‘ಸಾಹಿತ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’-ಎಂಬ ನುಡಿಗಟ್ಟೇ ಒಂದರ್ಥದಲ್ಲಿ ವಿರೋಧಾಭಾಸದಂತೆ ತೋರುತ್ತದೆ. ಯಾಕೆಂದರೆ ಸಾಹಿತ್ಯ ಅನ್ನುವುದು ಮೂಲತಃ ಭಾಷೆಯಲ್ಲಿ ಮೈತಾಳುವ ‘ಅಭಿವ್ಯಕ್ತಿ’ ಮತ್ತು ಆ ಅಭಿವ್ಯಕ್ತಿ ಸಂಭವಿಸುವುದು ಕವಿಯ ಒಂದು ‘ಸ್ವತಂತ್ರ’ವಾದ ಅಥವಾ ನಿರಾತಂಕವಾದ ಮನಃಸ್ಥಿತಿಯಿಂದ. ಈ ಅಭಿವ್ಯಕ್ತಿ ಅನ್ನುವುದು ಸಾಹಿತಿಯಾದವನ ಪಾಲಿಗೆ ಒಂದು ಸಹಜವೂ, ಸ್ವತಂತ್ರವೂ, ಅನಿವಾರ‍್ಯವೂ ಆದ ಸೃಜನ ಪ್ರಕ್ರಿಯೆಯಾಗಿದೆ. ಇದು ಅವನು ಯಾರನ್ನು ಕೇಳಿಯೂ ಮಾಡುವಂಥದಲ್ಲ, ಸ್ವಯಂಪ್ರೇರಣೆಯಿಂದ ತಾನೇ ತಾನಾಗಿ, ತನ್ನ ಸುತ್ತಣ ಸಾಮಾಜಿಕ ಸಂದರ್ಭದೊಂದಿಗೆ ಸಂವಾದವನ್ನು ಏರ್ಪಡಿಸಿಕೊಳ್ಳುವ ಸಲುವಾಗಿ ಸಂಭವಿಸುವ ಕ್ರಿಯೆ. ಇದನ್ನೆ ನಾವು ಸಾಹಿತಿಗೆ ಇರುವ ‘ಅಭಿವ್ಯಕ್ತ ಸ್ವಾತಂತ್ರ್ಯ’ ಎಂದು ಕರೆಯುತ್ತೇವೆ. ಅಂದರೆ, ಸಾಹಿತ್ಯ ಅನ್ನುವುದೇ ಒಂದು ರೀತಿಯಲ್ಲಿ ಕವಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಆವಿಷ್ಕಾರ. ಈ ಅಭಿವ್ಯಕ್ತಿ ಸ್ವಾತಂತ್ರ್ಯವೆ ಅವನ ಬರಹಕ್ಕೊಂದು ವ್ಯಕ್ತಿ ವಿಶಿಷ್ಟತೆಯನ್ನೂ ನವನವೀನತೆಯನ್ನೂ ತಂದು ಕೊಡುವ ಸತ್ವವಾಗಿದೆ.

ಆದರೆ ಕೆಲವು ಸಂದರ್ಭಗಳಲ್ಲಿ ಸಾಹಿತಿಯಾದವನಿಗೆ, ತನಗೆ ಅನಿಸಿದ್ದನ್ನು ನೇರವಾಗಿ ಹೇಳಲು ಸಾಧ್ಯವಾಗದಂತಹ ಸ್ಥಿತಿ ಪ್ರ್ರಾಪ್ತವಾಗಬಹುದು ಅಥವಾ ಅವನು ನಿರ್ವಹಿಸುವ ಕೃತಿಯ ವಸ್ತುಸ್ವರೂಪ, ಸಾಮಾಜಿಕವೋ, ನೈತಿಕವೋ, ಧಾರ್ಮಿಕವೋ ಆದ ವಲಯಗಳ,  ಪರಂಪರಾಗತವಾದ ಗ್ರಹಿಕೆಗಳಿಗೆ ನಂಬಿಕೆಗಳಿಗೆ ಸಂಗತವಾಗದೆಂಬ ಅಥವಾ ಧಕ್ಕೆ ತರಬಹುದೆಂಬ ಕಾರಣದಿಂದ, ಸಮಾಜದ ಪ್ರತಿಭಟನೆಗೋ ಟೀಕೆಗೋ ಗುರಿಯಾಗುವ  ಸಂದರ್ಭ ಒದಗಬಹುದು. ಇಂಥ ವೇಳೆಗಳಲ್ಲಿ ಸಾಹಿತಿಯ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಪ್ರಶ್ನಿತವಾಗುತ್ತದೆ ಮತ್ತು ಆ ಕಾರಣಕ್ಕೆ ಸಾಹಿತಿ ಕಸಿವಿಸಿಗೊಳ್ಳುತ್ತಾನೆ. ಹಾಗೂ ಅಭಿವ್ಯಕ್ತಿ ಸ್ವಾಂತಂತ್ರ್ಯವೆಂದರೇನು ಎನ್ನುವ ಬಗ್ಗೆ ಚಿಂತಿಸುತ್ತಾನೆ.

ಇಂಥ ಒಂದು ಬಿಕ್ಕಟ್ಟು, ಬರಹಗಾರನಿಗೆ ಪ್ರಾಪ್ತವಾಗುವ ಮತ್ತೊಂದು ಸಂದರ್ಭವೆಂದರೆ ತನ್ನನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಿಯಂತ್ರಿಸುವ, ಬಹಿರಂಗದ ಪ್ರಭುಶಕ್ತಿಯ ಧೋರಣೆಗಳನ್ನು ಅವನು ಪ್ರಶ್ನಿಸಲು ತೊಡಗಿದಾಗ, ಅಥವಾ ಪ್ರತಿಭಟಿಸಿದಾಗ ಹಾಗೂ ಅದರ ಮುಖವಾಣಿಯಾಗಲು ಅವನು ನಿರಾಕರಿಸಿದಾಗ. ಇಂಥ ಸಂದರ್ಭಗಳಿಂದ ಪಾರಾಗಿ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಲು ಅವನು ತನ್ನ ಅಭಿವ್ಯಕ್ತಿಯ ತಂತ್ರಗಳನ್ನೆ ಬದಲಾಯಿಸುತ್ತಾನೆ. ಆಗ ಅನ್ಯೋಕ್ತಿ, ದೃಷ್ಟಾಂತ (ಅಲಿಗರಿ), ವಿಡಂಬನ ವಿಧಾನಗಳು ಹುಟ್ಟಿಕೊಳ್ಳುತ್ತದೆ.

ಕೇವಲ ಸೌಂದರ್ಯನಿಷ್ಠ ಹಾಗೂ ಅಧ್ಯಾತ್ಮನಿಷ್ಠ ರಚನೆಗಳ ಮೂಲಕ ತಮ್ಮ ಸಮಕಾಲೀನತೆಯನ್ನು ಮೀರಿನಿಲ್ಲುವ ಬರೆಹಗಾರರಿಗೆ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ನಿರ್ಬಂಧಗಳು ಅಷ್ಟಾಗಿ ಒದಗಲಾರವು. ಆದರೆ ಪರಂಪರಾಗತವಾದ ಚಾರಿತ್ರಿಕ ಸ್ವರೂಪದ ಸಿದ್ಧವಸ್ತುಗಳನ್ನು, ಹಾಗೂ ಅಂಥ ಸಂಗತಿಗಳನ್ನು ಕವಿಯೊಬ್ಬ ತನ್ನ ಸಮಕಾಲೀನತೆಯಲ್ಲಿ, ತನಗೆ ಸರಿಕಂಡಂತೆ ಬದಲಾಯಿಸಿ ನಿರ್ವಹಿಸಿದಾಗ, ಅವನು ಕೃತಿಯಲ್ಲಿ ಮಾಡಿಕೊಂಡ ಬದಲಾವಣೆಗಳು, ಅವನ ಕಾಲದ ಜನರ ಬಹುಕಾಲದ ನಂಬಿಕೆಗಳಿಗೆ ಧಕ್ಕೆ ತರುವಂತೆಯೋ, ಅವರು ಪೂಜ್ಯರೆಂದು ಭಾವಿಸಿದ ವ್ಯಕ್ತಿಗಳಿಗೆ ಅಪಚಾರ ಮಾಡುವಂತೆಯೋ ಭಾಸವಾದಾಗ, ಉಂಟಾಗುವ ಅಲ್ಲೋಲ ಕಲ್ಲೋಲಗಳು ಕವಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಕಷಕ್ಕೆ ಒಡ್ಡುತ್ತವೆ.

ಮುಖ್ಯವಾದ ಮಾತು ಎಂದರೆ ಒಬ್ಬ ಬರಹಗಾರನಿಗೆ, ಚಾರಿತ್ರಿಕ ಹಾಗೂ ಪೌರಾಣಿಕ ವಸ್ತುಗಳ ನಿರ್ವಹಣೆಯ ಸಂದರ್ಭದಲ್ಲಿ, ಇರುವ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಜವಬ್ದಾರಿಯ ಸಂಗತಿಯೆ ಮತ್ತೆ ಮತ್ತೆ ಚರ್ಚೆಗೆ ಗುರಿಯಾದ ವಿಷಯವಾಗಿದೆ. ಅಂದರೆ, ಅವನು ಸಂಪೂರ್ಣವಾಗಿ ಮೂಲವಸ್ತುವಿನ ಚರಿತ್ರೆಗೆ ಬದ್ಧವಾಗಿರಬೇಕೆ? ಅದನ್ನು ಅವನು ತನ್ನ ಕಾಲಕ್ಕೆ ಅಗತ್ಯವಾದ ರೀತಿಯಲ್ಲಿ ಬದಲಾಯಿಸುವ ಸ್ವಾತಂತ್ರ್ಯ ಅವನಿಗಿಲ್ಲವೆ? ಅನ್ನುವುದೇ ಇಲ್ಲಿನ ಪ್ರಶ್ನೆಯಾಗಿದೆ. ನಮ್ಮ ಸಾಹಿತ್ಯ ಪರಂಪರೆಯನ್ನೆ ಗಮನಿಸಿದರೆ, ಈ ದೇಶದ ಸಾಹಿತ್ಯ ಪರಂಪರೆಯೊಳಗೆ ಉದ್ದಕ್ಕೂ ನಿರ್ವಹಣೆಗೊಂಡಿರುವ ವಸ್ತುಗಳು ಬಹುತೇಕ ಐತಿಹಾಸಿಕ-ಪೌರಾಣಿಕ ವರ್ಗಕ್ಕೆ ಸೇರಿದವುಗಳೇ. ಬಹುಕಾಲದಿಂದ ಈ ವಸ್ತುಗಳು ಜನಮನದ ಭಾವಕೋಶದ ಒಂದು ಭಾಗವಾಗಿರುವುದರಿಂದಲೋ, ಒಂದು ಜನದ ನಂಬಿಕೆ-ಆದರ್ಶ-ಮೌಲ್ಯ ಪ್ರಜ್ಞೆ ಇತ್ಯಾದಿಗಳನ್ನು ಜನಮನದಲ್ಲಿ ಪೋಷಿಸಿಕೊಂಡು ಬರುವ ಕೋಶಗಳಂತೆ ಇರುವುದರಿಂದಲೂ, ಈ ದೇಶದ ಐತಿಹಾಸಿಕ-ಪೌರಾಣಿಕ ವಸ್ತುಗಳನ್ನೇ ತಮ್ಮ ಕಾವ್ಯಸಂದರ್ಭದಲ್ಲಿ ನಿರ್ವಹಿಸಿದ ಒಂದು ಪರಂಪರೆಯೆ ಇದೆ. ಈ ಪರಂಪರೆಯಲ್ಲಿ ಮೂಲದ ಕಥಾವಸ್ತುವಿಗೆ ಬಹುತೇಕ ಬದ್ಧವಾದ ‘ಅನುಸರಣ’ ಕೃತಿಗಳು ಇರುವಂತೆಯೆ, ಮೂಲದ ಕೃತಿಯ ಕಥಾದ್ರವ್ಯವನ್ನು ನಿಮಿತ್ತ ಮಾತ್ರವಾಗಿ ಅವಲಂಬಿಸಿ, ಆ ಕಥಾವಸ್ತುವನ್ನು ತಮ್ಮ ಕಾಲ-ದೇಶ-ಪರಿಸರಕ್ಕೆ ಅನುಗುಣವಾಗಿ ತಮ್ಮ ಪ್ರಾದೇಶಿಕ ಪ್ರತಿಭೆಗಳಲ್ಲಿ ಪುನರ್ಭವಗೊಳಿಸಿದ ‘ಅನುಸೃಷ್ಟಿ’ ಹಾಗೂ ‘ಪ್ರತಿಸೃಷಿ’ ಕೃತಿಗಳೂ ಇವೆ. ಹೀಗೆ ಭಾರತದ ಕವಿಗಳೆಲ್ಲರಿಗೂ ಋಣದಗಣಿಯಾಗಿರುವ ರಾಮಾಯಣ ಮಹಾಭಾರತಾದಿಗಳನ್ನು ಆವಲಂಬಿಸಿ ಕೃತಿರಚನೆಯಾಗುತ್ತಿದ್ದ ಹೊತ್ತಿನಲ್ಲಿ, ಆನಂದವರ್ಧನನೆಂಬ ಮಹಾ ಅಲಂಕಾರಿಕನು, ಈ ವಸ್ತು ನಿರ್ವಹಣೆಯ ಬಗ್ಗೆ ಒಂದು ಒಳ್ಳೆಯ ಸಲಹೆಯನ್ನು ತನ್ನ ‘ಧ್ವನ್ಯಾಲೋಕ’ ಎಂಬ ಶಾಸ್ತ್ರಗ್ರಂಥದಲ್ಲಿ ನೀಡುತ್ತಾನೆ: “ರಾಮಾಯಣವೇ ಮೊದಲಾದ ಪ್ರಬಂಧಗಳ ರಸಗಳು ಸಿದ್ಧವಾಗಿವೆ. ಅವುಗಳನ್ನವಲಂಬಿಸಿ ಕಥೆಯನ್ನು ರಚಿಸುವಾಗ ರಸವಿರೋಧ ಬರುವಂತೆ ಮನಸ್ವಿಯಾಗಿ ಕಲ್ಪಿಸಿಕೊಳ್ಳಬಾರದು” ಎಂದು. ಈ ಮಾತು ಮುಖ್ಯವಾಗಿ ಕವಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕುರಿತು ಇಂದಿಗೂ ಸಲ್ಲಬಹುದಾದ ವಿಚಾರವನ್ನು ಪ್ರಸ್ತಾಪಿಸುತ್ತದೆ. ಆನಂದವರ್ಧನ, ಮಹತ್ವದ ಪರಂಪರೆಯ ವಸ್ತುಗಳನ್ನು ಕುರಿತು ಕೃತಿ ರಚಿಸುವಾಗ, ಅವುಗಳನ್ನು ಯಥಾವತ್ತಾಗಿ ಅನುಸರಿಸಬೇಕೆಂದೂ, ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳಬಾರದೆಂದೂ ಹೇಳಲಿಲ್ಲ; ಅದರ ಬದಲು ಈ ಮಹಾಕಾವ್ಯಗಳ ‘ರಸ’ಗಳು ಸಿದ್ಧವಾಗಿವೆ. ಅಂದರೆ ಜನಮನದಲ್ಲಿ ಆ ಕೃತಿಗಳು ಒಂದು ಬಗೆಯ ಭಾವಕೋಶವನ್ನು ನಿರ್ಮಿಸಿವೆ, ಅವುಗಳನ್ನು ಕುರಿತು ಬರೆಯುವಾಗ ‘ರಸ ವಿರೋಧವಾಗದಂತೆ’ (ಅಂದರೆ ಜನಮನದಲ್ಲಿ ಅವು ಯಾವುದರ ಪ್ರತೀಕಗಳೆಂದು ಬೇರೂರಿವೆಯೋ ಆ ಭಾವಗಳಿಗೆ ವಿರೋಧವಾಗುವಂತೆ), ಮನಸ್ವಿಯಾಗಿ ಕಲ್ಪಿಸಿಕೊಳ್ಳಬಾರದು. ಅಂದರೆ ಮನಸ್ಸಿಗೆ ಬಂದ ಹಾಗೆ (ಅಂಥ ಜವಬ್ದಾರಿಯಿಲ್ಲದೆ) ಕಲ್ಪಿಸಿಕೊಳ್ಳಬಾರದು ಅಥವಾ ಬದಲಾಯಿಸಬಾರದು. ಈ ಮಾತು ಉಚಿತವರಿತು, ರಸಪರವಾಗಿರುವಂತೆ ಬದಲಾಯಿಸಿಕೊಳ್ಳಬಹುದು ಎಂಬುದನ್ನೂ ಸೂಚಿಸುತ್ತದೆ ಅನ್ನುವುದನ್ನು ಗಮನಿಸಬೇಕು. ಆನಂದವರ್ಧನ ಈ ಸೂಚನೆಯನ್ನು ಕೊಟ್ಟರೂ ಆಗಲೇ ಈ ದೇಶದಲ್ಲಿ ಈ ಬಗೆಯ ವಸ್ತುಗಳನ್ನು, ತಮ್ಮ ತಮ್ಮ ಧಾರ್ಮಿಕ ನಿಲುವುಗಳಿಗೆ ಅನುಸಾರವಾಗಿ, ಒಂದು ರೀತಿಯಲ್ಲಿ  ‘ವಿಕಾರ’ಗೊಳಿಸಿದರೋ ಎಂಬಂಥ ಕೃತಿರಚನಾ ಪರಂಪರೆಯೂ ಸಮಾನಾಂತರವಾಗಿ, ನೆಲೆಗೊಂಡಿತ್ತು, ಹಾಗೂ ಮುಂದುವರಿಯಿತು. ರಾಮಾಯಣ ಮಹಾಭಾರತಗಳು ಬೌದ್ಧ ಜೈನಧರ್ಮದ ಕವಿಗಳ ಕೈಯಲ್ಲಿ ನಿರ್ವಹಣೆಗೊಂಡಿರುವ ಕ್ರಮವೇ ಇದಕ್ಕೆ ಸಾಕ್ಷಿಯಾಗಿದೆ. ಜೈನ ಹಾಗೂ ಬೌದ್ಧ, ರಾಮಾಯಣ-ಭಾರತಾದಿ ಕೃತಿಗಳು, ಒಂದು ರೀತಿಯಲ್ಲಿ ‘ಹಿಂದೂ’ ಮನಸ್ಸುಗಳಿಗೆ ಆಘಾತವನ್ನುಂಟು ಮಾಡುವಂತಿದ್ದರೂ, ಆ ಕಾರಣಕ್ಕೆ ಜೈನ ಬೌದ್ಧ ಧರ್ಮದೊಂದಿಗೆ ಆಗಲಿ ಆ ಸಾಹಿತ್ಯ ಕೃತಿಗಳೊಂದಿಗೆ ಆಗಲಿ ಸಾಹಿತ್ಯಕ ಸಮರ ಅಥವಾ ಪ್ರತಿಭಟನೆಗಳು ಏರ್ಪಟ್ಟಿರಬಹುದೆಂಬುದಕ್ಕೆ, ನನಗೆ ತಿಳಿದ ಮಟ್ಟಿಗೆ ದಾಖಲೆಗಳಿಲ್ಲ. ಅದರ ಬದಲು ಇಡೀ ಭಾರತೀಯ ಕವಿಗಳಿಗೆ ಸಮಾನ ಆಸಕ್ತಿಯ ವಸ್ತುಗಳಾದ ರಾಮಾಯಣ ಮಹಾಭಾರತಗಳು ಎಲ್ಲ ಧರ್ಮದ ಎಲ್ಲ ಭಾಷೆಗಳಲ್ಲಿ ಅಲ್ಲಲ್ಲಿನ ಕವಿ ಪ್ರತಿಭೆಗೆ ಅನುಸಾರವಾಗಿ ರಚಿತವಾಗುತ್ತ, ರಾಮಾಯಣ ಮಹಾಭಾರತಗಳನ್ನು ಒಟ್ಟಾರೆಯಾಗಿ ಈ ದೇಶದ ಮನಸ್ಸು ಗ್ರಹಿಸಿದ ಹಾಗೂ ವ್ಯಾಖ್ಯಾನಿಸಿದ ವೈವಿಧ್ಯತೆಗೆ ಸಾಕ್ಷಿಯಾಗಿವೆ ಎಂಬುದಂತೂ ನಿಜ. ಹಾಗೂ ಈ ವಿವಿಧ ಬದಲಾವಣೆಗಳು ಕವಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ನಿದರ್ಶನಗಳಾಗಿವೆ ಎಂಬುದೂ ನಿಜ. ಅಂದರೆ ನಿಜವಾದ ಸಾಹಿತ್ಯ ಪ್ರತಿಭೆ ಯಾವತ್ತೂ ತಾನು ಇತಿಹಾಸದಿಂದಲೋ ಪುರಾಣದಿಂದಲೋ ಎತ್ತಿಕೊಂಡ ವಸ್ತುವಿಗೆ ಸಂಪೂರ್ಣವಾಗಿ ಬದ್ಧವಾಗಿರುವಿಕೆಯಿಂದ ಹೊರತಾದ ನಿಲುವಿನಲ್ಲಿ ನಿಂತದ್ದಾಗಿದೆ ಎಂಬುದನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ. ಯಾಕೆಂದರೆ ಕವಿಗೆ ಗೊತ್ತು, ತಾನು ಬರೆಯುತ್ತಿರುವುದು ಚರಿತ್ರೆ ಅಲ್ಲ; ಕಲಾಕೃತಿ ಎಂದು. ಸಾಹಿತ್ಯಕ್ಕೆ ಚರಿತ್ರೆ ಆಕರವಾಗಿರಬಹುದು. ಆದರೆ ಸಾಹಿತಿ ಚರಿತ್ರೆಗೆ ಯಥಾವತ್ತಾಗಿ ಬದ್ಧನಾಗಿರಬೇಕಿಲ್ಲ. ಅದರ ಬದಲು, ಆತ ಆ ವಸ್ತುವನ್ನು ತನ್ನ ಸಮಕಾಲೀನ ವೈಚಾರಿಕತೆಯಲ್ಲಿ, ವ್ಯಾಖ್ಯಾನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದಿಂದಾಗಿ ಅದನ್ನು ಕಲಾಕೃತಿಯನ್ನಾಗಿ ರೂಪಿಸುತ್ತಾನೆ. ಆದರೆ ಎಷ್ಟೋ ವೇಳೆ ಹೀಗೆ ಚಾರಿತ್ರಿಕ ವಸ್ತುವನ್ನಾಶ್ರಯಿಸಿ ನಿರ್ಮಿತಿಯಾದ ಕೃತಿಯೊಳಗಣ ಮಾರ್ಪಾಡುಗಳೂ, ಹಾಗೂ ವೈಚಾರಿಕ ನಿಲುವುಗಳೂ, ಅವನ ಕಾಲದ ಓದುಗರ ಪರಂಪರಾಗತವಾದ ನಂಬಿಕೆಗಳಿಗೆ ಮತ್ತು ಚಾರಿತ್ರಿಕವಾದ ಕೆಲವು ವ್ಯಕ್ತಿಗಳ ಬಗ್ಗೆ ಇರಿಸಿಕೊಂಡಿದ್ದ ಗೌರವಕ್ಕೆ ಧಕ್ಕೆ ತರುವಂತಿದ್ದರೆ,  ಆಗ ಆ ಲೇಖಕನಿಂದ ಅಥವಾ ಕೃತಿಯಿಂದ ಚರಿತ್ರೆಗೆ, ಅಪಚಾರವಾಗಿದೆ ಎಂದೂ, ಆ ಕಾರಣದಿಂದ ಕೃತಿಯನ್ನೂ ಕೃತಿಕಾರನನ್ನೂ ಬಹಿಷ್ಕರಿಸಬೇಕೆಂದೂ ಹುಯ್ಯಲು ಪ್ರಾರಂಭವಾಗುತ್ತದೆ. ಅದರಲ್ಲೂ ಕೃತಿಯೊಂದು ನಿರ್ದಿಷ್ಟ ಮತ-ಧರ್ಮದ ವಸ್ತುವಾಗಿದ್ದರಂತೂ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗುವ ಸಂಭವವಿದೆ. ಜತೆಗೆ ಸಾಹಿತ್ಯೇತರ ವಲಯದ ಪಟ್ಟಭದ್ರ ಹಿತಾಸಕ್ತಿಗಳೂ ಇಂಥ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಸ್ವಾಸ್ಥ್ಯವನ್ನು ಕದಡಿದ ನಿದರ್ಶನಗಳೂ ಸಾಕಷ್ಟಿವೆ. ಇಂಥ ಹೊತ್ತಿನಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳೆಂದರೆ: ನಮ್ಮ ದೇಶದ ಸಂದರ್ಭದಲ್ಲಿ – ಪಶ್ಚಿಮದಲ್ಲಿರುವಂತೆ ಕ್ರಮಬದ್ಧವಾದೊಂದು ಚರಿತ್ರೆಯ ಪರಂಪರೆ ಇದೆಯೆ? ಚರಿತ್ರೆ – ಪುರಾಣ – ಜಾನಪದ – ಐತಿಹ್ಯ – ದಂತಕತೆ ಇವೆಲ್ಲವುಗಳ ಮಿಶ್ರಣವಾಗಿರುವ ಪರಂಪರೆಯಲ್ಲಿ ನಿಜವಾದ ಚರಿತ್ರೆ ಯಾವುದು? ತೋಂಡೀ ಸಂಪ್ರದಾಯದಲ್ಲಿನ ಮಾಹಿತಿಗೂ, ಲಿಖಿತಪರಂಪರೆಯೊಳಗಿನ ದಾಖಲೆಗೂ ಯಾವುದೇ ವ್ಯಕ್ತಿ ಹಾಗೂ ಘಟನೆಗಳಿಗೆ ಹೊಂದಾಣಿಕೆಯಿಲ್ಲದಿರುವಾಗ, ಲಿಖಿತ ಪರಂಪರೆಯೊಳಗೂ ಪರಸ್ಪರ ವಿರೋಧಾಭಾಸದ ಸಂಗತಿಗಳಿರುವಾಗ, ಯಾವುದೇ ಬರೆಹಗಾರ ಚರಿತ್ರೆಗೆ ಅಪಚಾರ ಮಾಡಿದ್ದಾನೆ ಅನ್ನುವುದಾದರೆ ಅದು ಎಷ್ಟರ ಮಟ್ಟಿಗೆ? ನಿಜವಾಗಿಯೂ ಒಬ್ಬ ಬರೆಹಗಾರ ಇರುವ ಚರಿತ್ರೆಯನ್ನು ವಿಕೃತಗೊಳಿಸಿದ್ದಾನೆಯೆ ಅಥವಾ ಚರಿತ್ರೆಗೆ ಅಪಚಾರ ಮಾಡಲೆಂದೇ ಹೀಗೆ ಬರೆದಿದ್ದಾನೆಯೆ? ಈ ಬಗೆಯ ಗ್ರಹಿಕೆಗಳು ಪ್ರಚಲಿತವಾಗಲು ಬರೆಹಗಾರನ ಅನವಧಾನತೆ ಒಂದು ಕಾರಣವಾದಂತೆ, ಓದುಗರು ಕೃತಿಕಾರನ ಆಶಯವನ್ನು ತಪ್ಪಾಗಿ ಗ್ರಹಿಸಿದ್ದೂ ಎಷ್ಟೋ ವೇಳೆ ಕಾರಣವಾಗಿರಬಹುದಲ್ಲವೆ? ಒಬ್ಬ ಬರೆಹಗಾರ ತನ್ನ ಕೃತಿಯಲ್ಲಿ ಚಿತ್ರಿಸಿದಂತಹ ಸಂಗತಿಗಳು, ಜಗತ್ತಿನ ಬೇರೆ ಬೇರೆ ಸಾಹಿತ್ಯಗಳಲ್ಲಿ ಇಲ್ಲವೆ? ಇದ್ದರೆ ಅಲ್ಲಿನ ಜನ ಅದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ? ಯಾರೋ ಒಬ್ಬ ಲೇಖಕ, ನಿರ್ದಿಷ್ಟವಾದ ಮಹಾವ್ಯಕ್ತಿಯೊಬ್ಬನ ಚಿತ್ರವನ್ನು, ‘ಚರಿತ್ರೆಗೆ ಅಪಚಾರ’ವಾಗುವಂತೆ ಚಿತ್ರಿಸಿದ್ದಾನೆಂಬ ಕಾರಣಕ್ಕೇ ಆ ಮಹಾವ್ಯಕ್ತಿಯ ಮಹತ್ತಿಗೆ ಕುಂದುಂಟಾಗುತ್ತದೆಯೆ? ಒಂದು ವೇಳೆ ಹಾಗೆ ವ್ಯಕ್ತಿ ಚಾರಿತ್ರ್ಯಕ್ಕೆ ಅಪಚಾರವಾಗುವಂಥ ಬರೆಹವನ್ನು, ತಕ್ಕ ಅಧ್ಯಯನ ಹಾಗೂ ನಿಖರವಾದ ಮಾಹಿತಿಗಳ ಸಹಿತ ಬರೆಹದ ಮೂಲಕವೇ ಎದುರಿಸುತ್ತ, ಅದು ತಪ್ಪೆಂದು ತೋರಿಸಿಕೊಡುವುದು ಸರಿಯಾದ ಕ್ರಮವಲ್ಲವೆ? ಈ ಎಲ್ಲ ಪ್ರಶ್ನೆಗಳೂ ಏಳುವುದು ವಿಚಾರಶೀಲವಾದ ಮನಸ್ಸಿಗೆ. ವೈಚಾರಿಕವಾಗಿ ಪ್ರಬುದ್ಧವಾದ ಸಮಾಜ ಮಾತ್ರ, ಎಂಥ ಸಂದಿಗ್ಧತೆಗಳನ್ನೂ ಧೈರ್ಯವಾಗಿ ಹಾಗೂ ಗಂಭೀರವಾಗಿ ಎದುರಿಸಬಲ್ಲದು.

ಚದುರಿದ ಚಿಂತನೆಗಳು : ೨೦೦೦.