ಓ ಹಲಿಯಾನ್ ಹಲಿಗ್ಯೋ
ಓ ಹಲಿಯಾನ್ ಹಲಿಗ್ಯೋ           || ಪ ||

ಮೇಟಿಯ ಎತ್ತೋ ಕ್ವಾಟಿಯ ತೆನಿಯೋ
ಕಡಿಶೀಡಿ ಎತ್ತೋ ಕಟ್ಟಾಣಿ ಗುಂಡೋ
ಓ ಹಲಿಯನ್ ಹಲಿಗ್ಯೋ

ಅಲಕs ಮಲಕs ಚಿಲಕsದ ಕಣ್ಯೋ
ಅದು ನಮ್ಮ ಬಸವನ ಹಂತಿಯ ಕಣ್ಯೋ
ಓ ಹಲಿಯನ್ ಹಲಿಗ್ಯೋಗ

ಹಂತಿಯ ಕಟ್ಟೂತ ಎಂತವನ ನೆನೆದೇವು
ಕಂತುಪಿತನಾದ ಒಡಿಯಾ (ನ) – ಗಣಪಯ್ಯಾನ
ಹಂತಿ ಕಟ್ಟುತ ನಾವು ನೆನೆದೇವೇ-
ಓ ಹಲಿಯಾನ್ ಹಲಿಗ್ಯೋ

ಜಂತಗುಂಟೆಯ ಹುಲ್ಲ ಎಂತವನು ಹಾಸ್ಯಾನೋ
ಅಂತರದಲಿರುವ ಹರಳಯ್ಯ-ಹಾಸಿದ ಕುಂಟೆ
ಚಿಂತಿಲ್ಲದೆ ಕಂಕಿ ಎಳೆದಾವೋ-ಓ ಹಲಿಯಾನ್ ಹಲಿಗ್ಯೋ

ಬಸವಣ್ಣ ನಿನ ಪಾದ ಹಸನಾಗಿ ತೊಳೆದೇನು
ಹಸುರ ಗಲ್ಲೀಪ ಹೊಲಿಸೇನು-ಬಸವನ
ನೊಸಲಾಗಿಬೂತಿ ಧರಿಸೇನು-ಓ ಹಲಿಯಾನ್ ಹಲಿಗ್ಯೋ

ಅಡವ್ಯಾಗ ಗಿಡಹುಟ್ಟಿ ಗಿಡಕೆ ತೊಟ್ಟಿಲ ಕಟ್ಟಿ
ಅಡವ್ಯಪ್ಪ ಹುಟ್ಟಿ ಮಠ ಕಟ್ಟಿ-ಗುಡ್ಡದ
ಎಲ್ಲವ್ವ ಹುಟ್ಟಿ ಗುಡಿ ಕಟ್ಟಿ-ಓ ಹಲಿಯಾನ್ ಹಲಿಗ್ಯೋ

ಬರುವುತ ಬಾಗಲಕ್ವಾಟಿ ಹೋಗುತ ಹೊರಪ್ಯಾಟಿ
ಬಂಗಾರದ ಕ್ವಾಟಿ ಗೊರಮಕೊಳ್ಳ-ದ ಮಂದಿರವೋ
ಕಬ್ಬಿಣದ ಕ್ವಾಟಿ ವಟ್ನಾಳ-ಓ ಹಲಿಯಾನ್ ಹಲಿಗ್ಯೋ

ಯಾಕೋ ಬಸವಾ ಮೆಲ್ಲಕ ನಡಿತೀ
ಕಣಕsಲ ರಾಶೀ ಮೊಣಕಾಲಿಗ ಬಂತ
ಯಾಕೋ ಬಸವಾ ಮೆಲ್ಲಕ ನಡಿತೀ?
ಕಣಕsಲ ರಾಶೀ ನಡುಮsಟ ಬಂತ
ಯಾಕೋ ಬಸವಾ ಮೆಲ್ಲಕ ನಡಿತೀ?
ಕಣಕs ರಾಶೀ ತಲಿಮsಟ ಬಂತು-ಓ ಹಲಿಯನ್ ಹಲಿಗ್ಯೋ