ರಾಗ ಕೇದಾರಗೌಳ ಅಷ್ಟತಾಳ
ಚಂದಿರಾನನೆ ಉಷೆ ಕೇಳ್ ನಿನ್ನ ಪಿತನಲ್ಲಿ | ಗಿಂದು ನಾ ಭರದಿ ಪೋಗಿ ||
ಚಂದದಿಂದಪ್ಪಣೆಗೊಂಡೈತಂದೆನು ಪೋಪು | ದೆಂದೆನಲಿಂತೆಂದಳು ||೪೪||
ತರುಣಿ ನಿನ್ನಂಥ ಸಖಿಯರ್ಯಾರು ಮನದಿ ಬೇ | ಸರಿಸಿ ನಾನೆಂದುದನು ||
ಹರುಷದಿ ನಡೆಸಿದೆಯೆಂದು ತೋಷದೊಳುಪ | ಚರಿಸೆ ಮಂತ್ರಿಜೆ ಪೇಳ್ದಳು ||೪೫||
ಎನ್ನನೇತಕೆ ನೀನು ಮನ್ನಿಪೆ ಉಷೆ ಕೇಳು | ನಿನ್ನ ಮನದ ಬಯಕೆ ||
ಎನ್ನದಲ್ಲವೆ ಏಳು ಶಿವೆಯಲ್ಲಿಗೈದುವ | ಚೆನ್ನಾಗಿ ನಾವೀರ್ವರು ||೪೬||
ಎನಲಾ ಮಾತನು ಲಾಲಿಸುತ ಉಷೆ ತನ್ನಯ | ವಿನಯದ ಸಖಿಯರೊಳು ||
ಕನಕದಾಭರಣವ ತನ್ನಿರೆಂದೆನಲಾಗ | ವನಜಾಕ್ಷಿಯರು ತಂದರು ||೪೭||
ಭಾಮಿನಿ
ಧಾರಿಣಿಪ ಕೇಳುಷೆಯು ನಗುತಾ |
ನಾರಿಯರ ತಂದಾಭರಣವನು |
ಭೂರಿ ಸಂತಸದಿಂದ ತೊಟ್ಟಳದೇನ ಬಣ್ಣಿಸುವೆ ||
ಮಾರದೇವನ ಕೈಯ ಗಿಣಿಯಂ |
ತಾ ರಮಣಿ ನಲವಿಂದ ಪೊರಟಳು |
ಮಾರಹರನಿಹ ಬನಕೆ ಸತಿಯರ ಗಡಣದೊಗ್ಗಿನಲಿ ||೪೮||
ರಾಗ ಮಾರವಿ ಆದಿತಾಳ
ಬಂದಳು | ಉಷೆ | ಬಂದಳು ||
ಸತಿ | ವೃಂದಸಹಿತವಾಗಿ ಮಂತ್ರಿ | ನಂದನೆಯನೊಡಗೊಂಡು || ಬಂದಳು || ಪ ||
ನಡೆಗೆ ಹಂಸೆ ಮರುಳಾಗೆ | ನುಡಿಗೆ ಗಿಣಿಗಳು ಕೂಡೈತರೆ |
ಮಡದಿಯರ ಧ್ವನಿಗೆ ಕೋಗಿಲೆ ಭ್ರಮಿಸೆ | ಕಡುಜಾಣೆಯರ ಕಂಪಿಗಾ |
ರಡಿಗಳು ಝೇಂಕೃತಿಯಿಂದ | ಬಿಡದೆ ಬೆಂಬಳಿಯೊಳಗೆ |
ಮೃಡನಿಪ್ಪ ಕಾಂತಾರಕಾಗಿ || ಬಂದಳು ||೪೯||
ವಾರ್ಧಕ
ತರತರದೊಳೆಸೆದಿರ್ಪ ಸರಗಳಿಂ ಮರಗಳಿಂ |
ಮೆರೆದು ಝೇಂಕರಿಸುತಿರುವಳಿಗಳಿಂ ಗಿಳಿಗಳಿಂ |
ಪರಮ ಸಂಯಮಿಗಳಾಶ್ರಮಗಳಿಂ ಸುಮಗಳಿಂದುರೆ ಬೆಳೆದ ಲತೆಗಳಿಂದ ||
ಮರಿಗಳಿಗೆ ಮೊಲೆಕೊಡುವ ಮೃಗಗಳಿಂ ಖಗಗಳಿಂ |
ದಿರದೆ ಸತತಂ ಪರಿವ ಜಲಗಳಿಂ ಫಲಗಳಿಂ |
ಧರಣಿಗತಿ ಹಿತಮಾಗೆ ಸೊಂಪಿನಿಂ ತಂಪಿನಿಂದಾ ವನಂ ಕಂಗೊಳಿಸಿತು ||೫೦||
ಉರಗಕುಲ ವೇಣಿಯಿಂ ಕಲಕೀರವಾಣಿಯಿಂ |
ಶರಚರಸುನೇಂತ್ರದಿಂ ಮೃದುಲತಾ ಗಾತ್ರದಿಂ |
ತರಣಿಸಖವದನದಿಂ ವರಕುಂದರದನದಿಂ ತರುಣಹರಿಮಧ್ಯದಿಂದ ||
ಅರಳಸುಮಹಾಸದಿಂ ಕೆಂದಳಿರಭಾಸದಿಂ |
ಅರಸಂಚೆಯಾನದಿಂ ನಿರತಸುಮ್ಮಾನದಿಂ |
ಕಿರುವೆಲರ ಸಂಗದಿಂ ಕರುಣಾಂತರಂಗದಿಂ ವನದೇವಿ ಮೆರೆದಿರ್ದಳು ||೫೧||
ಹರಿಗೆ ಹಾಸಿಗೆಯಾದ ಮಹಿಮನಾರ್ಶಿಷ್ಯರುಂ |
ಗುರುವಿನಂ ಕಂಡರೇಂ ಗೈವರುಂ ರತ್ನಮಂ |
ಮೆರೆವರಿದರಾಧಾರಮೆನಿದು ಮೂರಭಿಧಾನದೊಳ್ ತ್ರಿಯಕ್ಷರದ ಪೆಸರಾ ||
ನೆರೆ ಮೂರು ಪಂಙ್ತಿಯಂ ಬರೆದೋದೆ ಮಧ್ಯದ |
ಕ್ಷರಕೆ ಬಂದಿಹ ನಾಮಮಿ ವನಕ್ಕಾಪುದೆಂ |
ದರವಿಂದ ನೇತ್ರೆಯರ್ ತಮ್ಮ ತಮ್ಮೊಳ್ಮಾತನಾಡುತ್ತವೇಳ್ತಂದರು ||೫೨||
ಹರಿವೇಣಿಯರ್ ಕೀರವಾಣಿಯರ್ ರಾಣಿಯರ್ |
ಸರಸಸಲ್ಲಾಪ ಪ್ರವೀಣೆಯರ್ ಜಾಣೆಯರ್ |
ಸ್ಮರಕದನಕೇಳಿಗತಿ ಧೀರೆಯರ್ ನೀರೆಯರ್ ಭೃಂಗನಿಭ ಕುಂತಳೆಯರು ||
ಹರಿಣಾಕ್ಷಿಯರ್ ಭಾಗ್ಯವಂತೆಯರ್ ಕಾಂತೆಯರ್ |
ಕರಿಗಮನೆಯರ್ ಚಾರುಚರಣೆಯರ್ ಕರುಣೆಯರ್ |
ಪರಿಮಳಿಪ ನವ ಕುಸುಮಮಾಲೆಯರ್ ಬಾಲೆಯರ್ ಪರಶಿವೆಯೆಡೆಗೆ ಬಂದರು ||೫೩||
ಕಂದ
ಬಾಣನ ನಂದನೆ ಸುದತಿ |
ಶ್ರೇಣಿಯನೊಡಗೊಂಡುಮೈದೆ ಗಿರಿಶನ ಪದಮಂ ||
ಕಾಣುತೆ ಪಿಡಿರನ್ನವನುಂ |
ಕಾಣಿಕೆಯಿಟ್ಟರ್ಥಿಯಿಂದ ನಮಿಸಿದಳಾಗಳ್ ||೫೪||
ರಾಗ ಮಾರವಿ ಝಂಪೆತಾಳ
ವಂದಿಸಿದ ದೈತ್ಯಜೆಯ | ನಿಂದುಧರ ಪಿಡಿದೆತ್ತಿ |
ಇಂದೇತಕಿಲ್ಲಿಗೈ | ತಂದಿರೆಂದೆನಲು ||೫೫||
ಉಷೆ ನಾಚಿ ತಲೆಯ ತ | ಗ್ಗಿಸಿ ಸುಮ್ಮನಿರಲಾಗ |
ಶಶಿಧರಗೆ ಮಂತ್ರಿಸುತೆ | ಉಸಿರಿದಳು ಮುದದಿ ||೫೬||
ದೇವ ನಿನ್ನಯ ಪದವ | ನಾವವನು ನೋಳ್ಪನಿ |
ನ್ನಾವ ಜನ್ಮದಿ ತಪವ | ನಾವು ಮಾಡಿದೆವು ||೫೭||
ಅದರಿಂದ ನಿಮ್ಮ ಮೃದು | ಪದವ ನೋಡಿದೆವೆಂದು |
ಸುದತಿ ಮಣಿ ಪೇಳಿದಳು | ಮದನಾರಿಗಾಗ ||೫೮||
ರಾಕೇಂದುವದನೆ ಕೇಳ | ಳೇಕೆ ನಾಚುವಳಿವಳು |
ಬೇಕಾದ ವಸ್ತುವನು | ನಾ ಕೊಡುವೆನೆನಲು ||೫೯||
ಹರನು ಮಂತ್ರಿಜೆಗೆಂದ | ಸರಸವಾಕ್ಯವ ಕೇಳಿ |
ಹರುಷದಿಂದುಷೆ ನುಡಿದ | ಳುರಗಭೂಷಣಗೆ ||೬೦||
ರಾಗ ತೋಡಿ ಆದಿತಾಳ
ಹರನೆ ಕೇಳ್ ನಿನ್ನ ಪಟ್ಟದರಸಿ ಗಿರಿಸುತೆಯ |
ಚರಣವ ಕಾಣಲೈ ತಂದೆವು ನಾವು ||೬೧||
ಎನಲೀಶ ತನ್ನಯ ವನಿತೆಯೊಳೆಂದನು ಬಂದ |
ಕನಕಾಂಗಿಯನು ಮನ್ನಿಸೆನುತಲಾಕ್ಷಣದಿ ||೬೨||
ಇಂದುಧರನ ನೇಮದಿಂದ ಗಿರಿಜೆಯರ |
ವಿಂದಮುಖಿಯರ್ಸಹ ಬಂದಳು ಒಳಗೆ ||೬೩||
ಕಂದ
ಗಿರಿಜೆಯುಮಂತಃಪುರಕಂ |
ಭರದಿಂದೇಳ್ತಂದುಮೈದೆ ಸಂತಸದಿಂದಂ ||
ತರುಣಿಯರಂ ನೋಡುತಮತಿ |
ಕರುಣದೊಳಂ ಚಿತ್ರಲೇಖೆಯೊಡನಿಂತೆಂದಳ್ ||೬೪||
ರಾಗ ಮಾರವಿ ಏಕತಾಳ
ಕ್ಷೇಮವೇನೆ ಚಿತ್ರಲೇಖೆ ನಿಮ್ಮೆಲ್ಲರಿಗೆ | ಪರಿ |
ಣಾಮವೆ ಬಾಣಗೆ ಸುಖವೇನೆ ತವ ಪಿತಗೆ || ಕ್ಷೇಮ || ಪ ||
ಎಂದು ಬಾರದವಳು ಉಷೆಯೆನ್ನಲ್ಲಿಗೆ ಈಗ | ತಾ |
ಬಂದಳೇಕೆ ತನ್ನ ಮನದಿಷ್ಟವನ್ನು ಬೇಗ ||
ದಿಂದ ಲರುಹಿದರೆ ನಾನೀವೆ ಪುಸಿಯಲ್ಲ |
ಎಂದೆನಲು ಮಂತ್ರಿಜಾತೆ ಪೇಳ್ದಳೊಂದು ಸೊಲ್ಲ ||೬೫||
ಹರನರ್ಧಾಂಗಿ ನಿನ್ನ ಕಂಡ ಮೇಲೆಲ್ಲರ್ಗೆ ಕ್ಷೇಮ |
ಹೊರತು ತಪ್ಪುದೋರುವುದೆ ಉಷೆಯ ಮನದ ಪ್ರೇಮ ||
ಒರೆಯಲೇಕೆ ತಿಳಿಯೆಯ ನೀ ಲೋಕಮಾತೆಯೈಸೆ | ಶಂ |
ಕರಿಯೆ ನೀನರಿತು ದಯಮಾಡೆಂದಳು ಮಂದಹಾಸೆ ||೬೬||
ಪುರುಷನ ಮೇಲಾಪೇಕ್ಷೆಯೆಂದರಿತೆ ಕೇಳೆ ನಾಳೆ |
ಬರುವ ವೈಶಾಖಶುದ್ಧ ದ್ವಾದಶಿಯ ದಿನದಿ ಬಾಲೆ ||
ಸರಿರಾತ್ರಿಯೊಳ್ ಸ್ವಪ್ನದಲ್ಲಿ ಮದನನಂದದಾತ | ಬಂ |
ದಿರದೆ ನೆರೆವನವನು ಕಾಂತನಹನು ನಂಬಿ ಮಾತ ||೬೭||
ಇಂತೆಂದ ದೇವಿಯಪ್ಪಣೆಗೊಂಡು ನಲವಿಂದ |
ಕಾಂತೆ ಚಿತ್ರಲೇಖೆ ಸಹಿತುಷೆಯು ಚಂದದಿಂದ ||
ಸಂತೋಷದಿಂದುಬ್ಬಿ ಬಂದಳ್ ತನ್ನ ನಿಳೆಯಕಾಗ | ತಾ |
ನೆಂತು ಬಣ್ಣಿಸುವೆನವಳ ಮನದನುರಾಗ ||೬೮||
ಕಂದ
ಶುಂಭಾಂತಕಿ ಪೇಳ್ದುದನುಂ |
ಪೊಂಬಲಿಸುತ ಬಾಣನಾತ್ಮಭವೆಯೊಂದು ದಿನಂ ||
ಕುಂಭಾಂಡಾತ್ಮಜೆಯಂ ಕರೆ |
ದುಂ ಬಹಳಾಲಸ್ಯದಿಂದ ಮೆಲ್ಲನೆ ಪೇಳ್ದಳ್ ||೬೯||
ರಾಗ ಎರಕಲಕಾಂಭೋಜ ಅಷ್ಟತಾಳ
ಏನ ಮಾಡುವೆನು | ಹೇ ಸಖಿಯೆ ನಾನಿ | ನ್ನೇನ ಮಾಡುವೆನು || ಪ ||
ಎಂದು ಬರುವುದೋ | ಮೂಕಾಂಬಿಕೆ | ಯೆಂದ ದಿವಸವದೋ ||
ಎಂದಿಗೆನ್ನಯ ಮನದಿಷ್ಟ ಕೈಸೇರುವು | ದೆಂದು ಸುಖದೊಳಿಹೆನು | ಹೇಳ್ ನೀನು ||೭೦||
ಪರಶಿವೆಯೆಡೆಗೆ ನಾನು | ಪೋಗಿ ಕೇಳ್ದರೆ | ಸರಿರಾತ್ರಿಯೊಳ್ ಗೋರ್ವನು ||
ಬರುವ ಸ್ವಪ್ನದೊಳಾತನೆ ಕಾಂತನಹೆನೆಂದು | ಹರುಷದಿ ಪೇಳ್ದಳಂದು | ನಾನಿಂದು ||೭೧||
ಹೇಗೆ ಬರುವನೊ | ಕನಸಿನಲ್ಲಿ | ಹೇಗೆ ತೋರುವನೊ ||
ಹೇಗೆ ಮರುಳುಮಾಡಿ ಒಲಿಸಿಕೊಂಬೆನು ನಾನು | ಹೇಗೆ ಮುದ್ದಿಪೆನವನ | ಮತ್ತವನ ||೭೨||
ರಾಗ ನೀಲಾಂಬರಿ ರೂಪಕತಾಳ
ಎಂದ ಮಾತಿಗೆ ಮಂತ್ರಿನಂದನೆ ನಸುನಗು |
ತಂದು ಪೇಳಿದಳು ಬಾಣಜೆಗೆ ||
ಇಂದೇಕೆ ಚಿಂತಿಪೆ ಕಂದರ್ಪಾರಿಯ ಸತಿ |
ಯೆಂದ ದಿವಸ ಇದು ಕೇಳೆ ||೭೩||
ಅಳಬೇಡ ಸುಮ್ಮನೆ ಮಲಗಿರೆ ರಾತ್ರಿಯೊಳ್ |
ಚೆಲುವನೈತಹನಂಬುಜಾಕ್ಷಿ ||
ಬೆಳಗಾದ ಮೇಲೆನ್ನ ಮನಕೆ ತೋರ್ದೆತ್ನವ |
ತಳುವದೆ ನಾ ಮಾಳ್ಪೆನಬಲೆ ||೭೪||
ಇಂತೆಂದುದನು ಕೇಳ್ದು ಕಾಂತೆ ದೈತ್ಯಜೆ ವಿರಹ |
ಸಂತಾಪದಿಂದೆಂದಳಾಗ ||
ಎಂಥಾ ಮಾತೆಂದೆಯರ್ಯಮನತಿಯಾಲಸ್ಯ |
ದಿಂ ತಡೆದೈದುವನೇಕೆ ||೭೫||
ತರಣಿ ಮೆಲ್ಲನೆ ಪೋಪುದುಂಟೇನೆ ಎಂದಿನ |
ಪರಿಯಲಿ ಸಾಗುವನವನು ||
ಮರುಗದಿರೆಂದು ಮಂತ್ರಿಜೆಯುಷೆಯನು ಸಂತೈ |
ಸಿರಲಿನನಿಳಿದನಂಬುಧಿಗೆ ||೭೬||
ಭಾಮಿನಿ
ಜನಪ ಕೇಳಿಂತರ್ಯಮನು ತಾ |
ವನಧಿಗಿಳಿಯಲ್ಸತಿಯರೀರ್ವರು |
ವಿನಯದಿಂ ಭೋಜನವ ಗೈದತಿ ಸುಖದಿ ಮಲಗಿರಲು ||
ಅನಿಮಿಷಾರ್ಚಿತೆ ಪೇಳ್ದ ದಿವಸದಿ |
ಮನುಮಥೋಪಮ ಪುರುಷನೋರ್ವನೊ |
ಳನುವಿನಿಂದುಷೆ ಸ್ವಪ್ನದಲಿ ಮೆರೆದಳು ವಿಲಾಸದಲಿ ||೭೭||
ಕಂದ
ಇಂತುಷೆಯು ಸ್ವಪ್ನದೊಳುಂ |
ಕಂತುಸಮಾನನೊಳುಮೈದೆ ರಮಿಸುತ್ತಾಗಳ್ ||
ತಾಂ ತವಕದೊಳೆಚ್ಚರ್ತುಂ |
ಕಾಂತನನುಂ ಕಾಣದಿರಲುಮತಿ ದುಃಖಿಸಿದಳ್ ||೭೮||
ರಾಗ ಸಾವೇರಿ ಏಕತಾಳ
ನಲ್ಲ ನೀನೆಲ್ಲಿಗೈದಿದೆ | ಎನ್ನಯ ಪ್ರಾಣ | ನಿಲ್ಲದು ನಿನ್ನ ನೋಡದೆ ||
ಪುಲ್ಲಶರನ ಬಾಧೆಗೆ | ಗುರಿಯ ಮಾಡಿ | ಮೆಲ್ಲನೈದುವರೆ ಹೀಗೆ ||೭೯||
ಸೋತೆ ನಾ ನಿನ್ನ ಗುಣಕೆ | ಇಂಥಾ ಮುನಿಸು | ಏತಕೆನ್ನೊಳು ಪರಾಕೆ ||
ಮಾತೊಂದನಾಡಬಾರದೆ | ನಿಮಿಷ ಇನ್ನು | ಪ್ರೀತಿಯೊಳಿಬಾರದೆ ||೮೦||
ಕುಳಿತಲ್ಲಿ ಕರೆವಳೆಂದು | ಚಿತ್ತದೊಳತಿ | ಮುನಿಸಿಂದ ಬಾರೆಯಿಂದು ||
ತಿಳಿದೆ ನಾ ನಿನ್ನ ಬಗೆಯ | ಇದ್ದಲ್ಲಿ ಬಂದು | ಘಳಿನನೊಂದಿಪೆನು ಜೀಯ ||೮೧||
ಭಾಮಿನಿ
ಧರಣಿಪತಿ ಕೇಳಿಂತು ಬಾಣಜೆ |
ವಿರಹದಿಂ ಭ್ರಮೆಗೊಂಡು ತನ್ನಯ |
ಪುರುಷನಿಲ್ಲಿಯೆ ಮುನಿಸಿನಿಂ ಮಲಗಿರುವನೆಂದೆನುತ ||
ಮರುಗುತಲೆ ಪರಿಯಂಕದಿಂದಿಳಿ |
ದಿರದೆ ಮಂತ್ರಿಜೆಯನ್ನು ಪ್ರಿಯನೆಂ |
ಬುರುತರ ಪ್ರೇಮದಲಿ ಬಂದಪ್ಪಿದಳು ಮನದಣಿಯೆ ||೮೨||
ಕಂದ
ವಿರಹದೊಳುಷೆಯಪ್ಪಲ್ಕಾ |
ತರುಣಿಯುಮತಿ ಬೆದರುತೆದ್ದುಮಾಶ್ಚರ್ಯದೊಳುಂ ||
ತರಳಾಕ್ಷಿಯನುಂ ಕಾಣುತ |
ವರಹರುಷದೊಳೆತ್ತಿ ಪೇಳ್ದಳತಿ ಮುದದಿಂದಂ ||೮೩||
ರಾಗ ಸಾವೇರಿ ಅಷ್ಟತಾಳ
ಏಕಿಲ್ಲಿಗೈತಂದೆ ಪೇಳೆ | ಇಂಥ | ವ್ಯಾಕುಲವೇನು ಈ ವೇಳೆ ||
ರಾಕೇಂದುಮುಖಿ ನಿ | ನ್ನಾಕಾರ ಬೇರಾಗಿ | ದೇ ಕಾಮಿನಿರನ್ನೆ | ಸಾಕು ಮರುಗಬೇಡ ||೮೪||
ರಾಗ ಘಂಟಾರವ ಅಷ್ಟತಾಳ
ಏನ ಪೇಳಲಮ್ಮ | ಎನ್ನಯ ದುಃಖ | ವೇನ ಪೇಳಲಮ್ಮ || ಪ ||
ಸುರನರನಾಗರೊಳು | ಇಲ್ಲದಂಥ | ಪುರುಷ ಸಂಪ್ರೀತಿಯೊಳು ||
ನೆರೆದು ವಂಚಿಸಿ ಪೋದನಾತನ ಕಾಣದೆ | ಇರಲಾರೆ ಭೂತಳದಿ | ಏ ಕೆಳದಿ ||೮೫||
ಕನಸಿನಲ್ಲಿ ತೋರುವ | ಧಾನ್ಯಕೆ ಗೋಣಿ | ಯನೊಡ್ಡಿದಂತಾಯ್ತವ್ವ ||
ನೆನೆಸಿಕೊ ಹರನರ್ಧಾಂಗಿ ಪೇಳಿದ ಮಾತ | ಮನದೊಳು ಧೈರ್ಯಗೊಳು | ಉಷೆ ತಾಳು ||೮೬||
ಇಂತು ಲಜ್ಜಿಸಬೇಡವೆ | ಕಾಯದೊಳಿರ್ದ | ಕಂತುಗಲೆಯು ಕಾಣವೆ ||
ಕಾಂತನೆಲ್ಲಿಗೆ ಪೋದನಾತನ ತಂದೊಮ್ಮೆ | ನೀಂ ತೋರಿಸೆನಗೆ ಜಾಣೆ | ಪ್ರವೀಣೆ ||೮೭||
ರಾಗ ಸಾವೇರಿ ಅಷ್ಟತಾಳ
ಸುಮ್ಮನೆ ಮತಿಗೆಟ್ಟು ನೀನು | ಕೂಗ | ಲಮ್ಮಯ್ಯ ಸಜ್ಜಲ್ಲವಿನ್ನು ||
ನಮ್ಮವರೆಚ್ಚರುವರು ಮರುಗದಿರ್ | ದಮ್ಮಯ್ಯ ಉದಯವಾಗಲಿ ತಾಳು ತಾಳವ್ವ ||೮೮||
ಕಂದ
ತರುಣಿಯನುಂ ಸಂತೈಸಿಯೆ |
ಹರುಷದೊಳುಂ ಚಿತ್ರಲೇಖೆ ಮಲಗಿರುವಾಗಳ್ ||
ಸರಸಿಜಸಖನುದಯಿಸಲುಷೆ |
ಮರುಗುತ್ತಿರೆ ಸಚಿವನಣುಗೆ ಮತ್ತಿಂತೆಂದಳ್ ||೮೯||
Leave A Comment