ಬಿದಿರನೆ ಜರಸಿಗೆ ಚದುರಂಗದ ಕಲ್ ಹೂಡಿ
ಮದಲಿಗೆ ಸರಸತಿಯ ನೆನೆದೇನು
ತಂಗಿ ರಾಗಿ ಬೀಸನ ಬಾರೆ

ಸರಸತಿ ಎಂಬಳು ಸಾವಿರಗೆ ದೊಡ್ಡಳು
ಎಲ್ಲಿ ಹೋದಮ್ಮ ಏ ಗಿರಿಜಾತೆ
ತಂಗಿ ಅಕ್ಕಿ ಬೀಸನ ಬಾರೆ

ನಾನು ಎಲ್ಲಿಗೆ ಹೋಗಿಲ್ಲ ಯಾತ್ರೆಗೆ ಹೋಗಿಲ್ಲ
ದೊಡ್ಡ ಬೇಲೂರ ಏಳ್‌ಮಾಳಿಗೆ ಒಳಗೆ
ತಂಗಿ ರಾಗಿ ಬೀಸನ ಬಾರೆ

ದೊಡ್ಡನೆ ಬೇಲೂರ ಮಾಳಿಗೇಲಿ ಸರಸತಿ
ನಾ ಲೆಕ್ಕ ಮಾಡ್ತಿದ್ದೆ ಏ ಪಾದಗಳನು
ತಂಗಿ ರಾಗಿ ಬೀಸನ ಬಾರೆ

ಕಲ್ಲ ಹೂಡಿದರ ಮನಿಗೆ ಎಲ್ಲ ಭಾಗ್ಯವು ಬರಲಿ
ಪಲ್ಲಕ್ಕಿ ಮೇಲೆ ಏ ಮಗ ಬರಲಿ
ತಂಗಿ ರಾಗಿ ಬೀಸನ ಬಾರೆ

ಯಾರು ಬಂದರೇನು ನಮ್ಮ ಚಾವಡಿ ಜನುಮಿಲ್ಲ
ಜೋಡಿ ಅಂದಲದ ಏ ಹಿರಿಮಗನು
ತಂಗಿ ರಾಗಿ ಬೀಸನ ಬಾರೆ

ಜೋಡಿ ಅಂದಲದ ಹಿರಿಮಗ ಮನಿಗೆ ಬಂದರೆ
ಚಾವಡಿ ಕಲಕಲನೆ ಏ ನಗುತಾವು
ರಂಗಿ ರಾಗಿ ಬೀಸನ ಬಾರೆ

ಯಾವ್ ಊರ‍್ಗು ಹೋಗಿಲ್ಲ ನಾನು ಯಾತ್ರೆಗು ಹೋಗಿಲ್ಲ
ಕಾಯ್ದ ನೀರ ಇಳುವೆ ಏ ಸತಿಯಳೆ
ತಂಗಿ ರಾಗಿ ಬೀಸನ ಬಾರೆ

ಕಾಸಿದ ನೀರಿಳಿವಿ ಕೈಯಲ್ಲಿ ಚೊಂಬು ಕೊಟ್ಟು
ಇದುವೇನು ನಂಜಯ್ಯ ನಿಮ್ಮ ಬೆನ್ನು ಗುರುತು
ತಂಗಿ ರಾಗಿ ಬೀಸನ ಬಾರೆ

ನನ್ನೂರಾ ಮುಂದೆ ಕುರಿ ಸಾರಂಗದ ಬೇಟೆ
ಸೀಗೆಮುಳ್ಳು ನನ್ನ ಬೆನ್ನು  ತರೆದವು
ತಂಗಿ ಅಕ್ಕಿ ಬೀಸನ ಬಾರೆ