ಉಧೋ ಉಧೋ ಉಧೋ ರೇಣುಕಾ ತಾಯಿ
ನಮೋ ನಮೋ ನಮೋ ರೇಣುಕಾ ತಾಯಿ
ಏಳು ಕೊಳ್ಳದ ರೇಣುಕಾ ತಾಯಿ
ನೀನೊಲಿದ ಮನೆ ಮನೆಯ ಸಂಪದಾಗರ ತಾಯಿ     ೧

ಬಾ ಬಾ ಬಾರಮ್ಮ ಬಂದಿಹೆವು ನೋಡಮ್ಮ
ಬಂದ ಮಕ್ಕಳು ಭಕ್ತಿಯಲಿ ಹಾಡುವೆವು ಕೇಳಮ್ಮ
ನಮಗೆ ಅಕ್ಕರೆಯ ದರ್ಶನವ ನೀ ನೀಡಮ್ಮ
ಜಮದಗ್ನಿ ಮುನಿಪತ್ನಿ ಪರಶುರಾಮನ ಮಾತೆ ೨

ಹರರೂಪನೇ ಪಡೆದ ಈ ತಾಯಿ
ಪಾರ್ವತಿರೂಪ ಪಡೆದ ಈ ತಾಯಿ
ಏಳು ಕೊಳ್ಳದ ವಾಸಿ ಶ್ರೀರೇಣುಕಾ ತಾಯಿ
ನೀನೊಇಲಿದ ಮನೆ ಮನೆಯು ಸಂಪದಾಗರ ತಾಯಿ  ೩

ಶ್ರೀ ಲಕ್ಷ್ಮೀ ಸರಸ್ವತಿ ಭೂದೇವಿ ನೀನು
ಹೋದವಳು ನೀನು ಬಾಳ ನಂಬಿಗೆ ನಮ್ಮ ಮುಖಕಾಣಿ
ನಮ್ಮ ದುಃಖಕಾಣೆಯಾಗಿರುವೆ
ಅಂಧಕಾರವ ಕಳೆಯೆ ನಂದಾದೀಪವ ಬೆಳಗು          ೪

ಅದರ ಪಾಪವ ಕಳೆಯೆ ಶಕ್ತಿವಂತಳೇ ನೀಣು
ಆದಿ ಅಂತ್ಯವು ನೀನು ದಾರಿದೀಪವು ನೀನು
ನಮ್ಮ ಬಾಳಿನ ಪುಟಕೆ ನೀನು ಹಿರಿದಾರಿ
ನೀನೊಲಿದ ಮನೆಮನೆಯು ಸಂಪದಾಗರ ತಾಯಿ     ೫

ಹಾದು ಹೋಗುವ ಮುನ್ನ ವರವ ನೀಡು ತಾಯಿ
ಹೆತ್ತ ತಾಯಿಯ ಅಗಲಿ ಎಳು ಎಳು ಜನ್ಮವ ತಿರುಗಿ
ಯಾವ ಊರು ತಿರುಗಿದರು ನಿನ್ನ ಆಸರೆ ನಮಗಿರಲೆಮ್ಮ
ಕ್ಯಾದಿಗಿ ವನವು ಚಂದ ನಿನ್ನ ಗೋಪುರ ಚಂದ           ೬

ನಿನ್ನ ಹೊನ್ನ ಕಳಸವು ಚೆಂದ ಮನಸಿಗಾನಂದ
ಪರಮ ಪತಿವ್ರತೆಗೆ ನೀನು ವೀರಮಾತೆ
ಪಾಪವ ಕಳೆಯಮ್ಮ ಏಳು ಕೊಳ್ಳುವ ರೇಣುಕಾ ತಾಯಿ
ನೀನೊಲಿದ ಮನೆಮನೆಯು ಸಂಪದಾಗರ ತಾಯಿ     ೭

ಮುನಿಶ್ರೇಷ್ಠ ಜಮದಗ್ನಿ ವೀರಪುತ್ರ ಪರಶುರಾಮ
ಬೆಳಗಲಿಹರು ಎಕ್ಕಯ್ಯ ಜೋಗಯ್ಯ
ಅಕ್ಕಪಕ್ಕದಲಿ ನಿಂತು ನಿನ್ನ ಹಿರಿಮೆಯ
ನೀನೊಲಿದ ಮನೆಮನೆಯ ಸಂಪದಾಗರ ತಾಯಿ      ೮

ಸವದತ್ತಿಯಲ್ಲಮ್ಮ ನೀನು ನಿತ್ಯ ಹರಸು
ದಿನನಿತ್ಯ ಸೇವೆಗೈಯುವೆವು ತಾಯಿ
ಶುಕ್ರವಾರ ಮಂಗಳವಾರ ನಿನ್ನ ವಾರ
ಕುಂಕುಮ ಅರಿಷಿಣ ಧರಿಸುವೆನು ಎನ್ನ ಚಿನ್ನ
ನೀನೊಲಿದ ಮನೆಮನೆಯು ಸಂಪದಾಗರ ತಾಯಿ     ೯

ತುಂಬಿ ತುಳುಕಲಿ ಜಗದಲ್ಲಿ ನಿನ್ನ ಔದಾರ್ಯ
ನಂಬಿದಾ ಜಗಕೆಲ್ಲ ನೀ ನೀಡುವೆ ಅಭಯ
ನಿನಗಿಲ್ಲ ಸರಿಸಾಟಿ ಜಗದಲ್ಲಿ ಎಲ್ಲಮ್ಮ
ನಮಗಿಲ್ಲ ಬೇರಾರು ನಿನ್ನ ಹೊರತು ಗತಿಯು
ನೀನೊಲಿದ ಮನೆಮನೆಯು ಸಂಪದಾಗರ ತಾಯಿ     ೧೦

ವನದೇವಿ ನೀನಿರುವೆ ಮನದೇವಿ ನೀನಿರುವೆ
ಜಗದೇವಿ ನೀನಿರುವೆ ಜಗಕೆಲ್ಲ ನೀನಿರುವೆ
ಎಲ್ಲರಿಗೂ ಜಗದಮ್ಮಾ ಎಲ್ಲರಿಗೂ ಎಲ್ಲಮ್ಮ
ಎಲ್ಲರೂ ನಿನಗೆ ಭಕ್ತಿ ಈಯುವರು
ನೀನೊಲಿದ ಮನೆಮನೆಯು ಸಂಪದಾಗರ ತಾಯಿ     ೧೧

ಹರಕೆ ಹೊತ್ತವರು ಹಿರಿಯಾಸೆ ಇಟ್ಟವರು
ಹರುಷದಲಿ ಬರುತಿಹರು ಉಧೋ ಉಧೋ ಎನುತ
ಬೇರೆ ಬೇರೆ ಜನರು ಭೇದ ಭೇದ ಮರೆತು
ಬರುತಿಹರು ವರುಷ ವರುಷ ಬರುತಿಹರು
ನೀನೊಲಿದ ಮನೆಮನೆಯು ಸಂಪದಾಗರ ತಾಯಿ     ೧೨

ನಿನ್ನ ಕೊಡವ ಹೊತ್ತು ತಿರುಗತಾಳ ಜೋಗಮ್ಮ
ನಿನ್ನ ಹಾಡ ಹಾಡಿ ಹಾಡಿ ಕುಣಿತಾಳ ಜೋಗಮ್ಮ
ಉಧೋ ಉಧೋ ನಿನ್ನ ಪಾದಕ ಜೋಗಮ್ಮ
ನಮೋ ನಮೋ ನಿನ್ನ ಎನ್ನುವರು ಜೋಗಮ್ಮ         ೧೩

ನೀನಿರುವ ಈ ತಾಣ ಭಕ್ತರಿಗೆ ವರದಾನ
ನೀನಿರುವ ತಾಣ ಪುಣ್ಯಸಾಗರ ಗ್ರಾಮ
ಏಳು ತಾತನವರಿಗೆ ಪುಣ್ಯ ನೀಡು
ಏಳು ಕೊಳ್ಳದ ಎಲ್ಲಮ್ಮ ಶ್ರೀ ರೇಣುಕಾ ತಾಯಿ         ೧೪