ರಾಗ ಸೌರಾಷ್ಟ್ರ ತ್ರಿವುಡೆತಾಳ

ಕುಶನೆ ಕೇಳೈ ಪುಷ್ಯಶುದ್ಧದ |
ದಶಮಿಯಲಿ ಪ್ರಾರಂಭವಾಯಿತು |
ಉಸುರಲದು ಸಂಪೂರ್ಣವು ತ್ರಯೋ | ದಶಿಯೊಳಾಯ್ತು || ||೧||

ಆ ಕಪೀಂದ್ರರ ಸಹಸವೆಂತುಟೊ |
ನಾಲ್ಕು ದಿವಸದಿ ಸೇತು ನಡೆದುದು |
ನಾಕದಿಂ ಬಲು ಭೇರಿ ಮೊಳಗಿತ | ನೇಕರಭಸ || ||೨||

ಕೇಳು ಲವ ಮರುದಿವಸದಲಿ ಕಪಿ |
ಜಾಲ ಸಹಿತೈತಂದು ಶರಧಿಯ |
ಮೂಲದೆಡೆಯಲಿನಿಂದ ರವಿಜ ವಿ | ಶಾಲದಿಂದ || ||೩||

ದ್ವಿವಿದ ಶತಬಲಿ ಮೈಂದನಳಗಜ |
ಗವಯ ಪನಸ ಗವಾಕ್ಷ ಕೇಸರಿ |
ದಿವಿಜಪತಿಸುತತನುಜ ಸಾರಸ | ಭವತನುಜರೂ || ||೪||

ಮರುತನಂದನ ಸುಮುಖ ದುರ್ಮುಖ |
ವರಸುಷೇಣಾದ್ಯರನು ವಿನಯದಿ |
ಕರೆಕೊಳುತ ನಡೆತಂದುರಾಮನೊ | ಳೊರೆದನಿಂತು || ||೫||

ಭಾನುನಂದನನಾಗಳಾ ಕಪಿ |
ಸೇನೆಗಳ ಕರಕೊಂಡು ಬಂದಾ |
ದಾನವಾಂತಕಗೆರಗಿ ಪೇಳ್ದ ನಿ | ಧಾನದಿಂದ || ||೬||

ರಾಗ ಯರಕಲಕಾಂಭೋಜಿ ಅಷ್ಟತಾಳ

ಆಯಿತು ಸೇತು ಕಟ್ಟಿ ರಾಜೇಂದ್ರ |
ವಾಯುನಂದನ ತಂದ ಪರ್ವತವಿಡೆ ಪೂರ್ಣ || ವಾಯಿತು || ಪಲ್ಲವಿ ||

ಜಾಂಬವ ನೀಲಾಂಗದರ ಸಾಹಸವ ನಾನೇ |
ನೆಂಬೆನು ಹತ್ತು ಯೋಜನದಗಲದ ಸೇತು |
ಎಂಬ ಮಾತಿಗೆ ಶ್ರೀರಾಮ | ವಾನರರ ಕ |
ದಂಬವೀಕ್ಷಿಸಿ ನಿಸ್ಸೀಮ | ಲಕ್ಷ್ಮಣನ ಮು |
ಖಾಂಬುಜವನು ನೋಡಿ ನಗುತ ಸುಪ್ರೇಮ || ಆಯಿತು || ||೭||

ಸುರರ ಪಟ್ಟಣದಿಂದ ತರಿಸಿ ಬೇಕಾದಂಥ |
ವರಸೋಪಸ್ಕರಫಲಾಹಾರವನಿತ್ತುಪ |
ಚರದ ಮಾತುಗಳ ಹೇಳಿ | ಅನೇಕ ವಿ |
ಸ್ತರದ ಸಂತಸವ ತಾಳಿ | ಮುಂದೇನೆಂದು |
ತರಣಿನಂದನ ವಿಭೀಷಣರೊಳು ಕೇಳಿ || ಆಯಿತು || ||೮||

ಹೇಳಿ ಚಿತ್ತದೊಳಿದ್ದ ಹದನ ಮಾಳ್ಪುದಕೆಂದು |
ಕೇಳಿಕೊಳ್ಳಲು ಭಾನುಸುತ ಮುಂತಾದವರು ಭೂ |
ಪಾಲನಪ್ಪಣೆಯೊಳಂದು | ಸುಗ್ರೀವನ |
ಪಾಳೆಯ ಸಹಿತ ಬಂದು | ಕಟ್ಟೆತ್ತಿದ |
ಮೂಲದ ಬಳಿಯ ನೋಡುತ ರಾಮನಿಂದು || ಆಯಿತು || ||೯||

ರಾಗ ಘಂಟಾರವ ಝಂಪೆತಾಳ

ಭಾನುನಂದನನೆ ಬಲು | ಬಲು ದಣಿದರಿವರೆಲ್ಲ |
ಕಾಣಲಸದಳವೆಮಗೆ | ಕಟ್ಟಿರುವ ಬಗೆಗೆ || ||೧೦||

ಅಂಗದನ ಸಾಹಸಕೆ | ಮೆಚ್ಚದವರಾರುಂಟು |
ಕಂಗೊಳಿಪ ಜಾಂಬವರು | ಕಷ್ಟಕೊದಗಿದರು || ||೧೧||

ಹನುಮಂತ ಗುಣದಿಂದ | ಹಂಗನಿಕ್ಕಿಸಿಕೊಂಡ |
ಪನಸನತಿ ಪೌರುಷವ | ನೆಣಿಸಲಳವಲ್ಲ || ||೧೨||

ಸುಮುಖ ದುರ್ಮುಖರುಗಳ | ಸಾಹಸಂಗಳ ಪೊಗಳ |
ಲಮಮ ಇದು ಬಲು ಚೋದ್ಯ | ವೆಂಬಡೆಯಸಾಧ್ಯ || ||೧೩||

ವೃಷಭ ಕೇಸರಿ ನೀಲ | ಹೃದಯದೊಳಗತಿಶೀಲ |
ಪೆಸರ ಪಡೆದವರಿಂದ | ವಿಕ್ರಮಗಳಿಂದ || ||೧೪||

ಏಸು ನಾ ಪೊಗಳಿದರು | ಎಲ್ಲವರ ರೀತಿಯೆ ವಿ |
ಭೀಷಣನ ಗುಣವಿನ್ನು | ಪುತ್ಥಳಿಯ ಹೊನ್ನು || ||೧೫||

ನಳನ ಕಷ್ಟಗಳೆಲ್ಲ | ನಾವ್ ಪೊಗಳಿ ತುದಿಯಿಲ್ಲ |
ತಿಳಿಯಬಹುದಿವರ್ಗೆಲ್ಲ | ನಾವ್ ಕೊಡುವ ಸೊಲ್ಲ || ||೧೬||

ಇಂತೆನುತಲೆಲ್ಲರನು | ಈ ಬಗೆಯ ಕೊಂಡಾಡಿ |
ಕಂತುಪಿತ ಕರೆದಿನಜ | ಗಿಂತೆಂದನಾಗ || ||೧೭||

ರಾಗ ಕೋರೆ (ಕಲ್ಯಾಣಿ) ಅಷ್ಟತಾಳ

ಪೋಗಬೇಕಯ್ಯ | ಸೇತುವ ದಾಟಿ |
ಸಾಗಬೇಕಯ್ಯ || ಪಲ್ಲವಿ ||

ಈಗ ನಾ ಮುಂದೆ ತಾ ಮುಂದೆಂದು ಹೆಣಗದೆ |
ಸಾಗರದಲಿ ಬೀಳಲಾಗದಂದದಲಿ || ಅನುಪಲ್ಲವಿ ||

ಹಿಂದೆ ಇದ್ದವರು | ಸೇತುವ ದಾಟಿ |
ಮುಂದೆ ಹೋದವರು ||
ಒಂದೇ ಕಡೆಯಲಿ ಠಾಣ್ಯವನಿಕ್ಕಿರಲಿ ಹೀ |
ಗೆಂದು ಕಟ್ಟಳೆಯಾದ ಒಂದು ಕಟ್ಟಿನಲಿ || ಪೋಗ || ||೧೮||

ಅಲ್ಲಿ ಇದ್ದುದನು | ಮುಟ್ಟದಿರೊಂದು |
ಹುಲ್ಲು ಕಡ್ಡಿಯನು ||
ಎಳ್ಳಿನಷ್ಟಾದರು ಎಲ್ಲರೂ ಕೂಡಿಕೊಂ |
ಡಲ್ಲದೆ ಒಬ್ಬೊಬ್ಬರ್ತಿರುಗಾಡ ಬೇಡಿ || ಪೋಗ || ||೧೯||

ಭಾಮಿನಿ

ರವಿಕುಲೋದ್ಭವನುಚಿತವಚನವ
ರವಿಕುಮಾರಕ ಕೇಳ್ದು ಸೇನಾ
ನಿವಹಕಧಿಪತಿಗಳನು ನೇಮದ ಕಟ್ಟಿನಲಿ ನಿಲಿಸಿ |
ರವಿಕಿರಣವಡಗಲು ಮಹಾಂಬುಧಿ
ರವ ಮರೆಸೆ ಕಪಿಸೇನೆ ನಡೆದುದು
ಭುವನಕತಿಶಯ ಕೀರ್ತಿ ರಘುರಾಜೇಂದ್ರಚಂದ್ರಮನ || ||೨೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ನಡೆವ ದಳಪದಹತಿಯ ರಭಸಕೆ |
ನಡುಗುತಿದ್ದುದು ಸೇತು ನೀರಲಿ |
ಹಡಗಿನಂತೊಲೆದಾಡುತಿರ್ದುದು | ಬುಡವು ತುದಿಗೆ || ||೨೧||

ಕುಂಭಕರ್ಣಾದಿಗಳ ಪ್ರಾಣವ |
ಕೊಂಬ ಬಗೆಗೆನೆ ಚರಣವಿಟ್ಟ ಮ |
ಹಾಂಬುಧಿಯ ಸೇತುವಿನ ಮೊದಲಿನೊ | ಳಂಬುಜಾಕ್ಷ || ||೨೨||

ರಾಗ ಪಂತುವರಾಳಿ ಮಟ್ಟೆತಾಳ

ರಾಮ ಬಂದನು | ರಾಕ್ಷಸ ಕುಲ | ಭೀಮ ಬಂದನು || ಪಲ್ಲವಿ ||

ಕಾಮರೂಪಿಗಳಾದ ಕಪಿ | ಸ್ತೋಮವನ್ನು ಕೂಡಿಕೊಂಡು || ಅನುಪಲ್ಲವಿ ||

ಎಳೆಯಕಪಿಗಳಿದಿರುಲಾಗಂ | ಗಳ ನಿರಿಂಕಿ ನೋಡುತ |
ಗಳಿಗೆ ಗಳಿಗೆ ಹೊಳೆವಾಕಾಶ | ದೊಳಗೆ ಭೇರಿ ಮೊಳಗುತ |
ನಳಿನನಾಭನಡಿಗೆ ಸುಮದ | ಮಳೆಗಳು ಬಂದಿಳಿಯುತ |
ಭಳಿಗೆ ರಾಮ ಜಯ ಜಯ ವೆಂ | ದಾರತಿಗಳ ಬೆಳಗುತ |
ಒಲಿದು ಸುರರಂಬರದಿ ಪಾಡಿ | ರಾಮನಾಮ ಪೊಗಳುತ || ರಾಮ || ||೨೩||

ಕಡಲ ತೆರೆಗಳುಬ್ಬುತ್ತಡಿ | ಗಡಿಗೆ ದಡಕೆ ಬಡಿಯುತ |
ಒಡೆಯ ನೀ ನೋಡೆಂದು ಜಳದ | ಬೆಡಗನೊಡ್ಡಿ ತೋರುತ |
ತಡೆದು ತಡೆದು ನೀರೊಳಡ್ಡ | ಕೆಡಹುತೆಡಕುತಾಡುತ |
ಅಡಗಿದವರನಟ್ಟಿಕುಟ್ಟಿ | ಹಿಡಿದು ತಂದು ಕೂಡುತ |
ಪಡೆಯು ನಡೆಯಲಾಗ ಸೇತು | ಹಡಗಿನಂತೋಲಾಡುತ || ರಾಮ || ||೨೪||

ದಾಶರಥಿಯ ಕಣ್ಣಿನಿದಿರೊ | ಳಾ ಸಮುದ್ರದಿ ಬೀಳುತ |
ಭಾಷೆ ಪಂಥದಿಂದ ನೀರೊ | ಳೀಸಿ ಮುಳುಗುತೇಳುತ್ತ ||
ಏಸರಾಳುದ್ದುದಕವುಂಟೆಂ | ಬಾ ಸುದ್ದಿಗಳ ಕೇಳುತ್ತ |
ಬೀಸಿ ಬಾಲದಿಂದ ನೀರಾ | ಕಾಶದೆಡೆಗೆ ಚಿಮ್ಮುತ್ತ || ರಾಮ || ||೨೫||

ವಾರ್ಧಕ

ಅಣುಗ ಕೇಳಿಂತಾರು ದಿವಸ ನಡೆದುದು ದಂಡು
ಗೊಣಗುಟ್ಟಿದತ್ತಿತ್ತ ಸುಗ್ರೀವನಾಜ್ಞೆಯಲಿ
ಗಣನೆಗೆಪ್ಪತ್ತೇಳು ಕೋಟಿ ಕಪಿನಾಯಕರು ರಾಮಲಕ್ಷ್ಮಣರು ಸಹಿತ |
ಬಣಗು ರಕ್ಕಸರಲ್ಲಿ ಕಾವಲಿದ್ದವರತ್ತ
ಜುಣುಗಿದರು ಪಟ್ಟಣಕೆ ಬಂತು ದುರ್ದೆಸೆಯೆನುತ
ದಿನಮೂರರೆಣಿಕೆಯಲಿ ದುರ್ಗದ ಸಮೀಪದೊಳ್ ಬೀಡೆತ್ತಿತಾ ರಾಮನ || ||೨೬||

ರಾಗ ಗೌಳಮಲಹರಿ ಅಷ್ಟತಾಳ

ಗುಲ್ಲು ಹೆಚ್ಚಿತು ಲಂಕಾಪುರದಲ್ಲಿ | ಕಪಿ |
ಪಾಳ್ಯ ಮುಂತಾಗಿ ಪಟ್ಟಣವ ಮುತ್ತಿದರೆಂಬ || ಪಲ್ಲವಿ||

ಪಟ್ಟಣ ಜನ ಬಾಯ ಕಳೆಯುತ್ತ | ಅಯ್ಯೋ |
ಕೆಟ್ಟೆವು ಪಾಪಿರಾವಣನಿಂದಲೆನ್ನುತ್ತ ||
ಕಟ್ಟಿ ಸರಕ ತೆಗೆದೊಯ್ಯುತ್ತ | ಊರ |
ಬಿಟ್ಟಾರಣ್ಯವ ಸೇರಿ ಬದುಕುವೆವೆನ್ನುತ್ತ || ಗುಲ್ಲು || ||೨೭||

ಪೆಟ್ಟಿಗೆಗಳನು ಕಟ್ಟಿಡು ಮಾಣಿ | ಅಯ್ಯೋ |
ಕೆಟ್ಟಿತು ದೇವತಾರ್ಚನೆಯ ತುಂಬಿಡು ಗೋಣಿ ||
ಪಟ್ಟಿಯ ತೆಗೆಯದಿಪ್ಪಳೊ ರಾಣಿ | ಎಂಬ |
ಭಟ್ಟರುಗಳು ಊರು ಬಿಟ್ಟು ಓಡುವ ವಾಣಿ || ಗುಲ್ಲು || ||೨೮||

ಗಡಿಗೆ ಮಂಡೆಗಳೆಲ್ಲ ಹೊತ್ತರು | ಕೆಲ |
ರಡಿಗೆಯೂಟಗಳೆಂಬ ಗೊಡವೆಗೆ ನಿತ್ತರು |
ಗಡಿಯ ಬಾಗಿಲನೆಲ್ಲ ಕಿತ್ತರು | ಹಿಂದೆ |
ಸುಡುಗೇಡಿನಲಿ ಹೋದ ಬಗೆಯನೆಚ್ಚತ್ತರು || ಗುಲ್ಲು || ||೨೯||

ಗೋಧನಗಳನೆಲ್ಲ ಬಿಟ್ಟರು | ಕಡಲೆ |
ಗೋಧಿ ಬೆಲ್ಲಗಳ ಕಂಡವರಿಗೆ ಕೊಟ್ಟರು |
ಹಾದಿ ಹಾದಿಯೊಳು ಬೊಬ್ಬಿಟ್ಟರು | ಖೂಳ |
ರಾದ ದಾನವರ ದುರ್ಗದಲಿ ಸಾಲಿಟ್ಟರು || ಗುಲ್ಲು || ||೩೦||

ಕೇರಿಕೇರಿಯೊಳಿಹ ಮನೆಗಳ | ಅಲ್ಲಿ |
ನಾರಿ ಪುರುಷರ ಖೋಯೆಂಬ ಗರ್ಜನೆಗಳ ||
ಊರ ಬಿಟ್ಟೋಡುವ ಭರಗಳ | ಕಪಿ |
ವೀರರು ನೋಡುತ್ತ ನಗುವ ಸಂಭ್ರಮಗಳ || ಗುಲ್ಲು || ||೩೧||

ವಾರ್ಧಕ

ತನಯರಿರ ಕೇಳಿ ಲಂಕಾಪುರದ ಗಜಬಜವ
ಮುನಿವರರು ತಿಳಿದು ರಾಮನ ಪರಸಲಾ ರಾತ್ರಿ
ಘನ ಪಟ್ಟಣದೊಳೊಗೆದ ಕಾರ್ಯಗಳ ಸಂಭ್ರಮವ ಜನವಾರ್ತೆಯಿಂ ಕೇಳುತ |
ಮನಸಿನಲಿ ನೊಂದುಕೊಂಡಾ ಮಂತ್ರಿವೀರ ರಾ
ವಣನ ನಿದ್ರಾಲಯಕ್ಕಾಕ್ಷಣದಿ ಬಂದು ಮ
ತ್ತಿನಕುಲೇಂದ್ರನ ಸೈನ್ಯಮೈತಂದ ಚಾರಿತ್ರಮಂ ಪೇಳ್ದನತಿ ನಯದೊಳು || ||೩೨||

ರಾಗ ಧನಶ್ರೀ ಅಷ್ಟತಾಳ

ಕೇಳಯ್ಯ | ಮಾತ | ಕೇಳಯ್ಯ || ಪಲ್ಲವಿ ||

ಪೇಳುವದಿಂದೊಂದು | ಪೊಸಸುದ್ದಿ ಕಿವಿಗೊಟ್ಟು || ಅನುಪಲ್ಲವಿ ||

ಬಾಲೆಯ ನೀವು ತಂದಾಕೆಯ ಪತಿ ಎಪ್ಪ |
ತ್ತೇಳು ಕೋಟಿ ಕಪಿಗಳ ಕೂಡಿ | ಅಬ್ಧಿ |
ಗಾಲಸ್ಯಗೊಳದೆ ಸೇತುವ ಹೂಡಿ | ನೀರ |
ಮೇಲೆ ಬಪ್ಪಂತೆ ಹಾದಿಯ ಮಾಡಿ | ದಾಟಿ |
ದರುಗಾಢ | ಬಂದ |
ರಿದೆ ನೋಡ | ಇನ್ನು |
ಆಲೋಚಿಸಿದರೆ ಮಾಡುವದೇನು | ಲಯ |
ಕಾಲವಿದಿನ್ನೆಂದು ಫಲವೇನು || ಕೇಳಯ್ಯ || ||೩೩||

ಹಿಂದುದ್ಯಾನವ ಬಂದು ಕೆಡಿಸಿದ ಕಪಿಯಂಥ |
ದೊಂದೊಂದು ಲಕ್ಷ ಸಾವಿರವಂತೆ | ಕೆಲವು |
ಮಂದೆಯಾಗಿರ್ಪ ಭೀಕರವಂತೆ | ಕಯ್ಯೊ |
ಳೊಂದೊಂದು ಪರ್ವತ ತರುವಂತೆ | ಕಾಯ |
ಸ್ಥಿರವಂತೆ | ಮೆರೆ |
ದಿರುವಂತೆ | ಅವು |
ಹಿಂದಕ್ಕೆ ಪಡೆದಿರ್ಪ ವರವಂತೆ | ನಮ್ಮ |
ಕೊಂದೇವೆನ್ನುವ ಭರವಸವಂತೆ || ಕೇಳಯ್ಯ || ||೩೪||

ಬೇವ ನೋಡುವುದಕ್ಕೆ ಕಳುಹಿದ ಶುಕನನ್ನು |
ದೇವರನುಜರೆ ನೋಡಿದರಂತೆ | ಹಿಡಿದು |
ಕಾವಲ ಮನೆಗೆ ದೂಡಿದರಂತೆ | ಓಡಿ |
ಬಾಹವೆಂದಂಕೆ ಮಾಡಿದರಂತೆ | ಇದು |
ದಿಟವಂತೆ | ನಮ್ಮೊಳ್ |
ಹಟವಂತೆ | ಬಲು |
ಕೋವಿದ ವೀರಮರ್ಕಟರಂತೆ | ರಾಮ |
ಸೇವೆಯೊಳಗೆ ಬಲು ಭಟರಂತೆ || ಕೇಳಯ್ಯ || ||೩೫||

ಕಂದ

ಇಂತಾ ವೈರಿಗಳಂದವ
ಮಂತ್ರೀಶ್ವರ ಪೇಳೆ ಕೇಳ್ದು ದಶಕಂಧರನುಂ |
ಅಂತರ್ಭಾವವನರಿಯದೆ
ಇಂತಾಗಳೆ ಪೇಳ್ದ ಸಾರಣಗೆ ರಾಕ್ಷಸ ತಾ || ||೩೬||

ರಾಗ ಕಲ್ಯಾಣಿ ಅಷ್ಟತಾಳ

ತಿಳಿದು ಬಾ ರಾಮನ ಪಾಳ್ಯದಂಗವನೆಲ್ಲ |
ಬಲವಂತರೊ ನಿಧಾನರೊಯೆಂಬ ಬಗೆಯ ನೀ || ತಿಳಿದು || ||೩೭||

ಮಂಗಗಳೆಷ್ಟುಂಟು | ಸಿಂಗಳೀಕಗಳೆಷ್ಟು |
ಸಂಗಡ ಮುಸುಗಳೆ | ಷ್ಟೆಂಬ ಬಗೆಯನೆಲ್ಲ || ತಿಳಿದು || ||೩೮||

ನಮ್ಮವನಿಗು ರಾಮ | ಗೊಮ್ಮನಸೊ ಇಕ್ಕಟ್ಟೊ |
ತಮ್ಮೊಳೆಂತಿಹರೆಂದು | ಗಮ್ಮನೀಗಿರುಳೆದ್ದು || ತಿಳಿದು || ||೩೯||

ಅನ್ನಾಹಾರಗಳೇನು | ಎಣ್ಣೆ ನೀರಿಂಗೆಲ್ಲಿ |
ಹಣ್ಣು ಹಂಪಲು ತಿಂಬು | ದೆನ್ನುವ ನಿಜವ ನೀ || ತಿಳಿದು || ||೪೦||

ಮಡದಿಗೋಸುಗಬಂದು | ಹೊಡೆದಾಡಿ ನಿಲುವರೊ |
ಸಡಗರವನು ತೋರಿ | ತಿರಿಗಿ ಪೋಪರೊಯೆಂದು || ತಿಳಿದು || ||೪೧||

ಕಂದ

ಬಂದಾ ಸಾರಣ ಪಾಳ್ಯದೊ
ಳಂದಿರುಳೊಳ್ ತಿರುಗಲವನ ಕೈಸೆರೆವಿಡಿದು |
ಹಿಂದಿರ್ದಾತನ ಸಹಿತಲೆ
ತಂದಿದಿರಲಿ ನಿಲಿಸಿ ಪೇಳ್ದ ಭಾಸ್ಕರತನುಜಂ || ||೪೨||

ರಾಗ ದೇಶಿ ಅಷ್ಟತಾಳ

ಇವನೀಗ ಮೊದಲು ಬಂದಾತ | ಕಪ |
ಟವ ಮಾಡಿ ಕಯ್ಸೆರೆ ಸಿಕ್ಕಿಕೊಂಡಾತ || ಪಲ್ಲವಿ ||

ಇಂದು ಬಂದವನಿವನೀಗ | ಪಾಳ್ಯ |
ದಿಂದ ಕಳ್ಳರ ಹಾಗೆ ತಿರಿಗಿ ಪೋಪಾಗ ||
ಕಂದನಂಗದ ಕಂಡು ಬೇಗ | ಹಿಡಿ |
ತಂದ ರಾಕ್ಷಸದೂತರಿವರಿಬ್ಬರೀಗ || ಇವ || ||೪೩||

ಮುಂದಕ್ಕೆ ಕರೆಸಿದನವರ | ದಯ |
ದಿಂದ ಮನ್ನಿಸುತ ಕುಳ್ಳಿರಿಸಿಕೊಂಡವರ ||
ಬಂದುದೇಕೆಂದು ಬಲ್ಲವರ | ಕೇಳ |
ಲಂದು ವಿಸ್ತರವಾಗಿ ಪೇಳಿದರ್ವಿವರ || ||೪೪||

ನೆಲೆಯಾಗದ ಮಾತಾಡಿದರೆ | ಪ್ರಾಣ |
ಉಳಿಯದು ನೀವ್ ನಮ್ಮ ಮುನಿದು ನೋಡಿದರೆ ||
ಕಲಹಕಾರಣವ ಮಾಡಿದರೆ | ನಿಮ |
ಗಳವಲ್ಲ ರಾಕ್ಷಸರೊಳಗೆ ಕೂಡಿದರೆ || ||೪೫||

ರಾಗ ಕಾಂಭೋಜಿ ಝಂಪೆತಾಳ

ರಘುವೀರ ಕೇಳು ರಾವಣನ ಸೌಭಾಗ್ಯಗಳ |
ಪೊಗಳಲಳವಲ್ಲ ಫಣಿಪತಿಗೆ ||
ಅಗಣಿತನು ಕುಂಭಕರ್ಣನು ತಮ್ಮ ಶಕ್ರಜಿತು |
ಮಗನು ಧನಪತಿ ತದಗ್ರಜನು || ||೪೬||

ಈರೇಳು ಲೋಕದೊಡೆತನ ಕರೆದರೋಯೆಂದು |
ಮೋರೆದೊರ್ವಳು ಮಹಾಲಕ್ಷ್ಮೀ ||
ವೈರಿಗಳಿಗಳವಡದ ಇದುವೆ ಲಂಕಾದುರ್ಗ |
ಸೇರಿಹುದು ಸಕಲಸೌಭಾಗ್ಯ || ||೪೭||

ಜಾನಕಿಯ ಕಳವಿನಲಿ ತಂದನುಜನಂ ತೊರೆದ |
ಹೀನಗುಣವೆರಡದರ ಹೊರತು ||
ಏನುಬಗೆಯಲಿ ಕಂಡರೆಮ್ಮವನ ಜೈಸುವ ಸ |
ಮಾನರಿಲ್ಲೀ ಭುವನದೊಳಗೆ || ||೪೮||

ಭೇತಾಳ ಬ್ರಹ್ಮರಾಕ್ಷಸರೆಸೆದ ಸರಳ ಮೊನೆ |
ಈತಗಳ ತಗಲಿದರೆ ನೊಂದು |
ಮೈತುರಿಸಿ ಹಲ್ಗಿರಿದು ಹಣಿಗಿ ಕಿರಿಗುಟ್ಟಿ ಕಪಿ |
ಪೋತಗಳು ಓಡದಿರ್ದಪವೇ || ||೪೯||

ಕಂಡುದನು ಪೇಳಿದರೆ ಕೋಪವೇತಕೆ ಪೇಳು |
ಪುಂಡರೀಕದಳಾಕ್ಷ ರಾಮ |
ದಂಡಿಸಲದೇಕೆ ಸಂಧಾನಮಂ ನೆರೆಗೊಳಿಸಿ
ಹೆಂಡತಿಯನೊಯ್ವುದತಿ ಲೇಸು || ||೫೦||