ಕಳೆದ ಸುಮಾರು ಮೂರು ದಶಕಗಳಿಂದೀಚೆಗೆ, ಜಲಾನಯನ ಪ್ರದೇಶಗಳ ನಿವರ್ಹಣೆಗೆ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತಿದೆ. ಇದೊಂದು ಸೂಕ್ತ ಬೆಳವಣಿಗೆಯೆಂದೇ ಹೇಳಬಹುದು. ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ವಿವರಗಳು ಈ ಅಧ್ಯಾಯದಲ್ಲಿವೆ.

ವ್ಯಾಖ್ಯೆ ಮತ್ತು ವ್ಯಾಪ್ತಿ

ನದಿ, ಹಳ್ಳ, ಕೆರೆ, ಸರೋವರ ಮುಂತಾದ ಜಲ ಸಂಗ್ರಹಗಳಿಗೆ ಬಂದು ಸೇರುವ ನೀರು ಯಾವ ನಿರ್ಧಿಷ್ಟ ಬೌಗೋಳಿಕ ಪ್ರದೇಶದಿಂದ ಹರಿದು ಬರುತ್ತದೆಯೋ ಆ ಪ್ರದೇಶವನ್ನು ಜಲ ಸಂಗ್ರಹದ ಜಲಾನಯನ ಪ್ರದೇಶವೆಂದು ಕರೆಯುತ್ತಾರೆ. ನದಿಗೆ ಬಲು ದೂರದ ಪ್ರದೇಶದಿಂದ ನೀರು ಹರಿದು ಬರುತ್ತದೆ. ಈ ಭೂ ಪ್ರದೇಶವು ಹಲವು ಜಿಲ್ಲೆಗಳಿಗೆ ಸೇರಿರಬಹುದು ಇಲ್ಲವೇ ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಸೇರಿರಬಹುದು. ಆದರೂ ಯಾವ ಯಾವ ಪ್ರದೇಶಗಳಿಂದ ನೀರು ಹರಿದು ಬಂದು ನದಿಯನ್ನು ಸೇರುತ್ತದೆಯೋ ಅವೆಲ್ಲ ಸಮಗ್ರವಾಗಿ ಆ ನದಿಯ ಜಲಾನಯನ ಪ್ರದೇಶವೆನಿಸುತ್ತದೆ.

ಪ್ರತಿ ನದಿಯ ಜಲಾನಯನ ಪ್ರದೇಶವನ್ನು ಸಮರ್ಥವಾಗಿ ನಿರ್ವಹಿಸಬೇಕು. ಇದು ಅವಶ್ಯ ಮತ್ತು ಅಪಕ್ಷೇಣಿಯ. ಆದರೆ ನದಿಯ ಜಲಾನಯನ ಪ್ರದೇಶವು ಬಹು ವಿಶಾಲವಾಗಿರುತ್ತದಲ್ಲದೇ ಅದರ ಅಭಿವೃದ್ಧಿಯ ವಿಸ್ತ್ರತ ಯೋಜನೆಯನ್ನು ಕಾರ್ಯಗತ ಮಾಡುವ ಕೆಲಸವೂ ಬಹು ಕ್ಲಿಷ್ಟವೆನಿಸುವುದಲ್ಲದೇ ಅದನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯವೂ ಬೇಕಾಗುತ್ತದೆ. ಆದ್ದರಿಂದ ಯೋಜನೆಯನ್ನು ಸಿದ್ಧಪಡಿಸಲು ಮತ್ತು ಕಾರ್ಯಗತವಾಗಿಸಲು ಅನುಕೂಲವಾಗುವಂತಹ ಸಣ್ಣ ಜಲಾನಯನ ಪ್ರದೇಶಗಳನ್ನು ಗುರುತಿಸಿಕೊಂಡು, ವಿಸ್ತ್ರತವಾದ ಯೋಜನೆಯನ್ನು ತಯಾರಿಸಿ ಸಮರ್ಪಣಾ ಭಾವನೆಯಿಂದ ೪-೫ ವರ್ಷದ ಅವಧಿಯೊಳಗೆ ಪೂರ್ಣಗೊಳಿಸಿದರೆ ವಾಸ್ತವಿಕವೆನಿಸೀತು ಮತ್ತು ಫಲಾನುಭವಿಗಳಿಗೆ ಪ್ರಯೋಜನಕಾರಿಯೂ ಆದೀತು.

ನಿರ್ವಹಣೆಗೆ ಅನುಕೂಲವೆನಿಸುವ ಜಲಾನಯನ ಪ್ರದೇಶವನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಸುಮಾರು ೨೦೦೦ ದಿಂದ ೪೦೦೦ ಹೆಕ್ಟೇರು ಕ್ಷೇತ್ರವಿರುವ ಜಲಾನಯನ ಪ್ರದೇಶಗಳನ್ನು ಆರಿಸಿಕೊಂಡರೆ ಅನುಕೂಲವೆಂದು ಅನುಭವದಿಂದ ಕಂಡು ಬಂದಿದೆ. ಆದರೆ ಅನಿವಾರ್ಯತೆಯಿಂದ ಇಲ್ಲವೇ ನಿರ್ದಿಷ್ಟ ಕಾರಣಗಳಿಗಾಗಿ ಮೇಲೆ ಸೂಚಿಸಿರಿವುದಕ್ಕಿಂತ ಸಣ್ಣ ಆಕಾರದ ಜಲಾನಯನ ಪ್ರದೇಶಗಳನ್ನು ಆರಿಸಿಕೊಂಡು ಅಭಿವೃದ್ಧಿಪಡಿಸಬೇಕಾಗುತ್ತದೆ. ಆಕಾರದ ಮೇಲಿಂದ ಇವುಗಳಿಗೆ ಸಣ್ಣ, ಅತಿ ಸಣ್ಣ ಮತ್ತು ಸೂಕ್ಷ್ಮ ಜಲಾನಯನ ಪ್ರದೇಶಗಳೆಂದು ಕರೆಯುವ ರೂಢಿ ಇದೆ.

ಜಲಾನಯನ ಪ್ರದೇಶದ ಅಭಿವೃದ್ಧಿಯ ಉದ್ದೇಶಗಳು

ಜಲಾನಯನ ಪ್ರದೇಶದಲ್ಲಿ ವಾಸಿಸುವ ಎಲ್ಲ ಜನರ ಶಾಶ್ವತವಾದ, ಸರ್ವಾಂಗೀಣ ಪ್ರಗತಿ ಮತ್ತು ಸಮೃದ್ಧಿಗಳೇ ಆ ಪ್ರದೇಶದ ಅಭಿವೃದ್ಧಿಯ ಮೂಲ ಉದ್ದೇಶ. ಈ ಉದ್ದೇಶದ ಸಾಧನೆಯಲ್ಲಿ, ಸಕಲ ಜೀವಿಗಳಿಗೆ ಆಧಾರವಾದ ಜಲ ಮತ್ತು ನೆಲಗಳ ಸಂರಕ್ಷಣೆಗೆ ಬಹು ಮುಖ್ಯ ಪಾತ್ರವಿದೆ. ಒಂದು ವಿಷಯವನ್ನು ಈ ಸಂದರ್ಭದಲ್ಲಿ ಗಮನಿಸಬೇಕು. ಜಲಾನಯನ ಪ್ರದೇಶದ ಅಭಿವೃದ್ಧಿಗಾಗಿ ಯೋಜನೆಯನ್ನು ಸಿದ್ಧಪಡಿಸುವಾಗ ಮತ್ತು ಯೋಜನೆಯನ್ನು ಕಾರ್ಯಗತವನ್ನಾಗಿಸುವಾಗ ಆ ಪ್ರದೇಶದಲ್ಲಿ ವಾಸಿಸುವ ಜನರು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಅಭಿವೃದ್ಧಿಯು ಸಾಧ್ಯವಾದೀತು ಮತ್ತು ಪಟ್ಟ ಶ್ರಮವೂ ಸಾರ್ಥಕವೆಸೀತು. ಈ ಮೇಲಿನವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಜಲಾನಯನ ಪ್ರದೇಶದ ಅಭಿವೃದ್ಧಿಯ ಉದ್ದೇಶಗಳನ್ನು ಮುಂದಿನಂತೆ ವಿಸ್ತೃತಗೊಳಿಸಬಹುದು.

೧. ಹರಿದು ಬರುವ ನೀರನ್ನು ತೆಡೆದು ಇಲ್ಲವೇ ಅದರ ವೇಗವನ್ನು ತಗ್ಗಿಸಿ, ಸಾಧ್ಯವಾದಷ್ಟು ನೀರು ನೆಲದಲ್ಲಿಯೇ ಇಂಗುವಂತೆ ಮಾಡುವುದು.

೨. ಮಣ್ಣಿನಲ್ಲಿ ಪ್ರವೇಶಿಸದೇ, ಉಳಿದ ನೀರನ್ನು ಒಂದೆಡೆ ಸಂಗ್ರಹಿಸಿ ಕುಡಿಯಲು, ನೀರಾವರಿಗಾಗಿ ಅಥವಾ ಇತರೆ ಪ್ರಯೋಜನಗಳಿಗೆ ಬಳಸಿಕೊಳ್ಳುವುದು.

೩. ಮಣ್ಣು ಮುಚ್ಚಿಕೊಂಡು ಹೋಗಿ ಭೂ ಸವಕಳಿಯು ಆಗದಂತೆ ಕ್ರಮಗಳನ್ನು ಕೈಗೊಳ್ಳುವುದು.

೪. ಸೂಕ್ತ ವಿಧಾನಗಳನ್ನನುಸರಿಸಿ ಮಳೆಯ ನೀರು ಭೂಮಿಯಾಳಕ್ಕೆ ಬಸಿದು ಹೋಗಿ ಅಂತರ್ಜಲ ಸಂಗ್ರಹವನ್ನು ತಲುಪುವಂತೆ ಮಾಡುವುದು.

೫. ಬೀಳು ಭೂಮಿಯನ್ನು ಅಭಿವೃದ್ಧಿಗೊಳಿಸುವುದು.

೬. ಅರಣ್ಯ ಭೂಮಿಯು ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು.

೭. ಮೀನುಗಾರಿಕೆಯನ್ನು ಕೈಗೊಳ್ಳುವುದು.

೮. ವನ್ಯ ಜೀವಿಗಳ ಪಾಲನೆಗೆ ಅವಶ್ಯಕವಾದ ಕಾರ್ಯಕ್ರಮಗಳನ್ನು ರೂಪಿಸುವುದು.

೯. ಪರಿಸರ ನೈರ್ಮಲ್ಯದ ಬಗ್ಗೆ ಲಕ್ಷ್ಯವನ್ನೀಯುವುದು.

೧೦. ಮನೋರಂಜನೆಯ ವ್ಯವಸ್ಥೆಗೆ ಸೂಕ್ತ ಮಹತ್ವ ನೀಡುವುದು.

೧೧. ವೈಯಕ್ತಿಕ ಮತ್ತು ಗುಂಪು ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಸ್ಥಾನಿಕ ಮುಂದಾಳತ್ವವು ಬೆಳೆದು ಬರುವಂತೆ ಪ್ರಚೋದಿಸುವುದು.

೧೨. ಮಾನವನ ಮತ್ತು ಅವನ ಸಾಕು ಪ್ರಾಣಿಗಳ ದೈನಂದಿನ ಮತ್ತು ಮುಂದಿನ ದಿನಗಳ ಅವಶ್ಯಕತೆಗಳನ್ನು ಪೂರೈಸಲು ಬೇಕಾಗುವ ಆಹಾರ, ಇಂಧನ, ಬಟ್ಟೆ, ಮೇವು, ವಾಸಕ್ಕೆ ಬೇಕಾಗುವ ಮತ್ತಿತರ ವಸ್ತುಗಳು, ಗೃಹ ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾ ಸಾಮಗ್ರಿ ಇತ್ಯಾದಿಗಳು ನಿರಂತರವಾಗಿ ದೊರೆಯುವಂತಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

೧೩. ಉದ್ಯೋಗವಕಾಶಗಳನ್ನು ಹೆಚ್ಚಿಸಿ ಜನರ ಆರ್ಥಿಕ ಮಟ್ಟ ಸುಧಾರಣೆಗೆ ಮಹತ್ವ ನೀಡುವುದು.

೧೪. ಯೋಜನೆಯ ನಂತರವೂ ಅಧಿಕ ಸಂಖ್ಯೆಯಲ್ಲಿ ಉದ್ಯೋಗವಕಾಶಗಳು ಅವಿರತವಾಗಿ ದೊರೆತು ಆರ್ಥಿಕವಾಗಿ ಹಿಂದುಳಿದ ಜನರು ಸುಖ- ಶಾಂತಿಯಿಂದ ಜೀವಿಸಲು ಆಸ್ಪದವನ್ನು ಕಲ್ಪಿಸುವುದು.

ಭಾರತದಲ್ಲಿ ಶೇ. ೭೦ ರಷ್ಟು ಜನರು ಕೃಷಿಯನ್ನೇ ಅವಲಂಬಿಸಿರುವುದರಿಂದ ಮತ್ತು ಕೃಷಿಗೆ ನೀರು ಹಾಗೂ ಮಣ್ಣು ಇವೇ ಮೂಲಾಧಾರಗಳಾಗುವುದರಿಂದ ಇವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಗಮನಕೊಡಬೇಕು. ಆದ್ದರಿಂದ ಜಲಾನಯನ ಪ್ರದೇಶದ ಸಮರ್ಥ ನಿರ್ವಹಣೆಯಿಂದ ನೀರು ಮತ್ತು ಮಣ್ಣುಗಳ ರಕ್ಷಣೆಯಾದರೆ ಆ ಪ್ರದೇಶದಲ್ಲಿ ವಾಸಿಸುವ ಜನರ ಅಭಿವೃದ್ಧಿಯು ಸುಗಮವಾಗಿ ಸಾಗುತ್ತದೆಯೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಜಲಾನಯನ ಪ್ರದೇಶಗಳ ಐತಿಹಾಸಿಕ ಹಿನ್ನೆಲೆ

ಭಾರತದಲ್ಲಿ: ಜಲಾನಯನ ಪ್ರದೇಶದ ಅಭಿವೃದ್ಧಿ ವಿಷಯವು ಭಾರತಕ್ಕೆ ಹೊಸದೇನಲ್ಲ. ಅನಾದಿಕಾಲದಿಂದಲೇ ನಮ್ಮ ಪೂರ್ವಜರು ಬಹು ಜಾಣ್ಮೆ ಮತ್ತು ದಕ್ಷತೆಯಿಂದ ವೇಗವಾಗಿ ಹರಿದು ಹೋಗುವ ನೀರನ್ನು ತಡೆದು, ಮಣ್ಣಿನ ಸವಕಳಿಯನ್ನು ಕಡಿಮೆ ಮಾಡಿ, ಹೆಚ್ಚಾಗಿರುವ ನೀರನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಕುಡಿಯಲು, ಬೇಸಾಯ ಮತ್ತು ಇತರ ಬಳಕೆಗಳಿಗೆ ದೊರೆಯುವಂತೆ ಅನುಕೂಲಗಳನ್ನು ಮಾಡಿದ್ದಾರೆಂಬುದನ್ನು ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.

ಮಲೆನಾಡಿನ ಪ್ರದೇಶದಲ್ಲಿ: ಹೆಚ್ಚು ಮಳೆ ಬೀಳುವ ಗುಡ್ಡಗಾಡು ಪ್ರದೇಶಗಳಲ್ಲಿ ಭೂಮಿಯನ್ನು ಸಪಾಟು ಮಡಿಗಳನ್ನಾಗಿ ಪರಿವರ್ತಿಸಿ, ಮಡಿಗಳಲ್ಲಿ ನೀರು ನಿಲ್ಲುವ ವ್ಯವಸ್ಥೆ ಮಾಡಿಕೊಂಡು ಭತ್ತ ಬೆಳೆಯುವ ಪದ್ಧತಿಯು ಅನಾದಿಕಾಲದಿಂದಲೂ ನಡೆ‌ದು ಬಂದಿದೆ. ಮಳೆಯು ಕಡಿಮೆಯಾದ ನಂತರ, ಹಳ್ಳಕ್ಕೆ ಅಡ್ಡವಾಗಿ ಸಣ್ಣ ಸಣ್ಣ ಕಟ್ಟೆಗಳನ್ನು (ಬಾಂದಾರಾ) ಕಟ್ಟಿ, ನೀರನ್ನು ತಡೆದು ನಿಲ್ಲಿಸಿ, ಆ ನೀರನ್ನು ನೀರಾವರಿಗೆ ಬಳಸುವ ಪದ್ಧತಿಯೂ ಮೊದಲಿನಿಂದಲೂ ನಡೆದು ಬಂದಿದೆ.

ಕರ್ನಾಟಕದ ಪಶ್ಚಿಮ ಘಟ್ಟದ ಪ್ರದೇಶದಲ್ಲಿರುವ ಕೊಳ್ಳಗಳಲ್ಲಿ ಅಡಿಕೆ ಮತ್ತು ಅದರ ಸಹ ಬೆಳೆಗಳಾದ ಏಲಕ್ಕಿ, ಮೆಣಸು, ಬಾಳೆ  ಮೊದಲಾದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಣ್ಣಿನ ಸವಕಳಿಯನ್ನು ತಡೆದು, ನೀರನ್ನು ಸಂಗ್ರಹಿಸಲು ತೋಟದ ಮೇಲ್ಭಾಗದಲ್ಲಿ ಕೆರೆಯನ್ನು ನಿರ್ಮಿಸುವುದು ವಾಡಿಕೆ. ಈ ರೀತಿ ಸಂಗ್ರಹಗೊಂಡ ಜಲವು ನೀರಾವರಿಗೆ ಮತ್ತು ಇತರ ಬಳಕೆಗೆ ಉಪಯೋಗವಾಗುತ್ತದೆ. ಭೂಮಿಯಲ್ಲಿ ಹೆಚ್ಚಾದ ನೀರನ್ನು ಹೊರ ತೆಗೆಯಲು ಬಸಿಗಾಲುವೆಯ ವ್ಯವಸ್ಥೆಯೂ ಇಲ್ಲಿದೆ.

ಮಧ್ಯಮ ಮತ್ತು ಅಲ್ಪ ಮಳೆ ಬೀಳುವ ಪ್ರದೇಶಗಳಲ್ಲಿ: ಕಪ್ಪು ಮಣ್ಣಿನಿಂದ ದೊಡ್ಡ ದೊಡ್ಡ ಆಕಾರದ ಬದುಗಳನ್ನು ನಿರ್ಮಿಸಿ, ಸೂಕ್ತ ಸ್ಥಳದಲ್ಲಿ ಕಲ್ಲಿನಿಂದ ಒಡ್ಡನ್ನು ಕಟ್ಟುವ ರೂಢಿಯು ಈ ಭಾಗದಲ್ಲಿ ಮೊದಲಿನಿಂದಲೂ ಇದೆ. ಈ ವ್ಯವಸ್ಥೆಯಿಂದ ಮಳೆಯ ನೀರು ಭೂ ಪ್ರದೇಶದ ಹೆಚ್ಚು ಭಾಗದಲ್ಲಿ ಪಸರಿಸಲು ಅನುಕೂಲವುಂಟಾಗಿ, ಭೂಮಿಯೊಳಗೆ ಇಂಗಲು ಅಧಿಕ ಸಮಯವು ದೊರೆಯುತ್ತದೆ. ಇಂಗದೇ ಹೆಚ್ಚಾದ ನೀರು ಕಲ್ಲಿನ ಒಡ್ಡಿನ ಮುಖಾಂತರ ಹೊರ ಬರುವುದರಿಂದ ಬದುಗಳು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ.

ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಂಪು ಮಣ್ಣಿನ ಪ್ರದೇಶದಲ್ಲಿ ಪ್ರತಿ ಹಳ್ಳಿಗೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕೆರೆಗಳಿರುವುದು ಸಾಮಾನ್ಯ. ದೂರದವರೆಗೆ ಮಣ್ಣು ಕೊಚ್ಚಿ ಹೋಗುವುದನ್ನು ಕೆರೆಗಳು ತಡೆಯುತ್ತವೆಯಲ್ಲದೇ ಇವುಗಳಲ್ಲಿ ಸಂಗ್ರಹವಾದ ನೀರನ್ನು ನೀರಾವರಿಗೆ ಮತ್ತು ಇತರ ಉಪಯೋಗಕ್ಕೆ ಬಳಸಲಾಗುತ್ತದೆ. ಈ ಕೆರೆಗಳಲ್ಲಿ ಸಂಗ್ರಹವಾದ ಹೂಳನ್ನು ಸಮಯಾನುಸಾರ ಹೊರ ತೆಗೆದು ಬೇಸಾಯ ಭೂಮಿಗೆ ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆಯು ವರ್ಧಿಸುತ್ತದೆ.

ಊರಿನ ಮುಖ್ಯಸ್ಥನೇ ಜನರ ಸಹಾಯದಿಂದ ಗ್ರಾಮದ ಕೆರೆಗಳನ್ನು ನಿರ್ಮಿಸುವ ಪದ್ಧತಿ ಇತ್ತು. ನೀರಿನ ಬಳಕೆಯನ್ನು ಸಹ ಊರಿನ ಸಂಘಟನೆಯೇ ನಿರ್ವಹಿಸುತ್ತಿತ್ತು. ಈ ಬಗೆಯ ಬೃಹತ್‌ರೂಪದ ಜನಹಿತ ಕಾರ್ಯಕ್ರಮಗಳನ್ನು ಸುವ್ಯವಸ್ಥಿತಿ ರೀತಿಯಲ್ಲಿ ನಡೆಸಿಕೊಂಡು ಬಂದು, ಬರಗಾಲ ಪರಿಸ್ಥಿತಿಯಲ್ಲಿಯೂ ನಿತ್ಯೋಪಯೋಗಕ್ಕೆ ನೀರಿನ ಅಭಾವವಾಗದಂತೆ ಜನರನ್ನು ರಕ್ಷಿಸಬಲ್ಲಂತಹ ಈ ಮಹತ್ಕಾರ್ಯವು ಅಚ್ಚರಿಯನ್ನುಂಟು ಮಾಡುವಂತಹುದೆನ್ನಬಹುದು.

ನೀರಾವರಿ ಬೃಹತ್‌ಯೋಜನೆಗಳು

 • ತಮಿಳು ನಾಡಿನ ಚೋಳ ಅರಸರು ಒಂದನೆಯ ಶತಮಾನದಲ್ಲಿ ನಿರ್ಮಿಸಿದ ಆಣೆಕಟ್ಟು ಇಂದಿಗೂ ಅಸ್ತಿತ್ವದಲ್ಲಿದೆ.
 • ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಅರಸರು ೧೪-೧೫ ನೇ ಶತಮಾನದಲ್ಲಿ ನಿರ್ಮಿಸಿದ ನೀರಾವರಿ ಕಾಲುವೆಗಳೂ ಇಂದಿಗೂ ಬಳಕೆಯಲ್ಲಿವೆ.
 • ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಹಲವು ಶತಮಾನಗಳ ಮೊದಲು ಪ್ರತಿ ಮನೆಗೊಂದರಂತೆ ನಿರ್ಮಿಸಿದ ಹೊಂಡಗಳು, ಮನೆ ಬಳಕೆಗೆ ನೀರನ್ನು ಒದಗಿಸುತ್ತಿದ್ದವಲ್ಲದೇ ಮೀನುಗಾರಿಕೆಗೂ ಉಪಯೋಗವಾಗುತ್ತಿದ್ದವು.
 • ಮನೆ ಬಳಕೆಗೆ ಮತ್ತು ನೀರಾವರಿಗೆಂದು ಹಲವು ಶತಮಾನಗಳ ಹಿಂದೆ ನಿರ್ಮಿಸಿದ ಬಾವಿಗಳನ್ನು ದೇಶದೆಲ್ಲೆಡೆ ಜನರು ಇಂದಿಗೂ ಬಳಸುತ್ತಾರೆ.

ಹಿಂದಿನ ಕಾಲದಲ್ಲಿ ಮಣ್ಣು ಮತ್ತು ನೀರನ್ನು ಗ್ರಾಮ ಮಟ್ಟದಲ್ಲಿ ಸಂರಕ್ಷಿಸಿ, ಅವುಗಳ ಪೂರ್ಣ ಪ್ರಯೋಜನವನ್ನು ಪಡೆಯಲು ಮತ್ತು ಜನ ಜೀವನವನ್ನು ಉತ್ತಮ ಪಡಿಸಲು ಹಲವು ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೆಂದು ಮೇಲಿನ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ. ಭಾರತವು ವಿದೇಶಿಯರ ದಾಳಿಗೆ ತುತ್ತಾಗಿ ಪರತಂತ್ರವಾದಾಗಿನಿಂದ ಅಧಿಕಾರವೆಲ್ಲ ಕೇಂದ್ರಿಕೃತವಾಗಿ ಗ್ರಾಮಾಭಿವೃದ್ಧಿಗೆ ಮತ್ತು ಪ್ರಶಾಂತವಾದ ಗ್ರಾಮ ಜೀವನಕ್ಕೆ ಕೊಡಲಿಪೆಟ್ಟು ಬಿದ್ದಿತೆಂದು ಹೇಳಬಹುದು.

ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ: ಕಳೆದ ಶತಮಾನದ ೩೦ ಮತ್ತು ೪೦ ರ ದಶಕದಲ್ಲಿ ನೀರು ಮತ್ತು ಮಣ್ಣು ಇವುಗಳನ್ನ ಸಂರಕ್ಷಿಸುವ ಮಹತ್ವದ ಬಗ್ಗೆ ಅಮೆರಿಕೆ ಸಂಯುಕ್ತ ಸಂಸ್ಥಾನಗಳಲ್ಲಿರುವ ಜನರಲ್ಲಿ ಜಾಗೃತಿಯುಂಟಾಯಿತು. ಆ ದೇಶದ ಕೃಷಿ ಇಲಾಖೆಯಲ್ಲಿ ಮಣ್ಣು ಸಂರಕ್ಷಣಾ ವಿಭಾಗಕ್ಕೆ ಸೇರಿದ ಡಾ. ಬೆನೆಟ್‌ಎಂಬುವರು ಜನಜಾಗೃತಿಯನ್ನುಂಟು ಮಾಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದವರೆನ್ನಬಹುದು. ಅವರ ತೀಕ್ಷ್ಣ ಮತ್ತು ಪ್ರಭಾವಶಾಲಿಯಾದ ವಾಕ್‌ಚಾತುರ್ಯವು, ಜನರ ಮೇಲೆ ಪರಿಣಾಮ ಬೀರಿತು. ಅವರ ಮಾತುಗಳಲ್ಲೇ ಉಲ್ಲೇಖಿಸುವುದಾದರೆ, ನಿಸರ್ಗವು ಮಾನವನಿಗೆ ನೀಡಿದ ಹಲವು ಕೊಡುಗೆಗಳಲ್ಲಿ ಮಣ್ಣು ಅತ್ಯವಶ್ಯಕವಾದ ಕೊಡುಗೆ. ನೀರು ಇಲ್ಲದ ಮಣ್ಣು ಮರುಭೂಮಿಯೆನಿಸೀತು. ಆದರೆ, ಮಣ್ಣೇ ಇಲ್ಲದ ನೀರು ನಿಷ್ಪ್ರಯೋಜಕ ಎನಿಸಬಹುದು.

 • ಕೃಷಿ ಇಲಾಖೆಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಎಂಬ ಪ್ರತ್ಯೇಕ ವಿಭಾಗವನ್ನು ತೆರೆಯಲಾಯಿತು.
 • ಪ್ರವಾಹ ನಿಯಂತ್ರಣ ಕಾಯ್ದೆ ೧೯೪೪ ರಲ್ಲಿ ಮತ್ತು ಜಲಾನಯನ ಸಂರಕ್ಷಣೆ ಕಾಯ್ದೆಗಳು ೧೯೫೪ ರಲ್ಲಿ ಜಾರಿಗೆ ಬಂದವು.
 • ಜನರಿಂದ ಆರಂಭಗೊಂಡು ರಾಜ್ಯ ಮತ್ತು ಕೇಂದ್ರ ಸರಕಾರಗಳ ಆರ್ಥಿಕ ಮತ್ತು ತಾಂತ್ರಿಕ ಸಹಾಯದಿಂದ ಜಲಾನಯನ ಪ್ರದೇಶದ ಅಭಿವೃದ್ಧಿಯು ಆರಂಭಗೊಂಡಿತು.
 • ಜಲಾನಯನ ಅಭಿವೃದ್ಧಿಯ ಕಾರ್ಯಕ್ರಮದಲ್ಲಿ ಬದುಗಳ ನಿರ್ಮಾಣ, ಬದುಗಳ ಮಧ್ಯದಲ್ಲಿರುವ ಭೂಮಿಯ ನಿರ್ವಹಣೆ ಇತ್ಯಾದಿಗಳು ಸೇರಿದ್ದವು.

ಪರಿಸರ ಸುಧಾರಣೆ, ಸಂಪನ್ಮೂಲಗಳ ಸಂರಕ್ಷಣೆ, ಜನರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯ ಸುಧಾರಣೆ ಇವೇ ಜಲಾನಯನ ಪ್ರದೇಶಗಳ ಅಭಿವೃದ್ಧಿಯ ಮುಂದಿರುವ ಪ್ರಮುಖ ಉದ್ದೇಶಗಳು. ಕೃಷಿಕರು ವೈಯಕ್ತಿಕವಾಗಿ ಕೈಗೊಂಡ ನೀರು ಮತ್ತು ಮಣ್ಣು ಸಂರಕ್ಷಣೆ ಕಾರ್ಯಕ್ರಮಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಗೊಂಡ ಸಂಪನ್ಮೂಲ ಅಭಿವೃದ್ಧಿಯ ಕಾರ್ಯಕ್ರಮಗಳೆರಡರ ಮಧ್ಯದಲ್ಲಿ ಅಂತರವನ್ನು ತುಂಬುವುದೇ ಜಲಾನಯನ ಪ್ರದೇಶದ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವ ಮೂಲ ಉದ್ದೇಶವೆನ್ನಬಹುದು.

ಭಾರತದಲ್ಲಿ ೧೯೪೦ ರಿಂದೀಚೆಗೆ ಜಲಾನಯನ ಅಭಿವೃದ್ಧಿಯಲ್ಲಾದ ಪ್ರಗತಿಗಳು: ಕಳೆದ ಶತಮಾನದ ೪೦ರ ದಶಕದಿಂದೀಚೆಗೆ ನೀರು ಮತ್ತು ಸಂರಕ್ಷಣೆ ಕಾರ್ಯದಲ್ಲಿ ಹಾಗೂ ಜಲಾನಯನ ಪ್ರದೇಶದ ನಿರ್ವಹಣೆಯಲ್ಲಿ, ಭಾರತದಲ್ಲಾದ ಪ್ರಗತಿಯ ಪಕ್ಷಿನೋಟವು ಕೆಳಗಿನಂತಿದೆ:

 • ಎರಡನೆಯ ಮಹಾಯುದ್ಧದ ಸಮಯದಲ್ಲಿ, ಹಲವು ರಾಜ್ಯಗಳ ಕೃಷಿ ಇಲಾಖೆಗಳು, ಮಣ್ಣು ಸಂರಕ್ಷಣಾ ವಿಭಾಗವನ್ನು ತೆರೆದವು.
 • ಕಡಿಮೆ ಮಳೆ ಬೀಳುವ ಮತ್ತು ಬರಗಾಲ ಪೀಡಿತ ಪ್ರದೇಶಗಳಲ್ಲಿ, ಈ ವಿಭಾಗವು ಸಮಪಾತಳಿ ಒಡ್ಡುಗಳನ್ನು ನಿರ್ಮಿಸಿತು.
 • ನಂತರದ ದಿನಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿ, ಮಣ್ಣಿನಲ್ಲಿ ಇಂಗದೇ ಹೆಚ್ಚಾದ ನೀರು ಸುರಕ್ಷಿತವಾಗಿ ಹೊರಹೋಗುವಂತೆ ಒಡ್ಡುಗಳಲ್ಲಿ ಅನುಕೂಲತೆಗಳನ್ನುಂಟು ಮಾಡಲಾಯಿತು.
 • ಕಡಿಮೆ ಆಳದ ಕಪ್ಪು ಮಣ್ಣಿನಲ್ಲಿ ಮತ್ತು ಎಲ್ಲ ಬಗೆಯ ಕೆಂಪು ಮಣ್ಣಿನಲ್ಲಿ ಸಮಪಾತಳಿ ಒಡ್ಡುಗಳು ಯಶಸ್ವಿಯೆನಿಸಿದರೂ, ಆಳವಾದ ಕಪ್ಪು ಮಣ್ಣಿನಲ್ಲಿ, ನೀರಿನ ಒತ್ತಡದಿಂದ ಒಡ್ಡುಗಳು ಒಡೆಯತೊಡಗಿದವು.
 • ಭಾರತೀಯ ಕೃಷಿ ಅನುಸಂಧಾನ ಪರಿಷತ್‌೧೯೫೦ ರಲ್ಲಿ ದೇಶದಲ್ಲಿಯ ಹವಾಮಾನದ ಪ್ರಮುಖ ವಿಭಾಗಕ್ಕೊಂದರಂತೆ ಭೂ ಸಂರಕ್ಷಣಾ ಸಂಶೋಧನೆ, ತರಬೇತಿ ಮತ್ತು ಪ್ರಾತ್ಯಕ್ಷಿಕಾ ಕೇಂದ್ರಗಳನ್ನು ಸ್ಥಾಪಿಸಿತು.
 • ಮೂರು ದಶಕಗಳ ನಂತರ, ೧೯೮೦ರ ಸುಮಾರಿಗೆ ಭೂ ಸಂರಕ್ಷಣೆಗೆ ಸಂಬಂಧಿಸಿದಂತೆ ನಡೆಸಿದ ಸಂಶೋಧನೆಯಿಂದ ಹೊರಬಂದ ಪರಿಣಾಮಗಳನ್ನು ಪರೀಕ್ಷಿಸಲು, ಕೆಲವು ಸಣ್ಣ ಜಲಾನಯನ ಪ್ರದೇಶಗಳಲ್ಲಿ ಸಂಶೋಧನಾ ಪರಿಣಾಮಗಳ ದೃಢೀಕರಣ ಯೋಜನೆಯು (Operational Research Project) ಆರಂಭವಾಯಿತು.
 • ಪಂಜಾಬ್‌ರಾಜ್ಯದಲ್ಲಿ ಯಶಸ್ವಿಯಾದ ಫಲಾನುಭವಿಗಳ ಸಾಮೂಹಿಕ ಹೊಣೆಗಾರಿಕೆ ಪದ್ಧತಿಗೆ ಒತ್ತು ನೀಡಲಾಯಿತು.
 • ರಾಜ್ಯಗಳ ಕೃಷಿ ಇಲಾಖೆಗಳಲ್ಲಿರುವ ಭೂ ಸಂರಕ್ಷಣಾ ವಿಭಾಗವು, ರೈತರ ಜಮೀನುಗಳಲ್ಲಿ ಅವಶ್ಯವಿರುವ ಬದಲಾವಣೆಗಳೊಂದಿಗೆ ಸಮಪಾತಳಿ ಒಡ್ಡುಗಳ (ಬದು) ನಿರ್ಮಾಣವನ್ನು ಮುಂದುವರಿಸಿತು. ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಭೂ ಸಂರಕ್ಷಣೆಯಲ್ಲದೇ ತಡೆ ಒಡ್ಡುಗಳ (Chek dams) ನಿರ್ಮಾಣ ಮತ್ತು ಹಳ್ಳಗಳಿಗೆ ಅಡ್ಡವಾಗಿ ಬದುಗಳ ನಿರ್ಮಾಣ ಕಾರ್ಯಗಳನ್ನೂ ಕೈಗೊಂಡವು.
 • ಕಳೆದ ಸುಮಾರು ಎರಡು ದಶಕಗಳಿಂದೀಚಿಗೆ ಜಲಾನಯನ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಬೇಕಾಗುವ ಹಣವನ್ನು ಜಾಗತಿಕ ಬ್ಯಾಂಕುಗಳಿಂದಲ್ಲದೇ ಡೆನ್ಮಾರ್ಕ್‌, ಜರ್ಮನಿ ಮುಂತಾದ ದೇಶಗಳಿಂದ ಪಡೆಯಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಕಾರ್ಯಕ್ಕೆ ಹಣವನ್ನು ಒದಗಿಸುತ್ತವೆ.
 • ಜಲಾನಯನ ಪ್ರದೇಶಗಳ ಅಭಿವೃದ್ಧಿಯನ್ನು ಸಾಧಿಸುವಾಗ ಇಡೀ ಭೂಭಾಗಕ್ಕೆ ಅನ್ವಯವಾಗುವ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವುದಕ್ಕೆ, ಯೋಜನೆಯನ್ನು ಸಮರ್ಥ ರೀತಿಯಲ್ಲಿ ಕಾರ್ಯಗತ ಮಾಡುವುದಕ್ಕೆ ಮತ್ತು ಈ ಕಾರ್ಯದಲ್ಲಿ ಆ ಪ್ರದೇಶದ ಸಮಸ್ತ ಜನರು ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುವುದಕ್ಕೆ ಅತ್ಯಧಿಕ ಮಹತ್ವವನ್ನು ನೀಡಲಾಗಿದೆ.

ಜಲಾನಯನ ಅಭಿವೃದ್ಧಿಗೆ ಸೂಚಿತ ಕಾರ್ಯತಂತ್ರ (Strategy):

ಅಭಿವೃದ್ಧಿಯ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೊದಲು ಅವು ಸುಗಮ ಹಾಗೂ ಸರಾಗವಾಗಿ ಸಾಗುವಂತಾಗಲು ಅವಶ್ಯವಿರುವ ಪರಿಸರವನ್ನು ನಿರ್ಮಿಸಿಕೊಳ್ಳುವುದು ಅವಶ್ಯ. ಈ ದಿಶೆಯಲ್ಲಿ ಮಂದಿನ ಸಂಗತಿಗಳನ್ನು ಗಮನಿಸಬೇಕು.

ಕಾಯ್ದೆಯ ನೆರವು: ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಅಪಾರ ಹಣದ ಅವಶ್ಯಕತೆ ಇದೆ. ಈ ಹಣದ ಜವಾಬ್ದಾರಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಫಲಾನುಭವಿಗಳಲ್ಲಿ ನಿರ್ದಿಷ್ಟ ಪ್ರಮಾಣದ ಪ್ರಕಾರ ಹಂಚುವ ಕಾಯ್ದೆಯಿರುವುದು ಪ್ರಯೋಜನಕಾರಿ ಎನಿಸೀತು. ಇದಲ್ಲದೇ ಭೂ ಪ್ರದೇಶಕ್ಕೆ ಸಂಬಂಧಿಸಿದಂತೆ ಹಲವು ಬಗೆಯ ಕಾರ್ಯಗಳಾದ ಭೂ ಸಮೀಕ್ಷಣೆ, ಭೂ ದಾಖಲೆಗಳನ್ನಿಡುವುದು, ಭೂ ಕಂದಾಯ ನಿರ್ಧಾರ, ತುಂಡು ಭೂಮಿಗಳ ಜೋಡಣೆ, ಭೂ ಕಾಯ್ದೆಗಳ ಕಾರ್ಯಾಚರಣೆ, ನೆಲ ಮತ್ತು ಜಲ ಸಂರಕ್ಷಣೆ, ಬಸಿಗಾಲುವೆಗಳ ನಿರ್ಮಾಣ, ಭೂ ಸ್ವಾಧೀನ ಕ್ರಮಗಳು, ಸಮಸ್ಯಾತ್ಮಕ ಭೂಮಿಯ ಸುಧಾರಣೆ ಇತ್ಯಾದಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಒಂದೇ ಇಲಾಖೆಯು ಅಸ್ತಿತ್ವದಲ್ಲಿದ್ದರೆ ಸಕಲ ಕಾರ್ಯಗಳು ತ್ವರಿತವಾಗಿ ಸಾಗಲು ಅನುಕೂಲವಾಗುತ್ತದೆ. ಈ ಖಾತೆಗೆ ಭೂ -ಜಲ ಸಂಪತ್ತಿನ ಅಭಿವೃದ್ಧಿ ಖಾತೆ ಎಂದು ಹೆಸರಿಡಬಹುದು. ಇಂತಹ ಖಾತೆಯೊಂದರ ನಿರ್ಮಾಣಕ್ಕೆ ಸರ್ಕಾರವು ಸೂಕ್ತ ಕ್ರಮವನ್ನು ಕೈಗೊಳ್ಳುವುದು ಅವಶ್ಯ.

ಜನ ಸಮುದಾಯದಲ್ಲಿ ಜಾಗೃತಿ: ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಎಲ್ಲ ಜನರು ಜಾಗೃತಿಗಾಗಿ, ಪ್ರದೇಶದ ಅಭಿವೃದ್ಧಿಯ ಮಹತ್ವವನ್ನರಿತು, ಪ್ರದೇಶದ ಅಭಿವೃದ್ಧಿಯಲ್ಲಿಯೇ ತಮ್ಮೆಲ್ಲರ ಪ್ರಗತಿಯಡಗಿದೆ ಎಂಬುದನ್ನು ಮನಗಂಡು, ಅವಶ್ಯವಿರವಲ್ಲಿ ಸಂಘ ಸಂಸ್ಥೆಗಳನ್ನು ನಿರ್ಮಿಸಿಕೊಂಡು, ಅಸ್ತಿತ್ವದಲ್ಲಿರುವ ಸಂಘ- ಸಂಸ್ಥೆಗಳ ಸಹಾಯ-ಸಹಕಾರಗಳನ್ನು ಪಡೆದು ಯೋಜನೆಯನ್ನು ಸಿದ್ಧಪಡಿಸಲು ಮತ್ತು ಅದನ್ನು ಕಾರ್ಯಗತಗೊಳಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದು, ಸರಕಾರಿ ಇಲಾಖೆಗಳೊಡನೆ ಸಹಕರಿಸಬೇಕೆಲ್ಲದೇ ಎಲ್ಲೆಡೆ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು. ಇಂತಹ ಸಂಬಂಧವೇರ್ಪಡುವುದು ಅಪೇಕ್ಷಣಿಯವಾದರೂ ಇದು ತನ್ನಿಂದ ತಾನೇ ಘಟಿಸುವುದಿಲ್ಲವೆಂಬುದು ತಿಳಿದ ವಿಷಯವೇ. ಇದಕ್ಕಾಗಿ ಸರ್ಕಾರಿ ಇಲಾಖೆಯ ವಿಸ್ತರಣಾ ಸಿಬ್ಬಂದಿಯವರು, ರೈತರನ್ನು ವೈಯಕ್ತಿಕವಾಗಿ ಕಂಡು, ಸಭೆಗಳನ್ನು ನಡೆಸಿ, ಸುಲಭವಾಗಿ ಅರ್ಥವಾಗುವ ಸರಳ ಭಾಷೆಯಲ್ಲಿ ತಯಾರಿಸಿದ ಕರಪತ್ರ, ಕೈಪಿಡಿ ಮುಂತಾದವುಗಳನ್ನು ಹಂಚಿ, ಅಭಿವೃದ್ಧಿಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಅವಶ್ಯವೆನಿಸಿದರೆ ಅಭಿವೃದ್ಧಿ ಕಾರ್ಯವು ಪೂರ್ಣಗೊಂಡ ಮತ್ತು ಕಾರ್ಯವು ಪ್ರಗತಿಯಲ್ಲಿರುವ ಪ್ರದೇಶಗಳಿಗೆ ಜನರನ್ನು ಕರೆದೊಯ್ದು, ಅಲ್ಲಿಯ ಚಟುವಟಿಕೆಗಳನ್ನು ತೋರಿಸಿ ಅವರಲ್ಲಿ ಆಸಕ್ತಿಯುಂಟಾಗುವಂತೆ ಮಾಡಬೇಕು ಮತ್ತು ಯೋಜನೆಗಳನ್ನು ರೂಪಿಸಬೇಕು.

ಯೋಜನೆಗಳ ಸೂಕ್ಷ್ಮ ಪರಿಚಯ ಕೆಳಗಿನಂತಿದೆ.

ಜಲಾನಯನ ಪ್ರದೇಶದ ಮೇರೆಯನ್ನು ನಿರ್ಧರಿಸುವ ಕಾರ್ಯ: ಸಮಪಾತಳಿ ರೇಖೆಗಳು, ಕೆರೆ, ಹಳ್ಳ, ನದಿ, ಗುಡ್ಡ ಇತ್ಯಾದಿಗಳನ್ನು ತೋರಿಸುವ ಪ್ರಾಕೃತಿಕ ನಕಾಶೆಯನ್ನು ತೆಗೆದುಕೊಂಡು, ಅದರ ಮೇಲೆ ಕೆಳಗೆ ಸೂಚಿಸಿದಂತೆ ಸಂಬಂಧಿಸಿದ  ಜಲಾನಯನ ಪ್ರದೇಶದ ಮೇರೆಯನ್ನು ಗುರುತಿಸಬೇಕು.

ಪ್ರವಾಹದ ಒಂದು ಬಿಂದುವಿನಿಂದ ಇಲ್ಲವೇ ಕೆರೆ, ಅಥವಾ ಸರೋವರದಿಂದ ಪ್ರಾರಂಭಿಸಿ ಮೇರೆಯನ್ನು ಗುರುತಿಸುವ ರೇಖೆಯನ್ನು ಸಮಪಾತಳಿ ರೇಖೆಗಳ ಸಹಾಯವನ್ನು ಪಡೆದು ಪಕ್ಕದಲ್ಲಿರುವ ಜಲಾನಯನ ಪ್ರದೇಶದ ಇನ್ನೊಂದು ಪಾರ್ಶ್ವವನ್ನು ತಲುಪಿ, ಮುಂದುವರಿಯುತ್ತಾ ಆರಂಭದ ಬಿಂದುವಿಗೆ ಬಂದು ಸೇರಬೇಕು. ಈ ರೀತಿ ಗುರುತು ಮಾಡಿದ ಪ್ರದೇಶವೇ ಅಭಿವೃದ್ಧಿಪಡಿಸಲೆಂದು ಆರಿಸಿಕೊಳ್ಳಬೇಕಾದ ಜಲಾನಯನ ಪ್ರದೇಶ.