ಏಳು ಜನ ಕುಸುಮಾಲೇರು ವೊರುಟಾರೆ | ತಂದನೋ ತಾನೊ
ವುಲ್ಲೀಗೆ ವೋದಾರೆ ವುಲ್ಲುನಾದ್ರು ಕಿತ್ತಾರೆ | ತಂದನೋ ತಾನೊ
ದಾಗ್ದೀ ಬಳ್ಳಿ ತಂದಾರೆ ವೊರಿಗಾಳ ಬಿಗದಾರೆ | ತಂದನೋ ತಾನೊ
ವೊರಿಗಳ ಬಿಗದಾರೆ ಸುತ ಮುತ್ತ ನೋಡುತಾರೆ | ತಂದನೋ ತಾನೊ
ಬಡಗಲ ಸೀಮಿಂದ ಬಡ ದಾಸಯ್ಯ ಬಂದ | ತಂದನೋ ತಾನೊ
ದಾಸಯ್ಯ ದಾಸಯ್ಯ ವುಲ್ಲೋರೆ ವೊರಿಸಯ್ಯ | ತಂದನೋ ತಾನೊ
ವುಲ್ಲೋರೆ ವೊರುಸ್ತೀನಿ ಮದಿವ್ಯಾಗ್ತೀರೇನ್ರಮ್ಮಿ | ತಂದನೋ ತಾನೊ
ಮದಿವಾದರಾಗುತೀವಿ ವಲ್ಲುವೊರಿಯ ವೊರಿಸಯ್ಯ | ತಂದನೋ ತಾನೊ
ಮದಿವ್ಯಾಗ್ತೀನಂತೇಳಿ ಬನವಾಸಿ ಮುಟ್ರುಡುಗಿ | ತಂದನೋ ತಾನೊ
ಆದರೆ ಆಗುತೀವಿ ವುಲ್ಲೊರಿಯ ವೊರಿಸಯ್ಯ | ತಂದನೋ ತಾನೊ
ಮದಿವ್ಯಾಗ್ತೀನಂತೇಳಿ ಕುಣಿಕೋಲ ಮುಟ್ಟ್ರುಡುಗಿ | ತಂದನೋ ತಾನೊ
ಆದರೆ ಆಗುತೀವಿ ವುಲ್ಲೊರಿಯ ವೊರಿಸಯ್ಯ | ತಂದನೋ ತಾನೊ
ಮದಿವ್ಯಾಗ್ತೀನಂತೇಳಿ ಗರಡಗಂಬ ಮುಟ್ರುಡುಗಿ | ತಂದನೋ ತಾನೊ
ಆದರೆ ಆಗುತೀವಿ ವುಲ್ಲೊರಿಯ ವೊರಿಸಯ್ಯ | ತಂದನೋ ತಾನೊ
ಆಗಲೆ ದಾಸಪ್ಪ ವುಲ್ಲೊರಿಯ ವೊರಿಸ್ಯಾನೆ | ತಂದನೋ ತಾನೊ
ಏಳು ಜನ ಕುಸಮಾಲೇರು ಮುಂದೆ ಮುಂದೆ ಬರುತಾರೆ | ತಂದನೋ ತಾನೊ
ಆಗಲೆ ದಾಸಪ್ಪ ಯಿಂದಿಂದೆ ಬರುತಾನೆ | ತಂದನೋ ತಾನೊ
ವುಲ್ಲೊರಿಯ ವೊತುಗಂಡು ಮುಂದೆ ಮುಂದೆ ಬರುತಾರೆ | ತಂದನೋ ತಾನೊ
ವೊರಿಗಳ ಎಸುದಾರೆ ಕದುಗಳನಾಕ್ಯಾರು | ತಂದನೋ ತಾನೊ
ಕದುಗಳನಾಕ್ಯಾರು ಅಗಣಿಯ ಜಡುದಾರು | ತಂದನೋ ತಾನೊ
ಏಳು ಜನ ಕುಸುಮಾಲರ ಕದಗಳ ತಗಿರ‍್ಹುಡಿಗಿ | ತಂದನೋ ತಾನೊ
ಮುದುವ್ಯಾಗ್ತೀನಂತೇಳಿ ಬವನಾಸಿ ಮುಟ್ಟಿದ್ರಲ್ಲೆ | ತಂದನೋ ತಾನೊ
ಬವನಾಸಿ ತಗಂಡೆ ತಿಮ್ಮಪ್ಪನ ಗಿರಿಗ್ಹೋಗು | ತಂದನೋ ತಾನೊ
ಮದಿವ್ಯಾಗ್ತೀನಂತೇಳಿ ಜಾಗಟೆ ಮುಟ್ಟಿದ್ರಲ್ಲೆ | ತಂದನೋ ತಾನೊ
ಜಾಗಟೆ ತಗಂಡೆ ತಿಮ್ಮಪ್ಪನ ಗಿರಿಗ್ಹೋಗು | ತಂದನೋ ತಾನೊ
ಮದುವ್ಯಾಗ್ತೀನಂತೇಳಿ ಕುಣಿಕೋಲ ಮುಟ್ಟಿದ್ರಲ್ಲೆ | ತಂದನೋ ತಾನೊ
ಕುಣಿಕೋಲ ತಗಂಡು ತಿಮ್ಮಪ್ಪನ ಗಿರಿಗ್ಹೋಗು | ತಂದನೋ ತಾನೊ
ಮದಿವ್ಯಾಗ್ತೀನಂತೇಳಿ ಗರಡಗಂಬ ಮುಟ್ಟಿದ್ರಲ್ಲೆ | ತಂದನೋ ತಾನೊ
ಗರಡಗಂಬ ತಗಂಡೆ ತಿಮ್ಮಪ್ಪನ ಗಿರಿಗ್ಹೋಗು | ತಂದನೋ ತಾನೊ
ಕದೀನ ಕಂಡ್ಯಾಗೆ ವೊಕ್ಕಾನೆ ದಾಸಪ್ಪ | ತಂದನೋ ತಾನೊ
ಏಳು ಜನ ಕುಸುಮಾಲೇರು ಏಳು ಜಿಗುಟ ಜಿಗುಟ್ಯಾರೆ | ತಂದನೋ ತಾನೊ
ಏಳು ಜಿಗುಟ ಜಿಗುಟಾರೆ ಏಳು ಗುದ್ದ ಗುದ್ದಾರೆ | ತಂದನೋ ತಾನೊ
ಏಳು ಜನ ಕುಸುಮಾಲೇರಿಗೆ ಉಣ್ಣು ಕಾವತ್ತಾಲಿ | ತಂದನೋ ತಾನೊ
ಆಗಲೆ ದಾಸಪ್ಪ ಶ್ಯಾಪವ ಕೊಟ್ಟಾನೆ | ತಂದನೋ ತಾನೊ
ಶ್ಯಾಪವ ಕೊಟ್ಟಿನ್ನ ಮನಿಗಾದರ‍್ಹೋಗುತಾನೆ | ತಂದನೋ ತಾನೊ