ಹಸನಕ್ಕಿ ಹಳೇಬೀಡು ಕ್ಯಾಸಕ್ಕಿ ಗೋಣಿಬೀಡು
ದೇಸಕ್ಕೊಂದೂರು ದೇವ್‌ರುಂದ
ದೇಸಕ್ಕೊಂದೂರು ದೇವ್‌ರುಂದ್ ಸೂಳೇರು
ಕಾಸ ಕೊಟ್ರೆ ಬಾಯ ಬಿಡುತಾರೆ

ಬಂಡಿಯ ಹೊಡೆಯನ ಬಂಡಾಟ ನೋಡಣ್ಣ
ಈರುಳ್ಳಿ ಗೆಡ್ಡೆ ಒಣರೊಟ್ಟಿ
ಈರುಳ್ಳಿಗೆಡ್ಸೆ ಒಣರೊಟ್ಟಿ ತಿಂದುಕೊಂಡು
ವಾಲಾಡಿ ಘಟ್ಟ ಇಳಿಸ್ಯಾನು

ಘಟ್ಟದಿಂದ ಕೆಳಗೆ ಗಜನಿಂಬೆ ಸೂಳೇರು
ಎತ್ತಿಗಾರತಿಯ ಬೆಳಗಿದರು
ಎತ್ತಿಗಾರತಿಯ ಬೆಳಗಿದರೆ ಎತ್ತೇನು ಕೊಟ್ಟಾವು
ಎತ್ತಿನೊಡಿಕಾರ ಹಿರಿಯಣ್ಣ
ಎತ್ತಿನೊಡಿಕಾರ ಹಿರಿಯಣ್ಣಗೆ ಬೆಳಗಿದರೆ
ನಿಮ್ಮ ಬಿಚ್ಚೋಲೆಗೆ ಬಿಡಿಮುತ್ತ ಬಿಡಿಸ್ಯಾನು