ವಾರ್ಧಕ
ಈತೆರದ ಮಾಯದಭಿರಂಜನೆಯ ಶಿರವ ಭೂ
ಜಾತೆ ಕಂಡಂಜೆ ಮರುಮರುಗಿ ಮೂರ್ಛಿತೆಯಾಗಿ
ಧಾತುಗೆಟ್ಟಂಗನೆಯ ಮುಖತುಹಿನಕರ ರಾಹು ಸೋಂಕಿದಂತಾಯ್ತು ಕ್ಷಣಕೆ ||
ಘಾತಕದ ತಲೆಯದೇನೆಂದರಿಯದಬಲೆ ರಘು
ನಾಥನೇ ಸರಿಯೆಂದು ಚಿಬುಕಾಗ್ರ ನಾಸಿಕವ
ನೋತು ತಡವರಿಸಿ ಮಡಿಲೊಳಗಿರಿಸಿ ಮುದ್ದಿಡುತ ಪ್ರೀತಿ ಮಿಗಲಿಂತೆಂದಳು || ||೧೮೬||
ರಾಗ ಪುನ್ನಾಗವರಾಳಿ ಏಕತಾಳ
ಪ್ರೀಯ ಮಮ ಜೀವಿತೇಶ | ಪ್ರಾಣನಾಯಕ |
ಸುಪ್ರತಾಪ ಸೌಂದರ್ಯಾತ್ಮ | ಅಪ್ರಮೇಯಾನಂದಕಾಯ || ||೧೮೭||
ದುರ್ಜನಕುಲವಿಘಾತ | ಸಜ್ಜನಜನಸುಪ್ರೀತ |
ನಿರ್ಜರಗಣವಂದಿತ | ಗರ್ಜನ ಸಿಂಧು ಸಮೇತ || ||೧೮೮||
ಅಂಗಜಕೋಟಿಲಾವಣ್ಯ | ಆಶ್ರಿತಜನವರೇಣ್ಯ |
ತುಂಗವಿಕ್ರಮಕಾರುಣ್ಯ | ಸಂಗೀತಲೋಲಾಗ್ರಗಣ್ಯ || ||೧೮೯||
ರಾಗ ಕೇದಾರಗೌಳ ಅಷ್ಟತಾಳ
ನೋಡಿದೆಯಾ ನೀನು ತ್ರಿಜಟೆ ಪೂರ್ವದಲಿ ನಾ |
ಮಾಡಿದ ಸುಕೃತಂಗಳ ||
ನಾಡದೈವಗಳ ನಂಬಿದಡಿಂತು ಶಿವದಯೆ |
ಮಾಡಿದ ವಿಕೃತಂಗಳ || ||೧೯೦||
ಅಣ್ಣ ತಮ್ಮ ಬಂಧು ಬಳಗದಾಸೆಯ ಬಿಟ್ಟು |
ಎನ್ನವರಡಿಯ ಕಾಯ್ದೆ ||
ಪುಣ್ಯದ ಫಲವಿಂತು ಮಾಡಿತೀ ಭಾಗ್ಯವ |
ಕಣ್ಣಾರೆ ಕಂಡೆಯಲ್ಲ || ||೧೯೧||
ಜಗತಿಯೊಳೆಲ್ಲಾದರಿನ್ನಿಂಥ ಚೆಲುವಿನ |
ಮೊಗವುಳ್ಳ ಪುರುಷರುಂಟೇ ||
ಬಗೆಯಲಿನ್ನೇನ ಹೇಳಿದರೇನು ಸರಮೆ ಸಾ |
ವಿಗೆ ದಾರಿ ತೋರೆನಗೆ || ||೧೯೨||
ಇಂತೆಂದು ಸೀತೆ ರೋದಿಸುವಂಥ ಪರಿಯನು |
ಅಂತರಂಗದಲಿ ಪೋಗಿ ||
ಸಂತಸದಲಿ ವಿದ್ಯುಜ್ಜಿಹ್ವ ಪೇಳಿದ ಕಾಮ |
ಭ್ರಾಂತನಾದಸುರೇಂದ್ರಗೆ || ||೧೯೩||
ವಚನ || ಇತ್ತಲಾ ಸರಮೆ ತ್ರಿಜಟೆಯರು ಜಾನಕಿಯ ಕೈಯಲ್ಲಿದ್ದಾ ಶಿರವಂ
ಕಂಡು ಕೌಳಿಕದ ಗಳರೇಖೆಯಂ ನೋಡಿ ಏನೆಂದರು ಎಂದರೆ
ರಾಗ ರೇಗುಪ್ತಿ ಏಕತಾಳ
ನಿತ್ಯಮಂಗಲೆ ನೀನು | ನಿರುತ ಶಾಶ್ವತ ರಾಮ |
ಸತ್ತು ಹುಟ್ಟುವದೆಂಬ | ಸಂಸಾರವೇನು ||
ಅತ್ತ ಬಿಸಾಡಸುರ | ಕೃತ್ತ್ರಿಮದ ಶಿರವ ನೀ |
ನೆತ್ತಿ ದುಃಖಿಪುದುಂಟೆ | ಮತ್ತೇಭಗಮನೆ || ||೧೯೪||
ಗಳದ ರೇಖೆಯ ಕಂಡು | ತಿಳಿದಳಂಜಿಕೆಗೊಂಡು |
ಇಳೆಗೆ ಬಿಸುಟಳಂದು | ಆಶ್ಚರ್ಯವೆಂದು ||
ಅಳುತ ಶಾಪವನ್ನಿತ್ತ | ಳೆನ್ನ ರಾಮನ ಬಾಣ |
ಇಳುಹಲೀ ಧರೆಗೆ ಆ | ತಲೆಹತ್ತನೆಂದು || ||೧೯೫||
ವಾರ್ಧಕ
ಅರಸು ಮಕ್ಕಳು ಕೇಳಿ ಮರುದಿವಸದುದಯದಲಿ
ಕರಿ ತುರಗ ರಥ ಪದಾತಿಗಳ ಸನ್ನಾಹಮಂ
ನೆರಹಿ ಭೈರವಗೆ ನೂರ್ಮಡಿಯಾದ ರಕ್ಕಸರ ಪರಿವಾರಮಂ ಕೂಡಿಸಿ ||
ಸುರಪಜಿತು ಸಕಲಪಡೆ ಸಹಿತ ನಡೆತಂದು ಸಂ
ಗರಕೆ ನಿಲಲಾರ್ಭಟಿಸೆ ಕಂಡು ವಾನರರು ತರ
ಹರಿಸುತಿರಲಿತ್ತ ರಾಮನ ಪಾಳ್ಯದೊಳು ವಿಭೀಷಣ ಕಾಣುತ್ತಿಂತೆಂದನು || ||೧೯೬||
ರಾಗ ಘಂಟಾರವ ಝಂಪೆತಾಳ
ಅವಧರಿಸು ರಾಜೇಂದ್ರ | ಈತನೇ ಶಕ್ರಜಿತು |
ಭುವನದೊಳಗತಿಭಟನು | ಭುಜಬಲಾನ್ವಿತನು || ||೧೯೭||
ಈತನಂಜಿಕೆಗಾಗಿ | ಈಶನಜಮೊದಲಾಗಿ |
ಶ್ವೇತಕುಂಜರರೂಢ | ಸೋತನುರೆ ಗಾಢ || ||೧೯೮||
ಸಕಲದಿವಿಜಾದಿಗಳು | ಸೇವೆಯನು ಮಾಡುವರು |
ನಿಖಿಲದಾನವರುಗಳ | ಆಳಾದರವರು || ||೧೯೯||
ಈತನೊಬ್ಬನು ನಮಗೆ | ಸೋತನಾದರೆ ಕಡೆಗೆ |
ಏತಕೂ ಬೇಡ ಬರು | ವಾತಗಳ ಬವರ || ||೨೦೦||
ಕುಂಭಕರ್ಣನಿಗಂತೂ | ತಲೆಗೆ ನಿದ್ರಾಭ್ರಾಂತು |
ಕಾಂಬ ಮಿಕ್ಕಾದವರ | ಡೊಂಬಿಗಳ ಪರಿಯ || ||೨೦೧||
ರಾಗ ಮಾರವಿ ಮಟ್ಟೆತಾಳ
ಎಂದು ರಾಮನೊಡನೆ ಶರಣ | ನಂದು ಬಿನ್ನವಿಸಲು ಗಡಣೆ |
ಯಿಂದ ರವಿಜ ನೀಲ ಸಹಿತ | ಬಂದರಲ್ಲಿಗೆ ||
ಒಂದು ಕಯ್ಯಶೈಲ ಮ | ತ್ತೊಂದು ಕಯ್ಯವೃಕ್ಷಗಳಿ |
ಬಂದು ರಾಮಚಂದ್ರಗೆರಗಿ | ನಿಂದರಿದಿರಲಿ || ||೨೦೨||
ಇಳೆಯನೆಲ್ಲ ಮಡಿದು ಕೌಂ | ಕುಳಲಿ ಧರಿಸಹೇಳು ಶರಧಿ
ಜಲವ ಬತ್ತಿಸೆನ್ನು ಜವನ | ಸೆಳೆದು ತಪ್ಪೆವು ||
ಲಲನೆಗಳನಣುಗನೊಬ್ಬ | ಸುಲಭದೈತ್ಯನೊಡನೆ ಕಾದಿ |
ಗೆಲುವ ಬಗೆಗೆ ಚಿಂತೆ ವೆ | ಗ್ಗಳಿಸಲಾದುದೆ || ||೨೦೩||
ಕಳುಹಿ ನೋಡು ರಾಮಪಾದ | ದೊಲುಮೆಯಿಂದ ಇಂದ್ರಜಿತುವ |
ತಲೆಯ ತಂದು ಕೊಡುವೆನೆಂದು | ಬೆಳೆದನಂಗದ ||
ಇಳಿದ ಭರವ ಕಂಡು ನೀಲ | ಸುಳಿದನಸುರರಿದಿರು ನೋಡಿ |
ದಳವ ಬಿಟ್ಟನಂದು ಪಾಳ್ಯ | ಗಳ ವಿಭಾಗಿಸಿ || ||೨೦೪||
ಬೊಬ್ಬಿಡುತ್ತ ಬರುವ ಕಪಿಗ | ಳುಬ್ಬಟಿಯನು ಕಂಡು ಖಳರೊ |
ಳೊಬ್ಬರೊಬ್ಬರಿದಿರು ನಿಂದ | ರಾರ್ಭಟಿಸುತಲಿ |
ಕೊಬ್ಬಿದಸುರಮರ್ಕಟಾದಿ | ಸರ್ವ ಜಂಗುಲಿಯೊಳಾಯ್ತು |
ಹಬ್ಬಿತೆರಡು ಸೈನ್ಯ ರಣದ | ಹಬ್ಬವೆಸಗಿತು || ||೨೦೫||
ದ್ವಿಪದಿ
ತರಣಿನಂದನಗಿಂತು ತಾನೆ ಶಕ್ರಜಿತು
ವರಪ್ರಹಸ್ತಗೆ ನೀಲನೊಳುಕಲಹವಾಯ್ತು || ||೨೦೬||
ಕುಂಭನಿಗೆ ನಳನಾ ನಿಕುಂಭಗಂಗದನು
ಜಾಂಬವರಿಗಿದಿರಾಯ್ತು ಧೂಮ್ರಾಕ್ಷನೊಡನೆ || ||೨೦೭||
ಶತಬಲಿಯು ದುರ್ಮುಖನು ಸೆಣಸಿದರು ಮತ್ತಾ
ಪ್ರತಿಯಾದ ದೇವಾಂತಕನರಾಂತರೊಡನೆ || ||೨೦೮||
ಅತಿಕಾಯ ನೋಡಿದನು ಅಲ್ಲಿ ಲಕ್ಷ್ಮಣನ
ಖತಿಯಿಂ ಮಹೋದರ ಸುಪಾರ್ಶ್ವಗಿದಿರಾದ || ||೨೦೯||
ಕನಲಿ ವಿಕ್ರಮದಿಂದ ಕಂಪ ನಡೆತಂದು
ಹನುಮಂತಗಿದಿರಾಗಿ ಮತ್ಸರದೊಳಂದು || ||೨೧೦||
ವಜ್ರಸುತನಂದನಗೆ ಒದಗಿತನಿತರಲಿ
ವಜ್ರದಂಷ್ಟ್ರನಕೊಡೆ ಸಮರವೆಸಗಿತ್ತು || ||೨೧೧||
ಮಿತ್ರಘ್ನನೊಡನೆ ನಿಂದಾ ವಿಭೀಷಣನು
ಶತ್ರುತ್ವಮಂ ಬಳಸುತೊಡನೆ ಕಾದಿದನು || ||೨೧೨||
ರಾಗ ಭೈರವಿ ತ್ರಿವುಡೆತಾಳ
ಆಯಿತಾಗ | ಕಲಹಗ | ಳಾಯಿತಾಗ || ಪಲ್ಲವಿ ||
ರಾಯದಳ ರಾಕ್ಷಸರ ಪಾಳ್ಯದ |
ಬಾಯ ಬೊಬ್ಬೆಯ ಕದನಕರ್ಕಶ || ಅನುಪಲ್ಲವಿ ||
ಶರಧಿಮಥನದೊಳಂದು ಹುಟ್ಟಿದ |
ತೆರೆಗೆ ನೂರ್ಮಡಿ ಹೆಚ್ಚಿತು |
ಧರಿಸಲಾರದೆ ಭೂಮಿಭಾರವ |
ಕರಿಕಮಠರೆದೆ ಬಿಚ್ಚಿತು ||
ನೆರೆದು ನೋಡುವ ಸುರರ ಕಂಗಳ |
ಪರೆಯು ತಾನೇ ಮುಚ್ಚಿತು |
ಸರಳಮೊನೆ ತರು ಗಿರಿಗಳಾಟದ |
ಸರಣಿ ತಲೆಗಳ ಕೊಚ್ಚಿತೀಪರಿ | ಆಯಿತಾಗ || ||೨೧೩||
ಬಾಣಗಳ ತಗಲಿದರೆ ಕಪಿಗಳು |
ತ್ರಾಣದಿಂ ಪಲ್ಗಿರಿಯುತ |
ಆನಲಾರದೆ ಗಿರಿಯ ಹೊಡೆತಕೆ |
ದಾನವರು ಭೋರ್ಗರೆಯುತ |
ಕಾಣುತುಭಯಬಲಂಗಳೊಳು ಮೈ |
ಶೋಣಿತದ ಮಳೆ ಸುರಿಯುತ |
ಕ್ಷೋಣಿಗತ್ಯಾಶ್ಚರ್ಯವೆನೆ ಬಹು |
ಪ್ರಾಣವರಿಗಳನರಿಯುತಾಗಲೆ || ಆಯಿತಾಗ || ||೨೧೪||
ರಾಗ ಮಧ್ಯಮಾವತಿ ಅಷ್ಟತಾಳ
ಬಹುಮಂದಿ ಲಯವಾಯಿತು | ರಘೂ |
ದ್ವಹನ ಪಾಳ್ಯದಿ ಕಪಿದಾನವರೊಳಗೆ || ಪಲ್ಲವಿ ||
ಏಳರ್ಬುದವೆಣಿಸಿದರು ದಾನವರಲ್ಲಿ |
ಪೇಳಲೇನೈದು ಸಾವಿರ ಲಯವಾಯ್ತು ||
ಕಾಲುಕೈ ಮುರಿದು ಬಿದ್ದವರ ಲೆಕ್ಕವನೆಲ್ಲ |
ಪಾಲುಮಾಡುವರಾರು ಪರಮಾತ್ಮ ಬಲ್ಲ || ||೨೧೫||
ಕಲಿವಿಭೀಷಣನು ಮಿತ್ರಘ್ನರಾಕ್ಷಸನು ತ |
ಮ್ಮೊಳಗೆ ಪೌರುಷವಾದ ಹೆಣಕೆಯಿಂದ |
ತಳಮಗುಚಲು ಜಾವ ಪರಿಯಂತ ಹೆಣಗಾಡಿ |
ಇಳೆಗೊರಗಿಸಿದ ಮಿತ್ರಘ್ನರಾಕ್ಷಸನ || ||೨೧೬||
ವಾರ್ಧಕ
ದನುಜ ಮಿತ್ರಘ್ನಪಾತಕಿ ಯುದ್ಧದಲಿ ಬಿದ್ದ
ಹೆಣನ ನೋಡಲು ಪಾಪವೆಂದು ತಾವರೆಯ ಮಿ
ತ್ರನು ಪಶ್ಚಿಮಾಂಬುಧಿಗೆ ಸಾಗಿದಡೆಯಾದಿನದಿ ಶಕ್ರಜಿತು ಪಂಥದಿಂದ |
ಮನನೊಂದು ಪಾಳ್ಯಮಂ ಜೈಸಿಕೊಳದನಕ ಪ
ಟ್ಟಣವ ಹೊಗೆನೆನುತ ಮಿಕ್ಕೆಲ್ಲರಂ ಕಳುಹಿ ತಾ
ಘನ ಸತ್ವಯುಕ್ತಿಯಿಂ ಮಾಯಕದ ಕಲ್ಪಿತವ ನೆನೆದು ಮಾಡಿದ ಘಾತವ || ||೨೧೭||
ರಾಗ ಮಾರವಿ ಏಕತಾಳ
ಕಾಳಗಕೆನುತಲೆ | ಮೇಲಭ್ರದಿ ನಿಂ |
ದಾಳುತನದ ವಿಷ | ಗಾಳಿಯ ಮಹಫಣಿ |
ಗೋಲನುವಹಿಸಿ ಕ | ರಾಳ ಶರವಕಪಿ |
ಪಾಳೆಯಕಿಟ್ಟನು | ತೋಳಬಲ್ಪಿನಲಿ || ಪೇಳಲೇನು || ||೨೧೮||
ಬಸಿವಾ ರುಧಿರವ | ನೊಸೆದ ಭೂತಂಗಳು |
ದೆಸೆದೆಸೆ ತುಂಬುತ | ಪಸರಿಸಿತೆಲ್ಲವ |
ಘಸಣಿಗೊಳುತ ಪರ | ವಶರಾಗುತ ಪವ |
ಡಿಸಿತಾ ವಾನರ | ವಿಸರವು ಜಗದಿ || ಪೇಳಲೇನು || ||೨೧೯||
ಹನುಮನಿಗೊಂಭತ್ತಿನಜಗೆರಡು ಮ |
ತ್ತನಲಜಗಾರಂಗದನಿಗೀರೈದು |
ಪನಸಗವಯಮುಖ ವನಚರ ಸಂಕುಲ
ವನು ತಗಲಿತ್ತುರ | ಗನ ಶರ ಬಂದು | ಪೇಳಲೇನು || ||೨೨೦||
ಒರಗಿದ ನೀಲನು | ಸೊರಗಿದ ಶತಬಲಿ |
ಮರುಗೆ ಗವಯ ನೀ | ಟೆರಗಿದ ಸುಷೇಣ |
ಭರದ ಮೋಹನಿ | ದ್ರೆಯ ಸೈರಿಸದುರೆ |
ತಿರಿಗಿತು ತಲೆ ಕೆಲ | ಕರಗಿದರೆಲ್ಲ | ಪೇಳಲೇನು || ||೨೨೧||
ದುರುಳರಿಯದಡೇ | ನಾಯಿತು ಶರವೇ |
ನರಿಯದೆ ಶ್ರೀ ರಘು | ವರಮಾಹಾತ್ಮ್ಯವ |
ಶರಧಿಯೊಳಗೆ ಉರ | ಗನ ಮೇಲೊರಗುವ |
ತೆರನಂದಾ ರಘು | ವರ ಪವಡಿಸಿದ | ಪೇಳಲೇನು || ||೨೨೨||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಉರಗತಾಪದ ಕಡುಹಿನಲಿ ಮೆಯ್ |
ಮರೆದರೆಂಬುದ ನರಿತನಿರುಳಲಿ |
ಗರುಡ ಬಂದೆಬ್ಬಿಸಿದ ಖಳರಾ | ರರಿಯದಂತೆ || ||೨೨೩||
ಮರುದಿವಸದುದಯದಲಿ ಕೋಟೆಯ |
ಹರಿದರಂದಿನ ಗಸಣಿಗೋಸುಗ |
ಪುರದ ಜನ ತಲ್ಲಣಿಸೆ ರಾವಣ | ನರಿತ ಮನದಿ || ||೨೨೪||
ಕರೆದನಾ ಧೂಮ್ರಾಕ್ಷರಾಕ್ಷಸ |
ದುರುಮುಖಾದಿಯ ವಜ್ರದಂಷ್ಟ್ರನ |
ಧುರಗಡಿವ ಬಗೆಗೆಂದು ಕಳುಹಿದ | ದುರುಳ ಬೇಗ || ||೨೨೫||
ರಾಗ ಶಂಕರಾಭರಣ ಮಟ್ಟೆತಾಳ
ವಾಲಿಸುತನು ರಣದೊಳವರ | ಕಾಲನೂರಿಗಟ್ಟಲಾಗ |
ಮೇಲೆ ಬಂದ ಕಂಪನೆಂಬ | ಖೂಳದೈತ್ಯನ || ||೨೨೬||
ಸೀಳು ಮಾಡಿ ಬಿಸುಟನಂದು | ಭಾಳ ಸುಪ್ರತಾಪದಿಂದ |
ನೀಲ ಬಂದು ಸಚಿವಪತಿಯ | ಬೀಳಗೆಡಹಿದ || ||೨೨೭||
ದಾನವೇಂದ್ರ ತಾನೆ ಬಂದು | ವಾನರೇಂದ್ರನೊಡದೆ ಕಾದಿ |
ತ್ರಾಣದಿಂದ ಸೋಲಿಸಿದನು | ಭಾನುತನುಜನ || ||೨೨೮||
ಕಾಣುತಿದಿರು ಬಂದು ವೈ | ಶ್ವಾನರನ ಕುಮಾರಕನನು |
ಕ್ಷೋಣಿಗೊರಗಿಸಿದನು ಮೂರು | ಬಾಣದಿಂದಲಿ || ||೨೨೯||
ಮರುತಜಾತನೊಡನೆಸೋತು | ಮರಳಿ ತಿವಿದು ಗೆಲುತಲವನ |
ತೆರಳಿಬಂದನೀಶನಂತೆ | ಧುರಪರಾಕ್ರಮಿ || ||೨೩೦||
ಬರುವ ಬರುವ ಕಪಿಗಳೆಲ್ಲ | ಗೆಲುವೆನೆಂದು ಕೋಪದಿಂದ |
ಧರಣಿಪಾಲನನುಜ ಪೊರಟ | ನುರುತರಾಗ್ರದಿ || ||೨೩೧||
ರಾಗ ನಾದನಾಮಕ್ರಿಯೆ ಮಟ್ಟೆತಾಳ
ನೀನೆ ರಾವಣೇಂದ್ರನೆಂಬ | ದನುಜ ಪಾತಕ ||
ವಾನರರನು ಬರಿದೆಕೊಲುವು | ದೇನು ಘಾತಕ || ||೨೩೨||
ಬಲ್ಲೆ ನಿನ್ನ ಬಗೆಯ ಜಾತಿ | ಕಳ್ಳನಹೆ ಭಲ ||
ಅಲ್ಲಿ ಮೂಗ ಕೊಯ್ದ ಜಾಣ | ನಲ್ಲವೇನೆಲ || ||೨೩೩||
ಕಳ್ಳನಲ್ಲದವನಿಸುತೆಯ | ಕದ್ದು ತಂದವ |
ಬಲ್ಲತನದಿ ಕೊಳ್ಳೊ ನಮ್ಮ | ಬಾಣಜಾತವ || ||೨೩೪||
ಬಾಣವೆಸೆವ ಬಗೆಯನೆಲ್ಲ | ಬಲ್ಲೆ ನಿನ್ನಯ |
ತ್ರಾಣದಂಗಗಳ ಪರೀಕ್ಷೆ | ಕಾಣೊ ನಮ್ಮಯ || ||೨೩೫||
ಬಿಡಲು ರಾವಣನ ಶರವ | ಕಡಿದ ಲಕ್ಷ್ಮಣ |
ಜಡಿದು ಹೂಂಕರಿಸಿ ಪ್ರತಿಗೆ | ತೊಡುವನಾಕ್ಷಣ || ||೨೩೬||
ಹಲವು ಶಸ್ತ್ರದಿಂದ ಕಾದಿ | ಗೆಲುವು ಕಾಣದೆ |
ಇಳೆಗೆ ಮೂರ್ಛೆಯಾಗಿ ಬಿದ್ದ | ಖಳನ ಬಾಣದೆ || ||೨೩೭||
ಕಂದ
ಯುದ್ಧಾಂಗಣದೊಳ್ ತಮ್ಮಂ
ಬಿದ್ದಿಹುದಂ ಕಂಡು ರಾಮ ತಾನೇ ಬರಲಾ |
ಗೆದ್ದನುಜನೊಡಗೊಂಡತಿ
ರೌದ್ರಾನ್ವಿತರಾಗಿ ಕಾದಿದರ್ ಸಂಗರದೊಳ್ || ||೨೩೮||
ರಾಗ ಪಂತುವರಾಳಿ ಮಟ್ಟೆತಾಳ
ರಾವಣನೆಂದೆಂಬ ಖೂಳ | ನೀನೇ ನಮ್ಮಂಗನೆ ಸೀತಾ |
ದೇವಿಯ ತಂದಿಟ್ಟುಕೊಂಡ | ಕಾರಣವೇನೊ || ||೨೩೯||
ಭೂವರೇಣ್ಯ ಕೇಳಾದರೆ | ಕೇವಲ ನಮ್ಮನುಜೆಯ ಮ |
ತ್ತಾವ ಕಾರ್ಯಕ್ಕಾಗಿ ನಾಸಿ | ಕವನು ಕೊಯ್ದೆಲ || ||೨೪೦||
ಹೆಂಗುಸರಾದವರು ಪರರ | ಇಂಗಿತವನರಿತುಕೊಳದೆ |
ಅಂಗಕೆ ಬೀಳ್ವಡಿದರಂತ | ರಂಗವೇನಯ್ಯಾ || ||೨೪೧||
ಆದರಾಗಲದೊಂದು ಮೋಸ | ಮೇದಿನೀಪಾಲಕ ನೀಯೆನ್ನ |
ಸೋದರರನೆಲ್ಲ ಕೊಂದ | ಭೇದವೇನಯ್ಯ || ||೨೪೨||
ಸಾಧುಮಾರ್ಗದಲ್ಲಿರುವರ | ಯೋಗಿಗಳ ನಿತ್ಯ ನಿತ್ಯ |
ಬಾಧಿಸುವಡಿದಂಗವೇ ನಿಮ | ಗಾದುದೇನಯ್ಯ || ||೨೪೩||
ಊರೊಳಾಗುವಾ ವಿಚಾರ | ಪಾರುಪತ್ಯವೆನಗಿದ್ದಂಥಾ |
ದ್ದಾರು ಕೊಟ್ಟರಯ್ಯ ನಿನಗೆ | ಧಾರಿಣೀಪಾಲ || ||೨೨೪||
ಸೂರ್ಯವಂಶಜಾತರಿಹೆವು | ಧಾರಿಣಿ ನಮ್ಮದಿರಲು |
ಬೇರೆ ಕೇಳ್ವರಾರಿದೆಲ್ಲ | ಚೋರರಾಕ್ಷಸ || ||೨೪೫||
ದೇವತೆಯರೆಲ್ಲ ನಮ್ಮ | ಸೇವೆಯವರಾದ ಮೇಲೆ |
ಯಾವನಂತೆ ನೀನು ನಮ್ಮ | ದೂರ ಕೇಳ್ವರೆ || ||೨೪೬||
ಕೋವಿದ ಜಾಣನಾದಡೆ | ಈ ವಿಧದ ಕರ್ಮಂಗಳ |
ಯಾವ ಕೀರ್ತಿಗಾಗಿ ಮಾಳ್ಪೆ | ದ್ರೋಹಿ ರಾಕ್ಷಸ || ||೨೪೭||
ನಾವು ದನುಜವಂಶದವರು | ಭೂವಲಯದಿ ಶ್ರೇಷ್ಠರೆಮ್ಮ |
ನಾವನಾದರಿನ್ನು ಕೆಣಕಿ | ಜೀವಿಸಲುಂಟೆ || ||೨೪೮||
ದಾನವ ಸಾಕಯ್ಯ ಕೇಳವ | ಸಾನದ ಮಾತೊಂದನೀಗ |
ಜಾನಕಿಯ ಬಿಟ್ಟುಕೊಡುವ | ಮಾನಸವುಂಟೇ || ||೨೪೯||
ನೀನು ನಿನ್ನ ತಾತ ಸಹಿತ | ಏನು ಕಾಣಿಕೆಯಿತ್ತರೂ ಆ |
ಮಾನಿನಿಯ ಬಿಡುವುದುಂಟೆ | ಹೀನಮಾನವ || ||೨೫೦||
ಕಾಣಿಕೆಯೊಂದುಂಟು ನಿನ್ನ | ಗೋಣಿಗೊಡ್ಡಿದಂಥದೆನ್ನ |
ಬಾಣವಿದೆಕೊ ತಾಳಿ ಕೊಳ್ಳೈ | ಹೀನ ರಾಕ್ಷಸ || ||೨೫೧||
ಭಾನುವಂಶಜಾತ ಬಿಟ್ಟ | ಬಾಣ ರಾವಣೇಂದ್ರನುಟ್ಟ |
ಚೀನವಸ್ತ್ರ ಚಿಂದಿಗೆಯ್ದು | ದೇನನೆಂಬೆನು || ||೨೫೨||
ಮತ್ತೆ ಗಜವು ತೇರು ವಾಜಿ | ಎತ್ತಿದಾ ಛತ್ರ ಚಾಮರ |
ವೆತ್ತ ಹೋಯಿತೆಂದು ಬೆರ | ಗೆತ್ತುದಾಕ್ಷಣ || ||೨೫೩||
ಹತ್ತು ತಲೆಯಾತ ತಾ ನಾ | ಚುತ್ತಲಿಪ್ಪಾಗ ವಾನರರ |
ಮೊತ್ತ ಘೇಯೆನಲು ದನುಜ | ಬತ್ತಲೆ ನಿಂತ || ||೨೫೪||
ವಾರ್ಧಕ
ಗೋಚರಿಸದಂದದಲಿ ನಾಲ್ಕು ಶರದಿಂ ಕಮಲ
ಲೋಚನನು ರಾವಣನ ಕಾಯದ ದುಕೂಲಮಂ
ತಾ ಚಮತ್ಕಾರದಲಿ ಕತ್ತರಿಸೆ ತಿರುಗಿದಂ ನಾಚಿಕೆಯ ಕಂಡು ಬಳಿಕ |
ನಾ ಚರಿಪುದಿಲ್ಲೆಂದು ರವಿ ಕಡಲೊಳಡಗಲು ನಿ
ಶಾಚರೇಂದ್ರನು ಮನೆಗೆ ತೆರಳಿದನು ಕಪಿಪಾಳ್ಯ
ಕೀಚೆಯಲಿ ಗೆಲವಾಯಿತೆಂದಮರರೆಲ್ಲರುಂ ಪುಷ್ಪಾರ್ಚನಂ ಗೆಯ್ದರು || ||೨೫೫||
ರಾಗ ಆಂದೋಳಿ (ಡವಳಾರ) ತ್ರಿವುಡೆ (ಧ್ರುವ) ತಾಳ
ಅಂಬರದಲಿ | ಚರಿಸುವ | ದಿವಿಜಕ |
ದಂಬವದೀ | ಕ್ಷಿಸುತಲೆ | ಬಂದತಿ |
ಸಂಭ್ರಮ | ದಿಂ | ದ
ನೆರೆ | ದ | ರು ||
ನೆರೆದರು ಶ್ರೀ | ರಾಮನ | ಚರಣಕೆ |
ಅಂಬುಜಪೂ | ಮ ಳೆ | ಯ ||
ಕ ರೆ | ದ | ರು ||
ಶೋ | ಭಾ | ನೆ || ||೨೫೬||
ಇಂದ್ರಾದಿಗ | ಳಿಹ ಪುರ | ದೊಳು ಸುರ |
ದುಂದುಭಿ ಮೊಳ | ಗುವುದೆಂ | ದೆನುತಲೆ |
ಗಂಧರ್ವ | ಸತಿ | ಯರ್ || ಸ ಹಿ | ತಾ | ಗಿ ||
ಸಹಿತಲೆ ನಡೆ | ತಂದಾ | ದಶರಥ |
ನಂದನಗಾ | ರ ತಿ | ಯ ||
ಬೆಳ | ಗಿ | ರೆ ||
ಶೋ | ಭಾ | ನೆ || ||೨೫೭||
ರಾಕ್ಷಸನು ದಿ | ಗಂಬರ | ನಾಗಿಹ |
ಸಾಕ್ಷಿಗೆ ಬಂ | ದವರೆಂ | ದೆನುತಲೆ |
ಯಕ್ಷರ್ಮಾ | ನಿ ನಿ | ಯ ರ್ |
ನ ಡೆ | ತಂ | ದು ||
ನಡೆತಂದೇ | ಶೋಭನ | ಪಾಡುತ |
ಅಕ್ಷತಾ | ರ ತಿ | ಯ ||
ಬೆಳ | ಗಿ | ರೆ |
ಶೋ | ಭಾ | ನೆ || ||೨೫೮||
ವಾರ್ಧಕ
ಶ್ರವಣ ಪರ್ವತದಿಂದ ಮುಂದೆ ಬಂದಾ ಮಹಾ
ರ್ಣವವ ಸಂಧಿಸಿಕೊಂಡು ಸೇತುವಂ ಕಟ್ಟಿ ಕಪಿ
ನಿವಹ ಸಹಿತಲೆ ಲಂಕೆಯೊಳು ಪಾಳ್ಯಮಂ ಚೆದರಿ ದುರ್ಗಮಂ ಪುಡಿಗೆಯ್ಯುತ |
ಬವರದಲಿ ಬಹುರಾಕ್ಷಸರ ಕೊಂದು ರಾವಣನ
ವಿವಸನದಿ ನಿಲಿಸಿದಲ್ಲಿಗೆ ಸಂಧಿಯೆಂದೆನುತ
ಲವಕುಶರಿಗಾ ಮುನಿಪನೊರೆದ ವರಕಣ್ವಪುರಕೃಷ್ಣನ ಕಟಾಕ್ಷದಿಂದ || ||೨೫೯||
ರಾಮಚರಿತವನು ಕನ್ನಡಯಕ್ಷಗಾನದಲಿ
ನಾ ಮನಸುಬಂದಂತೆ ವರ್ಣಿಸಿದೆನಿದರ ನಿ
ಸ್ಸೀಮಕವಿಗಳು ಕೇಳಿ ತಪ್ಪುಗಳ ಕಳೆದು ಶುದ್ಧಪ್ರತಿಯ ಮಾಡಿ ಬಳಿಕ |
ಭೂಮಿಯೊಳು ರಾಗತಾಳವನರಿತು ಪಾಡಿದರೆ
ಆ ಮಹಾಕಣ್ವಪುರದೊಡೆಯ ಶ್ರೀಕೃಷ್ಣ ಸು
ಪ್ರೇಮದಿಂ ಸಕಲಭಾಗ್ಯವನಿತ್ತು ಸಕಲರಂ ರಕ್ಷಿಸುವನನುದಿನದೊಳು || ||೨೬೦||
|| ಅಂಗದಸಂಧಾನ ಪ್ರಸಂಗ ಮುಗಿದುದು ||
Leave A Comment