ದೊಡ್‌ದೊಡ್ಡ ರಾಗಿಕಲ್ಲೆ ದೊಡ್ಡ ಮುತ್ತಿನ ಕಲ್ಲೆ
ದೊಡ್ಡಣ್ಣ ನೇದ ಗೆರಸ್ ಹೂಡಿ
ಸಣ್ಣತ್ತಿಗೆಮ್ಮ ಕಲ್ಲು ತೆಗಿ ಬನ್ನಿ
ಸಣ್‌ಸಣ್ಣ ರಾಗಿಕಲ್ಲೆ ಸಣ್ಣ ಮುತ್ತಿನ ಕಲ್ಲೆ
ಸಣ್ಣಣ್ಣ ನೇದ ಗೆರಸ್ ಹೂಡಿ
ದೊಡ್ಡತ್ತಿಗೆಮ್ಮ ಕಲ್ಲು ತೆಗಿ ಬನ್ನಿ

ಅಣ್ಣನ ಮನಿಗೆ ಬಂದು ಸಣ್‌ರಾಗಿಕಲ್ ಹೂಡಿ
ಅತ್ಗೆ ಕೊಟ್ಟರು ಕೊಳಗ ರಾಗಿಯ || ಗೆರಸ್ಹೂಡಿ ರಾಗಿ ಕಲ್ಲೆ
ಅತ್ಗೆ ಕೊಟ್ಟರು ಕೊಳಗ ರಾಗಿಯನೀಗ
ಬೀಸಿ ಬೆನಕ್ಹರೀತು || ಗೆರಸ್ಹೂಡಿ ರಾಗಿಕಲ್ಲೆ

ಅಣ್ಣನ ಮನಿಗೆ ಬಂದು ತಂಗಿ ಕೂತಾಳಲ್ಲೊ
ಕೊಟ್ಟಳು ಕೊಳಗ ರಾಗಿ ಅತ್ತಿಗೆಮ್ಮ || ಗೆರಸ್ಹೂಡಿ ರಾಗಿಕಲ್ಲೆ
ಅತ್ಗೆಮ್ಮ ಕೊಟ್ಟ ರಾಗಿ ನಾದಿನಿ ಬೀಸಬೇಕು
ಕಣ್ಣಲ್ಲಿ ನೀರ ಸುರಿಸ್ತ ಬೀಸಳಲ್ಲೊ || ಗೆರಸ್ಹೂಡಿ ರಾಗಿಕಲ್ಲೆ

ಅಣ್ಣನ ಮನಿಗೆ ಬಂದು ರಾಗಿಯ ನಾ ಬೀಸಿದೆ
ತಾಯಿ ನಮ್ಮವ್ವ ಇದ್ದರೀಗ || ಗೆರಸ್ಹೂಡಿ ರಾಗಿಕಲ್ಲೆ
ತಾಯಿ ನಮ್ಮವ್ವ ಇದ್ದರೀಗ ಮನೆಯಲ್ಲಿ
ಕೋಣೆಮನೀಗೆ ಸಲುವಾಗೊ ಸಲುವಾಗೊ

ಕೋಣೆಮನೆ ನನಿಗೆ ಸಲುವಾಗ ನನ ತಾಯಿ
ನಮ್ಮತ್ತೀಗೆ ರಾಗೀಯ ಕೊಟ್ಟರಲ್ಲೊ
ನಮ್ಮತ್ತೀಗೆ ರಾಗಿಯ ಕೊಟ್ಟರೆ ಅಣ್ಣಯ್ಯ
ನಾ ರಾಗ ಎಳೆದು ಬೀಸತೀನಿ ನಾ ಬೀಸತೀನಿ

ತಾಯಿ ಇಲ್ಲದ ಮೇಲೆ ತೌರೀಗೆ ಬರಕಾದು
ನಾ ಬಂದು ಕೆಟ್ಟೆನಲ್ಲ ಬಂದು ಕೆಟ್ಟೆನು
ಅಣ್ಣ ಕರದಂತ ತೌರಮನೀಗೆ ಬಂದೆ
ಅತ್ತಿಗೆ ಕೊಟ್ಟಳಲ್ಲ ಕೊಳಗ ರಾಗಿಯ ನನಗೆ ಕೊಳಗ ರಾಗಿ

ತಾಯಿ ಇದ್ದರೆ ನನಗೆ ಕೊಳಗ ರಾಗಿಯ ಕೊಡೋಳ
ನನ ಕೂಟೆ ರಾಗಿಯ ಬೀಸುಸಾಳ ತಾಯಿ ಬೀಸುಸಾಳ
ಅಣ್ಣನ ಮನಿಗೀಗ ತಂಗಿ ಬಂದಾಳಲ್ಲ
ಅತ್ತಿಗೆ ಕೊಟ್ಟಳು ಕೊಳಗ ರಾಗಿ ನನಗೆ ಕೊಳಗ ರಾಗಿ
ಅಣ್ಣ ಕರದಾನಂತ ತೌರಮನೆಗೆ ಬಂದೆ
ಅತ್ತಿಗೆ ಕೊಟ್ಟಳು ಕೊಳಗ ರಾಗಿ ನನಗೆ ಕೊಳಗ ರಾಗಿ

ತಾಯಿ ಸತ್ತ ಮೇಲೆ ತೌರೂರು ನಮಗೆ ಬೇಡೊ
ತಂದೆ ಸತ್ತರೆ ನಮಗೆ ಬಳಗ ಬೇಡೊ ನಮಗೆ ಬಳಗ ಬೇಡೊ
ತಾಯಿ ಇದ್ದರೆ ನಮಗೆ ಅಡುಗೆಕೋಣೆ ನಮದು
ತಾಯ್ ಹೋದಮೇಲೆ ನಮಗೆ ತೌರು ಬೇಡೊ ನಮಗೆ ತೌರು ಬೇಡೊ
ತಂದೆ ಸತ್ತರೆ ಸಾಯಲಿ ತಂದೆ ಬಳಗ ಬರಲಿ
ಅದಕೆ ನಾವೀಗ ವರ ಕೊಡನ ವರ ಕೊಡನ

ಮಲ್ಲಿಗೆ ಹೂವೆ ಗೆರಸ್ಹೂಡಿದ ಅಕ್ಕಿಹಿಟ್ಟು
ಅಣ್ಣ ತಗದ್ಹೂಡಿ ನಾನು ಇಡುವ
ಕಲ್ಲಬೇರೆಯಲ್ಲ ನನಗೆ ಬೇರೆಯಲ್ಲ
ದೊಡ್ಡಣ್ಣ ನೇಸೀದ ಗೆರಸ್ಹೂಡಿ ರಾಗಿಯ ಕಲ್ಲೆ
ದೊಡ್ಡತ್ತಿಗೆ ಬಂದು ತೆಗೆದ್ಹೂಡಿ ತೆಗದ್ಹೂಡಿ
ದೊಡ್ಡತ್ತಿಗೇ ನೀ ಬಂದು ತೆಗದ್ಹೂಡಿ ರಾಗಿಕಲ್ಲೆ
ಮಲ್ಲಿಗೆ ನೀ ಹೂವೆ ಉದಿರಿದಂಗೆ ಅತ್ತಿಗಮ್ಮ
ನೀ ಗೆರಸ್ಹೂಡಿ ರಾಗಿಕಲ್ಲಲ್ವೆ ರಾಗಿಕಲ್ಲಲ್ವೆ