ಮಿದುಳಿನ ಕಾರ್ಯ ಘಟಕವೇ ನರಕೋಶ. ಮಿದುಳಿನ ಹತ್ತು ಸಾವಿರ ಕೋಟಿಗೂ ಹೆಚ್ಚು ನರಕೋಶಗಳಿವೆ ಎಂದು ಅಂದಾಜು. ಪ್ರತಿಯೊಂದು ನರಕೋಶವೂ ತನ್ನದೇ ಆದ ರಚನೆಯನ್ನು ಹೊಂದಿಗೆ. ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಪ್ರತಿ ಕೋಶಕ್ಕೆ ಒಂದು ದೇಹ. ಆ ದೇಹದ ಮಧ್ಯಭಾಗದಲ್ಲಿ ಕೇಂದ್ರಬಿಂದು (ನ್ಯೂಕ್ಲಿಯಸ್) ಕೈಗಳೋಪಾದಿಯಲ್ಲಿ ಅನೇಕ ಡೆಂಡ್ರೈಟುಗಳು ಬಾಲದಂತಹ ಆಕ್ಸಾನ್‌ ಇರುವುದು ಕಂಡು ಬರುತ್ತದೆ. ಇದರ ಜೊತೆಗೆ, ಆಕ್ಸಾನ್‌ ನರತಂತು ರೂಪದಲ್ಲಿದ್ದು, ಅದರ ನರ ತುದಿಗಳು ಮತ್ತೊಂದು ನರಕೋಶದ, ಆಕ್ಸಾನ್‌ನ ತುದಿಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ನೇರವಾಗಿ ಒಂದಕ್ಕೊಂದು ಅಂಟಿಕೊಂಡಿಲ್ಲವಾದರೂ, ವಿಶೇಷ ವ್ಯವಸ್ಥೆಯಿಂದ ಸಂಪರ್ಕ ಸಾಧಿಸುವ ಈ ಸ್ಥಳವನ್ನು ಕೂಡು ಸ್ಥಳ-ಸೈನಾಪ್ಸ್‌ ಎಂದು ಕರೆಯುತ್ತಾರೆ. ನರತಂತುವಿನಲ್ಲಿ ಮಧ್ಯ ಭಾಗ ಮೃದುವಾಗಿದ್ದು ಅದರ ಮೇಲೆ ಎರಡು ಬಗೆಯ ಪೊರೆಗಳಿರುತ್ತವೆ. ಒಳ ಪೊರೆಯನ್ನು ಮೆಡುಲ್ಲರಿ ಶೀತ್ ಎಂದೂ ಹೊರಗಿನ ಪೊರೆಯನ್ನು ಮೈಲಿನ್ ಶೀತ್ ಎಂದೂ ಕರೆಯುತ್ತಾರೆ. ನರತಂತುಗಳು ತಮ್ಮ ಮಾರ್ಗದಲ್ಲಿ, ತುಸು ದೊಡ್ಡದಾಗಿ ಗಂಟು ರೂಪದಲ್ಲಿರುತ್ತವೆ. ಇವನ್ನು ಗ್ಯಾಂಗ್ಲಿಯ ಎನ್ನುತ್ತಾರೆ. ಕೆಲವು ನರತಂತುಗಳು ಕಲವೇ ಮಿಲಿಮೀಟರ್‌ಗಳಷ್ಟು ಉದ್ದವಿದ್ದರೆ, ಕೆಲವು ಕೆಲ ಅಡಿಗಳಷ್ಟು ಉದ್ದವಿರುತ್ತದೆ.

ನರಕೋಶ-ನರತಂತುಗಳ ಮುಖ್ಯ ಕೆಲಸ ಯಾವುದೇ ಸಂದೇಶ-ಸಂವೇದನೆಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು. ನರತಂತು-ನರಕೋಶಗಳಲ್ಲಿ ಎರಡು ಬಗೆ. ಒಂದು ಪರಿಧಿಯಿಂದ ಸಂವೇದನೆಗಳನ್ನು ಮಿದುಳಿಗೆ ಸಾಗಿಸುವುದು, ಇನ್ನೊಂದು ಮಿದುಳಿನಿಂದ ಸಂದೇಶಗಳನ್ನು ಪರಿಧಿಯ ಸ್ನಾಯುಗಳು, ಅಂಗಾಂಗಗಳಿಗೆ ತಲುಪಿಸುವುದು. ಯಾವುದೇ ಸಂವೇದನೆ-ಸಂದೇಶ ವಿದ್ಯುತ್ ಚಟುವಟಿಕೆಯಾಗಿ ಪರಿವರ್ತನೆಗೊಂಡು ನರಕೋಶದಿಂದ ನರಕೋಶಕ್ಕೆ ವರ್ಗಾಯಿಸಲ್ಪಡುತ್ತದೆ. ಬೆನ್ನು ಹುರಿಯ ಮೂಲಕ ಅಥವಾ ಆಯಾ ಕ್ಷೇತ್ರದಲ್ಲಿರುವ ಕಪೋಲ ನರಗಳ ಮೂಲಕ ಸಂದೇಶ-ಸಂವೇದನೆಯ ಸಾಗಾಟ ನಡೆಯುತ್ತದೆ. ಈ ಕಾರ್ಯದಲ್ಲಿ ಅಸಂಖ್ಯಾತ ನರಕೋಶಗಳು ಭಾಗಿಯಾಗುತ್ತವೆ. ವಿದ್ಯುತ್ ಸಂಕೇತ ಒಂದು ನರತಂತುವಿನ ತುದಿಗೆ ಬಂದಾಗ ಅಲ್ಲಿರುವ ಗುಳ್ಳೆಗಳಲ್ಲಿ ಸಂಗ್ರಹವಾಗಿರುವ ನರವಾಹಕರಗಳನ್ನು (ನ್ಯೂರೋ ಟ್ರಾನ್ಸ್‌ಮೀಟರ್ಸ್) ಬಿಡುಗಡೆ ಮಾಡುತ್ತದೆ. ನರವಾಹಕಗಳು ‘ಸೈನಾಪ್ಸ್‌: ಅನ್ನು ದಾಟಿ, ಇನ್ನೊಂದು ನರ ತುದಿಯಲ್ಲಿರುವ ‘ರಿಸೆ ಪ್ಟಾರ್‌’ ಗಳನ್ನು ಸೇರುತ್ತವೆ. ತನ್ಮೂಲಕ ಸಂಕೇತವು ಆ ನರತುದಿಯನ್ನು ಸೇರಿ, ತನ್ನ ಪ್ರಯಾಣವನ್ನು ಮುಂದುವರೆಸುತ್ತದೆ. ಯಾವುದೇ ಕಾರಣದಿಂದ ನರವಾಹಕ ಬಿಡುಗಡೆ ಆಗದಿದ್ದರೆ ಅಥವಾ ಬಿಡುಗಡೆಯಾದರೆ ನರವಾಹಕಗಳು ನಾಶಗೊಂಡರೆ ಅಥವಾ ರಿಸೆಪ್ಟಾರ್‌ಗಳನ್ನು ಬೇರೆ ಯಾವುರೋ ರಾಸಾಯನಿಕ ವಸ್ತು ಆಕ್ರಮಿಸಿದ್ದರೆ ಸಂದೇಶ-ಸಂವೇದನೆಯ ಸಾಗಾಟ ನಿಂತು ಹೋಗುತ್ತದೆ ಅಥವಾ ಅಸ್ತವ್ಯಸ್ತಗೊಳ್ಳುತ್ತದೆ. ಕಣ್ಣು ಎದುರಿಗಿರುವ ವಸ್ತುವಿನ ಬಿಂಬದ ಸಂವೇದನೆಯನ್ನು ಪಡೆದರೂ, ಮಿದುಳಿಗೆ  ಈ ಸಂವೇದನೆ ಮುಟ್ಟದೇ ಮನಸ್ಸು ಏನನ್ನೂ ಗ್ರಹಿಸದು ಅಥವಾ ವಿಕೃತವಾಗಿ ಗ್ರಹಿಸಬಹುದು (ಇಲ್ಲೂಶನ್ಸ್‌-ಭ್ರಮೆ).

ಪರಿಧಿಯಿಂದ ಸಂವೇದನೆಗಳು, ಬೆನ್ನುಹುರಿ-ಮಿದುಳ ಕಾಂಡ, ಥೆಲಾಮಸ್ ಮುಖಾಂತರ, ಮಿದುಳಿನ ಸ್ಪರ್ಶ-ಸಂವೇದನಾ ಭಾಗವನ್ನು (ಸೆಂಸರಿ ಕಾರ್ಟೆಕ್ಸ್) ಮುಟ್ಟಿದಾಗ, ವಿದ್ಯುತ್ ಸಂಕೇತಗಳನ್ನು ಮತ್ತೆ ಅನುಭವವನ್ನಾಗಿ ಆ ನರಕೋಶಗಳು ಪರಿವರ್ತಿಸುತ್ತವೆ. ಹಿಂದಿನ ಅನುಭವದ ಹಿನ್ನೆಲೆಯಲ್ಲಿ ಸಂವೇದನಾ ಕ್ಷೇತ್ರ ಅಥವಾ ಮಿದುಳಿನ ಮುಂಭಾಗ, ಸಂವೆದನೆಯನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯೆ ವ್ಯಕ್ತಪಡಿಸಲು ನಿಶ್ಚಯಿಸಿದಾಗ, ಮಿದುಳಿನ ಚಲನ ಕ್ಷೇತ್ರಕ್ಕೆ (ಮೋಟಾರ್ ಕಾರ್ಟೆಕ್ಸ್‌), ಉಪಮಸ್ತಿಷ್ಕಕ್ಕೆ ಸಂದೇಶಗಳು ಹೋಗಿ, ಚಲನಾ ಸಂದೇಶಗಳು ಹೊರಟು, ಮಿದುಳಕಾಂಡ-ಮಿದುಳ ಬಳ್ಳಿ ಮಾರ್ಗವಾಗಿ, ಅಂಗಾಂಗಗಳ ಸೂಕ್ತ ಸ್ನಾಯುಗಳು ಗ್ರಂಥಿಗಳಿಗೆ ಕಾರ್ಯಪ್ರವೃತ್ತರಾಗಲು ಪ್ರಚೋದನೆಯಾಗುತ್ತದೆ. ಉದಾ: ಕೈಗಳಿಗೆ ಮಣ್ಣು ಮೆತ್ತಿದೆ ಎಂಬ ಅಂಶ ಸಂವೇದನಾ ಕ್ಷೇತ್ರವನ್ನು ತಲುಪಿದಾಗ ನೀರು ಹುಡುಕಿ ಕೈ ತೊಳೆಯಲು ಆದೇಶ ಸಂಬಂಧಪಟ್ಟ ಎಲ್ಲಾ ಅಂಗಾಂಗಗಳಿಗೆ (ಕಣ್ಣು ಕೈ, ಕಾಲುಗಳು) ತಲುಪುತ್ತದೆ. ಇವೆಲ್ಲಾ ಕ್ಷಣಾರ್ಧದಲ್ಲಿ ನಡೆಯಬಹುದು ಅಥವಾ ತನ್ನದೇ ಆದ ಅವಧಿಯೊಳಗೆ ನಡೆಯಬಹುದು!

ಕೆಲವು ಪ್ರಚೋದನೆ ಪ್ರತಿಕ್ರಿಯೆಗಳು ಕೆಲವೇ ಸೆಕೆಂಡುಗಳಲ್ಲಿ ಸ್ವಯಂಚಾಲಿತವಾಗಿ ನಡೆದು ಹೋಗುತ್ತವೆ. ಇವನ್ನು ರಿಫ್ಲೆಕ್ಸ್ ಆಕ್ಷನ್ಸ್ ಎನ್ನುತ್ತಾರೆ. ಉದಾ: ನಿಮಗೆ ಗೊತ್ತಿಲ್ಲದೆ, ಬಿಸಿ ಪಾತ್ರಯನ್ನು ಮುಟ್ಟುತ್ತೀರಿ. ತತ್‌ಕ್ಷಣ ಕೈಯನ್ನು ಹಿಂದಕ್ಕೆಳೆದುಕೊಳ್ಳುತ್ತೀರಿ. ದಾರಿಯಲ್ಲಿ ಬರಿಗಾಲಿನಲ್ಲಿ ನಡೆಯುವಾಗ ಮುಳ್ಳು ಚುಚ್ಚಿದ ತತ್‌ಕ್ಷಣ ಆಂ.. ಎಂಬ ಚೀತ್ಕಾರ ನಿಮ್ಮ ಬಾಯಿಂದ ಹೊರಡುತ್ತದೆ. ಮುಂದಿನ ಹೆಜ್ಜೆ ಇಡದೆ ನಿಲ್ಲುತ್ತೀರಿ. ಈ ರೀತಿಯ ರಿಫ್ಲೆಕ್ಸ್‌ ಆಕ್ಷನ್‌ಗೆ ಮಿದುಳಿನ ಮೇಲ್ಮೈ ಇರಬೇಕಾದ್ದಿಲ್ಲ. ಮಿದುಳ ಕಾಂಡ ಅಥವಾ ಇನ್ನೂ ಕೆಳಗಿನ ಹಂತದಲ್ಲೇ ಇದು ನಡೆಯಬಲ್ಲದು!.

ಸಂದೇಶ-ಸಂವೇದನೆಗಳ ಸಾಗಾಟದ ವೇಗ ಸೆಕೆಂಡು ಒಂದಕ್ಕೆ ೧೫೦ ರಿಂದ ೨೦೦ ಮೀಟರ್‌ಗಳಷ್ಟು ಇರಬಹುದು. ಕೆಲವು ನರತಂತುಗಳಲ್ಲಿ ಸಾಗಾಟದ ವೇಗ ಕಡಿಮೆ ಇದ್ದರೆ, ಕೆಲವರಲ್ಲಿ ಅತಿ ವೇಗವಾಗಿರುತ್ತದೆ.

ಇದುವರೆಗೆ ಸುಮಾರು ನೂರಕ್ಕೂ ಹೆಚ್ಚಿನ ನರವಾಹಕ ವಸ್ತುಗಳನ್ನು ನಮ್ಮ ದೇಹದಲ್ಲಿ ಗುರುತಿಸಲಾಗಿದೆ. ಪ್ರತಿಯೊಂದು ಎಲ್ಲ ಕಡೆ ಇರುವುದಿಲ್ಲ. ಒಂದೊಂದು ಒಂದೊಂದು ನಿರ್ದಿಷ್ಟ ಭಾಗದಲ್ಲಿ ಹೆಚ್ಚಾಗಿರುತ್ತದೆ. ಉದಾ: ಪರಿಧಿಯ ನರಕೋಶಗಳಲ್ಲಿ ಅಸಿಟೈಲ್ ಕೋಲಿನ್ ಮತ್ತು ನಾರ್‌ಎಪಿನೆಫ್ರಿನ್‌ ಹೆಚ್ಚಿದ್ದರೆ, ಮಿದುಳಿನಲ್ಲಿ ಡೋಪಮಿನ್, ನಾರ್‌ಎಪಿನಿಫ್ತಿನ್‌ ಸೆರೋಟೊನಿನ್, ಗಾಬಾ ಇತ್ಯಾದಿಗಳು ಹೆಚ್ಚಿರುತ್ತದೆ. ಹಿಸ್ಟಮಿನ್, ಗೈಸಿನ್‌, ಗ್ಲುಟಾಮಿಕ್ ಆಮ್ಲ, ಆಸ್ಪಾರ್ಟಿಕ್ ಆಮ್ಲ, ಆಕ್ಟೋಪಮಿನ್ ಹೀಗೆ ಹಲವಾರು ಬಗೆಯ ನರವಾಹಕಗಳಿವೆ. ಈ ಎಲ್ಲಾ ನರವಾಹಕಗಳು ಒಂದೇ ಬಗೆಯಲ್ಲಿ ಕೆಲಸ ಮಾಡುವುದಿಲ್ಲ. ಕೆಲವು ಸಂದೇಶ ಸಾಗಾಟಕ್ಕೆ ಪ್ರಚೋದಕವಾಗಿ ಕೆಲಸ ಮಾಡಿದರೆ (ಉದಾ: ಡೋಪಮಿನ್, ಅಸಿಟೈಲ್‌ ಕೋಲಿನ್) ಕೆಲವು ಸಾಗಾಟವನ್ನು ತಗ್ಗಿಸುವ ಕೆಲಸ ಮಾಡುತ್ತವೆ. (ಗಾಬಾ, ಗೈಸಿನ್‌) ಒಂದು ನರಕೋಶ ಸಾಮಾನ್ಯವಾಗಿ ಒಂದು ಬಗೆಯ ನರವಾಹಕವನ್ನು ಹೊಂದಿರುತ್ತದೆ.

ಬಹುಪಾಲು ನರವಾಹಕಗಳ ಮೂಲ ನಾವು ಸೇವಿಸುವ ಪ್ರೋಟೀನ್‌ಗಳು. ನರವಾಹಕಗಳು ಅಮೈನೋ ಆಮ್ಲಗಳು, ಆಹಾರದಲ್ಲಿ ನಾವು ಸೇವಿಸುವ ಈ ಅಮೈನೋ ಆಮ್ಲಗಳು, ನರವಾಹಕಗಳ ರೂಪಕ್ಕೆ ಪರಿವರ್ತಿತವಾಗುವುದು. ನಮ್ಮ ದೇಹದೊಳಗೇ ಇರುವ ಕೆಲವು ಕಿಣ್ವಗಳ ಸಹಾಯದಿಂದ, ನರವಾಹಕಗಳು ಸಂದೇಶ-ಸಂವೇದನೆಗಳ ಸಾಗಾಟ ಕಾರ್ಯದಲ್ಲಿ ಖರ್ಚಾಗಿ ನಾಶವಾಗುತ್ತಿದ್ದಂತೆ ಅವುಗಳ ಜಾಗದಲ್ಲಿ ಹೊಸವು ಉತ್ಪತ್ತಿಗೊಳ್ಳುತ್ತವೆ. ಈ ನರವಾಹಕಗಳನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗಿಲ್ಲ. ಅಥವಾ ಪ್ರಾಣಿಗಳ ಮಿದುಳಿನಿಂದ ಪ್ರತ್ಯೇಕಿಸಲೂ ಆಗಿಲ್ಲ. ಈ ನರವಾಹಕಗಳು ಹೆಚ್ಚು ಹೊತ್ತು ಸೈನಾಪ್ಸ್‌ಗಳಲ್ಲಿ ಇರುವಂತೆ ಮಾಡುವ ಅಥವಾ ನರತಂತುವಿನ ತುದಿಯಲ್ಲಿರುವ ರಿಸೆಪ್ಟಾರ್‌ಗಳನ್ನು ಮುಚ್ಚುವ ಅಥವಾ ತೆರೆಯುವ ಕೆಲಸ ಮಾಡಬಲ್ಲ ಔಷಧಿಗಳು ಈಗ ಲಭ್ಯವಿದೆ. ಸೆರೋಟೊನಿನ್ ನರವಾಹಕಗಳನ್ನು ವಾಪಸ್ ಹೀರಿಕೊಳ್ಳುವ ವ್ಯವಸ್ಥೆಯನ್ನು ತಗ್ಗಿಸಿ ಹೆಚ್ಚು ಸೆರೋಟೊನಿನ್ ಸೈನಾಪ್ಸ್‌ನಲ್ಲಿ ಉಳಿಯುವಂತೆ ಮಾಡುವ ‘ಪ್ಲೂಯಾಕ್ಲೆಟಿನ್’ ಔಷಧವನ್ನು ಇಂದು ಪರಿಣಾಮಕಾರಿ ಖಿನ್ನತೆ ನಿವಾರಕವಾಗಿ ಗೀಳು ಮನೋಭೇನೆಯ ಪ್ರಮುಖ ಲಕ್ಷಣವಾದ – ಬೇಡದ ಆಲೋಚನೆಗಳು, ಬಿಂಬಗಳು, ಮನಸ್ಸಿನೊಳಕ್ಕೆ ಬರುವುದನ್ನು ತಡೆಗಟ್ಟಲು ಉಪಯೋಗವಾಗುತ್ತದೆ. ಡೋಪಮಿನ್ ನರವಾಹಕ ವಸ್ತು ಸೇರುವ ರಿಸೆಪ್ಟಾರ್‌ಗಳನ್ನು ಮುಚ್ಚಿ ಹಾಕುವ ‘ಕ್ಲೋರ್‌ಫ್ರೋಮಜನ್‌’ ಅಥವಾ ಹೆಲೋಪೆರಿಡಾಲ್ ಔಷಧವನ್ನು ಸ್ಕಿಜೋಫ್ರೀನಿಯಾ ಅಥವಾ ಮೇನಿಯಾ ರೋಗದ ಚಿಕಿತ್ಸೆಗೆ ಬಳಸಲಾಗುತ್ತಿದೆ.

ನರವಾಹಕಗಳ ಇರುವಿಕೆ ಮತ್ತು ಕಾರ್ಯವನ್ನು ಅರ್ಥಮಾಡಿಕೊಂಡ ಮೇಲೆ ಅದುವರೆಗೆ ಗೊಂದಲಮಯವಾಗಿದ್ದ ರಹಸ್ಯವೆನಿಸಿದ್ದ ತೀವ್ರ ರೀತಿಯ ಮಾನಸಿಕ ಕಾಯಿಲೆಗಳಾದ ಸ್ಕಿಜೋಫ್ರೀನಿಯಾ, ಮೇನಿಯಾ, ಖಿನ್ನತೆಗಳು ಮೆದುಳಿನ ಕಾಯಿಲೆಗಳೆಂದು ತಿಳಿಯಲು ಸಾಧ್ಯವಾಯಿತು. ಡೋಪಮಿನ್ ವ್ಯವಸ್ಥೆ ಅತಿ ಚುರುಕಾಗುವುದೇ ಸ್ಕ್ರೀಜೋಫ್ರೀನಿಯಾ ರೋಗದ ಗುಟ್ಟು. ನರತುದಿಯ ಹೆಚ್ಚಿನ ರಿಸೆಪ್ಟಾರ್‌ಗಳು ಪ್ರಚೋದನೆಗೊಂಡು, ವ್ಯಕ್ತಿಯ ಆಲೋಚನೆಗಳು ಹಳಿ ತಪ್ಪುತ್ತವೆ. ಭ್ರಮೆಗಳು ಮೂಡುತ್ತವೆ ನಡವಳಿಕೆ ಅಸ್ತವ್ಯಸ್ತಗೊಳ್ಳುತ್ತದೆ.

ಹಾಗೆಯೇ ಮಿದುಳಿನ ಆಯಕಟ್ಟಿನ ಭಾಗಗಳಲ್ಲಿ ನಾರ್‌ಎಪಿನೆಫ್ರಿನ್ ಡೋಪಮಿನ್ ಕಡಿಮೆಯಾದರೆ, ಸೆರೋಟೊನಿನ್ ಮಟ್ಟ ತಗ್ಗಿದರೆ ವ್ಯಕ್ತಿಯನ್ನು ತೀವ್ರ ಬಗೆಯ ಖಿನ್ನತೆ ಕಾಯಿಲೆ ಆವರಿಸುತ್ತದೆ. ಆತನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತದೆ.

ಮಿದುಳಿನ ತಳದ ನರಗಂಟುಗಳಲ್ಲಿ ಡೋಪಮಿನ್ ಕಡಿಮೆಯಾದಾಗ, ಕೈಕಾಲು ನಡುಕ, ಸ್ನಾಯುಗಳ ಬಿಗಿತ, ನಿಧಾನಗತಿಯ ಚಲನೆಯಂತಹ ರೋಗ ಲಕ್ಷಣಗಳನ್ನುಂಟು ಮಾಡುವ ಪಾರ್ಕಿನ್‌ಸನ್ ರೋಗ ಬರುತ್ತದೆ.

ನೆನಪಿನ ಪ್ರಕ್ರಿಯೆಯಲ್ಲಿ ‘ಅಸಿಟೈಲ್ ಕೋಲಿನ್’ ಪ್ರಮುಖ ಪಾತ್ರವಹಿಸುತ್ತದೆ. ಪಂಚೇಂದ್ರಿಯಗಳ ಮುಖಾಂತರ ಮಿದುಳನ್ನು ಸೇರಿದ ಯಾವುದೇ ಮಾಹಿತಿ, ಮಿದುಳಿನ ನರಕೋಶಗಳಲ್ಲಿ ಮುದ್ರಣವಾಗಲು ಈ ನರವಾಹಕ ಶಾಯಿಯಂತೆ ಕೆಲಸ ಮಾಡುತ್ತದೆ. ಮಿದುಳಿನ ಅಸಿಟೈಲ್ ಕೋಲಿನ್ ಸಂಗ್ರಹ, ಒಮ್ಮೆಗೆ ಹೆಚ್ಚೆಂದರೆ ಒಂದು ಗಂಟೆ ಕಾಲ ಮಾಹಿತಿ ಮುದ್ರಣ ಮಾಡಲು ಸಾಕಾಗುತ್ತದೆ. ಆ ಮೇಲೆ ಮಾಹಿತಿ ಮುದ್ರಣಗೊಳ್ಳಲು ನರವಾಹಕ ಅಭಾವವಾಗಿ ವ್ಯಕ್ತಿ ಕಷ್ಟಪಟ್ಟು ಅಧ್ಯಯನ ಮಾಡಿದರೂ, ಕಲಿತ ವಸ್ತು ನೆನಪಿನಲ್ಲಿ ಉಳಿಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಒಂದೇ ಸಮ ಗಂಟೆಗಟ್ಟಲೆ ಓದುವುದನ್ನು ಬಿಟ್ಟು ನಲವತ್ತೈದು ನಿಮಿಷ ಓದಿ ಬಳಿಕ ಮನನ ಐದು ನಿಮಿಚಗಳ ವಿಶ್ರಾಂತಿ, ಅನಂತರ ಮತ್ತೆ ನಲವತ್ತೈದು ನಿಮಿಷಗಳ ಓದು. ಓದಿದ್ದನ್ನು ಮತ್ತೆ ಮತ್ತೆ ನೆನೆಸಿಕೊಳ್ಳುವುದು ಈ ವಿಧಾನವನ್ನು ಅನುಸರಿಸುವುದು ಹೆಚ್ಚು ಉಪಯುಕ್ತ.

ನರಜಾಲದ ವಿಧಗಳು

ಮಿದುಳೂ ಸೇರಿದಂತೆ, ಇಡೀ ನರತಂತುಗಳ ಜಾಲವನ್ನು ಸ್ವಾಯತ್ತ ನರಜಾಲ (ಆಟೋನಾಮಿಕ್ ನರ್ವಸ್ ಸಿಸ್ಟಮ್) ಮತ್ತು ಐಚ್ಚಿಕ ನರಜಾಲ (ವಾಲಂಟರಿ ನರ್ವಸ್ ಸಿಸ್ಟಮ್) ಎಂದು ಎರಡು ಭಾಗ ಮಾಡಬಹುದು. ಹೆಸರೇ ಸೂಚಿಸಿದಂತೆ, ಮೊದಲನೆಯದು ನಮ್ಮ ಹತೋಟಿಗೆ ಒಳಪಡದೇ, ತನ್ನದೇ ಆದ ರೀತಿಯಲ್ಲಿ ಸ್ವಯಂ ನಿಯಂತ್ರಣಕ್ಕೆ ಒಳಪಟ್ಟುಕೊಂಡು ಕೆಲಸ ನಿರ್ವಹಿಸಿದರೆ ಎರಡನೆಯದು ನಮ್ಮ ಇಚ್ಚೆಯಂತೆ ಕೆಲಸ ಮಾಡುತ್ತದೆ.

ಸ್ವಾಯತ್ತ ನರಜಾಲ

ಇದು ಮುಖ್ಯವಾಗಿ, ಲೈಂಗಿಕ ವ್ಯವಸ್ಥೆಯೂ ಸೇರಿದಂತೆ, ದೇಹದ ಎಲ್ಲ ಒಳ ಅಂಗಾಂಗಗಳ, ನಿರ್ನಾಳ ಗ್ರಂಥಿಗಳ ಕೆಲಸ-ಚಟುವಟಿಕೆಗಳನ್ನು ನಿರ್ದೇಶಿಸುತ್ತದೆ. ಹೃದಯ ನಿಮಿಷಕ್ಕೆ ಎಪ್ಪತ್ತು ಸಾರಿ ಸಂಕುಚನಗೊಳ್ಳುವುದು. ಶ್ವಾಸನಾಳ-ಶ್ವಾಸಕೋಶಗಳು ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಸ್ನಾಯುಗಳು ನಿಮಿಷಕ್ಕೆ ಹದಿನಾರು ಸಲ, ಗಾಳಿಯನ್ನು ಒಳಗೆಳೆದುಕೊಂಡು ಬಿಡುವುದು ತನ್ನೊಳಗೆ ಬಂದ ಆಹಾರವನ್ನು ಜಠರ, ಕರುಳು ಜೀರ್ಣಿಸಿ, ಪೌಷ್ಠಿಕಾಂಶಗಳನ್ನು ಹೀರಿಕೊಳ್ಳುವುದು. ಮೂತ್ರ ಜನಕಾಂಗ ಲಿವರ್‌ಗಳು ರಕ್ತವನ್ನು ಶೋಧಿಸಿ, ಕಲ್ಮಶಗಳನ್ನು ಹೊರಹಾಕುವುದು. ಬೆವರು ಹೆಚ್ಚಾಗಿ ಅಥವಾ ಕಡಿಮೆಯಾಗಿ ಶರೀರದ ತಾಪಮಾನ ಸದಾ ೩೭ ಡಿಗ್ರಿ ಇರುವುದು, ಲೈಂಗಿಕ ಆಸೆಗಳು ಮನಸ್ಸಿನಲ್ಲಿ ಮೂಡುತ್ತಿದ್ದಂತೆ ಅಥವಾ ಲೈಂಗಿಕ ಸಂಗಾತಿ ಸಮೀಪಕ್ಕೆ ಬರುತ್ತಿದ್ದಂತೆ ಜನನಾಂಗ ಉದ್ರೇಕಗೊಳ್ಳುವುದು- ಇವೆಲ್ಲ ಸ್ವಾಯತ್ತ ನರಜಾಲದ ಚಟುವಟಿಕೆಯ ಫಲ. ನಮ್ಮ ಶರೀರದ ಒಳಾಂಗಣ ವ್ಯವಸ್ಥೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಈ ಮಾಹಿತಿ ಕೇಂದ್ರ ನರಮಂಡಲಕ್ಕೆ ವರದಿಯಾಗುತ್ತದೆ. ಉದಾಹರಣೆಗೆ ಹೃದಯಕ್ಕೆ ತುಸು ಹಾನಿಯಾಯಿತೆನ್ನಿ ಅದು ನೋವಿನ ರೂಪದಲ್ಲಿ ಮಿದುಳನ್ನು ಮುಚ್ಚಿ ಎಚ್ಚರಿಗೆ ಗಂಟೆ ಭಾರಿಸುತ್ತದೆ. ರೋಗಿ ವೈದ್ಯರನ್ನು ಕಾಣುವಂತಾಗುತ್ತದೆ. ಚಿಕಿತ್ಸೆ, ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಾನೆ.

 

 

ಈ ಸ್ವಾಯತ್ತ ನರಜಾಲದಲ್ಲಿ ಎರಡು ವಿಧಗಳಿವೆ. ಅನುವೇದಕ ವ್ಯವಸ್ಥೆ (ಸಿಂಪಥೆಟಿಕ್) ಮತ್ತು ಪರಾನುವೇದಕ ವ್ಯವಸ್ಥೆ (ಪ್ಯಾರಾ ಸಿಂಪಥೆಟಿಕ್). ಅನುವೇದಕ ವ್ಯವಸ್ಥೆ ನಮ್ಮ ಶರೀರದ ವೇಗವರ್ಧಕ ಇದ್ದ ಹಾಗೆ. ಒಳಗಿನ ಅಥವಾ ಹೊರಗಿನ ಅಪಾಯ ಕಾಣಿಸಿಕೊಂಡಾಗ ಈ ವ್ಯವಸ್ಥೆ ಪ್ರಚೋದನೆಗೊಂಡು ನಮ್ಮನ್ನು ಹೋರಾಟಕ್ಕೆ ಸಜ್ಜುಗೊಳಿಸುತ್ತದೆ. ಅಥವಾ ಪಲಾಯನಕ್ಕೆ ಅಣಿಮಾಡುತ್ತದೆ. ಪ್ರಾಣಿಯಲ್ಲಾದರೆ ಅದು ಮೈ ಉಬ್ಬಿಸಿ ಗುರ್‌ ಎಂದು ಆಕ್ರಮಣಕ್ಕೆ ಅಥವಾ ಬಾಲ ಮುದುರಿಕೊಂಡು ಕುಂಯ್‌ ಗುಡುತ್ತಾ ಓಡಿ ಹೋಗಲು ಸಿದ್ಧವಾಗುತ್ತದೆ (Fight or Flight response) ವ್ಯಕ್ತಿ ಹೋರಾಟಕ್ಕೆ ಸಜ್ಜಾದಾಗ ಸ್ನಾಯುಗಳು ಹುರಿಕೊಳ್ಳುತ್ತವೆ. ಹೃದಯ ಬಡಿತ ಹೆಚ್ಚುತ್ತದೆ. ಉಸಿರಾಟದ ವೇಗವೂ ಹೆಚ್ಚುತ್ತದೆ. ಲಿವರ್‌ನ ಗ್ಲೈಕೋಜನ್‌ ಗ್ಲೂಕೋಸ್ ಆಗಿ ಪರಿವರ್ತನೆಗೊಂಡು ಶರೀರಕ್ಕೆ ಹೆಚ್ಚು ಶಕ್ತಿ ಲಭ್ಯವಾಗಿರುತ್ತದೆ. ಹೆಚ್ಚು ಬೆವರು ಉತ್ಪತ್ತಿಯಾಗುತ್ತದೆ. ಮನಸ್ಸನ್ನು ಸಿಟ್ಟು, ಕೋಪ ಅಥವಾ ಭಯ ಆವರಿಸಿಕೊಳ್ಳುತ್ತದೆ. ಮೈಮನಗಳು ದಣಿಯುತ್ತವೆ. ಈ ದಣಿವಿನಿಂದ ಅವನ ಸಾಮರ್ಥ್ಯ ತಾತ್ಕಾಲಿಕವಾಗಿ ಕುಂಠಿತವಾಗುತ್ತದೆ. ಬೌದ್ಧಿಕ ಚಿಂತನೆ, ಹೊಸ ಕಲಿಕೆ ಕಷ್ಟವಾಗುತ್ತದೆ. ತೀವ್ರ ಸ್ಪರ್ಧೆ, ಅರಕ್ಷಿತ ಭಾವನೆ, ಮೋಸ ಹೋಗುವ ಭಯ, ಏನಾಗುತ್ತದೋ ಏನೋ ಎಂಬ ಅಥವಾ ಸೋಲುವ ಆತಂಕ, ಅತೃಪ್ತಿ ಎಷ್ಟಿದ್ದರೂ ಮತ್ತಷ್ಟು ಬೇಕೆನ್ನುವ ಆಸೆ. ಸಂಬಂಧಗಳು ಹಳಸಿಕೊಂಡು, ಅವಿಶ್ವಾಸ ಅಪನಂಬಿಕೆಯ ಸಾಮಾಜಿಕ ವಾತಾವರಣದಲ್ಲಿ ವಾಸಿಸುವ ನಮ್ಮಲ್ಲಿ ಈ ಅನುವೇದಕ ವ್ಯವಸ್ಥೆ ಸದಾ ಪ್ರಚೋದಿತ ಸ್ಥಿತಿಯಲ್ಲೇ ಇದ್ದು ಅನೇಕ ಮನೋದೈಹಿಕ ರೋಗಗಳಿಗೆ ಕಾರಣವಾಗುತ್ತದೆ.

ಪರಾನುವೇದಕ ವ್ಯವಸ್ಥೆ ನಮ್ಮ ಶರೀರವನ್ನು ಪುನಃ ನಾರ್ಮಲ್ ಸ್ಥಿತಿಗೆ ಒಯ್ಯುತ್ತದೆ. ಇದು ನಮ್ಮ ಶರೀರದ ಸಮತೋಲನ ಕಾಯುವ ಬ್ರೇಕ್ ಇದ್ದಂತೆ. ದೇಹಕ್ಕೆ ಬೇಕಾದ ಸಡಿಲತೆ, ವಿರಾಮವನ್ನು ತರುತ್ತದೆ. ಆಗ ದೇಹದ ಸವೆತ ನಿಲ್ಲುತ್ತದೆ. ಪ್ರಶಾಂತ ಪರಿಸರ, ಸುಂದರ ಪ್ರಕೃತಿ, ಆತ್ಮೀಯರ ಸ್ನೇಹದ ಮಾತುಗಳು, ಇಂಪಾದ ಸಂಗೀತ, ಸುಂದರ ಕವನ, ಧ್ಯಾನ ಇವೆಲ್ಲ ಪರಾನುವೇದಕ ವ್ಯವಸ್ಥೆಯನ್ನು ಪ್ರವೋದಿಸಿ ನಮ್ಮ ಮೈಮನಗಳ ಹಿತವನ್ನು ಕಾಯುತ್ತವೆ.

ಐಚ್ಛಿಕ ನರವ್ಯವಸ್ಥೆ

ಐಚ್ಛಿಕ ನರ ವ್ಯವಸ್ಥೆ ನಮ್ಮ ನೇರ ಹತೋಟಿಯಲ್ಲಿರುತ್ತದೆ. ಕೈಕಾಲುಗಳ ಚಾಲನೆ, ಐಚ್ಛಿಕ ನರವ್ಯವಸ್ಥೆಯಡಿಯಲ್ಲಿ ಬರುತ್ತದೆ. ಈ ಮೊದಲೇ ನೀವು ತಿಳಿದಂತೆ ಮಿದುಳಿನ ಮೇಲ್ಮೈಯ ಚಲನ ಕ್ಷೇತ್ರ, ಉಪ ಮಸ್ತಿಷ್ನ ಈ ಚಲನೆಯನ್ನು ನಿರ್ದೇಶಿಸುತ್ತವೆ.

ನರಬೇನೆ (Neuropathy)

ಪರಿಧಿಯ ನರಗಳು ರೋಗಗ್ರಸ್ತವಾಗಬಹುದು. ನರಕೋಶದ ದೇಹ, ಆಕ್ಸಾನ್, ಹೊರಪೊರೆ (ಮೈಲಿನ್ ಶೀತ್), ಈ ನರತಂತುಗಳಿಗೆ ರಕ್ತ ಪೂರೈಸುವ ರಕ್ತನಾಳಗಳು ಹಾನಿಗೀಡಾಗಬಹುದು. ಒಂದು ನರ ಹಾನಿಗೀಡಾಗಬಹುದು. ಸಾಮಾನ್ಯ ಕಾರಣ: ಪೆಟ್ಟು, ಉರಿತ ಮತ್ತು ಸಿಹಿ ಮೂತ್ರ ರೋಗ. ಉದಾಹರಣೆಗೆ ಕಾರ್ಪಲ್ ಟನಲ್ ಸಿಂಡ್ರೋಮ್. ಕೈಗೆ ಬರುವ ಮೀಡಿಯನ್ ನರಕ್ಕೆ ಪೆಟ್ಟಾಗಿ ಅಂಗೈ ಮತ್ತು ಬೆರಳುಗಳಲ್ಲಿ ನೋವು ಮತ್ತು ಉರಿ ಕಾಣಿಸಿಕೊಳ್ಳುತ್ತದೆ. ಪೆರೋನಿಯಲ್ ನರಕ್ಕೆ ಹಾನಿಯಾದಾಗ, ಪಾದ ಕೆಳಕೆಕೆ ಬಾಗುತ್ತದೆ. (ಫುಟ್ ಡ್ರಾಪ್) ಸಹಿ ಮೂತ್ರ ರೋಗಿಗಳಲ್ಲಿ ಮೂರನೇ ಮತ್ತು ಅಥವಾ ಆರನೇ ಕಪೋಲ ನರಕ್ಕೆ ಹಾನಿಯುಂಟಾಗಿ, ರೋಇಗೆ ಒಂದು ವಸ್ತು ಎರಡರಂತೆ ಕಾಣುವುದು (ಡಿಪ್ಲೋಪಿಯಾ) ಅಥವಾ ರೋಗಿಯಲ್ಲಿ ಕಾರ್ಪಲ್ ಟನಲ್ ಸಿಂಡ್ರೋಮ್ ಅಥವಾ ಫುಟ್ ಡ್ರಾಪ್ ಕೂಡ ಆಗಬಹುದು.

ಪಾಲಿ ನ್ಯೂರೊಪತಿಯಲ್ಲಿ ಹಲವು ನರ ತಂತುಗಳು ಸವೆಯುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಅನುವಂಶಿಕ ನ್ಯೂನತೆಗಳು, ಸಿಹಿ ಮೂತ್ರ ರೋಗಸ, ಇವರ್ ಅಥವಾ ಮೂತ್ರಜನಕಾಂಗದ ಸೋಲುವೆ, ಥೈರಾಕ್ಸಿನ್ ಹಾರ್ಮೋನು ಕೊರತೆ, ವಿವಿಧ ಮಧ್ಯಪಾನೀಯಗಳು, ಬಾರ ಲೋಹಗಳ ಸೇವನೆ, ಬಿ ವಿಟಮಿನ್ ಕೊರತೆ, ಸೋಂಕು ರೋಗಗಳಾದ ಕುಷ್ಠ, ಗಂಟಲಮಾರಿ, ಟೈಫಾಯಿಡ್, ಎಚ್.ಐ.ವಿ. ಮತ್ತು ಕೆಲವು ಬಗೆಯ ಕ್ಯಾನ್ಸ್‌ರ್‌ಗಳು ನರ ತಂತುಗಳು ಹಾಳಾದ ಭಾಗಗಳಲ್ಲಿ ಸ್ಪರ್ಶ ಜ್ಞಾನವಿಲ್ಲದಿರುವುದು ಹಾಗೂ ಸ್ನಾಯುಗಳ ನಿಶ್ಯಕ್ತಿ ಸವೆತ ಉಂಟಾಗುತ್ತದೆ.

ನರತಂತುಗಳ ಹಾನಿ ದಿಢೀರನೆ ಕೂಡ ಆಗಬಹುದು. ಇದಕ್ಕೆ ಸಾಮಾನ್ಯ ಕಾರಣ ವೈರಸ್‌ಗಳು. ಸಾಮಾನ್ಯ ಉದಾಹರಣೆ ಗಿಲಿಯನ್ ಬಾರೆ ನರಬೇನೆ ಇದ್ದಕ್ಕಿಂತೆ ಶರೀರದ ಒಂದು ಭಾಗದ ಸ್ನಾಯುಗಳು ನಿಷ್ಕ್ರಿಯಗೊಳ್ಳುತ್ತವೆ ಹಾಗೇ ಸ್ವಲ್ಪ ಕಾಲಾನಂತರ ಚೇತರಿಸಿಕೊಳ್ಳುತ್ತವೆ.

ನರಗಳಿಗೆ ಹಾನಿ ಮತ್ತು ಚೇತರಿಕೆಯ ವೇಗ

ನರಕ್ಕೆ ಪೆಟ್ಟಾಗಿ ಅದು ತುಂಡಾಯಿತೆಂದರೆ ಅಥವಾ ಸವೆದು, ನಾಶವಾದರೆ ಹಾನಿ ಶಾಶ್ವತ. ಇತರ ಎಲ್ಲಾ ಅಂಗಗಳಿಗೆ ಹೋಲಿಸಿದರೆ, ನರ ತಂತುಗಳ ಸ್ವ-ರಿಪೇರಿ ಸಾಮರ್ಥ್ಯ ಬಹಳ ಕಡಿಮೆ. ಆದ್ದರಿಂದ ನರಗಳಿಗೆ ಹಾನಿಯಾಗದಂತೆ ಎಚ್ಚರವಹಿಸುವುದು ಕ್ಷೇಮ.

ನರ ದೌರ್ಬಲ್ಯ

ಬಹಳಷ್ಟು ಜನ ನಮಗೆ ನರದೌರ್ಬಲ್ಯ ಅಥವಾ ನರ್ವಸ್ ವೀಕ್‌ನೆಸ್ ಇದೆ ಎಂದು ಅನುಮಾನಿಸುತ್ತಾರೆ ಅಥವಾ ನಂಬುತ್ತಾರೆ. ಸ್ವಲ್ಪಕ್ಕೇ ಆಯಾಸ, ನಿಶ್ಯಕ್ತಿ, ಮೈ ಕೈ ನೋವು, ತಲೆ ನೋವು, ನಿದ್ರಾಹೀನತೆ, ಲೈಂಗಿಕ ಅನಾಸಕ್ತಿ ಮತ್ತು ಅಥವಾ ದುರ್ಬಲತೆ ಇತ್ಯಾದಿ ಲಕ್ಷಣಗಳಿದ್ದರೆ ಇವು ‘ನರದೌರ್ಬಲ್ಯದ ಲಕ್ಷಣಗಳೆಂದು’ ಜನ ತಿಳಿಯುತ್ತಾರೆ. ಕಲಿಕೆಯಲ್ಲಿ ಹಿಂದುಳಿಯುವುದೂ ಮರೆವು, ಸುಲಭಕ್ಕೆ ದುಃಖ, ಸಿಟ್ಟಿಗೆ ಒಳಗಾಗುವುದನ್ನೂ ನರ ದೌರ್ಬಲ್ಯ ಎಂದು ತಿಳಿಯುವವರಿದ್ದಾರೆ. ನರಗಳಿಗೆ ಶಕ್ತಿ ಬರಿಸುವಂತಹ ಟಾನಿಕ್ಕೂ ಅಥವಾ ಇಂಜೆಕ್ಷನ್ ಕೊಡಿ’ ಎಂದು ದುಂಬಾಲು ಬಿದ್ದು ಬಿ ಕಾಂಪ್ಲೆಕ್ಸ ಸಿರಫ್ ಅಥವಾ ಇನ್‌ಜೆಕ್ಷನ್‌ಗಳನ್ನು ತೆಗೆದುಕೊಳ್ಳುತ್ತಾರೆ. ವಾರಕ್ಕೊಂದು ಸಲ ನ್ಯೂರೋಬಿಯಾನ್ ಇನ್‌ಜೆಕ್ಷನ್ ತೆಗೆದುಕೊಂಡು, ತಾವು ಶಕ್ತಿವಂತರಾಗುತ್ತದ್ದೇವೆ ಎಂದು ಭ್ರಮೆ ಪಡುವವರಿದ್ದಾರೆ! ರೋಗಿಯ ರೋಗ ಲಕ್ಷಣಗಳು ಅಸ್ಪಷ್ಟವಾಗಿದ್ದು ರೋಗವೇನು ಎಂದು ತಿಳಿಯದಿದ್ದಾಗ, ಎಲ್ಲ ಪರೀಕ್ಷೆಗಳು ನಾರ್ಮಲ್ ಆಗಿ, ರೋಗ ಲಕ್ಷಣಗಳು ಮಾನಸಿಕ ಜನ್ಯ ಎಂದು ಗೊತ್ತಾದಾಗ, ವೈದ್ಯರೂ ‘ಈ ನರ ದೌರ್ಬಲ್ಯದ ಮೊರೆ ಹೋಗುತ್ತಾರೆ. ನಿನಗೆ ಯಾವ ರೋಗವೂ ಇಲ್ಲವಯ್ಯಾ. ಸ್ವಲ್ಪ ನರ್ವಸ್ ವೀಕ್‌ನೆಸ್ ಇರಬಹುದು. ಒಂದು ಟಾನಿಕ್ ಬರೆದುಕೊಡುತ್ತೇನೆ ತಗೋ ತಲ್ಲ ಸರಿಹೋಗಿಬಿಡುತ್ತೆ’ ಎಂದು ಅವನನ್ನು ಸಾಗಹಾಕುತ್ತಾರೆ. ಜನರು ಅಥವಾ ವೈದ್ಯರುಸ ಈ ರೀತಿ ಕರೆಯುವ ಕಾಯಲೆ ನರಗಳಿಗೆ ಸಂಬಂಧಿಸಿದ್ದಲ್ಲವೇ ಅಲ್ಲ. ಆ ರೋಗಿಯ ನರಗಳು ಮಾಮೂಲಿನಂತೆಯೇ ಕೆಲಸ ನಿರ್ವಹಿಸುತ್ತಿರುತ್ತವೆ. ಹೆಚ್ಚೆಂದರೆ ಅನುವೇದಕ ನರ ವ್ಯವಸ್ಥೆ ಹೆಚ್ಚು ಪ್ರಚೋದಿತಗೊಂಡಿರುತ್ತದೆ. ರೋಗಿಗೆ ಖಿನ್ನತೆಯೋ, ಆತಂಕವೋ ಇರಬಹುದು. ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು. ಉನ್ಮಾದ ಮನೋಬೇನೆ ಇರಬಹುದು. ಆದರೆ ಅದನ್ನು ಗುರುತಿಸದೇ ಬಿ ಕಾಂಪ್ಲೆಕ್ಸ್ ಸಿರಫ್ ಕುಡಿಯುವುದರಿಂದ ಇಂಜೆಕ್ಷನ್ ಹಾಕಿಸಿಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಈ ಔಷಧಿಗಳನ್ನು ಮಾರುವ ಕಂಪನಿಗಳು ಸಾಕಷ್ಟು ಲಾಭ ಮಾಡುತ್ತಿವೆ ಅಷ್ಟೆ.

ನರ ದೌರ್ಬಲ್ಯವೆಂದು ಯಾರಾದರೂ ಹೇಳಿದರೆ, ಅವರಿಗೆ ಮಾನಸಿಕ ಸಮಸ್ಯೆಗಳಿಂದ ಉಂಟಾದ ಶಾರೀರಿಕ ಲಕ್ಷಣಗಳಿವೆ (ನೋವು, ಆಯಾಸ, ದುರ್ಬಲತೆ, ನಿಶ್ಯಕ್ತಿ) ಇವೆ ಎಂದು ಭಾವಿಸಬೇಕು. ಆ ಮಾನಸಿಕ ಒತ್ತಡಕ್ಕೆ ಕಾರಣಗಳೇನು, ಅವುಗಳ ಪರಿಹಾರಕ್ಕೆ ಮಾರ್ಗೋಪಾಯಗಳೇನು, ರೋಗಿ ವಿರಮಿಸಿ, ಮೈಮನಗಳನ್ನು ಸಡಿಲ ಬಿಟ್ಟು ಅನುಕೂಲತೆಯನ್ನು ಪಡೆಯಲು ಏನು ಮಾಡಬೇಕು ಎಂಬುದನ್ನು ವೈದ್ಯರು, ಮನೆಯವರು ಯೋಚಿಸಿ ಕಾರ್ಯಪ್ರವೃತ್ತರಾಗಬೇಕು.

ನರಹೊರಳಿದೆ

ಇನ್ನು ಕೆಲವರು ತಮಗೆ ನರ ಹೊರಳಿದೆ, ನರ ಗಂಟು ಹಾಕಿಕೊಂಡು ಬಿಟ್ಟಿದೆ ಅದರಿಂದಾಗಿ, ಸಹಿಸಲಾಗದ ನೋವು ಎಂದು ವೈದ್ಯರ ಬಳಿಗೆ ಬರುತ್ತಾರೆ. ಈ ತರಹದ ರೋಗ ಯಾವುದೂ ಇಲ್ಲ. ಕಾಲು ಅಥವಾ ಅಂಗ ಹೊರಳಿ, ಸ್ನಾಯುಗಳು ತಿರುಚಿಕೊಂಡಾಗ ಅಥವಾ ಸ್ನಾಯುಗಳು ಸಂಕುಚನಗೊಂಡಾಗ ಈ ಬಗೆಯ ನೋವುಂಟಾಗುತ್ತದೆ. Muscle Cramps ಅಥವಾ Muscle Sprain ಇವು ಗುಣವಾಗುತ್ತವೆ.