟರು ಎನ್ನನು | ಬಲ್ಲವನೀತ |
ಮುಂದಹ ಕಾರ್ಯವನು || ||೭೫||
ಸೀತೆಯ ಬಿಡುಯೆಂಬ ಮಾತ ಹೇಳಿದನೆಂದು |
ಈತನ ಜರೆದನಂತೆ | ಪಟ್ಟಣದಿಂದ |
ಆತ ನೂಕಿಸಿದನಂತೆ || ||೭೬||
ಕಾರಣಗಳನು ತಿಳಿದು ಮುಂದೆ ಬಪ್ಪಂಥ |
ಮಾರಿಗೆ ಬೆದರಿ ತಾನು | ತನ್ನಯ ಮನ |
ಸೇರದಿಲ್ಲಿಗೆ ಬಂದನು || ||೭೭||
ಸಾರಿ ಪದಾಂಬುಜ ಸೇರಿ ಬದುಕಬಂದ |
ವೀರ ವಿಭೀಷಣನು | ಇವ ಪೂರ್ವದ |
ನಾಲ್ವರು ಮಂತ್ರಿಗಳಂತೆ || ||೭೮||
ರಾಗ ಬೇಗಡೆ ಅಷ್ಟತಾಳ
ನಚ್ಚ ಬಾರದೀತನಂತರಂಗವ ಕೇಳಿ |
ಆಶ್ಚರ್ಯವಾಯಿತು ನಮಗೆಲ್ಲ ||
ಹುಚ್ಚು ಮಾತಣ್ಣತಮ್ಮಂದ್ಯರು ಎಂಬಂಥ |
ವಾತ್ಸಲ್ಯವನು ಬಿಟ್ಟು ವೈರತ್ವವೆಂಬುದ || ||೭೯||
ದೇವೇಂದ್ರ ಮೊದಲಾದ ದೇವತೆಗಳು ನಿತ್ಯ |
ಸೇವೆಯಮಾಡಿಕೊಂಡಿಹರಂತೆ ||
ಜೀವವೊಂದೊಡಲೆರಡೆಂಬ ತನ್ನಗ್ರಜ |
ರಾವಣೇಶನ ಸೌಭಾಗ್ಯವ ಬಿಟ್ಟು ಬಂದುದ || ||೮೦||
ತಂದೆಯೊಬ್ಬ ತಾಯೊಬ್ಬಳಿಗೆ ಪುಟ್ಟಿದ ಮೇಲೆ |
ಬಂದು ವೈರಗಳಲ್ಲಿ ಬಾಳ್ವದು ||
ಹೊಂದಿಕೆ ಹೊಲಬಿನ ಮಾತಲ್ಲ ಹೊಸಪರಿ |
ಎಂದಿನಸುತ ವಾಯುನಂದನಗೆನಲೆಂದ || ||೮೧||
ಹಿಂದುದ್ಯಾನದಿಂದ ಹಿಡಿದು ಕಟ್ಯೆಳಕೊಂಡು |
ಬಂದೆನ್ನ ಸಭೆಯಲ್ಲಿ ಕೊಲುವಾಗ ||
ಬಂದು ಸುಜ್ಞಾನವ ಮಾತಾಡಿದನೀತ
ನೆಂದರೆ ಹನುಮನ ನುಡಿಗೊಡಂಬಡೆ ರಾಮ || ||೮೨||
ರಾಗ ಘಂಟಾರವ ಝಂಪೆತಾಳ
ಕಪಿರಾಯ ಕೇಳು ಕೈಮುಗಿದು ಮರೆಹೊಕ್ಕವರು |
ಕಪಟದವರಾದರೂ ಕಾವುದೇ ಬಿರುದು || ||೮೩||
ಜನನಿಯೊಂದಾದರೆಯು ಮನಸಿನಂತರ ಬೇರೆ |
ಕನಕವೊಂದಾದರೆಯು ಕಾಂಚನವು ಬೇರೆ || ||೮೪||
ಏಕಮೃತ್ಪಿಂಡದೊಳನೇಕ ಪಾತ್ರೆಗಳಹವು |
ಲೋಕೇಶ ಬರೆದ ಲಿಪಿ ತಾ ಕಡಿಮೆಯಹುದು || ||೮೫||
ಪ್ರಾರಬ್ಧ ಶೇಷಮತಿ ಪಡೆದ ಹಾಗೊದಗುವುದು |
ಕೇಳಿದರೆ ನಿನ್ನಣ್ಣ ವಾಲಿಯೇ ಸಾಕ್ಷಿ || ||೮೬||
ವಾರ್ಧಕ
ಶಿರವ ಪಿಡಿದೆತ್ತಿ ಪತಿಕರಿಸಿ ಲಂಕಾಪುರದ
ಅರಸ ರಾವಣನಿಂದ ಮೇಲೀತನೆಂದು ಸ
ರ್ವರ ಮುಂದೆ ಪಟ್ಟಾಭಿಷೇಕಮಂ ಮಾಡಿಸಿದ ವರವಿಭೀಷಣದೇವಗೆ |
ಸುರರ ದುಂದುಭಿ ಮೊಳಗಿತಾಗ ಜಯಜಯವೆಂದು
ಸುರಿದರಂಬರದಿಂದ ಪೂಮಳೆಯ ರಾಮ ಸಾ
ಗರದ ತಡಿಯಲಿ ನಿಂದು ಸಕಲಕಪಿನಾಯಕರ ಕರೆದಾಗಳಿಂತೆಂದನು || ||೮೭||
ರಾಗ ಸೌರಾಷ್ಟ್ರ ಅಷ್ಟತಾಳ
ಕಂಡಿರೆ ಶರಧಿಯ ಗಂಭೀರತನವನು |
ಕಂಡಿರೇನೈ | ನಭೋ |
ಮಂಡಲ ಪರ್ಯಂತ ತುಡುಕುವ ತೆರೆಗಳ |
ಕಂಡಿರೇನೈ || ||೮೮||
ಭೋರೆಂಬ ನಾದ ಝೇಂಕಾರ ನೀರ್ಸುಳಿಗಳ |
ಕಂಡಿರೇನೈ | ಮದ |
ವಾರಣದಂತೆ ಮುಂಬರಿದು ಭೋರ್ಗರೆವುದು |
ಕಂಡಿರೇನೈ || ||೮೯||
ಕಳವಳಿಸುವ ಬಲು ಸುಳಿಗಳನೊರೆಗಳ |
ಕಂಡಿರೇನೈ | ಭಯ |
ಗಳ ಬೀರುವಂಥ ಜೀವನದ ಚಡಾಳವ |
ಕಂಡಿರೇನೈ || ||೯೦||
ಪಂಕ್ತಿ ಪಂಕ್ತಿಗಳಿಂದ ಪಾರ್ವ ಮೀನುಗಳನ್ನು |
ಕಂಡಿರೇನೈ | ಬಲ |
ವಂತವಾಗಿರುವಂಥ ಮಕರದ ನಿಕರವ |
ಕಂಡಿರೇನೈ || ||೯೧||
ಸಾಗರ ಬಲಿದು ಹೆಚ್ಚಾಗಿ ಲಂಘಿಸುವುದ |
ಕಂಡಿರೇನೈ | ಇದ|
ಹೇಗೆ ದಾಟುವುದೆಂದು ನನಗೊಂದು ತಿಳಿಯದು |
ಕಂಡಿರೇನೈ || ||೯೨||
ಚರಿತೆ, ರಾಗ ಪಂತುವರಾಳಿ ರೂಪಕತಾಳ
ದಿನಕರ ಕುಲಜಾತನಿಂತೆಂದ ಮಾತಿಗೆ |
ದಿನಕರ ತನುಜ ಬೊಬ್ಬಿರಿದ ||
ವನಧಿಯ ಕಡಿದು ದಾರಿಯ ಮಾಳ್ಪೆ ಲಂಕೆಗೆಂ |
ದೆನುತ ಕಣ್ಣಲಿ ಕಿಡಿಗರೆದ || ||೯೩||
ಸೀಳುವದೇತಕಂಬುಧಿಯನ್ನು ಲಂಕೆಗೆ |
ಪಾಳೆಯ ನಡೆವದಿನ್ನೇಕೆ ||
ಬಾಲವ ಕಳುಹಿ ರಾವಣನ ತರುವೆನೆಂದು |
ನೀಲ ಕೈಮುಗಿದ ರಾಮನಿಗೆ || ||೯೪||
ಎಳೆದು ತರುವುದೇನು ದೊಡ್ಡಿತೈ ದನುಜನ |
ಬಲವೆಲ್ಲ ಲಂಕೆಯ ಸಹಿತ ||
ಇಳುಹುವೆ ಕಣ್ಣಮುಂದೆನುತ ಗವಾಕ್ಷನಂ |
ದಿಳಿಯೆ ಸುಗ್ರೀವ ಬೋಧಿಸಿದ || ||೯೫||
ಪುರವೊಂದ ತರುವುದು ಹೆಚ್ಚೆ ಬ್ರಹ್ಮಾಂಡಖ |
ರ್ಪರವನ್ನೇ ತರುವೆನೀಕ್ಷಣದಿ ||
ಹರಿಹರ ಬ್ರಹ್ಮಾದಿಗಳ ತಂದು ಕಣ್ಣಮುಂ |
ದಿರಿಸುವನೆಂದನಂಗದನು || ||೯೬||
ಜಾಂಬವಾದಿಗಳು ಮಿಕ್ಕವರೆಲ್ಲರೊಂದೊಂದು |
ಸಂಭ್ರಮಗಳ ಮಾತಾಡಿದರೆ ||
ಕುಂಭಕರ್ಣನ ತಮ್ಮ ನೀ ಹೇಳೆಂದೆನಲು ಪ |
ದಾಂಬುಜ ಕೆರಗುತಿಂತೆಂದ || ||೯೭||
ರಾಗ ಸುರುಟಿ ಏಕತಾಳ
ಸರ್ವೋತ್ತಮ ನೀನು | ಪ್ರಪಂಚವ |
ನರಿಯದ ಬಗೆಯೇನು || ಪಲ್ಲವಿ ||
ಮಾಡುವ ತಪಗಳನು | ಸಮುದ್ರನ |
ಬೇಡುವ ದಾರಿಯನು ||
ನೋಡುವ ಗುಣಗಳನು | ನಮ್ಮನಸಡ್ಡೆ |
ಮಾಡುವ ಪರಿಗಳನು || ||೯೮||
ಉಗುರಲಿ ಸೀಳ್ವುದಕೆ | ಕೊಡಲಿಯ |
ತೆಗೆದುಕೊಳ್ಳವದೇಕೆ ||
ಮಿಗುವರಿದರೆ ವರುಣ | ನೋಡುವ ಮೇಲಾ |
ತಗೆ ಮಾಡುವ ತೆರನ || ||೯೯||
ರಾಗ ಪುನ್ನಾಗ (ತೋಡಿ) ವರಾಳಿ ಏಕತಾಳ
ಶರಣನೆಂದ ಮಾತ ಕೇಳಿ | ಸರಿಯೆಂದರವರೆಲ್ಲ |
ಶರಧಿರಾಜನೊಡನೆ ಬಟ್ಟೆ | ಕೇಳ್ವುದೆಂಬ ಸೊಲ್ಲ || ಪಲ್ಲವಿ ||
ಬಂದು ಶೋಧಿಸಿ ಸುಸ್ಥಳವ | ಮಿಂದು ಮಡಿಯನುಟ್ಟು |
ಚಂದದಿಂದ ಹಣೆಗೆ ಗೋಪೀ | ಚಂದನವನಿಟ್ಟು ||
ಒಂದೊಂದು ತುಳಸಿಯ ಸರವ | ನಂದು ಕೊರಳಿಗಿಟ್ಟು |
ಸಿಂಧುರಾಜ ಕರುಣಿಸು ಶರ | ಣೆಂದು ಪೊಡಮಟ್ಟು || ||೧೦೦||
ಅಷ್ಟ ಮದಂಗಳ ಬಾಯ | ಕಟ್ಟಿ ಮನವ ಸೆಳೆದು |
ಕಟ್ಟುವದಾರವರ ಸೆರೆಯ | ಬಿಟ್ಟು ಮುಂದೆ ಕಳೆದು ||
ಇಷ್ಟವಾದ ಮೂವರೆಡೆಯ | ಕಟ್ಟಿ ಹೊಳೆಹೊಳೆದು |
ಶ್ರೇಷ್ಠವಾದ ಸೂರ್ಯನೆಡೆಗೆ | ಮುಟ್ಟುವಂತೆ ನಲಿದು || ||೧೦೧||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕುಶನೆ ಕೇಳೊಲಿದಿತ್ತಲಾ ರಾ |
ಕ್ಷಸಶಿರೋಮಣಿ ಕಳುಹೆ ಬೇಹಿಗೆ |
ಕುಶಲದಲಿ ನಡೆತಂದು ಪಾಳ್ಯದೊ | ಳೊಸೆಯುತಿರ್ದ || ||೧೦೨||
ಹಸನವೆಲ್ಲವ ತಿಳಿದು ಬಳಿಕಾ |
ಗಸಕೆ ಚಿಗಿಯಲು ಗಿಳಿಯ ಪಿಡಿದಾ |
ಹಸುರ ರೆಂಕೆಯ ಮುರಿದು ಸೆರೆಯಲಿ | ಪಸರಿಸಿದರು || ||೧೦೩||
ಅತ್ತ ರಾಘವ ನಾಲ್ಕುದಿನ ತಾ |
ಚಿತ್ತದಲಿ ಧ್ಯಾನಿಸೆ ಸಮುದ್ರನು |
ಮತ್ತನಾಗಿರೆ ರೋಷಮಯ ತಲೆ | ಯೆತ್ತಿತಾಗ || ||೧೦೪||
ವಾರ್ಧಕ
ಸೆಳೆದು ಲಕ್ಷ್ಮಣನ ಕೈಯಿಂದ ಧನು ಶರವದಕೆ
ಪ್ರಳಯಕಾಲದ ರುದ್ರನಂತೆ ಕ್ರೋಧಾಗ್ನಿಯಂ
ಒಲಿದು ವಾಹಿಸಿ ವರುಣನಿರವ ಕಳೆಯೆನಲು ತಲ್ಲಣಿಸಿತೀರೇಳು ಲೋಕ |
ಜಲನಿಧಿಯು ಬತ್ತಿತಲ್ಲಿರುವ ಜಂತುಗಳು ತಳ |
ಮಳಿಸಿದವು ರತ್ನಗಳು ಕರಗಿದುರಿಹಾರಿದವು |
ಭರದಿ ವರುಣನ ತಗುಲಿದಂಬುಜಾಕ್ಷಿಯರರಿತು ಬಲುಬೇಗ ನಡೆತಂದರು || ||೧೦೫||
ರಾಗ ಘಂಟಾರವ ಅಷ್ಟತಾಳ
ಚಂದವೇ ರಾಮಚಂದ್ರ ಅಯ್ಯಯ್ಯೋ |
ಇಂದು ಕೆಂಡದಿಂದ ಗಂಡ | ಬೆಂದ ಬೇಗ ನಿವಾರಿಸೋ || ||೧೦೬||
ಪಾಲಿಸೋ ಕರ್ಣದೋಲೆ ಮೂಗುತಿಯನ್ನು |
ಕೋಲ ಕಿಚ್ಚು ಛಡಾಳ ಹೆಚ್ಚು | ಆಲಯಗಳು ಸುಡುತಿವೆ || ||೧೦೭||
ತಂದೆಯಲ್ಲವೆ ಎಮಗೆ ನೀ ಮನ್ನಿಸಿ |
ಮಂದಮತಿಯಾದೆಮ್ಮ ಪತಿಯ ಯಿ | ದೊಂದು ತಪ್ಪನು ಪಾಲಿಸೋ || ||೧೦೮||
ಮಂಗಳಾಕರ ಮಾಧವನ ಮಹಿಮ ಭು |
ಜಂಗಶಾಯೀ ರಂಗದೇವೋ | ತ್ತುಂಗ ಕರುಣಾಪಾಂಗನೇ || ||೧೦೯||
ಗಂಗೆ ಗೌತಮಿ ಗಂಡಕಿ ಕೌಮೋದಿ |
ತುಂಗಭದ್ರೇ ಮಂಗಳಾರ್ದ್ರೇ | ಕಂಗಳಿಂದಭಿವಂದಿಸೇ || ||೧೧೦||
ರಾಮ ರಾಜೀವನೇತ್ರ ಸದಾನಂದ |
ಸೋಮ ಸದ್ಗುಣಧಾಮ ನಿರುಪಮ | ಕಾಮಿತಾ ಫಲದಾಯಕ || ||೧೧೧||
ಭಾಮಿನಿ
ಮಡದಿಯರು ಬಾಯ್ಬಿಡುತ ಹರಿಪದ
ದೆಡೆಗೆ ನಮಿಸಿ ಸಮುದ್ರರಾಜನ
ತೊಡರ ಪರಿಹರಿಸೆಂದು ಕಪಿನಾಯಕರು ಮುಂತಾಗಿ |
ಒಡನೊಡನೆ ಕೈಮುಗಿದು ಬಿನ್ನಹ
ಗೊಡಲು ಮಾರ್ಗಣದುರಿಯ ನಂದಿಸಿ |
ಕಡಲಧಿಪಗಭಯವನು ಕರುಣಿಸಿಕೊಡುತಲಿಂತೆಂದ || ||೧೧೨||
ರಾಗ ನವರೋಜು ಏಕತಾಳ
ಪದುಮದಳಾಂಬಕಿಯರಿರ | ಪತಿಭಕ್ತಿಯುಳ್ಳರಿರ ||
ಸದರವ ಮಾಡಲು ಪಾಪ | ಅದ | ಕಾಗಿ ಬಿಟ್ಟೆವು ಕೋಪ || ||೧೧೩||
ತಾನೇ ಬಾರನು ಎಂದು | ತಪಗಳ ಮಾಡಿದೆವಿಂದು ||
ಏನೇನಾದರು ವರುಣ | ಗಿಲ್ಲದಾಯಿತು ಕರುಣ || ||೧೧೪||
ಕಾರಿಯವುಂಟೆಮಗವನ | ಕರೆತನ್ನಿ ರತ್ನಾಕರನ ||
ಮೋರೆಯ ನೋಡುವೆನೆನಲು | ನಾರಿಯರಾಕ್ಷಣ ಬರಲು || ||೧೧೫||
ವರುಣನ ಬೇಗದಿ ಕರೆದು | ಚರಣವ ಕಾಣಿಸಲರಿದು ||
ಇರಿಸಿದ ಕಾಣಿಕೆಗಳನು | ಪರಿ ಪರಿ ರತುನಗಳನು || ||೧೧೬||
ರಾಗ ಸುರುಟಿ ಆದಿತಾಳ
ದಾರಿಯ ಕೊಡು ನಮಗೆ | ಲಂಕಾಪುರ |
ದೂರಿಗೆ ನಡೆವುದಕೆ || ಪಲ್ಲವಿ ||
ದಾನವ ರಾವಣನು | ಆತ ನಮ್ಮ |
ಮಾನಗೊಂಡ ಬಗೆಗೆ ||
ಏನಾದರೂ ಕಡೆಗೆ | ಪೋಗುವೆವೀ |
ಸೇನೆ ಸಹಿತ ತಡಿಗೆ || ||೧೧೭||
ಉಗಿದ ಬಾಣ ಬಿಡಲು |
ಯಾರಾದರೂ | ಪಗೆಗಳಿದ್ದರೆ ತೋರು |
ಮುಗುಳು ನಗೆಯ ನಗುತ |
ಸುಗ್ರೀವನ | ಮೊಗವೀಕ್ಷಿಸಿಕೊಳುತ || ||೧೧೮||
[ರಾಗ ಘಂಟಾರವ ಝಂಪೆತಾಳ
ಸಾಗರನ ಕೈವಿಡಿದು | ಸಾಕು ಬಳಲಿಕೆಯೆಂದು |
ರಾಘವನ ಮನ್ನಿಸಿದ | ನಾಗ ವಿನಯದಲಿ || ||೧೧೯||
ದಾರಿಯನು ಕೊಡು ನಮಗೆ | ದಾಟಿಲಂಕಾಪುರಕೆ |
ಸೇರಬೇಕೆಮಗೆ ಕಪಿ | ಸೇನೆಮುಂತಾಗಿ || ||೧೨೦||
ದಶಕಂಠಗೂ ನಮಗು | ಧರಣಿಜೆಯ ದೆಸೆಯಿಂದ |
ಕಸರಿಕೆಯ ಕಲಹ ಬಂ | ದೊದಗಿಹುದು ಮನಕೆ || ||೧೨೧||
ತಪವ ಮಾಡಿದೆವೀಗ | ಯೆಮ್ಮ ಕಾರ್ಯಕೆ ಬೇಗ |
ಕಪಿಸೇನೆ ದಾಟುವಂ | ತುಪಕರಿಸಬೇಕು || ||೧೨೨||
ಉಗಿದ ಬಾಣವ ಬಿಡಲು | ಊರೊಳಾರಾದರೂ |
ಹಗೆಗಳಿದ್ದರೆ ತೋರು | ಹಳುವಿಲ್ಲ ನಮಗೆ || ||೧೨೩||
ರಾಗ ಶಂಕರಾಭರಣ ಅಷ್ಟತಾಳ
ರಾಮ ರಘುನಾಯಕ | ಸಜ್ಜನಭಕ್ತ |
ಸ್ತೋಮ ಶುಭದಾಯಕ ||
ಕಾಮುಕನಾದೆನ್ನಪರಾಧ ಶತಗಳ |
ನೀ ಮನದೊಳಗಿಟ್ಟುಕೊಳದೆ ರಕ್ಷಿಸಿದೆ || ||೧೨೪||
ಸೃಷ್ಟಿಯ ಮನುಜರಿಗೆ | ಆಶ್ಚರ್ಯವ |
ಪುಟ್ಟಿಸುವ ಬಗೆಗೆ ||
ಬೆಟ್ಟ ಬೆಟ್ಟವ ತಂದು ಕೊಡಲಿ ನಳನ ಕೈಯ |
ಕಟ್ಟಿಸಿಕೊಂಬೆ ಥಟ್ಟನೆ ದಾಟಲಿ ಸೇನೆ || ||೧೨೫||
ತೊಟ್ಟ ಬಾಣವ ಬಿಡಲು | ದ್ವೀಪಾಂತದೊ |
ಳೊಟ್ಟಾಗಿ ಬಲಿದಿಹರು ||
ಕುಟ್ಟಲಿ ಬಾಣ ನಿಶಾಟಕೋಟಗಳನೆಂ |
ಬಷ್ಟರೊಳಗೆ ಸೆಳೆದಿಟ್ಟನಾ ಶರವನು ||] ||೧೨೬||
ಭಾಮಿನಿ
ಪ್ರತಿಯ ತೋರಿ ನಿಶಾಟಕುಲಸಂ |
ತತಿಯ ಕೊಲಿಸಿಯೆ ರತುನಗಳ ರಘು
ಪತಿಗೆ ಕಾಣಿಕೆಯಿತ್ತು ಜಯಜಯವೆಂದು ಕೊಂಡಾಡಿ |
ಸ್ತುತಿಯ ಮಾಡುತ ನಳನ ಕೈಯಲಿ
ಪಥವ ಕೊಡುವೆನೆನುತ್ತ ತನ್ನಯ
ಸತಿಯರನು ಕರಕೊಂಡು ಸಾಗರ ನಡೆದ ನಿಜಗತಿಗೆ || ||೧೨೭||
ಕಂದ
ಶರಧಿಯ ಬಂಧಿಸಿರೆನುತಾ
ಕರುಣಾಂಬುಧಿ ರಾಮಚಂದ್ರನಪ್ಪಣೆಗೊಡಲು |
ಸುರಪುರದಿಂದಾ ನಳನಂ
ತರಣಿಸುತಂ ಕರೆಸೆ ಪೊಡಮಡುತೆಂದಂ ||೧೨೮||
Leave A Comment