ವಾಸ್ತವಿಕ ಪ್ರದೇಶದಲ್ಲಿ ಮೇರೆಯನ್ನು ಗುರುತಿಸುವ ಕಾರ್ಯ: ಪ್ರಾಕೃತಿಕ ನಕಾಶೆಯಲ್ಲಿ ಗುರುತು ಮಾಡಿದ ಮೇರೆಗನುಗುಣವಾಗಿ ವಾಸ್ತವಿಕ ಪ್ರದೇಶದಲ್ಲಿ ಚಲಿಸಿ, ಈ ಮಿತಿಯಲ್ಲಿ ಅಡಕವಾಗಿರುವ ಗ್ರಾಮ ಮತ್ತು ಗ್ರಾಮಗಳ ಎಲ್ಲ ಸರ್ವೇ ನಂಬರಗಳು, ಇತರ ಶಾಶ್ವತ ಕುರುಹುಗಳು ಇತ್ಯಾದಿ ವಿವರಗಳನ್ನು ಗ್ರಾಮ ನಕಾಶೆಯಲ್ಲಿ ತೋರಿಸಬೇಕು.

ಮಾಹಿತಿ ಸಂಗ್ರಹ: ಅಭಿವೃದ್ಧಿಪಡಿಸಲೆಂದು ಆರಿಸಿಕೊಂಡ ಜಲಾನಯನ ಪ್ರದೇಶಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಂಗ್ರಹಿಸಬೇಕು. ಯೋಜನೆಯನ್ನು ಸಿದ್ಧಪಡಿಸಲು ಇವು ಸಹಾಯಕವಾಗುತ್ತವೆ. ಕೆಳಗೆ ಕೊಟ್ಟ ವಿಷಯಗಳ ಬಗ್ಗೆ ವಿವರಗಳನ್ನು ಸಂಗ್ರಹಿಸುವುದು ಪ್ರಯೋಜನಕಾರಿಯೆನ್ನಬಹುದು.

೧. ಪ್ರದೇಶಕ್ಕೊಳಪಟ್ಟ ಪೂರ್ಣ ಗ್ರಾಮಗಳ ಮತ್ತು ಭಾಗಶಃ ಬರುವ ಗ್ರಾಮಗಳ ಹೆಸರು ಮತ್ತು ಅವುಗಳ ಒಟ್ಟು ಕ್ಷೇತ್ರ.

೨. ಅರಣ್ಯ ಪ್ರದೇಶ, ಅದರ ಪ್ರಕಾರ (ಕಾದಿಟ್ಟ- ಸರ್ಕಾರದ- ಬೆಟ್ಟ); ಅದರ ಸ್ಥಿತಿ (ದಟ್ಟ -ವಿರಳ); ಅಲ್ಲಿರುವ ಪ್ರಮುಖ ಮರಗಳ ಪ್ರಭೇದಗಳು.

೩. ಗೋಮಾಳದ ಒಟ್ಟು ಪ್ರದೇಶ, ಗಿಡ ಮರಗಳಿಂದ ಕೂಡಿದೆಯೇ? ಮೇಯಲು ಸೂಕ್ತವೆನಿಸುವ ಹುಲ್ಲುಗಳಿವೆಯೇ? ಇತ್ಯಾದಿ.

೪.ಸಾಗುವಳಿಯಾಗುತ್ತಿರುವ ಭೂಮಿಯ ವಿಸ್ತೀರ್ಣ, ಮಳೆಯಾಶ್ರಿತ ಮತ್ತು ನೀರಾವರಿಯ ಪ್ರದೇಶದ ಕ್ಷೇತ್ರ, ನೀರಾವರಿ ಜಲದ ಮೂಲ (ಕೆರೆ, ಬಾವಿ, ನಾಲೆ, ಇತರೆ). ಪ್ರತಿಯೊಂದು ಜಲ ಮೂಲದಿಂದ ನೀರಾವರಿಯಾಗುತ್ತಿರುವ ಕ್ಷೇತ್ರ.

೫. ಸಾಗುವಳಿಯಲ್ಲಿರುವ ಪ್ರದೇಶದಲ್ಲಿ ಈಗ ಬೆಳೆಯಲಾಗುತ್ತಿರುವ ಬೆಳೆಗಳು ಮತ್ತು ಅವುಗಳ ವಿಸ್ತೀರ್ಣ, ಮಳೆಯಾಶ್ರಿತ ಮತ್ತು ನೀರಾವರಿಯಲ್ಲಿ ಬೆಳೆಯುವ ವಾರ್ಷಿಕ ಬೆಳೆಗಳು ಮತ್ತು ಅವುಗಳ ವಿಸ್ತೀರ್ಣ.

೬. ಸಮಾನಾತ್ಮಕ ಭೂಮಿ ಇದೆಯೇ? ಇದ್ದರೆ ಅದು ಲವಣಯುತ/ ವಿನಿಮಯ ಸೋಡಿಯಂ ಅಧಿಕವಿರುವ/ ಜೌಗವಿರುವ/ ಜೇಕು ಕರಿಕೆ ಇತ್ಯಾದಿ ಕಳೆಗಳಿಂದ ಪೀಡಿತ ಭೂಮಿಯೇ? ಪ್ರತಿಯೊಂದು ಬಗೆಯ ಪ್ರದೇಶದ  ವಿಸ್ತೀರ್ಣ.

೭. ಭೂ ಸವಕಳಿಗೊಂಡ ಪ್ರದೇಶದ ವಿಸ್ತೀರ್ಣ, ಸವಕಳಿಯ ವಿವರ, ಕೊರಕಲು ಬಿದ್ದಿದ್ದರೆ ಅದರ ವಿವರ ( ಕೊರಕಲಿನ ಆಳ, ಉದ್ದ ಇತ್ಯಾದಿ).

೮. ಸುಧಾರಣೆಗೆ ಅಳವಡದ ಪ್ರದೇಶದ ವಿಸ್ತೀರ್ಣ ಮತ್ತು ಅದರ ವಿವರ (ಕಲ್ಲು ಬಂಡೆಗಳು, ಕಲ್ಲಿನ ಗಣಿ, ಗ್ರಾಮಠಾಣೆ ಇತ್ಯಾದಿ).

೯. ಈಗಾಗಲೇ ಅಭಿವೃದ್ಧಿ ಕಾರ್ಯಕ್ರಮಕ್ಕೆ ಒಳಗಾದ ಪ್ರದೇಶದ ವಿವರ ( ಯಾವ ಯೋಜನೆಯಡಿ ಅಭಿವೃದ್ಧಿ ಕಾರ್ಯವು ಕೈಗೆತ್ತಿಕೊಳ್ಳಲಾಗಿದೆ, ಪೂರ್ಣಗೊಂಡಿದೆಯೇ, ಕಾರ್ಯವು ನಡೆದಿದೆಯೇ ಇತ್ಯಾದಿ ವಿವರಗಳು)

೧೦. ಪಶುಪಾಲನೆ: ಸಾಕುತ್ತಿರುವ ವಿವಿಧ ಪ್ರಾಣಿಗಳು ( ಆಕಳು, ಎಮ್ಮೆ, ಕುರಿ, ಕೋಳಿ, ಹಂದಿ, ಮೊಲ, ಮೀನು, ಸೀಗಡಿ ಇತ್ಯಾದಿ), ತಳಿ, ಸಂಖ್ಯೆ ಇತ್ಯಾದಿಗಳ ವಿವರಗಳು.

೧೧. ಇತರ ಮೂಲಭೂತ ವಿವರಗಳು

 • ಹವಾಮಾನ- ಮಳೆ ಉಷ್ಣತೆ, ಆದ್ರತೆ, ಗಾಳಿ ಇತ್ಯಾದಿ ವಿವರಗಳು
 • ಅಂತರ್ಜಲದ ಬಗ್ಗೆ ತಿಳಿದಿರುವ ವಿವರಗಳು
 • ಹರಿಯುವ ನೀರನ ಪ್ರಮಾಣ, ಕೊಚ್ಚಿ ಹೋಗುವ ಮಣ್ಣಿನ ನಷ್ಟ
 • ಮಣ್ಣಿನ ಗುಣ ಧರ್ಮಗಳು.

೧೨. ಮಾನವ ಸಂಪನ್ಮೂಲ: ಜನಸಂಖ್ಯಾ ಬೆಳವಣಿಗೆಯ ಪ್ರಗತಿ, ಜನ ಸಾಂದ್ರತೆ ವಯಸ್ಸಿನ ಮತ್ತು ಲಿಂಗದ ಪ್ರಕಾರ ಜನರ ವಿಭಾಗ, ಸಾಕ್ಷರತೆ ವಿವಿಧ ವೃತ್ತಿಗಳಲ್ಲಿರುವ ಜನಸಂಖ್ಯೆ ಇತ್ಯಾದಿಗಳ ವಿವರಗಳು.

೧೩. ಲಭ್ಯವಿರುವ ಸವಲತ್ತುಗಳ ವಿವರ- ರಸ್ತೆ, ವಾಹನ ಸೌಕರ್ಯ, ಮಾರುಕಟ್ಟೆಗಳು, ಆರೋಗ್ಯ ಕೇಂದ್ರಗಳು, ವಿದ್ಯಾ ಸಂಸ್ಥೆಗಳು, ಸಹಕಾರಿ ಸಂಘಗಳು ಇತ್ಯಾದಿ.

೧೪. ಯೋಜನೆಯನ್ನು ಸಿದ್ಧಪಡಿಸಲು ಪ್ರಯೋಜನವಾಗಬಲ್ಲ ಇತರ ವಿಷಯಗಳೇನಾದರೂ ಇದ್ದರೆ ಅವುಗಳ ವಿವರ.

ಮೇಲೆ ಸೂಚಿಸಿದಂತೆ ಸಂಗ್ರಹಿಸಿದ ವಿವರಗಳ ಸಹಾಯದಿಂದ, ಜಲಾನಯನ ಪ್ರದೇಶದ ಅಭಿವೃದ್ಧಿಗೆ ಅವಶ್ಯವಿರುವ ವಿಸ್ತ್ರತ ಯೋಜನೆಯನ್ನು ಸಿದ್ಧಪಡಿಸಬೇಕು, ಮುಂದಿನ ವಿಷಯಗಳು ಯೋಜನೆಯಲ್ಲಿ ಅಡಕವಾಗಿರುವಂತೆ ನೋಡಿಕೊಳ್ಳಬೇಕು.

೧. ಜಲಾನಯನ ಪ್ರದೇಶದಲ್ಲಿರುವ ಫಲಾನುಭವಿಗಳ ಭೂ ಪ್ರದೇಶದಲ್ಲಿ ಕೈಗೊಳ್ಳಬಹುದಾದ ಭೂ ಸಂರಕ್ಷಣೆಯ ಮತ್ತು ಸಮಸ್ಯಾತ್ಮಕ ಭೂಮಿಯ ಸುಧಾರಣೆಗೆ ಅನುಸರಿಸಬೇಕಾದ ವಿವರಗಳು.

೨. ಸಾರ್ವಜನಿಕರ ಭೂ ಪ್ರದೇಶಗಳಲ್ಲಿ ಅನುಸರಿಸಬೇಕಾದ ಸಂರಕ್ಷಣೆಯ ಕ್ರಮಗಳು.

೩. ಕೃಷಿಕರ ಭೂಮಿಗಳಲ್ಲಿ, ಸಾರ್ವಜನಿಕ ಭೂ ಪ್ರದೇಶಗಳಲ್ಲಿ, ಹೊಳೆ- ಹಳ್ಳಗಳ ಪ್ರವಾಹಗಳಲ್ಲಿ ನೀರಿನ ವೇಗವನ್ನು ನಿಯಂತ್ರಿಸುವ, ಪ್ರವಾಹದ ದಿಕ್ಕನ್ನು ಬದಲಿಸುವ, ಜಲ ಸಂಗ್ರಹವನ್ನು ಮಾಡುವ ಕಾರ್ಯಕ್ರಮಗಳು.

೪. ಹೆಚ್ಚಾದ ನೀರು ಹರಿದು ಹೋಗಲು ಬೇಕಾಗುವ ಕಾಲುವೆಗಳ ನಿರ್ಮಾಣಕ್ಕೆ ಅಥವಾ ಹೆಚ್ಚಾದ ನೀರಿನ ಸಂಗ್ರಹಕ್ಕೆ ಅವಶ್ಯವಿರುವ ಭೂ ಪ್ರದೇಶವನ್ನು ವಶಪಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಬೇಕಲ್ಲದೇ ಆ ಭೂಮಿಗೆ ಪ್ರತಿಯಾಗಿ ಕೊಡಬೇಕಾದ ಪರಿಹಾರ ಹಣದ ಬಗ್ಗೆಯೂ ವ್ಯವಸ್ಥೆ; ಒಂದೊಮ್ಮೆ ನಿರೀಕ್ಷಿಸಿದ ಪ್ರದೇಶವು ಸಿಕ್ಕದಿದ್ದರೆ ಪರ್ಯಾಯ ವ್ಯವಸ್ಥೆಗಳು.

೫. ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರ ಆ ಪ್ರದೇಶದ ಪರಿಸರದ ಮೇಲೆ ಆಗಬಹುದಾದ ಪರಿಣಾಮಗಳ ವಿವರಗಳು.

೬. ರೈತರ ಭೂಮಿಯಲ್ಲಿ, ಸಾರ್ವಜನಿಕರ ಪ್ರದೇಶಗಳಲ್ಲಿ ಮತ್ತು ಹೊಳೆ- ಹಳ್ಳಗಳಲ್ಲಿ ಕೈಗೊಂಡ ಕಾರ್ಯಗಳ ಮೇಲ್ವಿಚಾರಣೆಯ ವ್ಯವಸ್ಥೆಗಳ ವಿವರಗಳು.

೭. ಜಲಾನಯನ ಪ್ರದೇಶವನ್ನು ಯೋಜನೆಯಂತೆ ಅಭಿವೃದ್ಧಿ ಪಡಿಸಿದ ನಂತರ ದೊರೆಯಬಹುದಾದ ಲಾಭಗಳು.

೮. ಯೋಜನೆಯ ಅನುಷ್ಠಾನಕ್ಕೆ ಬೇಕಾಗುವ ಹಣದ ಒಟ್ಟು ಮೊತ್ತ ಮತ್ತು ಇದರಲ್ಲಿ ಫಲಾನುಭವಿಗಳ, ಸ್ಥಾನಿಕ ಸಂಘ ಸಂಸ್ಥೆಗಳ, ರಾಜ್ಯ ಮತ್ತು ಕೇಂದ್ರ ಸರಕಾರಗಳ ಪಾಲು.

ವಿಸ್ತೃತವಾದ ಯೋಜನೆಯನ್ನು ಸಿದ್ಧಪಡಿಸಲು ಸುಸಂಘಟಿತರಾಗಿ ಮುಂದೆ ಬಂದ ಸಹಕಾರಿ ಮತ್ತು ಇತರ ಸಂಘ- ಸಂಸ್ಥೆಗಳಿಗೆ, ಕೃಷಿ ಇಲಾಖೆಯ ಭೂ ಸಂರಕ್ಷಣಾ ವಿಭಾಗದವರು ತಾಂತ್ರಿಕ ಸಲಹೆಗಳನ್ನು ನೀಡಬೇಕು. ಈ ಕಾರ್ಯದಲ್ಲಿ ತಾಲ್ಲೂಕು ಮಟ್ಟದಲ್ಲಿರುವ ಕೃಷಿ, ಕೃಷಿ ಎಂಜನಿಯರಿಂಗ್‌, ಸಿವಿಲ್‌ಎಂಜನಿಯರಿಂಗ್‌, ಅರಣ್ಯ, ಮೀನುಗಾರಿಕೆ, ರೇಷ್ಮೆ ಉತ್ಪಾದನೆ ಮುಂತಾದ ಅಭಿವೃದ್ಧಿ ಇಲಾಖೆಗಳಿಗೆ ಸೇರಿದ ಅಧಿಕಾರಿಗಳಲ್ಲದೇ ಅರ್ಥಶಾಸ್ತ್ರಜ್ಞರು, ಪರಿಸರ ವಿಜ್ಞಾನಿಗಳು ಮತ್ತು ಸಮಾಜ ವಿಜ್ಞಾನಿಗಳು ಸೇರಿ ಸುಸಂಬದ್ಧ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ತಾಂತ್ರಿಕ ಸಲಹೆಗಳನ್ನು ಕೊಡಬೇಕು. ಇವರೆಲ್ಲರ ರಚನಾತ್ಮಕ ಸಲಹೆಗಳನ್ನು ಅಳವಡಿಸಿಕೊಂಡು ಯೋಜನೆಯನ್ನು ಸಿದ್ಧಪಡಿಸಿದಾಗ ಮಾತ್ರ ಅದೊಂದು ಪ್ರಶಸ್ತ, ಪ್ರಯೋಜನಕಾರಿ ಮತ್ತು ವಾಸ್ತವ ಯೋಜನೆಯಾಗಬಲ್ಲದು.

ಮೇಲಿನ ಸೂಚನೆಗಳನ್ನು ಅನುಸರಿಸಿ ಸಿದ್ಧಪಡಿಸಿದ ಯೋಜನೆಯನ್ನು ಸಂಬಂಧಿಸಿದ ಸಂಘ, ಸಂಸ್ಥೆಗಳು ಆಳವಾಗಿ ಪರಿಶೀಲಿಸಿ ಅವಶ್ಯವೆನಿಸಿದಲ್ಲಿ ಬದಲಾವಣೆಗಳನ್ನು ಮಾಡಬೇಕು. ಯೋಜನೆ ಕಾರ್ಯಗತವಾಗುತ್ತಿರುವಾಗ ಪರಿಸ್ಥಿತಿಯಲ್ಲಿ ಅನಿರೀಕ್ಷಿತ ಬದಲಾವಣೆಗಳೇನಾದರೂ ಉಂಟಾದರೆ, ಯೋಜನೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಲು ಯೋಜನೆಯಲ್ಲಿ ಅವಕಾಶವಿರುವಂತೆ ನೋಡಿಕೊಳ್ಳಬೇಕು. ಸಿದ್ಧಪಡಿಸಿದ ಯೋಜನೆಯು ಸಕಲ ರೀತಿಗಳಿಂದ ಸರಿಯೆನಿಸಿದ ನಂತರ ಅದನ್ನು ತಾಂತ್ರಿಕ ಒಪ್ಪಿಗೆ ಮತ್ತು ನೆರವಿಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಬೇಕು.

ಭೂ ಸಂರಕ್ಷಣೆಯ ಕಾರ್ಯಗಳು: ಯೋಜನೆಗೆ ಒಪ್ಪಿಗೆ ಮತ್ತು ಆರ್ಥಿಕ ನೆರವು ದೊರೆತ ನಂತರ, ಯೋಜನೆಯ ಮೇರೆಗೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಕಾರ್ಯವು ಮುಂದಿನ ಮಹತ್ವದ ಹೆಜ್ಜೆ.

ಅಧ್ಯಾಯ ೩ ರಲ್ಲಿ ವಿವರಿಸಿದಂತೆ ಭೂ ಪ್ರದೇಶವನ್ನು ಎಂಟು ವರ್ಗಗಳಾಗಿ ವರ್ಗೀಕರಸಲಾಗಿದೆ. ವರ್ಗ ೧ಕ್ಕೆ ಸೇರಿದ ಭೂಮಿಗೆ ಭೂ ಸಂರಕ್ಷಣೆಯ ಯಾವುದೇ ಕ್ರಮಗಳ ಅವಶ್ಯಕತೆ ಇರುವುದಿಲ್ಲ. ಆದರೆ, ೨,೩ ಮತ್ತು ೪ ನೇ ವರ್ಗಗಳಿಗೆ ಸೇರಿದ ಭೂ ಪ್ರದೇಶಗಳಲ್ಲಿ ಅವಶ್ಯವಿರುವ, ಭೂ ಸಂರಕ್ಷಣೆಯ ಕ್ರಮಗಳನ್ನು ಕೈಗೊಳ್ಳಲೇ ಬೇಕಾಗುತ್ತದೆ. ಮುಂದಿನ ಅಂದರೆ ೫, ೬, ೭, ಮತ್ತು ೮ ನೆಯ ವರ್ಗಗಳ ಭೂ ಪ್ರದೇಶವು ಬೇಸಾಯಕ್ಕೆ ಯೋಗ್ಯವಾಗಿರುವುದಿಲ್ಲ. ಇಂತಹ ಭೂಮಿಗಳಲ್ಲಿ, ಅವುಗಳ ಸಾಮರ್ಥ್ಯದ ಮೇಲಿಂದ ಹುಲ್ಲುಗಾವಲಿಗೆ, ಮರಗಳನ್ನು ಬೆಳೆಸಲು, ಕಾಡು ಪ್ರಾಣಿಗಳನ್ನು ಸಾಕಲು, ಮನೋರಂಜನೆಯ ಸ್ಥಳವಾಗಿ ಪರಿವರ್ತಿಸಲು, ನೀರು ಪೂರೈಕೆಯ ಟ್ಯಾಂಕರುಗಳನ್ನು ನಿರ್ಮಿಸಲು ಇತ್ಯಾದಿ ಕ್ರಮ ಕೈಗೊಳ್ಳಬಹುದು.

ಭೂ ಸಂರಕ್ಷಣಾ ಕ್ರಮಗಳ ವಿವರಗಳು ಅಧ್ಯಾಯ ೨ ರಲ್ಲಿ ವಿವರಿಸಲಾಗಿದೆ. ಈ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಾಗ ಇಡೀ ಜಲಾನಯನ ಪ್ರದೇಶವನ್ನು ಪರಿಗಣಿಸಿ, ಯೋಜನೆಯು ಸಮಗ್ರ ರೀತಿಯಲ್ಲಿ ಕಾರ್ಯಗತವಾಗುವಂತೆ ನೋಡಿಕೊಳ್ಳಬೇಕಲ್ಲದೇ ಕೆಳಗಿನ ಸಂಗತಿಗಳನ್ನು ಗಮನಿಸಬೇಕು.

 • ಭೂಮಿಯಲ್ಲಿ ಕರಿಕೆ, ಜೇಕು ಮುಂತಾದ ಕಳೆಗಳಿದ್ದರೆ ಅದನ್ನು ನಿರ್ಮೂಲನೆಗೊಳಿಸಿದ ನಂತರವೇ ಬದುಗಳನ್ನು ನಿರ್ಮಿಸಬೇಕು.
 • ಪಕ್ಕದಲ್ಲಿರುವ ಗುಡ್ಡಗಳಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದು ಬೇಸಾಯದ ಭೂಮಿಯನ್ನು ಪ್ರವೇಶಿಸಿ, ಭೂಮಿಯ ಸವಕಳಿಯನ್ನು ಉಂಟು ಮಾಡುವಂತಿದ್ದರೆ, ಆ ನೀರಿನ ದಿಕ್ಕನ್ನು ಬದಲಿಸಿ ಅದು ಸುರಕ್ಷಿತವಾಗಿ ಹರಿದು ನೈಸರ್ಗಿಕವಾಗಿ ಬಸಿಗಾಲುವೆಯನ್ನು ಸೇರುವಂತೆ ಕ್ರಮಗಳನ್ನು ಕೈಗೊಳ್ಳಬೇಕು.
 • ಬದುಗಳನ್ನು ನಿರ್ಮಿಸುವುದಲ್ಲದೇ ಆ ಬದುಗಳಿಗೆ ಯಾವುದೇ ರೀತಿಯ ಅಪಾಯವು ತಟ್ಟದೇ ಅವು ಸದಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು.
 • ಬದುಗಳ ಒಂದು ಇಲ್ಲವೇ ಎರಡೂ ಪಾಶ್ವರ್ಗಗಳ ಮೇಲೆ ಖಸ್‌ಹುಲ್ಲಿನಂಥ ಸಸ್ಯಗಳನ್ನು ಬೆಳೆಸಿ ಬದುಗಳು ಒಡೆಯದಂತೆ ಮಾಡಬಹುದು. ಪರ್ಯಾಯವಾಗಿ ಸುಬಾಬುಲ್ಲನ್ನು ಬದುವಿನ ಮೇಲೆ ದಟ್ಟವಾಗಿ ಬಿತ್ತಿ, ಗಿಡಗಳು ಬಹಳ ಎತ್ತರವಾಗಿ ಬೆಳೆಯದಂತೆ ಒಂದು ನಿರ್ದಿಷ್ಟ ಎತ್ತರಕ್ಕೆ ಕತ್ತರಿಸುತ್ತಿದ್ದರೆ, ಬದುಗಳು ಸುರಕ್ಷಿತವಾಗಿರುತ್ತವೆ. ಸುಬಾಬುಲ್ಲನ್ನು ಈ ರೀತಿ ಬೆಳೆಯುವುದಾದರೆ ಬದುಗಳ ಆಕಾರವನ್ನು ಸಣ್ಣದಾಗಿಸಬಹುದು.

ಜಲ ನಿಯಂತ್ರಣದ ಮತ್ತು ಜಲ ಸಂಗ್ರಹದ ರಚನೆಗಳು: ಎತ್ತರದ ಭೂ ಭಾಗದಿಂದ, ಜಲಾನಯನ ಪ್ರದೇಶದೊಳಗೆ ರಭಸದಿಂದ ಹರಿಯುವ ನೀರನ್ನು ಸಮರ್ಥವಾಗಿ ನಿಯಂತ್ರಿಸದಿದ್ದರೆ ಆ ನೀರು ತಾನು ಹರಿದು ಹೋದಲ್ಲೆಲ್ಲ ಕೊರಕಲುಗಳನ್ನುಂಟು ಮಾಡಬಹುದು. ಭೂ ಪ್ರದೇಶವನ್ನು ಜಲಾವೃತವನ್ನಾಗಿಸಬಹುದು, ತನ್ನಲ್ಲಿರುವ ನಿಷ್ಪ್ರಯೋಜಕ ಹೂಳಿನಿಂದ ಫಲವತ್ತಾದ ಭೂಮಿಯನ್ನು ಫಲಹೀನವನ್ನಾಗಿ ಮಾಡಬಹುದು, ಇಲ್ಲವೇ ಹಳ್ಳದ ದಂಡೆಯನ್ನು ಕೊರೆದುಕೊಂಡು ಮುಂದೆ ಸಾಗಬಹುದು. ಈ ರೀತಿಯಿಂದ ಆಗಬಹುದಾದ ಹಾನಿಯನ್ನು ಪ್ರಾರಂಭದಲ್ಲಿಯೇ ನಿಯಂತ್ರಿಸದಿದ್ದರೆ, ಜಲಾನಯನ ಪ್ರದೇಶದಲ್ಲಿ ಕೈಗೊಂಡ ಎಲ್ಲ ಬಗೆಯ ಅಭಿವೃದ್ಧಿ ಕಾರ್ಯಗಳು ವ್ಯರ್ಥವಾಗಿ ಇಡೀ ಪ್ರದೇಶವು ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸುವ ಪೂರ್ವದಲ್ಲಿದ್ದ ಸ್ಥಿತಿಯನ್ನು ಅಥವಾ ಅದಕ್ಕಿಂತಲೂ ಹೀನ ಸ್ಥಿತಿಯನ್ನು ತಲುಪಬಹುದು. ಈ ಹಾನಿಯನ್ನು ತಪ್ಪಿಸಲು ಅಥವಾ ಕಡಿಮೆ ಮಾಡಲು ಕೆಳಗಿನ ಕ್ರಮಗಳನ್ನು ಅನುಸರಿಸುವುದು ಉತ್ತಮ.

ಸಾಮೂಹಿಕ ಕೆರೆಯ ನಿರ್ಮಾಣ: ಜಲಾನಯನ ಪ್ರದೇಶದಲ್ಲಿಯೇ ಕೆರೆಯನ್ನು ನಿರ್ಮಿಸಬೇಕು. ಅವಶ್ಯವೆನಿಸಿದರೆ ಇದಕ್ಕೆ ಬೇಕಾಗುವ ಭೂಮಿಯನ್ನು ವಶಪಡಿಸಿಕೊಂಡು ಕೆರೆಯನ್ನು ಸಾರ್ವಜನಿಕ ಸ್ವತ್ತನ್ನಾಗಿ ಮಾಡಬೇಕಲ್ಲದೇ, ಈ ಕೆರೆಯನ್ನು ಸುಸ್ಥಿತಿಯಲ್ಲಿಡಲು ಮತ್ತು ನೀರಿನ ಸದುಪಯೋಗವಾಗುವಂತೆ ಮಾಡಲು ಸೂಕ್ತ ವ್ಯವಸ್ಥೆಯಿರುವಂತೆ ನೋಡಿಕೊಳ್ಳಬೇಕು.

ಕೆರೆಯ ನಿರ್ಮಾಣವು ಜಲಾನಯನ ಪ್ರದೇಶದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮದ ಒಂದು ಭಾಗವೆಂದೇ ಪರಿಗಣಿಸಿ, ಅದನ್ನು ಯೋಜನೆಯಲ್ಲಿ ಸೇರ್ಪಡಿಸಬೇಕು. ಕೆರೆಯಲ್ಲಿ ಸಂಗ್ರಹವಾದ ನೀರು ಹಲವು ರೀತಿಯಲ್ಲಿ ಉಪಯೋಗವಾಗಬಲ್ಲದು. ನೀರಾವರಿ, ಜನರ ಬಳಕೆ, ಸಾಕು ಪ್ರಾಣಿಗಳ ಉಪಯೋಗ, ಮೀನುಗಾರಿಕೆ, ಮನೋರಂಜನೆ ಇತ್ಯಾದಿಗಳಿಗೆ ಈ ನೀರನ್ನು ಉಪಯೋಗಿಸಬಹುದು. ಕೆರೆಗಳಲ್ಲಿ ಸಂಗ್ರಹಗೊಂಡ ನೀರಿನಿಂದ ಸುತ್ತಲಿನ ಪ್ರದೇಶದ ಅಂತರ್ಜಲದ ಮೇಲೂ ಒಳ್ಳೆಯ ಪರಿಣಾಮವಾಗಬಹುದು. ಕೆಲವು ವರ್ಷಗಳ ಹಿಂದೆ ಡೆನ್ಮಾರ್ಕ್‌ದೇಶದ ಆರ್ಥಿಕ ನೆರವಿನಿಂದ ಕೆಲವು ಪ್ರದೇಶಗಳಲ್ಲಿ ಕೆರೆಗಳು ನಿರ್ಮಾಣಗೊಂಡವು. ನಂತರದ ವರ್ಷಗಳಲ್ಲಿ ಈ ಕಾರ್ಯವು ಸ್ಥಗಿತಗೊಂಡಿದೆಯನ್ನಬಹುದು.

ಹೊಂಡಗಳು: ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಬಹುಕಾಲದ ಹಿಂದೆ ನಿರ್ಮಿಸಿದ ಹೊಂಡಗಳು ಮನೆಯ ಬಳಕೆಗೆ ನೀರನ್ನು ಒದಗಿಸಿ, ಮೀನುಗಾರಿಕೆಗೆ ಆಸ್ಪದ ಮಾಡಿಕೊಡುತ್ತಿದ್ದ ವಿಷಯವನ್ನು ಈ ಹಿಂದೆ ಪ್ರಸ್ತಾಪಿಸಲಾಗಿದೆ. ಅದೇ ರೀತಿ, ರೈತರ ಹೊಲದಲ್ಲಿಯೇ ಸರಿಯಾದ ಸ್ಥಳವನ್ನು ಆರಿಸಿಕೊಂಡು ಕೃಷಿ ಹೊಂಡಗಳನ್ನು ನಿರ್ಮಿಸಿದರೆ ಅಲ್ಪ ಮತ್ತು ಮಧ್ಯಮ ಪ್ರಮಾಣದಲ್ಲಿ ಮಳೆ ಬೀಳುವ ಪ್ರದೇಶಗಳಲ್ಲಿ ಇವು ಪ್ರಯೋಜನಕಾರಿ ಎನಿಸಿಬಲ್ಲವು. ನೆಲವನ್ನು ಅಗೆದು ಹೊಂಡವನ್ನು ನಿರ್ಮಿಸಬಹುದು ಇಲ್ಲವೇ ಮಣ್ಣಿನಿಂದ ಎತ್ತರವಾದ ಬದುಗಳನ್ನು ಹಾಕಿ ಹೊಂಡವನ್ನು ತಯಾರಿಸಬಹುದು. ಆದರೆ ಬದುಗಳು ಮಳೆ ಹನಿಗಳ ಹೊಡೆತಕ್ಕೆ ಅಥವಾ ಹರಿಯವ ನೀರಿನ ಸೆಳೆತಕ್ಕೆ ಸಿಕ್ಕಿ ಒಡೆಯುವುದರಿಂದ, ಅಗೆದು ನಿರ್ಮಿಸಿದ ಹೊಂಡವೇ ಹೆಚ್ಚು ಪ್ರಯೋಜನಕಾರಿಯೆನ್ನಬಹುದು. ಹೊಂಡದ ನಿರ್ಮಾಣದ ಬಗ್ಗೆ ಹಲವು ವಿವರಗಳನ್ನು ಅಧ್ಯಾಯ ೨ ರಲ್ಲಿ ವಿವರಿಸಲಾಗಿದೆ.

ಬದುಗಳನ್ನು ನಿರ್ಮಿಸುವಾಗ ಪಕ್ಕದಲ್ಲಿರುವ ಮೇಲ್ಮಣ್ಣನ್ನು ಅಗೆದು ಬದುಗಳಿಗೆ ಉಪಯೋಗಿಸುವುದು ವಾಡಿಕೆ. ಇದರ ಬದಲು ಹೊಂಡವನ್ನು ನಿರ್ಮಿಸುವಾಗ ಅಗೆದು ತೆಗೆದಾಗ ಹೊರಬರುವ ಮಣ್ಣನ್ನು ಬದುಗಳ ನಿರ್ಮಾಣಕ್ಕೆ ಬಳಸಿದರೆ ಬದುಗಳ ಪಕ್ಕದಲ್ಲಿರುವ ಫಲವತ್ತಾದ ಮಣ್ಣು ವ್ಯರ್ಥವಾಗದಂತೆ ಮಾಡಲು ಸಾಧ್ಯವಿರುವುದಲ್ಲದೇ ಹೊಂಡಕ್ಕಾಗಿ ಅಗೆದು ತೆಗೆದ ಕೆಳಗಿರುವ ಮಣ್ಣು ಬೇಸಾಯಕ್ಕಿಂತ ಬದುಗಳ ನಿರ್ಮಾಣಕ್ಕೆ ಹೆಚ್ಚು ಪ್ರಯೋಜನಕಾರಿ ಎನ್ನಬಹುದು. ಆದರೆ, ಹೊಂಡವಿರುವ ಸ್ಥಳದಿಂದ ಬದುಗಳನ್ನು ನಿರ್ಮಿಸುವ ಸ್ಥಳಕ್ಕೆ ಮಣ್ಣನ್ನು ಸಾಗಿಸಲು ಹೆಚ್ಚಿನ ಶ್ರಮ ಮತ್ತು ಹಣ ಬೇಕಾಗುತ್ತದೆ.

ಸಣ್ಣ ಅಣೆಕಟ್ಟುಗಳು ಮತ್ತು ಕಿಂಡಿಗಳಿರುವ ಒಡ್ಡುಗಳು: ಹಳ್ಳ ಮತ್ತು ನದಿಗಳ ಪ್ರವಾಹಕ್ಕೆ ಅಡ್ಡವಾಗಿ ಸಣ್ಣ ಅಣೆಕಟ್ಟುಗಳನ್ನಾಗಲಿ, ದ್ವಾರಗಳಿರುವ ( ಕಿಂಡಿಗಳಿರುವ) ಒಡ್ಡುಗಳನ್ನಾಗಲಿ ನಿರ್ಮಿಸಿ, ನೀರನ್ನು ಸಂಗ್ರಹಿಸಬಹುದು. ಹೀಗೆ ಮಾಡಿದಾಗ, ನದಿ ಅಥವಾ ಹಳ್ಳದ ಪಾತ್ರದಲ್ಲಿಯೇ ನೀರು ಸಂಗ್ರಹವಾಗುವುದರಿಂದ ಈ ಕಾರ್ಯಕ್ಕೆ ಪ್ರತ್ಯೇಕ ಸ್ಥಳವು ಬೇಕಾಗುವುದಿಲ್ಲ. ಈ ಜಲ ಸಂಗ್ರಹದಲ್ಲಿಯ ನೀರನ್ನು ಹಳ್ಳ ಮತ್ತು ನದಿಗಳ ದಂಡೆವರೆಗಿರುವ ಪ್ರದೇಶಕ್ಕೆ ನೀರಾವರಿಗಾಗಿ ಬಳಸಬಹುದು. ಕಡಿಮೆ ಮತ್ತು ಮಧ್ಯಮ ಪ್ರಮಾಣದಲ್ಲಿ ಮಳೆಯಾಗುವ ಪ್ರದೇಶಗಳಲ್ಲಿ ಹಳ್ಳ ಅಥವಾ ನದಿ ಗುಂಟ ಪ್ರತಿ ೨೦೦ ರಿಂದ ೩೦೦ ಮೀ. ಅಂತರಗಳಲ್ಲಿ ಈ ರೀತಿಯ ಜಲ ಸಂಗ್ರಹವನ್ನು ಮಾಡಲು ಸೂಕ್ತ ಸ್ಥಳಗಳು ದೊರೆಯಬಲ್ಲವು.

ಮಹಾರಾಷ್ಟ್ರ ರಾಜ್ಯವು ಈ ದಿಶೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಉತ್ತರ ಕರ್ನಾಟಕದ ಚಿಕ್ಕ ಪಡಸಲಗಿ ಎಂಬಲ್ಲಿ ಕೃಷ್ಣಾ ನದಿಗೆ ಅಡ್ಡವಾಗಿ ನಿರ್ಮಿಸಿದ ಅಣೆಕಟ್ಟು ಇಂತಹ ಪ್ರಯತ್ನಕ್ಕೆ ಒಂದು ಉತ್ತಮ ಉದಾಹರಣೆ ಎನ್ನಬಹುದು. ರೈತರೇ ಸ್ವ ಪ್ರೇರಣೆಯಿಂದ ಮುಂದೆ ಬಂದು, ಆರ್ಥಿಕ ಹೊಣೆಗಾರಿಕೆಯನ್ನು ವಹಿಸಿಕೊಂಡು ನಿರ್ಮಿಸಿದ ಈ ಅಣೆಕಟ್ಟು ಇತರರಿಗೆ ಅನುಕರಣೀಯ ಕಾರ್ಯವಾಗಬಲ್ಲದು.

ಸಂಗ್ರಹಗೊಂಡ ನೀರಿನ ಬಳಕೆ: ಕೃಷಿ ಹೊಂಡದಲ್ಲಿ ಸಂಗ್ರಹವಾದ ನೀರನ್ನು ಸಂಬಂಧಿಸಿದ ರೈತರು ತಮ್ಮ ಇಚ್ಛೆ ಮತ್ತು ಅನುಕೂಲತೆಗಳನುಗುಣವಾಗಿ ಉಪಯೋಗಿಸಿಕೊಳ್ಳಬಹುದು. ಮಡಿಗಳಲ್ಲಿ ಸಸಿಗಳನ್ನು ತಯಾರಿಸಲು, ತರಕಾರಿ ಮತ್ತು ಕೆಲವು ಹಣ್ಣಿನ ಗಿಡಗಳನ್ನು ಬೆಳೆಯಲು ಈ ನೀರನ್ನು ಬಳಸಬಹುದು. ಇದರ ಬದಲು ವಾರ್ಷಿಕ ಬೆಳೆಗಳಿಗೆ ಒಂದೆರಡು ಬಾರಿ ಬಳಸಿದರೆ ಅವುಗಳ ಇಳುವರಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹೊಂಡದಲ್ಲಿ ನೀರಿನ ಸಂಗ್ರಹವು ಕಡಿಮೆ ಇದ್ದರೆ ನೀರನ್ನು ಮೇಲೆತ್ತಿ ತಂದು ಜಾರಿನಿಂದ ಸಸ್ಯಗಳಿಗೆ ನೀರನ್ನುಣ್ಣಿಸಬಹುದು. ಇಲ್ಲವೇ ಪಿಕೋಟಾದಂತಹ ನೀರನ್ನು ಮೇಲೆತ್ತುವ ಸಾಧನದಿಂದ ನೀರಾವರಿಯನ್ನು ಮಾಡಬಹುದು. ನೀರು ದೊಡ್ಡ ಪ್ರಮಾಣದಲ್ಲಿ ಹೊಂಡದಲ್ಲಿ ಸಂಗ್ರಹವಾಗಿದ್ದರೆ ಒಂದು ಅಶ್ವ ಶಕ್ತಿಯ ಪಂಪನ್ನು ಉಪಯೋಗಿಸಿ ಬೆಳೆಗೆ ನೀರನ್ನೊದಿಗಸಬಹುದು.

ಕೆರೆ, ಅಣೆಕಟ್ಟು, ದ್ವಾರವುಳ್ಳ ಒಡ್ಡುಗಳು ಇತ್ಯಾದಿಗಳಲ್ಲಿ ಸಂಗ್ರಹಗೊಂಡ ನೀರನ ಬಳಕೆಗೆ, ಸೂಕ್ತವಾದ ವ್ಯವಸ್ಥೆಯನ್ನು ಮಾಡುವುದು ಅತ್ಯವಶ್ಯ. ರಾಜ್ಯದ ಭೂ- ಜಲ ಸಂರಕ್ಷಣೆ ವಿಭಾಗವು ಇದರ ಪ್ರಮುಖ ಹೊಣೆಯನ್ನು ವಹಿಸಿಕೊಂಡು, ಗ್ರಾಮ ಪಂಚಾಯತಿ ಅಥವಾ ನೀರನ ಬಳಕೆಗೆಂದೇ ನಿರ್ಮಿತವಾದ ” ನೀರು ಬಳಕೆದಾರರ ಸಂಘ” ದ ಮೂಲಕ ನೀರನ್ನು ಸರಿಯಾಗಿ ಹಂಚುವ ವ್ಯವಸ್ಥೆಯನ್ನು ಮಾಡಬೇಕು. ಈ ಕಾರ್ಯಕ್ಕಾಗಿ ಸರ್ವಸಮ್ಮತವಾದ ನಿಯಮಾವಳಿಯನ್ನು ರಚಿಸಿ, ಅದಕ್ಕೆ ಅನುಗುಣವಾಗಿಯೇ ನೀರಿನ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು.

ಸಂಗ್ರಹಗೊಂಡ ನೀರಿನ ಪರ್ಯಾಯ ಬಳಕೆ: ಕೆರೆ, ಅಣೆಕಟ್ಟು ಇತ್ಯಾದಿಗಳಲ್ಲಿ ಸಂಗ್ರಹವಾದ ನೀರಿನ ಪರ್ಯಾಯ ಬಳಕೆಯನ್ನೂ ಮಾಡಬಹುದು. ಉದಾಹರಣೆಗೆ ಮೀನುಗಾರಿಕೆ ಇಲಾಖೆಯವರು ಈ ನೀರಿನಲ್ಲಿ ಮೀನು, ಸೀಗಡಿ ಮುಂತಾದ ಪ್ರಯೋಜನಕಾರಿ ಪ್ರಾಣಿಗಳನ್ನು ಸಾಕಿ, ಸೂಕ್ತ ಬೆಲೆಗೆ ಮಾರಬಹುದು. ಅರಣ್ಯ ಇಲಾಖೆಯವರು ಈ ನೀರಿನಲ್ಲಿ ವನ್ಯಜೀವಿಗಳನ್ನು ಸಾಕಬಹುದು; ಯುವ ಯೋಜನೆ ಇಲಾಖೆಯು ಇಲ್ಲಿ ಈಜುವ ಮತ್ತು ಜಲ ವಿಹಾರಗಳ ವ್ಯವಸ್ಥೆಯನ್ನು ಮಾಡಬಹುದು ಇಲ್ಲವೇ ಗ್ರಾಮೀಣ ಅಭಿವೃದ್ಧಿ ಇಲಾಖೆಯು, ಅಗಸರಿಗೆ ಮತ್ತು ಇತರರಿಗೆ ಬಟ್ಟೆ ಒಗೆಯಲು ಇಲ್ಲವೇ ದನಕರುಗಳು ಮತ್ತು ಜನರಿಗೆ ಕುಡಿಯಲು ನೀರು ದೊರೆಯುವ ವ್ಯವಸ್ಥೆಯನ್ನು ಮಾಡಬಹುದು.

ಗಿಡ ಮರಗಳನ್ನು ನೆಡುವ ಕಾರ್ಯ: ವಾರ್ಷಿಕ ಬೆಳೆಗಳಿಗೆ ನಿರುಪಯೋಗಿ ಎನಿಸಿದ ಭೂಮಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ, ಕಾಲುವೆಗಳನ್ನು ತೋಡಿ, ಜಲ ಮತ್ತು ನೆಲದ ಸಂರಕ್ಷಣೆಯನ್ನು ಮಾಡಲು ಸಾಧ್ಯವಿದೆ. ಇಂತಹ ಪ್ರದೇಶಗಳಲ್ಲಿ ಹಣ್ಣು ಹಂಪಲುಗಳನ್ನು ಕೊಡುವ, ಉರುವಲು ಇಮಾರತಿನ ಕಟ್ಟಿಗೆಯನ್ನು ಒದಗಿಸಬಲ್ಲ ಮರಗಳನ್ನು ನೆಟ್ಟರೆ ಕೆಲವು ವರ್ಷಗಳ ನಂತರ ಉತ್ತಮ ಆದಾಯವನ್ನು ಪಡೆಯಬಹುದು. ಈ ಬಹುವಾರ್ಷಿಕ ಬೆಳೆಗಳನ್ನು ಆರಂಭದ ದಿನಗಳಲ್ಲಿ ಲಕ್ಷ್ಯ ಪೂರ್ವಕ ಬೆಳೆಸಿದರೆ, ಮುಂದಿನ ವರ್ಷಗಳಲ್ಲಿ ಇವು ವಿಶೇಷ ಆರೈಕೆಯಿಲ್ಲದೇ ಬೆಳೆಯುತ್ತವೆ.

ಸರ್ಕಾರಿ ಭೂಮಿಯಲ್ಲಿ, ಗುಡ್ಡಗಳ ಇಳಿಜಾರಿನಲ್ಲಿ, ನದಿ ಮತ್ತು ಹಳ್ಳಗಳ ದಂಡೆಗುಂಟ ಮತ್ತು ಕೆರೆಗಳ ಸುತ್ತ ಪ್ರಯೋಜನಕಾರಿ ಗಿಡ- ಮರಗಳನ್ನು ಬೆಳೆಸುವುದು ಉತ್ತಮ. ಮರಗಳ ಮಧ್ಯದಲ್ಲಿ ಹುಲ್ಲು ಮತ್ತು ಬೇಳೆಕಾಳು ವರ್ಗಕ್ಕೆ ಸೇರಿದ ಸಸ್ಯಗಳನ್ನು ಬೆಳೆಸಿದರೆ ಇವುಗಳನ್ನು ಪಶುಗಳ ಮೇವಿಗಾಗಿ ಉಪಯೋಗಿಸಬಹುದು. ಸರ್ಕಾರಿ ಭೂಮಿಯಲ್ಲಿ ನೆಟ್ಟ ಗಿಡ ಮರಗಳ ಮತ್ತು ಮೇವಿನ ಬೆಳೆಯನ್ನು ಸರಿಯಾಗಿ ವಿನಿಯೋಗಿಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಸೂಕ್ತ ವ್ಯವಸ್ಥೆಯನ್ನು ಅವಶ್ಯಕವಾಗಿ ಮಾಡಬೇಕು. ಇಲ್ಲವಾದರೆ ಸಸ್ಯಗಳು ಸರಿಯಾಗಿ ಬೆಳೆಯದೇ, ಬೆಳೆದ ಸಸ್ಯಗಳ ಅಪವ್ಯಯವಾಗುವ ಸಂಭವವೇ ಹೆಚ್ಚಾಗುತ್ತದೆ.

ಸ್ವಂತ ಭೂಮಿಯ ಸುತ್ತಲೂ ಹಣ್ಣಿನ, ಉರವಲದ ಮತ್ತು ಇತರ ಪ್ರಯೋಜನಕಾರಿ ಮರಗಳನ್ನು ಬೆಳೆಸಲು ಪ್ರೋತ್ಸಾಹವನ್ನೀಯಬೇಕು. ಕನಿಷ್ಠ ಉತ್ಪಾದನಾ ಸಾಮರ್ಥ್ಯವಿರುವ ಭೂಮಿಯಲ್ಲಿಯೂ ಸುಬಾಲಾಲ್‌, ಅಕೇಸಿಯಾ ಇತ್ಯಾದಿ ಮರಗಳನ್ನು ಬೆಳೆದು ಅವುಗಳ ಪಾಲನೆಯನ್ನು ಮಾಡಬಹುದು.

ಸಮಸ್ಯಾತ್ಮಕ ಭೂಮಿಯ ಸುಧಾರಣೆ:  ಜವಳು ಭೂಮಿ, ಲವಣಯುತ ಇಲ್ಲವೇ ವಿನಿಮಿಯ ಸೋಡಿಯಂ ಅಧಿಕವಾಗಿರುವ ಭೂಮಿ, ಕರಿಕೆ ಜೇಕುಗಳಂಥ ಸಮಸ್ಯಾತ್ಮಕ ಕಳೆಗಳಿಂದ ಆವೃತವಾದ ಭೂಮಿ ಇತ್ಯಾದಿಗಳ ಸುಧಾರಣೆಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳದಿದ್ದರೆ ಈ ಸಮಸ್ಯೆಗಳು ಪಕ್ಕದಲ್ಲಿರುವ ಪ್ರದೇಶವನ್ನು ವ್ಯಾಪಿಸುವ ಸಾಧ್ಯತೆ ಇದೆ. ಆದ್ದರಿಂದ ಪರಿಹಾರದ ಯೋಗ್ಯ ಕ್ರಮಗಳನ್ನು, ಜಲಾನಯನ ಪ್ರದೇಶದ ಅಭಿವೃದ್ಧಿಯ ಯೋಜನೆಯಲ್ಲಿಯೇ ಸೇರಿಸಿ, ಆದ್ಯತೆ ಮೇಲೆ ಈ ಕಾರ್ಯಗಳನ್ನು ಮಾಡಿ ಮುಗಿಸಬೇಕು. ಹೆಚ್ಚಿನ ವಿವರಗಳು ಅಧ್ಯಾಯ ೫ ರಲ್ಲಿವೆ.

ಆರ್ಥಿಕ ಹೊಣೆ: ಜಲಾನಯನ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಯು ಫಲದಾಯಕವಾಗಿದೆಯಾದರೂ, ಈ ಕಾರ್ಯಕ್ಕೆ ಬೇಕಾಗುವ ಹಣದ ಮೊತ್ತವು ಬಹು ದೊಡ್ಡದಾಗಿರುತ್ತದೆ. ಆದ್ದರಿಂದ ಈ ಆರ್ಥಿಕ ಹೊಣೆಯ ಬಗ್ಗೆ ಸರಿಯಾದ ವ್ಯವಸ್ಥೆಯು ಇರಬೇಕಾಗುತ್ತದೆ. ಈ ದಿಶೆಯಲ್ಲಿ ಕೆಳಗಿನ ಸಲಹೆಗಳನ್ನು ಪರಿಗಣಿಸಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು: ಜಲಾನಯನ ಪ್ರದೇಶದ ಅಭಿವೃದ್ಧಿಯು, ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಒಂದು ಮಹತ್ವದ ಅಂಗ. ಇದು ಸಂಬಂಧಿಸಿದ, ಕ್ಷೇತ್ರದಲ್ಲಿಯ ಉತ್ಪಾದನೆಯನ್ನು ಅಧಿಕಗೊಳಿಸಿ ಆ ಭಾಗದಲ್ಲಿ ಉದ್ಯೋಗವಕಾಶಗಳನ್ನು ವರ್ಧಿಸುವ ಬಹು ಮುಖ್ಯ ಕಾರ್ಯಕ್ರಮವೆನ್ನಬಹುದು. ಆದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಬೇಕಾಗುವ ಖರ್ಚಿನ ಬಹು ಭಾಗವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ವಹಿಸಿಕೊಳ್ಳುವುದು ಸಮಂಜಸವೆನಿಸೀತು. ಈ ಅಭಿವೃದ್ಧಿ ಕಾರ್ಯಗಳ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಆಗಿರುವ ಒಪ್ಪಂದದ ಪ್ರಕಾರ ಖರ್ಚಿನ ಹೊಣೆಯನ್ನು ತಮ್ಮಲ್ಲಿ ಹಂಚಿಕೊಳ್ಳಬಹುದು.

ಸರ್ಕಾರಿ ಇಲಾಖೆಗಳು: ಭೂ ಸಂರಕ್ಷಣಾ ಇಲಾಖಾ ಸಿಬ್ಬಂದಿ ವೇತನ, ಭತ್ಯೆ, ಇತರ ಖರ್ಚು ಮುಂತಾದ ಹಣದ ಜವಾಬ್ದಾರಿಯನ್ನು ಆ ಇಲಾಖೆಯೇ ವಹಿಸಿಕೊಳ್ಳಬಹುದು. ಅದರಂತೆಯೇ ಮೀನುಗಾರಿಕೆ, ವನ್ಯ ಜೀವಿಗಳ ಪೋಷಣೆ, ಮನೋರಂಜನೆ ಇತ್ಯಾದಿಗಳಿಗೆ ತಗಲುವ ಖರ್ಚನ್ನು ಸಂಬಂಧಿಸಿದ ಇಲಾಖೆಗಳೇ ವಹಿಸಿಕೊಂಡು ಈ ಚಟುವಟಿಕೆಗಳಿಂದ ಬರುವ ಆದಾಯವನ್ನು ಇಲಾಖೆಗಳಿಗೆ ಜಮಾ ಮಾಡಬಹುದು.

ಸ್ಥಾನಿಕರ ಕೊಡುಗೆ ಮತ್ತು ವಿದೇಶೀ ಸಹಾಯ: ಜಲಾನಯನ ಪ್ರದೇಶದ ಅಭಿವೃದ್ಧಿಯಿಂದ ಪರಿಸರದ ಮೇಲಾಗುವ ಉತ್ತಮ ಪರಿಣಾಮಗಳಿಂದ ಪ್ರೇರಿತರಾಗಿ ಕೆಲವು ಸ್ಥಾನಿಕ ಸಂಘಟನೆಗಳು. ಈ ಸತ್ಕಾರ್ಯಕ್ಕೆಂದು ದಾನ ರೂಪದಲ್ಲಿ

ಹಣವನ್ನು ಕೊಡುವ ಸಾಧ್ಯತೆ ಇದೆ. ಅದರಂತೆಯೇ ಕೆಲವು ವಿದೇಶಗಳೊಡನೆ ಕೇಂದ್ರ ಸರ್ಕಾರವು ಮಾಡಿಕೊಂಡ ಒಪ್ಪಂದದ ಪ್ರಕಾರ ಈ ಕಾರ್ಯಕ್ರಮಕ್ಕೆ ಹಣವು ದೊರೆಯುತ್ತದೆ.

ಫಲಾನುಭವಿಗಳು: ರೈತರ ಭೂಮಿಯಲ್ಲಿ ಕೈಗೊಂಡ ಬದುಗಳ ನಿರ್ಮಾಣ, ಕೃಷಿ ಹೊಂಡಗಳ ರಚನೆ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಖರ್ಚಾದ ಹಣವನ್ನು ಸಂಬಂಧಿಸಿದ ರೈತರಿಂದ ಸುಲಭ ಕಂತುಗಳಲ್ಲಿ ಮರಳಿ ಪಡೆಯಬಹುದು. ಅದರಂತೆಯೇ, ಕೆರೆ, ಅಣೆಕಟ್ಟು ಕಿಂಡಿಗಳ ಒಡ್ಡು ಮುಂತಾದ ಸಾಮೂಹಿಕ ರಚನೆಗಳಿಗೆ ಆ ಪ್ರದೇಶದಲ್ಲಿರುವ ಫಲಾನುಭವಿಗಳು ಕನಿಷ್ಠ ಮೊತ್ತವನ್ನು ಸಂಗ್ರಹಿಸಿ ಕೊಟ್ಟರೆ ಮಾತ್ರ ಈ ಕಾರ್ಯಗಳನ್ನು ಆರಂಭಿಸಲಾಗುವುದೆಂದು ಘೋಷಿಸಬೇಕು. ಆರಂಭದಲ್ಲಿ ಇಂತಹ ಕಾರ್ಯಗಳಿಗೆ, ಅಪೇಕ್ಷಿತ ಪ್ರತಿಕ್ರಿಯೆಯು ಬಾರದದ್ದಿರೂ ಈ ಕಾರ್ಯಗಳಿಂದ ದೊರೆಯುವ ಲಾಭವೆಷ್ಟಂಬುದನ್ನು ಮನದಟ್ಟು ಮಾಡಿಕೊಟ್ಟರೆ ಜನರು ಮುಂದೆ ಬಂದು ತಮ್ಮ ಪಾಲಿನ ಹಣವನ್ನು ಕೊಡಲೊಪ್ಪುತ್ತಾರೆ.

ಅಭಿವೃದ್ಧಿ ಕಾರ್ಯಗಳ ಸಂರಕ್ಷಣೆ: ಜಲಾನಯನ ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಾಗ ಮತ್ತು ಕಾರ್ಯಗಳನ್ನು ಕೈಗೊಳ್ಳುವಾಗ ಇದ್ದಾಗ ಉತ್ಸಾಹ, ಆಸಕ್ತಿ ಮತ್ತು ಶ್ರದ್ಧೆಗಳು ಅವುಗಳ ಶಾಶ್ವತ ಸಂರಕ್ಷಣೆಯಲ್ಲಿಯೂ ಇರಬೇಕೆಂಬುದನ್ನು ಮರೆಯಬಾರದು. ಈ ಸಂಗತಿಯನ್ನು ಮನದಲ್ಲಿಟ್ಟುಕೊಂಡು ಸರ್ಕಾರಿ ಇಲಾಖೆಗಳು, ಸ್ಥಾನಿಕ ಸಂಘ, ಸಂಸ್ಥೆಗಳು ಮತ್ತು ಫಲಾನುಭವಿಗಳು ಸದಾ ಜಾಗೃತರಾಗಿರಬೇಕು. ಅದರಲ್ಲಿಯೂ ಕೈಕೊಂಡ ಎಲ್ಲ ಅಭಿವೃದ್ಧಿ ಕಾರ್ಯಗಳು ಸದಾ ಸುಸ್ಥಿಯಲ್ಲಿರುವಂತೆ ಮಾಡಲು ಫಲಾನುಭವಿಗಳೇ ಹೆಚ್ಚು ಆಸ್ತೆಯನ್ನು ವಹಿಸಬೇಕು. ಅವರು ತಮ್ಮ ಪಾಲಿನ ಕರ್ತವ್ಯಗಳನ್ನು ಮಾಡುವದಲ್ಲದೇ ಸಂಘ- ಸಂಸ್ಥೆಗಳಿಂದ ಮತ್ತು ಸರ್ಕಾರಿ ಇಲಾಖೆಗಳಿಂದ ಆಗಬೇಕಾದ ಕೆಲಸ ಕಾರ್ಯಗಳನ್ನು ಬಿಡದೇ ಮಾಡಿಸಿಕೊಳ್ಳಬೇಕು.

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಲಾನಯನ ಪ್ರದೇಶವನ್ನು ಮೇಲಿಂದ ಮೇಲೆ ಸಂದರ್ಶಿಸಿ ಸಂಬಂಧಿಸಿದ ಫಲಾನುಭವಿಗಳಿಗೆ ಮತ್ತು ಸಂಘ, ಸಂಸ್ಥೆಗಳಿಗೆ ಮಾರ್ಗದರ್ಶನವನ್ನು ಮಾಡುತ್ತಿರಬೇಕು. ಸೂಕ್ತ ಸಮಯದಲ್ಲಿ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದಿದ್ದಾಗ, ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅಪಾಯವು ತಟ್ಟವ ಸಂದರ್ಭವಿದ್ದರೆ ತಾವೇ ಆ ಸಂರಕ್ಷಣಾ  ಕಾರ್ಯವನ್ನು ಕೈಗೊಂಡು ಅದರ ಖರ್ಚಿನ ಮೊತ್ತವನ್ನು ಸಂಬಂಧಿಸಿದ ಫಲಾನುಭವಿಗಳಿಂದ ಪಡೆಯಬೇಕು. ಹೀಗೆ ಮಾಡಿದಾಗಲೇ ಅಭಿವೃದ್ಧಿ ಕಾರ್ಯಗಳ ಫಲವು ಆ ಪ್ರದೇಶದ ಜನರಿಗೆ ನಿರಂತರವಾಗಿ ದೊರೆತು ಅಭಿವೃದ್ಧಿಯ ಸಲುವಾಗಿ ವ್ಯಯವಾದ ಶ್ರಮ ಮತ್ತು ಹಣ ಸಾರ್ಥಕವೆನಿಸುತ್ತವೆ.

ತಾಂತ್ರಿಕ ಪ್ರಾವಿಣ್ಯತೆ ಮತ್ತು ತಾಂತ್ರಿಕ ಸಹಾಯ: ಕೃಷಿ ಇಲಾಖೆಯ ಭೂ ಸಂರಕ್ಷಣಾ ವಿಭಾಗವು ಜಲಾನಯನ ಪ್ರದೇಶಗಳಲ್ಲಿ ಕೆಳಗಿನ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

 • ಜಲಾನಯನ ಪ್ರದೇಶವನ್ನು ಗುರುತಿಸುವ ಕಾರ್ಯ
 • ಜಲಾನಯನ ಪ್ರದೇಶದ ವಿಸ್ತೃತ ವೀಕ್ಷಣೆ
 • ಕೈಗೊಳ್ಳಬೇಕೆಂದಿರುವ ಅಭಿವೃದ್ಧಿ ಕಾರ್ಯಗಳ ಸುಧೀರ್ಘ ಯೋಜನೆಯ ರಚನೆ.
 • ಯೋಜನೆಗೆ ಅನುಮತಿ ದೊರೆತೊಡನೆ ಇತರ ಇಲಾಖೆಗಳ, ಸ್ಥಾನಿಕ ಯೋಜನೆ ಮತ್ತು ಫಲಾನುಭವಿಗಳ ಸಹಾಯ ಹಾಗೂ ಸಹಕಾರಗಳಿಂದ ಯೋಜನೆಯನ್ನು ಕಾರ್ಯಗತ ಮಾಡುವುದು.

ಮೇಲಿನ ಕಾರ್ಯಗಳು ಅತಿ ಮಹತ್ವವಾದವುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದಲ್ಲದೇ, ಈ ಕಾರ್ಯಗಳಿಗೆ ಅಪಾರ ಹಣವನ್ನು ತೊಡಗಿಸಬೇಕಾಗುತ್ತದೆಯೆಂಬುದು ತಿಳಿದಿರುವ ವಿಷಯವೇ. ಆದ್ದರಿಂದ, ಯಾವುದೇ ಹಂತದಲ್ಲಿ ಅಜ್ಞಾನದಿಂದಲೋ ಲೋಪದೋಷಗಳೇನಾದರೂ ಸಂಭವಿಸಿದರೆ, ಅದರಿಂದ ಇಡೀ ಕಾರ್ಯಕ್ರಮದ ಮೇಲೆ ದುಷ್ಪರಿಣಾಮವುಂಟಾಗಿ, ಸರ್ಕಾರಿ ಇಲಾಖೆಗಳು ಜನರಲ್ಲಿ ಅಪಖ್ಯಾತಿಗೆ ಗುರಿಯಾಗಬೇಕಾಗುತ್ತವೆ.

ಆದ್ದರಿಂದ ಈ ಕಾರ್ಯಕ್ಕೆ ಸಿಬ್ಬಂದಿಯನ್ನು ಆರಿಸುವಾಗ ಕೆಳಗಿನ ಸಂಗತಿಗಳನ್ನು ಗಮನಿಸಬೇಕು:

 • ಕಲಿತ, ನುರಿತ, ಪೂರ್ಣ ಪರಿಜ್ಞಾನವುಳ್ಳ, ಶ್ರದ್ಧಾ ಮನೋಭಾವದ ಸಿಬ್ಬಂದಿ ವರ್ಗವನ್ನೇ ನೇಮಿಸಬೇಕು.
 • ಕಾಲಕಾಲಕ್ಕೆ ತರಬೇತಿ ನೀಡಿ ಹೊಸ ವಿಷಯಗಳನ್ನು ಅವರಿಗೆ ಕಲಿಸಬೇಕು
 • ಜಲಾನಯನ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ಹೊಸ ಸಂಶೋಧನೆಯ ಪರಿಣಾಮಗಳನ್ನೊಳಗೊಂಡ ಸಾಹಿತ್ಯವನ್ನು ರಚಿಸಿ ಅವರಿಗೆ ಒದಗಿಸಬೇಕು.

ಸಂಶೋಧನೆ: ಇಂದು ಲಭ್ಯವಿರುವ ಪರಿಜ್ಞಾನವೇ ಕೊನೆಯದೆಂದೇನಲ್ಲ. ಸಂಶೋಧನೆಯು ಮುಂದುವರೆದಂತೆಲ್ಲ ಹೊಸ ವಿಷಯಗಳು ಬೆಳಕಿಗೆ ಬರುತ್ತವೆ. ಆದ್ದರಿಂದ ಜಲಾನಯನ ಪ್ರದೇಶದ ಅಭಿವೃದ್ಧಿಯ ಬಗ್ಗೆಯೂ ಸಂಶೋಧನೆಗಳು ನಡೆಯಲೇಬೇಕು. ಭಾರತ ಕೃಷಿ ಅನುಸಂಧಾನ ಪರಿಷತ್‌ಸ್ಥಾಪಿಸಿದ ಭೂ ಸಂರಕ್ಷಣಾ ಸಂಶೋಧನೆ, ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳು ಈ ಹೊಣೆಯನ್ನು ಹೊರಬೇಕು. ಅದರಂತೆಯೇ, ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ವಿವಿಧ ಇಲಾಖೆಗಳ ತಜ್ಞರು ಜಲಾನಯನ ಪ್ರದೇಶದಲ್ಲಿ ಕಾರ್ಯ ನಿರತರಾಗಿರುವ ಅಧಿಕಾರಗಳೊಡನೆ ಸಂಪರ್ಕವನ್ನಿಟ್ಟುಕೊಂಡು, ಅಲ್ಲಿರುವ ಸಮಸ್ಯೆಗಳನ್ನು ಅರಿತು, ಅವುಗಳ ಪರಿಹಾರಕ್ಕೆ ಹೊಸ ವಿಧಾನಗಳನ್ನು ಕಂಡು ಹಿಡಿಯಲು ಸಂಶೋಧನೆಗಳನ್ನು ನಡೆಸಬೇಕು. ಈ ಬಗೆಯ ಕಾರ್ಯಕ್ರಮಗಳಿಂದ ಹೊರಬರುವ ಸಂಗತಿಗಳು ಅಭಿವೃದ್ಧಿಯ ಕಾರ್ಯಗಳ ಗುಣಮಟ್ಟವನ್ನು ಉತ್ತಮಪಡಿಸಲು ಸಹಾಯಕವಾಗುತ್ತವೆ.