ರಾಗ ಸಾಂಗತ್ಯ ರೂಪಕತಾಳ

ಘನಹರುಷದಲಿ ನಾರದನನ್ನು ಪಿಡಿದೆತ್ತಿ | ಮನದೊಳಭವ ನಸುನಗುತ ||
ಮುನಿಪ ನೀನಾರನು ಕೊಂದಾಡಿಸಲು ಬಂದೆ | ಎನುತ ಕೇಳಲು ಪೇಳ್ದನಾಗ ||೨೩೪||

ಹರನೆ ಲಾಲಿಸು ತನ್ನ ಮೊಮ್ಮಗೋಸುಗ ಮುರ | ಹರನು ದಂಡೆತ್ತಿ ಬಂದಿಹನು ||
ಬರಿದೆ ಕಲಹ ಬೇಡವೆಂದೀಶನೊಳ್ಪೇಳೆಂ | ದೊರೆದೆನ್ನ ನಿಲ್ಲಿಗಟ್ಟಿದನು ||೨೩೫||

ಅದರಿಂದ ನಾ ನಿನ್ನ ಬಳಿಗೆ ಬಂದೆನು ದೇವ | ಮದನಸಂಭವಗೆ ಬಾಣಜೆಯ ||
ಮುದದಿಂದ ಕೊಡಿಸಿ ಮನ್ನಿಸದೆ ಮಾಧವನೊಳು | ಕದನ ಲೇಸಾಗದಾಶರಗೆ ||೨೩೬||

ಕಂದ

ಸುರಮುನಿಯೆಂದುದನುಂ ಪುರ |
ಹರನಾಲಿಸುತ್ತೈದೆ ಸಂತಸವೆತ್ತಾಗಳ್ ||
ಚರರೊಳ್ ಬಲ್ಲಿದನೋರ್ವನ |
ಕರೆದತಿ ಮೃದುವಾಕ್ಯದಿಂದ ಪೇಳಿದ ನವನೊಳ್ ||೨೩೭||

ರಾಗ ಪಂಚಾಗತಿ ಮಟ್ಟೆತಾಳ

ಚರನೆ ಕೇಳು ಬಾಣಖಳನ ಬಳಿಗೆ ಕ್ಷಣದಲಿ |
ಭರದಿ ಪೋಗಿಯಾತನೊಡನೆ ಪೇಳು ಮುದದಲಿ ||
ಸ್ಮರನ ತನುಜಗಾಗಿ ಸೇನೆಸಹಿತ ಕೃಷ್ಣನು |
ಧುರಕೆ ಬಂದನಂತೆ ಕಲಹ ಬೇಡ ಸುತೆಯನು ||೨೩೮||

ಹರಿಯ ಮೊಮ್ಮಗಿತ್ತು ಪ್ರೇಮದಿಂದಲವರನು |
ಪುರಕೆ ಕಳುಹೆ ಚಂದವಹುದು ಎಂಬ ಮಾತನು ||
ಹರನು ಪೇಳ್ದನೆಂದು ದೈತ್ಯಗುಸಿರಿ ಬೆದರದೆ |
ಮರಳಿ ಬಹುದು ಕೋಪಿಸಿದಡೆ ಪೋದ ಮಾರ್ಗದಿ ||೨೩೯||

ಶರಷಟ್ಪದಿ

ಇಂದುಧರಂ ಪೇ |
ಳ್ದಂದವನುಂ ಕೇ |
ಳ್ದಂದಾ ಚರನತಿ ವೇಗದಲಿ ||
ಬಂದಾ ಬಾಣನ |
ಮುಂದತಿ ಧೈರ್ಯದಿ |
ನಿಂದಿಂತೆಂದಂ ವಿನಯದಲಿ ||೨೪೦||

ರಾಗ ಕಾಪಿ ಅಷ್ಟತಾಳ

ಲಾಲಿಸ ಕೇಳೆನ್ನ ಮಾತ | ಕಾಲ | ಕಾಲ ಭಕ್ತ ಮೂರ್ಲೋಕ ವಿಖ್ಯಾತ || ಪ ||

ಒರೆಯೆಂದೀಗೆನ್ನ ನಟ್ಟಿದನು | ದೈತ್ಯ |
ವರ ನೀ ಕೋಪಿಸದಿರ್ದಡುಸಿರುವೆ ನಾನು ||೨೪೧||

ಕಾಮನಾತ್ಮಜನ ನೀ ತಂದು | ಬಹು | ಸಾಮರ್ಥ್ಯದಿಂ ಸೆರೆಯೊಳಗಿಟ್ಟೆಯೆಂದು ||
ಆ ಮಾತ ಹರಿ ಕೇಳ್ದನಂತೆ | ಬಲ | ರಾಮ ಯಾದವರ್ ಸಹ ಬಂದಿಹನಂತೆ ||೨೪೨||

ಇನ್ನಾದರೂ ಸ್ಮರಸುತಗೆ | ಉಷೆ | ಯನ್ನಿತ್ತು ನರಕಾಂತಕನನ್ನು ಮನೆಗೆ ||
ಮನ್ನಿಸಿ ಕರೆತಂದು ನೀನು | ಆತ | ನನ್ನು ಸಂತೋಷಿಸಿದರೆ ಕಾವನವನು ||೨೪೩||

ಕದನವೆಂಬುವುದೆ ಲೇಸಲ್ಲ | ಎಂದು | ಮದನಾರಿ ನಿನಗೊರೆಯೆಂದನೀ ಸೊಲ್ಲ ||
ತ್ರಿದಶಾರಿ ನಾ ಪೇಳ್ದೆನಯ್ಯ | ಇನ್ನು | ಪದುಮನಾಭನ ಹರುಷಿಸಿ ಕಳುಹಯ್ಯ ||೨೪೪||

ಶರಷಟ್ಪದಿ

ಎನೆ ಕೇಳ್ದಸುರಂ |
ಘನಕೋಪದೊಳಾ |
ತನನುಂ ಗರ್ಜಿಸಿ ಮಂತ್ರಿಯೊಳುಂ ||
ಅನುವರಮೆನಗಿಂ |
ದಿನಲಿ ದೊರಕಿತೆಂ |
ದೆನುತಾನಂದದೊಳಿಂತೆಂದಂ ||೨೪೫||

ರಾಗ ಸುರುಟಿ ಏಕತಾಳ

ಕೇಳ್ ಮಂತ್ರಿಯೆ ನೀನು | ಸಂತಸ | ದೊಳ್ ಮನ್ಮಥಹರ ತಾನು ||
ಮೇಲ್ಮಾಡಿದ ತುರುಗಾಯಿಯನೆನ್ನನು | ಕೀಳ್ ಮಾಡಿದನಿದು ಸಮವೆ ನೀ ಪೇಳು ||೨೪೬||

ಸೆರೆಯೊಳಗಾನಂದು | ಇಟ್ಟಿಹ | ತರಳಗೋಸುಗ ಇಂದು ||
ಧುರಕೆನ್ನೊಳು ಗೋಪರ ಬಲಸಹಿತಾ | ಕರಿಮೈಯವನೆನ್ನ ಪುರಕೆ ಬಂದಿಹನಂತೆ ||೨೪೭||

ಅನಿರುದ್ಧಗೆ ಬೇಗ | ಎನ್ನಯ | ತನುಜೆಯನಿತ್ತೀಗ ||
ವಿನಯದಿ ಗೋವಳನನು ಮನ್ನಿಸಿ ಕಳು | ಪೆನುತ ಗಿರೀಶ ದೂತನ ಕಳುಹಿರ್ಪನು ||೨೪೮||

ಉರಗಭೂಷಣ ಹೀಗೆ | ಪೇಳ್ದುದು | ಸರಿಬಂದುದೆ ನಿನಗೆ ||
ಒರೆಯೆಂದಾಶರವರ ಪೇಳಲುಮತಿ | ಹರುಷಬಡುತಲಾ ಸಚಿವ ನಿಂತೆಂದನು ||೨೪೯||

ರಾಗ ಮಧುಮಾಧವಿ ಆದಿತಾಳ

ಕೇಳು ದಾನವರಾಯ ನಾನೆಂಬ ನುಡಿಯ | ಜಾಲಮಾತಲ್ಲ ಕಿವಿಗೊಟ್ಟು ಎನ್ನೊಡೆಯ || ಪ ||

ತನುಜೆಯ ಸ್ಮರಜಗಿತ್ತರೆ ಚಂದವಯ್ಯ | ದನುಜಾರಿ ಬಂಧುತ್ವವಾಗೆ ಸುಖವಯ್ಯ ||
ಬಿನುಗು ಮಾತಾಡಿದನೆಂದು ನೀ ಎನ್ನ | ಘನವೇಗದಿಂದಟ್ಟಿಸೋ ಜೀಯ ಮುನ್ನ ||೨೫೦||

ಮಾಧವನೊಳು ಕಾದಿ ಬದುಕಿದರ್ಯಾರು | ವೇದಚೋರನೀತ ಕೊಲೆ ಕಾಯ್ದರಾರು ||
ಭೂಧರವನು ಬೆನ್ನಿನೊಳು ಪೊತ್ತನಿವನು | ಮೇದಿನಿತಸ್ಕರನನು ಕೊಂದನಿವನು ||೨೫೧||

ಹೇಮಾಕ್ಷನನು ಕಾದಿ ಗೆಲಿದಾತನೀತ | ವಾಮನನಾಗಿ ಭೂಮಿಯಳೆದಾತನೀತ ||
ಭೂಮಿಪ ಕಾರ್ತವೀರ್ಯನ ಗೆಲ್ದನೀತ | ಭೂಮಿಜೆಚೋರನ ಮಡುಹಿದನೀತ ||೨೫೨||

ಮಾತುಗಳ ಮೊದಲಾದ ದೈತ್ಯರನೆಲ್ಲ | ಖಾತಿಯಿಂದೆಮನೂರಿಗಟ್ಟಿದನಲ್ಲ ||
ಪಾತಕಿಗಳನೆಲ್ಲನುಳಿಸ ಲೋಕದಲಿ | ಮಾತು ನಂಬಿದರನ್ನು ಕಾವ ತೋಷದಲಿ ||೨೫೪||

ಬಲಿಯು ಪ್ರಹ್ಲಾದನು ಧ್ರುವವಿಭೀಷಣರು | ಜಲಜನಾಭನ ಪೊಂದಿ ಸುಖಿಯಾದರವರು ||
ನಳಿನಾಕ್ಷ ಹರರೊಳು ಭೇದವೆಣ್ಣಿಸದೆ | ಘಳಿಲನಾತನ ನಂಬು ಮನದಿ ಯೋಚಿಸದೆ || ೫ ||

ಕಂದ

ಈ ತೆರದಿಂ ಮಂತ್ರಿಯುಮತಿ |
ನೀತಿಯನುಂ ದೈನ್ಯದಿಂದ ಪೇಳಲ್ಕಮರಾ ||
ರಾತಿಯು ಆರ್ಭಟಿಸುತೆ ಘನ |
ಖಾತಿಯನುಂ ತಳೆದುಮೆಂದನಾ ಸಚಿವನೊಳುಂ ||೨೫೫||

ರಾಗ ಸೌರಾಷ್ಟ್ರ ಅಷ್ಟತಾಳ

ಎಲವೊ ಮಂತ್ರಿ ಕೇಳೊ ನಿನಗೆ | ಸಲುಗೆಗೊಟ್ಟುದರಿಂದೆನಗೆ |
ಬಲು ಹಿತವನು ನೀನು ನುಡಿದೆ | ಭಳಿರೆ ಮೆಚ್ಚಿದೆ ||೨೫೬||

ಕದನಕಟ್ಟಲಾಗಿ ನಿನ್ನ | ಮುದದಿ ಕರೆದು ಪೇಳ್ದರೆನ್ನ |
ಬೆದರಿಸಿ ನೀ ಪೇಳುವುದಿದು | ಚದುರತೆಯೇನೋ ||೨೫೭||

ದನುಜೇಶ ಲಾಲಿಸು ನಿನ್ನ | ಮನಕೆ ಕೋಪವಾದರೆನ್ನ |
ನನುವರಕೆ ಕಳುಹಿಸಯ್ಯ | ಕಿನಿಸೇಕೆ ಜೀಯ ||೨೫೮||

ಕಂದ

ಎನುತ ಸಚಿವಂ ಪೇಳಿದು |
ದನುಮಾಲಿಸುತಾಶರೇಂದ್ರನತಿ ತೋಷದೊಳಾ ||
ತನನುಂ ಮನ್ನಿಸಿ ಸ್ಮರನಾ |
ಶನ ಚರರನು ಕರೆದು ಪೇಳ್ದನೊಂದುತ್ತರವಂ ||೨೫೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಚರನೆ ಕೇಳೆಲೊ ಲಿಂಗಪೂಜೆಯ | ವಿರಚಿಸಿಯೆ ನಾ ಬಹೆನುಮನಿತರೊ |
ಳುರಗಭೂಷಣ ಕದನಕೈದಲಿ | ಭರದಿ ಪೇಳು ||೨೬೦||

ಎನಲು ಕೇಳ್ದಾ ದೂತ ವೇಗದಿ | ದನುಜನನು ಬೀಳ್ಕೊಂಡು ನಡೆತಂ |
ದನಿಮಿಷಾ ರ್ಚಿತಗೆರಗಿ ಪೇಳ್ದನು | ವಿನಯದಿಂದ ||೨೬೧||

ಗಿರಿಜೆಯರಸನೆ ಲಾಲಿಸಾಶರ | ವರಗೆ ದೇವರು ಪೇಳ್ದುದನು ನಾ |
ನೊರೆಯಲವ ಕೋಪಿಸಲು ಮಂತ್ರಿಯು | ಭರದಿ ಬಂದು ||೨೬೨||

ನೀತಿಮಾರ್ಗವನುಸಿರಲಮರಾ | ರಾತಿ ಕೇಳದೆಯವನ ಬೆದರಿಸಿ |
ಖಾತಿಯಂ ತಳೆದೆನ್ನೊಳೆಂದನು | ತಾ ತವಕದಿ ||೨೬೩||

ಲಿಂಗಪೂಜೆಯ ವಿರಚಿಸಿಯೆ ಬಹೆ | ನಂಗಜಾಂತಕನನಿತರೊಳು ಸಮ |
ರಾಂಗಣಕೆ ಮುಂದೈದಲೆಂದನು | ಭಂಗ ಬಾಣ ||೨೬೪||

ಕಂದ

ಚರನೆಂದುದ ಲಾಲಿಸುತಂ |
ಹರ ನಸುನಗುತಸುರಗಾಗಿ ಹರಿಯೊಡ ನೆಮಗಂ ||
ಧುರಮಾದುದೆನುತ ಸುರಮುನಿ |
ವರನಂ ನಮ್ರತೆಯೊಳೈದೆ ಕರೆದಿಂತೆಂದಂ ||೨೬೫||

ರಾಗ ಮಾರವಿ ರೂಪಕತಾಳ

ಮುನಿನಾಥ ಕೇಳ್ದೆಯಾ ದನುಜೇಶ ಪೇಳ್ದುದನು | ವನಜಾಕ್ಷನೆಡೆಗೆ ನೀವೈದಿ ||
ಅನುವರಕಾ ಭವನೈತಹನೆಂದು ಪೇ | ಳೆನುತ ಬೀಳ್ಕೊಟ್ಟನಾ ಋಷಿಯ ||೨೬೬||

ಇಂದುಧರನ ಬಳಿಯಿಂದ ನಾರದನು ಆ | ನಂದದೊಳೈತಂದು ಹರಿಯ ||
ಮುಂದೆ ನಿಂದರ್ತಿಯೊಳಂದು ನಮಿಸಿ ಭಕ್ತಿ | ಯಿಂದ ಕೈಮುಗಿದೆಂದನಾಗ ||೨೬೭||

ಪೀತಾಂಬರ ಕೇಳು ಬಾಣ ಸಂಧಾನದ | ಮಾತಾಗದೆಂದು ಆಹವಕೆ ||
ಭೂತೇಶನಿಂಗೆ ಸೂಚಿಸಲಾಗ ಕಾಳಗ | ಕಾತಬರ್ಪನು ಪುಸಿಯಲ್ಲ ||೨೬೮||

ವಾರ್ಧಕ

ಇತ್ತಲುಂ ನಾರದಮ ಹರಿಯೊಳಿಂತುಸಿರುತಿರ |
ಲತ್ತ ಗಂಗಾಧರಂ ಸಂಗರಕೆ ಪಯಣಮಂ |
ಚಿತ್ತದೊಳ್ ನಿಶ್ಚಯಿಸಿ ಪೊರೆಯೊಳಿಹ ವಾಸವಾ ದ್ಯಮರರಂ ಬರ್ಪುದೆಂದು ||
ಪತ್ತಿದಂ ಗೋಪತಿಯನಾ ಸಮಯದೊಳ್ಗಣರ |
ಮೊತ್ತಮತಿಯಾರ್ಭಟಿಸುತೊಡನೇಳಲಾಕ್ಷಣಂ |
ಹಸ್ತಿಮುಖ ಷಡ್ವದನ ಭೈರವರ್ ಸಹಿತ ತ್ರಿಲೋಚನಂ ನಡೆತಂದನು ||೨೬೯||

ರಾಗ ಪಂತುವರಾಳಿ ಮಟ್ಟೆತಾಳ

ಬಂದನೀಶನಂದು ಸಮರಕೆ | ತೋಷದಿಂದ | ಬಂದನೀಶನಂದು ಸಮರಕೆ || ಪ ||
ಇಂದಿರೇಶನೊಡನೆ ಸಮರ | ಬಂದಿತೆಮಗೆ ಬಾಣಗಾಗಿ |
ಎಂದು ನಂದಿಯೇರಿ ವೇಗ | ದಿಂದಲೈತರಲ್ಕೆ ದೇವ |
ದುಂದುಭಿಯು ಮೊಳಗಿತಭ್ರದಿ | ಬೆಚ್ಚಿ ನಡುಗಿ |
ತಂದು ಧರಣಿ ವಾದ್ಯಘೋಷದಿ | ಸುರರು ಪ್ರಮಥ |
ವೃಂದಸಹಿತ ಜಯಜಯೆನುತ | ಮುಂದೆ ನಡೆಯಲಂದದಿಂದ || ಬಂದನೀಶ ||೨೭೦||

ತಾರಕೇಶಧರನು ದಿವಿಜ | ವಾರಸಹಿತ ಬಂದು ರಣವ |
ಸಾರಲಾಗ ಸ್ಕಂದ ತಾ ಮ | ಯೂರವೇರಿ ಮುಂದೆ ಯಾದವ |
ವೀರರಿದಿರ್ಗೆ ಬಂದು ನಿಂದನು | ಸಮರಕೆನ್ನೊ |
ಳ್ಯಾರು ಬಹಿರಿ ಬನ್ನಿರೆಂದನು | ಮತ್ತೆ ಸರಳ |
ಸಾರದಿಂದಲವರ ಬಲವ | ಧೀರತನದಿ ಬೆದರಿಸಿದನು || ಬಂದನೀಶ ||೨೭೧||

ಕಂದ

ಭರ್ಗಜನೀ ಪರಿಯಿಂ ಯದು |
ವರ್ಗವ ನೋಯಿಸಲ್ಕಂಡುಮನಂಗಜಂ ತ್ವರದೊಳ್ ||
ಕಾರ್ಗಾಲದ ಮಳೆಯಂದದಿ |
ಕೂರ್ಗಣೆಯಂ ಕರೆವುತೈದ ಬಂದಿದಂತೆಂದಂ ||೨೭೨||

ರಾಗ ಭೈರವಿ ಅಷ್ಟತಾಳ

ಎಲವೋ ಷಣ್ಮುಖ ನೀನು | ನಮ್ಮಯ ಯದು | ಬಲವನು ನೋಯ್ದಿದಡೇನು ||
ಫಲವೆನ್ನೊಳಿದಿರಾಗಿ ಕಾದಿ ಜೈಸಿದಡೆ ನೀನು | ಕಲಿಯಹುದೆನಲೆಂದನು ||೨೭೩||

ಕೇಳೊ ಮನ್ಮಥ ಹಿಂದೆ | ಮಜ್ಜನಕನ | ಫಾಲನೇತ್ರಾಗ್ನಿಯಿಂದೆ ||
ಕಾಲಗಂಡವ ಮೊದಲಿನ್ನಳಿಯಲೀರೈದು | ಕಾಲದೊಳೆನೆ ಕಾಮನು ||೨೭೪||

ಎನ್ನ ಬಾಣದಲಿ ನಿನ್ನ | ಪೆತ್ತವ ತಪ | ವನ್ನು ಬಿಟ್ಟ ತಾ ಮುನ್ನ ||
ಚೆನ್ನಾಗಿ ಸತಿಯೊಳು ರಮಿಸೆ ನೀ ಜನಿಸಿದೆ | ಎನ್ನಲಾರ್ಮೊಗನೆಂದನು ||೨೭೫||

ಶ್ರೀನಾರಿಯಳ ಗರ್ಭದಿ | ಪುಟ್ಟದಾತನು | ನೀನೆಂದೆಂಬರು ಜಗದಿ ||
ಮಿನಿಂದಲುದಿಸಿದೆಯೆನಲು ಭಳಿರೆ ಹರಿ | ಸೂನು ಮತ್ತಿಂತೆಂದನು ||೨೭೬||

ಹರನಾತ್ಮಭವನೆ ನೀನು | ನಿನ್ನಯ ಮೂಲ | ವರಿಯದವನೆ ಕೇಳೊ ನೀನು ||
ಗಿರಿಜೆಯುದರದಲಿ ಜನಿಸದೆ ಗಿರೀಶಗೆ | ತರುಣನೆಂತಾದೆಯಯ್ಯ ||೨೭೭||

ರಾಗ ಪಂಚಾಗತಿ ಮಟ್ಟೆತಾಳ

ಎಂದ ಮಾತ ಕೇಳುತಾಗ ಸ್ಕಂದ ಕೋಪದಿ |
ನಿಂದು ಸರಳ ಸುರಿಯೆ ಕಾಮಗಂದು ವೇಗದಿ ||
ಮಂದಹಾಸದಿಂದಲವನ ಶರವ ತರಿವುತ |
ಇಂದುಧರನ ಕುವರ ಭಳಿರೆ ಎಂದು ಪೊಗಳುತ ||೨೭೮||

ಭೂರಿ ಬಾಣತತಿಯ ಮದನನಂದು ಸುರಿಯಲು |
ಭೋರನದನು ಹರನ ತನುಜ ನಡುವೆ ತರಿಯಲು ||
ಧೀರತನದಿ ನಗುತ ಮತ್ತೆ ಮನಸಿಜಾತ್ಮನು |
ಕ್ರೂರತನದಿ ಗೌರಿಸುತನ ಧನುವ ಕಡಿದನು ||೨೭೯||

ಬಿಲ್ ಮುರಿಯಲು ಕೋಪದಿಂದ ಕಾರ್ತಿಕೇಯನು |
ಪಲ್ಮೊರೆವುತ ಗರ್ಜಿಸುತ್ತ ಶೂಲವಿಟ್ಟನು ||
ಮೇಲ್ಮೊಗದೊಳು ನೋಡುತಾಗ ಬೆದರೆ ಕಾಮನು |
ಬಲ್ಮೆಯಿಂ ಮುರಾರಿ ಚಕ್ರದಿಂದಲದರನು ||೨೮೦||

ಕಡಿಯೆ ಕಂಡು ಖಾತಿಯಿಂದ ಗಿರಿಜೆಯಣುಗನು |
ಫಡಫಡೆನುತ ಕೃಷ್ಣನೊಡನೆ ಧುರಕೆ ನಿಂದನು ||
ಮೃಡನು ಕಂಡು ಹರಿಯ ಕಲಹ ಬೇಡವೆನುತಲಿ |
ಒಡಬಡಿಸುತ ಷಣ್ಮುಖನನು ಕರೆದು ಮುದದಲಿ ||೨೮೧||

ವಾರ್ಧಕ

ಹರನಿಂತೆನಲು ಷಣ್ಮುಖಂ ಸುಮ್ಮನಿರೆ ನವಿಲು |
ಸ್ಮರನ ಕೇತನಕಡರೆ ಗರುಡನದ ಕುಪ್ಪರಿಸೆ |
ಭರದಿಂದ ವೃಷಭನೇಳ್ತಂದುಮಾ ಪಕ್ಷಿಯೊಳ್ ಕಾದಲೀಶಂ ನಿಲಿಸಲು ||
ಹರಿಯಗ್ರಜನೊಳೈದೆ ವಿಘ್ನರಾಜಂ ನೊಂದು |
ಮಿರದೆ ಪೋಗಲು ಭೈರವಂ ಯುದ್ಧಗೈಯಲಾ |
ಪುರಹರಂ ಬೇಡವೆನುತಾತನಂ ಸಂತೈಸಿ ಹರಿಗೆ ತಾನಿದಿರಾದನು ||೨೮೨||

ಕಂದ

ಹರನುಂ ತಾ ಸಂಗರಕೇ |
ಳ್ತರೆ ಕಾಣುತಮಂಬುಜಾಕ್ಷನತಿ ವೇಗದೊಳಂ ||
ಹರುಷದಿ ಧುರಕನುವಾಗಲು |
ಪುರಮಥನನಾಗಲಿಂತೆಂದನು ಹರಿಯೊಡನಂ ||೨೮೩||

ರಾಗ ಶಂಕರಾಭರಣ ಮಟ್ಟೆತಾಳ

ಹರಿಯೆ ನಿನ್ನೊಳಿಂದು ಸಮರ | ದೊರಕಿತೆನಗೆ ದುರುಳ ಖಳರ |
ಮುರಿದ ತೆರವಿದಲ್ಲ ಕಳುಹು | ಸರಳ ವೇಗದಿ ||
ಹರನೆ ನೀನು ಧೀರನೆಂಬ ಪರಿಯ ಕೇಳಿ ಬಲ್ಲೆನಾದ |
ರೆರಡು ಘಳಿಗೆ ಪರಿಕಿಸೆನ್ನ | ಧುರದ ಬಗೆಯನು ||೨೮೪||

ಧುರದಿ ಶೌರ್ಯವಂತನಹುದು | ದುರುಳ ಕಾಲಯವನು ನಿನ್ನ |
ಬೆರಸಲೋಡಿದಧಟನೆಂದ | ಹರನು ನಗುತಲಿ ||
ಪುರವಿನಾಶ ಕೇಳು ಭಸ್ಮಾ | ಸುರಗೆ ಬೆದರಿ ಭರದಿ ಬಂದ |
ಪರಿಯನೆಲ್ಲ ಬಲ್ಲೆನೆಂದ | ಶಿರಿಯರಮಣನು ||೨೮೫||

ವೀರರಿಂಗೆ ಕರಿ ವರೂಥ | ವಾರುಹಂಗಳಿಹವು ಪಕ್ಷಿ |
ಯೇರಿ ನಿಲುವ ಭಟರ ಕಾಣೆ | ವಾರಿಜಾಕ್ಷನೆ ||
ಗೌರಿಯರಸ ನೀನು ಪೇಳ್ದ | ಮೂರರೊಳ ಗಿದಾವುದೀಗ |
ಏರಿಕೊಂಡು ನಡೆವೆಯೆಂದ | ಮಾರತಾತನು ||೨೮೬||

ಎಂದ ಮಾತ ಕೇಳಿಸಿ ಕಿನಿಸಿ | ನಿಂದಲಭವ ಧನುವ ಪಿಡಿದು |
ನಿಂದು ಸರಳ ಸುರಿದ ನಮರ | ವೃಂದ ಬೆದರಲು ||
ಸಿಂಧುಜಾತೆಯರಸನದರ | ನೊಂದು ಬಾಣದಿಂದ ತರಿದು |
ಮಂದಹಾಸದಿಂದಲಿರಲು | ಕಂದುಗೊರಳನು ||೨೮೭||

ಖಗ ವರೂಥನನ್ನು ನೋಡಿ | ನಗೆಯ ಮಾಣಿಸುವೆನೆನುತ್ತ |
ಧಗಧಗಿಪ ತ್ರಿಶೂಲ ಪಿಡಿಯೆ | ಜಗತಿ ನಡುಗಲು ||
ಮಿಗೆ ವಿನೋದದಿಂದಲಾಗ | ನಗಧರನು ಸುದರ್ಶನವನು |
ತೆಗೆಯೆ ಕಾಣುತೊದರಿತಾಗ | ಗಗನವಾಕ್ಯವು ||೨೮೮||

ಭಾಮಿನಿ

ಈಶ ಶೂಲವನಿಡಲು ಭೂಮ್ಯಾ |
ಕಾಶದಲಿ ಬದುಕಿದರ ಕಾಣೆನು |
ಕೇಶವನ ಚಕ್ರದಲಿ ಬದುಕಿದರಿಲ್ಲ ಪೂರ್ವದಲಿ ||
ಈಸು ಕಾಳಗವೇತಕೆನಲು ಮ |
ಹೇಶ ಕೇಳ್ದಿಂದೆಮ್ಮ ಕದನದಿ |
ಘಾಸಿಯಾಹುದು ಲೋಕವೆನುತಿಂತೆಂದನಚ್ಯುತಗೆ ||೨೮೯||

ರಾಗ ಮಾರವಿ ಝಂಪೆತಾಳ

ಸಿರಿವರನೆ ಕೇಳು ಸಂ | ಗರಕೇಳಿಯೊಳಗೆ ನಾ |
ವಿರಲು ಮೂಜಗವೆಲ್ಲ | ಉರಿದುಪೋಪುದಲ್ಲೈ ||೨೯೦||

ಎಂದಭವ ನಾ ಸೋತೆ | ನಿಂದಿಗಾಹವದೊಳೆನು |
ತಂದು ಕೌಳಿಕದಿಂದ | ನಿಂದು ಮರಳಿದನು ||೨೯೧||

ಶಿವನೈದಲಿತ್ತಯಾ | ದವರೆಲ್ಲ ಬಲಿಯ ಸಂ |
ಭವನೂರ ಮುತ್ತಿದರು | ತವಕದಿಂದಾಗ ||೨೯೨||

ರಾಗ ಮಾರವಿ ಏಕತಾಳ

ಭೋರ್ಗರೆವುತ ಯದು | ವರ್ಗವು ದನುಜನ |
ದುರ್ಗವ ಪೊಗಲು ಭ | ಟರ್ಗಳೈತರೆ ಬಲು |
ಭೋರ್ಗುಡಿಸುತ ದೈ | ತ್ಯರ್ಗೆಯರ್ಯಮಸುತ |
ನೂರ್ಗಾಣಿಸಿದರು | ಮಾರ್ಗಣದಿಂದ || ಕೇಳೊ ಭೂಪ ||೨೯೩||

ಬಿಡದೊಳ ಗೈತಂ | ದೊಡನತಿ ರೋಷದಿ |
ಘುಡುಘುಡಿಸುತಲಾ | ಧಡಿಗ ಖಳರ ತಲೆ |
ಗೆಡೆವುತ ಭರದಿಂ | ತಡೆಯದೋಡುವರನು |
ಹಿಡಿದೆಲ್ಲರ ಸದೆ | ಬಡೆದರು ನಿಮಿಷಕೆ || ಕೇಳೊ ಭೂಪ ||೨೯೪||

ಹರಿಯವರಂದೀ | ಪರಿಯಿಂದಾಶರ |
ಚರರಂ ಕಾಣುತ | ಲುರು ವಿಕ್ರಮದಿಂ |
ಬರೆದು ಸುಣ್ಣವನವ | ದಿರಮೂಗಿಗೆ ನಿ |
ಮ್ಮರಸಗುಸಿರಿರೆಂ | ದೊರೆದಟ್ಟಿದರು || ಕೇಳೊ ಭೂಪ ||೨೯೫||

ಕಂದ

ಕೇಳ್ದವರೆಂದುದನಾಶರ |
ರಾಳ್ದುಃಖಂಬಡೆದುಮೆಲ್ಲರೇಳ್ತಂದಾಗಳ್ ||
ತಾಳ್ದತಿಭಯಮಂ ಮೆಲ್ಲನೆ |
ಪೇಳ್ದರ್ಬಾಣಾಖ್ಯನೊಡನೆ ಕುಡ್ಮಲಕರದಿಂ ||೨೯೬||

ರಾಗ ಮುಖಾರಿ ಆದಿತಾಳ

ಕೇಳಯ್ಯ ದಾನವೇಂದ್ರ ನೀನು | ಫಾಲಾಂಬಕನ ಭಕ್ತ ಮೂರ್ಲೋಕ ಪ್ರಖ್ಯಾತ || ಪ ||

ಗಿರೀಶ ಯುದ್ಧಕೈತಂದನಯ್ಯ | ಸೋತು ಹಿಮ್ಮೆಟ್ಟಿ | ಮರಳಿ ಲಜ್ಜೆಯಿಂ ಪೋದನಯ್ಯ ||
ಹರ ಪೋಗಲರಿಗಳು | ಭರದಲಿ ಕೋಟೆಯ |
ಮುರಿದೆಮ್ಮ ಮೂಗಿಗೆ | ಬರೆದು ಸುಣ್ಣವ ನಿ |
ಮ್ಮರಸನ ಕದನಕೆ | ಬರಹೇಳಿರೆಂದೆಲ್ಲ |
ರೊರೆದು ಕಳುಹಿದರು | ಹರಣವನುಳುಹಿ ||೨೯೭||

ರಾಗ ಮಾರವಿ ಝಂಪೆತಾಳ

ಚಾರರೆಂದುದ ಕೇಳ್ದು | ದಾರಬಲ ಖಳ ಲಯದು |
ಮಾರಮಣನಂ ತಾರ್ದು | ವೀರರೊಳುಸಿರ್ದ ||೨೯೮||

ಧಡಿಗರಾಲಿಸಿರವನ | ಪಡೆಯ ನುಗ್ಗರಿದು ಸೆರೆ |
ವಿಡಿಯಿರಾ ಗೋವಳನ | ಕಡುತವಕದಿಂದ ||೨೯೯||

ಎನುತ ಮಂತ್ರೀಶ ಸಹಿ | ತನುವರವ ನಿಶ್ಚಯಿಸಿ |
ಘನರೌದ್ರದಿಂದೆದ್ದ | ದನುಜೇಶನಂದು ||೩೦೦||

ರಥವೇರಿ ಖಳರು ಸಹಿ | ತತಿ ಗರ್ಜನೆಯೊಳು ಬಲಿ |
ಸುತನು ನಡೆತಂದ ಸುರ | ಡತಿ ಬಾಯಿಬಿಡಲು ||೩೦೧||

ಭಾರಕಹಿಪತಿ ಕೂರ್ಮ || ರಾನಲಾರದೆ ಬಳಲಿ |
ಚೀರಿದರದೇನೆಂಬೆ | ಭೂರಿಬಲ ಭಟನ ||೩೦೨||

ಭೇರಿಯಬ್ಬರಕೆ ನೆಲ | ನೋರುಗುಡಿಸುತಲುಡುಗ |
ಳೋರಂತೆ ಸುರಿದವೆಲೆ | ಧಾರಿಣೀಪತಿಯೆ ||೩೦೩||

ಕಂದ

ಪರ್ಬತಮಂ ಜರಿವಂದದಿ |
ನಾರ್ಭಟಿಸುತ ಮಂತ್ರಿ ಸಹಿತಮಾಶರರಧಿಪಂ ||
ಪೇರ್ಬಲಮಂ ನೂಕಿದನತಿ |
ಗರ್ಬದೊಳಿನ್ನಾರು ನಿಲ್ವರವರಿದಿರಿ ನೊಳುಂ ||೩೦೪||

ರಾಗ ದೇಶಿ ಮಟ್ಟೆತಾಳ

ಬಂದು ದನುಜರು | ಕಣೆಯ | ನಂದು ಸುರಿದರು ||
ಇಂದಿರಾಧವನ ನೇಮ | ದಿಂದಲವದಿರು ||೩೦೫||

ಹೊಕ್ಕು ಹೊಯ್ದರು | ಭಟರ | ಸೊಕ್ಕ ಮುರಿದರು ||
ಸಿಕ್ಕಿದವರ ಸೀಳ್ದು ರಣವ | ಪೊಕ್ಕು ನಡೆದರು ||೩೦೬||

ಕರಿಸಮೂಹವ | ಕೆಡಹಿ | ವರರಥಾಶ್ವವ ||
ಮುರಿದು ಮುಂದೆ ನಡೆದು ಕೊಂದ | ರರಿಬಲೌಘವ ||೩೦೭||

ವಾರ್ಧಕ

ಧರಣಿಪತಿಯಾಲಿಸಿಂತಾನೆಯಂ ಸೇನೆಯಂ |
ಧುರಧೀರರೇರ್ದ ರಥ ಚಯವನುಂ ಹಯವನುಂ |
ಹರಿಯವರ್ಮುಳಿಸಿನಿಂ ಸವರಿದರ್ ಅರೆನಿಮಿಷದೊಳಗದನ್ನೇವೇಳ್ವೆನು ||
ಕೆರಳಿ ಬಲಿಜಂ ಸುಪ್ರತಾಪದಿಂ ಕೋಪದಿಂ |
ವರುಷಕಾಲದ ಮಳೆಯ ತೆರದೊಳುಂ ಭರದೊಳುಂ |
ಸರಳನುಂ ಸುರಿವುತೇಳ್ತಂದನುಂ ನಿಂದನುಂ ಕೃಷ್ಣನಿದಿರೊಳು ಗಜರುತ ||೩೦೮||