ಹಟ್ಟೀ ತಿಪ್ಪಯ್ಯ ಬುತ್ತಿ ಉಂಡುತ್ತಾವ
ಬತ್ತೀದ ಬಾಳೆ ಫಲುವಾಗಿ-ನಾಯಕನ್ಹಟ್ಟಿ
ಹುಟ್ಟೀದ ಮಕ್ಕಳಿಗೆ ನೆರಳಾಗಿ

ಸಾಮಿ ತಿಪ್ಪಯ್ಯ ಬಾನ ಉಂಡುತ್ತಾವ
ಬಾಡೀದ ಬಾಳೆ ಫಲುವಾಗಿ-ನಾಯಕನ್ಹಟ್ಟಿ
ಆಡಾ ಮಕ್ಕಳಿಗೆ ನೆರಳಾಗಿ

ರುದ್ರ ನಿಮ್ಮ ತೇರು ಬಗ್ಗೂತ ಬಳಕೂತ
ರುದ್ರಾಕ್ಷಿ ಕಣಿಯಾ ನುಡುಸೂತ-ನಾಯಕನ್ಹಟ್ಟಿ
ರುದ್ರ ನೀನೇರೊ ರಥುವೀಗ

ಏಗಿ ನಿಮ ತೇರು ಬಾಗೂತ ಬಳಕೂತ
ಯಾಲಕ್ಕಿ ಕಣಿಯ ನುಡುಸೂತ-ನಾಯಕನ್ಹಟ್ಟಿ
ಏಗಿ ಏರ‍್ಯಾನೆ ರಥುವೀಗ

ಹಟ್ಟಿ ತಿಪ್ಪಯ್ಯಾಗೆ ಸಿತ್ತಾ ನಕ್ಷತ್ರೇನೊ
ಸಿತ್ತಾ ನಕ್ಷತ್ರ (ಬರಲ್ಹೇಳೊ) – ಬಂದಾಗ ತಿಪ್ಪಯ್ಯ
ಮತ್ತೆ ನೀನೇರೊ ರಥುವೀಗ

ಮಗಿಯಾ ನಕ್ಷತ್ರ ಏಗೀಗೆ ಬರುಲೇನೊ
ಮಗಿಯ ನಕ್ಷತ್ರ ಬಂದಾರೆ – ತಿಪ್ಪಯ್ಯ
ಮತ್ತೆ ನೀನೇರೊ ರಥುವೀಗ

ತೇರು ಹಸನಾದಾವು ಏಗೀಯ ಬರ ಹೇಳಿರೊ
ಏಗೀಗೆ ನಕ್ಷತ್ರ (ಬರುಬೇಕು) – ಬಂದಾರೆ ನಾಯಕನ್ಹಟ್ಟಿ
ತೇರು ಏರ‍್ಯಾನೆ ಅವನೀಗ

ಮಗಿಯಾ ನಕ್ಷತ್ರ ರುದ್ರಾಗೆ ಬಂದಾರೆ
ಮತ್ತೇನೇನು ಹೇಳೋ ರಥುಕೀಗ-ನಾಯಕನ್ಹಟ್ಟಿ
ರುದ್ರಾ ಏರ‍್ಯಾನೆ ರಥುವಲ್ಲಿ

ಅಪ್ಪಾನ ತೇರು ಮತ್ತೆ ಹಸುನಾದಾವು
ಹನ್ನೆಲ್ಡೆ ಎಲಿಯೆ ಅವನೀಗೆ-ಹಸುನಾದಾವು
ಹರತೀ ಗೌಡರನ ಬರುಹೇಳೊ

ಅಪ್ಪಾಗೆ ಗಾಲೆ ಮತ್ತೆ ಕಡಿಸೈದಾರೆ
ಮತ್ತೆ ಹರತೇರ‍್ನ ಬರುಹೇಳೊ-ಹರತೀಕೋಟೆ
ಒಪ್ಪೀದ ಗಾಲೆ ತರುಹೇಳೊ

ಏಗೀನೆ ರುದ್ರಾಗೆ ಬಂದಾವೆ ಆ ಗಾಲೆ
ತೇರಿಗೆ ಗಾಲೆ ಈಗ ಹಸುನಾದಾವು-ಈಗ
ಹರತೀ ಗೌಡರುನ ಬರುಹೇಳೊ-ಅವನೀಗೆ

ನಂದಾದೀವಿಗಿಯ ಉರಿಏಳೊ
ಸಿತ್ತಾ ನಕ್ಷತ್ರಾಕೆ ಬಂದಾವು ಅವರೆಣ್ಣೆ
ಹರತೀ ಗೌಡರುನ ಬ್ಯಾಗ ಬರುಹೇಳೊ-ನಾಯಕನ್ಹಟ್ಟಿ
ನಂದಾ ದೀವಿಗಿಯ ಉರಿ ಏಳೊ

ಹಟ್ಟೀನೆ ತಿಪ್ಪಯ್ಯ ಸತ್ತೀನೆ ಉಳ್ಳೋನು
ಮತ್ತೆ ಫಣಿಯಪ್ಪುಗೆ ಒಲುದಾನು-ಆ ಸ್ವಾಮಿ
ಭಿಕ್ಷಾಕೆ ಮನಿ ಮನಿಯ ತಿರುಗ್ಯಾನು

ಸಿವ ಸೀವ ಅಂದಾರೆ ಸಿವನೇನು ಆ ಜಂಗೂಮ
ಸಿವಕೊಟ್ಟ ಜೋಳಿಗೆ ಅವನಲ್ಲಿ-ಹಾಕಿಕೊಂಡು
ಫನಿಯಪ್ಪಾನಲ್ಲಿ (ಹೋದಾನು)-ಹೋಗಿ ಅವರಿಬ್ಬಾರು
ರಾಯ ದುರ್ಗಾಕೆ ನೆಡುದಾರು

ರಾಯ ದುರುಗದ ಸಂತೆ ಇಬ್ಬಾರು ಮಾಡ್ಯಾರು
ಬಾಳನ್ನ ಬಡುವ ಫಣಿಯಪ್ಪ-ನಲ್ಲೀಗ
ಏಗಿ ಜಂಗೂಮ ಅವನಲ್ಲಿ

ಜಂಗುಮನ ಅವುತಾರ ಇವುನು ತಾಳೀಕೊಂಡು
ಫಣಿಯಪ್ಪಾನಲ್ಲಿ ಇರುವೋನು

ರಾಯಾದುರುಗಾದ ಸಂತೆ ಫಣಿಯಪ್ಪ ಮಾಡಲುವಾಗ
ಏಗಿ ಜಂಗೂಮ ಒದಿಗ್ಯವ್ನೆ

ಮಯಕಾರ ಸಿವುನೆ ಏಗೀನೆ ಜಂಗೂಮ
ಫಣಿಯಪ್ಪ ಹೋದಲ್ಲಿ ಒದಿಗ್ಯವ್ನೆ

ಸಂತೀಗ್ಹೋಗೂವಾಗ ಎದುರೀಗೆ ಬಂದವ್ನೆ
ಫಣಿಯಪ್ಪ ಬುತ್ತೀ ಬಿಚ್ಯಾನು ದಾರ‍್ಯಾಗೆ-ಬಾವೀಲಿ
ಕೈಕಾಲ ಮಕುವಾ (ತೊಳುದಾನೆ)-ತೊಳೆದೂ ಗಡ್ಡಿಗೆ ಬಂದು
ಬುತ್ತೀ ಬಿಚ್ಯಾನೆ ಫಣಿಯಪ್ಪ

ಬುತ್ತೀ ಬಿಚಿಕಂಡು ಊಟ ಮಾಡಲುವಾಗ
ಆತ ತಿಪ್ಪಯ್ಯ ಒದಗೀದ-ನೆ ಫಣಿಯಪುಗೆ
ಊಟುಕೆ ನನುಗೆ ಇಡಿರೆಂದ-ತಿಪ್ಪಯ್ಯಾಗೆ
ಬುತ್ತೀ ನೀ ತಕ್ಕ ಉಣ್ಣಪ್ಪ

ಬುತ್ತೀನೆ ತಕ್ಕಂಡು ನೀ ಉಣ್ಣು ಏ ಸ್ವಾಮಿ
ಬಾಳ ಹಸುವಾಗಿ ಬಂದಿದಿಯ

ನಾನೊಬ್ಬನೆ ಬುತ್ತೀ ಉಣ್ಣಲ್ಲ ಫಣಿಯಪ್ಪ
ಇಬ್ಬಾರು ಊಟ ಮಾಡಾನೆ

ಇಬ್ಬಾರು ಉಂಡಾರೆ ಮುಗಿಯಾದು ಬುತ್ಯಲ್ಲಿ
ಇದ್ದಂಗೆ ಬುತ್ತಿ ಇರವೋದು-ತಿಪ್ಪಯ್ಯಾನ
ಸತ್ಯ ಅಲ್ಲೀಗೆ ಒದುಗ್ಯಾವು

ಪಣೆಯಪುನ ಬಡುತಾನ ಬಯಲಾಗಿ ಹೋದಾತು
ಫನಿಯಪುನೆ ನಿನ್ನಲ್ಲಿ ಇರುತೀನಿ

ನೀನು ಮಾಡೀದ ಬದುಕೆ ಕೈಗೂಡಿ ಬರಲೆಂದು
ಆಶ್ರೀವಾದಾವ ಕೊಡುತಾನೆ ತಿಪ್ಪಯ್ಯ-ನೋಡಪ್ಪ
ನಿನ ಬಿಟ್ಟು ಜಂಗುಮನೇ ಹೋಗಲ್ಲ

ನಿನ ಬಡುತಾನ ಬಯಲಾಗಿ ಮನಿಯಲ್ಲಿ ಇರುತೀನಿ
ನಿನ ಒಕ್ಕೂ ಭೂಮಿಗಳೇ ಬೆಳೆಯಾಲೊ-ಫಣಿಯಪ್ಪ
ಸತ್ಯ ನೀನೀಗ ಬಿಡುಬ್ಯಾಡ-ನಾಯಕನ್ಹಟ್ಟಿ
ಇಬ್ಬಾರು ವರುಮಠುಕೆ ಇರುವೋಣೊ

* * *

ಹಟ್ಟೀ ತಿಪ್ಪಯ್ಯ ಜಗಲೂರು ಪಾಪಯ್ಯ
ಸಿಕ್ಕೇರಿಕೋಡಿ ಬಸುವಯ್ಯ-ಇವ್ರು ಮೂವಾರು
ಲೆತ್ತಾನಾಡ್ಯಾರೆ ಕೆರಿಯಾಗೆ

ಲಿಂಗ ಜಂಗಮರಿಗೆ ಒಳುಮಠುವೆ ಇರುಲೆಂದು
ಬ್ಯಾಡರ ಸಂಗಾಕೆ ಹೋದಾನೆ-ತಿಪ್ಪಯ್ಯ
ಹೊರುಮಠದಲ್ಲವರು ಇರುಲೆಂದು

ಲಿಂಗಾ ಜಂಗುಮರಿಗೆ ಒಳಮಠುವೆ ಇರುಲೆಂದ
ತುಪ್ಪ ಸಕ್ಕರಿಯು ಇರುಲಂದ-ಜಂಗಮರಿಗೆ
ಮತ್ತೆ ಆರಾಜ್ಞೆ ಇರುಲೆಂದ

ಬ್ಯಾಡರ ಸಂಗಾಕೆ ಹೋದಾನೆ ತಿಪ್ಪಯ್ಯ
ಮದ್ದೂ ಮಾಂಸುಗಳ ಮಾಡಂದ-ಹೊರುಮಠುಕೆ
ಎಡಿಯೇ ತಿಪ್ಪಯ್ಯಗೆ ಇರುಲೆಂದ

ಒಳಮಠುಕೆ ಜಂಗುಮುರು ಹೊರುಮಠುಕೆ ಭಕ್ತಾರು
ಕುಲವನ್ನೇಲ್ಡೇ ಜಾತಿ ಕಲೆಯಲಿ-ಹೊರುಮಠುದಾಗೆ
ಮದ್ದೂ ಮಾಂಸುಗಳೇ ಬೇಸಾಲಿ-ಹೊರುಮಠುದಲ್ಲಿ
ಅಪ್ಪಯ್ಗೆ ಈ ಎಡಿಯೇ ಏರಾಲಿ

ಒಪ್ಪೀದ ಕುರಿಗಾಳ ಪುತ್ತಲ್ಲಿ ಕಡೀರಣ್ಣ
ಹೊರುಮಠುದಾಗೆ ನೀವು ಮಾಡೀರಣ್ಣ-ನಾಯಕನ್ಹಟ್ಟಿ
ಹೊರುಮಠುದಲ್ಲೀಗ ಎಡಿಯೇ ಏರಾಲಿ

* * *

ದನುವೂನ ಕಾಯರನು ಕುರಿಯಿಲ್ಲಿ ಕಾಯರನು
ಆಡಾ ಮಕ್ಕಳನು ಹಿಡಕಂಡು-ತಿಪ್ಪಯ್ಯ
ಕೆರಿಯಾ ಕಟ್ಟಾಕೆ ನಡೆದಾನೆ-ಹೊಸು ಗುಡ್ಡಾದ
ಬಸುವಣ್ಣಾನಲ್ಲಿ ಕಡಿಸೀದ

ಆಡಾನೆ ಮಕ್ಕಳಿಗೆ ಏನಂಬೂತ ಹೇಳೀದ
ಕೆರಿಯ ಕಟ್ಟಾನಿ ಬರಿರಪ್ಪ

ಕೈಯಲ್ಲಿ ಮಣ್ಣಕ್ರ ತಲಿಯಲ್ಲಿ ಕಲ್ಲು ಹೊರಿರೊ
ಇಬ್ಬಾರು ಕೆರಿಯಾ ಮಾಡಾನಿ-ಹೊಸು ಗುಡ್ಡಾದ
ದೊಡ್ಡ ಕೆರೆ ಅಲ್ಲಿ ಆಗಾಲಿ

ನಿಮ್ಮಿಗೆ ನಾನು ಬೇಡಿದ ಭಾಗ್ಯಾವ ಕೊಡುವೆ
ಬೇಕಾದೋಟು ರಾಸಿ ನೀವು ಮಾಡೀರಿ

ಮಣ್ಣೂನೆ ಗುಡ್ಡಿಗಳು ಇನ್ನಾ ಮಾಡೀರಯ್ಯ
ನಿಮ್ಮೀಗೆ ಬೇಡಿದ ಭಾಗ್ಯಾವೆ ಕೊಡುತೀನಿ

ಆಸೇನೆ ಹುಟ್ಯಾತು ರಾಸಿ ಅವ್ರು ಮಾಡ್ಯಾತು
ಬೆತ್ತಾ ಹಿಡಿಕೊಂಡು ಹಟ್ಟೇನೆ-ತಿಪ್ಪಯ್ಯ
ಸುತ್ತಾನೆ ಗೆರಿಯ ಕೊಯ್ದಾನು

ಗೆರಿಯನೆ ಕೊಯ್ದಾನೆ ಸಿವ ಸೀವ ಅಂದಾನು
ಮಾಡಿದರಿಗೆ ನೀಡಿ ಬಿಕ್ಷಾ ಆಗಲಿ

ಕಷ್ಟ ಮಾಡಿದಾರೀಗೆ ಎಷ್ಟು ಭಾಗ್ಯಾವೈತೆ
ಕಷ್ಟ ಮಾಡ್ದಂತ ಮಯ್ಯಾಗಳ್ಳರಿಗೆ-ಏ ಸಿವನೆ
ಗುಡ್ಡ ಕೆದರಿದರೆ ಬರಿಗೈಯೆ
ಹಂಗಂಬೂತ ಕೆರಿಯ ಸಾದೂಸಿ ನೆಡಸೀದ

ಕೆರೆಯಾನೆ ಕಟ್ಯಾನೆ ತೂಬು ಇಕ್ಕಿಸಿದಾನೆ
ತುರುನೂರೀಗವನು ಹೋದಾನೊ-ತಿಪ್ಪಯ್ಯ
ತುರುನೂರ ಹಳ್ಳ ತಿರಿವಿದನೊ-ನಾಯಕನ್ಹಟ್ಟಿ
ಕೆರಿಯಾನೆ ಕೋಡಿ ಹರಿಯಾಲೆ

ಕೋಡೀನೆ ಬಿದ್ದಾವು ಈಗಾನೆ ಆ ಕೆರಿಗೆ
ತೆಪ್ಪಾವಿಡಿರಣ್ಣ ಈಗಾಲೆ-ನಾಯಿಕುನ್ಹಟ್ಟಿ
ಬಂದಾ ಭಕ್ತರು (ಹೋಗಾಲಿ-ಹೊಸ ಗುಡ್ಡಾಕೆ ಹೋಗಾಲಿ)
ಬಸುವಣು ನೋಡಿ ಅವರೀಗ ಬಂದಾರೆ
ಕೆರಿಯಾ ನೋಡಾಕೆ ತಿರುಗವರೆ

ಕೆರಿಯಾನೆ ನೋಡಾಕೆ ಕೆರಿಯಾ ಏರೀಮ್ಯಾಲೆ
ಹತ್ತೂ ಗಾಡಿಗಳು ಬರುವಂತ-ಅಡ್ಡಾವೇರೀಮ್ಯಾಲೆ
ತಿಪ್ಪಯ್ಯ ಮಾಡವ್ನೆ ಅವನಲ್ಲಿ

ತುಂಬಿದೇರೀ ಮ್ಯಾಲೆ ಲಿಂಗದವರು ಬರುತಾರೆ
ಜಂಗುಮರೇ ಅಲ್ಲಿ (ಇಳುದವರೆ) – ಅವರು ಇಳುದಾರು ನಾಯಕನ್ಹಟ್ಟಿ
ತೆಪ್ಪ ಬಿಡಿರಣ್ಣ ಕೆರಿಗೀಗ

ಕೆರಿಗಾನೆ ತೆಪ್ಪ ಬಿಟ್ಟರು ನಾಯಕನ್ಹಟ್ಟಿ
ಹಟ್ಟೀ ಗೌಡಾನ ಬರಿ ಹೇಳೊ – ಗಕ್ಕಾನೆ
ತೆಪ್ಪ ಬಿಡುತಾರೆ ಈ ಕೆರಿಗೆ

* * *

ಫಣಿಯಪ್ಪ ತಿಪ್ಪಯ್ಯ ಇಬ್ಬಾರು ಅವರೀಗ
ಇಬ್ಬಾರು ಕಪ್ಲೆ ಹೊಡುದಾರು-ಅವರೀಗೆ
ಬಾನಿ ಹರಿದೀತು ಗಳಿಗೇಲಿ
ತಿಪ್ಪಯ್ಯ ನೀನು ಊಟಾಕೆ ನಡಿಯಪ್ಪ

ಬಾನೀಯ ಹಾಕಿ ಬರುತೀನಿ
ಬಾನೀಯ ಈಗ ಒಲಿಯಾಕೆ ನಂಜಾನ ಮನಿಗೆ
ಬೇಗಾರ್ರ ಹಟ್ಟಿಗೆ ಹೋಗಿ ಬರುತೀನಿ

ಬಾನಿ ಹೊತ್ತುಕೊಂಡು ಫಣಿಯಪ್ಪ ಹೋದಾನೆ
ನಂಜಾನ ಮನಿಯಾಗೆ ಸಾಮಿ (ಇರುವೋನೆ) – ಹೋಗ್ಯವ್ನೆ
ಸಿವಪೂಜೀಗಲ್ಲಿ ಕುಂತವ್ನೆ

ನಂಜಯ್ಯ ನೀನು ಬಾರಂದು ಕರುದಾನು
ಬಾನಿ ಹರಿದೈತೆ ಹೊಲಿದೀಗ – ಕೋಡಪ್ಪ
ಕಪ್ಪಲಿಯ ಬಿಟ್ಟು ಬಂದಿದಿವಿ

ಸಾಮಿ ಫಣಿಯಪ್ಪನೋರೆ ಸೊಲ್ಪ ತಾಳಿ ನೀವಿರಬೇಕು
ಸಾಮಿ ತಿಪ್ಪಯ್ನೋರು ಸಿವಪೂಜಿಗೆ-ಕುಂತವ್ರೆ
ಬ್ಯಾಗಾನ ನಾನು ಬರುಲಾರೆ

ಹಂಗ್ಯಂದ ಮಾತುಕೇಳಿ ಹಿಂದಾಕೆ ತಿರುಗ್ಯಾನೆ
ಮನಿಗೆ ಜಾಗಿತಿ (ಹೋದಾನೆ)-ಹೋಗಿ ಮನಿಯಾಗಿರುವ
ಮಡದೀನ (ಫಣಿಯಪ್ಪ) ಕೇಳ್ಯಾನೆ-ಫಣಿಯಪ್ಪ
ಸಾಮಿ ನಮ್ಮನಿಗೆ ಬಂದಿಲ್ಲುವೆ

ಮಾದೀರ ಮನಿಯಾಗೆ ಸಿವುಪೂಜೆ ಮಾಡ್ತಿದ್ದೆ
ಸಿವು ಪೂಜಿಗೆ ನೀನು ಕರಿಬ್ಯಾಡ-ನಮ್ಮೀಗೆ
ತಕ್ಕಾದ ಸಿವುನಲ್ಲ ಅವನೀಗ

ಮಾದೀರ ಮನಿಯಲ್ಲಿ ಸಿವಪೂಜೆ ಮಾಡ್ತಿದ್ದೆ
ಭಕ್ತನಲ್ಲಾನು ಅವನು ನಮ್ಮೀಗೆ

ಅಯ್ಯೊ ನನು ಸಾಮಿ ಎಂತಾ ಮಾತಾಡುತೀಯ
ಒಳಗೆ ಸಿವುಪೂಜಿಗೆ (ಐದಾರೆ)-ಕುಂತವ್ರೆ ಏ ಸಿವನೆ
ಎಂತಾನೆ ನುಡಿಯ ನುಡಿತೀಯೊ

ಹಂಗ್ಯದ ಮಾತು ಕೇಳ್ಯಾನೆ ತಿಪ್ಪಯ್ಯ
ಕಿವಿಯ ಕರಣಾಕೆ ಬಿದ್ದಾತು-ಆ ನುಡಿಯೆ
ಕಟ್ಟೀದ ಕಣ್ಯಾಗೆ ಕತಿ ಹೇಳಿ-ಆವೆಮ್ಮೆ
ಸತ್ತೂ ಹೋದಾವು ಆವಾಗ

ಹಿಂಗ್ಯದ ಮಾತಿಗೆ ಕೇಳ್ಯಾನೆ ಫಣಿಯಪ್ಪ
ಮಾಯವಾಗೀತು ನಮ್ಮೀಗೆ-ಏ ಸ್ವಾಮಿ ನೀನು
ದುಡುವೊನೆ ಕೊಟ್ಟು ಹೋಗಬೇಕು

ಫಣಿಯಪ್ಪ ಎಂತಾ ಮಾತು ನೀ ಆಡಿದ್ಯೊ
ಎಲ್ಲರಿಗೆ ನಾನು ಮೆಲ್ಲಾಕೆ ಬಗುತ-ಫಣಿಯಪ್ಪ
ನಿನ್ನ ಮನಿಯಲ್ಲಿ ಇರುಲಾರೆ

ರುದ್ರಾನೆ ತಿಪ್ಪಯ್ಯ ಈವಾಗ ಅವನಲ್ಲಿ
ಸತ್ತೆಮ್ಮೆ ಹಾಲ ಕರದು-ಪಾಯಸೆ ಮಾಡಿ
ಸುತ್ತೇಳ ಮಠುಕೆ ಎಡೆಮಾಡಿ

ಏಗೀನೆ ಜಂಗೂಮ ಈವಾಗ ಅವನಲ್ಲಿ
ಆವೆಮ್ಮೆ ಹಾಲಾ ಕರುದು-ಪಾಯುಸು ಮಾಡಿ
ದೂರುಲಿ ಜಂಗುಮರಿಗೆ ಎಡಿಮಾಡಿ

ಫಣಿಯಪ್ಪನ ಹೇಣೂತಿ ಮಾಳಮ್ಮ ನೀನು ಕೇಳೆ
ತುಂಬೀದ ವಡೇವ್ಕೆ ಧಾನ್ಯಾವ ಹೊಯ್ದೀನೆ
ಮೆತ್ತೂ ಹಾಕ್ಯೀನೆ ಧಾನ್ಯಾಕೆ-ಮಾಳಮ್ಮ
ಮೆತ್ತೂ ಎಂದೀಗೆ ಒಡಿಬ್ಯಾಡ-ನೀನೀಗ
ಸೋದಿಸಿಕೊಂಡು ಉಣ್ಣಮ್ಮ

ಎಷ್ಟೂ ಉಂಡಾರು ಮಿಗುವೆಲ್ಲೊ ಈ ಧಾನ್ಯಾವು
ಇದ್ದಂಗೆ ಧಾನ್ಯವು ಐದಾವೆ

ಎಷ್ಟು ದಿನ ನೋಡಿದರೆ ಅಷ್ಟೇನೆ ಐದಾವೆ
ಎಷ್ಟಂದರು ಇವು (ಮುಗಿಯಾವೆ)-ಮುಗಿವಲುದೆಂದು ಮಾಳಮ್ಮ
ಮೆತ್ತೂ ಒಡುದಾಳೆ (ಆವಾಗ)-ವಡೇವದಿಂದ
ಬುಸ್ಸಂಬೂತ ಹೊಲ್ಟೇ ಹೋದಾತು-ಫಣಿಯಪ್ಪುಗೆ
ಬಂದಾತು ಬುಡುತನವೆ ಆಗ
ಹಿಂದಾಲ ದೆಸಿಯೆ ತಿರುಗೀತು ಫಣಿಯಪ್ಪುಗೆ
ಬಾಳನ ಬಡುತನುವೆ ಬಂದಾವೆ

ಆಗಾನೆ ಮಾಳಮ್ಮ ಏನಂಬುತ ಹೇಳುತಾಳೆ
ನೀನಾಡಿದ ಮಾತು ಸರಿಯಲ್ಲ-ಫಣಿಯಪ್ಪ ನಮುಗೆ
ಹಿಂದುಲ ಬಡುತನುವೆ ಒದಿಗ್ಯಾವೆ

ಮಡದೀ ನಮ್ಮಲ್ಲಿದ್ದಂತ ಆ ಸಿವುನ
ದಿಕ್ಕಾರ ಮಾಡಿ ಕಳಿವೀದೆ-ನಮ್ಮೀಗೆ
ವಕ್ಕುರುಸಿ ಬಂತು ಬಡುತಾನ

ಸ್ವಾಮೀಗೆ ನಮ್ಮಲ್ಲಿ ಸಿವುಪೂಜೆ ಮಾಡುವಾಗ
ಬಾಗುಲಾಗೆ ನಿಂತ್ಕಂಡು ನೀನು ಬೊಗುಳೀದಲ್ಲೆ
ಸ್ವಾಮೀ ದಿಕ್ಕಾರ ಆಡೀದ-ದೆಸಿಯಿಂದ
ನಮ್ಮೀಗೆ ಬಡುತನವೇ ಒದಗೀತು

* * *

ರುದ್ರಾನೆ ನಮ್ಮಯ್ಯ ಎದ್ದಾನೆ ಆವಾಗ
ಮುದ್ದೂಗಿನ್ನುಡಿಯ ನುಡಿಸೂತ-ನಾಯಕನ್ಹಟ್ಟಿ
ಏಗಿ ಬೀದ್ಯಾಗೆ ನಿಲುನಲ್ಲೊ

ಏಗೀನೆ ನಮ್ಮಯ್ಯ ಎದ್ದಾನೆ ಆವಾಗ
ಬೋರೋಗಿನ್ನುಡಿಯ ನುಡುಸೂತ-ನಯಕನ್ಹಟ್ಟಿ
ರುದ್ರಾ ಬೀದ್ಯಾಗೆ ನಿಲ್ಲುನಲ್ಲೊ

ಚಿಕ್ಕುದುರುಗಾದ ಮತ್ತೆ ನಕ್ಷತ್ರಾಕೆ ನಾಯಕನ ಹಟ್ಟೀಗೆ
ತೆರಿಳ್ಯಾರೆ ಅವುರಲ್ಲಿ ಹೊರುಮಠುಕೆ-ನೆಲಿಯಾಗಿ ನಾಯಕನ್ಹಟ್ಟಿ
ಕನ್ನಡ ಬ್ಯಾಡರಿಗೆ ಒದಗೀದ

ಬ್ಯಾಡರ ಮನಿಯಲ್ಲಿ ಹೆಂಗಿದ್ದೊ ಏ ಸಿವುನೆ
ಮುದ್ದು ಜಂಗುಮರೆ ಅವರಲ್ಲಿ-ನೀನೀಗ
ಮತ್ತೆ ಬ್ಯಾಡರಿಗೆ ಒಲುದೆಲ್ಲೊ

ಬ್ಯಾಡರ ಮನಿಯಲ್ಲಿ ಬೇಡಿದ್ದ ಬಾಗ್ಯೇವ್ಕೆ
ಏಗಿ ತಿಪ್ಪಯ್ಯ ಅವರಲ್ಲಿ-ಇರುವಂಥ
ರುದ್ರಾಕ್ಷಿ ಸರುವೇ ಕೊರುಳಾಗೆ

ರುದ್ರಾಕ್ಷಿ ಸರುವಾ ಹಾಕೊ ಮುದ್ದೂಗಿನ್ನುರಿ ತಗಿಯೊ
ಕಾವಿ ರುದ್ರಾಕ್ಷಿ (ಢರುಸಪ್ಪ)-ಧರಿಸಿ ನಾಯಕನ್ಹಟ್ಟಿ
ಏಗಿ ಹೊಲ್ಡಯ್ಯ ಹೊರು ಮಠುಕೆ

ಏಗಿ ನೀನು ಹೊಲ್ಡು ಹೊರ ಮಠುಕೆ ಈವಾಗ
ಮುದ್ದೂ ಜಂಗುಮರಿಗಿರುಲೆಂದು-ಒಳುಮಠುವೆ
ಪೂಜಾ ಮಾಡಾಲಿ ನನ್ನೀಗೆ

ರುದ್ರಾ ಹೊರುಟಾನೆ ಹೊರುಮಠುಕೆ ಈವಾಗ
ಕನ್ನ ಬ್ಯಾಡರಿಗೆ ಹೊರುಮಠುವೆ ಇರುಲೆಂದ-ತಿಪ್ಪಯ್ಯ
ಪೂಜಾ ಮಾಡಾಲಿ ನನ್ನೀಗೆ

ಆಗ ಫಣಿಯಪ್ಪುಗೆ ಏನಂಬೂತ ಹೇಳೀದ
ಕನ್ನ ಬ್ಯಾಡರ ಸಂಗಾಕೋಗೂತೀನಿ-ಹೊರುಮಠುಕೆ
ನಾನು ನೆಲಿಯಾಗಿ ಇರುತೀನಿ

ಬ್ಯಾಡಾರ ಸಂಗ ನನ್ನೀಗೆ ಇರುಲಯ್ಯ
ಜಂಗುಮರು ನಿನ್ನಲ್ಲಿ ಇರುಬೇಕು-ಒಳುಮಠುದಾಗೆ
ಲಿಂಗಾವಂತುರುನ ಕರಿಬೇಕು

ಲಿಂಗಾಂವಿಲ್ಲುದ ಪೂಜೆ ಜಂಗುಮುಗೆ ಆಗ್ಯಾವಲ್ಲೊ
ಲಿಂಗೈದಾವೆ ಇವನಲ್ಲಿ-ನಾಯಕನ್ಹಟ್ಟಿ
ಜಂಗೂಮಗಾಗಾಲೊ ಸಿವುಪೂಜೆ

ರುದ್ರಾಕ್ಷಿ ಇಲ್ಲದೆ ಎದ್ದೊ ಪೂಜಾಗ್ಯಾವೊ
ರುದ್ರಾಕಷಿ ಇವುನಾ ಕೊರುಳಾಗೆ-ನಾಯಕನ್ಹಟ್ಟಿ
ರುದ್ರಾಗಾಗಾಲೊ ಸಿವುಪೂಜೆ

ಅಂದವಿಲ್ಲುದ ಪೂಜೆ ಜಂಗುಮುಗೆ ಆಗ್ಯಾವಲ್ಲೊ
ಅಂದ್ವಾದ ಪೂಜೆ ಇವುನೀಗೆ-ನಾಯಕನ್ಹಟ್ಟಿ
ಜಂಗೂಮಗಾಗಾಲೊ ಸಿವುಪೂಜೆ