ರಾಗ ಕಾಂಭೋಜಿ ಝಂಪೆತಾಳ

ದೂತರಂಜುತಲೆಂದ | ಮಾತ ಕೇಳುತಲುಷೆಯ |
ತಾತ ಖಳರೊಳು ಪೇಳ್ದ | ಖಾತಿಯಂ ತಳೆದು ||೧೬೬||

ಕರೆಯಿರೋ ಪಟುಭಟರ | ಕರಿಹಯ ರಥಾರೋಹ |
ಕರನು ಬರಹೇಳಿರೆಂ | ದೊರೆದು ಕೋಪದಲಿ ||೧೬೭||

ಆನೆ ಕುದುರೆ ವರೂಥ | ಸೇನೆಗಳು ಸಹಿತಲಾ |
ದಾನವನು ಪೊರಟನೀ | ಶಾನ ತಾ ಬೆದರೇ ||೧೬೮||

ನಡೆವ ಭರದಲಿ ಕೂರ್ಮ | ನೊಡಲು ಕಂಪಿಸೆ ಪೊಡವಿ |
ನಡುಗಿದುದು ಮೇರು ಶಿರ | ಗೊಡಹಲೈತಂದ ||೧೬೯||

ಕಂದ

ಉಗ್ರದೊಳೇಳ್ತರ್ಪವನಸು |
ರಾಗ್ರಣಿಯೆಂದರಿದು ಮದನಪುತ್ರಂ ಸತಿಯಂ ||
ಶೀಘ್ರದೊಳೊಡಬಡಿಸುತೆ ಹ |
ಸ್ತಾಗ್ರದೊಳುಂ ಚಾಪವಿಡಿದು ಮೈತಂದಣಿಗಂ ||೧೭೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಣಕೆ ಸನ್ನಹನಾಗಿ ಮನ್ಮಥ | ನಣುಗ ನಿಂತಿರೆ ದನುಜರಂಕದ |
ಕಣನ ಮುತ್ತಿದರಾಗ ಕರೆವುತ | ಕಣೆಯ ಮಳೆಯ ||೧೭೧||

ದಾನವರು ಸುರಿವಂಬನೆಲ್ಲವರ | ಮಿನಕೇತನಭವ ತರಿಯೆ ಬಲಿ |
ಸೂನು ಕೋಪವ ತಾಳ್ದುಖಳರೊಳು | ತಾನುಸಿರ್ದ ||೧೭೨||

ಕೊಲ್ಲಿ ಇರಿಯಿರಿ ಕಡಿಯಿರೀತನ | ಬಿಲ್ಲ ಬೊಬ್ಬೆಗೆ ಹೆದರದಿರಿ ನಿಂ |
ದಲ್ಲಿ ನಿಲಗೊಡದಿರಿ ಎನುತ ರಣ | ಮಲ್ಲನಂದು ||೧೭೩||

ಮತ್ತಗಜ ಹಯ ರಥ ಪದಾತಿಯ | ಮೊತ್ತವನು ನೂಕಿದನು ತರಣಿಯ |
ಮುತ್ತುವಾ ಮುಗಿಲಂತೆ ಕವಿದರು | ದೈತ್ಯರಂದು ||೧೭೪||

ರಾಗ ಮಾರವಿ ಏಕತಾಳ

ಬಲಿತನುಜನ ಪೇ | ರ್ಬಲ ಕೋಪದೊಳಂ | ದಿಳೆ ಬಳುಕಲು ಮಾ | ರ್ಮಲೆತೈತರೆ ಕಂ |
ಡಲಸದೆ ಸ್ಮರನ ತ | ರಳ ಕೂರ್ಗಣೆಯಿಂ | ಕಳುಹಿದ ನಿನಜನ ನಿಳೆಯಕೆ || ಬೇಗನೆ ||೧೭೫||

ಅಸಮಸಾಹಸರಾ | ದಸುರರು ಗಜ ಹಯ | ವಿಸರದೊಳೈದುತ | ಮುಸುಕಲು ಶಕ್ತಿಯೊಳ್ |
ಕುಸುಮ ಶರನ ಸುತ | ಪೊಸಮಸೆ ವಿಶಿಖದಿ | ಕುಸುರಿದರಿದ ಪಸರಿಸಿದಬುಧಿಯೊಳು ||೧೭೬||

ಸಾಲ್ಗೈಯ್ಯನ ಕ | ಟ್ಟಾಳ್ಗಳ ಯಮನ ಪೊ | ಳಲ್ಗೆ ಪೊಗಿಸೆಯೆ ಸ | ರಳ್ಗರೆದು ಹಯದ |
ಕಾಲ್ಗಳ ಗಜದ ಸೊಂ | ಡಿಲ್ಗಳ ಕಡಿಯೆ ಕ | ರುಳ್ಗಳ ಸವಿದು ಮರುಳ್ಗಳು ಕುಣಿದುವು || ||೧೭೭||

ಕಂದ

ಈ ಪರಿಯಿಂ ಸ್ಮರಸಂಭವ |
ನಾ ಪಟುಭಟರಂ ವಿಘಾತಿಸುತ್ತಿರೆ ಬಾಣಂ ||
ಕೋಪವ ತಳೆದಾ ಪ್ರಳಯದು |
ಮಾಪತಿಯಂತೈದೆ ಗರ್ಜಿಸುತ್ತಿಂತೆಂದಂ ||೧೭೮||

ರಾಗ ಪಂಚಾಗತಿ ಮಟ್ಟೆತಾಳ

ಎಲವೊ ಮನ್ಮಥಾತ್ಮಭವನೆ ಖಳಸಮೂಹವ |
ಗೆಲಿದೆನೆಂದು ಹಿಗ್ಗಬೇಡ ನಿನ್ನ ದೇಹವ ||
ತಳುವದೀಗ ಸೀಳ್ದು ಕರುಳ ಮರುಳುಬಳಗಕೆ |
ಬಲಿಯ ಕೊಡುವೆನೀಗ ನಿಲ್ಲು ನಿಲ್ಲು ಸಮರಕೆ ||೧೭೯||

ಎನಲು ಸ್ಮರಜ ಪೇಳ್ದ ಮಾವ ಕೇಳಿ ನಿಮ್ಮಯ |
ತನುಜೆಯಾಳ್ದ ನಾದೆನೆನ್ನೊಡನೆ ಖಾತಿಯ ||
ಮನದೊಳಿಟ್ಟು ಮಾತನಾಡಲೇಕೆ ಸುಮ್ಮನೆ |
ಮನೆಗೆ ದಂಪತಿಗಳನು ಕಂದೊಯ್ಯೊ ಗಮ್ಮನೆ ||೧೮೦||

ಮಾರನಣುಗ ಕೇಳೊ ಎನ್ನಾತ್ಮಭವೆಯನು |
ಯಾರು ಕೊಟ್ಟರೆಲವೊ ನಿನಗೆ ಮಾವನ್ಯಾವನೊ ||
ಜಾರತನದ ಮಾತದೆನ್ನ ಕೂಡೆ ನಡೆಸದೆ |
ವೀರತನವದುಳ್ಳಡೀಗ ತೋರು ಬೇಗದಿ ||೧೮೧||

ಯಾರು ಸುತೆಯನಿತ್ತರೆಂಬ ಮಾತದೇತಕೆ |
ಶಾರದಾಂಬೆ ವರನ ತಂತ್ರವದುವೆ ಲೋಕಕೆ ||
ಧೀರತನವ ತೋರ್ಪುದಕ್ಕೆ ನೀವು ಹಿರಿಯರು |
ಮಿರಿ ನಿಮ್ಮೊಳಾನು ಸೆಣಸೆ ಮೆಚ್ಚರಮರರು ||೧೮೨||

ರಾಗ ಭೈರವಿ ಏಕತಾಳ

ಎನೆ ಕೇಳ್ದಾಶರನಾಗ | ಶರ | ವನು ಬಿಟ್ಟನು ಬಲು ಬೇಗ ||
ಅನಿರುದ್ಧನು ಛೇದಿಸುತ | ಬಾ | ಣನಿಗೆಚ್ಚನು ನಸುನಗುತ ||೧೮೩||

ತರಳನೆಸೆದ ಸರಳನ್ನು | ಕಡಿ | ದರೆನಿಮಿಷದಿ ದಾನವನು ||
ಉರುಮಂತ್ರಾಸ್ತ್ರವೆಸೆಯಲು | ಸ್ಮರ | ತರುಣನದನು ಖಂಡಿಸಲು ||೧೮೪||

ಭಳಿರೆ ಕುವರನೆಂದೆನುತ | ಭೂ | ತಳ ಬೆಚ್ಚಲು ಬೊಬ್ಬಿಡುತ ||
ಮುಳಿದು ಸಹಸ್ರಕರಗಳಲಿ | ಖಳ | ತಳುವದೆಚ್ಚನು ಕೋಪದಲಿ ||೧೮೫||

ಅನಿತು ಶರವ ಕತ್ತರಿಸಿ | ಕಾ | ಮನಸುತ ಕೋಪವ ಧರಿಸಿ ||
ದನುಜಾಧಿಪ ತಡೆಯೆಂದು | ಅಂ | ಬಿನ ಮಳೆಗರೆಯಲ್ಕಂದು ||೧೮೬||

ಬರುವಂಬುಗಳನು ತರಿದು | ಪುರ | ಹರನಿತ್ತಸ್ತ್ರವ ತೆಗೆದು ||
ಸ್ಮರಜ ತೊಲಗಬೇಡೆನುತ | ಬಹು | ಭರದೊಳೆಚ್ಚನು ಕೋಪಿಸುತ ||೧೮೭||

ಉರಿಯ ಸೂಸುತ ಬಂದಾಗ | ಉರ | ಕೆರಗಲು ಶರವತಿ ಬೇಗ ||
ಹರಿಯ ಜಪಿಸುತನಿರುದ್ಧ | ಮೈ | ಮರೆದು ವಸುಧೆಯೊಳು ಬಿದ್ದ ||೧೮೮||

ವಾರ್ಧಕ

ಸ್ಮರಸುತಂ ಧರೆಗೊರಗೆ ಹರುಷದಿಂ ಖಳನವನ |
ಪೊರೆಗೈದಿಯಾಲೋ ಚಿಸಿದನೀತನಂ ಮಡುಹಿ |
ದರೆ ತನ್ನ ಸುತೆಗೆ ವೈಧವ್ಯಮಹುದೆಂದು ತತ್ಕಾಮಸುತನಂಗವನ್ನು ||
ಕರದಿಂದ ತಡವರಿಸುತಿರಲಿತ್ತ ಉಷೆ ತನ್ನ |
ವರನೈದೆ ತಾತನೊಳು ಸಿಕ್ಕಿದನು ಎಂದಳಲು |
ತಿರೆ ಕಾಣುತಣುಗೆ ಕೇಳ್ ನಾ ಕೊಲ್ಲೆನಿವನನೆಂದೊಡಬಡಿಸಿದಂ ಮಗಳನು ||೧೮೯||

ಕಂದ

ತನುಜೆಯನುಂ ಸಂತೈಸಿಯ |
ಮನುಮಥಭವನಂ ಕರಾಗ್ರದೊಳ್ ಪಿಡಿದಸುರಂ ||
ಮನೆಗೇಳ್ತಂದಾ ನಾರದ |
ಮುನಿಯಂಘ್ರಿಗೆ ನಮಿಸಿ ಭಕ್ತಿಯಿಂದಿಂತೆಂದಂ ||೧೯೦||

ರಾಗ ಮಾರವಿ ಅಷ್ಟತಾಳ

ಮುನಿವರ ಲಾಲಿಸಯ್ಯ | ನೀ ಪೇಳ್ದವ | ಚನವು ತಪ್ಪಲ್ಲ ಜೀಯ ||
ತನುಜೆಯಾಲಯದಲ್ಲಿ | ದ್ದನ ಪಿಡಿತಂದೆನೀ |
ತನಿಗೇನಾಜ್ಞೆಯ ಮಾಳ್ಪೆ | ಘನಮಹಿಮನೆ ಪೇಳು ||೧೯೧||

ಎನ್ನ ಕೇಳುವುದೇನಯ್ಯ | ದಾನವರಾಯ | ನಿನ್ನ ಬಾಗಿಲ ಬಳಿಯ ||
ಪನ್ನಂಗಾಭರಣ ತಾ | ನಿನ್ನು ಕಾದಿರ್ಪನವ |
ನನ್ನು ಕೇಳಿದರೆಲ್ಲ | ವನ್ನಿನಗುಸಿರುವ ||೧೯೨||

ಎನಲೀಶನಲ್ಲಿಗೈದೀ ಉಭಯ ಪಾದ | ವನಜಕೆರಗಿ ಮುದದಿ ||
ದನುಜೇಶ ಕಾಮನ | ತನುಜನ ತೋರಿಸು |
ತನುವಿನಿಂದ ಭವಗೆ | ವಿನಯದಿಂ ಪೇಳಿದ ||೧೯೩||

ರಾಗ ಶಂಕರಾಭರಣ ಆದಿತಾಳ

ಭಳಾಕ್ಷ ಕೇಳೆನ್ನಾತ್ಮಜೆ | ಯಾಲಯದಲಿ ಪೊಕ್ಕಿರ್ದನೀ |
ಖೂಳ ನಿವನ ಪಿಡಿತಂದೆ ಮುಂದೇನಾಜ್ಞೆ ಜೀಯ ||
ಲಾಲಿಸಯ್ಯ ಬಾಣಾಖ್ಯನೀ ಬಾಲಗಾಜ್ಞೆಯಾದರೆ ಶ್ರೀ |
ಲೋಲ ಕಿನಿಸಿನಿಂ ಬರುವ | ತಾನೆ ಧಿಟವಯ್ಯ ||೧೯೪||

ಬಂದರತಿ ಲೇಸಾಯಿತವನ | ನೊಂದು ನಿಮಿಷ ಮಾತ್ರದಿ ನಾ |
ಕೊಂದು ಕೆಡಹಿ ಈವೆ ಭೂತ | ವೃಂದಕ್ಕೆ ಜೀಯ ||
ಕೊಂದೆನೆಂಬ ಮಾತಂತಿರಲಿ | ಇಂದಿರೆಯರಸನೊಳು ಕಲಹ |
ಚಂದವಲ್ಲವೆನಗೆ ಕಂಡು | ದೆಂದೆ ಖಳರಾಯ ||೧೯೫||

ಹರನೆ ಬಿಡು ಬಿಡೆಂಥಾ ಮಾತ | ನೊರೆವೆ ಗೋವಳನ ಗರ್ವವ |
ಮುರಿಯದಿದ್ದ ಮೇಲೆ ನಿನ್ನ | ಶರಣನೆ ಜೀಯ ||
ಸುರವೈರಿ ಕೇಳಿಷ್ಟು ಸತ್ತ್ವ | ವಿರಲು ನಿನ್ನ ಮನಕೆ ತೋರ್ದ |
ಪರಿಯ ಮಾಡೊಂದಕೆ ನಾನು | ಹೊರತೆ ಖಳರಾಯ ||೧೯೬||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ಪೇಳಲು ಕೇಳಿ ಖಳನತಿ | ಸಂತಸದೊಳೋಲಗಕೆ ಬಂದಾ |
ಕಂತುತನಯಗೆ ವಜ್ರಶೃಂಖಲ | ವನ್ನು ತೊಡಿಸೆ ||೧೯೭||

ಮಾರಸುತಗಾದುದನು ಕಾಣುತ | ನಾರದಾಖ್ಯನು ನಗುತ ಪೇಳ್ದನು |
ಚೋರತನದಿಂದಾಯಿತೀ ವ್ಯಥೆ | ಧೀರ ಕೇಳು ||೧೯೮||

ಎನುತಲತಿ ಹರುಷದಲಿ ಬಾಣನೊ | ಳನುವಿನಿಂ ಬೀಳ್ಕೊಂಡು ಮನದೊಳು |
ವನಜನಾಭನ ನೆನೆದು ಪೊರಟನು | ವಿನಯದಿಂದ ||೧೯೯||

ವಾರ್ಧಕ

ನರನಾಥ ಲಾಲಿಸೈ ತ್ವರದಿ ಸುರಮುನಿಪನುಂ |
ಹರುಷದಿಂ ವೀಣೆಯಂ ಕರದಿಂದ ಬಾರಿಸುತ |
ಮರವಿಂದನಾಭನಿಹ ಪುರಕೆ ಬರುತಿರಲಿತ್ತಲುರುತರಾ ನಂದದಿಂದ ||
ಮುರಹರಂ ಸಿಂಹವಿಷ್ಟರದೊಳುಂ ಕುಳಿತಿರಲ್ |
ಸುರನರೋರಗರು ಬಂದೋಲಗಿಸಲಾ ಯತೀ |
ಶ್ವರನು ನಡೆತಂದಚ್ಯುತನ ಪದಕೆ ಸಾಷ್ಟಾಂಗದಿಂದೆರಗಿದಂ ಮುದದೊಳು ||೨೦೦||

ರಾಗ ಕೇದಾರಗೌಳ ಅಷ್ಟತಾಳ

ಎರಗಿದ ಮುನಿಪನ ಶಿರವನ್ನು ಪಿಡಿದೆತ್ತಿ | ಕರುಣದಿಂದಲೆ ಕೃಷ್ಣನು ||
ವರಸಿಂಹಾಸನದೊಳಾತನನು ಕೈಗೊಟ್ಟು ಕು | ಳ್ಳಿರಿಸುತಿಂತೆಂದನಾಗ ||೨೦೧||

ಪರಮಋಷಿಯೆ ಲಾಲಿಸೀರೇಳು ಜಗವ ಸಂ | ಚರಿಸುವೆ ನೀನನಿಶ ||
ಸ್ಮರಜಾತನೆಲ್ಲಿರ್ಪನೆಂಬುದ ತಿಳಿದಿರ್ದ | ಡೊರೆಯೆನಲೆಂದನಾಗ ||೨೦೨||

ಹರನನು ನೋಳ್ಪ ತಾತ್ಪರ್ಯದಿ ಶೋಣಿತ | ಪುರಕೆ ನಾನೈದಿದೆನು ||
ಮುರಮರ್ದನ ನಿನ್ನ ಮೊಮ್ಮನ ವಾರ್ತೆ ವಿ | ಸ್ತರವಾದುದೇನ ಪೇಳ್ವೆ ||೨೦೩||

ದುರುಳ ಬಾಣನ ಸಂಭವೆಯೋರ್ವಳುಷೆಯೆಂಬ | ಳಿರುವಳಾ ಕಾಮಿನಿಯ ||
ಸುರತ ಲಂಪಟದಿಂದ ನಿರತ ಸಂತೋಷದೊ | ಳಿರುವನವಳ ಗೃಹದಿ ||೨೦೪||

ಈ ಪರಿಯೊಳಗೀತನಿಹನೆಂಬ ವಾರ್ತೆಯ | ನಾ ಪೇಳ್ದೆನಾಶರಗೆ ||
ಕೋಪದಿಂ ದೈತ್ಯನೀ ತರಳನ್ನ ಪಿಡಿದು ಮ | ಹಾಪರಾಕ್ರಮದಿಂದಲಿ ||೨೦೫||

ಎರಡು ಕಾಲ್ಗಳಿಗೆ ಸಂಕಲೆಯನ್ನು ಜೋಡಿಸಿ | ಸೆರೆಯೊಳಗಿಟ್ಟಿಹನು ||
ಹರಿಯೆ ನಾ ಕಂಡುದ ಪೇಳ್ದೆನೆನಲು ಕೇಳಿ | ಮರುಗಿ ರುಕ್ಮಿಣಿ ಪೇಳ್ದಳು ||೨೦೬||

ರಾಗ ನೀಲಾಂಬರಿ ಆದಿತಾಳ

ನಾರದಾಂಕಮುನಿನಾಥ | ಲಾಲಿಸೆನ್ನ ಮಾತ ||
ಮಾರನ ಕುಮಾರನನ್ನು | ಕೊಂದೆಯಾ ನೀನು ||೨೦೭||

ಈತನಲ್ಲಿ ಇರುವನೆಂದು | ಏತಕೆ ನೀ ಪೇಳ್ದೆ ||
ಏತರಾಜ್ಞೆಯ ಮಾಡುವನೊ | ದೈತೇಯ ತಾನಿಂದು ||೨೦೮||

ಅಣುಗ ಪೋದ ಮರುದಿವಸ | ಇನೆಯನೊಳು ಪೇಳ್ದೆ ||
ವನಜಾಕ್ಷ ಮಾತಾಡಲಿಲ್ಲ | ಇನಿತಾಯಿತಲ್ಲ ||೨೦೯||

ಕಂದ

ಇಂತಾ ರುಕ್ಮಿಣಿಯುಂ ಘನ |
ಸಂತಾಪವೆತ್ತುಮೈದೆ ಮರುಗಲ್ ಸ್ಮರನಂ ||
ಕಾಂತೆಯುಮತಿ ದುಃಖಿಸಲುಂ |
ತಾಂ ತವಕದೊಳೊಡಬಡಿಸುತೆ ಹರಿಯಿಂತೆಂದಂ ||೨೧೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮರುಳು ಸತಿಯರಿರೇತಕಳುವಿರಿ | ತರಳ ಸಿಕ್ಕಿದರೇನು ಫಣೆಯಲಿ |
ಬರೆದ ಬರಹವ ಮಿರಿ ನಡೆವರೆ | ಹರನಿಗರಿದು ||೨೧೧||

ರಕ್ಕಸನ ತೋಳ್ಗಳನು ಖಂಡಿಸಿ | ಸಿಕ್ಕಿದನಿರುದ್ಧನನು ತರುವೆನಿ |
ದಕ್ಕೆ ತಪ್ಪಿದರಯ್ಯನಾಣೆಯು | ದುಃಖ ಬೇಡ ||೨೧೨||

ಎಂದವರನೊಳಿದಾಗ ಸೈಪಿ | ಟ್ಟಿಂದಿರಾಧವನೋಲ ಗಕ್ಕೈ |
ತಂದು ಕರೆಸಿದನಾಗ ಯಾದವ | ವೃಂದವನ್ನು ||೨೧೩||

ಭಾಮಿನಿ

ಶಿರಿಯರಸ ಯಾದವರನೆಲ್ಲರ |
ಕರೆಸಿ ಭೇರಿಯ ಹೊಡೆಸೆ ನಾದಕೆ |
ಸರಸಿರುಹತನುಜಾಂಡವೊಡೆಯಿತ್ತೆಂಬ ತೆರನಾಗೆ ||
ಕರುಣದಿಂ ಮಾಧವನು ಗರುಡನ |
ಸ್ಮರಿಸೆ ತತ್‌ಕ್ಷಣದಲ್ಲಿ ಬಂದಾ |
ಸರಸಿಜಾಕ್ಷಂಗೆರಗಿ ಕುಟ್ಮಲ ಕರದಲಿಂತೆಂದ ||೨೧೪||

ರಾಗ ಮಾರವಿ ಏಕತಾಳ

ಕರುಣಾಕರನೇಂ ಕಾರಣವೆನ್ನನು | ಸ್ಮರಿಸಿದೆ ಬೆಸಸೇನು ||
ಒರೆಯೆಂದೆನುತಹಿವೈರಿಯು ಪುನರಪಿ | ಎರಗಿದ ಭಕ್ತಿಯೊಳು ||೨೧೫||

ಗರುಡ ನೀ ಲಾಲಿಸು ಕಂದರ್ಪಾತ್ಮಜ | ದುರುಳ ಬಾಣನ ಸುತೆಯ ||
ಸುರತ ಕಲಾಪದೊಳಿರಲಾ ಖಳ ಕೇಳಿ | ಸೆರೆಯೊಳಿಕ್ಕಿಹನಂತೆ ||೨೧೬||

ಮದನನ ಪುತ್ರನ ಬಿಡಿಸಲು ಪೋಪೆವು | ಯದುಬಲ ಸಹಿತೀಗ ||
ಅದರಿಂ ನಿನ್ನನು ಸ್ಮರಿಸಿದೆನೆನೆ ಹರಿ | ಪದಕೆರಗುತಲೆಂದ ||೨೧೭||

ಕಿರುಬಲ ದೈತ್ಯನ ಸಮರ ಕದೇನ್ ಸಢ | ಗರ ನೀವೇಕಿದಕೆ ||
ಭರದಿಂದ್ಹಾರಿಯಸುರನ ದುರ್ಗವ ಕಿತ್ತು | ತರದಡೆ ಸೇವಕನೆ ||೨೧೮||

ಉರಗಾರಾತಿ ಕೇಳಾದಾನವನಿಹ | ಪುರವ ಕಿತ್ತು ತಹರೆ ||
ಹರ ತನ್ನ ಗಣಸಹಿತಾತನ ಬಾಗಿಲ | ನಿರತವು ಕಾಯ್ದಿಹನು ||೨೧೯||

ಮೃಡನೊಳು ನಿನ್ನ ಪರಾಕ್ರಮ ಕೊಳ್ಳದು | ಬಿಡು ನಿನ್ನ ಪಂಥವನು ||
ಪಡೆ ಸಹ ನಮ್ಮನು ಪೊತ್ತು ನೀನೀ ಕ್ಷಣ | ನಡೆಯೆನೆ ನಮಿಸಿದನು ||೨೨೦||

ಭಾಮಿನಿ

ಎಂದು ಪೇಳ್ದತಿ ವೇಗದಿಂದರ |
ವಿಂದನಾಭನು ಮುಖ್ಯ ಯದುಬಲ |
ವೃಂದದೊಡನೆದ್ದಾ ಖಗೇಂದ್ರನೊಳೈದು ಬೇಗೆನಲು ||
ಇಂದಿರಾಧವನೊಡನೆ ನಾರದ |
ನಂದು ಹಂಸೆಯನಡಂ ಬರೆ ಸಾ |
ನಂದದಿಂದಂಬರಕೆ ನೆಗೆದ ಗರುತ್ಮನೊಲವಿನಲಿ ||೨೨೧||

ರಾಗ ಭೈರವಿ ತ್ರಿವುಡೆತಾಳ

ಗರುಡನೀ ಪರಿಯಿಂದ ಸತ್ತ್ವದಿ | ಹರಿಯ ಯದುಬಲ ಸಹಿತ ಪೊತ್ತಂ |
ಬರಕೆ ಚಿಗಿದತಿ ವೇಗದಿಂದಲಿ | ಬರುತಿರಲು ಪವಮಾನನಂದದಿ |
ಗರಿಯ ಗಾಳಿಗಜಾಂಡ ಕಂಪಿಸೆ | ಶರಧಿಗಳು ತುಳುಕಿದವು ಕುಲಭೂ |
ಧರೆಗಳೋಲಾಡಿದವು ನೃಪ ಕೇ | ಳೊರೆಯಲಳವಲ್ಲವನ ಸಾಹಸ || ಏನನೆಂಬೆ ||೨೨೨||

ಛಲದೊಳೀ ಪರಿಯಿಂ ಗರುತ್ಮನು | ನಿಲದೆ ಬಂದಾ ಬಾಣದೈತ್ಯನ |
ಪೊಳಲ ಕಾಣುತ ಗಗನದಿಂದಿಳೆ | ಗಿಳಿದು ಬರುತಿಹ ರಭಸದೊಳಗಾ |
ಖಲನ ರಥದ ಮಯೂರಕೇತನ | ಇಳೆಗೆ ಮುರಿದೊರಗಿದುದು ದಾನವ |
ಕುಲವು ಭಯಪಡಲತ್ತಲಿತ್ತಲು | ಗೆಲವಿನಿಂ ಧರೆಗಿಳಿದ ಗರುಡನು || ಏನನೆಂಬೆ ||೨೨೩||

ವಾರ್ಧಕ

ವಿನತೆಯಾತ್ಮಜನವನಿಗಿಳಿಯೆ ಸಂತೋಷದಿಂ |
ವನರುಹಾಕ್ಷಂ ಧರಣಿ ಗಿಳಿಯಲಾನಂದದಿಂ |
ಮುನಿಪ ಬಲಭದ್ರರೊಳು ಮಾತಾಡುತೈದೆ ಗೋಮತಿಯೆಂಬ ವರನದಿಯೊಳು ||
ವಿನಯದಿಂ ಕಾಲ್ಮೊಗಂ ತೊಳೆದುಮಾತೀರದೊಳ್ |
ಘನವೃಕ್ಷಮೂಲದೊಳ್ ಕುಳಿತಿರಲ್ಕೆಲ್ಲರುಂ |
ಮನದಣಿಯಲಾ ಹಿಮೋದಕವೀಂಟಿ ತರುಗಳ ನೆಳಲ್ಗಳಲ್ಮಂಡಿಸಿದರು ||೨೨೪||

ಹರಿಪದೋದ್ಭವೆ ಯಾದುದರಿಂದೆ ಜಾಹ್ನವಿಯ |
ನುರಗಭೂಷಣ ಶಿರದಿ ಧರಿಸಿದಂ ಸಜ್ಜನರ |
ಪರಮ ಭಕ್ತಿಯೊಳು ಸ್ನಾನಂಗಳಂ ಮಾಡಿ ತಂತಮ್ಮಘವನುಂ ಕಳೆವರು ||
ಮುರಹರನ ಮೃದುಪದಸ್ಪರ್ಶವಾಯ್ತಿಂದು ನಾ |
ಸರಿಯಾದೆನಾ ಗಂಗೆಗಾನೆಂದು ಗೋಮತೀ |
ವರನದಿಯುಮೈದೆ ತಾನುಬ್ಬಿತೆಂಬಂತೆ ಮೆರೆದುಕ್ಕಿ ಪರಿಯುತ್ತಿರ್ದಳು ||೨೨೫||

ಹರನಂತೆ ಶಿವೆಯುಕ್ತೆಯಾಗಿ ಕಾಂತಾರದಿಂ |
ದುರೆ ಪುಂಡರೀಕರಂಜಿತೆಯಾಗಿ ಭೂದಿವಿಜ |
ವರನಂತೆ ಘೋಷಶೋಭಿತೆಯಾಗಿ ಶಿರಿಯಂತೆ ಹರಿಗೆ ತಾಂ ಪ್ರೀತೆಯಾಗಿ ||
ಅರಳಿರ್ಪ ಸುಮದಂತೆ ಸುರಭಿಯುತೆಯಾಗಿಯಂ |
ಬರದಂತೆ ಹಂಸರಾಜಿತಳಾಗಿ ಜನಕಜಾ |
ವರನ ಮನೆಯಂತೆ ಕುಶಸಂಯುಕ್ತೆಯಾಗಿ ತಾನಿರುತಿರ್ದಳಾ ಗೋಮತಿ ||೨೨೬|

ಕಂದ

ಆ ನದಿಯಂದವನೀಕ್ಷಿಸು |
ತಾನಂದಂಬಡೆದುಮೆಲ್ಲರುಂ ಕುಳಿತಿರಲಾ ||
ಮಿನಾಂಕಾದ್ಯದುವೀರರ್ |
ಗಾನತಜರಕ್ಷನೆಂದನತಿ ಮೋದದೊಳುಂ ||೨೨೭||

ರಾಗ ವೃಂದಾವನಸಾರಂಗ ತ್ರಿವುಡೆತಾಳ

ಕೇಳಿ ಯಾದವರೆಲ್ಲ | ನಿಮ್ಮೊಳು ನಾನು | ಪೇಳುವುದೊಂದು ಸೊಲ್ಲ |
ಇಂದೆಮ್ಮ | ಪಾಳೆಯ ಸಹಿತೆಲ್ಲರೈತಂದೆವಲ್ಲ ||
ಖೂಳ ಬಾಣನ ತೋಳನವನಿಗೆ | ಹೋಳುಗಳೆವೆನೆನುತ್ತ ಮಾನಿನಿ |
ಮೌಳಿಮಣಿಯೊಳು ನುಡಿದ ನುಡಿಗನು | ಕೂಲವಾವುದು ಪೇಳಿರೆನ್ನೊಳು ||೨೨೮||

ಖಳವೈರಿಯೆ ತೋಷದೊಳು | ನಮ್ಮಯ ಭುಜ | ಬಲವನ್ನು ನಿಮಿಷದೊಳು |
ಸುಮ್ಮನೆ ನೀನು | ಕುಳಿತೀಕ್ಷಿಸು ದಯಾಳು | ಈ ವೇಳೆಯೊಳು ||
ಮುಳಿದು ನಮ್ಮೊಳು ಕಲಹಕಾ ವಿಷ | ಗಳನು ನಿಂದೊಡೆಯಳುಕದಾಶರ |
ಕುಲವ ಕಾಲನ ಬಳಿಗೆ ಸೇರಿಸಿ | ಘಳಿಗೆಯೊಳು ತತ್ಪೊಳಲನೆಲ್ಲವ |
ತಳಪಟವ | ಗೈದೆಳೆದು ತರುವೆವು | ಬಲಿಸುತನ ನಿಂದಳುಕದಾ ಯದು |
ಬಲಭುಜರು ಧುರಕೇಳಲವದಿರ | ನಿಲಿಸಿ ಹರಿ ಮುನಿ ತಿಲಕಗೆಂದನು ||೨೨೯||

ರಾಗ ಕೇದಾರಗೌಳ ಆದಿತಾಳ

ಕೇಳೊ ನಾರದ ಮಹಾಮುನಿವರ್ಯ | ಪೇಳುವೆ ನಿನಗೊಂದು ಕಾರ್ಯ || ಪ ||

ಅತಿವೇಗದಿಂ ಹೋಗಿ ಋಷಿವರನುಸಿರು ಪಾ | ರ್ವತಿಯ ಪ್ರಾಣೇಶನೊಳಿಂದು ||
ಸೋತಂಗಜಸುತನನು ಮದದಿಂದ ಬಲಿ | ಸುತ ಸೆರೆಯೊಳಗಿಟ್ಟನಂತೆ ||೨೩೦||

ನಿನ್ನ ಸಹಾಯದೊಳಸುರಾಧೀಶ್ವರ | ನೆನ್ನ ಮೊಮ್ಮನ ಬಂಧಿಸಿದ ||
ಮುನ್ನ ಹಿರಣ್ಯಕ ಮುಂತಾದ ದನುಜರು | ಬನ್ನ ಬಟ್ಟುದ ಬಲ್ಲ ತಾನು ||೨೩೧||

ಶರಣನ ಕೊಂದೆನೆಂಬಪಕೀರ್ತಿಯನೆನ್ನ | ಶಿರದಲ್ಲಿಡುವನು ಗೌರೀಶ ||
ದುರುಳನೊಳುಷೆಯನು ಸ್ಮರಜಾತಗೀಯೆಂ | ದೊರೆಯಲು ಪೇಳ್ದೆ ನಾನೆಂದು ||೨೩೨||

ಕಂದ

ಇಂತೆನೆ ಕೇಳ್ದಾ ಮುನಿಪಂ |
ಕಂತುಪಿತಗೆ ವಂದಿಸುತಲಿ ಅತಿವೇಗದೊಳಂ ||
ಅಂತಕವೈರಿಯ ಬಳಿಗಂ |
ತಾಂ ತಳುವದೆ ಬಂದು ಎರಗಿದಂ ಪದಯುಗಕಂ ||೨೩೩||