ಸತ್ಯಕ್ಕೇ ಹರಿಶ್ಚಂದ್ರಮಾನೊಂದ್
ಹತ್ತೀಯಾ ಗಿಡವೇ                   || ಪ ||

ಎರೆಯ ಹೊಲನು ಕರಿಯ ಭೂಮಿ
ಕರಿಯ ಕಲ್ ಕಬ್ಬಿಣದಾ ಕೊಡನು
ಹೊತರಿನ ಬೈಗಿನ ಹೂ ಬಿಸಿಲು
ಹೊತರಿನ ಬೈಗಿನ ಎಳೆ ಬಿಸಿಲು
ಜೋಗೋ ಜೋಗೋ ಕೊನೆಗsಳು
ಜೋಗೋ ಜೋಗೋ ತೆನೆಗsಳು
ಬೆಳೆದು ಬಂದ ಹತ್ತೀನೇ ಪಿಡಿದು
ಹತ್ತಿನೇ ಪಿಡಿದಳ್ಳೇ ಇಕ್ಕಿ
ರಾಮರು ಪಿಡಿವೋ ಏಳ್ಹೆಡೆ ಬಿಲ್ಲು
ಜೋಳದ ಗಿಣಿಕೇಲ್ ಹಂಜೀ ಪಿಡಿದು
ಹಾಸುಮಣಿಯಂಬಿಗೆ ಆಧಾರ, ಅರ
ಕಾಸಿಗೆ ಒಂದು ಕದರನೆ ಹೂಡಿ
ಎಂಟೆಳೆಯದೊಂದು ರಾಟೆಯ ಪಿಡಿದು
ಅದೇ ಅದರ ಸಾಯದ ಗಂಡ
ಕದರೇಯ ಬ್ರಹ್ಮಾ __ ಸತ್ಯಕ್ಕೇ ….

ಸಣ್ಣಸಿ ನೂತು ಬಣ್ಣಿಸಿ ಹುಯ್ದು
ಒಪ್ಪೆಂದರುವೆಗೆ ಅಪ್ಪಿಗೆ ಹಚ್ಚಿ
ಇಪ್ಪತ್ತು ಮಳಕೆರಡು ನೂತೀನೇ ನೂರು
ಮಳಕೊಂದು ದುಡ್ಡು ಕಲ್ಲುಗಳನೇ ತರಿಸಿ
ನಾಲಕು ಮಂದಿ ಜಾಡರನೇ ಕರಸಿ
ಆಯ್ದಂ ಗೂಟಂ ಛಾಯ್ದಂ ಗೂಟಂ
ನಾಡ ಜಾಡರ ಮನೆ ಮಗ್ಗದ ಗೂಟಂ
ಅಚ್ಚಿನ ಮಣೆಯ ಹೆಚ್ಚಿನ ಗೂಟಂ
ಚಿತಚಿತ್ತಾರದ ಮಗ್ಗವ ಪಿಡಿದು
ಹಳದಿ ಹಸಿರು ಧಾರವ ಪಿಡಿದು
ಘಟಿಸಿ ನೇದು ಘಳಿಗೇ ತಂದರೆ
ಕೋಳೋರಿಲ್ಲವಲ್ಲ _ ಸತ್ಯಕ್ಕೇ …

ಇಂದ್ರsನೂ ಪರಮೇಶ್ವರನೊಪ್ಪುವ
ನಂದೀ ಮ್ಯಾಲನ ಕಂಬೀ ಪಠವು
ಬಂದು ಹಿರಿಯರು ಕುಳಿತುಕೊಂಡು
ಒಳಗೆ ಹೊರಗೆ ಜಾಳಿ ಪಿಂಡಿ
ಬೀಗರಿಗೊಯ್ವ ಮೈಮುಟ್ಟುಗಳು
ರಂಭೆರ ಕೊರಳಿನ ಮಾಂಗಲ್ಯ ಸೂತ್ರ
ಮುಂಗೈ ಕಟ್ಟಿದ ಕಂಕಣ ಧಾರ
ಜನಿವಾರದ ಬ್ರಾಹ್ಮಣರ ಕರೆದು
ತಲೇ ಮೇಲ್ ಮೂರಕ್ಕೀ ತೊಳೆದರೆ
ಮುಕ್ತೀ ಪಡಿಬಲ್ಲಾ _ ಸತ್ಯಕ್ಕೇ …

ಸಣ್ಣ ಸಣ್ಣ ಚಿತ್ತಾರದ ಕೌದಿ
ನೆಂಟರು ಬಂದರೆ ಹಾಸುವ ಕೌದಿ
ಬಾಣಂತ್ಹೆತ್ತರೆ ಹೊದಿಸೋ ಕೌದಿ
ತೊಟ್ಟಿಲ ಬಟ್ಟೆಯ ಕಳಿವೋ ಕೌದಿ
ಕೂಸನೆತ್ತಿ ವಾಲಾಡುವ ಕುಂಚಿಗೆ
ನಾರೀರ್ಕೊಡನಾ ಸಿಂಬಿಗಳು
ನಾರೀರ್ಜಡೆಯ ಲಾಡಿಗಳು
ಜಂಗಮದೇವರ ಜಂಗಿನ ಪಠವು
ಲಿಂಗ ಧರಿಸೋ ಕಾವೀ ವಲ್ಲೀ
ಜೋಗಿಗಳ್ ಹೊದೆವೋ ಚೀಟೀ ದಟ್ಟಿ
ಸಂತೇ ಪ್ರಾಟೆಕೋಟೆ ಗೂಡಾರಗಳು _ ಸತ್ಯಕ್ಕೇ …

ಉಟ್ಟಾವಳಿಯು ಪಟ್ಟಾವಳಿಯು
ಪಟ್ಟೆ ಮಂಚಕೊಪ್ಪುವ ಶಾಲು ಸಕಲಾತಿ
ದೊರೆಗಳು ಒರಗೋ ಲೋಡುಗಳು
ದೊರೆಗಳ ಮಹಡೀ ಮಂಚಗಳು
ಸತ್ತಿಗೆ ಸೂರೇಪಾನಗಳು
ಹೊಳೆ ಜಲತಾರದ ದಿಂಬುಗಳು
ಹೊಳೆ ಜಲತಾರದ ಗೊಂಡೆಗಳು
ದಂಡಿನ ಭೇರಿ ಜಂಬೂಖಾನ
ಆನೆಯ ಕುದುರೆಯ ಮುಖವಾಡಗಳು
ಹತ್ತೀ ನಾಡ ಸಂಜೀವನವೊಂದ್
ಹತ್ತೀಯs ಗಿಡವೇ