ರಾಯಣ್ಣನಿಗೆ, ರಾಯ ನಾಯಕ, ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನ ವೈರಿಗಳಿಂದ ಹೆಸರಿಸಲ್ಪಟ್ಟಿವೆ.

ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್‌೧೫ನೆಯ ದಿನ ೧೭೯೬, ಆಗಸ್ಟ ಹದಿನೈದು ಭಾರತೀಯರಿಗೆ ರಾಷ್ಟ್ರೀಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜಾನೇವರಿ ೨೬ನೆಯ ದಿನ ೧೮೩೧; ಜಾನೇವರಿ ಇಪ್ಪತ್ತಾರು ಭಾರತೀಯರಿಗೆ ಸಂಪೂರ್ಣ ಸ್ವಾತಂತ್ಯ್ರದಿನ, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟ (ಲಡಾಯಿ)ಗಳು ಸ್ಮರಣೀಯವಾಗಿವೆ. ಮೂವತ್ತೈದು ವರುಷ ಜನ್ಮದಾರಭ್ಯದಿಂದ ಸ್ವರ್ಗವಾಸಿಯಾಗುವವರೆಗೆ ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ ! ಈ ವೀರ ಕೇಸರಿಯನ್ನು ಸಮಗ್ರ ಕನ್ನಡ ನಾಡು ಗೌರವಿಸುತ್ತದೆ.

ವೀರ ಕೇಸರಿ ಸಂಗೊಳ್ಳಿ ರಾಯಣ್ಣನ ಜೊತೆ ಅನೇಕ ವೀರರು ವೀರ ಮರಣವನ್ನಪ್ಪಿದ್ದಾರೆ. ಕುತ್ತೂರ ಸ್ವಾತಂತ್ಯ್ರ ಯುದ್ಧದ ಅವಧಿಯಲ್ಲಿ ೭೮ ಜನರು ವೀರ ಮರಣವನ್ನು ಅಪ್ಪಿದರು. ಸೆರೆಯಾಳುಗಳಾದ ೪೦ ಜನರಿಗೆ ಬ್ರಿಟೀಶರು ಫಾಶಿ ಶಿಕ್ಷೆ ವಿಧಿಸಿದರು.

ಬ್ರಿಟೀಶರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಅವರ ವಿವರ ಕೆಳಗಿನಂತಿದೆ.

ಅ.ನಂ. ಹೆಸರು ವಯಸ್ಸು ಜಾತಿ ಊರು
೧. ರಾಯಣ್ಣ ರೋಗಣ್ಣವರ ೩೫ ದನಗರ್ ಸಂಗೊಳ್ಳಿ
೨. ಬಾಳಾ ನಾಯಕ ೫೦ ಬೇಡ ಬಸ್ತವಾಡ
೩. ಬಸಲಿಂಗಪ್ಪ ೩೦ ಪಂಚಮ ಸಾಲಿ ಹಣಬರಹಟ್ಟಿ
೪. ಕರಬಸಪ್ಪ ೪೦ ಲಿಂಗಾಯತ ಬೆಳವಡಿ
೫. ಭೀಮಾ ಜಿಡ್ಡಿಮನಿ ೪೦ ಬೇಡ ಹೂಗರ್ತಿ
೬. ಕೆಂಚಪ್ಪ ೩೦ ಲಿಂಗಾಯತ ಸಂಗತಿಕೊಪ್ಪ
೭. ಅಪೂಜಿ ನಾಯಕ ೩೦ ಬೇಡ ಸುತಗಟ್ಟಿ

 

ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟ ಜನ

೧. ರುದ್ರನಾಯಕ ೫೦ ಬೇಡ ಬೆಳವಡಿ
೨. ಎಲ್ಲಾನಾಯಕ ೪೦ ಬೇಡ ಬೆಳವಡಿ
೩. ಅಪ್ಪೂಜಿ ೪೦ ಮುಸ್ಲಿಂ ತಿಗಡೊಳ್ಳಿ
೪. ರಾಣಮೋಜಿಕೊಂಡ ೩೦ ಮರಾಠ ಮಜ್ಜಿಗಡಾ
೫. ಕೋನೇರಿ ೪೦ ನಾರ್ವೇಕರ ತೋಪಿನಕಟ್ಟಿ
೬. ನೇಮಣ್ಣ ೪೦ ಜೈನ ಕೊಡಚವಾಡ

ಸಂಗೊಳ್ಳಿ ರಾಯಣ್ಣ ಹಾಗೂ ಆತನ ಹನ್ನೆರಡು ವೀರರ ಬಗೆಗೆ ಇನ್ನೂ ವಿಶೇಷ ಸಂಶೋಧನೆ ನಡೆದು, ಅವರ ಜೀವನ-ಕಾರ್ಯಗಳ ಬಗೆಗೆ ಸಮಗ್ರ ಕನ್ನಡಿಗರು ತಿಳಿದುಕೊಳ್ಳುವಂತಾಬೇಕು.

ಮೇಲಿನ ವಿವರಗಳನ್ನು ಗಮನಿಸಿದಾಗ ಎಲ್ಲರೂ ಕ್ರಾಂತಿಯಲ್ಲಿ ವಿವಿಧ ಜಾತಿಯವರು ಭಾಗವಹಿಸಿದರೂ ಅವರೆಲ್ಲರೂ ಒಂದೇ ತಾಯಿಯ ಮಕ್ಕಳಂತಿದ್ದರು. ಒಂದಾಗಿ ನಾಡಿಗೆ ಬಂದ ಕಂಟಕವನ್ನು ಪರಿಹರಿಸಲು ತಮ್ಮ ಜೀವನ ಮುಡುಪಾಗಿಟ್ಟು ಅಮರರಾಗಿರುವುದು, ಅವಿಸ್ಮರಣೆಯ ಸಂಗತಿಯಾಗಿದೆ!.

ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಕ್ಕಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ಒಂದು ಲಾವಣಿಯಲ್ಲಿ ಬರುವ ರೀತಿ ಹೀಗಿದೆ ‘ಊಟವ ಉಣವವರಿಗೆ ಊಟವ ಕೊಡಿರೆಪ್ಪ; ಉಣದವರಿಗೆ ಒಣ ಉಲುಪಿಯ ಕೊಡಿರೆಪ್ಪಾ’; ಕೆಲವು ವೀರರು ಶಾಖಾ ಆಹಾರ-ಮಾಂಸಾ ಆಹಾರದವರು ಇದ್ದವರಿಗೆ ಆಹಾರದ ಸಾಮಾನು (ಉಲುಪಿ) ಕೊಡುವ ಪದ್ಧತಿ ಇತ್ತೆಂದು ತಿಳಿದು ಬರುತ್ತದೆ. ಈಗಲು ಹಿಂದು ಸಮಾಜದಲ್ಲಿ ಈ ಪದ್ಧತಿಯು ರೂಢಿಯಲ್ಲಿದೆ. ಅಲ್ಲದೆ ಊಟದ ವೇಳೆಯ ಬದಲಾವಣೆಗಳು ಇವೆ. ಉದಾಹರಣೆಗೆ ಜೈನ ಸಮಾಜದವರು ಹಲವಾರು ಮನೆತನಗಳಲ್ಲಿ ಸೂರ್ಯಾಸ್ತವಾಗುವುದಕ್ಕೆ ಮುಂಚೆ ಊಟ ಊಟಮಾಡುವುದು. ಇಸ್ಲಾಂ ಸಮಾಜದಲ್ಲಿ ಸೂರ್ಯೋದಯವಾಗುವುದಕ್ಕೆ ಮುಂಚೆ ಊಟ ತೀರಿಸುವುದು ನಡೆದುಕೊಂಡ ಬಂದಿರುವ ರೂಢಿಯುಂಟು. ಆದರೆ ರಾಯಣ್ಣ, ಬಿಚ್ಚಗತ್ತಿಯ ಚನ್ನಬಸಪ್ಪ, ಆಮಟೂರ ಬಾಳಪ್ಪ, ಗಜವೀರ (ಗಜಬಾ), ರುದ್ರನಾಯಕ, ಎಲ್ಲಾನಾಯಕ, ನೇಮಣ್ಣ, ಅಪ್ಪೂಣಿ, ಮುಂತಾದ ವೀರರು ಈ ಪದ್ಧತಿಗಳನ್ನು ಮುರಿದರು. ಒಂದೇ ಬಗೆಯ ಆಹಾರವನ್ನು ಎಲ್ಲರೂ ಕೂಡಿ (ಸಹಪಂತಿ) ಊಟ ಮಾಡುತ್ತಿದ್ದರು. ಒಂದು ಹೋಳಿಯ ಹಾಡು ರುಜುವಾತ ನೀಡುತ್ತದೆ.

ಕಿತ್ತೂರ ಮಹಲದಲ್ಲಿ
ವೀರರು ಉಣತಾರ ಹಗಲಿ-ರಾತ್ರಿಯಲಿ
s|
ನಂದಗಡದ ಕೋಟೆಯ ಮಗ್ಗಲಲಿ
ದೇಶನೂರ ರುದ್ರಗಡ ಕರೆಯವ್ವನಕೊಳ್ಳದಲಿ
ಮತ್ತ ಬಾಳಗುಂದದ ಕೊಳ್ಳದಲ್ಲಿ
s||

ಹಿಂಗ ಮೆಟ್ಟಮಾಡಿ ಉಂಡs
ಉಟ್ಟ ಗಟ್ಟಿಯಾದಾರಾ ಸರದಾರರಾs
ಹೇಳ ತಮ್ಮಾ ತಂದಿದ್ದರೆಲ್ಲಿಯ ಬೆಲ್ಲ-ಬ್ಯಾಳಿ
ಮತ್ತ ಉಪ್ಪು-ಖಾರಾ ಅವರಾ
s
ನಮ್ಮ ಶೂರ ರಾಯಣ್ಣನ ಒಟ್ಟಿಗಳ
ಹೊಗಳಿ ಹಾಡ್ಯಾರ
s ||

ಹಂಡೆ ಗಂಟ್ಲೆ ಬ್ಯಾಳಿ ಕುದ್ದು
ಕೊಪ್ಪರಿಗೆ ಗಂಟ್ಲೆ ಹಾಲ ಉಕ್ಕಿ
ss
ಕರೆಯತಾವ ಉಣ್ಣಲಾಕ ವೀರರನಾs
ಹೇಳ ತಮ್ಮಾ ತಿಳದ ತಿಳದs ರಾಯಣ್ಣ ನಾ? ||
ಮಮದಾಪೂರಕ ಬಂದ ತಿಳಿಯೋ
ಮಾರುತಿ ಪೈಲ್ವಾನನಾ
, ಅಂವ ಜಟ್ಟಿ-ಗಟ್ಟಿ.

[1]

ದೇಶನೂರಲ್ಲಿ ಇದ್ದಾಗ, ಹೊಸದಾಗಿ ಬಂದು ಸೈನ್ಯಕ್ಕೆ ಸೇರಿದ ವೀರರು ತಾವು ಒಕ್ಕಟ್ಟಾಗಿ ಲಡಾಯಿ ಮಾಡುತ್ತೇವೆ ಎಂದು ಆಣಿ (ಶಪಥ) ಮಾಡುತ್ತಿದ್ದರೆಂಬುದೂ, ಬಾಳಗುಂದದಲ್ಲಿದ್ದಾಗ ಅಲ್ಲಿ ಬಂದವರೂ ಕರೆವ್ವತಾಯಿ ಅಥವಾ ಕಕ್ಕೇರಿ ಬಿಷ್ಟವ್ವ ತಾಯಿ ಆಣಿ ಮಾಡುತ್ತಿದ್ದರೆಂದು ಗೊತ್ತಾಗುತ್ತದೆ.

‘‘ಸೈನಿಕರೆಲ್ಲಾ ಕೂಡಿ ಉಣ್ಣುವ ಈ ಪರಿಪಾಠವು ಭಾರತದ ಹಿಂದು ಸೈನಿಕರಲ್ಲಿಯೇ ಮೊಟ್ಟ ಮೊದಲು ಪ್ರಾರಂಭವಾಯಿತೆಂದು ಹೇಳಬಹುದು. ಅಂದಿನಿಂದ ಜಾತಿ ಭೇದವೆಣಿಸದೆ ಎಲ್ಲರೂ ಸಹ-ಭೂಜನ ಮಾಡಿ ದೇಶಕ್ಕೆ ಮಾದರಿಯಾದರು. ಈ ಸಹಭೋಜನದ ವಿಚಾರ ಕೂಡಾ ರಾಯಣ್ಣನೇ ಪ್ರಾರಂಭಿಸಿದ ಎಂದು ಹೇಳಬಹುದು. ಅಂತೆಯೋ ಜಾತಿ ಭೇದವಿಲ್ಲದೆ ಎಲ್ಲ ಜಾತಿಯವರೂ ರಾಯಣ್ಣನ ಜೊತೆಗೆ ಕ್ರಾಂತಿಯಲ್ಲಿ ಕೈಗೂಡಿದರು. ಹಾಗೆಯೇ ಬ್ರಿಟೀಶರಿಗೆ ಸಿಂಹಸ್ವಪ್ನವಾಗಿ ನಿಂತರು.’’[2]

ರಾಯಣ್ಣನ ಕ್ರಾಂತಿಗೆ, ಬ್ರಿಟೀಶ ಅಧಿಕಾರಿಗಳ ವಿರೋಧ, ಅವರ ಕುಟಿಲ ಕಾರಸ್ಥಾನ, ನಮ್ಮ ಜನರ ಮೋಸಗಾರಿಕೆ, ಇವೆಲ್ಲ ಕೊನೆಗೆ ಕ್ರಾಂತಿವೀರ-ಕ್ರಾಂತಿವೀರರನ್ನು ಹಾಳುಗೆಡಿಸಿದವು.

ಆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನು ಅಂದು ಮಾಡಿದ ಬ್ರಿಟೀಶ್‌ವಿರೋಧಿ ವಿದ್ವಂಸಕ ಕಾರ್ಯಗಳು ಉದಾಹರಣೆ: ಸರಕಾರಿ ಕಛೇರಿಗಳಿಗೆ ಬೆಂಕಿ ಇಡುವದು, ಸರಕಾರಿ ಖಜಾನೆಗಳನ್ನು ದೋಚುವುದು ಹಾಗೂ ಅಂಚೆ ಕಛೇರಿಗಳನ್ನು ಭಸ್ಮ ಮಾಡುವುದು ೧೯೧೭ನೇಯ ಶತಮಾನದಲ್ಲಿ ನಡೆದ ಭಾರತದ ಸ್ವಾತಂತ್ಯ್ರ ಚಳುವಳಿ ಪ್ರೇರಣೆ ಸ್ಪೂರ್ತಿಯಾಗಿ ದೇಶ ಸ್ವಾತಂತ್ಯ್ರವಾಗಲು ಕಾರಣವಾಯಿತೆಂಬುದನ್ನು ಮರೆಯುವಂತಿಲ್ಲ.[1]    ಮಾರುತಿ ಪೈಲ್ವಾನ ಮಮದಾಪೂರ. ಇವನ ಹೋಳಿಯ ಹಾಡುಗಳು. ಸಂಗ್ರಹ ನೀಡಿದವರು ಶ್ರೀ ಸಿದ್ಧಪ್ಪ ಪಠಾತ ಮಮದಾಪೂರ. ನನ್ನ ಸಂಗ್ರಹ ಕಾಗದಗಳಿಂದ (ಡಾ. ನಿಂಗಣ್ಣ ಸಣ್ಣಕ್ಕಿ.)

[2]    ಸಂಗೊಳ್ಳಿ ರಾಯಣ್ಣ, ಪುಟ ೨೨-೯೩. ಸಿ.ವಿ. ಮಠದವರ ಲೇಖನದಿಂದ. ಸಂ. ಡಾ. ಸೂರ್ಯನಾಥ ಕಾಮತ. (ಸಂಗೊಳ್ಳಿ ರಾಯಣ್ಣನ ಹೋರಾಟದ ಪರಿಸರ ಹಾಗೂ ಐತಿಹ್ಯಗಳು)