ರಾಗ ಕೇದಾರಗೌಳ ಅಷ್ಟತಾಳ

ಮಾತಿನೊಳಗೆ ಜಾಣನಹುದು ನಿನ್ನನು ಪೆತ್ತ |
ಮಾತೆ ಯಾರಯ್ಯ ಹೇಳು ||
ತಾತನೆಲ್ಲಿಹನಾವ ದೇಶ ರಕ್ಷಿಸಿದಂಥ |
ದಾತನಾರದ ತಿಳುಹು || ||೧೧೮||

ತಾತ ನಿಮ್ಮವನ ತೊಟ್ಟಿಲಬಳಿಯಲಿ ಕಟ್ಟಿ |
ದಾತ ಹೆತ್ತವಳು ತಾರೆ ||
ಭೂತಳಾಧಿಪ ರಾಮದೂತನಂಗದನೆಂಬ |
ಪ್ರೀತಿಯ ಪೆಸರೆನಗೆ || ||೧೧೯||

ಲೇಸ ಮಾಡಿದ ಸುಗ್ರೀವ ಹಿಂದಣ ಮನಃ |
ಕ್ಲೇಶವ ಬಿಡದೆ ನಿನ್ನ ||
ಮೋಸದಿ ರಿಪುಬಾಯೊಳಳಿಯಲೆಂದಟ್ಟಿದ |
ನೀ ಶಿಶುವರಿತುದಿಲ್ಲ || ||೧೨೦||

ದೋಷಕರ್ಮವ ತಂದೆ ಮಾಡಿದರಿಂದ ಸ |
ರ್ವೇಶನಪ್ಪಣೆಯೊಡ್ಡಿತು ||
ಆಸುರ ಗುಣಗಳು ಸಂತು ನಿಮ್ಮವನಿಗು |
ನೀ ಸೈರಿಸೆರಡು ದಿನ || ||೧೨೧||

ಅನ್ಯಾಯ ರವಿಜ ಮಾಡಿದರೇನು ನಮಗೆ ನೀ |
ಸಣ್ಣವನಾದ ಮೇಲೆ ||
ನಿನ್ನ ರಾಜ್ಯವ ನಿನಗಿತ್ತುಪಚಾರದಿ |
ಮನ್ನಿಸಿ ಕಳುಹುವೆವು || ||೧೨೨||

ಕನ್ನೆಯ ಕದ್ದು ತಂದಂಥ ರಾವಣನೆಂಬ |
ಕುನ್ನಿಯಾರೆಂದವನ ||
ಕಣ್ಣಿಗೆ ಕಾಣಿಸಿ ಕೊಡುವದರಿಂ ಹೆಚ್ಚು |
ಮನ್ನಣೆ ಬೇಡೆಮಗೆ || ||೧೨೩||

ಬಾಲ ನೀನರಿಯೆ ಬಾಯಿಗೆ ಬಂದ ವಚನವ |
ಹೇಳಿ ಹಿಂದೊಂದು ಮಂಗ ||
ಬಾಲಸುಡಿಸಿಕೊಂಡು ಲಜ್ಜೆಗೆಟ್ಹೋದಂಥ |
ಕಾಲ ಬಪ್ಪುದು ನಿನಗೆ || ||೧೨೪||

ಕೇಳಲಿಲ್ಲವೆ ಬಂದಾ ಕಪಿಯ ಪೋತಗಳೆಲ್ಲ |
ಬಾಲಸುಡುಕ ನೀನೆಂದು ||
ಆಲಿಬೊಬ್ಬಿರಿದಟ್ಟೆ ಬದಲು ಬಂದವ ನಮ್ಮ |
ಬಾಲವ ಕೆಣಕಿ ನೋಡೈ || ||೧೨೫||

ಎಷ್ಟರ ಚಪಲತ್ವ ಕಲಿತೆಯಾದರು ನಿನ್ನ |
ಹುಟ್ಟು ಮರ್ಕಟನೆಂಬರು ||
ಸೃಷ್ಟೀಶ ನಿನ್ನೊಳೆಂದಂತರಂಗದ ಮಾತ |
ಕೊಟ್ಟು ನೀ ನಡೆ ಸುಮ್ಮನೆ || ||೧೨೬||

ಎಷ್ಟು ನೀ ಪಾರುಪತ್ಯವ ಮಾಡಿದರು ದೊರೆ |
ಯಿಟ್ಟ ಚಾಕರನಲ್ಲ ವೈ ||
ಸೃಷ್ಟಿ ಜಾತೆಯ ಕಳವಿನಲಿ ವಂಚಿಸಿ ತಂದ |
ಭ್ರಷ್ಟಾನಾರಯ್ಯ ತೋರು || ||೧೨೭||

ರಾಗ ಶಂಕರಾಭರಣ ಅಷ್ಟತಾಳ

ಕಂಡೆಯಾ | ಕಡು ವೀರರಾವಣನ ನೀ |
ಕಂಡೆಯಾ || ಪಲ್ಲವಿ ||

ಕಂಡೆಯ ಕಪಿ ಕಡು ಜಾಣ | ಮಾ |
ರ್ತಂಡಪ್ರಕಾಶಪ್ರವೀಣ | ಸುಪ್ರ |
ಚಂಡ ನಿರತ ಪಂಚಬಾಣ || ಅಖಿ |
ಲಾಂಡಕೋಟಿ ಬ್ರ | ಹ್ಮಾಂಡನಾಯಕ ಶತ್ರು |
ಖಂಡನ ರಿಪುಗಜ | ಗಂಡಭೇರುಂಡನ || ಕಂಡೆಯಾ || ||೧೨೮||

ಸಂಗರ ವಿಜಯವಿಹಾರ | ಶಿವ |
ಲಿಂಗಪೂಜೆಯಲಿ ವಿಸ್ತಾರ | ಚತು |
ರಂಗವೇದದ ಸದ್ವಿಚಾರ || ಕರು |
ಣಂಗಳಿಂದಖಿಳಲೋ | ಕಂಗಳನಾಳ್ವ ಉ |
ತ್ತುಂಗಬಲಾಢ್ಯ ಶ್ರೀ | ಮಂಗಳ ಕಾಂತಿಯ | ಕಂಡೆಯಾ || ||೧೨೯||

ಶಿವನಿಂದಾಯುಷ್ಯವ ಪಡೆದ | ಮತ್ತೆ |
ದಿವಿಜರೆಲ್ಲರನಟ್ಟಿ ಹಿಡಿದ | ಸೊಕ್ಕಿ |
ದವರ ತಗ್ಗಿಸಿ ಬಾಯ ಹೊಡೆದ || ಜನ |
ನಿವಹವಚ್ಚರಿಗೊಳಲವನಿಜೆಯನುಬಂಧ |
ನವ ಮಾಡುತೊಡ್ಡೋಲಗದಿ ಕುಳ್ಳಿರ್ಪಾತನ || ಕಂಡೆಯಾ || ||೧೩೦||

ಭಾಮಿನಿ

ಈತನೇ ದಶಕಂಠನಾ ರಘು
ನಾಥನಿಲ್ಲದ ವೇಳೆಯಲಿ ಭೂ
ಜಾತೆಯನು ಕದ್ದೊಯ್ವ ಸಮಯದಿ ತಡೆದ ಖಗಪತಿಯ |
ಘಾತಕವ ತಾನೆಸಗಿ ಕೊಂದಾ
ಪಾತಕಿಯ ನೋಡಿದರೆ ದೋಷವ
ದೇತಕಕಟಾ ಕಂಡೆನೆನುತಲೆ ಮಾತನಾಡಿಸಿದ || ||೧೩೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೋಪ ನಿಮಗೇಕಿನಿತು ಸರಿಸ |
ಲ್ಲಾಪವೇ ನಾವೀ ನಿಶಾಚರ |
ರೂಪಿನವರುಂಟಾಗಿ ಕೇಳಿದೆ | ವೀಪರಿಯೊಳು || ||೧೩೨||

ಆ ಪರಂತಪ ಬಲಿಯ ಭವನದ |
ಕೈಪರೆಯ ನಾರಿಯರ ವಚನಾ |
ಳಾಪಹಾಸ್ಯದ ಭಿಕ್ಷದವನೀ | ಪಾಪಿಯಹುದೆ || ||೧೩೩||

ಘನಪರಾಕ್ರಮಿ ಕಾರ್ತವೀರ್ಯಾ |
ರ್ಜುನನೊಡನೆ ಸಲೆ ಮತ್ಸರಿಸಿ ಸೆರೆ |
ಮನೆಯೊಳಗೆ ಕುರಿಯಂತೆ ಸಿಲುಕಿದ | ದನುಜನಿವನೆ || ||೧೩೪||

ವನಿತೆ ವೇದಾವತಿಯ ಶಾಪಕೆ |
ತನುವ ತೆತ್ತವನೀತನಲ್ಲವೆ |
ಮನದ ಭಯ ನಿಮಗೇಕೆ ತಿಳುಹಿಸಿ | ರೆನಗೆ ಪರಿಯ || ||೧೩೫||

ತೋಳ ದರ್ಪದೊಳುಬ್ಬಿ ವಾಲಿಯ |
ಬಾಲಕನ ಬಚ್ಚಣೆಯ ತೊಟ್ಟಿಲ |
ಕಾಲದೆಸೆಯಲಿ ಕಟ್ಟುವಡೆದಿಹ | ಖೂಳನಲ್ಲೈ || ||೧೩೬||

ಶೂಲಿಯಲಿ ಗರ್ವಿಸಿ ಮಹೀಧರ |
ಮೂಲದಲಿ ಕೈಸಿಕ್ಕಿ ನಾಯೋ |
ಲೂಳಿದವ ತಾನೀತನಲ್ಲವೆ | ಹೇಳಿರಯ್ಯ ||೧೩೭||

ಜನಕಜೆಯ ವೈವಾಹದಲಿ ಶಿವ |
ಧನುವಿನಲಿ ನರಿ ಸಿಕ್ಕು ಸಿಕ್ಕಿದ
ಶುನಕ ತಾನಿವನಲ್ಲವೇ ಸುಡಿ | ಘನತೆಗಳನು || ||೧೩೮||

ಭಾಮಿನಿ

ಆಗಲಾಗದೆ ಮಾಣಲಿವನೊಡ
ನಾ ಗಭೀರಪರಾಕ್ರಮರು ಹೇ
ಳ್ದಾಗಮವನಿವಗೆಂಬೆ ಮಿಕ್ಕಿದ ಮಾತದೇಕೆಮಗೆ |
ರೋಗಿಗೌಷಧ ಸೊಗಸೆ ಹಿತಕರ
ವಾಗಿರಲು ನಮ್ಮುಕ್ತಿಗಳು ಕಿವಿ
ಗಾಗಿಸುವೆವಾವೊಮ್ಮೆ ಕೇಳಲಿ ಕೇಳದಿರಲೆಂದ || ||೧೩೯||

ರಾಗ ಗೌಳಮಲಹರಿ ಏಕತಾಳ

ಏನ್ಮ್ಯಾ ರಾವಣೇಂದ್ರ ನೀನ್‌ಮ್ಯಾ ಜಾನಕಿಯನ್ನು |
ಕಾಣದಂತೆ ಕದ್ದು ತರಬಹುದೇನ್ಮ್ಯಾ ||
ತಾನಾಗಿ ರಾಮಚಂದ್ರ ಸೇನೆಯ ಕೂಡಿಕೊಂಡು |
ನೀನಿದ್ದ ಬಳಿಗೇ ಬಂದ ಕಾಣ್ಮ್ಯಾ || ||೧೪೦||

ನಿನ್ನ ಬಳಿಗೆ ರಾಮ ಎನ್ನ ಕಳುಹಿಕೊಟ್ಟ |
ಇನ್ನಾದ್ರೂ ಸೀತೆಯ ಬಿಡುಹೇಳ್ಮ್ಯಾ ||
ಎನ್ನಿಂದ ತಪ್ಪಾತೆಂದು ಹೊನ್ನ ಕಾಣಿಕೆ ಕೊಟ್ಟು |
ಬೆನ್ನಾಗೆ ಮರೆಯೊಕ್ಕು ಇರುತೆಯೇನ್ಮ್ಯಾ || ||೧೪೧||

ಏತಕೀ ಛಲ ರಘುನಾಥ ಮಾನವನಲ್ಲ |
ಆತ ನಾರಾಯಣ ಸ್ವಾಮಿ ಕಾಣ್ಮ್ಯಾ ||
ಸೀತೆ ಲಕ್ಯುಮಿ ಮಾಶೇಷ ಲಕ್ಯುಮಣ |
ಭೂತಳದೊಳಗವತರಿಸಿದೋರ್‌ಮ್ಯಾ || ||೧೪೨||

ಮಂಡೋದರಿ ಭಾಳ ಮಕ್ಕಳ ಹೆತ್ತವಳೆ |
ಕಂಡೋರ ಬಾಯ್ ಕುತ್ತ ಮಾಡೋಬೇಡ್ಮ್ಯಾ ||
ಕೊಂಡೆಯದ ಮಾತಕೇಳಿ ಕೊಲಿಸದಿರು ಜಾತಿಯ
ದಿಂಡತನದಿ ಸಾಯಬೇಕೆ ನೋಡ್ಮ್ಯಾ || ||೧೪೩||

ರುಂಡ ಮಾಲೆಯನಿಟ್ಟುಕೊಂಡಂಥ ಶಿವಕೊಟ್ಟ |
ದ್ದುಂಡುಂಡು ಸುಕದಾಗೇ ಸಾಯಿ ಕಾಣ್ಮ್ಯಾ ||
ಚಂಡಾಲತನದಿ ಸಿಕ್ಕಿ ತಂಡ ತಂಡದೊಳಿಪ್ಪ |
ಹೆಂಡಿರ ಓಲೆಯ ಕಳಚ ಬೇಡ್ಮ್ಯಾ || ||೧೪೪||

ಈರೇಳು ಲೋಕದಾ ಪಾರುಪತ್ಯ ಮಾಡಿ |
ಗಾರಾಗಿ ಕೆಟ್ಹೋಗೊ ಬೇಡ ಕಾಣ್ಮ್ಯಾ ||
ಭಾರೀ ಸಂಪತ್ತು ಲಂಕೆಯೂರನೆ ಹಾಳ್ಮಾಡಿ |
ಚೋರತನಕೆ ಮಾನ ಮಾರಬೇಡ್ಮ್ಯಾ || ||೧೪೫||

ಶೂರುಪನಖೆ ಹುಚ್ಚು ಮೂಳಿಯ ಮಾತ್ ಕೇಳಿ |
ವೀರಖರ ದೂಷಣರೇನಾದರ್ ಹೇಳ್ಮ್ಯಾ ||
ಸಾರವ ನೋಡ್‌ಕೊಂಡು ಸಕಲವ ತಿಳಿದು ದೊಡ್ಡ |
ಮಾರಿಯ ಬಾಯ ಹೊಕ್ಕು ಸಾಯದಿರ್ಮ್ಯಾ || ||೧೪೬||

ರಾಗ ಭೈರವಿ ಏಕತಾಳ

ಇನಿತೆಂದಾ ನುಡಿಕೇಳಿ | ಆ |
ದನುಜನು ರೋಷವ ತಾಳಿ ||
ವನಚರನನು ಹೊಯೆಂದ | ಅಂಗ |
ದನ ಮುತ್ತಿತು ಖಳವೃಂದ || ||೧೪೭||

ಗಜರಥ ತುರಗಗಳಿಂದ | ಖಳ |
ವ್ರಜರುಗಳೈತರಲಂದಾ ||
ಭುಜಬಲಗಳ ತೋರೆಂದಾ | ಸುರ |
ಪಜನ ಕುಮಾರಕ ಕೊಂದ || ||೧೪೮||

ಈಟಿಯವರ ಸದೆಬಡಿದ | ಬಿ |
ಲ್ಲಾಟದವರ ಬೆನ್ನೊಡೆದ ||
ಮೀಟಿಗಜದ ಕಾಲ್ವಿಡಿದ | ಹೊರ |
ಕೋಟೆಯ ಸಂದಿಗೆ ಸೆಡಿದ || ||೧೪೯||

ಬೀಳುವ ಗಜತುರಗಗಳ | ರಾಮ |
ಕೇಳಿದ ಬಲು ಬೊಬ್ಬೆಗಳ ||
ಕಾಳೆಗವಾಯ್ತಂಗದಗೆ | ಶಿಶು |
ತಾಳುವುದೆಂತೀ ಬಗೆಗೆ || ೧೫೦ ||

ಮರುತಸುತನೆ ನೀ ಬೇಗ | ಹೋಗಿ |
ಕರೆತಾರಂಗದನೀಗ |
ತೆರಳೆಂದೆನೆ ಶರಣೆಂದ | ಬಲು |
ತರ ರೌದ್ರದಿ ನಡೆತಂದ || || ೧೫೧ ||

ಕಂದ

ಕೈಮರ ಗಿರಿಯಿಂದವರಂ
ಹೊಯ್ದಾಡುತ್ತಿರಲು ಹನುಮ ಕಂಡಂಗದನಂ |
ಕೈಪಿಡಿದೆಲೆ ಮರುಳೆಂದೆಳೆ
ದೊಯ್ಯುತ್ತುಂ ಪೇಳ್ದನಂದು ತಾರಾಸುತಗಂ || ೧೫೨ ||

ರಾಗ ವೃಂದಾವನ ಸಾರಂಗ (ಜಹಜು) ಏಕತಾಳ

ಏನವತಾರ ವಾಲಿನಂದನ | ಇಂಥ |
ಆನೆ, ಕುದುರೆ ಮತ್ತೀ ದಾನವರನು ಕೊಲ್ವ || ಪಲ್ಲವಿ ||

ನೀತಿಯ ಪೇಳ್ವಡೆ ನೀನು ಬಂದರೆ | ಮತ್ತೀ |
ಘಾತುಕರನು ನೆರೆ ಕೊಂದರೆ | ರಘು |
ನಾಥ ಸಹಿತ ಭಾನು | ಜಾತ, ಕೋಪಿಸುವರು || ೧೫೩ ||

ಪೋಗುವ ನಾವ್ ರಾಮನಲ್ಲಿಗೆ | ನಾಳೆ |
ಹೇಗೊ ಬರುವುದುಂಟು ಇಲ್ಲಿಗೆ || ಮತ್ತೆ |
ರಾಘವನಿದಿರು ತೋ | ರಾಗ ನಿನ್ನಯ ಶೌರ್ಯ || ೧೫೪ ||

ಕಂದ

ಬಂದಾ ಮಾರುತನಂದನ
ಕೊಂದಾಟವ ನಿಲಿಸಿ ದನುಜನಿದಿರೊಳ್ನಿಂದು |
ಮುಂದಿನ್ನಹ ಕಾರ್ಯಂಗಳ
ದಂದುಗಮಂ ತಿಳಿಯೆಪೇಳ್ದ ನಾ ರಾವಣಗಂ || ೧೫೫ ||

ರಾಗ ಆನಂದ ನೀಲಾಂಬರಿ ಏಕತಾಳ

ಏನಯ್ಯಾ ನಿನ್ನಂತರಂಗ | ಮಾನವಲ್ಲದೀ ಪ್ರಸಂಗ |
ವೇನಯ್ಯಾ | ಮುಂದಿ | ನ್ನೇನಯ್ಯಾ || ಪಲ್ಲವಿ ||

ಸೃಷ್ಟಿಜಾತೆಯ ನೀ ತಂದು | ಕೊಟ್ಟು ರಾಮಚಂದ್ರನ ಕೂಡಿ |
ಬಾಳಿಂತು | ಕೆಡಲು | ಬೇಡಿಂತು || ೧೫೬ ||

ತಮ್ಮನ ನೀ ಕೂಡಿಕೊಂಡು | ಒಮ್ಮನದಿಂದೊಪ್ಪಿ ಸುಖದೊ |
ಳಿರುವೆಯಾ | ರಣಕೆ | ಬರುವೆಯಾ || ೧೫೭ ||

ಜಗದ ದೈವದ ಕೂಡಿಂತು | ಹಗೆತನ ಬಳಸಿಕೊಂಡೆಂತು |
ಇರುವದು | ಕೀರ್ತಿ | ಬರುವದು || ೧೫೮ ||

ಕಡೆಗೆ ನೀನೆಂಬ ಮಾತೇನು | ಒಡೆಯನ ಪಾದಕ್ಕದನ್ನು |
ಪೇಳ್ವೆವು | ಏನ | ಹೇಳ್ವೆವು || ೧೫೯ ||

ರಾಗ ಪಂತುವರಾಳಿ (ವರಾಳಿ) ಏಕತಾಳ

ಆಯಿತೇ ನಿನ್ನ ಮಾತು ಹೇಳಿ | ಮರ್ಕಟ ನಿವಾಳಿ |
ಆಯಿತೇ ನಿನ್ನ ಮಾತು ಹೇಳಿ || ಪಲ್ಲವಿ ||
ಭೂತಳ ಕೆಳಕ್ಕೆ ಸರಿದರೂ | ಪಾತಾಳ, ಮೇಲಕ್ಕೆ ನೆಗೆದರೂ |
ಸೀತೆಯ ನಾ ಬಿಟ್ಟುಕೊಡುವ | ಮಾತುಂಟೇನೋ ಛೀ ಛೀ ಮರುಳೆ || ೧೬೦ ||

ಅರ್ಣವ ಬತ್ತಿಹೋದರೇನು | ಭಾನು ತಣ್ಣಗಾದರೇನು |
ಪ್ರಾಣವಳಿದು ಹೋಗುವನಕ | ಕಾಣಿಸಿಕೊಡುವದುಂಟೆ || ||೧೬೧||

ಇರುಳಾದಿತ್ಯ ಮೂಡಿದರೂ | ಒರೆಳೆದ್ದು ಮಾತಾಡಿದರೂ |
ಮರುಳು ಹಿಡಿದು ಹೋದ ತಮ್ಮ | ಬರಲೆಂದು ಪೇಳ್ವ ಮಾತುಂಟೆ || ||೧೬೨||

ವಾರ್ಧಕ

ರಘುವರನ ಸೇವಕರ ಹಿತಕರದ ವಚನಮಂ
ಬಗೆಗೊಳದೆ ಜರೆದು ಕಳುಹಿಸಿದಡವರಿಬ್ಬರುಂ
ಪಗಲೊಡೆಯವಂಶಾಬ್ದಿಚಂದ್ರನೆಡೆಗಯ್ದಿ ಕೈಮುಗಿದು ಪೇಳ್ದಾ ಹದನಮಂ |
ಮಗುಳೆ ರಾವಣ ಕಳುಹಿದುತ್ತರವ ತಿಳುಹಲಾ
ಸಗರವಂಶಜನೆಂದನಿನ್ನೇನು ನಿಮ್ಮ ಹವ
ಣಿಗೆ ತಕ್ಕ ಕಾರ್ಯಮಂ ವರ್ತಿಸುವುದೆನಲು ಲಗ್ಗೆಗೆ ಪಡೆದರಪ್ಪಣೆಯನು || ||೧೬೩||

ರಾಗ ಮುಖಾರಿ ಏಕತಾಳ

ಮುತ್ತಿದರಾ ದುರ್ಗವ | ವಾನರರೆಲ್ಲ
ಹತ್ತಿದರಾ ದುರ್ಗವ  || ಪಲ್ಲವಿ ||

ಕೊತ್ತಳಗಳ ಮುರಿಯುತ್ತೊಡನೊಡನೆ ಭ |
ಟೋತ್ತಮರುಡುಗುತ ಸುತ್ತಲು ಕವಿದು || ||೧೬೪||

ಕತ್ತಿ ಕುಂತ ತೋಮರಗಾಯದ ಬಿಸಿ |
ನೆತ್ತರ ಕಾರುತಲತ್ತ ಮರ್ಕಟರು || ||೧೬೫||

ತೂರಿನೊಳಿದೆ ಜಂಭಾರಿಯ ಪೆಟ್ಟಿನ |
ಕೂರಿಕೆ ಗಣಿಸದೆ ಓರಣದಿಂದ || ||೧೬೬||

ಅಂಬರ ಮುಸುಕುವ ಅಂಬಿನ ಗಾಯದ |
ಬಂಬಲನೆಣಿಸದೆ ಮುಂಬಂದೊಳಗೆ || ||೧೬೭||

ಕೋಟೆಯ ಬಣಗಳ ಈಟಿಯ ಗಾಯವ |
ಪಾಟಿಯ ಮಾಡದೆ ಸೂಟಿಯ ಭಟರು || ||೧೬೮||

ಬಾಣದ ತಗಲಿಗೆ ಶೋಣಿತ ಸುರಿಯಲು |
ಕಾಣಿಸಿಕೊಳ್ಳದೆ ಚೂಣಿಯ ಭಟರು || ||೧೬೯||

ಹತ್ತಿರ ದುರ್ಗವ ಸುತ್ತಲು ಹೆಣಗಿ ನು |
ಗ್ಗೊತ್ತುವ ಡೊಗ್ಗರ ಪತ್ತುಗೆಯಿಂದ || ||೧೭೦||

ಭಾಮಿನಿ

ಮುರಿದ ಕೈಕಾಲುಗಳ ಕಪಿಗಳ
ಹರಿದ ಹೊಟ್ಟೆಯ ಕರುಳುಗಳ ಜೋ
ಲ್ವರಿವ ಮೂಗಿನ ಸಿಗಿದ ತುಟಿಗಳ ಸುರಿವಶೋಣಿತದ |
ಮೊರೆವ ಭೇರಿ ಡಮಾಮಿ ವಾದ್ಯದ
ಭರಕೆ ನೆಲಬಾಯ್ಬಿಡಲು ಕೋಟೆಯ
ಮುರಿದು ಲಗ್ಗೆಯ ಕಪಿಕದಂಬಕ ಬಂದುದೊಳಸರಿದು || ||೧೭೧||

ರಾಗ ಕುರಂಜಿ ಅಷ್ಟತಾಳ

ಹೋಯಿತು | ಲಂಕಾಪಟ್ಟಣ ಕೈವಶ | ವಾಯಿತು || ಪಲ್ಲವಿ ||

ಹೋಯಿತು ಲಂಕೆ ರಾವಣಗೆ | ವಶ |
ವಾಯಿತು ರಾಮಚಂದ್ರನಿಗೆ ||
ಹೋಯಿತು ಸೆರೆಯಮರರಿಗೆ | ಎಂಬು |
ದಾಯಿತೊಂದೇ ಕ್ಷಣದೊಳಗೆ | ಪೆಟ್ಟ |
ಹಾಯಲಾರದೆ ದಂಡು | ಬೀಯವಾದುದ ಕಂಡು ||
ಘೋಯೆಂದು ದನುಜರ್ ಪ | ಲಾಯನ ಗೆಯ್ದರು || ಹೋಯಿತು || ||೧೭೨||

ಸೊಂಡಿಲ ಮುರಿದರಾನೆಗಳ | ಕಲ್ಲು |
ಗುಂಡಲಿಟ್ಟರು ಕುದುರೆಗಳ ||
ತಂಡತಂಡದ ಭಟರುಗಳ | ಬಡಿದು |
ಮಂಡೆಯನೊಡೆವ ಹಬ್ಬಗಳ | ನೆಲ್ಲ |
ಕಂಡು ರಾವಣ ನಾಚಿ | ಕೊಂಡು ಹೋಯಿತು ನಮ್ಮ |
ದಂಡುಯೆಂದೆನುತಲೆ | ಮಂಡೋದರಿಗೆ ಪೇಳ್ದ || ಹೋಯಿತು || ||೧೭೩||

ತೊಂಬತ್ತು ಕೋಟಿ ದಾನವರು | ಇವರ |
ಡೊಂಬಿಗೆ ನಿಲಲಾರದವರು ||
ಇಂಬಿಲ್ಲದೆಡೆಗೆ ಸತ್ತವರು | ಎಲ್ಲಿ |
ಕಂಬಿಟ್ಟರಲ್ಲಿ ನಿತ್ತವರು | ಸೆಳೆ |
ಕೊಂಬರೀ ಸಮಯವಿ | ದೆಂಬಷ್ಟ ರೊಳಗೆಲ್ಲ |
ಜಾಂಬವಾದಿಗಳ ಕ | ದಂಬ ಮುತ್ತಿದರಾಗ || ಹೋಯಿತು || ||೧೭೪||

ಅರಮನೆಯೊಳವೊಕ್ಕ ತಂಡ | ಕಪಿ |
ಪರಿವಾರ ದಶಕಂಠ ಕಂಡ |
ಭರದಿ ಖಂಡೆಯುವ ಕಯ್ಕೊಂಡ | ಕಡಿ |
ದುರುಳಿಸೆ ಕಪಿಗಳ ರುಂಡ | ಹಗ |
ಲಿರುಳಾಯಿತೋ ಮಂಡೋ | ದರಿಯ ಪುಣ್ಯದೊಳೆಂಬ |
ತೆರನ ಕಾಣಿಸಿತು ಒಂ | ದರೆಗಳಿಗೆಯೊಳೆಲ್ಲ || ಹೋಯಿತು || ||೧೭೫||

ಕೊಬ್ಬಿದ ರಾಮಸೈನ್ಯವನು | ಕಾದು |
ತೊಬ್ಬ ರಾವಣ ಓಡಿಸಿದನು ||
ಪರ್ಬಿದ ಖಳಸೇನೆಗಳನು | ಬಲು |
ಬೊಬ್ಬಿಡುವಾನೆ ಕುದುರೆಯನು | ಬಡಿ |
ದೆಬ್ಬಿತು ರಾಮನ | ಪಾಳ್ಯವೆಂಬಷ್ಟರೊ |
ಳಬ್ಜಬಾಂಧವ ಪಶ್ಚಿ | ಮಾಬ್ಧಿಗಾದುದು ಬಿಂಬ ||
ಹೋಯಿತು | ಲಂಕೆ ರಾಮನಿಗೆ | ತಿರಿ |
ಗ್ಯಾಯಿತು ರಾವಣೇಶನಿಗೆ || ಪಲ್ಲವಿ || ||೧೭೬||

ವಾರ್ಧಕ

ಓಡಿಸಿದನಾ ದಿವಸ ಬಳಿಕ ದುರ್ಗವ ಸಜ್ಜು
ಮಾಡಿಸಿದ ಮಾಲ್ಯವಂತನ ಮಾತ ಕೇಳದೆ ವಿ
ಭಾಡಿಸಿದ ಜಾನಕಿಯ ಮುಂದೆ ಮಾಯಾರಾಮಶಿರವತೋರಿಸುವ ಬಗೆಗೆ ||
ರೂಢಿಸಿದ ಮಾಯಕದ ಶಿರವ ವಿದ್ಯುಜ್ಜಿಹ್ವ
ನೋಡಿಸಿದನವನಿಜೆಯ ಮುಂದಿಳುಹಿ ಬಳಿಕ ಮಾ
ತಾಡಿಸಿದ ತಾ ಕಲಿತ ಕುಶಲ ದುರ್ಬುದ್ಧಿಗಳ ಜೋಡಿಸಿದ ಹವಣಗತಿಯ || ||೧೭೭||

ರಾಗ ನವರೋಜು ಚೌತಾಳ

ನೋಡು ನೋಡು ಸೀತೆ | ರಾಮನ ಶಿರವ || ಪಲ್ಲವಿ ||

ಓಡಿ ಹೋದವರೊಂದು | ಗೂಡಿ ಸಂಗರದೊಳೆ |
ಚ್ಚಾಡಿದಡಿದೆ ತುಂಡು | ಮಾಡಿದ ಶಿರವ || ||೧೭೮||

ಥಳ ಥಳಿಸುವ ಮೊಗ | ಸುಳಿಗುರುಳಿನ ಸೊಗ |
ವಲರಂಬನ ಧನು | ಪೊಳೆವ ಪುರ್ಬುಗಳ || ||೧೭೯||

ಸಂಪಗೆ ಬಿರಿಮುಗು | ಳಂ ಪೋಲ್ವ ಮೂಗಿನ |
ತುಂಬುಗಲ್ಲದ ತುಟಿ | ಕೆಂಪಿನ ಸೊಬಗ || ||೧೮೦||

ಕನ್ನಡಿ ಕದಪಿನ | ಚಿನ್ನದ ರೇಖೆಯ |
ಸನ್ನೆಗೊಳಿಪ ಸೋಗೆ | ಗಣ್ಣಿನ ಸೊಬಗ || ||೧೮೧||

ರಾಗ ಶಂಕರಾಭರಣ ಅಷ್ಟತಾಳ

ದೃಢವಾಯಿತೇನೆ ಸೀತೆ | ರಾವಣ ಜಗ |
ದೊಡೆಯನೆಂದೆಂಬ ಮಾತು ||
ತೊಡರಿಲ್ಲವಲ್ಲ ರಾವಣನ ಚಿತ್ತದೊಳಿದ್ದ |
ಕಡುಹತೀರಿಸಿ ಕೊಟ್ಟು ನಡೆಸಿಕೊಂಬುದಕಿಷ್ಟು || ||೧೮೨||

ಸಿಂಹದ ಗವಿಯ ಪೊಕ್ಕು | ಸಿಂಗಳಿಕನು |
ಸಂಹರಿಸಲು ಬಲ್ಲುದೆ ||
ಬ್ರಹ್ಮಾದಿ ಸುರರಿಂದ ಪೂಜಿತ ದಶಕಂಠ |
ನಿಮ್ಮಾತನಿದಿರಪ್ಪನೇ ಏತಕೆ ಭ್ರಮೆ || ||೧೮೩||

ಗರುಡನಿದ್ದೂರೊಳಗೆ | ಗಂಭೀರವಾ |
ದುರಗನುತ್ಸಾಹವುಂಟೆ ||
ತಿರಿಗಿ ರಾಘವ ನಿನ್ನನೊಯ್ವನೆಂಬಾಸೆಗೆ |
ಬರಿದೆ ನೀ ದಣಿದೆ ಕಾಂತೇ ಸದ್ಗುಣವಂತೆ || ||೧೮೪||

ಪ್ರಾಯದ ಸುಖವುಣ್ಣದೆ | ಸುಮ್ಮನೆ ನಿನ್ನ |
ಕಾಯವ ದಂಡಿಸಿದೆ ||
ಬಾ ಇನ್ನಾದರೂ ಬಲ್ಲಿದನ ಚಿತ್ತದೊಳಗಿದ್ದ |
ಪ್ರೇಯವ ಸಲಿಸಿ ಪಟ್ಟದ ರಾಣಿಯಾಗವ್ವ || ||೧೮೫||