) ಜನನನಾಮಕರಣ

 

ಹುಟ್ಟು ಸಾವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹುಟ್ಟಿದವನು ಸಾಯಲೇಬೇಕೆಂಬುವುದು ನಿಸರ್ಗದ ನಿಯಮ. ಒಬ್ಬ ವ್ಯಕ್ತಿಯ ಜನನಕಾಲ ಸಂದರ್ಭದಲ್ಲಿ ಅನೇಕ ಬಗೆಯ ಆಚರಣೆಗಳಿರುವಂತೆ ಅವನ ಸಾವಿನ ಸಂದರ್ಭದಲ್ಲಿಯೂ ಕೂಡ ವಿವಿಧ ರೀತಿಯ ವಿಧಿ ವಿಧಾನಗಳಿರುತ್ತವೆ. ಈ ಆಚರಣೆಯ ಸಂಪ್ರದಾಯಗಳು ಆಯಾ ಜನಾಂಗದ ಸಂಸ್ಕೃತಿಯನ್ನವಲಂಬಿಸಿದ್ದು ಇವು ಜನಾಂಗದಿಂದ ಜನಾಂಗಕ್ಕೆ ಭಿನ್ನ ಭಿನ್ನವಾಗಿರುತ್ತವೆ.

[1]

ವೃತ್ತಿಗಾಗಿ ವಿವಿಧ ಕಡೆಗಳಿಗೆ ಚದುರಿ ಹೋಗಿರುವ ಡಕ್ಕಲಿಗರಿಗೆ ಪ್ರಯಾಣದ ನಡುವೆ ನೆಲೆನಿಂತ ಊರುಗಳೇ ಗತಿ. ವಕ್ತೃಗಳು ಹೇಳಿದ ಪ್ರಕಾರ ಹೆರಿಗೆಯ ಸಂದರ್ಭದಲ್ಲಿ ನೆಲೆನಿಂತ ಊರಿನ ಐನೋರರ ಸ್ತ್ರೀಯರು ಬಂದು ಹೆರಿಗೆ ಮಾಡಿಸಿ ಹೋಗುತ್ತಾರೆ. ಹೋಗುವಾಗ ಅವರಿಗೆ ಕಾಣಿಕೆಯಾಗಿ ರೂಪಾಯಿ ಕಾಳು-ಕಡಿಗಳನ್ನು ಕೊಡುತ್ತಾರೆ. ಬಹುಶಃ ಈ ಪದ್ಧತಿ ಇವರಲ್ಲಿ ರೂಢಿಯಲ್ಲಿರಲು ಆಗಾಗ ವೃತ್ತಿಗಾಗಿ ಊರಿಂದ ಊರಿಗೆ ಅಲೆಯುವುದರಿಂದ ಒಂದೇ ಕುಟುಂಬದವರು ಅಲೆಯಬೇಕಾಗುತ್ತದೆ. ಹೆರಿಗೆ ಆಗುವ ಊರಲ್ಲಿ ಡಕ್ಕಲಿಗರ ಕುಟುಂಬದ ಹೆಣ್ಣು ಮಕ್ಕಳು ಇರಲಿಕ್ಕಿಲ್ಲ. ಆದ್ದರಿಂದ ಐನೋರರ ಹೆಣ್ಣು ಮಕ್ಕಳ ಸಹಾಯ ಪಡೆಯಲು ಇದೊಂದು ಕಾರಣ ಆಗಿರಬಹುದು. ಇವತ್ತಿನ ದಿವಸ ಡಕ್ಕಲಿಗರ ಅನುಭವಿ ಸ್ತ್ರೀಯರು ಬಂದು ಹೆರಿಗೆ ಮಾಡಿಸಿ ಹೋಗುತ್ತಾರಂತೆ.

ಬಾಣಂತಿಗೆ ನೋವು ಕಾಣಿಸಿಕೊಂಡಾಗ ಬಿಡಾರದ ಪಕ್ಕದಲ್ಲಿ ಗೋಣಿಯ ಚೀಲದ ತಟ್ಟುಗಳಿಂದ ಅಥವಾ ಸೊಪ್ಪುಗಳಿಂದ ಮರೆಮಾಡಿರುವ ಚಪ್ಪರದಲ್ಲಿ ಅನುಭವಿ ಹೆಣ್ಣು ಮಕ್ಕಳಿಂದ ಹೆರಿಗೆ ಮಾಡಿಸುತ್ತಾರೆ. ಹೆರಿಗೆಯಾದ ಬಳಿಕ ಬಿಡಾರದ ಪಕ್ಕದಲ್ಲಿ ಬಾಣಂತಿಗೆ ಸ್ನಾನ ಮಾಡಲು ಒಂದು ಕುಣಿ ತೋಡುತ್ತಾರೆ. ಕುಣಿಯ ಪಕ್ಕದಲ್ಲಿಯೇ ಮಗುವಿನಿಂದ ಕತ್ತರಿಸಿದ ಹೊಕ್ಕಳ ಬಳ್ಳಿಯನ್ನು ಒಂದು ಮಡಿಕೆಯಲ್ಲಿ ಹಾಕಿ ಮುಚ್ಚಿಡುತ್ತಾರೆ. ಈ ಕುಣಿಗೆ ‘ಶೂಲದ ಕುಣಿ’ ಎಂದು ಕರೆಯುತ್ತಾರೆ.

ಹೆರಿಗೆ ಮುಗಿದ ಬಳಿಕ ಬಾಣಂತಿಗೆ ಬಿಸಿಬಿಸಿ ನೀರಿನಿಂದ ದಿನಕ್ಕೆ ಎರಡು ಸಲದಂತೆ ಒಂದು ವಾರಗಳವರೆಗೆ ಸ್ನಾನ ಮಾಡಿಸುತ್ತಾರೆ. ಬೇಗನೆ ಚೇತರಿಸಿಕೊಳ್ಳಲೆಂದು ತತ್ತಿ, ಮಾಂಸಾಹಾರದ ಊಟ ಕೊಡುತ್ತಾರೆ. ಮಗು ಹುಟ್ಟಿದ ಐದನೆಯ ದಿವಸಕ್ಕೆ ಐದೇಶಿ ಕಾರ್ಯ ಮಾಡಿ ಬಾಣಂತಿಗೆ ಮನೆಯಲ್ಲಿ ಕರೆದುಕೊಳ್ಳುತ್ತಾರೆ.

ಇವರಲ್ಲಿ ಏಳನೆಯ ದಿವಸಕ್ಕೆ ಮಗುವಿಗೆ ನಾಮಕರಣ ಮಾಡುವ ಪರಿಪಾಠ ಕಂಡು ಬರುತ್ತದೆ. ತಮ್ಮ ಬಂಧು ಬಾಂಧವರನ್ನು ಕರೆದು ಕುಲದೇವತೆಗಳ ಹೆಸರಿನ ಮೇಲೆ ಪೂಜೆ ಮಾಡಿ, ತಮ್ಮ ಕುಲದೇವತೆ, ಕುಟುಂಬದ ಹಿರಿಯರ ಹೆಸರುಗಳನ್ನಿಡುವ ಪರಿಪಾಠವಿದೆ. ಅದೇ ದಿನ ಜೋಳಿಗೆ (ತೊಟ್ಟಿಲು) ಪೂಜೆ ಮಾಡುತ್ತಾರೆ. ಡಕ್ಕಲಿಗರಲ್ಲಿ ಗೋಣಿಯ ಚೀಲುಗಳಿಂದ ಜೋಳಿಗೆ ಕಟ್ಟಿ ಅದರಲ್ಲಿ ಮಗುವನ್ನು ತೂಗುತ್ತಾರೆ. ಇತ್ತೀಚೆಗೆ ಕೆಲವರು ತೊಟ್ಟಿಲು ಕಟ್ಟಿ ಅದರಲ್ಲಿ ಮಗು ಹಾಕುವುದು ಕಂಡು ಬರುತ್ತಿದೆ. ಮಕ್ಕಳಿಗೆ ಇಡುವ ಹೆಸರುಗಳು ಉದಾ:

 

ಗಂಡು ಮಕ್ಕಳಿಗೆ

ಹೆಣ್ಣು ಮಕ್ಕಳಿಗೆ

ಬಾಲಪ್ಪ, ಹುಲಿಗೆಪ್ಪ, ಜಾಂಬಪ್ಪ, ದುರ್ಗಪ್ಪ, ಫಕೀರಪ್ಪ, ಜಂತಪ್ಪ, ರಾಯಪ್ಪ, ಭೀಮಪ್ಪ, ಅಂಜಪ್ಪ, ಭೀಮಶ್ಯಾ, ಅಂಕುರ, ಯಲ್ಲಪ್ಪ, ದ್ಯಾಮಪ್ಪ, ಇತ್ಯಾದಿ. ಪಾರವ್ವ, ಯಲ್ಲವ್ವ, ರೇಣುಕ, ಜಾಂಬವ್ವ, ಹುಲಿಗೆವ್ವ, ಕಂಚಿ, ದುರ್ಗಮ್ಮ, ದಿಮ್ಮಿ, ಗಂಗಮ್ಮ

 

 

 

ನಾಮಕರಣ ಕಾರ್ಯ ಮುಗಿದ ಬಳಿಕ ಮಗುವಿನ ತಾಯಿಯ ಕೈಯಲ್ಲಿ ಹೊಸ ಬಟ್ಟೆಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. ಆಮೇಲೆ ಕಾರ್ಯಕ್ರಮಕ್ಕೆ ಬಂದವರೆಲ್ಲರಿಗೂ ಗುಗ್ಗರಿಯನ್ನು ಹಂಚುತ್ತಾರೆ.

) ಋತುಮತಿ

ಹೆಣ್ಣುಮಗಳು ಪ್ರಥಮ ಬಾರಿಗೆ ಮುಟ್ಟಾಗುವುದನ್ನು ಮೈನೆರೆಯುವುದು, ದೊಡ್ಡವಳಾಗುವುದು ಅಥವಾ ಋತುಮತಿಯಾಗುವುದು ಎಂದು ಕರೆಯುತ್ತಾರೆ. ಹೆಣ್ಣು ಮಕ್ಕಳು ಮೈನೆರೆದಾಗಿನಿಂದ ಮೂರು ದಿನಗಳವರೆಗೆ ತಮ್ಮ ಬಿಡಾರದ ಪಕ್ಕದಲ್ಲಿ ಚಾಪೆ ಅಥವಾ ಸೊಪ್ಪುಗಳಿಂದ ಸಣ್ಣದಾದ ಒಂದು ಚಪ್ಪರ ತಯಾರಿಸಿ ಅಲ್ಲಿಯೇ ಮೂರು ದಿನಗಳವರೆಗೆ ಇರಿಸುತ್ತಾರೆ. ಆ ಮೂರು ದಿನಗಳವರೆಗೆ ಅವಳಿಗೆ ಬಾಳೆಲೆ ಅಥವಾ ಮುತ್ತುಗದ ಎಲೆಯಲ್ಲಿ ಊಟ ಹಾಕುತ್ತಾರೆ. ನಾಲ್ಕನೆಯ ದಿನ ಮಣ್ಣಿನ ಪಾತ್ರೆಯಲ್ಲಿ ಊಟ ನೀಡುತ್ತಾರೆ. ಆಗ ಇತರೆ ವಸ್ತುಗಳನ್ನು ಅವಳು ಮುಟ್ಟುವಂತಿಲ್ಲ. ಅಲ್ಲದೆ ಅವಳ ಸೂತಕ ಮುಗಿಯುವರೆಗೆ ಆ ಮನೆಯ ಹೆಣ್ಣು ಮಕ್ಕಳು ಬೇರೆಯವರ ಮನೆಯ ಶುಭಕಾರ್ಯದಲ್ಲಿ ಪಾಲ್ಗೊಳ್ಳುವಂತಿಲ್ಲ. ಸೂತಕ ಮುಗಿದ ಬಳಿಕ ತಮ್ಮ ಸಂಬಂಧಿಗಳಿಗೆ ಕರೆಯಿಸಿ, ಮೈನೆರೆದವಳ ಮೈಮೇಲೆ ಅರಿಷಿನ ಮತ್ತು ಸೀಗೆಪುಡಿ ಹಚ್ಚಿ ಎರೆಯುತ್ತಾರೆ. ಆಮೆಲೆ ಶಾಸ್ತ್ರದ ಅಕ್ಕಿಯನ್ನು ಹಾಕಿಸಿ ನಂತರ ಅವಳಿಗೆ ಹೊಸ ಸೀರೆ, ಕುಪ್ಪಸ ತೊಡಿಸಿ ಮೈಮೇಲೆ ಓಲೆ, ಮೂಗುತಿ ಮುಂತಾದ ಆಭರಣಗಳನ್ನು ಹಾಕಿ ಹಸೆಮಣೆಗೆ ಕರೆತಂದು ಮಂಗಲಹಾಡುಗಳನ್ನು ಹಾಡುತ್ತಾರೆ. ಮುತ್ತೈದೆಯರು ಹೊಸ ಬಟ್ಟೆ ಹಣ್ಣು-ಕಾಯಿಗಳನ್ನು ಕೊಟ್ಟು ಆರತಿ ಬೆಳಗುತ್ತಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಣ್ಣುಮಕ್ಕಳಿಗೆ ಸಿಹಿ ಅಡುಗೆಯ ಊಟ ಹಾಕುತ್ತಾರೆ. ಋತುಮತಿಗೆ-ನಾಲ್ಕೈದು ದಿನಗಳವರೆಗೆ ತುಪ್ಪ, ಕೊಬ್ಬರಿ, ತತ್ತಿ, ಮಾಂಸಾಹಾರದ ಅಡುಗೆಯನ್ನು ಊಟಕ್ಕೆ ಹಾಕುತ್ತಾರೆ.

) ಮದುವೆ ಸಂಪ್ರದಾಯ

ಗಂಡು ಹೆಣ್ಣು ವಯಸ್ಸಿಗೆ ಬಂದಾಗ ಕನ್ಯೆ ನೋಡಿ ಮದುವೆ ಮಾಡುವ ಪದ್ಧತಿ ಡಕ್ಕಲಿಗರಲ್ಲಿ ರೂಢಿಯಲ್ಲಿದೆ. ಪೂರ್ವದಲ್ಲಿ ಬಾಲ್ಯವಿವಾಹ ಪದ್ಧತಿ ರೂಢಿಯಲ್ಲಿತ್ತು. ಆದರೆ ಇಂದು ಈ ಪದ್ಧತಿ ಆಚರಣೆಯಲ್ಲಿರುವುದು ಕಂಡುಬರುವುದಿಲ್ಲ. ಸಾಮಾನ್ಯವಾಗಿ ಅಕ್ಕನ ಮಗಳನ್ನು, ಅತ್ತೆಯ ಮಗಳನ್ನು ಮದುವೆ ಆಗುತ್ತಾರೆ. ತಮ್ಮ ವೃತ್ತಿಗಾಗಿ ವಿವಿಧ ಪ್ರದೇಶಗಳಿಗೆ ಅಲೆಯುವ ಇವರಿಗೆ ಕನ್ಯೆ ನೋಡುವುದು ಕಷ್ಟದ ಕೆಲಸವೆನಿಲ್ಲ. ಬೇರೆ ಊರುಗಳಲ್ಲಿ ತಮ್ಮ ಸಮಾಜದ ಕನ್ಯೆ ಇದ್ದರೆ ಆ ಕುಟುಂಬದ ಯಜಮಾನನನ್ನು ಸಂಪರ್ಕಿಸಿ ಗೋತ್ರಗಳನ್ನು ತಿಳಿದುಕೊಂಡು ಕೊಡು-ಕೊಳೆಯ ಸಂಬಂಧ ಬೆಳೆಸಲು ಒಪ್ಪಿಗೆ ಮಾಡಿಕೊಳ್ಳುತ್ತಾರೆ. ಕನ್ನೆಯ ನೋಡಲು ಹೋಗುವ ಮುಂಚೆ ತಿಥಿ ನಕ್ಷತ್ರ ನೋಡಿ ನಾಲ್ಕಾರು ಜನ ಹಿರಿಯರು, ಮುತ್ತೈದೆಯರು ಹೋಗುತ್ತಾರೆ. ನೇರವಾಗಿ ಹೆಣ್ಣಿನವರ ಮನೆಗೆ ಬಂದಾಗ ಇವರನ್ನು ಬರಮಾಡಿಕೊಂಡು, ಕೈಕಾಲು ತೊಳೆಯಲಿಕ್ಕೆ ನೀರನ್ನು ಕೊಟ್ಟು, ಬಿಡಾರದ ಮುಂದೆ ಹಾಕಿರುವ ಚಾಪೆಯ ಮೇಲೆ ಕೂಡ್ರಿಸುತ್ತಾರೆ. ಕುಡಿಯಲಿಕ್ಕೆ ನೀರನ್ನು ಕೊಟ್ಟು ಗಂಡು-ಹೆಣ್ಣಿನ ತಾಯಿ-ತಂದೆಯರು ಹಿರಿಯರ ಸಮ್ಮುಖದಲ್ಲಿ ವೀಳ್ಯದೆಲೆಯನ್ನು ಸ್ವೀಕರಿಸಿಕೊಳ್ಳುತ್ತಾರೆ. ಮುತ್ತೈದೆಯರು ಕನ್ಯೆಯನ್ನು ಕರೆತಂದು ಹಿರಿಯರ ಎದುರಿಗೆ ಕೂಡ್ರಿಸುತ್ತಾರೆ. ಮುತ್ತೈದೆಯರು ಕನ್ಯೆಯ ಉಡಿಯಲ್ಲಿ ಉಡಿಅಕ್ಕಿ ಸಾಮಾನುಗಳನ್ನು ಹಾಕಿ ಹೆಸರು ಕೇಳುತ್ತಾರೆ. ಕನ್ಯೆ, ಗಂಡಿನವರಿಗೆ ಒಪ್ಪಿಗೆಯಾದರೆ ಮಾತುಕತೆ ಆರಂಭಿಸುತ್ತಾರೆ.

ಸಾಮಾನ್ಯವಾಗಿ ಡಕ್ಕಲಿಗರಲ್ಲಿ ತೆರವು ಕೊಡುವ ಪದ್ಧತಿ ರೂಢಿಯಿದೆ. ಪೂರ್ವದಲ್ಲಿ, ಗಂಡಿನವರು, ಹೆಣ್ಣಿನವರಿಗೆ ಹದಿನಾರುವರೆ ತೆರುವಿನ ರೂಪಾಯಿ ಕೊಡುತ್ತಿದ್ದರಂತೆ. ಆದರೆ ಇಂದು ತೆರುವಿನ ರೂಪಾಯಿ ಕೊಡುತ್ತಿದ್ದರಂತೆ. ಆದರೆ ಇಂದು ತೆರುವಿನ ರೂಪಾಯಿ ಇನ್ನೂರರವರೆಗೆ ಹೆಚ್ಚಾಗಿದೆ ಎಂದು ಹಿರಿಯರ ಅಭಿಪ್ರಾಯ. ಕೊಡು-ಕೊಳೆಯ ಮಾತುಕತೆ ಮುಗಿದ ಬಳಿಕ ತಮಗೆ ಅನುಕೂಲವಾಗುವಂತೆ ಮದುವೆ ದಿನಾಂಕ ನಿಗದಿ ಮಾಡಿಕೊಳ್ಳುತ್ತಾರೆ.

ಮದುವೆಯು ಸಾಮಾನ್ಯವಾಗಿ ವರನ ಮನೆಯ ಮುಂದೆ ನಡೆಯುತ್ತದೆ. ಮದುವೆಯ ಹಿಂದಿನ ದಿನ ಗುಡಿಸಲು ಅಥವಾ ಬಿಡಾರದ ಮುಂದೆ ನಾಲ್ಕು ಕಂಬಗಳನ್ನು ನೆಟ್ಟು ಹಂದರ ಹಾಕುತ್ತಾರೆ. ಹಂದರದ ಮೇಲೆ ಜೋಳದ ಕಣಿಕೆ ಹಾಕಿ ಹಂದರದ ಒಳಗಡೆ ಮಾವಿನ ತಳಿರು ನಾಲ್ಕು ಕಂಬಗಳಿಗೆ ತೆಂಗಿನ ಗರಿಗಳನ್ನು ಕಟ್ಟುತ್ತಾರೆ. ಸಂಜೆ ಮುತ್ತೈದೆಯರೊಡನೆ ಆರತಿಯ ತಟ್ಟೆ ಹಿಡಿದುಕೊಂಡು ಹೋಗಿ ಅತ್ತಿಯ ಹಾಗು ಹಾಲಗಂಬ (ಇವೆರಡು ಗಂಡು ಹೆಣ್ಣಿನ ಸಂಕೇತ) ತರುತ್ತಾರೆ. ಇವೆರಡು ಕಂಬಗಳನ್ನು ಚಪ್ಪರದ ಹಸೆಮಣಿಯ ಮುಂದೆ ನೆಡುತ್ತಾರೆ. ಮರುದಿವಸ ಬೆಳಗಿನ ಜಾವ ಹೆಣ್ಣಿನ ಮತ್ತು ಗಂಡಿನ ಕಡೆಯ ಮುತ್ತೈದೆಯರು ಹಿರಿಯರ ನೇತೃತ್ವದಲ್ಲಿ ಬಾವಿಗೆ ಹೋಗಿ ಸುರಗಿ ನೀರು ತರುತ್ತಾರೆ. ನೀರು ತುಂಬಿದ ಕೊಡಗಳನ್ನು ಹಂದರದ ಮಧ್ಯಭಾಗದಲ್ಲಿಡುತ್ತಾರೆ. ಹಂದರದ ಕೆಳಗಡೆ ಮಣೆಯ ಮೇಲೆ ವಧು ವರರನ್ನು ಕೊಡಿಸಿ ತಲೆಯ ಮೇಲೆ ಎಣ್ಣೆ ಹಾಕಿ ಅರಿಷಿಣ ಮಿಶ್ರಿತ ಎಣ್ಣೆ ಮೈಗೆ ಹಚ್ಚುತ್ತಾರೆ. ಆಮೇಲೆ ವಧುವರರ ತಾಯಂದಿರು ಮತ್ತು ಇಬ್ಬರು ಮುತ್ತೈದೆಯರು ಮಂಗಲ ಹಾಡುತ್ತ ಎರೆಯುತ್ತಾರೆ.

ವರನಿಗೆ ಧೋತರ,ಅಂಗಿ, ಟೊಪ್ಪಿಗೆ ಅಥವಾ ರುಮಾಲು ಅನುಕೂಲಸ್ಥರಿದ್ದರೆ ಬಂಗಾರ ಉಂಗುರ ಹಾಕುತ್ತಾರೆ. ವಧುವಿಗೆ ಸೀರೆ, ಕುಪ್ಪಸ, ಬಂಗಾರದ ಮೂಗುತಿ, ಬೆಳ್ಳಿಯ ಚೈನು ಮುಂತಾದ ಒಡವೆಗಳನ್ನು ಹಾಕಿ ವಧು-ವರರಿಬ್ಬರಿಗೂ ಬಾಸಿಂಗ ಕಟ್ಟಿ ಬಲಗೈಗೆ ವೀಳ್ಯದೆಲೆ, ಅರಿಷಿಣಕೊಂಬು ಕಟ್ಟಿ ಹಸೆಮಣಿಯ ಮೇಲೆ ಕರೆತಂದು ಕೂಡ್ರಿಸುತ್ತಾರೆ. ಪುರೋಹಿತರು ಮಂತ್ರ ಹೇಳಿದ ಬಳಿಕ ವರನು ವಧು ಕೊರಳಿಗೆ ತಾಳೆ ಕಟ್ಟುತ್ತಾನೆ. ಅಕ್ಷತೆ ಮುಗಿದ ಬಳಿಕ ಪುರೋಹಿತರಿಗೆ ೫೧ ರೂಪಾಯಿ, ಒಂದು ಸೇರು ಅಕ್ಕಿ, ಒಂದು ಸೇರು ಬೇಳೆ, ತೆಂಗಿನಕಾಯಿ ಕಾಣಿಕೆಯಾಗಿ ಕೊಡುತ್ತಾರೆ. ಮದುವೆಗೆ ಬಂದವರೆಲ್ಲರಿಗೂ ಸಿಹಿ ಅಡುಗೆಯ ಊಟ ಹಾಕುತ್ತಾರೆ.

ಮದುವೆಯಾಗಿ ಮೂರನೆಯ ದಿನಕ್ಕೆ ಹೆಣ್ಣಿನವರ ಮನೆಯಲ್ಲಿ ವಿಶೇಷವಾಗಿ ಬೀಗರ ಊಟವಿರುತ್ತದೆ. ಅವತ್ತಿನ ಊಟಕ್ಕೆ ಬೇರೆ ಬೇರೆ ಊರುಗಳಿಂದ ಬೀಗರು ಬಂದಿರುತ್ತಾರೆ. ಸಂಜೆಯ ಹೊತ್ತಿನಲ್ಲಿ ಹೆಣ್ಣಿನವರ ಮನೆಯ ಮುಂದೆ ಕೋಣವನ್ನು ಬಲಿಕೊಟ್ಟು ಮಾಂಸಾಹರದ ಅಡುಗೆ ಮಾಡುತ್ತಾರೆ. ಅಂದು ಬೀಗರಿಗೆ ಸೆರೆ, ಶಿಂದಿ ಕುಡಿಯಲಿಕ್ಕೆ ಕೊಟ್ಟು ಸಾಮೂಹಿಕವಾಗಿ ಮಾಂಸಾಹಾರದ ಅಡುಗೆ ಊಟವನ್ನು ಹಾಕುತ್ತಾರೆ.

ಪೂರ್ವದಲ್ಲಿ ಮೂರುದಿನಗಳವರೆಗೆ ನಡೆಯುತ್ತಿದ್ದ ಮದುವೆ ಕಾರ್ಯಗಳು ಇಂದು ಒಂದೇ ದಿನದಲ್ಲಿ ಮುಗಿದು ಹೋಗುವ ಒಂದು ರೀತಿಯ ಸಂಕ್ಷಿಪ್ತ ಮದುವೆ ರೂಢಿಗೆ ಬಂದಿದೆ ಎಂದು ಕೆಲವು ವೃದ್ಧರ ಅನಿಸಿಕೆ. ವ್ಯರ್ಥವಾಗಿ ದುಂದುವೆಚ್ಚ ಮಾಡುವುದು ಕಂಡು ಬರುವುದಿಲ್ಲ. ಕಡುಬಡವರಾದುದರಿಂದ ಇದ್ದುದರಲ್ಲಿಯೇ ಸರಳ ರೀತಿಯಲ್ಲಿ ಮದುವೆಕಾರ್ಯ ಮಾಡಿಕೊಳ್ಳುತ್ತಾರೆ.

) ಮರಣ ಸಂಸ್ಕಾರ

ಸತ್ತವರನ್ನು ಹೂಳುವುದು ಸಾಮಾನ್ಯವಾಗಿ ಡಕ್ಕಲಿಗರಲ್ಲಿ ಕಂಡು ಬರುತ್ತದೆ. ಆದರೆ ಕೆಲವೊಮ್ಮೆ ಹಿರೇಬ್ಯಾನಿ ಗಾಳಿಶಕಾ ಆಗಿ ಸತ್ತವರಿಗೆ ಸುಡುತ್ತಾರೆ. ಸಾಯುವ ಸಮಯದಲ್ಲಿ ಕುಟುಂಬದ ಹಿರಿಯ ಮಗನಿದ್ದರೆ, ಅವನ ಕೈಯಿಂದ ಬಾಯಲ್ಲಿ ನೀರು ಸಾಕಿಸುತ್ತಾರೆ. ಇದು ಕೊನೆಯ ಋಣಾಬಂಧ ಎಂದು ಹೇಳುತ್ತಾರೆ. ಸತ್ತಬಳಿಕ ಶವಕ್ಕೆ ಮಲಗಿಸುತ್ತಾರೆ. ಕೆಲವರು ಗೋಡೆಗೆ ಆಧಾರವಾಗಿ ಗೂಟಬಡಿದು ಹಣೆಗೆ ವಿಭೂತಿ, ಕುಂಕುಮ ಹಚ್ಚಿ ಕೂಡ್ರಿಸುತ್ತಾರೆ. ಸಮಾಜದ ಬಂಧು ಬಾಂಧವರಿಗೆ ಸತ್ತ ಸುದ್ಧಿ ತಲುಪಿಸುತ್ತಾರೆ. ವೃತ್ತಿಗಾಗಿ ಚದುರಿ ಹೋಗಿರುವ ಗುಂಪಿನ ಜನರಿಗೆ ಕೆಲವೊಮ್ಮೆ ಸುದ್ಧಿ ತಿಳಿಯದೆ ಇರಬಹುದು. ಅಂಥವರು ಹನ್ನೊಂದನೆಯ ದಿನದ ‘ಅನ್ನಹಾಕುವ’ ಕಾರ್ಯದಲ್ಲಿ ತಪ್ಪದೇ ಬಂದು ಪಾಲ್ಗೊಳ್ಳುತ್ತಾರೆ. ಬೀಗರು ಬಂದ ಸೇರಿದ ಬಳಿಕ ಶವಕ್ಕೆ ಸ್ನಾನಮಾಡಿಸಿ ಹೊಸ ಬಟ್ಟೆ ತೊಡಿಸಿ ಚಟ್ಟದ ಮೇಲೆ ಮಲಗಿಸುತ್ತಾರೆ. ಶವವನ್ನು ಹೊತ್ತುಹೋಗುವ ಸಂದರ್ಭದಲ್ಲಿ ಕಡಲೆಪುರಿಯನ್ನು ಚೆಲ್ಲುತ್ತ ಹೋಗುತ್ತಾರೆ. ಶವಯಾತ್ರೆಯಲ್ಲಿ ಗಂಡಸರು, ಹೆಂಗಸರು ಮತ್ತು ಮಕ್ಕಳೂ ಸಹ ಪಾಲ್ಗೊಳ್ಳುತ್ತಾರೆ.

ಡಕ್ಕಲಿಗರಲ್ಲಿ ಯಾರಾದರೂ ಸತ್ತರೆ ಆ ಊರಿನ ಪಡದಯ್ಯನವರಿಗೆ ಸುದ್ದಿ ತಲುಪಿಸುತ್ತಾರೆ. ಶವಸಂಸ್ಕಾರದಲ್ಲಿ ಪಾಲ್ಗೊಂಡ ಪಡೆದಯ್ಯನವರು ಪ್ರಾಣ ಬಿಟ್ಟ ಸ್ಥಳದಲ್ಲಿ, ಕುಣಿ ತೋಡುವಲ್ಲಿ ಮತ್ತು ಹುಗಿಯುವ ಜಾಗದಲ್ಲಿ ಪೂಜೆಕಾರ್ಯ ಮಾಡಬೇಕಾಗುತ್ತದೆ. ಪಡದಯ್ಯನವರು ಪೂಜೆ ಮಾಡಿಕೊಟ್ಟ ಮೇಲೆ ಶವವನ್ನು ಗುಂಡಿಯಲ್ಲಿ ಹುಗಿಯುತ್ತಾರೆ. ಮದುವೆ ಆದವರಿಗೆ ಅಂಗಾತವಾಗಿ ಮತ್ತು ಮದುವೆ ಆಗದೆ ಸತ್ತವರಿಗೆ ಬೋರಲಾಗಿ ಮಲಗಿಸಿ ಹುಗಿಯುತ್ತಾರೆ.

ವೃತ್ತಿಗಾಗಿ ವಿವಿಧ ಪ್ರದೇಶಗಳಿಗೆ ಚದುರಿ ಹೋಗಿದ್ದಾಗ ಆಕಸ್ಮಾತ್‌ ನಿಧನವಾದರೆ ಕುಟುಂಬದ ಸದಸ್ಯರು ಆ ಊರಿನ ಪಡದಯ್ಯನವರಿಗೆ ಸುದ್ದಿ ತಿಳಿಸುತ್ತಾರೆ. ಆಗ ಅವರು ಸ್ಮಶಾನಭೂಮಿಯಲ್ಲಿ ಶವಸಂಸ್ಕಾರ ಮಾಡಲು ಯೋಗ್ಯವಾದ ಜಾಗವನ್ನು ಅಳೆದು ಕೊಡುತ್ತಾರೆ. ಇವೆತ್ತಿಗೂ ಈ ಪದ್ಧತಿ ರೂಢಿಯಲ್ಲಿದೆ.

ಸಂಸ್ಕಾರಕಾರ್ಯ ಮುಗಿದ ನಂತರ ಪಡದಯ್ಯನವರಿಗೆ ಐದು ರೂಪಾಯಿ ಛಾಜನ್ನು ಕೊಡುತ್ತಾರೆ. ಕೆಲವರು ಹಿರೇಮಠದಲ್ಲಿ ಪಾದದಿಂದ ಅಳೆದು ಜಾಗ ತೋರಿಸಿ ಗುದ್ದಲಿಯಿಂದ ಕಚ್ಚು ಹಾಕಿ ಕೊಟ್ಟರೆ ಅವರಿಗೆ ಎರಡೂವರೆ ರೂಪಾಯಿ ಛಾಜ ಕೊಡುತ್ತೇವೆಂದು ಹೇಳುತ್ತಾರೆ. ಇತ್ತೀಚೆಗೆ ಪಡದಯ್ಯನವರಿಗೆ ಇಪ್ಪತ್ತು-ಮುವತ್ತು ರೂಪಾಯಿ ಕೊಡಬೇಕಾಗುತ್ತದೆಂದು ಕೆಲ ವೃದ್ಧರು ಹೇಳುತ್ತಾರೆ.

ಸತ್ತ ಮೂರನೆಯ ದಿನಕ್ಕೆ ಕಹಿ ಬಾಯಿ ತೊಳೆಸುವ ಕಾರ್ಯ ಮಾಡುತ್ತಾರೆ. ಸಮಾಜದ ಜನರು ಕುಟುಂಬದ ಹಿರಿಯ ಮಗನಿಗೆ ತಿಪ್ಪೆಯಲ್ಲಿ ನಿಲ್ಲಿಸಿ ಅದೇ ಊರಿನ ಮಾದಿಗರಿಂದ ಸಿಹಿ ಪದಾರ್ಥ ಕೊಡಿಸುತ್ತಾರೆ. ಈ ಸಂದರ್ಭದಲ್ಲಿ ಪಾಲ್ಗೊಂಡವರು ಸತ್ತ ಕುಟುಂಬದವರಿಗೆ ಸಾಂತ್ವನ ಹೇಳಿ ಹೋಗುತ್ತಾರೆ.

ಹನ್ನೊಂದನೆಯ ದಿನಕ್ಕೆ ಅನ್ನಹಾಕುವ ಕಾರ್ಯ ಮಾಡುತ್ತಾರೆ. ಶವ ಸಂಸ್ಕಾರದಲ್ಲಿ ಪಾಲ್ಗೊಳ್ಳದಿರುವವರು ಈ ಕಾರ್ಯದಲ್ಲಿ ಬಂದು ಪಾಲ್ಗೊಳ್ಳುತ್ತಾರೆ. ಸತ್ತವ್ಯಕ್ತಿಯು ಇಷ್ಟಪಡುತ್ತಿದ್ದ ಆಹಾರ ಪಾನೀಯಗಳನ್ನು ಎಡೆ ಹಿಡಿಯುತ್ತಾರೆ. ಉದಾ: ಬೀಡಿ, ಸೆರೆ, ಶಿಂದಿ, ಗಾಂಜಾ, ತಂಬಾಕ, ಮಾಂಸಾಹಾರದ ಅಡುಗೆ ಮುಂತಾದವುಗಳನ್ನು ಸಮಾಧಿಯ ಹತ್ತಿರ ಇಡುತ್ತಾರೆ. ಈ ಕಾರ್ಯದಲ್ಲಿ ಪಾಲ್ಗೊಂಡವರಿಗೆ ಮಾಂಸಾಹಾರದ ಊಟ ಹಾಕುತ್ತಾರೆ.

ಒಟ್ಟಿನಲ್ಲಿ ಶಿವನ ಅನುಯಾಯಿಗಳೆಂದು ಹೇಳಿಕೊಳ್ಳುವ ಡಕ್ಕಲಿಗರು ಹೊಲೆ ಮಾದಿಗರ ಸ್ಮಶಾನದಲ್ಲಿ ಶವ-ಸಂಸ್ಕಾರ ಮಾಡದಿರುವುದು ಅಚ್ಚರಿಯ ಸಂಗತಿ. ಒಂದು ದೃಷ್ಟಿಯಲ್ಲಿ ಇವರ ಶವ-ಸಂಸ್ಕಾರ ಕಾರ್ಯವೂ ಬಹಳಷ್ಟು ಕುತೂಹಲಕಾರಿಯಾಗಿರುವುದು ವಿಸ್ಮಯ ಸಂಗತಿ.[1] ಕರ್ನಾಟಕದ ಹೆಳವರು ಒಂದು ಜಾನಪದೀಯ ಅಧ್ಯಯನ.. ಡಾ. ಹರಿಲಾಲ ಪವಾರ ೧೯೯೫ ಪುಟ ೧೦೯.