ಅತ್ತೆ ಮನೆ ಸೊಸೆ | ಸುವ್ವಲಾಲಿ
ವೊತ್ತು ಮೀರಿ ಎದ್ದಳೆ | ಸುವ್ವಲಾಲಿ
ಅಟ್ಟಿ ಪಟ್ಟಿ ಗುಡಿಸ್ಯಾಳೆ | ಸುವ್ವಲಾಲಿ
ಬಾಗಾಲ ಸಾರಿಸ್ಯಾಳೆ | ಸುವ್ವಲಾಲಿ
ಚಿಕ್ಕೋಣಿಗೋದಾಳೆ | ಸುವ್ವಲಾಲಿ
ಸಣ್ಣ ನಾಮ ದರಿಸ್ಯಾಳೆ | ಸುವ್ವಲಾಲಿ
ಅತ್ತೆ ವೊನ್ನುಲು ದೇವಿ | ಸುವ್ವಲಾಲಿ
ಅಕ್ಕಿ ನುಚ್ಚು ಕೊಡುಬಾರೆ | ಸುವ್ವಲಾಲಿ
ನಾನು ಕೊಡುವೋದಿಲ್ಲ | ಸುವ್ವಲಾಲಿ
ನಿಮ್ಮ ಮಾವನ ಕೇಳಮ್ಮ | ಸುವ್ವಲಾಲಿ
ಮಾವ ಮಲ್ಲಿಗು ದೊರಿಯೆ | ಸುವ್ವಲಾಲಿ
ಅಕ್ಕಿ ನುಚ್ಚ ಕೊಡುಬಲ್ಲಿ | ಸುವ್ವಲಾಲಿ
ನಾನು ಕೊಡುವೋದಿಲ್ಲ | ಸುವ್ವಲಾಲಿ
ನಿಮ್ಮ ಮೈದಾನ ಕೇಳಮ್ಮ | ಸುವ್ವಲಾಲಿ
ಮೈದ ಮಲ್ಲಿಗು ದೊರಿಯೆ | ಸುವ್ವಲಾಲಿ
ಅಕ್ಕಿ ನುಚ್ಚ ಕೊಡುಬಲ್ಲಿ | ಸುವ್ವಲಾಲಿ
ನಾನು ಕೊಡುವೋದಿಲ್ಲಥ | ಸುವ್ವಲಾಲಿ
ನಿನ್ನಾದೂನಿ ಕೇಳಮ್ಮ | ಸುವ್ವಲಾಲಿ
ನಾದುನಿ ನಂಜಮ್ಮ | ಸುವ್ವಲಾಲಿ
ಅಕ್ಕಿ ನುಚ್ಚ ಕೊಡುಬಾರೆ | ಸುವ್ವಲಾಲಿ
ನಾನು ಕೊಡುವೋದಿಲ್ಲ | ಸುವ್ವಲಾಲಿ
ಗಂಡನ ಕೇಳಮ್ಮ | ಸುವ್ವಲಾಲಿ
ಗಂಡಯ್ಯ ಗಂಡಯ್ಯ | ಸುವ್ವಲಾಲಿ
ಅಕ್ಕಿ ನುಚ್ಚ ಕೊಡು ಬಲ್ಲಿ | ಸುವ್ವಲಾಲಿ
ನಾನು ಕೊಡುವೋದಿಲ್ಲ | ಸುವ್ವಲಾಲಿ
ನೆರೆ ಮನಕ್ಕುನು ಕೇಳೆ | ಸುವ್ವಲಾಲಿ
ನೆರೆ ಮನಕ್ಕಾಗಳಿರಾ | ಸುವ್ವಲಾಲಿ
ಅಕ್ಕಿ ನುಚ್ಚ ಕೊಡುಬಾರೆ | ಸುವ್ವಲಾಲಿ
ಕೊಟ್ಟಿದ್ರೆ ಕೊಡುತಿದ್ದೆ | ಸುವ್ವಲಾಲಿ
ಬಾಲಯ್ಯ ತೊಡಿಮ್ಯಾಲೆ | ಸುವ್ವಲಾಲಿ
ಅಂಗಂದ ಮಾತೀಗೆ | ಸುವ್ವಲಾಲಿ
ಮನಿಗಾದ್ರು ಬಂದಾಳು | ಸುವ್ವಲಾಲಿ

ಏಳು ಗೂಡಿನ ಕಸವ | ಸುವ್ವಲಾಲಿ
ಅವಳೊಬ್ಬಳೆ ಗುಡಿಸ್ಯಾಳೆ | ಸುವ್ವಲಾಲಿ
ಒಬ್ಬಾಳೆ ಗುಡಿಸ್ಯಾಳೆ | ಸುವ್ವಲಾಲಿ
ಮಾವ ಮಲ್ಲಿಗು ದೊರಿಯೆ | ಸುವ್ವಲಾಲಿ
ಕಸವ ವೊರಿಸಲು ಬಲ್ಲಿ | ಸುವ್ವಲಾಲಿ
ನಾನು ವೊರಿಸೋದಿಲ್ಲ | ಸುವ್ವಲಾಲಿ
ಅತ್ತೆ ಕರಿಯಮ್ಮ | ಸುವ್ವಲಾಲಿ
ಅತ್ತೆ ವನ್ನಲು ದೇವಿ | ಸುವ್ವಲಾಲಿ
ಕಸವ ವೊರಿಸಲು ಬಾರೆ | ಸುವ್ವಲಾಲಿ
ನಾನು ವೊರಿಸೋದಿಲ್ಲ | ಸುವ್ವಲಾಲಿ
ಮೈದನ ಕರಿಯಮ್ಮ | ಸುವ್ವಲಾಲಿ
ಮೈದ ಮಲ್ಲಿಗು ದೊರಿಯೆ | ಸುವ್ವಲಾಲಿ
ಕಸಗಳ ವೊರಿಸಲು ಬಲ್ಲಿ | ಸುವ್ವಲಾಲಿ
ನಾನು ವೊರಿಸೋದಿಲ್ಲ | ಸುವ್ವಲಾಲಿ
ನಾದುನಿ ಕರಿಯಮ್ಮ | ಸುವ್ವಲಾಲಿ
ನಾದುನಿ ನಂಜಮ್ಮ | ಸುವ್ವಲಾಲಿ
ಕಸಗಳೊರಿಸಲು ಬಲ್ಲಿ | ಸುವ್ವಲಾಲಿ
ನಾನು ವೊರಿಸೋದಿಲ್ಲ | ಸುವ್ವಲಾಲಿ
ನಿಮ್ಮ ಗಂಡನ ಕರೆಯಮ್ಮ | ಸುವ್ವಲಾಲಿ
ಗಂಡಯ್ಯ ಗಂಡಯ್ಯ | ಸುವ್ವಲಾಲಿ
ಕಸಗಳೊರಿಸಲು ಬಲ್ಲಿ | ಸುವ್ವಲಾಲಿ
ನಾನು ವೊರಿಸೋದಿಲ್ಲ | ಸುವ್ವಲಾಲಿ
ನೆರೆಮನೆಯಕ್ಕನ ಕರಿಯೆ | ಸುವ್ವಲಾಲಿ
ನೆರೆಮನೆಯಕ್ಕಗಳಿರ  | ಸುವ್ವಲಾಲಿ
ಕಸಗಳೊರಿಸಲಿ ಬಲ್ಲಿ | ಸುವ್ವಲಾಲಿ
ವೊರಿಸಿದ್ರೆ ವೊರಿಸ್ತುದ್ದೆ | ಸುವ್ವಲಾಲಿ
ಬಾಲಯ್ಯ ಕೈಯಾಗದೆ | ಸುವ್ವಲಾಲಿ
ಅಂಗಂದ ಮಾತೀಗೆ | ಸುವ್ವಲಾಲಿ

ಮನಿಗಾದುರು ಬಂದಾಳೆ | ಸುವ್ವಲಾಲಿ
ಮನಿಗಾದುರು ಬಂದಿನ್ನ | ಸುವ್ವಲಾಲಿ
ಎಡಗಾಲೆಬ್ಬೆಟ್ಟಿಲಿ | ಸುವ್ವಲಾಲಿ
ಅವಳೊಬ್ಬಾಳೆ ನಸಿವ್ಯಾಳೆ | ಸುವ್ವಲಾಲಿ
ಕರು ಕಾಯ ಮಕ್ಕಳಿರ | ಸುವ್ವಲಾಲಿ
ಕುರಿ ಕಾಯ ಅಣ್ಣಗಳಿರ | ಸುವ್ವಲಾಲಿ
ನಮ್ಮ ಕಸ ತಿಪ್ಪೆ ತೋರಬಲ್ಲಿ | ಸುವ್ವಲಾಲಿ
ತೋರಿದ್ರೆ ತೋರುತಿದ್ದೆ | ಸುವ್ವಲಾಲಿ
ನಮ್ಮ ದನ ಬಾಳ ದೂರಾದು | ಸುವ್ವಲಾಲಿ
ಅವಳಲ್ಲೇಯ ಆಕಿನ್ನ  ಸುವ್ವಲಾಲಿ
ಮನಿಗಾದ್ರು ಬಂದಾಳೆ | ಸುವ್ವಲಾಲಿ
ಅತ್ತೆಮ್ಮ ಅತ್ತೆಮ್ಮ | ಸುವ್ವಲಾಲಿ
ಕೈಯಿಗು ನೀರ ಕೊಡೆ | ಸುವ್ವಲಾಲಿ
ನಾನು ಕೊಡುವೋದಿಲ್ಲ | ಸುವ್ವಲಾಲಿ
ನಿಮ್ಮ ಮಾವನ ಕರಿಯಮ್ಮ | ಸುವ್ವಲಾಲಿ
ಮಾವ ಮಲ್ಲಿಗು ದೊರಿಯೆ | ಸುವ್ವಲಾಲಿ
ಕೈಯೀಗು ನೀರ ಕೊಡಿ | ಸುವ್ವಲಾಲಿ
ನಾನು ಕೊಡುವೋದಿಲ್ಲ | ಸುವ್ವಲಾಲಿ
ಮೈದಾನ ಕರಿಯಮ್ಮ | ಸುವ್ವಲಾಲಿ
ಮೈದ ಮಲ್ಲಿಗು ದೊರಿಯೆ | ಸುವ್ವಲಾಲಿ
ಕೈಯೀಗು ನೀರ ಕೊಡಿ | ಸುವ್ವಲಾಲಿ
ನಾನು ಕೊಡುವೋದಿಲ್ಲ | ಸುವ್ವಲಾಲಿ
ನಿನ್ನ ನಾದುನಿ ಕರಿಯಮ್ಮ |
ನಾದುನಿ ನಂಜಮ್ಮ | ಸುವ್ವಲಾಲಿ
ಕೈಯೀಗೆ ನೀರ ಕೊಡೆ | ಸುವ್ವಲಾಲಿ
ನಾನಾದ್ರು ಕೊಡೋದಿಲ್ಲ | ಸುವ್ವಲಾಲಿ
ನಿನ್ನ ಗಂಡನ ಕರಿಯಮ್ಮ | ಸುವ್ವಲಾಲಿ
ಗಂಡಯ್ಯ ಗಂಡಯ್ಯ | ಸುವ್ವಲಾಲಿ
ಕೈಯೀಗು ನೀರ ಕೊಡಿ | ಸುವ್ವಲಾಲಿ
ನಾನು ಕೊಡೋದಿಲ್ಲ | ಸುವ್ವಲಾಲಿ
ನೆರೆಮನೆಯಕ್ಕನ ಕರಿಯೆ | ಸುವ್ವಲಾಲಿ
ನೆರೆಮನೆಯಕ್ಕಗಳಿರ | ಸುವ್ವಲಾಲಿ
ಕೈಯೀಗು ನೀರ ಕೊಡಿ | ಸುವ್ವಲಾಲಿ
ಕೊಟ್ಟಿದ್ರೆ ಕೊಡುತಿದ್ದೆ| ಸುವ್ವಲಾಲಿ
ಪುತ್ರಯ್ಯ ತೊಡಿಯಮೇಲೆ | ಸುವ್ವಲಾಲಿ
ಅಂಗಂದ ಮಾತೀಗೆ | ಸುವ್ವಲಾಲಿ
ಮನಿಗಾದ್ರು ಬಂದಾಳೆ | ಸುವ್ವಲಾಲಿ

ಮುತ್ತಿನ ಮುಂಜೆರಗೀಲಿ | ಸುವ್ವಲಾಲಿ
ಚೊಂಬಾನೆ ಯಿಡುದಾಳೆ | ಸುವ್ವಲಾಲಿ
ಕೈಕಾಲ ತೊಳುದಾಳೆ |
ಅವಳೊಳವೀಕೆ ವೋದಾಳೆ | ಸುವ್ವಲಾಲಿ
ಅಟ್ಟಿಕೆ ಆಕ್ಯಾಳೆ | ಸುವ್ವಲಾಲಿ
ಅತ್ತು ಕಾಲೇಣೀಯ | ಸುವ್ವಲಾಲಿ
ಅವಳಿನ್ನ ಆಕ್ಯಾಳೆ | ಸುವ್ವಲಾಲಿ
ಆಗಲೆ ಆಕಿನ್ನ | ಸುವ್ವಲಾಲಿ
ದಡ ಬಡನೆ ಹತ್ತ್ಯಾಳೆ | ಸುವ್ವಲಾಲಿ
ಸಣ್ಣಕ್ಕಿ ತಗರಿಬೇಳೆ | ಸುವ್ವಲಾಲಿ
ಅವಳಿನ್ನತಗುದಾಳೆ | ಸುವ್ವಲಾಲಿ
ಅಡಿಗೇಯ ಮಾಡೇಳೆ | ಸುವ್ವಲಾಲಿ
ಅತ್ತೆಮ್ಮ ಅತ್ತೆಮ್ಮ | ಸುವ್ವಲಾಲಿ
ಊಟ ಮಾಡಲಿ ಬಲ್ಲಿ | ಸುವ್ವಲಾಲಿ
ನಾನು ಮಾಡೋದಿಲ್ಲ | ಸುವ್ವಲಾಲಿ
ಮಾವನ ಕರಿಯಮ್ಮ | ಸುವ್ವಲಾಲಿ
ಮಾವಯ್ಯ ಮಾವಯ್ಯ | ಸುವ್ವಲಾಲಿ
ಊಟ ಮಾಡಲಿ ಬಲ್ಲಿ | ಸುವ್ವಲಾಲಿ
ನಾನು ಮಾಡೋದಿಲ್ಲ | ಸುವ್ವಲಾಲಿ
ಮೈದಾನ ಕರಿಯಮ್ಮ  ಸುವ್ವಲಾಲಿ
ಮೈದ ಮಲ್ಲಿಗು ದೊರಿಯೆ | ಸುವ್ವಲಾಲಿ
ಊಟ ಮಾಡಲಿ ಬಲ್ಲಿ | ಸುವ್ವಲಾಲಿ
ನಾನು ಮಾಡೋದಿಲ್ಲ  ಸುವ್ವಲಾಲಿ
ನಾದುನಿ ಕರಿಯಮ್ಮ | ಸುವ್ವಲಾಲಿ
ನಾದುನಿ ನಂಜಮ್ಮ | ಸುವ್ವಲಾಲಿ
ಊಟ ಮಾಡಲಿ ಬಲ್ಲಿ | ಸುವ್ವಲಾಲಿ
ನಾನು ಬರುವೋದಿಲ್ಲ | ಸುವ್ವಲಾಲಿ
ಗಂಡನ ಕರಿಯಮ್ಮ | ಸುವ್ವಲಾಲಿ
ಆಗಲೆ ಗಂಡಯ್ಯ | ಸುವ್ವಲಾಲಿ
ಬ್ಯಾಸಾಯ ವೂಡಿಕಂಡು | ಸುವ್ವಲಾಲಿ
ಕಟ್ಟೇಯ ವೊಲುಕಿನ್ನ | ಸುವ್ವಲಾಲಿ
ಬ್ಯಾಸಾಯ ವೂಡ್ಯಾನೆ | ಸುವ್ವಲಾಲಿ
ಯಾರನ್ನ ಕರೆದರೆ| ಸುವ್ವಲಾಲಿ
ಊಟಕೆ ಬರಲಿಲ್ಲ | ಸುವ್ವಲಾಲಿ
ಆಗಲೆ ಅವಳಿನ್ನ | ಸುವ್ವಲಾಲಿ
ಬುತ್ತಿಯ ತುಂಬ್ಯಾಳೆ | ಸುವ್ವಲಾಲಿ
ಬುತ್ತಿಯ ವೊತ್ತವಳೆ | ಸುವ್ವಲಾಲಿ
ವೋಗೆಂದ ವೋಗುತಾಳೆ | ಸುವ್ವಲಾಲಿ

ಅಲ್ಲೊಂದು ಬಾವಿತ್ತು | ಸುವ್ವಲಾಲಿ
ಆವೂರ ಗೌಡನೆತ್ತು | ಸುವ್ವಲಾಲಿ
ಏಳು ಬೇಸಾಯದೆತ್ತು | ಸುವ್ವಲಾಲಿ
ಅವಳಿನ್ನ ಬುತ್ತಿಯ | ಸುವ್ವಲಾಲಿ
ಅಲ್ಲೇಯ ಇಳಿವ್ಯಾಳೆ | ಸುವ್ವಲಾಲಿ
ಅವಳು ಬಾವೀಗೆ ಬಿದ್ದಾಳೆ | ಸುವ್ವಲಾಲಿ
ಏಳು ಬೇಸಾಯ ದೆತ್ತು | ಸುವ್ವಲಾಲಿ
ಎಳ ಕಂಡೆ ಬಂದಾವೆ | ಸುವ್ವಲಾಲಿ
ಆಗಲೆ ಪ್ರಾಣ ವೊಯ್ತು | ಸುವ್ವಲಾಲಿ
ಆಗಲೆ ಗಂಡಯ್ಯ | ಸುವ್ವಲಾಲಿ
ಆರುನಾದ್ರು ಬಿಟ್ಟಾನೆ | ಸುವ್ವಲಾಲಿ
ಬ್ಯಾಸಾಯ ಬಿಟ್ಟುಗಂಡೆ | ಸುವ್ವಲಾಲಿ
ಬಾವಿತಕು ಬಂದಾನೆ | ಸುವ್ವಲಾಲಿ
ಆಗಲೆ ಯೆಣತೀದು | ಸುವ್ವಲಾಲಿ
ಪ್ರಾಣವು ವೋಗಿತ್ತು | ಸುವ್ವಲಾಲಿ
ಬ್ಯಾಟಿಸೊಪ್ಪ ಕುಯ್ದಾನೆ | ಸುವ್ವಲಾಲಿ
ಮುಚ್ಚಾನೆ ಬಂದಾನೆ | ಸುವ್ವಲಾಲಿ
ಸ್ರವಾಕೆ ಮುಚ್ಚಾನೆ | ಸುವ್ವಲಾಲಿ
ಮನಿಗಾದ್ರು ಬಂದಾನೆ | ಸುವ್ವಲಾಲಿ
ಹಡದಮ್ಮ ಹಡದಮ್ಮ | ಸುವ್ವಲಾಲಿ

ನೀನ ತಂದಂತ ಸೊಸೆಯಲ್ಲೆ | ಸುವ್ವಲಾಲಿ
ಸೊಪ್ಪಿನ ತ್ವಾಟಕೆ | ಸುವ್ವಲಾಲಿ
ಸೊಪ್ಪಿಗೆ ವೋದಾಳೆ | ಸುವ್ವಲಾಲಿ
ಸೊಪ್ಪೀನ ತ್ವಾಟಕೆ | ಸುವ್ವಲಾಲಿ
ಆಗಲೆ ವೋಗಿ ಬಂದೆ | ಸುವ್ವಲಾಲಿ
ಆಗಲೆ ವೋಗಿ ಬಂದೆ | ಸುವ್ವಲಾಲಿ
ಅಲ್ಲೀನೆ ಇರುಲಿಲ್ಲ | ಸುವ್ವಲಾಲಿ
ಉಪ್ಪಾರ ಕೇರೀಗೆ | ಸುವ್ವಲಾಲಿ
ಉಪ್ಪೀಗೆ ವೋಗ್ಯವಳೆ | ಸುವ್ವಲಾಲಿ
ಉಪ್ಪಾರ ಕೇರಿಗೆ | ಸುವ್ವಲಾಲಿ
ಆಗಲೆ ವೋಗಿ ಬಂದೆ | ಸುವ್ವಲಾಲಿ
ಅಲ್ಲಾದರಿರುಲಿಲ್ಲ | ಸುವ್ವಲಾಲಿ
ಗಾಣಿಗುರ ಮನಿಗೀಗ | ಸುವ್ವಲಾಲಿ
ಎಣ್ಣೀಗೆ ವೋಗ್ಯವಳೆ | ಸುವ್ವಲಾಲಿ
ಗಾಣೀಗೇರ ಮನಿಗೀಗ | ಸುವ್ವಲಾಲಿ
ಆಗಲೆ ವೋಗಿಬಂದೆ | ಸುವ್ವಲಾಲಿ
ಗಾಣಿಗರ ಮನಿಯಾಗೆ | ಸುವ್ವಲಾಲಿ
ಅಲ್ಲಾದರಿರುಲಿಲ್ಲ | ಸುವ್ವಲಾಲಿ
ಅಟ್ಟಾಕೆ ಅತ್ತ್ಯಾನೆ | ಸುವ್ವಲಾಲಿ
ಗಂಡಗೊಡ್ಲಿ ಗಂಡಗೊಡ್ಲಿ | ಸುವ್ವಲಾಲಿ
ಅವನಿನ್ನ ತಗಂಡು | ಸುವ್ವಲಾಲಿ
ಅಲ್ಲೀಗೆ ವೋದಾನೆ | ಸುವ್ವಲಾಲಿ
ಸ್ರವವ ಕೊಯ್ದಾನೆ | ಸುವ್ವಲಾಲಿ
ಸ್ರವವ ಕೊಯ್ದಾನೆ | ಸುವ್ವಲಾಲಿ
ಮುತ್ತುಗ್ದೆಲೆ ಪಟ್ಟಕಟ್ಟಿ | ಸುವ್ವಲಾಲಿ
ತಾಯೀಗೆ ಕೊಡುತಾನೆ | ಸುವ್ವಲಾಲಿ
ತಾಯಮ್ಮ ತಾಯಮ್ಮ | ಸುವ್ವಲಾಲಿ
ಇದುನೆಲ್ಲ ಕೊಳ್ಳಮ್ಮ | ಸುವ್ವಲಾಲಿ
ಅಡಿಗೇಯ ಮಾಡಮ್ಮ | ಸುವ್ವಲಾಲಿ
ಆಗಲೆ ತಂಗಿಯು | ಸುವ್ವಲಾಲಿ
ತಾಯೂವೆ ಅಡಿಗೇಯು | ಸುವ್ವಲಾಲಿ
ತಾಯೂವೆ ತಂಗಿಯು | ಸುವ್ವಲಾಲಿ
ಅಡಿಗೇಯ ಮಾಡೇರೆ | ಸುವ್ವಲಾಲಿ
ಅಟ್ಟಾಕೆ ವೋದಾನೆ | ಸುವ್ವಲಾಲಿ
ವೊಟ್ಟು ಮಡಿ ಮಲಗ್ಯಾನೆ | ಸುವ್ವಲಾಲಿ
ಆಗಲೆ ತಾಯೀಗೆ | ಸುವ್ವಲಾಲಿ
ಬಾರಪ್ಪ ನನುಕಂದ | ಸುವ್ವಲಾಲಿ
ಊಟs ಮಾಡುಬಾರೊ | ಸುವ್ವಲಾಲಿ
ನೀವೇ ಮಾಡೀರಮ್ಮ | ಸುವ್ವಲಾಲಿ
ನಾನು ಬರೋದಿಲ್ಲ | ಸುವ್ವಲಾಲಿ
ಆಗಲೆ ತಾಯೂವೆ | ಸುವ್ವಲಾಲಿ
ಊಟವ ಮಾಡ್ಯಾರೆ | ಸುವ್ವಲಾಲಿ
ಆಗಲೆ ಅವನಿನ್ನ | ಸುವ್ವಲಾಲಿ
ಅಟ್ಟ ಬಿಟ್ಟಿಳುದಾನೆ | ಸುವ್ವಲಾಲಿ
ತಾಯವ್ವ ತಾಯವ್ವ | ಸುವ್ವಲಾಲಿ
ನೀನು ತಂದಂತ ಮಡದೀಯ | ಸುವ್ವಲಾಲಿ
ನೀನೇಯ ತಿಂದಲ್ಲೆ | ಸುವ್ವಲಾಲಿ