ಕಂದ

ಛಿದ್ರಿಸಿ ಯದುಬಲಮಂ ಘನ |
ರೌದ್ರಾನ್ವಿತನಾಗಿಯಾಶರೇಂದ್ರಂ ಭರದಿಂ |
ಚಿದ್ರೂಪನುಮಿವನೆಂಬುದ |
ನುದ್ರೇಕದೊಳರಿಯದಚ್ಯುತನೊ ಳಿಂತೆಂದಂ ||೩೦೯||

ರಾಗ ಸೌರಾಷ್ಟ್ರ ಅಷ್ಟತಾಳ

ಎಲವೊ ಗೋವಳ ಕೇಳ್ನೀನು | ಕಲಹದಲ್ಲಿ ಮಾಗಧನೊಳು |
ನಿಲಲರಿಯದೆ ಓಡಿದಂಥ | ಕಲಿಯಲ್ಲವೇನೋ ||೩೧೦||

ಖಳನೆ ಯುದ್ಧಗೈವೆನೆಂಬ | ಛಲವದುಳ್ಳದೊಂದು ಸರಳ |
ಕಳುಹಿ ನೋಡು ಮತ್ತೆಮ್ಮ ಕೈ | ಚಳಕವನೀಗ ||೩೧೧||

ನರಕನನ್ನು ಕೊಂದೆನೆಂಬ | ಗರುವ ಬೇಡ ನಿನ್ನಧಟ್ಟ |
ಮುರಿವೆನೊಂದು ಕ್ಷಣಮಾತ್ರದಿ | ತುರುಗಾಯಿ ಕೇಳೋ ||೩೧೨||

ಮುರಿವ ಧೀರನಹುದೆಂದು ನಾ | ನರಿದು ಬಲ್ಲೆನಾದರಿನ್ನು |
ಬರಿ ಮಾತದೇಕೆ ಬೇಗ | ಧುರಕನುವಾಗು ||೩೧೩||

ರಾಗ ಪಂಚಾಗತಿ ಮಟ್ಟೆತಾಳ

ಎನಲು ಹರಿಯ ಮಾತ ಕೇಳಿ ದನುಜರಾಯನು |
ಕನಲಿ ಕರೆದನಾಗ ಕೂರ್ಗಣೇಯ ಮಳೆಯನು ||
ವನಜನಾಭನವನ ಬಾಣವನ್ನು ಖಂಡಿಸಿ |
ದನುಜನಿಂಗೆ ಶರವನೆಚ್ಚ ಮನದಿ ರೋಷಿಸಿ ||೩೧೪||

ಹರಿಯು ಬಿಟ್ಟ ಸರಳ ನಡುವೆ ತರಿವುತಾಕ್ಷಣ |
ಧುರುಳನುರುಗಶರವೆಸೆನೆಯೆ ಸರಸಿಜೇಕ್ಷಣ ||
ಗರುಡಬಾಣದಿಂದಲದನು ತೀರ್ಚೆ ಕಾಣುತ |
ಕೆರಳಿ ಬಳಿಕ ತಿಮಿರಶರವನೆಚ್ಚ ಬಲಿಸುತ ||೩೧೫||

ರಣದೊಳಂಧಕಾರಮಾಗೆ ಕಂಡು ಕೃಷ್ಣನು |
ದಿನಮಣಿಯ ಶರದೊಳದನು ನಿಲಿಸೆ ಬಾಣನು ||
ಕನಲಿ ಪರ್ವತಾಸ್ತ್ರವೆಸೆಯೆ ವನಜ ನೇತ್ರನು |
ವಿನಯದಿಂದ ಕುಲಿಶಶರದಿಯದನು ತರಿದನು ||೩೧೬||

ಏಸು ಮಂತ್ರಾಸ್ತ್ರವೆಸೆಯಲೈದೆ ಖಂಡಿಸಿ |
ಪೂಶರನ ಪಿತನು ಮತ್ತೆ ಮನದಿ ರೋಷಿಸಿ ||
ಆಶರೇಂದ್ರನೇರ್ದ ರಥದ ತುರಗನಿಕರವ |
ಘಾಸಿಮಾಡೆ ಖತಿಯೊಳಾತ ಪೊಸವರೂಥವ ||೩೧೭||

ಅಡರಿ ಕಿನಿಸಿನಿಂದ ಬೊಬ್ಬಿಡುತ್ತ ದೈತ್ಯನು |
ಜಡಜಸಂಭವಾಸ್ತ್ರವನ್ನು ಭರದೊಳೆಚ್ಚನು ||
ಒಡನೆ ಶಾಂತತ್ವದಿಂದ ಬಂದು ದೇವರ |
ಅಡಿಗೆ ಎರಗಿ ನಾಚಿಯಲ್ಲಿ ಕುಳಿತುದಾ ಶರ ||೩೧೮||

ಕಂದ

ದನುಜಾಧಿಪನೀ ಪರಿಯಿಂ |
ವನಜಾಸನಶರವನೆಸೆಯಲದುಮೇಳ್ ತಂದುಂ ||
ಚಿನುಮಯನೊಳಡಗಲಾ ಬಲಿ |
ತನುಜಂ ಬೆರಗಾಗೆ ಕಾಮಪಿತ ನಿಂತೆಂದಂ ||೩೧೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಲವೊ ದಾನವ ಕೇಳು ನಮ್ಮಯ | ಬಳಿಗೆ ಬ್ರಹ್ಮಾದ್ಯಮರಶರವನು |
ಕಳುಹಿದಡೆ ಗೆಲವಹುದೆ ನಿನ್ನೊಳು | ತಿಳಿದು ನೋಡು ||೩೨೦||

ಎನಲು ಕೇಳುತ ಭಳಿರೆ ಮೆಚ್ಚಿದೆ | ನೆನುತ ದೈತ್ಯಾಧಿಪನು ಭರ್ಗನು |
ತನಗೆ ಕೊಟ್ಟಾಸ್ತ್ರವನು ತೆಗೆದೆಂ | ದನು ಹರಿಯೊಳು ||೩೨೧||

ಕಪ್ಪು ವರ್ಣನೆ ಕೇಳು ನಿನ್ನಯ | ದರ್ಪವನು ನಿಮಿಷದಲಿ ಮುರಿದ |
ಲ್ಲಿರ್ಪ ಭೂತಕೆ ಬಲಿಯ ಕೊಡುವೆನು | ತಪ್ಪೆನಿದಕೆ ||೩೨೨||

ರಾಗ ದೇಶಿ ಮಟ್ಟೆತಾಳ

ಎಂದು ಪೇಳುತ | ಕೋಪ | ದಿಂದ ಬಲಿಸುತ ||
ನಿಂದು ಮಾಯದಸ್ತ್ರವೆಚ್ಚ | ನಂದು ಗಜರುತ ||೩೨೩||

ಎಸೆಯಲಾತನ | ಸಾ | ಹಸವ ನೇನ ನಾ ||
ನುಸಿರ್ವೆ ರಣದೊಳಂಧಕಾರ | ಮುಸುಕಿತಾಕ್ಷಣ ||೩೨೪||

ಸಿಡಿಲು ಪೊಯ್ದವು | ಮರುಳು | ಗಡಣವೆದ್ದವು ||
ಕಡುಗಿ ಕೂಗುತಸುರಹರನ | ಪಡೆಯ ತುಳಿದವು ||೩೨೫||

ಬಾಣನಭ್ರದಿ | ಹರಿಗೆ | ಕಾಣ ದಂದದಿ ||
ತ್ರಾಣದಿಂದ ಸರಳ ಸುರಿದ | ಕ್ಷೋಣಿಯಗಲದಿ ||೩೩೬||

ಬರುವ ಬಾಣವ | ಕಂಡು | ಶರಧಿಜಾಧವ ||
ಧರೆಯೊಳಿರ್ದು ತರಿವುತಿರ್ದ | ಧರಿಸಿ ರೋಷವ ||೩೨೭||

ಕಂದ

ಅಂಬರದೊಳ್ ಬಾಣಂ ಪೀ |
ತಾಂಬರನವನಿಯೊಳು ಕಾದುತಿರಲಾ ಕ್ಷಣದೊಳ್ ||
ಕುಂಭಾಂಡಂ ಕೋಪದೊಳುಂ |
ಕುಂಭಿನಿಯೊಡೆವಂತೆ ಪೊಕ್ಕನಾ ಯದುಬಲವಂ ||೩೨೮||

ರಾಗ ಘಂಟಾರವ ಅಷ್ಟತಾಳ

ಬಂದು ಮಂತ್ರೀಶನಂದು ಗರ್ಜಿಸುತಲಿ |
ನಿಂದು ಯಾದವವೃಂದವನು ಸರ | ಳೊಂದರಲಿ ಖಂಡಿಸಿದನು || ಪ ||

ಜಲಜಬಾಣನ ಗೆಲಿದು ಸಾತ್ಯಕಿಯನ್ನು |
ಮಲಗಿಸಿಯೆ ಉದ್ಧವನ ಸೋಲಿಸಿ |
ಹಲಧರನಿಗಿದಿರಾದನು ||
ಖಳನ ಗರ್ವವ ಬಲಭದ್ರ ಕಾಣುತ |
ಭಳಿರೆ ಎನ್ನುತ ಮಲೆತು ನಿಂದಿ | ರ್ದಲಘು ಭುಜಬಲನೆಂದೆನು ||೩೨೯||

ಆರೆಲವೊ ದೈತ್ಯ ವೀರರೊಳಧಟ್ಟಿನಿಂ |
ಭೂರಿಸೈನ್ಯವ ಸೂರೆಗೊಂಬುದು | ಧೀರತನಕಿದು ಯೋಗ್ಯವೆ ||
ತೋರಿಸೊ ನಿನ್ನ ಶೂರತ್ವವನು ಎನ್ನ |
ಮೋರೆಯಿದಿರಲಿ ಬಾರೊ ಬಾರೆನು | ತಾರುಭಟಿಯಲಿ ಕರೆದನು ||೩೩೦||

ಎನಲು ಕೇಳುತ ಕಿನಿಸಿನಿಂ ಮಂತ್ರೀಶ |
ಧನುವ ಕೊಂಡತಿ ವೇಗದಿಂ ಶರ | ವನು ಸುರಿದನೇನೆಂಬೆನು ||
ಮನದಿ ರಾಮನು ಕನಲುತಲೊಂದು ಮಾ |
ರ್ಗಣದೊಳಾತನ ಕಣೆಯನೆಲ್ಲ | ಕ್ಷಣದೊಳಗೆ ತರಿದೊಡ್ಡಿದ ||೩೩೧||

ಮತ್ತೆ ಕೋಪಿಸಿ ದೈತ್ಯಮಂತ್ರಿ ಗದೆ |
ಎತ್ತಿ ಯಾರ್ಭಟಿಸುತ್ತ ಪೊಯ್ವೆನೆ | ನುತ್ತ ಬರುತಿರೆ ಕಾಣುತ ||
ಚಿತ್ತದೊಳ್ ಖತಿವೆತ್ತು ಕೃಷ್ಣಾಗ್ರಜ |
ನೆತ್ತಿ ಮುಸಲವ ಸತ್ವದಿಂದಲಿ | ನೆತ್ತಿಯೊಡೆಯಲು ಪೊಯ್ದನು ||೩೩೨||

ವಾರ್ಧಕ

ವನಜಾಕ್ಷನಗ್ರಜಂ ಕುಶಲದಿಂ ಮುಸಲದಿಂ |
ದನುಜನಿಂಗೆರಗಲಾ ಘಾಯದಿಂ ಕಾಯದಿಂ |
ತನಿರಕುತಮೊರೆತುದಾ ದಾನವಂ ಮೌನವಂ ಕೈಕೊಂಡು ಭೀತಿಯಿಂದ ||
ಅನುವರಕೆ ನಿಲಲಾರದೋಡಿದಂ ನೋಡಿದಂ |
ದನುಜಪತಿಯಂ ಗಗನಪಥದೊಳಂ ರಥದೊಳಂ |
ವಿನಯದಿಂ ತಾನಭ್ರಕೇರಿದಂ ಸಾರಿದಂ ಬಾಣನಂ ಮಂತ್ರೀಶನು ||೩೩೩||

ಕಂದ

ಖಳರೀರ್ವರ್ ಮಾಯದೊಳುಂ |
ಜಲಜಾಕ್ಷನ ಮೇಲೆ ಕಲ್ಲು ಮರ ಬೆಟ್ಟಗಳಿಂ ||
ಮುಳಿದಿರದೊಟ್ಟಲು ಹರಿ ತಾ |
ಬಳಲಿದುಮಿಂತೆಂದನುರಗ ವೈರಿಯೊಳಾಗಳ್ ||೩೩೪||

ರಾಗ ಭೈರವಿ ಏಕತಾಳ

ಗರುಡ ಬಾರಯ್ಯ ನೀನೀಗ | ಅಂ | ಬರಕಡರಿಯೆ ಬಲು ಬೇಗ ||
ದುರುಳರ ನೆಗೆದಾಟವನು | ಪರಿ | ಹರಿಸೈ ಎನೆ ಕೇಳ್ದವನು ||೩೩೫||

ಭರದಿಂ ನಭಕೈತಂದು | ದನು | ಜರ ಕಡುಹನು ಕಂಡಂದು ||
ಚರಣದೊಳೊದದನು ಗರುಡ | ದೈ | ತ್ಯರು ಧರೆಗಿಳಿದರು ಗಾಢ ||೩೩೬||

ಅಸುರಾಧಿಪ ಖತಿಗೊಂಡು | ಸಾ | ರಸಲೋಚನನನು ಕಂಡು ||
ವಿಶಿಖದ ವೃಷ್ಟಿಯ ಸುರಿದ | ನೈಮಿಷದೊಳ್ ಹರಿಯದ ತರಿದ ||೩೩೭||

ಸುರರಿಪು ಶೂಲವನಿಡಲು | ಕಡಿ | ದುರಗಶಯನ ರೋಷದೊಳು ||
ಭರದಿಂ ಚಕ್ರವ ಪಿಡಿದಾ | ಖಳ | ರೆರೆಯ ನೊಳಾಕ್ಷಣ ನುಡಿದ ||೩೩೮||

ಖೂಳನೋಡೆಲವೊ ಇದಕೆ | ನಿನ್ನ | ತೋಳಿನ ಮೇಲ್ಬಲು ಬಯಕೆ ||
ತಾಳಿಕೊಳ್ಳೆಲವೊ ಎಂದೆನುತ | ವನ | ಮಾಲ ಚಕ್ರವ ಬಿಟ್ಟ ನಗುತ ||೩೩೯||

ದುರುಳನ ತೋಳ್ಗಳನಾಗ | ಕ | ತ್ತರಿಸಿ ಸುದರ್ಶನವಾಗ ||
ಕರವೆರಡುಳಿಯಲು ಬಂದು | ಹರಿ | ಗೆರಗಿತು ಇನ್ನೇನೆಂದು ||೩೪೦||

ಕಂದ

ಚಕ್ರದ ಮನದೊಲವಂ ಮಿಗೆ |
ಚಕ್ರಿಯು ಮಿಕ್ಷಿಸುತಲವನ ಕೊರಳಿಗೆ ಮತ್ತಾ ||
ಚಕ್ರವ ನೆಗೆಯಲು ಕೃಷ್ಣನ |
ವಿಕ್ರಮವಂ ಕಂಡು ಅಭವನೇಳ್ತಂದೆಂದಂ ||೩೪೧||

ರಾಗ ಶಂಕರಾಭರಣ ಮಟ್ಟೆತಾಳ

ಸಾಕು ಸಾಕು ರೋಷ ಯುದ್ಧ | ವೇಕೆ ಈತನಾವ ಲಕ್ಷ |
ಬೇಕು ಬೇಡವೆಂಬರಾರು | ನೀ ಕೊಲುತಿರೆ ||
ಕಾಕುಮನವನುಳಿದನಿನ್ನು | ಏಕೆ ಭಕ್ತನೊಡನೆ ಮುನಿಸು |
ಸಾಕೆನುತ್ತ ನುಡಿದನಾ ಪಿ | ನಾಕಿ ಮುದದಲಿ ||೩೪೨||

ಚೆನ್ನವಾಯ್ತು ಪೇಳ್ದ ಮಾತು | ಪನ್ನಗಾಭರಣ ಕೇಳು |
ನಿನ್ನ ಹೊಂದಿದವರು ಜಗದೊ | ಳೆನ್ನ ಭಕ್ತರು ||
ಭಿನ್ನ ಭೇದವುಂಟೆ ನಿನ್ನೊ | ಳೆನ್ನೊಳಿಂದುತನಕಮಾದ |
ಡೆನ್ನ ಭಾಷೆ ಸಫಲವಾಯಿ | ತಿನ್ನು ಕೊಲ್ಲೆನು ||೩೪೩||

ಎಂದು ಪೇಳಲಭವ ತೋಷ | ದಿಂದ ತಿರುಗಲಿತ್ತ ಬಾಣ |
ನಂದ ವೇನನೆಂಬೆ ರುಧಿರ | ವಂದು ಭುಜದೊಳು ||
ಮಂದವಾಗಿ ಸುರಿವುತಿರಲು | ಕಂದುಗೊರಳ ನೋಡಿ ಕರುಣ |
ದಿಂದ ತಡವರಿಸಲು ದಾನ | ವೇಂದ್ರ ನಂಗವ ||೩೪೪||

ಭಾಮಿನಿ

ಹರನುಮವನಂಗವನು ತನ್ನಯ |
ಕರದಿ ತಡವರಿಸಲ್ಕೆ ದನುಜನು |
ಸುರುಚಿರಾಂಗನುಮಾದನಾತನ ಕರಸಹಸ್ರವನು ||
ತರಿದನೋ ಹರಿ ಧುರದೊಳಲ್ಲಿವ |
ಗಿರುವ ಹಸ್ತವೆ ದ್ವಯವೊ ಎಂಬಂ |
ತಿರಲು ಕಾಣುತಮಭವ ನೆಂದನು ಕೃಷ್ಣನೊಳು ನಗುತ ||೩೪೫||

ರಾಗ ಮಧ್ಯಮಾವತಿ ತ್ರಿವುಡೆತಾಳ

ಇಂದಿರಾವರನಾಲಿಸೈ ನಾ | ನಿಂದು ಬಾಣನು ಸಹಿತ ಪೋಪೆನು |
ಚಂದದಿಂದವನೂರ ಸಲಹಿಕೊ | ಮುಂದೆ ನೀ ಸಂತಸದಲಿ ||೩೪೬||

ಎಂದ ಮಾತನು ಕೇಳಿ ಹರಿ ಮುದ | ದಿಂದ ಪೇಳ್ದನು ಹರನೆ ಕೇಳೈ |
ಇಂದು ನೀ ಪೇಳಿದ ವಚನ ಸರಿ | ಬಂದಿತೇ ಬಾಣಾಖ್ಯಗೆ ||೩೪೭||

ಎನಲು ಭಕ್ತಿಯೊಳಚ್ಯುತನ ಪದ | ವನಜಕೆರಗುತ ನುಡಿದ ದೈತ್ಯನು |
ಎನಗೆ ತಿಳಿಯದು ತವ ಮಹಿಮೆ ಮಮ | ಜನಕ ಬಲ್ಲನು ಪೂರ್ವದಿ ||೩೪೮||

ಅರಿಯದೇ ನಾ ನಿನ್ನ ಪಾದಕೆ | ದುರುಳತನವನು ಮಾಡಿದೆನೋ ನೀ |
ಮರೆವುದೆನ್ನಯ ತಪ್ಪನೆನುತಲಿ | ಮರಳಿ ಚರಣದಿ ಬಿದ್ದನು ||೩೪೯||

ಭಾಮಿನಿ

ಇಂತು ಅಡಿಗೆಡೆದಿರ್ಪ ಬಾಣನ |
ಸಂತಸದಿ ಪಿಡಿದೆತ್ತಿ ಲಕ್ಷ್ಮೀ |
ಕಾಂತನೆಂದನು ಮಗನೆ ನೋವಿಲ್ಲೆನ್ನ ಚಿತ್ತದಲಿ ||
ಮುಂತೆ ಸುಖಿಯಾಗೆನಲು ಕೇಳುತ |
ಕಂತುಹರನತಿ ಹರುಷವೆತ್ತು ಮು |
ರಾಂತಕಗೆ ಕೈಮುಗಿದು ಮರಳಿದನಂದು ಖಳಸಹಿತ ||೩೫೦||

ರಾಗ ಸಾಂಗತ್ಯ ರೂಪಕತಾಳ

ಹರನು ಬಾಣನು ಸಹ ತೆರಳಿದ ಕೈಲಾಸ | ಗಿರಿಗಾಗಿ ಇತ್ತ ನಾರದನು |
ಹರಿಯ ಪಾದಾಂಬುಜಕೆರಗಿ ಕೈಮುಗಿದೆದ್ದು | ಪರಿಪರಿಯಿಂದ ಕೀರ್ತಿಸಿದ ||೩೫೧||

ಅಂದು ಮಂತ್ರಿಯು ಭಯದಿಂದ ಕಾಣಿಕೆಯನ್ನು | ತಂದು ಶ್ರೀಕೃಷ್ಣ ಗರ್ಪಿಸುತ ||
ತಂದೆ ರಕ್ಷಿಸು ರಕ್ಷಿಸೆಂದು ಚರಣದ್ವಯಕೆ | ವಂದಿಸಿ ಬಲು ಸ್ತುತಿಗೈದ ||೩೫೨||

ಎರಗಿದ ಸಚಿವನ ಪತಿಕರಿಸಿ ಪ್ರೇಮದಿ | ಕಿರುನಗೆಯಿಂದ ಮಾಧವನು ||
ಶಿರ ಪಿಡಿದೆತ್ತಿ ನೀನೇಂಗೈವೆ ದೊರೆಯಿದ್ದಂ | ತಿರುವುದು ಸಹಜ ಸೇವಕಗೆ ||೩೫೩||

ಚೆನ್ನಾಯ್ತು ಕೊರತೆಯೇನಿನ್ನು ನೀ ಪೋಗಿಯಾ | ಎನ್ನ ಮೊಮ್ಮಗನನು ಭರದಿ ||
ಕನ್ಯೆ ಸಹಿತ ಕರೆತಹುದೆನೆ ಕೇಳಿ ಸಂ | ಪನ್ನಮಂತ್ರೀಶನೈತಂದು ||೩೫೪||

ಕಂದ

ಇಂತೇಳ್ತಂದಾ ಮಂತ್ರಿಯು |
ಮಂತರಿಸದೆ ವಜ್ರಶೃಂಖಲವ ಖಂಡಿಸುತಂ ||
ಕಾಂತಾಮಣಿಯುಷೆ ಸಹಿತಂ |
ಕಂತುಜನ ಕರೆತಂದನಸುರಹರನಲ್ಲಿಗೆ ತಾ ||೩೫೫||

ಭಾಮಿನಿ

ಜನಪ ಕೇಳೈ ಮಂತ್ರಿ ಮದನನ |
ತನುಜನನು ದೈತ್ಯಜೆಯ ಸಹಿತಲೆ |
ವಿನಯದಿಂದಂದಣವನೇರಿಸುತತಿ ವಿಲಾಸದಲಿ ||
ಘನತರದಿ ಮೊಳಗುವ ಸುವಾಧ್ಯ |
ಧ್ವನಿಗೆ ಕಂಪಿಸೆ ಧರಣಿ ತನ್ನಯ |
ತನುಜೆ ಸಹ ನಡೆತಂದು ಕಾಣಿಸಿದನು ಮುರಾಂತಕಗೆ ||೩೫೬||

ರಾಗ ಕೇದಾರಗೌಳ ಅಷ್ಟತಾಳ

ಬಂದು ಪಿತಾಮಹನನು ಕಂಡು ಕಾಮನ | ನಂದನ ಲಜ್ಜಿಸುತ |
ಇಂದುವದನೆ ಸಹ ವಂದಿಸೆ ಪಿಡಿದೆತ್ತಿ | ಇಂದಿರಾಧವ ತೋಷದಿ ||೩೫೭||

ಈ ಪಾಟಿ ಚೆಲುವಿನ ಕನ್ಯೆಯು ಕಮನೀಯ | ರೂಪ ನಿನಗೆ ಹೊರತು |
ಕಾಪುರುಷರ್ಗೆ ಕೈಸೇರುವಳೇ ಎಂದು | ಶ್ರೀಪತಿ ನಗುತೆಂದನು ||೩೫೮||

ಉಷೆಯನಿರುದ್ಧರೀರ್ವರನು ಜೋಡಾಗಿ ನಿ | ಲ್ಲಿಸಿ ಹರಿ ಸಂತಸದಿ ||
ಬಿಸಜ ಬಾಣಾದಿಗಳಿಗೆ ತೋರಲೆಲ್ಲ ಹ | ರುಷಬಟ್ಟು ನಲಿದರಾಗ ||೩೫೯||

ಕುಂಭಾಂಡ ಕೇಳಯ್ಯ ಈ ಊರ ದೊರೆತನ | ಶಂಬರಾರಿಯ ಸುತಗೆ ||
ಹಂಬಲಿಸದೆ ಈತನೊಡನೆ ನೀ ನೋಡೆಂದು | ಅಂಬುಜಾಕ್ಷನು ಪೇಳಿದ ||೩೬೦||

ಜೀಯ ಹಸಾದವೆಂದೆನುತ ಮತ್ತಾ ಮಂತ್ರಿ | ನಾಯಕ ಪುರಕೈದಲು ||
ಕಾಯಜಾದ್ಯರು ಸಹಿತಬುಜನೇತ್ರನು ಖಗ | ರಾಯನನೇರ್ದನಂದು ||೩೬೧||

ಭಾಮಿನಿ

ದೇವದುಂದುಭಿ ಮೊಳಗೆ ದೇವರ |
ದೇವರೆಲ್ಲರು ಸಹಿತಲಾ ದ್ವಾ |
ರಾವತಿಗೆ ನಡೆತಂದನತ್ಯಾನಂದದಲಿ ಬಳಿಕ ||
ಶ್ರೀವರನುಮೈತಂದನೆನೆ ವಸು |
ದೇವ ಕೇಳಿದು ತೋಷಬಡುತಲಿ |
ದೇವಕಿಯನೊಡಗೊಂಡಿದಿರ್ಗೊಳಲೆಂದು ಪೊರಮಟ್ಟ ||೩೬೨||

ರಾಗ ನವರೋಜು ಆದಿತಾಳ

ಉರುತರ ಸಂತಸದಿ | ಸಿರಿವರ ಸಹ ಭರದಿ ||
ಮಾರಜನಾ ನಾರಿಯ ನೋಳ್ಪೆವೆನುತಲಿ |
ಭೋರನೈತಂದನು ಘನಹರುಷದಿ ||೩೬೩||

ಕಳ ಹಂಸಗಮನೆಯರು | ಜಲಜಸೌಗಂಧಿಯರು ||
ಕಲಶಕುಚದ ಭಾರಕೆ ನಡುಬಳುಕಲು |
ಕಲಶಕನ್ನಡಿಯನು ಪಿಡಿದೈತಂದರು ||೩೬೪||

ವಸುದೇವ ಬರುವುದನು | ಬಿಸಜನೇತ್ರನು ತಾನು ||
ಕುಶಲದಿ ಕಾಣುತ ಖಗವರವನಿಳಿದು |
ನಸುನಗೆಯಿಂದಲಿ ಪಿತಗೆ ವಂದಿಸಿದನು ||೩೬೫||

ಎರಗಿರ್ಪ ಹರಿಯನ್ನು | ಶಿರಪಿಡಿದೆತ್ತಿದನು ||
ಮುರಹರ ಪುನರಪಿ ಮಾತೆಗೆ ವಂದಿಸೆ |
ಪರಸುತಲಪ್ಪಿದಳಣುಗನ ನಲವಿಂ ||೩೬೬||

ಅನಿರುದ್ಧ ಉಷೆಯರನು | ವನಜನೇತ್ರನು ತಾನು ||
ಜನಕಜನನಿಯರ ಚರಣಕೆ ಮಣಿಸಲು |
ಸನುಮತದಿಂದೆತ್ತುತ ಪರಸಿದರು ||೩೬೭||

ಕಂದ

ಸ್ಮರಸುತನಂ ಬಾಣಜೆಯಂ |
ಪರಿಕಿಸಿ ವಸುದೇವ ಮುಖ್ಯರೆಲ್ಲರು ಮನದೊಳ್ ||
ಹರುಷಂಬಡೆದುಂ ಕೃಷ್ಣಾ |
ದ್ಯರು ಸಹಿತೇಳ್ ತಂದರಂದುಮತಿ ವೇಗದೊಳಂ ||೩೬೮||

ರಾಗ ಮಾರವಿ ಏಕತಾಳ

ವಾರಿಜಾಕ್ಷನನಿರುದ್ಧಂ ಬಾಣಜೆಯರ | ನೇರಿಸಿಯಂದಣದಿ ||
ಭೂರಿ ಸುವಾದ್ಯಘೋಷದೊಳಂದು ಯಾದವ | ವಾರ ಸಹಿತ ಭರದಿ ||೩೬೯||

ನಡೆ ತರುತಿರಲಂದಂಗಜತನುಜನ | ಮಡದಿಯನೀಕ್ಷಿಸಲು ||
ಒಡನೈತಂದರು ಪುರಜನರೆಲ್ಲರು | ಕಡುಸಂತೋಷದೊಳು ||೩೭೦||

ಬಂದು ಬಂದಡಿಗೆರಗುವರನ್ನು ಮನ್ನಿಸು | ತಂದು ಮುರಾಂತಕನು ||
ಅಂದಣವಿಡಿದೇಳ್ ತರುತಿರ್ದನುಮೇ | ನೆಂದು ಪೊಗಳ್ವೆ ನಾನು ||೩೭೧||

ಉಷೆಯಂದವ ಬಣ್ಣಿಸುವಡರಿದು ಶೋ | ಭಿಸುತಿರುವಂದಣದಿ ||
ಮಿಸುನಿಬೊಂಬೆಯು ಮಂಡಿಸಿದುದೆ ಎಂಬಂ | ತೆಸೆದಳು ನೋಳ್ಪರಿಗೆ ||೩೭೨||

ಕಂದ

ಹರಿಯಿಂತೆಲ್ಲರು ಸಹಿತಂ |
ಹರುಷದೊಳರಮನೆಗೆ ಬಂದುಮನಿರುದ್ಧನಿಗಂ ||
ವರಶುಭಲಗ್ನದೊಳುಷೆಯಂ |
ಪರಿಣಯವಂ ಮಾಡಿಸಿದನು ಅತಿವೈಭವದಿಂ ||೩೭೩||

ದ್ವಿಪದಿ

ಅಂದು ರುಕ್ಮಿಣಿ ಸತ್ಯಭಾಮೆಯರು ಮುದದಿ |
ಕಂದರ್ಪನರಸಿಯ ನ್ನೊಡಗೊಂಡು ಭರದಿ ||೩೭೪||

ಚಾರು ಮೌಕ್ತಿಕದಿಂದ ಹಸೆಮಣೆಯ ಮಾಡಿ |
ಮಾರತನುಜಾತನನು ಬಾಣಜೆಯು ಕೂಡಿ ||೩೭೫||

ನಲವಿನಿಂ ಕುಳ್ಳಿರಿಸಿ ಅರಸಿನೆಣ್ಣೆಯನು |
ಚೆಲುವಿನಿಂದೆಸಗಿದರು ಪೊಗಳಲೇನಿನ್ನು ||೩೭೬||

ಇಂತುತ್ಸವದೊಳು ದಿನ ನಾಲ್ಕಾಗಲಾಗ |
ಕಾಂತೆಯರು ಮಜ್ಜನವ ಮಾಡಿದರು ಬೇಗ ||೩೭೭||

ಹರಿ ಬಳಿಕ ಅನಿರುದ್ಧ ಉಷೆಯರಿಗೆ ಭರದಿ |
ಸುರುಚಿರಾಭರಣಗಳ ತೊಡಿಸಿ ಸಂತಸದಿ ||೩೭೮||

ನವದುಕೂಲವನುಡಿಸಿ ನೋಡಲವದಿರನು |
ದಿವಸೇಶನಂತೆ ಎಸೆವುತ್ತಿರ್ದರಿನ್ನು ||೩೭೯||

ಮದುಮಕ್ಕಳನು ಕುಳ್ಳಿರಿಸಿ ಸತಿಯರಂದು |
ಮುದದಿಂದಲಾರತಿಯ ಬೆಳಗಿದರು ನಿಂದು ||೩೮೦||

ರಾಗ ಢವಳಾರ ಆದಿತಾಳ

ಕಾಮನ ಪುತ್ರಗೆ ಬಾಣಜೆಗೆ | ರಾಮನನುಜಪೌತ್ರಗೆ ಉಷೆಗೆ |
ಕಾಮಿನಿಯರೆಲ್ಲ ನಲವಿಂದ || ನಲವಿಂದಲೆ ಪಾಡುತ್ತ ಪೊಗಳುತ್ತ |
ಹೇಮದಾರತಿಯ ಬೆಳಗಿರೆ | ಶೋಭಾನೆ ||೩೮೧||

ಕರಿವಾರವ ತರಿದೊಟ್ಟಿದಗೆ | ದುರುಳರ ಶಿರವನು ಕುಟ್ಟಿದಗೆ |
ಶರಬಾಣಸುತೆಯ ರಮಣಗೆ || ರಮಣಗೆ ಗಜಗಮನೆಯರೆಲ್ಲರು |
ಕುರುಜಿನಾರತಿಯ ಬೆಳಗಿರೆ | ಶೋಭಾನೆ ||೩೮೨||

ಚಂದಿರವದನೆಗೆ ಶುಕವಾಣಿಗೆ | ಕುಂದರದನೆಗಮಿತ ಪ್ರಕಾಶಿನಿಗೆ |
ಕಂದರ್ಪ ಸುತನ ರಮಣಿಗೆ || ರಮಣಿಗೆ ಹರಿಣಾಕ್ಷಿಯರೆಲ್ಲರು |
ಕುಂದಣದಾರತಿಯ ಬೆಳಗಿರೆ | ಶೋಭಾನೆ ||೩೮೩||

ಭಾಮಿನಿ

ಅರಸ ಕೇಳಿಂತಚ್ಯುತನು ವಿ |
ಸ್ತರದಿ ವೈವಾಹವನ್ನು ಮಾಡಿಸಿ |
ಪರಿ ಪರಿಯ ದಕ್ಷಿಣೆಯನಿತ್ತನು ವಿಪ್ರಸಂಕುಲಕೆ ||
ಪುರಜನವ ಪರಿಜನವ ಪೋಷಿಸು |
ತಿರಲು ಸ್ಮರಜನು ಸತಿಯನೊಡಗೊಂ |
ಡಿರದೆ ಚರಣಕೆ ನಮಿಸಲೆತ್ತಿದನಸುರರಿಪು ನಗುತ ||೩೮೪||

ರಾಗ ಸೌರಾಷ್ಟ್ರ ತ್ರಿವುಡೆತಾಳ

ನಿರತವೀ ಪರಿ ವಿಭವದಲಿ ಶಿರಿ | ವರನುಮಿರ್ದನೆನುತ್ತಲಾ ಭೂ |
ವರಪರೀಕ್ಷಿತಗೆಂದ ಶುಕಮುನಿ | ಕರುಣದಿಂದ ||೩೮೫||

ಧರೆಯೊಳೀ ಕಥೆಯನ್ನು ಕೇಳ್ದರ | ದುರಿತವನು ಪರಿಹರಿಸಿ ಸೌಖ್ಯವ |
ನಿರದೆ ಪಾಲಿಪಜನ ಪುರಾಧೀ | ಶ್ವರನು ಸತತ ||೩೮೬||

ಪುರಮಥನ ಗಿರಿಜಾಮನೋಹರ | ದುರಿತ ವಿಪಿನಕೃಶನು ದಿವಿಜೇ |
ಶ್ವರನಮಿತ ಪದಯುಗಳ ಗಂಗಾ | ಧರ ಗಿರೀಶ ||೩೮೭||

ಅಂಗಜಾಂತಕ ದುಷ್ಟಸಂಕುಲ | ಭಂಗ ಸಜ್ಜನಸಂಗ ಕರುಣಾ |
ಪಾಂಗ ಕಮಲಜಪುರದೆರೆಯ ಮಹ | ಲಿಂಗ ಸಲಹೋ ||೩೮೮||

ಭೂಮಿ ಯಮರರ ಕುಲದಿ ಜನಿಸಿದ | ರಾಮಪುತ್ರನು ವಿಷ್ಣುವೆಂಬವ |
ಶ್ರೀಮಹಾಲಿಂಗನ ಪದದ್ವಯ | ತಾಮರಸದ ||೩೮೯ ||
ಕರುಣದಿಂದೀ ಕಥೆಯನುಸಿರಿದೆ | ಧರೆಯ ಕವಿಗಳು ಲಾಲಿಸುತ ತ |
ಪ್ಪಿರಲು ಜರೆಯದೆ ಪೂರ್ಣ ದಯದಲಿ | ಮೆರೆಸಿ ಜಗದಿ ||೩೯೦||

ಮಂಗಲ

ರಾಗ ಸೌರಾಷ್ಟ್ರ ಆದಿತಾಳ

ನಾಗಭೂಷಣಗೆ ಗಂಗಾಧರಗೆ | ನಾಗಶಯನಮಿತ್ರನಗೆ ಹರಗೆ ||
ನಾಗವಾಹನಮುಖ್ಯ ಸುರನುತಚರಣಗೆ | ನಾಗದಾನವಸಂಹಾರನಿಗೆ ||
ಮಂಗಳಂ ಜಯ ಮಂಗಳಂ ||೩೯೧||

ಹರಿಗಾತ್ರೆ ಫಾಲಾಕ್ಷನಿಗೆ | ಹರಿಶತಭಾಸಗೆ ಪುರಹರಗೆ ||
ಹರಿಯ ಕುಮಾರಗೆ ಶರಪಿತ ದೇವಗೆ | ಹರಿಕಾಲಗೆ ಹರಿಚಾಕ್ಷನಿಗೆ ||
ಮಂಗಳಂ ಜಯ ಮಂಗಳಂ ||೩೯೨||

ಅಂಬುಜಪಾಣಿಗೆ ಶಶಿಮುಖಿಗೆ | ಅಂಬುಜನೇತ್ರೆಗೆ ಪಾರ್ವತಿಗೆ ||
ಅಂಬುಜಪುರವಾಸನ ರಮಣಿಗೆ | ಅಂಬುಜಗಂಧಿ ಮೂಕಾಂಭಿಕೆಗೆ ||
ಮಂಗಳಂ ಜಯ ಮಂಗಳಂ ||೩೯೩||

ಯಕ್ಷಗಾನ ಬಾಣಾಸುರನ ಕಾಳಗ ಮುಗಿದುದು