ಪೂರ್ವದಲ್ಲಿ ವಡ್ಡರ ಒಂದು ಗುಂಪು ಕತ್ತೆಗಳ ಮೇಲೆ ಸಾಮಾನು, ಸರಂಜಾಮುಗಳನ್ನು ಮತ್ತು ಬೀಸುವ ಕಲ್ಲುಗಳನ್ನು ಹಾಕಿಕೊಂಡು ಲಂಬಾಣಿಗರ ಒಂದು ತಾಂಡಾಕ್ಕೆ ಬಂದರು. ತಾಂಡಾದ ಸಮೀಪ ಬಿಡಾರ ಹಾಕಿ ರಾತ್ರಿ ಕಳೆದರು. ಬೆಳಗಿನ ಜಾವ ಕತ್ತೆಗಳನ್ನು ಮೇಯಲಿಕ್ಕೆ ಬಿಟ್ಟು ಬೀಸುವ ಕಲ್ಲು ಪುಟಾಣಿ ಗಡಾಯಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ತಾಂಡಾದಲ್ಲಿದ್ದ ಲಂಬಾಣಿಗರು ದೀಪಾವಳಿ ಹಬ್ಬದ ಸಡಗರದಲ್ಲಿ ತೊಡಗಿದ್ದರು. ಈ ಹಬ್ಬ ಲಂಬಾಣಿಗರಿಗೆ ಅತ್ಯಂತ ಮಹತ್ವದ ಹಬ್ಬ. ಈ ಹಬ್ಬವನ್ನು “ದವಾಳಿ” ಇಲ್ಲವೆ “ಕಾಳೀ ಮಾಸ” ಎಂದು ಕರೆಯುತ್ತಾರೆ. “ಕಾಳೀ” ಎಂದರೆ ಪರ್ವಕಾಳಿ ಅರ್ಥಾತ್ ಪುಣ್ಯಕಾಲ. ಅಮವಾಸ್ಯೆಯ ದಿನ ತಾಂಡಾದ ನಾಯಕನ ಮನೆಯ ಮುಂದೆ ಕುರಿ ಅಥವಾ ಮೇಕೆಯನ್ನು ಬಲಿ ಕೊಡುವ ಸಂಪ್ರದಾಯ. ಆದ್ದರಿಂದ ತಾಂಡಾದ ಜನ ಕುರಿಯನ್ನು ಬಲಿಕೊಟ್ಟು ಪ್ರತಿ ಮನೆಗೂ ಪಾಲು ಹಾಕುವುದರಲ್ಲಿ ತೊಡಗಿಕೊಂಡಿದ್ದರು. ಇತ್ತ ಮಕ್ಕಳು ಕೈಯಲ್ಲಿ ಪಾತ್ರೆ ಹಿಡಿದು ಸಳೋಯಿ”

[1] (ಒಂದು ಬಗೆಯ ಮಾಂಸಾಹಾರದ ಅಡುಗೆ) ತಿನ್ನುವ ಹಂಬಲಕ್ಕಾಗಿ ಬೇವಿನ ಗಿಡದ ಕೆಳಗಡೆ ಗಲಾಟೆ ಮಾಡುತ್ತ ಕುಳಿತುಕೊಂಡಿದ್ದರು.

ಅದೇ ತಾಂಡಾದಲ್ಲಿಯ ರಾಣಾವಳ (ರಾಠೋಡ) ಪಂಗಡದವರಿಬ್ಬರು, ಇಡೀ ದಿವಸ ಸೆಣಬಿನಿಂದ ಗೋಣಿಚೀಲ ತಯಾರಿಸಿ ಸುಸ್ತಾಗಿದ್ದರು. ಅಂದು ತಾಂಡಾದ ಪ್ರತಿ ಮನೆ ಮನೆಗಳಲ್ಲೂ ಮಾಂಸಾಹಾರದ ಅಡುಗೆ ಬೇರೆ. ಆದ್ದರಿಂದ ರಾಣಾವಳ ಪಂಗಡದವರಿಬ್ಬರು ಕೂಡಿಕೊಂಡು ಕಂಠಮಟ ಕುಡಿದು, ಕುಡಿತದ ಅಮಲಿನಲ್ಲಿ ಮಾತಿನ ಭರಾಟೆ ತಾರಕಕ್ಕೇರಿತ್ತು. ಗುಡಿಸಲು ಮನೆಯ ಹಿಂದೆ ವಡ್ಡರ ಗುಂಪಿನ ಒಂದು ಕತ್ತೆ ಆಶ್ರಯಕ್ಕೆಂದು ಬಂದು ನಿಂತಿತ್ತು. ಇಬ್ಬರೂ ಮಹಾಶಯರು ಕಂಠಮಟ ಕುಡಿದು ಬಹಿರ್ದೆಸೆಗೆಂದು ಹೊರಬಂದರು. ಅಮವಾಸ್ಯೆಯ ರಾತ್ರಿ ಕತ್ತಲೆ ಬೇರೆ ಆಗಿತ್ತು. ಮನೆಯ ಆಶ್ರಯದಲ್ಲಿ ನಿಂತಿದ್ದ ಕತ್ತೆ, ಅವರಿಗೆ ಕುಡಿತದ ಅಮಲಿನಲ್ಲಿ ಮೇಕೆಯಂತೆ ಕಾಣಿಸಿತು! ಜನರ ಸದ್ದು ಗದ್ದಲ ಇಲ್ಲದ್ದರಿಂದ ಕತ್ತೆಗೆ ಹೊಡೆದು ಇತರರಿಗೆ ಗೊತ್ತಾಗದಂತೆ ಹಳ್ಳಕ್ಕೆ ಹೊತ್ತೊಯದ್ದರು. ಹಳ್ಳದ ದಂಡೆಯ ಮೇಲೆ ಕತ್ತೆಯ ಚರ್ಮ ಸುಲಿದು ಮಾಂಸ ಬೇರ್ಪಡಿಸುತ್ತಿದ್ದರು. ಬೇರೆ ತಾಂಡಾಕ್ಕೆ ಮಗಳ ಮನೆಗೆಂದು ಹೋಗಿದ್ದ “ಮೂಡ” (ಚವ್ಹಾಣ)ನು ಕತ್ತಲಾಯಿತೆಂದು ಅವಸರದಿಂದ ಮರಳಿ ತಾಂಡಕ್ಕೆ ಬರುತ್ತಿದ್ದನು. ಹಳ್ಳದ ದಡದಲ್ಲಿ ಇಬ್ಬರು ಭೂಪರು ಮೆಲ್ಲನೆ ಪಿಸುಗುಟ್ಟುತ್ತಿದ್ದುದ್ದು ಇವನಿಗೆ ಕೇಳಿಸಿತು. ಸಮೀಪ ಹೋಗಿ ನೋಡಿದಾಗ ಅವರು ಮಾಂಸ ಬೇರ್ಪಡಿಸಿ, ತೊಳೆಯುತ್ತಿದ್ದರು. ಹಾಗ ರಾಣಾವಳ ಪಂಗಡದವರಿಬ್ಬರು “ಮೂಡ”ನಿಗೆ ಹೀಗೆಯೇ ಬಿಟ್ಟರೆ ತಮ್ಮ ಮರ್ಯಾದೆ ಹರಾಜು ಹಾಕುತ್ತಾನೆಂದು ತಿಳಿದು ಮೇಕೆಯ ಕರಳು ಸ್ಚಚ್ಛ ಮಾಡು ನಿನಗೂ ಒಂದಿಷ್ಟು ಮಾಂಸ ಕೊಡುತ್ತೇವೆಂದು ಹೇಳಿ, ಅವನಿಗೆ ಕರಳು ತೊಳೆಯಲಿಕ್ಕೆ ಹಚ್ಚಿದರು. ಆ ಸಂದರ್ಭವನ್ನು ಕುರಿತು ಲಂಬಾಣಿಗರಲ್ಲಿ ಒಂದು ತ್ರಿಪದಿ ಹೀಗಿದೆ

“ಸಣಕಾತೆ ವಣೆ ಮಂಗೇತಿ ಪಾಟಿ
ಭಾಟಾತಿತೋ ಗದ್ದಾ ಮಾರೇ
ಮರ್ದ ಕೊಂಕ ಮಾಟಿ”

ಅರ್ಥ: ಸೆಣಬಿನಿಂದ ಚೀಲ ತಯಾರಿಸುತ್ತಿದ್ದವರು, ಕಲ್ಲಿನಿಂದ ಕತ್ತೆಯನ್ನು ಕೊಂದರು. ಇವರಿಗೆ ಕೆಚ್ಚೆದೆಯ ಭಂಟ ಅನ್ನಬೇಕೋ? ಅಥವಾ ಮನುಷ್ಯ ಅನ್ನಬೇಕೋ.

ಆ ಮಹಾಶಯರು ಕತ್ತಲೆ ರಾತ್ರಿಯಲ್ಲಿ ಹಳ್ಳದ ದಡದಲ್ಲಿ ಮಾಡುತ್ತಿದ್ದ ಕರಾಮತ್ತು ಹೇಗೋ ತಾಂಡಾದ ಜನರಿಗೆ ಗೊತ್ತಾಯಿತು. ಇವರ ಬಳಿ ಜನ ಬಂದು ನೋಡಲಾಗಿ “ಮೂಡ”ನು ಹಳ್ಳದಲ್ಲಿ ಕರಳು ತೊಳೆಯುತ್ತಿದ್ದನು. ಆಗ ಅದು ಕುರಿ ಅಥವಾ ಆಡಿನ ಕರುಳು ಆಗಿರದೇ ಬೇರೆ ಪ್ರಾಣಿಯ ಕರುಳು ಎಂಬುದು ಜನರಿಗೆ ಗೊತ್ತಾಯಿತು. ಆಗ ಜನರು ನಿಜ ಸಂಗತಿಯನ್ನು ಕೇಳಲಾಗಿ ರಹಸ್ಯ ಬಯಲಾಯಿತು. ಕತ್ತೆಗೆ ಹೊಡೆದ ರಾಣಾವಳ ಪಂಗಡದವರಿಬ್ಬರೂ ತಮ್ಮ ಹೆಸರಿಗೆ ಕಳಂಕ ಬರುತ್ತದೆಂದು ತಿಳಿದು, “ಮೂಡ”ನೇ ಕತ್ತೆಯನ್ನು ಹೊಡೆದು ಅದರ ಮಾಂಸ ತಿನ್ನುವ ಹುನ್ನಾರ ನಡೆಸಿದ್ದ ಎಂದು ಅಪವಾದ ಹೊರಿಸಿದರು. ಅದಕ್ಕೆ ಅವನ ಕೈಯಲ್ಲಿರುವ (ಕತ್ತೆಯ) ಕರುಳೇ ಸಾಕ್ಷಿ ಎಂದು ಹೇಳಿದರು. ಅದನ್ನು ನಂಬಿದ ಜನ “ಗದ್ದಾ ಖಾವು ಮೂಡ”[2] (ಕತ್ತೆಯ ಮಾಂಸ ತಿಂದ ಮೂಡ) ಎಂದು ಕರೆದರು. ಸಂದರ್ಭ ಬಂದಾಗ ಲಂಬಾಣಿಗರು ಮೂಡ ಪಂಗಡದವರಿಗೆ ಈ ಮೇಲಿನಂತೆ ಹಾಸ್ಯಾಸ್ಪದವಾಗಿ ಹೇಳಿ ಹೀಯಾಳಿಸುತ್ತಾರೆ.

* * *


[1]     “ಸಳೋಯಿ” ಎಂದರೆ ಕುರಿ ಅಥವಾ ಮೇಕೆಯನ್ನು ಬಲಿ ಕೊಡುವ ಸಂದರ್ಭದಲ್ಲಿ ರಕ್ತ ಹಿಡಿದಿರುತ್ತಾರೆ. ಆಮೇಲೆ ಕುರಿಯ ಕರುಳು, ಪುಪ್ಪಸ, ಕಲಿಜಾ, ತಲೆಯ ಭಾಗ ಇವುಗಳನ್ನು ಸಣ್ಣಗೆ ಕತ್ತರಿಸಿ, ಒಂದು ಹಂಡೆಯಲ್ಲಿ ಕುದಿಸುತ್ತಾರೆ. ಮಾಂಸ ಕುದ್ದ ಮೇಲೆ ಹೆಪ್ಪುಗಟ್ಟಿದ ರಕ್ತವನ್ನು ಜೋಳದ ಹಿಟ್ಟಿನಲ್ಲಿ ಕಲಿಸಿ ಅದರಲ್ಲಿ ಹಾಕುತ್ತಾರೆ. ಆಮೇಲೆ ಹೆಚ್ಚು ಉಪ್ಪು ಹಾಕಿ ಕುದಿಸುತ್ತಾರೆ. ಸಳೋಯಿಯನ್ನು ಮಾಂಸದ ಪಾಲದ ಜೊತೆಗೆ ಹಿಡಿಯಷ್ಟು ಹಾಕುತ್ತಾರೆ. ಆಮೇಲೆ ಅಲ್ಲಿ ಸೇರಿದ ಜನರಿಗೆ ಮತ್ತು ಸಣ್ಣ ಮಕ್ಕಳಿಗೆ ಹಂಚುತ್ತಾರೆ. ಈ ಸಂದರ್ಭದಲ್ಲಿ ತಾಂಡಾದ ನಾಯಕ, ಕಾರಭಾರಿ, ಡಾವ ಮತ್ತು ಪಂಚರಿಗೆ ಲೆಕ್ಕದ ಪ್ರಕಾರ ಮಾಂಸದ ಜೊತೆಗೆ, ಎಲುಬುಗಳನ್ನು ಹಾಕುತ್ತಾರೆ. (ಲೇಕರ : ನ್ಯಾಯವಾಗಿ ಕೊಡುವುದು, “ಟೇಕರ” ಹೋತಿನ ಕಾಲು, “ಫೇಕರ” ಪುಪ್ಪಸ.) ಗುಂಡಿ (ಹಡಕಾ) ಎಲು ನ್ಯಾಯವಾಗಿ ಕೊಡದಿದ್ದರೆ ಇದರ ಸಂಬಂಧ ನ್ಯಾಯ ಮಾಡುತ್ತಾರೆ.

[2]     ಲಂಬಾಣಿ ಭಾಷೆಯಲ್ಲಿ “ಗದ್ದಾಖಾವು ಮೂಡ” ಎಂದರೆ, “ಕತ್ತೆ ತಿಂದ ಮೂಡ” ಎಂದರ್ಥ. ಚವ್ಹಾಣ ಗೋತ್ರದಲ್ಲಿ ಆರು ಪಂಗಡಗಳಿವೆ. ಅದರಲ್ಲಿ “ಮೂಡ” ಪಂಗಡವು ಒಂದು.