ಬಾಣಾಸುರನ ಕಾಳಗ

ಕಂದ

ಶ್ರೀಮಾಕಾಂತಂ ಸದ್ಗುಣ |
ಧಾಮಂ ಸುರವರಪೂಜಿತಾಂಘ್ರಿಸರೋಜಂ ||
ಸೋಮಾರ್ಕಾನಲನೇತ್ರಂ |
ಪ್ರೇಮದೊಳೆನಗೀಗೆ ಮತಿಯನತಿ ಸೌಖ್ಯದೊಳಂ ||೧||

ರಾಗ ಶಂಕರಾಭರಣ ತ್ರಿವುಡೆತಾಳ

ಶ್ರೀಗಣಪ ಗಜವಕ್ತ್ರ ಹರಸುತ | ನಾಗವಾಹನವಂದಿತ ||
ಭೋಗಿ ಭೂಷಣ ಷಣ್ಮುಖಾಗ್ರಜ | ಯೋಗಿಜನಸುಮನಸಕುಜ ||೨||

ತರಣಿ ಕೋಟಿಪ್ರಕಾಶ ಶಶಿಧರ | ಕರುಣವಾರಿಧಿ ಶುಭಕರ ||
ಉರಗವೈರಿಯ ವಾಹನನ ಸಖ | ಪರಮಮಂಗಲದಾಯಕ ||೩||

ಗಿರಿಸುತಾತ್ಮಜ ಶರಣಪೋಷಣ | ದುರಿತಸಂಕುಲನಾಶನ ||
ಸುರುಚಿರಾಲಂಕಾರರಂಜಿತ | ಹರಿತನೂಭವ ಪೂಜಿತ ||೪||

ವಾರ್ಧಕ

ಹರನ ಪದಪದ್ಮಗಳಿಗೆರಗುತಾ ಗಿರಿಜೆ ಸಿರಿ |
ಸರಸ್ವತಿಯರಂಘ್ರಿಗಾನತನಾಗಿ ಅನಿಮಿಷರ |
ನೆರೆ ಭಕ್ತಿಯಿಂ ನಮಿಸುತಿರದೆ ದಿಕ್ಪಾಲರಂ ಧ್ಯಾನಿಸುತೆ ಮನ್ಮನದೊಳು ||
ಪರಮಋಷಿಗಳ್ವ್ಯಾಸ ಶುಕರ ತಾ ನೆನೆವುತಂ |
ಗುರುವಿ ನಡಿದಾವರೆಗೆ ತಲೆವಾಗಿ ದೈನ್ಯದಿಂ |
ಧರೆಯ ಕವಿಜನಸಮೂಹಕೆ ಮಣಿದು ಮಾನಂದದಿಂದುಸಿರ್ವೆನೀ ಕಥೆಯನು ||೫||

ದ್ವಿಪದಿ

ಘನಮಹಿಮ ಶುಕಮುನಿಯ ಪಾದವನು ನುತಿಸಿ |
ಕನಕದಾಸರ ಚರಣಯುಗಳವನು ಸ್ಮರಿಸಿ ||೬||

ಮುದದಿ ಭಾಗವತಾಖ್ಯ ಪೌರಾಣದೊಳಗೆ |
ಪ್ರದ್ಯುಮ್ನ ಬಾಣನಾ ಕರವನ್ನು ಧರೆಗೆ ||೭||

ಇಳುಹಿದಾ ಕಥನವನು ಯಕ್ಷಗಾನದಲಿ |
ನಳಿನಭವಪುರದೆರೆಯ ಹರನ ಕರುಣದಲಿ ||೮||

ಪೇಳುವೆನು ತಿಳಿದಂತೆ ಧರೆಯ ಸಜ್ಜನರು |
ಕೇಳಿ ತಪ್ಪನು ತಿದ್ದಿ ಮೆರಸಿ ಬಲ್ಲವರು ||೯||

ವಚನ

ಈ ಪ್ರಕಾರದಿಂದ ದೇವ ಋಷಿ ಕವಿಗಳಂ ಭಾವಿಸಿ ತತ್ಕಥಾಪ್ರಸಂಗಮಂ ಪೇಳ್ವೆನದೆಂತೆನೆ –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರಿಕುಲೋದ್ಭವ ವರಪರೀಕ್ಷಿತ | ಧರಣಿಪತಿಗಾ ಶುಕಮುನೀಂದ್ರನು |
ಕರುಣದಿಂ ಭಾಗವತ ಕಥನವ | ನೊರೆವುತಿರಲು ||೧೦||

ಒಂದು ದಿನ ಭೂವರನು ಋಷಿಪಗೆ | ವಂದಿಸುತ ಬೆಸಗೊಂಡ ಬಾಣನ |
ನಂದನೆಯು ಸ್ಮರಸುತಗೆ ಸತಿಯಾ | ದಂದವನ್ನು ||೧೧||

ಪ್ರೇಮದಿಂ ಪೇಳೆನಲು ಮುನಿಪತಿ | ಭೂಮಿಪನ ಭಕ್ತಿಯನು ಕಾಣುತ |
ಕಾಮಜನಕನ ನೆನೆದು ಪೇಳ್ದನು | ತಾ ಮುದದೊಳು ||೧೨||

ರಾಗ ಭೈರವಿ ಝಂಪೆತಾಳ

ಭೂರಮಣ ಲಾಲಿಸೈ ದ್ವಾರಕಾಪಟ್ಟಣದಿ |
ಶ್ರೀರಮಣನಿರ್ದ ಶತಸೂರ್ಯತೇಜದಲಿ ||೧೩||

ವನಜಾಕ್ಷತನುಜ ಸ್ಮರಗನಿರುದ್ಧನೆಂಬ ಸುತ |
ಜನಿಸಿ ಬೆಳೆವುತ್ತಿರ್ದ ಘನಸೊಬಗಿನಿಂದ ||೧೪||

ಇರಲಿತ್ತ ಬಲಿಗಾತ್ಮಜರು ಜನಿಸಿದರು ನೂರ |
ವರು ಶೂರರವರೊಳಗೆ ಪಿರಿಯ ಬಾಣಾಖ್ಯ ||೧೫||

ಹರನ ಮೆಚ್ಚಿಸಿ ಜಗದ ಧೊರೆತನ ಸಹಸ್ರಕರ |
ವರಗಳನು ಪಡೆದು ಘನ ಹರುಷದಿಂ ಬಳಿಕ ||೧೬||

ಭಕ್ತಿಯಿಂ ಶೋಣಿತಾಪಟ್ಟಣದೊಳಾ ಬಾಣ |
ದೈತ್ಯನಿರುತಿರೆ ಕಂಡು ಚಿತ್ತಜಾಂತಕನು ||೧೭||

ದನುಜನರಮನೆಯ ಬಾಗಿಲ ಕಾಯ್ವುತಿರ್ದನಿ |
ನ್ನೆನಿತು ಸುಕೃತಿಯೊ ಖಳನು ಜನಪ ಕೇಳ್ ನೀನು ||೧೮||

ಭಾಮಿನಿ

ಇನ್ನು ಪೇಳುವುದೇನು ದಾನವ |
ನುನ್ನತದ ಗರ್ವವನು ಧರಿಸುತ |
ಲಿನ್ನು ಶಂಕರ ಕಾಯ್ವ ತನ್ನಯ ಮನೆಯ ಬಾಗಿಲನು ||
ಉನ್ನತಿಕೆಯಿಂದಿರುವೆ ತಾನಿಂ |
ದೆನ್ನೊಳಿದಿರಾರೆನುತ ಲೋಕಗ |
ಳನ್ನು ಬಾಧಿಸಿ ಸೆಳೆದುಕೊಂಡನು ಸಕಲ ಸಂಪದವ ||೧೯||

ವಾರ್ಧಕ

ದುರುಳ ಖಳನೀ ಪರಿಯೊಳಿರುತಿರಲ್ಕಾತನಂ |
ಸುರನರೋರಗರು ಬಂದೋಲೈಸುತಿರ್ದರವ |
ನುರುತರೈಶ್ವರ್ಯಮಂ ಬಣ್ಣಿಪರೆ ಪನ್ನಗಾಧಿಪ ಗರಿದು ಆ ಸಮಯದಿ ||
ತರಳೆಯೋರ್ವಳು ಜನಿಸಿದಳ್ ಮಿಸುನಿಬೊಂಬೆಯಂ |
ತಿರದೆ ದಿನದಿನಕೆ ಯೌವನವು ಮೊಳೆದೋರಲುರೆ |
ಹರುಷದಿಂದವಳ ನೊಂದರಮನೆಯೊಳಿಟ್ಟು ಅತಿ ಸಂಭ್ರಮದೊಳಿರುತಿರ್ದನು ||೨೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಒಂದು ದಿನ ಬಾಣಾಖ್ಯನೀಶನ | ಚಂದದಿಂದರ್ಚಿಸುವೆ ತಾನೆನು |
ತಂದು ಯೋಚಿಸಿ ಚರರ ಕರೆದಿಂ | ತೆಂದನಾಗ ||೨೧||

ಖಳರು ಕೇಳಿರೊ ಹರನ ಪೂಜೆಗೆ | ಚೆಲುವಿನಿಂ ಸನ್ನಹವ ಮನದೊಳ |
ಗಲಸದೆಯ ನೀವು ಮಾಡಿರೆನೆ ಕೇ | ಳ್ದೊಲವಿನಿಂದ ||೨೨||

ಬಂದು ಪೂಜೆಗೆ ತಕ್ಕ ಸನ್ನಹ | ವಂದದಿಂದಲೆ ರಚಿಸಿ ಮಗುಳೈ |
ತಂದು ಬಿನ್ನೈಸಿದರೊಡೆಯ ತೆರ | ಳೆಂದು ಬೇಗ ||೨೩||

ಕೇಳುತಲೆ ದನುಜೇಂದ್ರ ಹರುಷವ | ತಾಳಿ ಪೂಜಾಗೃಹಕೆ ಬಂದತಿ |
ಲೀಲೆಯಿಂದರ್ಚಿಸಿದನಾಗ ಕ | ಪಾಲಧರನ ||೨೪||

ವಚನ

ಈ ರೀತಿಯಿಂ ಬಾಣಾಖ್ಯನೇಕಭಾವದಿಂ ಪರುಹರನ ಪೂಜಿಸಿ ಮಂಗಳಾರತಿಯನೆತ್ತಿದನದೆಂತೆನೆ –

ರಾಗ ನಾದನಾಮಕ್ರಿಯೆ ಆದಿತಾಳ

ಆರತಿ ಬೆಳಗಿದನು | ಬಾಣನು | ಮಾರಹರಗೆ ತಾನು || ಪ ||

ಮುರಹರಪ್ರಿಯನಿಗೆ | ಈಶಗೆ | ಗಿರಿತನುಜಾಧವಗೆ ||
ಶರಣಾರಕ್ಷಣಗೆ | ಭವಗೆ | ಪರಮಾತ್ಮರೂಪನಿಗೆ ||೨೫||

ವ್ಯಾಳಕುಂಡಲಧರಗೆ | ಬಾಲೇಂದು | ಮೌಳಿಗೆ ಭವಹರಗೆ ||
ಕಾಲಕಾಲಗೆ ಶಿವಗೆ | ಆನತಜನ | ಪಾಲಗೆ ಪುರಹರಗೆ ||೩೬||

ಮನುಮಥನಾಶನಿಗೆ | ಅಂಬರ | ಮಣಿಶತಭಾಸನಿಗೆ ||
ಮುನಿಜನಪೋಷನಿಗೆ | ಸಾಮಜ | ದನುಜಸಂಹಾರನಿಗೆ ||೨೭||

ಭಾಮಿನಿ

ಶಿವನೆ ಪರಮಾನಂದರೂಪನೆ |
ಶಿವನೆ ಪಾರ್ವತಿಧವನೆ ಭರ್ಗನೆ |
ಶಿವ ಚರಿತ್ಯಘಕುಲವಿನಾಶನೆ ವಿಶ್ವಮೂರುತಿಯೆ ||
ಶಿವಶರೀರನೆ ದುರಿತದೂರನೆ |
ಶಿವವಿಭೂಷನೆ ದುರಿತನಾಶನೆ |
ಶಿವಕರನೆ ನೀನೊಲಿದು ಪಾಲಿಸು ಎನಗೆ ಸುಮತಿಯನು ||೨೮||

ರಾಗ ಕಾಂಭೋಜಿ ಝಂಪೆತಾಳ

ಈ ಪರಿಯೊಳಾ ದಾನವೇಂದ್ರ ನುತಿಗೈವುತಿರ |
ಲಾ ಪಾರ್ವತೀಶ ಸಂಭ್ರಮದಿ ||
ತಾಪಸಾದ್ಯರಿಗಗೋಚರನಾದ ಪರಬ್ರಹ್ಮ |
ರೂಪುದೋರಿಯೆ ಮುದದೊಳಾಗ ||೨೯||

ಸಚ್ಚಿದಾನಂದನೆಂದನು ಬಾಣ ಕೇಳ್ ನಿನಗೆ |
ಮೆಚ್ಚಿದೆನು ತವ ಭಕ್ತಿಗಿಂದು ||
ಇಚ್ಛೆಯಾಗಿರುವುದೇನುಂಟು ಪೇಳೆನ್ನೊಡನೆ |
ಉಚ್ಚರಿಸಲೀವೆನಾ ಕ್ಷಣದಿ ||೩೦||

ಎಂದು ಹರ ಪೇಳ್ದಡಾ ನುಡಿ ಕೇಳಿ ಬಾಣಖಳ |
ನೆಂದನಘಹರ ಕೇಳು ನೀನು ||
ಹಿಂದೆ ಸಾಹಸ್ರಹಸ್ತವನಿತ್ತೆ ಮತ್ತೆ ನೀ |
ನಿಂದು ಬಾಗಿಲನು ಕಾಯ್ದಿರುವೆ ||೩೧||

ಇಂತು ನೀ ದಯೆಗೈದ ಮೇಲೆ ನಾ ನಿನ್ನೊಡನೆ |
ಮುಂತೆ ಕೇಳುವುದೇನು ದೇವ ||
ಕಂತುಸಂಹರನೆ ಮಾರಾಂತು ಸಮರಾಂಗಣದಿ |
ನಿಂತು ಕಾದುವರ ತೋರೆಂದ ||೩೨||

ಭಾಮಿನಿ

ವೀರ ಖಳನಿಂತೆನಲು ಕೇಳುತ |
ಮಾರಮಣನುಸಿರಿದನು ನಿನ್ನ ಮ |
ಯೂರಕೇತನ ಮುರಿದು ಭೂಮಿಗೆ ಬಿದ್ದ ದಿವಸದಲಿ ||
ವಾರಿಜಾಕ್ಷನೊಳೈದೆ ಸಮರವು |
ದೋರುವುದು ನಿನಗೆಂದು ಪುರಹರ |
ಭೂರಿ ಸಂತಸದಿಂದ ಲಂತರ್ಧಾನಮಂ ತಳೆದ ||೩೩||

ರಾಗ ಕೇದಾರಗೌಳ ಅಷ್ಟತಾಳ

ಇಂತೆಂದು ಭವನೈದಲಿತ್ತ ಬಾಣಾಖ್ಯನ | ತ್ಯಂತ ಸೌಖ್ಯದೊಳಿರಲು ||
ದಂತಿಗಮನೆ ದೈತ್ಯಸುತೆಯುಷೆ ತಾನಾಗ | ಲಂತರಂಗದಿ ಯೋಚಿಸಿ ||೩೪||

ಕರೆದು ಮಂತ್ರಿಜೆಗೆಂದಳ್ ಸಖಿ ಕೇಳು ಪ್ರಾಯದಿ | ಮೆರೆವ ವೇಳ್ಯಕೆ ಪಿತನು ||
ಪರಿಣಯವನು ಮಾಡಲಿಲ್ಲ ಸುಖದೊಲಿರ್ಪ | ಪರಿಯೆಂತೆಂದೆನಲೆಂದಳು ||೩೫||

ಕನಕಾಂಗಿ ಕೇಳೆಮ್ಮ ಉದ್ಯಾನದೊಳು ಹರ | ನನುದಿನ ನೆಲೆಸಿರ್ಪನು ||
ಚಿನುಮಯಾತ್ಮಿಕೆ ಸದಾಶಿವೆಯಿಹಳಲ್ಲಿ ನೀ | ಘನ ವೇಗದಿಂದ ಲೈದಿ ||೩೬||

ಹರಿವಾಹಿನಿಯ ಚರಣಾಬ್ಜಕೆರಗಿ ಪರಿ | ಪರಿಯಿಂದ ಸಂಸ್ತುತಿಸಿ ||
ಹರುಷದಿ ಬೇಡಿಕೊಂಡರೆ ಮನದಿಷ್ಟವು | ಅರೆನಿಮಿಷದೊಳಹುದು ||೩೭||

ಎನಲುಷೆ ಪೇಳ್ದಳು ಕೇಳು ಮಾನಿನಿಯೆನ್ನ | ಜನಕನಿದ್ದೆಡೆಗೆ ಪೋಗಿ ||
ಮನುಮಥಾರಿಯ ನೋಡಿ ಬರ್ಪೆವೆಂದವನೊಳ | ಪ್ಪಣೆಗೊಂಡು ಬಾರೆ ಈಗ ||೩೮||

ಕಂದ

ಎಂದಾ ಮಾತಂ ಕೇಳು |
ತ್ತಂದದೊಳಾ ಚಿತ್ರಲೇಖೆಯತಿ ಭರದಿಂದಂ ||
ಬಂದಾ ಬಾಣನ ಬಳಿಗಂ |
ವಂದಿಸೆ ಪಿಡಿದೆತ್ತಿ ಪರಸುತಾ ಖಳನೆಂದಂ ||೩೯||

ರಾಗ ತೋಡಿ ಅಷ್ಟತಾಳ

ಸರಸವಂತೆ ಮಂತ್ರಿಜಾತೆ | ತರಳೆ ಎನ್ನೆಡೆಗೈತಂದ |
ಪರಿಯದೇನೆಂದು ನೀನೀಗ | ಅರುಹೆನಲಿಂತೆಂದಳಾಗ ||೪೦||

ದನುಜಾಧೀಶ ಕೇಳು ನಿನ್ನ | ತನುಜೆ ಹರನ ನೋಡಲಿಂದು |
ಜನಕನ ನೇಮವನು ಕೊಂಡು | ವಿನಯದಿ ಬಾರೆಂದಳಯ್ಯ ||೪೧||

ಮಂದಯಾನೆ ಲಾಲಿಸೆನ್ನ | ನಂದನೆಯ ಸಹಿತ ನೀನು |
ಚಂದದಿಂದ ಶಂಕರನ್ನ | ಇಂದು ನೋಡಿ ಬಾರೆ ಈಗ ||೪೨||

ಕಂದ

ದನುಜಾಧಿಪನೆಂದುದನುಂ |
ವನಜಾಂಬಕಿ ಕೇಳುತಾಗಳುರು ಸಂಭ್ರಮದಿಂ ||
ವನಿತಾಮಣಿಯುಷೆಯೆಡೆಗಂ |
ಘನ ವೇಗದೊಳೈದಿ ಪೇಳ್ದಳತಿ ಸಂತಸದಿಂ ||೪೩||