ನಮ್ಮ ದೇಶದಲ್ಲಿ ಕ್ಷೀರ ಕ್ರಾಂತಿಯನ್ನು ಉಂಟುಮಾಡಲು, ವಿದೇಶಿ ತಳಿಗಳಲ್ಲಿನ ಅನುವಂಶಿಕತೆ(ಹೆಚ್ಚು ಉತ್ಪಾದಿಸುವ) ಗುಣವನ್ನು ದೇಶೀಯ ತಳಿಗಳಲ್ಲಿ ಕಡಿಮೆ ವೆಚ್ಚದಿಂದ ತೀವ್ರವಾಗಿ ಸಂಯೋಜಿಸಿ ನಾಡ ತಳಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೃತಕ ಗರ್ಭಧಾರಣಾ ಪ್ರಯೋಗವನ್ನು ಹಮ್ಮಿಕೊಳ್ಳಲಾಯಿತು.

ಋತು ಚಕ್ರವು (ಈಸ್ಟ್ರಸ್ ಸೈಕಲ್) ಕಡಸು/ಮಣಕ/ಪ್ರಥಮ ಪ್ರಸವದ ರಾಸುಗಳಲ್ಲಿ ಸಾಮಾನ್ಯವಾಗಿ ೧೮ ರಿಂದ ೧೯ ದಿನಗಳು ಹಾಗೂ ಆಕಳು/ಎಮ್ಮೆ/ಬಹು ಪ್ರಸವದ ರಾಸುಗಳಲ್ಲಿ ೨೧ ರಿಂದ ೨೩ ದಿನಗಳ ಅವದಿಯದ್ದಾಗಿರುತ್ತದೆ. ಈ ಋತು ಚಕ್ರವನ್ನು ರಾಸುಗಳಲ್ಲಿ ೪ ಭಾಗಗಳಾಗಿ ವಿಂಗಡಿಸಲಾಗಿದೆ:(೧) ಬೆದೆಯ ಪೂರ್ವವದಿ(ಪೋ ಈಸ್ಟ್ರಸ್ ಪೀರಿಯಡ್) (೨) ಬೆದೆಯ ಅವದಿ (ಈಸ್ಟ್ರಸ್ ಪಿರಿಯಡ್) (೩) ಮೆಟೀಸ್ಟ್ರಸ್ ಮತ್ತು (೪) ಡಯೀಸ್ಟ್ರಸ್ ಅವದಿ, ಇದರಲ್ಲಿ ಬೆದೆಯ ಅವದಿಯು(ಈಸ್ಟ್ರಸ್ ಪಿರಿಯಡ್) ಸಾಮಾನ್ಯವಾಗಿ ೮ ರಿಂದ ೨೪ ತಾಸುಗಳಿರುತ್ತದೆ. ಕೆಲವೊಮ್ಮ ಅತೀ ಹೆಚ್ಚೆಂದರೆ ೩೬ ತಾಸುಗಳದ್ದಾಗಿರುತ್ತದೆ. ಕೃತಕ ಗರ್ಭಧಾರಣೆಯ ದೃಷ್ಟಿಯಿಂದ ಬೆದೆಯ ಅವದಿಯನ್ನು (ಅ) ಮುಂಬೆದೆ ೦ ರಿಂದ ೮ ತಾಸು (ಆ) ಮಧ್ಯಬೆದೆ ೮ ರಿಂದ ೧೬ ತಾಸು ಹಾಗೂ (ಇ) ಹಿಂಬೆದೆ ೧೬ ರಿಂದ ೨೪ ತಾಸುಗಳಾಗಿ ಮಿಂಗಡಿಸಲಾಗಿದೆ. ಫಲಪ್ರದವಾದ ಗರ್ಭಧಾರಣೆಗೆ ಮಧ್ಯ ಬೆದೆಯ ಕೊನೆಯ ಅರ್ಧ ಅವದಿ ಹಾಗೂ ಹಿಂಬೆದೆಯ ಮೊದಲ ಅರ್ಧ ಅವಧಿಯಲ್ಲಿ ಕೃತಕ ಗರ್ಭಧಾರಣೆ ಮಾಡುವುದು ಹೆಚ್ಚು ಸೂಕ್ತವಾಗಿರುತ್ತದೆ. ಎಮ್ಮೆಗಳು(ಶೇ. ೮೪ ರಷ್ಟು) ರಾತ್ರಿ ವೇಳೆಯಲ್ಲಿ ಬೆದೆಗೆ ಬರುತ್ತವೆ. ಆದುದರಿಂದ ಬೆದೆಗೆ ಬರಲಿರುವ ಎಮ್ಮೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಕೃತಕ ಗರ್ಭಧಾರಣೆ ಸಫಲತೆ ದೃಷ್ಟಿಯಿಂದ ಕೆಳಕಂಡ ಅಂಶಗಳನ್ನು ಪಾಲಿಸಬೇಕು.

೧. ಕೃತಕ ಗರ್ಭಧಾರಣೆಗೆ ತಂಧ ರಾಸುಗಳನ್ನು ಉದ್ರೇಕಿಸಬಾರದು ಹಾಗೂ ರಾಸುಗಳಿಗೆ ಕೃತಕ ಗರ್ಭಧಾರಣಾ ಕೇಂದ್ರಕ್ಕೆ ತಂದ ನಂತರ ೧೫ ನಿಮಿಷ ಮತ್ತು ಕೃತಕ ಗರ್ಭಧಾರಣೆ ನಂತರ ೧೫ ನಿಮಿಷ ವಿಶ‌‌‌‌‌ದ್ರಾಂತಿಯನ್ನು ಕೇಂದ್ರದ ಆವರಣದಲ್ಲಿಯೇ ಕೊಡುವುದು.

೨. ಗರ್ಭಧರಿಸಿದ ಕೆಲವು ರಾಸುಗಳು ಸಹ ಬೆದೆಯ ಕೆಲವೊಂದು ಲಕ್ಷಣಗಳನ್ನು ತೋರಿಸುತ್ತವೆ. ಆದ್ದರಿಂದ ಕೃತಕ ಗರ್ಭಧಾರಣೆಗೆ ಮುಂಚೆ ಗರ್ಭಧರಿಸಿದ ಬಗ್ಗೆ ಪರೀಕ್ಷಿಸಿ ಖಚಿತಪಡಿಸಿಕೊಳ್ಳಬೇಕು.

೩. ಬೆದೆಗೆ ಬಂದ ರಾಸು ಬೇರೆ ರಾಸಿನ ಮೇಲೆ ಹತ್ತುವ ಚಿಹ್ನೆಯು ಮುಂಬೆದೆಯಲ್ಲಿ ಕಂಡು ಬರುತ್ತದೆ. ಇಂತಹ ರಾಸುಗಳಲ್ಲಿ ಕೃತಕ ಗರ್ಭಧಾರಣೆಯನ್ನು ಈ ಚಿಹ್ನೆ ಕಂಡ ೫ ರಿಂದ ೮ ತಾಸುಗಳ ನಂತರ ಮಾಡುವುದು ಉತ್ತಮ. ಇಂತಹ ರಾಸುಗಳು ನಂತರ ಇತರ ರಾಸುಗಳ ಎದುರು ಅವು ಹತ್ತಲು ಪ್ರೇರೇಪಿಸುವಂತೆ ನಿಲ್ಲುತ್ತವೆ. ಇದು ಕೃತಕ ಗರ್ಭಧಾರಣೆಗೆ ಉತ್ತಮ ಸಮಯ. ಒಂದು ವೇಳೆ ರಾಸಿನ ವಾರಸುದಾರ ಮುಂಬೆದೆ ಅವದಿಯಲ್ಲಿಯೇ ಕೃತಕ ಗರ್ಭಧಾರಣೆಗೆ ಒತ್ತಾಯಿಸಿದರೆ ಗರ್ಭಕೋಶದ ಸರ್ವಿಕ್ಸ್ ನ ಮಧ್ಯಭಾಗದಲ್ಲಿ ವೀರ್ಯದಾನ ಮಾಡುವುದು ಉತ್ತಮ. ಮಧ್ಯ ಬೆದೆ (ಮಿಡ್ ಹೀಟ್) ಹಾಗೂ ಹಿಂಬೆದೆ (ಲೇಟ್ ಹೀಟ್) ಅವದಿಯಲ್ಲಿರುವ ರಾಸುಗಳಿಗೆ ಗರ್ಭಕೋಶ ಅಥವಾ ಅಂಡಾಣು ಹೊಂದಿರುವ ಗಭಾಶಯದ ಕೊಂಬಿನೊಳಗೆ ವಿರ್ಯದಾನ ಮಾಡಬೇಕು.

೪. ಬೆದೆಗೆ ಬಂದ ರಾಸುಗಳು ಲೋಳೆಯನ್ನು ಸ್ರವಿಸುತ್ತವೆ. ಈ ಲೋಳೆ ಮುಂಬೆದೆಯಲ್ಲಿ ತೆಳುವಾಗಿ, ಹೇರಳವಾಗಿದ್ದು, ಸ್ವಚ್ಛತೆಯಿಂದಿರುತ್ತದೆ. ಹಿಂಬೆದೆಯಲ್ಲಿ ಅಲ್ಪ ಪ್ರಮಾಣದಿಂದ ಕೂಡಿದ್ದು, ಕಡಿಮೆ ಪ್ರಮಾಣದಲ್ಲಿದ್ದು ಸ್ವಚ್ಛತೆಯಿಂದಿರುತ್ತವೆ. ಲೋಳೆಯು ಹಳದಿ ಬಣ್ಣವಿದ್ದರೆ ಅಥವಾ ಮಬ್ಬಾಗಿದ್ದರೆ ಗರ್ಭಾಶಯದ ಸೋಂಕನ್ನು ಸೂಚಿಸುತ್ತದೆ ಹಾಗೂ ಇಂತಹ ರಾಸುಗಳಲ್ಲಿ ಕೃತಕ ಗರ್ಭಧಾರಣೆ ಮಾಡದೆ ಸೂಕ್ತ ಚಿಕಿತ್ಸೆ ನೀಡಬೇಕು. ಒಂದು ವೇಳೆ ಈ ಸ್ರಾವವು ಕಪ್ಪು ಅಥವಾ ಕಂದು ಬಣ್ಣದಿಂದಿದ್ದರೆ, ಅದಕ್ಕೆ ಸಸಾರಜನಕದ ಕೊರತೆ /ಇತ್ತೀಚೆಗೆ ಕರುಹಾಕಿದ ಅಥವಾ ಕಂದು ಹಾಕಿದ ಕಾರಣವಿರುತ್ತದೆ.

೫. ಸೇಕ್ರೋಸಿಯಾಟಿಕ್ ಅಸ್ಥಿಬಂದಕವು ಬೆದೆಗೆ ಬಮದ ರಾಸುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಸಡಿಲಗೊಂಡಿರುತ್ತದೆ. ಈ ಚಿಹ್ನೆಯಿರದಿದ್ದ ರಾಸುಗಳು ಗರ್ಭಧರಿಸುವ ಸಾಧ್ಯತೆ ಕಡಿಮೆ. ಈ ಅಸ್ಥಬಂದಕವು ಅತಿಯಾಗಿ ಸಡಿಲಗೊಂಡಿದ್ದರೆ ಅದು ಗರ್ಭಕೋಶದ ಸೋಂಕು/ಅಂಡಾಶಯದ ದೋಷ (ಸಿಸ್ಟಿಕ್ ಓವರಿ) /ಪ್ರಸವಕ್ಕೆ ಹತ್ತಿರದ ಸ್ಥತಿಯನ್ನು ತಿಳಿಸುತ್ತದೆ.

೬. ಬೆದೆಗೆ ಬಂದ ರಾಸುಗಳಲ್ಲಿ ಗರ್ಭಕೋಶದ ಕೊಂಬುಗಳು (ಯುಟಿರೈನ್ ಹಾರ್ನ್ಸ್) ಬಿರುಸು, ಶಕ್ತಿಯುತವಾಗಿದ್ದು, ಸುರುಳಿ ಸುತ್ತಿಕೊಂಡಿರುತ್ತವೆ. ಬೆದೆಯಲ್ಲಿರುವ  ರಾಸುಗಳಲ್ಲಿ ಈ ಚಿಹ್ನೆಗಳಿರುವುದಿಲ್ಲ. ಒಂದು ವೇಳೆ ಗರ್ಭಕೋಶದ ಕೊಂಬುಗಳು ಪರೀಕ್ಷೆಯ ಪ್ರಾರಂಭದಲ್ಲಿ ಶಥಿಲವಾಗಿದ್ದು, ಪರೀಕ್ಷೆಯ ನಂತರ ಶಕ್ತಿಯುತ (ಟೋನಿಸಿಟಿ) ಲಕ್ಷಣ ಬೆಳವಣಿಗೆಯಾದರೆ ಅದು ಗರ್ಭಾಶಯದ ಸೋಂಕನ್ನು ತಿಳಿಸುತ್ತದೆ. ಇಂತಹ ರಾಸುಗಳಿಗೆ ಗರ್ಭಧಾರಣೆ ಮಾಡಬಾರದು, ಬದಲಿಗೆ ಸೂಕ್ತ ಚಿಕಿತ್ಸೆ ನೀಡಬೇಕು.

೭. ಬೆದೆಗೆ ಬಂದ ರಾಸುಗಳಲ್ಲಿ ಗರ್ಭಕೋಶದ  ಪ್ರತಿಯೊಂದು ಕೊಂಬುಗಳ ಸುತ್ತಳತೆಯು ೩. ೦ ರಿಂದ ೩. ೫ ಸೆಂ. ಮೀ. ಇರುತ್ತದ. ಈ ಸುತ್ತಳತೆಯು ೩. ೫ ಸೆಂ. ಮೀ. ಗಿಂತ ಹೆಚ್ಚಿದ್ದರೆ ಅದು ಗರ್ಭಕೋಶದ ಸೋಂಕು ಅಥವಾ ಗರ್ಭಧರಿಸಿದ್ದರ ಅಥವಾ ಕರುಹಾಕಿದ / ಕಂದು ಹಾಕಿದ ನಂತರ ಪೂರ್ವಾವಸ್ಥೆಗೆ ಮರಳುತ್ತಿರುವ ಗರ್ಭಾಶಯದ ಲಕ್ಷಣವಾಗಿರುತ್ತದೆ.

ಆರೋಗ್ಯದಿಂದ ಕೂಡಿದ ಗರ್ಭಾಶಯದ ಎರಡೂ ಕೊಂಬುಗಳ ಸುತ್ತಳತೆಯ ವ್ಯತ್ಯಾಸವು ಅರ್ಧ ಸೆಂಟಿಮೀಟರ್ ಗಿಂತ ಕಡಿಮೆ ಇರಬೇಕು. ಹಾಗೂ  ಅವುಗಳ ಸಾಮಂಜಸ್ಯ ಗುಣ ಮಾಸದಂತಿರಬೇಕು. ಆದರೆ ಗಟ್ಟಿ ಅಥವಾ ಮೃದುವಾಗಿರಬಾರದು. ಮೃದುವಿದ್ದರೆ, ಅದು ಗರ್ಭಕೋಶದ ಸೋಂಕು ಅಥವಾ ಆಹಾರಾಂಶಗಳ ಕೊರತೆಯನ್ನು ತಿಳಿಸುತ್ತದೆ. ಹಾಗೂ ಇಂತಹ ರಾಸುಗಳಿಗೆ ಗರ್ಭಧಾರಣೆ ಮಾಡಬಾರದು.

೮. ಬೆದೆ ಲಕ್ಷಣ ಹೊಂದಿರುವ ಪ್ರತಿಯೊಂದು ರಾಸುಗಳಲ್ಲಿನ ಅಂಡಾಶಯವು ಪ್ರತಿಗಮನಾವಸ್ಥೆಯಲ್ಲಿರುವ (ರಿಗ್ರೆಸ್ಸಿಂಗ್) ಕಾರ್ಪಸ್ ಲೂಟಿಯಂ ಹಾಗೂ ಬೆಳವಣಿಗೆ ಹೊಂದುತ್ತಿರುವ ಅಥವಾ ಪೂರ್ಣ ಬೆಳವಣಿಗೆಯಾಗಿರುವ ಅಂಡಾಣುವನ್ನು ಹೊಂದಿರುತ್ತದೆ. ಪರಿಣಿತ ಪಶುವೈದ್ಯರು ಅಂಡಾಶಯದಲ್ಲಿನ ಈ ಚಿಹ್ನೆಗಳನ್ನು ಪರೀಕ್ಚಿಸಬೇಕು. ಮದ್ಯಬೆದೆಯಲ್ಲಿ ಅಂಡಾಣು ಮೃದುವಾಗಿದ್ದು ಹಿಂಬೆದೆಯಲ್ಲಿ (ಲೇಟ್ ಹೀಟ್) ಬಹಳ ಮೃದುವಾಗಿರುತ್ತದೆ. ಎಮ್ಮೆಗಳಲ್ಲಿ ಅಂಡಾಣು ಇನ್ನೂ ಹೆಚ್ಚು ಮೃದುವಾಗಿರುತ್ತದೆ. ಆದ್ದರಿಂದ ಅಂಡಾಶಯವನ್ನು ಪರೀಕ್ಷಿಸುವಾಗ ಅಂಡಾಣು ಕೋಶ ಒಡೆಯದಂತೆ ಎಚ್ಚರ ವಹಿಸಬೇಕು.

೯. ಕೃತಕ ಗರ್ಭಧಾರಣೆಗೆ ಉಪಯೋಗಿಸುವ ಘನೀಕೃತ ವೀರ್ಯನಳಿಕೆಯನ್ನು ದ್ರವಸಾರಜನಕದ ಜಾಡಿಯಿಂದ ಹೊರತೆಗೆಯುವಾಗ ಎಚ್ಚರ ವಹಿಸಬೇಕು. ಕ್ಯಾನಿಸ್ಟರ್ ಎತ್ತುವಾಗ ವೀರ್ಯನಳಿಕೆಗಳು ಜಾಡಿಯ ಕುತ್ತಿಗೆ ಭಾಗಕ್ಕಿಂತ ಹೆಚ್ಚು ಮೇಲಕ್ಕೆ ಬರದಂತೆ ಎಚ್ಚರ ವಹಿಸಬೇಕು ಹಾಗೂ ಉದ್ದನೆಯ ಚಿಮುಟದಿಂದ ಒಮ್ಮೆ ಒಂದು ವೀರ್ಯನಳಿಕೆಯನ್ನು ತೆಗೆದು ಉಪಯೋಗಿಸಬೇಕು.

೯. (ಎ) ತಾಯಂತೆ ಕರು, ಬೀಜದಂತೆ ವೃಕ್ಷ ಎಂದು ತಾಯಿ, ತಂದೆ, ಅಜ್ಜ, ಅಜ್ಜಿಯರ ಕುಲ, ಗುಣ ನೋಡುಹೋರಿ ಆರಿಸಿ ಪಶು ಸಂತಾನಾಭಿವೃದ್ಧಿಗೆ ಉಪಯೋಗಿಸುತ್ತಿದ್ದೆವು. ಆದರೆ ಇಂದು ತಂತ್ರಜ್ಞಾನ, ವಿಜ್ಞಾನಗಳಿಂದಾಗಿ ನಾವು ಬಹಳ ಮುಮದೆ ಬಂದಿದ್ದೇವೆ. ಈಗ ಹೆಣ್ಣು ಕರು / ಮಣಕಗಳ ಗುಣ ಅಭ್ಯಸಿಸಿ ಹೋರಿಗಳ ಅನುವಂಶಿಕತೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿ ಹೋರಿಯನ್ನು ಆರಿಸುತ್ತೇವೆ. ಇಂತಹ ಹೋರಿಯ ಘನೀಕೃತ ವೀರ್ಯವನ್ನೇ ಪಶು ಸಂತಾನಾಬಿವೃದ್ಧಿಗೆ (progeny tested bull semen) / ತಳಿ ಸುಧಾರಣೆಗೆ ಆರಿಸಿಕೊಂಡು ಉಪಯೋಗಿಸಬೇಕು.

೧೦. ವೀರ್ಯನಳಿಕೆಯಲ್ಲಿರುವ ಘನೀಕೃತ ವೀರ್ಯವನ್ನು ದ್ರವೀಕರಿಸಲು(ಥಾಯಿಂಗ್) ವೀರ್ಯನಳಿಕೆಯನ್ನು ೩೭ ಡಿಗ್ರಿ ಸೆ. (೩೫-೩೮ ಡಿಗ್ರಿ ಸೆ.) ಉಷ್ಣತೆಯ ನೀರಿನಲ್ಲಿ ಅರ್ಧದಿಂದ ೧. ೦ ನಿಮಿಷದವರೆಗೆ ಪೂರ್ಣ ಮುಳುಗಿರುವಂತೆ ಹಾಕಬೇಕು, ಅನಂತರ ತೆಗೆದು ಬಟ್ಟೆಯಲ್ಲಿ ಒರೆಸಬೇಕು. ಇಲ್ಲದಿದ್ದರೆ ನೀರಿನ ಅಂಶ ವೀರ್ಯಕ್ಕೆ ಸೇರಿದರೆ ವೀರ್ಯಾಣು ಗಳಿಗೆ ಅಪಾಯವಾಗುತ್ತದೆ. ಪುನಃಶ್ಚೇತನಗೊಳಿಸಲು ಒಂದೇ ನಳಿಕೆ ಇದ್ದರೂ ಸಹ ಬಿಸಿ ನೀರು ಅರ್ಧದಿಂದ ಒಂದು ಲೀಟರಿನಷ್ಟು ಇರಬೇಕು.

ಘನೀಕೃತ ವೀರ್ಯವನ್ನು ೭೫ ಡಿಗ್ರಿ ಸೆ. . ಉಷ್ಣತೆ ನೀರಿನಲ್ಲಿ ೬ ಸೆಕೆಂಡು, ೨೫ ಡಿಗ್ರಿ ಸೆ. ಉಷ್ಣತೆಯಲ್ಲಿ ಒಂದು ನಿಮಿಷ, ೪-೫ ಡಿಗ್ರಿ ಸೆ. ಬಿಸಿ ನೀರಿನಲ್ಲಿ ಪುನಃಶ್ಚೇತನಗೊಳಿಸಬೇಕು.

೧೧. ದ್ರವೀಕರಿಸಿದ ನಂತರ ವೀರ್ಯನಳಿಕೆಯನ್ನು ಪ್ರಯೋಗಾಲಯದಲ್ಲಿ ಸೀಲು ಮಾಡಿದ ತುದಿಯಲ್ಲಿ ಲಂಬವಾಗಿ ಕತ್ತರಿಸಿ ಆದಷ್ಟು ಜಾಗ್ರತೆಯಾಗಿ ವಿಳಂಬ ಮಾಡದೆ ಉಪಯೋಗಿಸಬೇಕು.

೧೨. ಕೃತಕ ಗರ್ಭಧಾರಣೆ ವೇಳೆಯಲ್ಲಿ ಆಕಳು, ಎಮ್ಮೆಯ ಯೋನಿ ತುಟಿಗಳನ್ನು ೧:೧೦೦೦೦ ಪೊಟ್ಯಾಸಿಯಂ ಪರ್ಮಾಂಗನೇಟ್ ದ್ರವದಿಂದ ತೊಳೆದು ಹತ್ತಿಯಿಂದ ಒರೆಸಬೇಕು ಇದರಿಂದ ಕೃತಕ ಗರ್ಭಧಾರಣಾ ವೇಳೆಯಲ್ಲಾಗವ ಸೋಂಕನ್ನು ನಿಯಂತ್ರಿಸಬಹುದು.

೧೩ ಕೃತಕ ಗರ್ಭಧಾರಣೆಯ ನಂತರ ಗನ್/ ನಳಿಕೆಯನ್ನು ಹಿಂತೆಗೆದುಕೊಳ್ಳುವಾಗ ಅದರ ತುದಿಯು ಚಂದ್ರನಾಡಿ ಮೇಲೆ ಹಾಯ್ದು ಬರುವಂತೆ ತೆಗೆದುಕೊಳ್ಳುವುದು ಉತ್ತಮ ಇದರಿಂದ ರಾಸಿನ ದೇಹದಲ್ಲಿ ಆಕ್ಸಿಟೋಸಿನ್ ಬಿಡುಗಡೆ ಹೊಂದಿ ವೀರ್ಯಾಣುಗಳ ಚಲನೆಗೆ ಸಹಾಯವಾಗುತ್ತದೆ.

೧೪. ಕೃತಕ ಗರ್ಭಧಾರಣೆಯ ನಂತರ ಗನ್/ನಳಿಕೆಗೆ ರಕ್ತ ಅಥವಾ ಕೀವು ಏನಾದರೂ ಹತ್ತಿದೆಯೋ ಎಂಬುದನ್ನು ಪರೀಕ್ಷಿಸಬೇಕು. ಇದರಿಂದ ಗರ್ಭಕೋಶದ ದೋಷ ತಿಳಿಯುತ್ತದೆ. ಕೆಲವೋಮ್ಮೆ ವೀರ್ಯವು ವೀರ್ಯ ನಳಿಕೆ ಮತ್ತು ಕೃತಕ ಗರ್ಭಧಾರಣೆ ನಳಿಕೆಗಳ ಮದ್ಯಭಾಗದಲ್ಲಿ ಸಂಗ್ರಹಿಸಿರುವುದೂ ಸಹ ಕಂಡು ಬರುತ್ತದೆ. ಇಂತಹ ಸಂದರ್ಭದಲ್ಲಿ ಪುನಃ ಕೃತಕ ಗರ್ಭಧಾರಣೆ ಮಾಡಬೇಕು.

೧೫. ಕೃತಕ ಗರ್ಭಧಾರಣೆಯ ನಂತರ ರಾಸಿನ ಹಿಂಭಾಗದ ಮೈಮೇಲೆ ತಣ್ಣೀರನ್ನು ಹಾಕುವುದು ಒಳ್ಳೆಯದು. ಇದರಿಂದ ಹೊಟ್ಟೆಯ ಮಾಂಸಖಂಡಗಳು ಸಂಕುಚಿಸಿ ಗರ್ಭಕೋಶದ ಸ್ನಾಯುಗಳ ಸಂಕುಚಿತಕ್ಕೆ ಕಾರಣವಾಗಿ ವೀರ್ಯಾಣುಗಲ ಚಲನೆಗೆ ಸಹಾಯವಾಗುತ್ತದೆ.

೧೬. ಉಪಯೋಗಿಸಿದ ವೀರ್ಯನಳಿಕೆಯ ವಿವರವನ್ನು ದಾಖಲು ಮಾಡುವುದು ಉತ್ತಮ. ಇದರಿಂದ ಹೋರಿಯ ಗರ್ಭಧಾರಣಾ ಸಾಮರ್ಥ್ಯ ಹಾಗೂ ಅದರ ವಂಶಾವಳಿಗಳಲ್ಲಿ ಉಂಟಾಗುವ ದೋಷಗಳನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.

೧೭. ರಾಸುಗಳನ್ನು ಮುಂಬೆದೆಯಲ್ಲಿ ತಂದಂತಹ ವಾರಸುದಾರರಿಗೆ ಎರಡನೇ ಬಾರಿ ಕೃತಕ ಗರ್ಭಧಾರಣೆಗಾಗಿ ತರಲು ತಿಳಿಸಬೇಕು. ಅಂದರೆ ರಾಸನ್ನು ಮುಂಬೆದೆಯಲ್ಲಿ ಬೆಳಿಗ್ಗೆ ಕೃತಕ ಗರ್ಭಧಾರಣೆ ಮಾಡಿದರೆ ಪುನಃ ಮಧ್ಯಾಹ್ನ ಅಥವಾ ಮರುದಿನ ಬೆಳಿಗ್ಗೆ ಕೃತಕ ಗರ್ಭಧಾರಣೆಗೆ ತರಲು ತಿಳಿಸಬೇಕು.

೧೮. ಕೃತಕ ಗರ್ಭಧಾರಣೆ ಮಾಡಿದ ರಾಸಿನ ವಾರಸುದಾರರಿಗೆ ಮುಂದಿನ ಮೂರು ದಿನಗಳು ಯೋನಿ ತುಟಿಗಳ ಒಳಭಾಗವನ್ನು ಪರೀಕ್ಷಿಸಲು ತಿಳಿಸಬೇಕು. ಒಂದು ವೇಳೆ ಕೀವು ಬಂದರೆ ಅಂತಹ ರಾಸುಗಳಲ್ಲಿ ಗರ್ಭಕೋಶದ ದೋಷವಿದ್ದು ಸೂಕ್ತ ಚಿಕಿತ್ಸೆ ಅಗತ್ಯ.

೧೯. ಕೆಲವೊಂದು ರಾಸುಗಳಲ್ಲಿ ಕೃತಕ ಗರ್ಭಧಾರಣೆ ನಂತರದ ೧ ರಿಂದ ೩ ದಿನಗಳಲ್ಲಿ ಅಲ್ಪ ಪ್ರಮಾಣದ ರಕ್ತಸ್ರಾವ ಕಂಡು ಬರುತ್ತದೆ. ಅಂತಹ ರಾಸುಗಳನ್ನು ೧೦ ದಿನಗಳ ನಂತರ ಅಂಡಾಣುವಿನ ಬಿಡುಗಡೆ ಅಥವಾ ಗರ್ಭಕೋಶದ ದೋಷದ ಬಗ್ಗೆ ಪರೀಕ್ಷೀಸಬೇಕು.

೨೦. ಗರ್ಭಧಾರಣೆ ಮಾಡಿಸಿದ ೧-೨ ದಿನಗಳು ಮತ್ತು ಮರುಬೆದೆಗೆ ಬರಬಹುದಾದ ದಿನ ಅಂದರೆ ೨೧ ನೇ ದಿವಸ ರಾಸುಗಳನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

೨೧. ಬೆದೆಯಲ್ಲಿ ಇದೆ ಎಂದು ಅನೇಕ ಬಾರಿ ಅನೇಕ ದಿನಗಳವರೆಗೆ ಅನಾವಶ್ಯಕವಾಗಿ ಕೃತಕ ಗರ್ಭಧಾರಣೆ ಮಾಡಿಸುವವರಿದ್ದಾರೆ. ಆದರೆ ಇದು ಅಪಾಯಕಾರಿ ಪ್ರಯೋಗ ಎಂಬುದನ್ನು ಮರೆಯಬೇಡಿ.

೨೨. ಕರು ಹಾಕಿದ ೪೫ ದಿನಗಳ ನಂತರದ ಮೊದಲ ಅಥವಾ ಎರಡನೇ ಬೆದೆಯಲ್ಲಿ ಕೃತಕ ಗರ್ಭಧಾರಣೆ ಮಾಡಿಸಿ, ೬೫ ದಿನಗಳೊಳಗೆ ಕೃತಕ ಗರ್ಭಧಾರಣೆಯಲ್ಲಿ ಸಫಲತೆಯ ಶೇಕಡಾವಾರು ಪ್ರಮಾಣ ಅದಿಕವಾಗಿರುತ್ತದೆ.

೨೩. ಕೋಣದ ವೀರ್ಯಾಣುಗಳು ಹೋರಿಯ ವೀರ್ಯಾಣುಗಳಿಗಿಂತ ಸೂಕ್ಷ್ಮವಾಗಿರುತ್ತವೆ. ಆದುದರಿಂದ ಉಪಯೋಗಿಸುವಾಗ ಹೆಚ್ಚಿನ ಜಾಗರೂಕತೆಯ ಅವಶ್ಯವಿರುತ್ತದೆ.

ಬೇಸಿಗೆ ದಿನಗಳಲ್ಲಿ ಬೆದೆಯ ಅವಧಿಯು ಚಿಕ್ಕದಾಗಿರಬಹುದು. ಗರ್ಭಧಾರಣಾ ಶಕ್ತಿಯೂ ಕಡಿಮೆಯಾಗಬಹುದು. ಸೆಪ್ಟೆಂಬರ್, ಅಕ್ಟೋಬರ್ ಕಾಲವು ಕೃತಕ ಗರ್ಭಧಾರಣೆ ಸಫಲತೆಯನ್ನು ಹೆಚ್ಚಿಸುತ್ತದೆ. ಹೆಚ್ಚು ಕೆಂಪಾಗಿ ಕಾಣುವ ಹೊರಳುತ್ತಿರುವ ಮೂರನೇ ಒಳರೆಪ್ಪೆ  ಯೋನಿದ್ವಾರದಲ್ಲಿ ಎದ್ದು ಕಾಣುವ ಲಕ್ಷಣಗಳು, ಮಾತ್ರ ವಿಸರ್ಜನೆಯ ರೀತಿ, ಯೋನಿಯ ತುಟಿಯ ಮೇಲೆ ಕಂಡು ಬರುವ ನೆರಿಗೆಗಳು ಕಾಣದಂತೆ ತುಟಿಗಳು ಉಬ್ಬಿಕೊಳ್ಳುವುದು, ಮುಂತಾದುವು ಎಮ್ಮೆಗಳಲ್ಲಿ ಕಂಡುಬರುವ ವಿಶೇಷ ಲಕ್ಷಣಗಳು.