ರಾಗ ಪಂತುವರಾಳಿ ರೂಪಕತಾಳ

ನೀತಿಯಲ್ಲ ನೀವು ಬಂದುದು | ರಾಮಚಂದ್ರ |
ನೀತಿಯಲ್ಲ ನೀವು ಬಂದುದು || ಪಲ್ಲವಿ ||

ನೀತಿಯಲ್ಲ ನೀವು ನ | ಮ್ಮಾತನೊಡನೆ ಸಮರದಲ್ಲಿ |
ಭೂತನಾಥಗರಿದು ಸೋಲ್ವ | ರೀತಿಯಲ್ಲವೆಂಬುದನೀ |
ಕೋತಿಕುಲಗಳೇನು ಮಾಳ್ಪವು | ಶರದ ಮೊನೆಯೊ |
ಳೋತು ಬಡಿದರೆಂತು ತಾಳ್ವವು || ಹಲ್ಲ ಕಿರಿದು |
ಮೈ ತುರಿಸಿಕೊಂಡು ನೋಳ್ಪವು || ನೀತಿಯಲ್ಲ || ||೫೧||

ದೇವದೈತ್ಯರೊಮ್ಮೆಗಿವನ | ಸೇವೆ ಮಾಡಿ ಕಳೆವರ್ದಿನವ |
ಸಾವುದಿಲ್ಲವೆಂಬ ವರವು | ದೇವ ಕುಂಭಕರ್ಣಗುಂಟು |
ದೇವರೊಡೆಯಜಿತು ಕುಮಾರಕ | ಲಕ್ಷ್ಮಿ ಕರೆದ |
ಡೋಯೆನಿಪ್ಪ ಭಾಗ್ಯದಾಯಕ || ಸಕಲಶಾಸ್ತ್ರ |
ಕೋವಿದಾತ ನೀತಿ ಪೂರಕ || ನೀತಿಯಲ್ಲ || ||೫೨||

ಬಿನುಗಳಾದ ತಂಗಿ ಶೂ | ರ್ಪಣಖೆಯೆಂದ ಮಾತಕೇಳಿ |
ಜನಕಸುತೆಯ ತಂದು ವಿಭೀ | ಷಣನ ಬಿಟ್ಟುದೊಂದು ಮಾತ್ರ |
ಘನತೆಯಲ್ಲಿದೆರಡು ಗುಣಗಳು || ಅದರೊಳವನಿ |
ಗನುಭವಿಸದೆ ಬಿಡದು ವಿಧಿಗಳು || ಮಿಕ್ಕ ಭಾಗ್ಯ |
ವೆಣಿಸಿ ತುದಿಯಗಾಣೆವಿವನೊಳು || ನೀತಿಯಲ್ಲ || ||೫೩||

ಕಂದ

ಒಡೆಯನ ಗುಣಮಂ ಪೊಗಳುತ
ಸಡಗರದಿಂ ಕಪಿಗಳೆಲ್ಲರಂ ಜರೆಯಲ್ಕಾ |
ಹೊಡೆ ಬಡಿಯೆಂಬಾಮರ್ಕಟ
ರೊಡಬಡಿಸುತ ರಾಮ ಪೇಳ್ದ ಸುಗ್ರೀವನೊಳಂ || ||೫೪||

ರಾಗ ಘಂಟಾರವ ಝಂಪೆತಾಳ

ಕಪಿರಾಜ ಕೇಳಿದಕೆ | ಕೋಪವೇತಕೆ ನಮಗೆ |
ಕಪಟದವರಿವರಲ್ಲ | ಕಲಹ ತರವಲ್ಲ || ||೫೫||

ಬಂಟರಾದವರುಗಳ | ಬಲ್ಲತನ ತಮ್ಮೊಡೆಯ |
ನೆಂಟುಮಡಿ ಗುಣವ ನಿಜ | ವೆಂಬುದೇ ಸಹಜ || ||೫೬||

ಮುಖದಿಚ್ಛೆಯಂತುಸಿರ್ವ | ಮೋಸದವರಿವರಲ್ಲ |
ಸಕಲವನು ತಿಳಿದ ಸ | ರ್ವಜ್ಞರಿವರೈಸೆ || ||೫೭||

ನಮ್ಮ ಶೌರ್ಯಗಳಿರವ | ತಮ್ಮವರೊಳಾಡುವರು |
ನಿರ್ಮಲದಿ ಕಳುಹುವುದೆ | ಧರ್ಮವೈ ನಮಗೆ || ||೫೮||

ಕಡಲಧಿಪ ತಾ ಕೊಟ್ಟ | ಕಾಣಿಕೆಯ ರತುನಗಳ |
ಉಡುಗೊರೆಯ ಕೊಡಿಸಿದನು | ಉಚಿತಗಳ ನರಿತು || ||೫೯||

ತಳ್ಳಿಹೋಗದಿರೆಂಬ | ತಾಕೀತಿಗಳ ಮಾಡಿ |
ಪಾಳ್ಯದಿಂ ಕಳುಹಿದನು | ಪಟ್ಟಣಕ್ಕವರ || ||೬೦||

ಬಂದು ರಾವಣನೊಡನೆ | ಒಂದೆರಡು ಮಾತಾಡಿ |
ಮಂದಿರಕೆ ತೆರಳಲವ | ರಂದು ಬೆಳಗಾಯ್ತು || ||೬೧||

ರಾಗ ಮೋಹನ ಅಷ್ಟತಾಳ

ಸಾಂಬ ಸದಾಶಿವ | ಸಾಂಬ ಸದಾಶಿವ |
ಸಾಂಬ ಸದಾಶಿವ | ಸಾಂಬ ಶಿವ || ಪಲ್ಲವಿ ||

ದಿನಕರನುದಿಸುವ | ಮುನ್ನ ರಾವಣನೆದ್ದು |
ಘನಬೇಗದಿಂದ ಮ | ಜ್ಜನವ ಮಾಡಿದನು || ||೬೨||

ಲಿಂಗಪೂಜೆಯ ಮಾಡಿ | ಮಕ್ಕಳು ಸಹಿತಾಗಿ |
ಸಂಗಡ ಸಿಂಹಾ | ಸನವನೇರಿದನು || ||೬೩||

ಕರೆಸಿ ತಾ ಮಯ ವಿಶ್ವ | ಕರ್ಮರಿಬ್ಬರ ದುರ್ಗ |
ಭರಿತವೆಂದೆಸಗಿದ | ರರೆ ನಿಮಿಷದೊಳು || ||೬೪||

ಏಳು ಸುತ್ತಿನೊಳಾನೆ | ಕುದುರೆ ಭಂಡಿಗಳ ಬೇ |
ತಾಳ ರಾಕ್ಷಸರನ್ನು | ಸಾಲು ನಿಲಿಸಿದರು || ||೬೫||

ಅಗಳ ಹತ್ತಲು ವೈ | ರಿಗಳು ಬಂದರೆ ಜಾರಿ |
ಜಗುಳಿ ಬೀಳುವ ಹಾಗೆ | ಅಗೆಸಿದ ಜರಿಯ || ||೬೬||

ಕಂಡಿಕಂಡಿಗೆ ಕಾಣ | ದಂತೆ ಬಪ್ಪವರಿಗೆ |
ಮಂಡೆಯೊಳ್ ಬೀಳ್ವಂತೆ | ಗುಂಡುಕಲ್ಲುಗಳ || ||೬೭||

ಅಡವಿ ಕೋಡಗಗಳ | ಮದ್ದುಗುಂಡುಗಳಿಂದ |
ಕೆಡೆವ ರಾಕ್ಷಸರ ವಿಂ | ಗಡವ ಮಾಡಿದರು || ||೬೮||

ಹೊಗುವ ಹೆದ್ದಾರಿಯ | ಕೊತ್ತಳಂಗಳ ಮೇಲೆ |
ಅಗಣಿತದಾ ಫಿರಂ | ಗಿಗಳನಿಕ್ಕಿದರು || ||೬೯||

ಈಟಿ ಸಬಳ ಕೊಟ್ಟು | ತೊಂಬತ್ತನಾಲುಕು |
ಕೋಟಿ ದಾನವರ ನೀ | ಟಕೆ ನಿಲಿಸಿದನು || ||೭೦||

ಸುಣ್ಣ ಸಾಸುವೆ ಸೀಗೆ | ಮೆಣಸಿನಹುಡಿ ಹಾಕಿ |
ಎಣ್ಣೆಕೊಪ್ಪರಿಗೆಯ | ಒಲೆಯಲಿಕ್ಕಿಸಿದ || ||೭೧||

ಹಣ್ಣು ಮುದುಕರನ್ನ | ದಕೆ ನಿಲಿಸಿದ ಬಲು |
ಸಣ್ಣವರಿಗೆ ಕವಣೆ | ಕಲ್ಲ ಕೊಡಿಸಿದ || ||೭೨||

ವಾರ್ಧಕ

ಭರತಾದಿ ನವಖಂಡದೇಶಗಳ ಭೂಭುಜರ
ಕರೆಸಿದನು ಗರುಡ ಗಂಧರ್ವ ಉರಗಾಧಿಪರ
ಕರಿ ತುರಗ ರಥ ಪುರುಷನೆರವಿ ಸೇನೆಯೊಳು ಸಂಗರಕೆ ಸನ್ನಾಹವಾಗೆ |
ಹೊರಸುತ್ತಿನಗಳ ನೀಟಿನ ಮೇಲೆ ನಿಂದು ವಾ
ನರಸೈನ್ಯಮಂ ಕಾಣಬೇಕೆಂದು ಶುಕಸಾರ
ಣರ ಕರೆಸಿ ಯಾರುಯಾರೆಂದು ಬೆಸಗೊಳಲು ಶುಕ ಬೆರಳಿಂದ ತೋರಿಸಿದನು || ||೭೩||

ರಾಗ ಕೇತಾರಗೌಳ ಅಷ್ಟತಾಳ

ನೋಡಿದೆಯಾ ರಾವಣೇಂದ್ರ ನಿನ್ನನುಜನ |
ಕೂಡೆ ಯೇಕಾಂತದಿಂದ ||
ಆಡುವ ಮಾತಿಗೆ ಕಿವಿಗೊಟ್ಟು ನಮ್ಮೆಲ್ಲ |
ನೋಡುವಾತನೆ ರಾಘವ || ||೭೪||

ಜೋಡಾಗಿ ಎರಡುಬಿಲ್ಲೊಂದು ಕೈಯಲಿ ಪಿಡಿ |
ದಾಡುವಾತನೆ ಲಕ್ಷ್ಮಣ ||
ಮೂಡಣ ದೆಸೆಯಲಿ ನಿಲಬೇಡೆಂದೆನುತ ಕೈ |
ಮಾಡುವಾತನೆ ಸುಗ್ರೀವ || ||೭೫||

ಕುಂಭಿನಿಯುದಿಸುವ ಮುನ್ನ ಪುಟ್ಟಿದನಾತ |
ನೆಂಬರು ಜಗದೊಳೆಲ್ಲ ||
ಅಂಬಿಕೆ ಶಿವನಿಗೆ ಮದುವೆಯಾದಾಗ ಹ |
ತ್ತೊಂಭತ್ತು ವರುಷವಂತೆ || ||೭೬||

ಜಂಭಾರಿ ಮೊದಲಾದ ದಿವಿಜರೀತಗೆ ನಮೋ |
ಎಂಬುದು ಸಹಜವಂತೆ ||
ಅಂಬುಜಾಸನನ ಚೊಚ್ಚಲ ಕಂದನದೆ ನೋಡು |
ಜಾಂಬವನಧಿಕಶೌರ್ಯ || ||೭೭||

ತರಣಿಯೊಳ್ ಪಂಥದಿಂ ಸುರಗಿರಿಯನು ದಿನ |
ಕೆರಡುಬಾರಿಗೆ ಸುತ್ತಿದ ||
ಭರಿತವಿಕ್ರಮನಂತೆ ಯವ್ವನದೊಳಗೀಗ |
ಮೆರೆವನು ವಾರ್ಧಕ್ಯದಿ || ||೭೮||

ವನದಲ್ಲಿ ಜಂಬುಮಾಲಿಯ ಕೊಂದು ನಮ್ಮ ಪ |
ಟ್ಟಣವ ಹೋಮಿಸಿದ ವೀರ ||
ಹನುಮಂತನದಕೊ ಲಕ್ಷ್ಮಣನ ಹತ್ತಿರ ನಿಂದು |
ಕುಣಿದಾಡುವವನೆ ನೋಡು || ||೭೯||

ವಿನಯದಿ ಕಪಿಪೋತಂಗಳ ಹೆಗಲೇರಿ ಕೊಂ |
ಡೊನರುವಾತನೆಯಂಗದ ||
ವನದೊಳು ತಪಸಿದ್ಧ ಮುನಿಗಳ ಹಾಗಿಪ್ಪಾ |
ತನೆ ಗಜ ಗವಯ ನೋಡು || ||೮೦||

ವೃಷಭನವನ ಹಿಂದೆ ಕೈಲಾಸದಿಂ ನೀ ನಿಂ |
ದಿಸುತ ಠಕ್ಕರಿದೆಯಂತೆ ||
ಅಸುರ ಕೇಳಾ ಪಂಥದಿಂದ ಮರ್ಕಟನಾಗಿ |
ಬೆಸೆದಿಪ್ಪನವನೆ ನೋಡು || ||೮೧||

ಜೀಯಚಿತ್ತೈಸು ಪಲ್ಗಿರಿದು ಮುಂದುಬ್ಬೆಟ್ಟು |
ಬಾಯೊಳಾರ್ಭಟಿಸುವಾತ ||
ರಾಯನಪ್ಪಣೆಯಿಂದ ದಳಕೆಲ್ಲ ನೀಲನೇ |
ನಾಯಕವಾಡಿಯಂತೆ || ||೮೨||

ಶತಬಲಿ ಸುಮುಖ ದುರ್ಮುಖ ಗಜ ಗವಯರೆಂ |
ಬತುಳ ವಿಕ್ರಮರದಕೊ ||
ಮಿತಿಯಾಗದೆಣಿಸಿ ರಾಮನಪಾಳ್ಯದೊಳಗೆ ಬಂ |
ದತಿ ಬಲಾನ್ವಿತರ ನೋಡೈ || ||೮೩||

ಉಸುರಲಿನ್ನವನಿಂದ ಬಲಭಾಗದಲಿ ರಂ |
ಜಿಸುವಾತನವನೆ ನಳ ||
ಪೆಸರಿಸಲರಿಯೆ ಮೇಲಾದ ವಾನರವೀರ |
ರೆಸೆದಿರ್ಪರದಕೊ ನೋಡು || ||೮೪||

ಕಂದ

ಈ ಪರಿಯಿಂದಂ ವರ್ಣಿಸಿ
ಭೂಪಾಲನ ಪಾಳ್ಯದೊಳಗೆ ಕಪಿನಾಯಕರಂ |
ಕೋಪಿಸಿ ದಶಕಂಧರನುಂ
ತಾ ಪೌರುಷದಿಂದ ಪೇಳ್ದ ಶುಕಸಾರಣರ್ಗಂ || ||೮೫||

ರಾಗ ಕೇತಾರಗೌಳ ಅಷ್ಟತಾಳ

ಮರುಳಾದೆಯೇನೊ ನೀ ಬದನೆಕಾಯನು ದೊಡ್ಡ |
ಪರಬ್ರಹ್ಮವೆಂಬ ಹಾಗೆ ||
ಮರದಿಂದ ಮರಕೆ ಲಂಘಿಸುವಂಥ ಕಪಿಗಳ್ಗೆ |
ಅರಿಯಲ್ಲವೆಂಬರೇನೋ || ||೮೬||

ಸೂರ್ಯಗೆ ಮೋಡಗಳಿದಿರೆ ಕಪ್ಪೆಗಳು ಕಾ |
ಳೋರಗಕೆಣೆಯಹವೇ ||
ಗಾರುಗೆಡುವುದಲ್ಲದಿವು ನಮಗಿದಿರಾಗಿ |
ಹೋರುವದೆಲ್ಲ ಸುಳ್ಳು || ||೮೭||

ಬೇರ ಬಲ್ಲವರಿಗೆ ಮರದೆಲೆಯನು ತಂದು |
ತೋರುವರೆಲೆ ಮರುಳೆ ||
ಮೂರು ಲೋಕದ ಗಂಡನಾರಿಂತೆಂದೆಂಬ ವಿ |
ಚಾರವ ತಿಳಿದು ಪೇಳು || ||೮೮||

ಅಂತಕ ಮೊದಲಾದ ಅಮರರು ಸಹಿತಾರ |
ಚಿಂತೆಯೊಳಿಹರು ಪೇಳು ||
ಭ್ರಾಂತುಬುದ್ಧಿಯಲಿದಿರಾಗಿ ರಾಘವ ತನ್ನ |
ಕಾಂತೆಯನೊಯ್ವುದುಂಟೆ || ||೮೯||

ಸರಳಿನ ಮೊನೆಯೊಂದು ತಾಗಿದಡಿವು ಮೆಯ್ಯ |
ತುರಿಸಿ ಕಿಕ್ಕಿರಿಗುಟ್ಟುತ್ತ ||
ಭರದೊಳೋಡುವ ಕಪಿ ಪರಿವಾರಂಗಳಿಗೆ ಸಂ |
ಗರದೊಳೆಚ್ಚಾಟವಂತೆ || ||೯೦||

ಏಸು ಮರ್ಕಟರಿದ್ದರೇನಾಯ್ತು ನಮ್ಮ ವಿ |
ಭೀಷಣ ಹೊರತು ಮಿಕ್ಕ ||
ಸಾಸಿರಸಂಖ್ಯೆಯ ವಾನರಬಲವೆಲ್ಲ |
ಕಾಸಿಂದ ಕಡೆ ನಮಗೆ || ||೯೧||

ದೂಷಣ ತ್ರಿಶಿರ ಮಾರೀಚ ಮುಂತಾದರ |
ನಾಶಗೊಳಿಸಿದನೆಂಬ ||
ಮೆಯ್ಸಿರಿ ಹೆಮ್ಮೆಲ್ಲ ನಿಲಿಸದಿರ್ದಡೆ ರಾವ |
ಣೇಶನೆಯಲ್ಲ ತಾನು || ||೯೨||

ಇನಿತು ಮಾತಾಡುತ್ತಲಿರಲು ತಮ್ಮನ ಕಯ್ಯ |
ಧನುವ ತೆಕ್ಕೊಂಡು ರಾಮ ||
ಕಣೆಯೊಂದನೆಸೆದು ರಾವಣನ ಶ್ವೇತಚ್ಛತ್ರ |
ವನೆ ತುಂಡುಗೆಯ್ಯಲಾಗ || ||೯೩||

ಇನಸುತ ಹಾರಿ ಈರೈದು ಕಿರೀಟವ |
ಘನವೇಗದಿಂದ ತಂದು ||
ವನಜನಾಭನ ಕಣ್ಣಮುಂದಿಡಲದ ಕಂಡು |
ಮನದಿ ಕೋಪಿಸಿದ ರಾಮ || ||೬೪||

ವಾರ್ಧಕ

ಲವನೆ ಕೇಳೇಕಶರದಿಂದ ರಾವಣನ ಛ
ತ್ರವ ತರಿಯಲಾ ಭಂಗದಿಂದ ಮರಳಿದ ಮನೆಗೆ
ಅವಮಾನ ಲಕ್ಷ್ಮಿಮೈದೋರಿದಳು ಪ್ರಥಮಚುಂಬನ ದಂತಭಗ್ನದಂತೆ |
ಹವಣಿಸಿರಲಿತ್ತ ರಾಮನಪಾಳ್ಯದವರಿದೇ
ಸಮಯ ಲಗ್ಗೆಯ ಪಡೆವಡಪ್ಪಣೆಯ ಕೊಡಿಸೆನಲು
ದಿವಸಾಧಿಪತಿಕುಲೋದ್ಭವನವರ ಸಂತವಿಸಿ ರವಿಜಾತಗಿಂತೆಂದನು || ||೯೫||

ರಾಗ ದೇಶ್ಯಕಾಪಿ ಅಷ್ಟತಾಳ

ಸಾರಿ ಕೊಂದರೆ ಪಾಪವಿಲ್ಲ | ನಮ್ಮ |
ಧಾರಿಣೀಪತಿಗಳ ನಡತೆ ಇದಲ್ಲ || ಪಲ್ಲವಿ ||

ಇನ್ನಾದರೆಮ್ಮನು ಕಂಡು | ಸತಿ |
ಯನ್ನು ತಂದಿತ್ತು ತಮ್ಮನ ಕೂಡಿಕೊಂಡು |
ಮನ್ನಿಸಿದರೆ ಬಂದ ದಂಡು | ಪೋಪು |
ದನ್ಯಾಯವಲ್ಲ ಕೀರ್ತಿಯನು ಮುಂಕೊಂಡು || ||೯೬||

ಭ್ರಾಂತಿಬುದ್ಧಿಗಳೆಲ್ಲ ಬಿಡಲಿ | ತನ್ನ |
ಪಂಥ ಪೌರುಷವನಾಚೆಯೊಳು ಕಟ್ಟಿಡಲಿ |
ಸಂತಾನ ಸಹಿತ ಬಾಳಿರಲಿ | ಸಾಯು |
ವಂಥಾದಿದ್ದರೆ ನಮ್ಮೊಳಿದಿರೊಡ್ಡಿ ಬರಲಿ || ಸಾರಿ || ||೯೭||

ಸಂಧಾನಕೋರ್ವನ ಕಳುಹಿ | ನಾವಿಂ |
ತೆಂದ ಮಾತುಗಳ ರಾವಣನಿಗೆ ತಿಳುಹಿ ||
ಬಂದರೊಳ್ಳಿತು ಮಾತನುಳುಹಿ | ಕಾರ್ಯ |
ಹೊಂದದಿದ್ದರೆ ಬರಲಿತ್ತ ತಾನಿಳುಹಿ || ಸಾರಿ || ||೯೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ದಾನವಾಂತಕನೆಂದ ಮಾತಿಗೆ |
ಭಾನುಸುತ ತನ್ನಿಂದ ಜ್ಯೇಷ್ಠನ |
ಸೂನುವನು ಬೀಳ್ಕೊಟ್ಟನರಿಸಂ | ಧಾನಗೊಳಲು || ||೯೯||

ಭಾನುಮಾರ್ಗದೊಳಡರಿ ದುರ್ಗವ |
ಜಾಣನಂಗದ ಬರಲು ಕೇರಿಯ |
ಮಾನಿನಿಯರಂಜಿದರು ಮೊದಲದು | ತಾನೆಯೆಂದು || ||೧೦೦||

ಸೀರೆಗಳ ನಡಗಿಸಿದರೆಣ್ಣೆಯ |
ದೂರದಲಿ ಬಚ್ಚಿಟ್ಟು ಬಂದರು |
ನೀರ ಚಿಮ್ಮಿದರೊಲೆಗೆ ಹಿಂದಣ | ಮಾರಿಗಂಜಿ || ||೧೦೧||

ಬೆದಬೆದರಿ ವಾನರನ ಬಾಲದ |
ತುದಿಯನೀಕ್ಷಿಸಿ ಕಿವಿಯೊಳೇಕಾಂ |
ತದಲಿ ಮಾತಾಡಿದರು ಕೆಲವರು | ಬದಲಿದೆಂದು || ||೧೦೨||

ಸಣ್ಣವರು ನೋಡಿದರೆ ಬಾಳೆಯ |
ಹಣ್ಣುಗಳ ಕರೆಕರೆದು ಕೊಡುವರು |
ಪುಣ್ಯವುಳ್ಳದ್ದೆನುತ ಕೆಲರದ | ಮನ್ನಿಸಿದರು || ||೧೦೩||

ಇಕ್ಕಲದಲಂಗಡಿಯ ಬಾಗಿಲ |
ನಿಕ್ಕಿದವರನು ಜರೆದು ಭರಣಿಯ |
ಸಕ್ಕರೆಯ ಮೆಲುತರಮನೆಯ ಒಳ | ಹೊಕ್ಕನಾಗ || ||೧೦೪||

ತಡೆದ ಬಾಗಿಲ ಭಟರ ಮಂಡೆಯ |
ನೊಡೆದನಾ ಕಂಕುಳಿನ ಮರದಲಿ |
ಕಡೆಗೆ ಕುಳಿತನು ಬಂದಿದಿರು ಚಾ | ವಡಿಯ ಮುಂದೆ || ||೧೦೫||

[ಭಾಮಿನಿ

ಬಾಲವನು ಸುರುಳಿಕ್ಕಿ ಕುಳಿತನು
ಕಾಲಭೈರವನಂತೆ ಜನರೊ
ಡ್ಡೋಲಗದೊಳಿದ್ದವರು ಕೆಲರೊಳಸರಿದರಲ್ಲಲ್ಲಿ ||
ಕಾಳಗದ ತೆರನಲ್ಲ ತಮ್ಮವ
ರೂಳಿಗದ ಕಪಿಯೆನುತ ಬಳಿಕ ವಿ
ಶಾಲಮತಿ ನಡೆತಂದು ಮಾತಾಡಿಸಿದನಂಗದನ ||] ||೧೦೬||

ರಾಗ ಮಧ್ಯಮಾವತಿ ಏಕತಾಳ

ಏನು ಸಡಗರ ಖಳಸಭಾಸ್ಥಾನ |
ತಾ ನೆರೆದಿಹುದು ರಾಕ್ಷಸರವಿತಾನ || ಪಲ್ಲವಿ ||

ಮುಖಗಳೆರಡು ಮೂರು ನಾಲ್ಕೈದರವರ್ಯಾರು |
ಮುಖ ನಿರೀಕ್ಷಿಸಲಾಗಿ ದಶಪರಿಯಂತ ||
ಮುಖವಿಹುದಿದರೊಳು ಭೂಪುತ್ರಿಯನು ರಾತ್ರಿ |
ಮುಖದೊಳು ಕದ್ದು ತಂದಧಮನಾರಯ್ಯ || ಏನು || ||೧೦೭||

ಹೇಳಲಾಗದೆ ಬಲ್ಲವರು ಭೂಮಿಪಾಲಕ |
ಹೇಳಿ ಕಳುಹಿಸಿದಂಥ ರಾಜಕಾರ್ಯವನು ||
ಹೇಳಿಹೋಗಲು ಬಂದೆ ಪ್ರತಿಭಟನಾನಲ್ಲ |
ಹೇಳಿ ಸೀತೆಯ ತಂದ ಕಳ್ಳನಾರಯ್ಯ || ||೧೦೮||

ಭಾಮಿನಿ

ನಗರದಹನದ ಕಪಿಯ ಮೋಡಿಯ
ಮಿಗಿಸುತಿದೆ ಮಾತಿನಲಿ ವದನದ
ಹೊಗರು ಹೊಸ ಪರಿಯಾಗಿ ತೋರುತಿದೆ ವಿವೇಕಿಸಲು |
ವಿಗಡನಿವನಹುದೆಂದು ಮನದಲಿ
ಬಗೆಯರಿದು ಬಳಿಕಾ ಪ್ರಹಸ್ತನು
ಮುಗುಳು ನಗೆಯಲಿ ನುಡಿದನಾ ಕಪಿರಾಜಪುತ್ರಂಗೆ || ||೧೦೯||

ರಾಗ ಕುರಂಜಿ (ಪಹಡಿ) ಅಷ್ಟತಾಳ

ಆರೋ ಬಂದವ ಕಪಿ ತಾನು | ನಿನ್ನ |
ದಾರಟ್ಟಿದರು ಕಾರ್ಯವೇನು | ನೋಡೆ |
ಮೂರುಕಣ್ಣವನಂತೆ ನೀನು | ನಮ್ಮ |
ದ್ವಾರಪಾಲಕರನಂಜಿಸಿ ಹೊಕ್ಕು ಬಲು ಮೊನೆ |
ಗಾರನಂದದೊಳತಿ ಗರ್ವದಿ ಕುಳಿತಿಹೆ || ||೧೧೦||

ಲೇಸು ನಾ ಪೇಳ್ವೆ ಬಂದೊಳವ | ಕೇ |
ಳಾ ಶೂರ್ಪಣಖೆಯ ಕೃತ್ರಿಮವ | ಕಂಡು |
ನಾಸಾ ಭೇದಿಸಿ ಕೊಳುಗುಳವ | ಗೈದು |
ದೂಷಣಾದ್ಯರ ಶಿರವಿಳುಹಿಸಿ ಮೆರೆವಂಥ |
ದಾಶರಥಿಯ ಕಡೆ ದೂತನಾಗಿರುವೆನು || ||೧೧೧||

ಮೆಯ್ಯೊಳಿಷ್ಟರ ಮದವೇಕೆ | ಎರಡೂ |
ಕಯ್ಯ ಪರ್ವತ ವೃಕ್ಷ ಸಾಕೇ | ನ |
ಮ್ಮಯ್ಯನವರು ಕಾಂಬರ್ಜೋಕೆ | ಈಗ |
ಬಾಯ ಹೊಯ್ಸುವರು ಹೋಗಾಕಡೆಯಲಿ ನಿನ್ನ |
ಕಯ್ಯಾಯುಧವ ಕೆಳಗಿಟ್ಟು ಮಾತಾಡಯ್ಯ || ||೧೧೨||

ಬೆದರುವದೇಕೆ ನೀವೆಲ್ಲ | ನಿಮ್ಮೊಳ್ |
ಕದನಕ್ಕೆ ಬಂದವನಲ್ಲ | ಶ್ರೀ |
ಪದುಮಲೋಚನೆಂದ ಸೊಲ್ಲ || ದಶ |
ವದನಗೆ ಹೇಳಿ ಕಳುಹಿಸಿದುದ ಪೇಳಿಯೆ |
ಬದಲುತ್ತರವನೊಯ್ವ ಚದುರನು ನಾ ಕಾಣೈ || ||೧೧೩||

ಮರದಿಂದ ಮರಕೆ ಹಾರುವಿರಿ | ಸಂಧಿ |
ಮರಿಯಾದೆಗಳನೇನನರಿವಿರಿ | ಮಿಗೆ |
ಪುರುಬುಗಳೆತ್ತಿ ಹಣ್ಕುವಿರಿ || ನೋಯೆ |
ಕಿರಿಕಿರಿ ಕಿರ್ರೆನೆ ಟಿಟ್ಟರಿ ಗುಟ್ಟುತ್ತ |
ಭರದಿಂದಲೋಡುವ ಭಟರು ನೀವಲ್ಲವೈ || ||೧೧೪||

ದುರುಳಬುದ್ಧಿಗಳೆಲ್ಲ ಕಲಿಸಿ | ಚಾಡಿ |
ತರಳೆಮಾತುಗಳೆಲ್ಲ ತಿಳಿಸಿ | ನೀತಿ |
ತೊರೆದ ಧರ್ಮವ ನಿತ್ಯಗಳಿಸಿ || ಪರ |
ತರುಣಿಯರನು ಬಲಾತ್ಕಾರದಿಂದೆಳೆತಂದು |
ಸೆರೆಯೊಳಿಕ್ಕಿಸುವಂಥ ಮಂತ್ರಿ ನೀನಲ್ಲವೈ || ||೧೧೫||

ಅಂಗವಿಲ್ಲದ ಮಾತನಾಡಿ | ದಶ |
ನಂಗಳ ಕಳಕೊಂಬೆ ಹೇಡಿ | ನಿ |
ನ್ನಂಗವಣೆಯ ಬಲು ಮೋಡಿ || ಈಗ |
ಭಂಗಿಸಿ ನಾವು ಕೊಂದರೆ ಕೇಳುವವರ್ಯಾರು |
ಮಂಗಚೇಷ್ಟೆಯ ಬಿಟ್ಟು ಜತನದಿ ಮಾತಾಡು || ||೧೧೬||

ಇರುಳೊಳು ಕಾಡೆಲ್ಲ ನಡೆದು | ಮೂಗು |
ಪರಿಯಂತ ಮದ್ಯವ ಕುಡಿದು | ಅಲ್ಲಿ |
ಪರರ ಹೆಂಗಳನಟ್ಟಿ ಹಿಡಿದು || ಮತಿ |
ಮರೆದು ಬಳಿಕ ತಲೆ ತಿರುಗಿ ಬೀಳುತ್ತಲಿ |
ನೊರೆನೊರೆ ಕಾರುವ ಖಳರು ನೀವಲ್ಲವೈ || ||೧೧೭||