ರಾಗ ತೋಡಿ ಅಷ್ಟತಾಳ
ಶಶಿಮುಖಿಯೇಕೆ ದುಃಖಿಸುವೆ ಪೇಳೆನ್ನೊಳು | ಪೆಸರೇನು ಬಂದವನ ||
ಪುಸಿಯಲ್ಲ ನಿನ್ನ ಬಳಿಗೆ ತಹೆನೆನ್ನ ಸಾ | ಹಸವನ್ನು ನೋಡೆ ನೀನು ||೯೦||
ಕಾಮನಂತಿಹನು ಮಂತ್ರಿಜೆಯೆ ಕೇಳಾತನ | ನಾಮವ ನಾನರಿಯೆ ||
ಸಾಮರ್ಥ್ಯದಿಂದೆಂತಾದರು ಕರೆತಂ | ದಾ ಮಹೀಶನ ತೋರಿಸೆ ||೯೧||
ತರುಣಿ ಬಾಣಜೆ ಲಾಲಿಸು ಮೂರು ಲೋಕದ | ಪುರುಷರಾಕಾರವನ್ನು ||
ಬರೆತಹೆನಾತನ ಗುರುತವ ಪೇಳ್ದರೆ | ಕರೆತಹೆನವನ ನೋಡೆ ||೯೨||
ಅಕ್ಕ ನೀನೆನಗೋಸ್ಕರ ಲೋಕಲೋಕವ | ತುಕ್ಕಬೇಕಿರುಳಿನಲ್ಲಿ ||
ರಕ್ಕಸಭೂತ ಭೇತಾಳಾದಿಗಳಿಂಗೆ | ಸಿಕ್ಕದೆಂತೈದುವೆಯೆ ||೯೩||
ದನುಜರ ಗುರು ಕಲಿಸಿದ ವಿದ್ಯದಿಂದ ಮ | ತ್ತನುವಿನಿಂ ತಿರುಗುವೆನು ||
ವನಜಾಕ್ಷಿ ನಾ ಬರುವನಕ ದುಃಖಿಸದೆ ನೀ | ಮನೆಯೊಳಗಿರು ಸುಮ್ಮನೆ ||೯೪||
ವಾರ್ಧಕ
ಜನಪ ಕೇಳಿಂತುಷೆಯ ಸಂತೈಸಿ ಮಂತ್ರಿಸುತೆ |
ದಿನಪನಸ್ತಮಿಸಲಾ ರಾತ್ರಿಯೊಳ್ ಪೊರಟಾಗ |
ಳನುವಿನಿಂದೀರೇಳು ಭುವನದವರಾಕಾರಮಂ ಕಂಡು ಕಂಡು ಬರೆದು ||
ಘನವೇಗಮಾಲಯಕ್ಕೈದಲತಿ ಶ್ರಮದಿಂದ |
ಕನಕಾಂಗಿಯೊರಗಿರಲ್ಕಿನನುದಯಮಾಗಲುರೆ |
ವಿನಯದಿಂದೆದ್ದುಮಾ ಬಾಣಜೆಯನೈದೆ ಕರೆದೆಂದಳಾ ಸಚಿವಾತ್ಮಜೆ ||೯೫||
ರಾಗ ಕೇದಾರಗೌಳ ಝಂಪೆತಾಳ
ತರುಣಿ ದುಃಖಿಸದಿರಿನ್ನು | ಲೋಕದಾ | ಪುರುಷರಾಕಾರವನ್ನು ||
ಬರೆದೀಗ ತಂದೆ ಕಾಣೆ | ಕಮಲಾಕ್ಷಿ | ಹರುಷದಿಂ ನೋಡೆ ಜಾಣೆ ||೯೬||
ಸುರಪ ಮುಖ್ಯಾಮರರನು | ಸಿದ್ಧ ಕಿ | ನ್ನರ ಯಕ್ಷ ರಾಕ್ಷಸರನು ||
ಗರುಡ ಗಂಧರ್ವರನ್ನು | ಉರಗ ಕಿಂ | ಪುರುಷ ವಿದ್ಯಾಧರರನು ||೯೭||
ಪೃಥ್ವಿ ಪಾಲರರೂಪವ ತಾ | ಬರೆತಂದೆ | ನಿತ್ತ ನೋಡವ್ವ ಎನುತ ||
ಮತ್ತಕಾಶಿನಿ ತೋರಲು | ಇವರಲ್ಲೆ | ನುತ್ತ ಬಾಣಜೆ ಪೇಳಲು ||೯೮||
ಬಳಿಕ ಯದುವೀರರನ್ನು | ತೋರಿದಳು | ಬಲರಾಮ ಕೃಷ್ಣರನ್ನು ||
ನಳಿನಬಾಣನ ಕಂಡಳು | ಇವನವನ | ಚೆಲುವಿಕೆಗೆ ಸಮನೆಂದಳು ||೯೯||
ರಕ್ಕಸಾಂತಕ ಮೊಮ್ಮನ | ತೋರಿಸಲು | ನಕ್ಕಳಿವನಹುದು ಎನ್ನ |
ಠಕ್ಕಿಸಿದ ಧೀರನೆಂದು | ಉಷೆ ಹರುಷ | ಉಕ್ಕಿ ಲಜ್ಜಿಸಿದಳಂದು ||೧೦೦||
ಏಕೆ ಲಜ್ಜಿಸುವೆ ಪ್ರೌಢೇ | ಕ್ಷಣಕವನ | ನಾ ಕರೆದು ತರುವೆ ನೋಡೆ ||
ಸಾಕು ಚಿಂತಿಸದಿರೆಂದು | ವರಚಿತ್ರ | ಲೇಖೆ ತಾ ನುಡಿದಳಂದು ||೧೦೧||
ಭಾಮಿನಿ
ಅರಸ ಕೇಳಿಂತುಷೆಯ ಸಂತೈ |
ಸಿರಲು ಮಂತ್ರಿಜೆಯತ್ತ ಕಾಮನ |
ತರುಣಗೀ ಬಾಣಜೆಯು ಸ್ವಪ್ನವ ಕಂಡ ದಿವಸದಲಿ ||
ತರುಣಿಯೋರ್ವಳ ಕನಸಿನಲಿ ತಾ |
ನೆರೆದೆನೆಂದೀಕ್ಷಿಸಿಯೆ ಚಿಂತಾ |
ಭರಿತದಿಂದಿರುತಿರ್ದನವಳಂ ನೋಳ್ಪ ತವಕದಲಿ ||೧೦೨||
ವಾರ್ಧಕ
ಆ ಸಮಯದೊಳಗಿತ್ತಲೀ ಮಂತ್ರಿಯಾತ್ಮಜೆ ವಿ |
ಲಾಸದಿಂ ತರಣಿ ಯಸ್ತಮಿಸಲೈತಂದಳ್ ಪ್ರ |
ಕಾಶದಿಂ ಮೆರೆವ ದ್ವಾರಕೆಗಲ್ಲಿ ಮೆಲ್ಲನೊಳ ಪೊಕ್ಕು ಮನ್ಮಥಸುತನನು ||
ತೋಷದಿಂದೊಡಬಡಸುತುಷೆಯ ರೂಪಂ ದೋರೆ |
ತಾ ಸ್ವಪ್ನದೊಳ್ಕಂಡ ಸತಿಯಂತಿರಲ್ಮಂದ |
ಹಾಸದಿಂ ಬರ್ಪೆನೆನಲನಿರುದ್ಧನಂ ಪೊತ್ತುಮನಿಲವೇಗದಿ ಬಂದಳು ||೧೦೩||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂತು ಪುರಜನವರಿಯದಾ ವೋಲ್ | ಕಂತುಜನ ತಂದಾಗಲುಷೆಯ ಗೃ |
ಹಾಂತರದೊಳಿಳುಹಿದಳು ಮಂತ್ರಿಜೆ | ಸಂತಸದೊಳು ||೧೦೪||
ಬಳಿಕ ಸರಸಿಜಮಿತ್ರನುದಯಿಸೆ | ಘಳಿಲನಾ ಬಾಣಜೆಯ ಕರೆದೆಂ |
ದಳು ವಿನೋದದಿ ಸಚಿವಸುತೆಯತಿ | ಗೆಲವಿನಿಂದ ||೧೦೫||
ಸರಸಿಜಾಂಬಕಿ ನೋಡೆ ನಿನ್ನೊಳು | ನೆರೆದು ತೋಷವಬಡಿಸಿ ಮೆಲ್ಲನೆ |
ಮರಳಿ ಮಾಚಿಸಿ ಮೆಲ್ಲನೈದಿದ | ಪುರುಷನನ್ನು ||೧೦೬||
ಎನಲು ಕೇಳ್ದಾ ಬಾಣನಂದನೆ | ಘನಹರುಷದಿಂ ಬಂದು ಕಂಡಳು |
ದಿನಪತೇಜವ ಜರವುತಿರ್ಪಾ | ಮನುಮಥಜನ ||೧೦೭||
ರಾಗ ಸಾಂಗತ್ಯ ರೂಪಕತಾಳ
ಚೆಲುವನ ಕಂಡುಷೆಯೊಲವಿಂದವನ ಪಾದ | ಜಲಜವ ತೊಳೆದು ಸಂಭ್ರಮದಿ ||
ನಲವಿನಿಂದಲ್ಲಿ ಲಜ್ಜಿಸಿ ನಗುತೆಂದಳು | ನೆಲನ ನೋಡುತ ಕಾಂತಗಂದು ||೧೦೮||
ಸರಸವಂತನೆ ಮೊನ್ನೆ ಇರುಳೊಳೈತಂದು ನಾ | ನರಿಯಂದದಲಿ ಎನ್ನೊಡನೆ ||
ಸರಸದೊಳಿದ್ದು ಸಂತೋಷಬಡಿಸಿ ಮತ್ತೆ | ಮರಳಿ ವಂಚಿಸಿ ಪೋಗಬಹುದೆ ||೧೦೯||
ಮಾನಿನಿಮಣಿ ಕೇಳೆ ವಂಚಿಸಿ ಪೋದವಳ್ | ನೀನಲ್ಲದಾನಲ್ಲ ಕೇಳೆ ||
ಏನಾದರಾಗಲೀಗಾ ಮಾತಿನ್ನೇಕೆನು | ತಾನಂದ ದಿಂದಲಪ್ಪಿದನು ||೧೧೦||
ಎರೆಯ ಕೇಳ್ ನಿನ್ನ ಕಾಣದೆ ನಾನು ದುಃಖದೊ | ಳಿರಲು ಮಂತ್ರಿಜೆ ಕಂಡು ಬೇಗ ||
ಕರೆತಂದು ಹರುಷವ ರಚಿಸಿದಳಿವಳಿಗೆ | ಸರಿಹಯ ನಾರಿಯರಿಲ್ಲ ||೧೧೧||
ಕಂದ
ಇಂತೆಂದುಷೆ ಮಂತ್ರಿಜೆಯಂ |
ಸಂತೋಷದೊಳಪ್ಪಿ ಯುಪಚರಿಸುತಿರಲಾಗಳ್ ||
ಸಂತಸವೆತ್ತುಂ ವರಸೀ |
ಮಂತಿನಿಮಣಿ ಚಿತ್ರಲೇಖೆ ಪೇಳ್ದಳ್ ಮುದದಿಂ ||೧೧೨||
ರಾಗ ಮಾರವಿ ಏಕತಾಳ
ವನಿತೆಯೇಕೆನ್ನನು ಪೊಗಳುವೆ ಭೇದವೆ | ನಿನಗೆನಗೀರ್ವರಿಗೆ ||
ದಣಿದಿಹ ಕೇಳ್ನಿನ್ನಿನಯನಿವಗೆ ಮ | ಜ್ಜನಗೈಸಿನ್ನ ಬಲೆ ||೧೧೩||
ಎಂದಮಾತನು ಕೇಳ್ದುಷೆ ಸ್ಮರಜಾತನಿ | ಗಂದು ಮಜ್ಜನಗೈಸಿ ||
ಚಂದದಿಂ ಭೋಜನವಾಗಲು ಪರಮಾ | ನಂದದೊಳನವರತ ||೧೧೪||
ಸುರತಕ್ರೀಡೆಯೊಳಿರು ತಿರ್ದಳುಮತಿ | ಸರಸದೊಳಿನ್ನವಳಾ ||
ಹರುಷವ ನಾನೇನೊರೆವೆನು ಕೇಳೈ | ಧರಣೀಶಲಲಾಮ ||೧೧೫||
ಕಂದ
ಅನಿರುದ್ಧನೊಳೀ ಪರಿಯಿಂ |
ದಿನದಿನದೊಳು ಬಾಣತನುಜೆಯತಿ ಸಂಭ್ರಮದಿಂ ||
ಮನುಮಥಕೇಳಿಯೊಳಿರುತಿರೆ |
ಮುನಿಪತಿ ನಾರದನಸುರನ ಸಭೆಗೇಳ್ತಂದಂ ||೧೧೬||
ರಾಗ ಸಾಂಗತ್ಯ ರೂಪಕತಾಳ
ಅಂಬರಮಣಿ ಭೂಮಿಗಿಳಿವಂತೆ ನಭದಿಂದ | ಕುಂಭಿನಿಗಿಳಿದ ನಾರದನು ||
ಅಂಬುಜನಾಭ ಶಂಕರರ ನಾಮಸ್ಮರಣೆ | ಯಿಂ ಬಂದ ಶೋಣಿತ ಪುರಕೆ ||೧೧೭||
ರಾಗ ಭೈರವಿ ಅಷ್ಟತಾಳ
ನಾರದಮುನಿಪನನು | ಕಾಣುತಲಮ | ರಾರಿ ಬಾಣಾಖ್ಯ ತಾನು ||
ಭೋರನೆದ್ದಿದಿರ್ಬಂದು ಪರಮಋಷಿಯ ಚರ | ಣಾರವಿಂದಕೆ ನಮಿಸಿ ||೧೧೮||
ಕರವಿಡಿದಾಸನದಿ | ಕುಳ್ಳಿರಿಸುತ | ಚರಣಪೂಜೆಯ ಮುದದಿ ||
ವಿರಚಿಸಿ ಬಲು ಸ್ತುತಿಗೈದು ಮಗುಳೆ ಪಾದ | ಕೆರಗುತ್ತಲಿಂತೆಂದನು ||೧೧೯||
ಯತಿ ರಾಯನೊಲಿದು ನೀನು | ಬಂದುದರಿಂದ | ಕೃತಕೃತ್ಯನಾದೆ ನಾನು ||
ಮತಿವಂತನೆನ್ನಲ್ಲಿಗೈತಂದ ಕಾರ್ಯವ | ನತಿವೇಗದಿಂದ ಪೇಳು ||೧೨೦||
ಬಾಣ ನಿನ್ನೈಶ್ವರ್ಯಕೆ | ನಿಖಿಳ ಗೀ | ರ್ವಾಣರು ಸರಿಯಿಲ್ಲ ಕೇ ||
ಳೇಣಾಂಕ ಧರ ಬಂದು ಬಾಗಿಲ ಕಾಯ್ದಿರ್ದ | ಕಾಣನಾದವಮಾನವ ||೧೨೧||
ಆತ ಕಾಣದೆ ಪೋದರೆ | ಪೋಗಲಿ ಮುನಿ | ನಾಥ ನೀನರಿದಿರ್ದರೆ ||
ಏತರ ಮಾನಹಾನಿಯ ಪೇಳು ಪೇಳೆಂದು | ಕಾತರದಿಂ ಕೇಳಿದ ||೧೨೨||
ಉಸಿರೆಂದರುಸಿರ್ವೆ ನಾನು | ನೀ ತಲೆಯ ತ | ಗ್ಗಿಸುವ ಹಾಗಾಯಿತಿನ್ನು ||
ಅಸುರೇಂದ್ರ ಕೇಳ್ ನಿನ್ನ ತನುಜಾತೆ ಸೂಳೆಯಂ | ತೆಸೆವಳೇನೆಂಬೆನಯ್ಯ ||೧೨೩||
ವಚನ
ಈ ಪರಿಯಿಂ ನಾರದ ಪೇಳಲಾ ಬಾಣಾಖ್ಯನತಿ ಚೋದ್ಯವೆತ್ತುಸುರಿದನದೆಂತೆನೆ –
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸುರಮುನಿಪ ನೀನಿಂತು ಪೇಳ್ವರೆ | ತರಳೆಯಾಲಯದಲ್ಲಿ ಕಾವಲ |
ನಿರಿಸಿಹೆನು ಬಲು ಖಳರನಲ್ಲಿಗೆ | ಬರುವರುಂಟೆ ||೧೨೪||
ರಾಗ ಸಾಂಗತ್ಯ ರೂಪಕತಾಳ
ಅಸುರಾಧಿಪತಿ ನೀನು ಬಡವನೆ ಬಲ್ಲೆ ಸಾ | ಹಸವಂತನೆಂದೆಂಬುದನ್ನು ||
ಪುಸಿಯಲ್ಲೋರ್ವನು ಬಂದು ಪೊಕ್ಕಿಹ ಕಾವಲಿ | ರ್ದಸುರರರಿಯದಂತೆ ಕೇಳು ||೧೨೫||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಂದುದನು ಕೇಳುತ್ತ ಖಳ ಖತಿ | ಯಿಂದ ನುಡಿದನು ಮುನಿಪ ಕೇಳೈ |
ಬಂದವನು ತಾನಾರು ಮುಗಿಸುವೆ | ನೊಂದು ಕ್ಷಣದಿ ||೧೩೬||
ರಾಗ ಸಾಂಗತ್ಯ ರೂಪಕತಾಳ
ಬಂದವನ್ಯಾರೆಂದರೆ ಕೇಳು ಪೇಳುವೆ | ಇಂದಿರೆಯರಸನ ಮೊಮ್ಮಾ ||
ಕೊಂದೆನೆಂದರೆ ನಿನ್ನ ಕೈಗಳ ಒಡೆಸುವ | ನೆಂದನು ಮುನಿನಾಥ ನಗುತ ||೧೨೭||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಋಷಿಕುಲತಿಲಕ ನೀನಲ್ಲದುಳಿದವ | ರುಸಿರಿದರೆ ಶಿಕ್ಷಿಸುವೆನೆನುತಲೆ |
ರಸೆಯೊಳೆನಗಿದಿರುಂಟೆ ಕೇಳೀ | ಪೊಸಬಗೆಯನು ||೧೨೮||
ರಾಗ ಸಾಂಗತ್ಯ ರೂಪಕತಾಳ
ಹರ ನಿನ್ನ ಮನೆಯ ಬಾಗಿಲ ಕಾಯ್ವನೆಂದಹಂ | ಕರಿಸದಿರಾ ಹರಿಗಿದಿರೆ ||
ಬರುವ ಭಾಗ್ಯವದೇನೊ ಪುಸಿ ಪೇಳ್ದರೆನಗೆ | ತರಳೆಯಾಲಯವ ನೋಡೆಂದ ||೧೨೯||
ಕಂದ
ಎಂದಾ ವಾಕ್ಯವನುಂ ಕೇ |
ಳ್ದೆಂದಂ ಖತಿಯಿಂದ ದಾನವೇಂದ್ರಂ ಭರದಿಂ ||
ಮುಂದಿಹ ಕುಂಭಾಂಡನೊಳಿಂ |
ತೆಂದನು ಅತಿ ಗರ್ಜಿಸುತ್ತಲೆ ಪೇಳ್ವೆನದಂ ||೧೩೦||
ರಾಗ ಕಾಂಭೋಜಿ ಝಂಪೆತಾಳ
ಧುರಧೀರ ಮಂತ್ರಿ ಕೇಳ್ ಮುನಿ ಪೇಳ್ದ ವಚನವಿದು | ಸರಿಬಂತೆ ನಿನ್ನ ಮನಕಿಂದು ||
ತುರುಗಾಯಿಯಣುಗನಾತ್ಮಜನೆನ್ನ ಮಗಳಿಂಗೆ | ವರನಾಗಬಲ್ಲನೇನಯ್ಯ ||೧೩೧||
ದಾನವಾಧಿಪ ಕೇಳು ಪುಸಿ ಪೇಳ್ವನಲ್ಲ ಸುರ | ಮೌನಿ ತಾ ಸುಜ್ಞಾನಿಯೈಸೆ ||
ಏನಾದಡೊಮ್ಮೆ ನಾ ಪೋಗಿಯದನೀಕ್ಷಿಸಿ ನಿ | ದಾನವರಿತುಸಿರ್ವೆ ನಿನ್ನೊಡನೆ ||೧೩೨||
ಎಲೆಸಚಿವನಾಲಿಸೆನ್ನಣುಗೆಯಾಲಯಕೆ ನೀ | ಘಳಿಲನಿರದೈದಿ ಬಂದವನ ||
ಬಲವಂತನಾದಡವನನು ತಾರದಿರೆ ನಿನ್ನ | ನುಳಿಸೆನರಿತೈದು ವೇಗದಲಿ ||೧೩೩||
ಜೀಯ ನಿನ್ನಲಿ ಪೇಳ್ದ ಮಾತಿಗಂತರವುಂಟೆ | ಮಾಯದಂಥವನಾದಡೇನು ||
ಆಯದಂತೆಡಗೆಡಹಿ ತಂದೊಪ್ಪಿಸುವೆನಸುರ | ರಾಯ ಚಿತ್ತೈಸೆಂದನಾಗ ||೧೩೪||
ಕಂದ
ಎಂದಪ್ಪಣೆಗೊಂಡಾಶರ |
ವೃಂದವನುಂ ನೆರಪಿ ಮಂತ್ರಿವರನಾ ಕ್ಷಣದೊಳ್ ||
ನಿಂದತಿ ರೋಷವ ತಾಳ್ದೈ |
ತಂದನು ಘನಘೋಷದಿಂದಲುಷೆಯಾಲಯಕಂ ||೧೩೫||
ವಾರ್ಧಕ
ಉತ್ತರಾಸುತನೆ ನೀಂ ಚಿತ್ತವಿಸು ಮಂತ್ರಿಯುಂ |
ಮತ್ತೆ ಖತಿವೆತ್ತು ಪೊಳೆವುತ್ತಲಿಹ ಖಡ್ಗಮ |
ನ್ನೆತ್ತಿ ಹಯ ಹಸ್ತಿ ರಥ ಪತ್ತಿಸಂದೋಹದಿಂ ದೊತ್ತಿ ನಡೆವುತ್ತಲಿರಲು ||
ಸತ್ತಿಗೆಯ ಮೊತ್ತಂಗಳೆತ್ತಲುಂ ತಮವ ಬೆಂ |
ಬತ್ತುತ್ತಿರೆ ದೈತ್ಯರುರೆ ಸತ್ವದಿಂದೈತರಲ್ |
ಮತ್ತೆ ಕಾಣುತ್ತೋರ್ವ ಸತಿಯು ಬೆದರುತ್ತಂದು ಚಿತ್ರಲೇಖೆಗೆ ಪೇಳ್ದಳು ||೧೩೬||
ರಾಗ ಶಂಕರಾಭರಣ ಅಷ್ಟತಾಳ
ಕೇಳೆ ಅಕ್ಕ ನಾರದನು ಬಾಣನ ಸಭೆಗೆ | ಬಂದು | ಪೇಳಿದನಂತೆ ವೃತ್ತಾಂತವನ್ನು ಆತಗೆ ||
ಕಾಲನ ತೆರದಿ ದೈತ್ಯ ಕೋಪಿಸುತ್ತಿರೆ | ಮಂತ್ರಿ | ಕೇಳಿ ಬಂದನೀತನನ್ನು ಕೊಂಡುಪೋಪರೆ ||೧೩೭||
ಎಂದ ಮಾತ ಕೇಳುತಲೆ ಚಿಂತಿಸುತಾಗ | ಮಂತ್ರಿ | ನಂದನೆ ಬಾಗಿಲನೆಲ್ಲನಿಕ್ಕಿ ಬೇಗ ||
ತಂದು ರಾಕ್ಷಸರನ್ನು ಕಾವಲನಿರಿಸಿ | ತಾನು | ಬಂದು ಪೇಳಿದಳು ಕಾಮಜಗೆ ಚಿಂತಿಸಿ ||೧೩೮||
ರಾಗ ನೀಲಾಂಬರಿ ರೂಪಕತಾಳ
ಕೇಳಯ್ಯ ಸ್ಮರಜಾತ ನಾನೇಂಬ ವಚನವ | ಜಾಲಮಾತಲ್ಲ ಕಿವಿ ಗೊಟ್ಟಿದನೆಲ್ಲ || ಪ ||
ಋಷಿ ನಾರದನು ಬಂದು ಬಾಣನೊಳ್ ಚಾಡಿಯ | ನುಸಿರಲು ಬಹುಕೋಪಿಸಿದನಂತೆ ||
ಅಸುರೇಂದ್ರ ಮಂತ್ರಿಯ ಕರೆದಟ್ಟಲಾತ ರಾ | ಕ್ಷಸಬಲ ಸಹ ಬರ್ಪನದಕೋ ನೋಡಯ್ಯ ||೧೩೯||
ಖಳರೆಲ್ಲರ್ ಬಂದೆಮ್ಮ ಮನೆಯ ಮುಂಬಾಗಿಲ | ಬಳಿಯಿರುವರ್ ನಿನ್ನ ತಿಂಬೆವೆಂದೆನುತ ||
ಲಲಿತಾಂಗಿಯುಷೆಗಾಗಿ ನಾನೆ ಕರೆತಂದಿಲ್ಲಿ | ಕೊಲಿಸಿದಂತಾಯ್ತಕಟೆಂದಳಲಿದಳು ||೧೪೦||
ಜಲಜಾಕ್ಷಿ ಮಂತ್ರಿಜೆ ಕೇಳಾ ಮಾತೆಯ ಗರ್ಭ | ದೊಳ್ ಪೊಕ್ಕರ್ ಬಿಡದು ಲೋಕೇಶನ ಬರಹ ||
ಚೆಲುವೆಯೋರ್ವಳ ದೊರಕಿಸಿದೆ ನೀನೆಗನೆನ್ನ | ಕೊಲಿಸಿದೆ ಎಂಬುದುಂಟೆನೀ ಪೇಳು ಜಾಣೆ ||೧೪೧||
ರಾಗ ನಾದನಾಮಕ್ರಿಯೆ ಅಷ್ಟತಾಳ
ಇಂತು ಮಾತಾಡುವುದನು ಕೇಳ್ದು | ತನ್ನ | ಕಾಂತನ ಪಾದದೆಡೆಗೆ ಬಿದ್ದು ||
ಕಾಂತೆಯುಷೆಯು ಪೊರಳುತ್ತಿರೆ | ಕಂಡು | ಸಂತೈಸಿದನು ಸುಮ್ಮನಿರೆ ನೀರೆ ||೧೪೨||
ಬೇಡವೆ ನಿನಗೆ ಶೋಕವು ಕೇಳು | ಯುದ್ಧ | ಮಾಡುವುದನು ನೋಡು ನೀನೇಳು ||
ಕೂಡಿದ ರಾಕ್ಷಸಬಲವನು | ಮಣ್ಣ | ಗೂಡಿಸುವೆನು ನಿಮಿಷದೊಳಾನು ||೧೪೩||
ಎಂದು ಸತಿಯ ಕಂಬನಿಯನು | ಸೆರ | ಗಿಂದಲೊರೆಸಿ ಚುಂಬಿಸಿದನು ||
ಚಂದದಿಂದಪ್ಪಿ ಸಂತೈಸಿದ | ರಣ | ಕಂದು ಶೃಂಗರವಾದನನಿರುದ್ಧ ||೧೪೪||
ವಾರ್ಧಕ
ಧರಣಿಪತಿ ಲಾಲಿಸೀ ಪರಿಯಿಂದನಂಗಜಂ |
ಧುರಕೆ ಸನ್ನಹನಾಗಿರಲ್ ಮಂತ್ರಿಜಾತೆ ಕಂ |
ಡುರುತರ ಪ್ರೇಮದಿಂ ಯಂತ್ರಮಣಿಯಂ ರಚಿಸಿ ತೋಳ್ಗದಂ ಕಟ್ಟಿ ಬಳಿಕಾ ||
ದುರುಳರೈತರ್ಪ ಸಮಯದೊಳಿವಂ ಬರಿಗೈಯೊ |
ಳಿರಬಾರದೆಂದು ಕಪಟದೊಳೆ ಧನುಶರವನುಂ |
ತರಿಸಿಕೊಟ್ಟಳು ಮತ್ತೆ ಸಂಭ್ರಮದಿ ಸೇಸೆಯಂ ತಳಿಯೆ ಸ್ಮರಸುತನೆದ್ದನು ||೧೪೫||
ಕಂದ
ಕಂದರ್ಪಾತ್ಮಜನೀ ಪರಿ |
ಯಿಂದಂ ಶಸ್ತ್ರಾಸ್ತ್ರವಿಡಿದು ಮೆರೆದಿರ್ಪಾಗಳ್ ||
ಬಂದಾ ಸಚಿವಂ ಗರ್ಜಿಸು |
ತೆಂದಂ ಪೊರಬಳಿಯ ನಿಂದುಮೇವೇಳ್ವೆನದಂ ||೧೪೬||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಪಗಲವೇಳ್ಯದಿ ಬಾಗಿಲನು ಬಲು | ಬಿಗುಹಿನಿಂದಿಕ್ಕಿರುತಿರುವರಾರ್ |
ತೆಗೆಯೊ ಬೇಗದೊಳೆನಲು ಪೇಳ್ದಳು | ಮುಗುದೆಯಂದು ||೧೪೭||
ತೆಗೆಯೆ ಬಾಗಿಲನಾಳ್ದನಳಿದರೆ | ಜಗತಿಯಲಿ ಬಾಳುವೆನೆ ಕಾಂತನ |
ನಗಲಲಾರೆನು ಗೃಹಕೆ ವಹ್ನಿಯ | ಪೊಗಿಸು ಹೀಗೆ ||೧೪೮||
ಎನಲು ಕೇಳುತ ಮಂತ್ರಿನಗುತಾ | ಮುನಿಪ ಪೇಳಿದ ಮಾತು ಧಿಟವಾ |
ಯ್ತೆನುತ ಮದದಾನೆಗಳ ತರಿಸಿದ | ಕಿನಿಸಿನಿಂದ ||೧೪೯||
ರಾಗ ಶಂಕರಾಭರಣ ಮಟ್ಟೆತಾಳ
ಕರಿಗಳಿಂದ ಬಾಗಿಲನ್ನು | ಮುರಿಸಲನುವ ಗೈಯೆ ಕಂಡು |
ಸ್ಮರಜ ಖಾತಿವೆತ್ತು ಹೂಂ | ಕರಿಸುತಾ ಕ್ಷಣ ||
ಶರಶರಾಸನವನು ಕೊಂಡು | ಭರದಿ ಕದವ ತೆಗೆದು ಪೊರಟು |
ಸರಳಿನಿಂದ ಗಜವ ಧರಣಿ | ಗುರುಳಲೆಚ್ಚನು ||೧೫೦||
ಬಿಡದೆ ರಥಿಕರೊಂದು ಕಡೆಯ | ಘುಡುಘುಡಿಸುತ ಸರಳ ಮಳೆಯ |
ಕಡುಗಿ ಸುರಿಯೆ ಕಂಡು ತರಳ | ಫಡಫಡೆನುತಲಿ ||
ಒಡನೆ ಸತ್ವದಿಂದಲಾಗ | ಧಡಿಗ ಖಳರತೀರ್ಚಿ ತೇಜಿ |
ಗಡಣವೈದೆ ಎಲ್ಲ ಕಾಲ | ನಡೆಗೆ ಕಳುಹಿದ ||೧೫೧||
ಧುರದಿ ದೈತ್ಯರೆಲ್ಲ ಯಮನ | ಪುರವನೈದೆ ಕಂಡು ಮಂತ್ರಿ |
ಬೆರಳ ಮೂಗಿಲಿಟ್ಟು ಪಂಚ | ಶರಜಗೆಂದನು ||
ತರಳನೆಂದು ಬಿಟ್ಟರೆ ಈ | ತೆರದ ಗರ್ವವೇತಕೆನ್ನ |
ಪರಿಯ ನೋಡೆನುತ್ತ ಕರೆದ | ಶರದ ವೃಷ್ಟಿಯ ||೧೫೨||
ದುರುಳನೆಚ್ಚಿದಂಬ ತರಿದು | ಸ್ಮರಜ ಪೇಳ್ದನೆಲವೊ ನಾನು |
ತರಳನಾದಡೇನು ಎನ್ನ | ಸರಳು ತರುಣವೆ ||
ಬರಿಯ ಮಾತಿನಿಂದಲೇನು | ಪರಿಕಿಸೆನುತಲಾಗಲೈದು |
ಶರವನೆಸೆಯೆ ಮಂತ್ರಿಯುರವು | ಬಿರಿದುದಾಕ್ಷಣ ||೧೫೩||
ಎದೆಯು ಬಿರಿಯೆ ರೋಷದಿಂದ | ಮದಮುಖತ್ವದೊಳಗೆ ಸಚಿವ |
ನುದಧಿ ಕದಡೆ ಬೊಬ್ಬಿಡುತ್ತ | ಲೊದರೆ ಗರ್ಜಿಸಿ ||
ಮದನಜಾತ ನಿಲ್ಲು ನಿಲ್ಲು | ಬೆದರಬೇಡೆನುತ್ತ ಬಾಣ |
ಎದೆಯ ಸಮವೆ ಕೀಲಿಸಲ್ಕೆ | ರುಧಿರವೊರೆತುದು ||೧೫೪||
ಕೋಪದಿಂದಲಾಗಲಿಕ್ಷು | ಚಾಪನಣುಗನೈದೆ ತನ್ನ |
ಚಾಪವನ್ನು ನೆಗಹಿ ಸುಪ್ರ | ತಾಪದಿಂದಲಿ ||
ಭಾಪು ಭಳಿರೆ ವೀರನಾನ | ಲಾಪಡಿದಕೊ ಎನುತಲೆಸೆಯ |
ಲಾ ಪಲಾಶ ಮಂತ್ರಿ ಬಿದ್ದ | ಭೂಪ ಲಾಲಿಸು ||೧೫೫||
ಕಂದ
ದುರುಳಖಳಂ ಮೂರ್ಛೆಯೊಳಂ |
ದರೆನಿಮಿಷಂ ಬಿದ್ದು ಮೈದೆ ತರಹರಿಸುತ್ತಂ ||
ಭರದಿಂದೆದ್ದುರೆ ಕಿನಿಸಿಂ |
ಧರಣಿಯು ಬಿರಿವಂತೆ ಗರ್ಜಿಸುತ್ತಿಂತೆಂದಂ ||೧೫೬||
ರಾಗ ಪಂಚಾಗತಿ ಮಟ್ಟೆತಾಳ
ಭಳಿರೆ ಕಾಮತನುಜ ಕುವರನೆಂದು ದಯದೊಳು |
ಉಳುಹೆ ಶೌರ್ಯವಂತನಾದೆ ನೀನು ಧುರದೊಳು ||
ಗೆಲಿದೆನೆಂದಹಂಕರಿಸದಿರಿನ್ನು ಕೇಳೆಲೊ |
ಬಲಿಯ ಕೊಡುವೆ ನಿನ್ನ ಭೂತಗಳಿಗೆ ನಿಲ್ಲೆಲೊ ||೧೫೭||
ಎಂದು ಕಿನಿಸಿನಿಂದಮಂತ್ರಿ ಸರಳಮಳೆಯನು |
ನಿಂದು ಸುರಿಯೆ ಸ್ಮರಜನಿರದೆ ನಡುವೆ ತಡೆದನು ||
ಮುಂದುವರಿದು ದೈತ್ಯ ಗದೆಯನಿಡಲು ಕಂಡನು |
ಒಂದು ಶರವ ಕಡಿದು ಬಿಸುಟ ಮದನಜಾತನು ||೧೫೮||
ಪಸುಳೆಗಿಷ್ಟು ಪಂಥವೇತಕೆನುತ ಕೋಪಿಸಿ |
ಅಸುರಮಂತ್ರಿ ಕ್ರೂರಶರವನೆಚ್ಚು ಗರ್ಜಿಸಿ ||
ಕುಸುಮಶರ ಸುತನು ಖಾತಿವೆತ್ತು ಬಾಣವ |
ನೆಸೆದು ಖಂಡಿಸಿದನು ಸಚಿವ ಪಿಡಿದ ಚಾಪವ ||೧೫೯||
ಕರದ ಬಿಲ್ಲು ಮುರಿಯೆ ದನುಜನಾರ್ಭಟಿಸುತಲೆ |
ಭರದೊಳೆದ್ದು ಪೊಸತು ಧನುವ ಪಿಡಿದ ಖತಿಯಲಿ ||
ತರಳ ನಿಲ್ಲು ನಿಲ್ಲು ಬೆದರ ಬೇಡವೆನುತಲೆ |
ಕೆರಳಿ ಸರಳ ಸುರಿಯೆ ಸ್ಮರಜ ಕಂಡು ಮುದದಲಿ ||೧೬೦||
ಬರುವ ನಾರಾಚಗಳನು ಭರದಿ ಕಡಿದನು |
ಹರಿಯ ಮನದಿ ಸ್ಮರಿಸಿ ದಿವ್ಯಶರವನೆಚ್ಚನು ||
ಉರಿಯನುಗುಳತೈದಿ ಖಳನ ಫಣೆಗೆ ನಾಂಟಲು |
ಸುರವಿರೋಧಿ ಮೂರ್ಛೆಯಿಂದ ಬಿದ್ದ ಭುವಿಯೊಳು ||೧೬೧||
ಭಾಮಿನಿ
ಧರಣಿಪತಿ ಕೇಳಿಂತು ಸಚಿವನು |
ಮರವೆಯಿಂದೊರಗಿರಲನಂಗಜ |
ಹರುಷದಿಂದೊಳಪೊಕ್ಕು ಸತಿಯೊಡನತಿವಿಲಾಸದಲಿ ||
ಧುರದ ವೃತ್ತಾಂತವನು ಪೇಳ್ತಿರ |
ಲಿರದೆ ದಾನವರಿತ್ತಲೈತಂ |
ದರಿಭಯಂಕರ ಬಾಣಗೆರಗು ತುಸಿರ್ದರುರುಭಯದಿ ||೧೬೨||
ರಾಗ ಸಾರಂಗ ಅಷ್ಟತಾಳ
ಕೇಳಯ್ಯ ದೈತ್ಯರಾಯ | ನಾವೆಲ್ಲರು | ಪೇಳುವ ಮಾತು ಜೀಯ |
ಜಾಲಮಾತಲ್ಲ ನಾರದರೆಂದ ವಚನವು | ಕಾಲನ ತೆರದಲಿ ಇಹನೊಬ್ಬವೀರನು ||೧೬೩||
ಕುಂಭಿವಾರವ ಮುರಿದ | ಸರಳಿನಲ್ಲಿ | ದೊಂಬಿಗಾರ ತರಿದ |
ಕುಂಭಾಂಡದಾನವನೆಂಬ ಮಂತ್ರೀಶನ | ಕುಂಭಿನಿಯೊಳಗೆ ಒಂದಂಬಿಲಿ ಕೆಡಹಿದ ||೧೬೪||
ಹೆಣ್ಣಿಗೆ ಬಂದನಲ್ಲ | ಕದನವನ್ನು | ಹಣ್ಣಲು ಬಂದವನು |
ಚಿಣ್ಣನೆಂದಿರ್ದರೆ ಉನ್ನತ ಖಳರನ್ನು | ಮಣ್ಣಗೂಡಿಪನು ಮುಕ್ಕಣ್ಣಭಕ್ತನೆ ಕೇಳು ||೧೬೫||
Leave A Comment