ವರ್ಷದ ಬಹುಭಾಗ ನಮ್ಮ ದೇಶದಲ್ಲಿ ತಂಪು ಪಾನೀಯಗಳಿಗೆ ಬೇಡಿಕೆಯಿದೆ. ಈ ಪೈಕಿ ಫಲಸಾರ ಪಾನೀಯಗಳಿಗೆ ಮಹತ್ವದ ಸ್ಥಾನವಿದೆ. ಇಂತಹ ಪಾನೀಯಗಳಲ್ಲಿ ನಮಗೆ ಅಗತ್ಯವಾದ ಲವಣಗಳು ಮತ್ತು ಇತರ ಪೌಷ್ಟಿಕಾಂಶಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಹೆಚ್ಚು ಜನಪ್ರಿಯವಾಗಿದೆ. ಅಲ್ಲದೆ, ಅವು ರುಚಿಕರವಾಗಿರುವುದರಿಂದ ಎಲ್ಲರಿಗೂ ಹಿತಕರ ಪಾನೀಯಗಳಾಗಿವೆ.

ಕೃತಕ ಪಾನೀಯಗಳಾದ ‘ಕ್ರಷ್’ ಬಗೆಯ ವಸ್ತುಗಳನ್ನು ನಮ್ಮ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ತಯಾರಕರು ಉತ್ಪಾದನೆ ಮಾಡುತ್ತಿದ್ದಾರೆ. ಆದರೆ ಫಲಸಾರ ಪಾನೀಯಗಳಂತೆ ಇವುಗಳಲ್ಲಿ ಪೌಷ್ಟಿಕಾಂಶಗಳಲ್ಲಿರುವುದಿಲ್ಲ. ಲಿಮೊನೆಡ್, ಆರೆಂಜೆಡ್, ಸ್ಟ್ರಾಬೆರ್ರಿ, ನಿಂಬೆಹಣ್ಣಿನ ರಸ ಮತ್ತು ಷರಬತ್ತು ರೂಪಾಯಿಗಳಲ್ಲಿ ಪ್ರತಿ ವರ್ಷ ಇಂತಹ ಲಕ್ಷಾಂತರ ಸೀಸೆಗಳು ನಮ್ಮ ದೇಶದ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುತ್ತವೆ. ಇವು ಇಂಗಾಲದ ಡೈ ಆಕ್ಸೈಡ್ ಸೇರಿಸಿರುವ ಕೃತಕ ಪಾನೀಯಗಳು. ಇವುಗಳ ಬದಲು ನೈಜವಾದ ಫಲಸಾರ ಪಾನೀಯಗಳನ್ನು ತಯಾರಿಸಿದರೆ, ಹಣ್ಣು ಬೆಳೆಯುವವರಿಗೆ ಮತ್ತು ಪಾನೀಯಗಳನ್ನು ಸೇವಿಸುವವರಿಗೆ ಬಹಳ ಅನುಕೂಲವಾಗುತ್ತದೆ. ಈ ದೃಷ್ಟಿಯಿಂದ ಇಂತಹ ವರ್ಗದ ಪಾನೀಯ ತಯಾರಿಸಲು ನಮ್ಮ ದೇಶದಲ್ಲಿ ಹೆಚ್ಚಿನ ಅವಕಾಶವಿದೆ.

ಕಳೆದ ಎರಡು ದಶಕಗಳಿಂದ ಹಣ್ಣಿನ ವ್ಯವಸಾಯ ಕ್ಷೇತ್ರದಲ್ಲಿ ವ್ಯಾಪಕ ಪ್ರಗತಿಯಾಗಿದೆ. ಇದರ ಫಲವಾಗಿ ಆಗತಾನೇ ಕಿತ್ತಳೆ ಹಣ್ಣಿನ ರಸ ತಯಾರಿಸಿ ನಮ್ಮ ದೇಶದ ಹಲವು ದೊಡ್ಡ ನಗರಗಳಲ್ಲಿ ವ್ಯಾಪಾರಿಗಳು ಮಾರುತ್ತಿದ್ದಾರೆ. ಇಂತಹ ಹಣ್ಣಿನ ರಸದ ಬಳಕೆ ಹೆಚ್ಚಾಗುತ್ತ ಬರುತ್ತಿದೆ. ಆದರೆ ಹಣ್ಣು ದೊರೆಯುವ ಆಕಾಲದಲ್ಲಿ ಈ ರೀತಿ ರಸ ಪಡೆಯಲು ಸಾಧ್ಯವಿರುವುದಿಲ್ಲ. ಆದುದರಿಂದ ಹಣ್ಣು ರಸವನ್ನು ಸೂಕ್ತವಿಧಾನದಿಂದ ಕಾಪಾಡಿ, ಆಕಾಲದಲ್ಲಿ ಬಳಸುವ ಅಗತ್ಯ ಈಗ ಬಂದಿದೆ.

೧೯೩೦ನೆಯ ಇಸವಿಯವರೆಗೆ ವಾಣಿಜ್ಯ ಮಟ್ಟದಲ್ಲಿ ಹಣ್ಣಿನ ಪಾನೀಯಗಳನ್ನು ತಯಾರಿಸುವ ಪದ್ಧತಿ ನಮ್ಮ ದೇಶದಲ್ಲಿರಲಿಲ್ಲ. ಆದರೆ ಈಗ ಸುಮಾರು ೩೦ ಲಕ್ಷ ಸೀಸೆಗಳಿಗಿಂತ ಹೆಚ್ಚಾಗಿ ಪ್ರತಿ ವರ್ಷ ಸ್ಕ್ವಾಷ್ ಮತ್ತು ಕಾರ್ಡಿಯಲ್‌ಗಳು ತಯಾರಾಗುತ್ತಿವೆ. ಇಂಗಾಲದ ಡೈ ಆಕ್ಸೈಡ್ ಸೇರಿಸಿ, ಪಾನೀಯಗಳನ್ನು ತಯಾರಿಸುವ ಕಾರ್ಖಾನೆಗಳು ಕೃತಕ ಬಣ್ಣ ಮತ್ತು ವಾಸನೆ ನೀಡುವ ವಸ್ತುಗಳ ಬದಲು, ಶುದ್ಧವಾದ ಹಣ್ಣಿನ ರಸವನ್ನು ಬಳಸಿದರೆ, ಪ್ರತಿ ವರ್ಷವೂ ಸಾವಿರಾರು ಟನ್ ಹಣ್ಣಿನ ಬೇಡಿಕೆ ಅಧಿಕವಾಗುತ್ತದೆ.

ಅಮೆರಿಕ ದೇಶದ ಸಂಯುಕ್ತ ಸಂಸ್ಥಾನಗಳಲ್ಲಿ ಪ್ರತಿ ವರ್ಷ ಸುಮಾರು ೧೦ ಕೋಟಿ ಗ್ಯಾಲನ್ ಹಣ್ಣಿನ ರಸ ಉತ್ಪಾದನೆಯಾಗುತ್ತಿದೆ. ಹದಿನೈದು ವರ್ಷಗಳ ಹಿಂದೆ ಅಲ್ಲಿ ಕೇವಲ ದ್ರಾಕ್ಷಿ ಮತ್ತು ಸೇಬಿನ ರಸಗಳನ್ನು ಮಾತ್ರ ಭಾರಿ ಪ್ರಮಾಣದಲ್ಲಿ ಈ ರೀತಿ ತಯಾರಿಸುತ್ತಿದ್ದರು ಮಕ್ಕಳಿಗೆ ಮತ್ತು ನಿಶ್ಶಕ್ತರಿಗೆ ಅಧಿಕ ಪ್ರಮಾಣದಲ್ಲಿ ಪಥ್ಯಾಹಾರವಾಗಿ ಹಣ್ಣಿನ ರಸಗಳನ್ನು ಅಲ್ಲಿಯ ಜನ ಬಳಸುತ್ತಿದ್ದರು. ಆದರೆ, ಈಗ ಬೆಳಗಿನ ಫಲಾಹಾರದಲ್ಲಿ ಶುದ್ಧವಾದ ಹಣ್ಣಿನ ರಸದ ಬಳಕೆಯೂ ಜನಪ್ರಿಯವಾಗಿದೆ. ಇದರ ಪರಿಣಾಮವಾಗಿ ಕಿತ್ತಳೆ, ಅನಾನಸ್, ಟೊಮೆಟೊ, ಗ್ರೇಪ್ ಫ್ರೂಟ್, ಸೇಬು ಮತ್ತು ದ್ರಾಕ್ಷಿ ಮುಂತಾದ ವಿವಿಧ ಬಗೆಯ ಹಣ್ಣುಗಳನ್ನು ಈ ರೀತಿಯ ಹಣ್ಣಿನ ರಸಗಳನ್ನು ತಯಾರಿಸಲು ಕಾರ್ಖಾನೆಗಳಲ್ಲಿ ಉಪಯೋಗಿಸುತ್ತಿದ್ದಾರೆ. ಹುಳಿನಿಂಬೆ, ಗಜನಿಂಬೆ (ಲೆಮನ್), ಟ್ಯಾಂಜೆರಿನ್, ಲೊಗನ್ ಬೆರ್ರಿ, ಚೆರ್ರಿ, ಬ್ಲ್ಯಾಕ್ ಬೆರ್ರಿ, ಯಂಗ್ ಬೆರ್ರಿ, ಏಪ್ರಿಕಾಟ್, ಪೀಚ್, ಫ್ರೂನ್, ದ್ವೀಪ ದ್ರಾಕ್ಷಿ, ದಾಳಿಂಬೆ, ಪರಂಗಿಹಣ್ಣು, ಕ್ಯೂರಂಟ್ ಮತ್ತು ಪೇರು ಹಣ್ಣುಗಳ ರಸವನ್ನು ಸಹ ಅಲ್ಪ ಪ್ರಮಾಣದಲ್ಲಿ ಅಲ್ಲಿ ತಯಾರಿಸುತ್ತಿದ್ದಾರೆ. ಹುಳಿ ಅಧಿಕವಿರುವ ಹಣ್ಣುಗಳ ರಸದಿಂದ ಮಿಶ್ರ ಪಾನೀಯಗಳು ಮತ್ತು ಬೇಕರಿ ವರ್ಗದ ವಸ್ತುಗಳನ್ನು ತಯಾರಿಸಬಹುದು. ಇವು ಈಗ ಸೇಬು ಮತ್ತು ದ್ರಾಕ್ಷಿ ಹಣ್ಣುಗಳಿಗೆ ಇಂಗಾಲದ ಡೈ ಆಕ್ಸೈಡ್ ಸೇರಿಸಿದ ಪಾನೀಯಗಳಿಗಿಂತ ಹೆಚ್ಚು ಜನಪ್ರಿಯವಾಗುತ್ತಿವೆ.

ಇಂಗಾಲದ ಡೈ ಆಕ್ಸೈಡ್ ಸೇರಿಸಿದ ಪಾನೀಯಗಳಿಗಿಂತ, ಶುದ್ಧವಾದ ಹಣ್ಣಿನ ರಸ ತಯಾರಿಸಿದ ಕೈಗಾರಿಕೆ ನಮ್ಮ ದೇಶದಲ್ಲಿ ಇನ್ನೂ ಪ್ರಾರಂಭದೆಸೆಯಲ್ಲಿದೆ. ಈಗ ಬಹುಪಾಲು ಇವುಗಳ ಉತ್ಪಾದನೆ ಗೃಹಮಟ್ಟದಲ್ಲಿ ನಡೆಯುತ್ತಿದೆ. ದ್ರಾಕ್ಷಿ, ಸೇಬು, ದಾಳಿಂಬೆ, ಹಿಪ್ಪುನೇರಳೆ, ನೇರಳೆ, ಫಾಲ್ಸ ಮತ್ತು ಮಾವಿನಹಣ್ಣುಗಳನ್ನು ರಸ ತಯಾರಿಸಲು ಉಪಯೋಗಿಸಬಹುದು. ಜನಸಾಮಾನ್ಯರ ನಿತ್ಯದ ಊಟದಲ್ಲಿ ಹಣ್ಣಿನ ರಸಗಳ ಬಳಕೆಯಿರುವುದರಿಂದ ವಾಣಿಜ್ಯ ಮಟ್ಟದಲ್ಲಿ ಇವುಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲು ಅವಕಾಶವಿಲ್ಲ. ಆದರೆ ಬಹುಮಟ್ಟಿಗೆ ಟೊಮ್ಯಾಟೊ ರಸಕ್ಕೆ ಮಾತ್ರ ಈ ರೀತಿ ಬೇಡಿಕೆಯಿರುವುದರಿಂದ, ಇದರ ಉತ್ಪಾದನೆಗೆ ಅವಕಾಶವಿದೆ. 

ಷರಬತ್ತು ತಯಾರಿಸುವ ಪದ್ಧತಿ ನಮ್ಮ ದೇಶದಲ್ಲಿ ಅನಾದಿಕಾಲದಿಂದ ಬೆಳೆದು ಬಂದಿದೆ. ಹಣ್ಣು ಮತ್ತು ಮೂಲಿಕೆಗಳ ಕೃತಕ ಪರಿಮಳ ಬೀರುವ ರಾಸಾಯಕಗಳನ್ನು ಸಕ್ಕರೆ ಪಾಕದೊಡನೆ ಬೆರೆಸಿದಾಗ ಈ ರೀತಿಯ ಕೃತಕ ಪಾನೀಯ ಷರಬತ್ತು ಸಿದ್ಧವಾಗುತ್ತದೆ.

ದೇಶದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಕಿತ್ತಳೆ ಹನ್ಣಿನ ಸ್ಕ್ವಾಪ್, ಗಜನಿಂಬೆ (ಲೆಮನ್) ಸ್ಕ್ವಾಪ್, ನಿಂಬೆರಸದ ಕಾರ್ಡಿಯಲ್, ಅನಾನಸ್ ಸ್ಕ್ವಾಷ್ ಮತ್ತು ಮಾವಿನ ಹಣ್ಣಿನ ಸ್ಕ್ವಾಷ್‌ನ್ನು ವಾಣಿಜ್ಯ ಮಟ್ಟದಲ್ಲಿ ತಯಾರಿಸುವ ಕೈಗಾರಿಕೆ ಗಮನಾರ್ಹವಾದ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದೆ. ದೇಶದ ವಿಭಜನೆಗೆ ಮುನ್ನ ಲ್ಯಾಲ್ ಪುರ ಮತ್ತು ಕ್ವೆಟ್ಟಾಗಳಲ್ಲಿದ್ದ ಸಂಶೋಧನಾಲಯದಲ್ಲಿ ಷ್ಯಾಷನ್ ಹಣ್ಣಿನಸ್ಕ್ವಾಷ್, ದಾಳಿಂಬೆ ಹಣ್ಣಿನ ಸಿರಪ್, ಹಿಪ್ಪೆನೇರಳಸ ಸಿರಪ್, ದ್ವೀಪದ್ರಾಕ್ಷಿ, ಸ್ಕ್ವಾಷ್ ಮುಂತಾದ ಹಣ್ಣಿನ ಪಾನೀಯಗಳನ್ನು ತಯಾರಿಸುವ ವಿಧಾನಗಳನ್ನು ಕಂಡುಹಿಡಿಯಲಾಯಿತು. ಈ ಪಾನೀಯಗಳನ್ನು ತಯಾರಿಸಲು ಒಳ್ಳೆಯ ಅವಕಾಶವಿದೆಯೆನ್ನಬಹುದು. ಆದರೆ ಈ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಬೇಕಾದರೆ, ಅವುಗಳ ಪೌಷ್ಟಿಕಾಂಶವನ್ನು ಜನತೆಗೆ ತಿಳಿಸುವ ಪ್ರಚಾರ ಕಾರ್ಯ ನಡೆಯಬೇಕಾಗಿದೆ.

ಹಣ್ಣಿನ ರಸಗಳ ತಯಾರಿಕೆಗೆ ಬೇಕಾದ ಸಾಧನ ಸಲಕರಣೆಗಳು

ಇತ್ತೀಚಿನವರೆಗೆ ವೈನ್, ವಿನಿಗರ್ ಮುಂತಾದವುಗಳನ್ನು ತಯಾರಿಸಲು ಬಳಸುವ ಸಲಕರಣೆಗಳನ್ನೇ ಹಣ್ಣಿನ ರಸಗಳನ್ನು ತಯಾರಿಸಲು ಸಹ ಉಪಯೋಗಿಸಲಾಗುತ್ತಿತ್ತು. ಆದರೆ ಈಗ ಅಮೇರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಮತ್ತು ಇಂಗ್ಲೆಂಡಿನಲ್ಲಿ ಈ ಕೈಗಾರಿಕೆ ಸ್ವಂತ ರೀತಿಯಲ್ಲಿ ಪ್ರಗತಿ ಹೊಂದುತ್ತಿದೆ. ಇದರ ಪರಿಣಾಮವಾಗಿ ಈಗ ಮನೆಮಟ್ಟದಲ್ಲಿ ಬಳಸುವ ಹಣ್ಣನ್ನು ಹಿಂಡಿ ರಸ ತೆಗೆಯುವ ಸರಳವಾದ ಉಪಕರಣದಂತೆ ದಿನಂಪ್ರತಿ ಹಲವು ಲಕ್ಷ ಸೀಸೆ ಹಣ್ಣುಗಳ ರಸ ಉತ್ಪಾದಿಸಲು ಸ್ವಯಂಚಾಲಿತ ಯಂತ್ರಗಳನ್ನು ಈಗ ನಾವು ಪಡೆಯುವುದು ಸಾಧ್ಯವಾಗಿದೆ. ನಿಂಬೆ ಜಾತಿ ಹಣ್ಣಿನ ರಸ ತೆಗೆಯುವ ಕೈಗಾರಿಕೆಯು ಈಗ, ಹೀಗೆ ಹಣ್ಣಿನ ರಸ ತೆಗೆಯುವ ಕೈಗಾರಿಕೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ. ಈ ಕೈಗಾರಿಕಕೆ ಲಾಭದಾಯಕವಾಗಿ ಕಾರ್ಯನಿರ್ವಹಿಸಲು ಸೂಕ್ತ ಯಂತ್ರೋಕರಣಗಳ ಬಳಕೆ ಅತ್ಯಗತ್ಯವಾಗಿದೆ. 

ಹಣ್ಣುಗಳನ್ನು ತೊಳೆಯುವ ಸಾಧನ: ಸೇಬು, ನಿಂಬೆಜಾತಿಯ ಹಣ್ಣುಗಳು, ಟೊಮೆಟೊ, ಬೆರ್ರಿ ಇವೇ ಮುಂತಾದ ಹಣ್ಣುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಲು ಪ್ರತ್ಯೇಕ ಯಂತ್ರಗಳಿವೆ. ಮೃದುವಾದ ಟೊಮೆಟೋ ಮತ್ತು ಬೆರ್ರಿಗಳನ್ನು ಸಾಮಾನ್ಯವಾಗಿ ಮೇಲಿರುವ ನೀರನ್ನು ಚಿಮುಕಿಸಿ ತೊಳೆಯಬಹುದು. ಹೀಗೆ ಮಾಡುವಾಗ ಹಣ್ಣುಗಳು ಎಡೆಬಿಡದೆ ಚಲಿಸುವ ತಂತಿಯ ಪಟ್ಟಿಯ ಮೇಲೆ ಮುಂದೆ ಸಾಗುತ್ತಿರಬೇಕು. ಸೂಕ್ತವಾದ ಗಾತ್ರದ ಸಿಮೆಂಟು ಅಥವಾ ಸತುವಿನ ತಗಡಿನ ತೊಟ್ಟಿಗಳನ್ನು ಸಣ್ಣ ಪ್ರಮಾಣದಲ್ಲಿ ಕೈಗಾರಿಕೆಗಳಲ್ಲಿ ಬಳಸಬಹುದು. ಮಧ್ಯಮ ವರ್ಗದ ಕಾರ್ಖಾನೆಗಳಲ್ಲಿ ಇಂತಹ ಹಲವು ತೊಟ್ಟಿಗಳು ಬೇಕಾಗುತ್ತದೆ.

ಹಣ್ಣುಗಳನ್ನು ಆಯ್ಕೆ ಮಾಡುವ ಸಾಧನ : ಹಣ್ಣುಗಳನ್ನು ವಿಂಗಡಿಸಲು ಭಾರಿ ಕಾರ್ಖಾನೆಗಳಲ್ಲಿ ಎಡೆಬಿಡದೆ ಚಲಿಸುವ ಲೋಹದಿಂದ ಹೆಣೆದ ಅಗಲವಾದ ಪಟ್ಟಿಗಳನ್ನು ಉಪಯೋಗಿಸುತ್ತಾರೆ. ಸಣ್ಣ ಕಾರ್ಖಾನೆಗಳಲ್ಲಿ ಹಣ್ಣುಗಳನ್ನು ಗುಂಪು ಗುಂಪಾಗಿ ವಿಂಗಡಿಸುವ ಏರ್ಪಾಟು ಸಾಕಾಗುತ್ತದೆ.

ರಸ ಹಿಂಡುವ ಸಾಧನ: ಹಣ್ಣುಗಳಿಂದ ಎರಡು ರೀತಿಯಲ್ಲಿ ರಸ ಹಿಂಡಬಹುದು. ಹಣ್ಣುಗಳನ್ನು ಏಕಕಾಲದಲ್ಲಿ ಜಜ್ಜಿ ರಸ ಹಿಂಡುವುದು ಮೊದಲನೆಯ ಬಗೆ ಹಣ್ಣುಗಳನ್ನು ಸಣ್ಣ ಹೋಳುಗಳಾಗಿ ಮಾಡಿ ಅನಂತರ ರಸ ಹಿಂಡುವುದು ಎರಡನೆಯ ಬಗೆ.

ನಿಂಬೆ ಜಾತಿಯ ಹಣ್ಣುಗಳಲ್ಲಿ ರಸ ಸಣ್ಣದಾಗಿರುವ ಕೋಶಗಳಲ್ಲಿರುತ್ತದೆ. ಇದಲ್ಲದೆ ಹಣ್ಣಿಗೆ ಅಂಟಿಕೊಂಡಿರುವ ಇತರ ಊತಕಗಳೂ ಅಲ್ಲಿರುತ್ತದೆ. ಸಿಪ್ಪೆಯಲ್ಲಿ ಅಲ್ಬಿಡೊ ಎಂಬ ಸ್ಪಂಜಿನಂತಹ ಮೃದುವಾದ, ಬಿಳಿಯ ಒಳಭಾಗವಿರುತ್ತದೆ. ಇದರ ಹೊರಭಾಗಕ್ಕೆ ಹಳದಿ ಬಣ್ಣವಿರುತ್ತದೆ. ಇದನ್ನು ಪ್ಲೆವೆಡೋ ಎಂದು ಕರೆಯುತ್ತಾರೆ. ಸುವಾಸನೆಯ ತೈಲ ನೀಡುವ ಕೋಶಗಳು ಫ್ಲೆವೆಡೋನಲ್ಲಿರುತ್ತದೆ. ಸ್ವಲ್ಪ ಒತ್ತಡ ನೀಡಿದಾಗ ಇವು ಒಡೆಯುತ್ತದೆ.ಹಾಗೆಯೇ ರಸದಲ್ಲಿ ಕಹಿಯುಂಟು ಮಾಡುವ ವಸ್ತುಗಳು ಸಹ ಹಣ್ಣಿನಲ್ಲಿರುತ್ತವೆ. ಇವು ಪ್ರಧಾನವಾಗಿ (೧)ರಸಕೋಶಗಳಲ್ಲಿರುವ ಹಣ್ಣಿನ ಊತಕಗಳಲ್ಲಿ, (೨) ಪ್ಲೆವೆಡೋದ ಒಳಭಾಗಗಳಲ್ಲಿ, (೩) ಅಲ್ಬಿಡೋದಲ್ಲಿ, ಮತ್ತು (೪)ಬೀಜಗಳಲ್ಲಿರುತ್ತವೆ. ಇವು ಕಹಿರಹಿತ ರಸಪಡೆಯಲಿ ಅಡ್ಡಿ ಮಾಡುತ್ತವೆ. ಹಣ್ಣಿನ ರಸಕೋಶಗಳ ಸುತ್ತಮುತ್ತಲಿನ ಊತಕಗಳ ಸಂಪರ್ಕವಿಲ್ಲದೆ ನೇರವಾಗಿ ಕೋಶಗಳಿಂದ ರಸ ಹಿಂಡುವ ಯಂತ್ರೋಪಕರಣ ಆದರ್ಶವಾದುದು. ಆದರೆ ಇದುವರೆಗೆ ಅಂತಹ ಯಾವ ಯಾಂತ್ರಿಕ ಸಾಧನವೂ ಬಳಕೆಗೆ ಬಂದಿಲ್ಲ. ಈಗಿರುವ ಸಾಧನಗಳನ್ನು ಬಳಸಿದಾಗ, ವಿವಿಧ ಪ್ರಮಾಣಗಳಲ್ಲಿ ಕಹಿವಸ್ತುಗಳು ರಸದಲ್ಲಿ ಉಳಿಯುತ್ತವೆ. ಸಾಮಾನ್ಯವಾಗಿ ಈ ಮುಂದೆ ತಿಳಿಸಿರುವ ನಾಲ್ಕು ಬಗೆಯ ಉಪಕರಣಗಳನ್ನು ಈ ಕಾರ್ಯಕ್ಕೆ ಉಪಯೋಗಿಸುತ್ತಾರೆ.

. ಹಣ್ಣನ್ನು ಅರ್ಧ ಮಾಡುವ ಮತ್ತು ಸಾಣೆ ಹಿಡಿಯುವಂತಹ ಉಪಕರಣಗಳು: ಮಾಲ್ಟಾ (ಸಿಟ್ರಿಸ್ ಸೈನೆಸ್ಸಿನ್ ಆಸ್‌ಬೆಕ್), ಗ್ರೇಪ್‌ಫ್ರೂಟ್ ಸಿಟ್ರಸ್ ಪ್ಯಾರಡಿಸ್ಟ್ ತಳಿ ಮ್ಯಾಕ್ಸಿಮನ್, ಗಜನಿಂಬೆ (ಸಿಟ್ರಸ್ ಮೆಡಿಕ ತಳಿ ಲಿಮೋನಮ್)ಮತ್ತು ಗಲ್‌ಗಲ್ (ಸಿಟ್ರಿಕ್ ಲಿಮೋನಿಯಾ ಆಸ್‌ಬೆಕ್) ಗಳನ್ನು ವಿಶೇಷ ಬಗೆಯ ಯಂತ್ರಗಳಲ್ಲಿ ಕತ್ತರಿಸಬಹುದು. ಚಕ್ರದ ಮೇಲಿರುವ ಬಟ್ಟಲಿನ ಮೇಲೆ ಹಣ್ಣನ್ನು ಇಟ್ಟಾಗ ಸ್ಥಿರವಾಗಿರುವ ಅಥವಾ ತಿರುಗುತ್ತಿರುವ ಚಾಕುವಿನೊಡನೆ ಅದು ಸಂಪರ್ಕ ಪಡೆಯುತ್ತದೆ. ಇದರಿಂದ ಹಣ್ಣು ಎರಡು ಭಾಗವಾಗಿ ಕೆಳಗಿರುವ ಪಾತ್ರೆಗೆ ಬೀಳುತ್ತದೆ (ಚಿತ್ರ ೧೪). ಕತ್ತರಿಸಿದ ಹಣ್ಣಿನ ಭಾಗವನ್ನು ಕೋಮಾಕೃತಿಯ ಮತ್ತು ಉಬ್ಬುಗಳಿರುವ ಸಾಣೆಹಿಡಿಯುಂತಹ ಸಾಧನಕ್ಕೆ ಹಿಡಿದಾಗ ಹೊರ ಬರುವ ರಸ ಕೆಳಗಿಟ್ಟಿರುವ ಪಾತ್ರೆಗೆ ಬೀಳುತ್ತದೆ. ಸಾಮನ್ಯವಾಗಿ ಸ್ಟೇನ್‌ಲೆಸ್ ಸ್ಟೀಲ್, ಮೊನೆಲ್ ಮೆಟಲ್, ಅಲ್ಯುಮಿನಿಯಂ, ನಿಕ್ಕಲ್ ಅಥವಾ ವಾಸನಾರಹಿತ ಮರದಿಂದ ಇಂತಹ ಸಾಧನವನ್ನು ತಯಾರಿಸಬಹುದು. ಈ ಸಾಧನ ಚಲಿಸುವ ವೇಗ ಮತ್ತು ಹಣ್ಣಿಗೆ ನೀಡುವ ಒತ್ತಡವನ್ನು ಹತೋಟಿಯಲ್ಲಿಡುವುದರಿಂದ ಹಣ್ಣಿನ ಊತಕಗಳು ಹರಿದು ಹೋಗದಿರಲು ಸಾಧ್ಯವಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಇಂತಹ ಹಲವಾರು ಸ್ವಯಂಚಾಲಿಕ ಯಂತ್ರಗಳು ಬಳಕೆಯಲ್ಲಿವೆ. 

 . ಎಡೆಬಿಡದೆ ಚಲಿಸುವ ಸ್ಕ್ರೂ ಬಗೆಯ ರಸ ಹಿಂಡುವ ಯಂತ್ರ: ಮನೆಗಳಲ್ಲಿ ಬಳಸುವ ಮಾಂಸವನ್ನು ಸೂಕ್ಷ್ಮವಾದ ಚೂರುಗಳಾಗಿ ಮಾಡುವ ಸಾಧನದಂತೆ ಈ ಯಂತ್ರವನ್ನು ಜೋಡಿಸಲಾಗಿರುತ್ತದೆ. (ಚಿತ್ರ ೧೬ ಮತ್ತು ೧೭). ತಳದಲ್ಲಿ ರಂಧ್ರಗಳಿರುವ ಸ್ಕ್ರೂ ಭಾಗ ಕೋನಾಕೃತಿಯ ಕವಚದಲ್ಲಿರುತ್ತದೆ. ಈ ಸ್ಕ್ರೂ ತಿರುಗುತ್ತಿರುತ್ತದೆ. ಇದರ ಮೇಲ್ಭಾಗದ ಹಾಪರ್ ಮೂಲಕ ತೊಳೆಗಳನ್ನು ಹಾಕಿದಾಗ, ಅವು ಸ್ಕ್ರೂದೊಡನೆ ಸಂಪರ್ಕ ಪಡೆಯುತ್ತದೆ. ಈ ರೀತಿ ರಸ ಮತ್ತು ರಸ ಹಿಂಡಿದ ತಿರುಳು ಯಂತ್ರದ ಕೆಳಭಾಗದಿಂದ ಪ್ರತ್ಯೇಕವಾದ ರಂಧ್ರಗಳಿಂದ ಹೊರಬೀಳುತ್ತದೆ. ಈ ಬಗೆಯ ವಿದ್ಯುತ್ ಚಾಲಿತ ಯಂತ್ರ ನಮ್ಮ ದೇಶದಲ್ಲಿ ಬಳಕೆಯಲ್ಲಿಲ್ಲ. ಆದರೆ ಈ ರೀತಿ ಪಡೆದ ರಸ ಮಸಕಾಗಿರುತ್ತದೆ. ಇದರಲ್ಲಿರುವ ತಿರುಳಿನ ಅಂಶವೇ ಇದಕ್ಕೆ ಕಾರಣ. ಸಾಮಾನ್ಯವಾಗಿ ಟೊಮೆಟೊ ಮತ್ತು ಅನಾನಸ್ ಹಣ್ಣುಗಳಿಂದ ರಸ ಹಿಂಡಲು ಈ ಯಂತ್ರಗಳು ಬಳಕೆಯಲ್ಲಿವೆ.

. ಪ್ಲಂಜರ್ ಬಗೆಯ ಯಂತ್ರ: ಇದರಲ್ಲಿ ತಲೆಕೆಳಗಾದ ಬಟ್ಟಲಿನಂತಹ ಯಂತ್ರದ ಭಾಗವಿರುತ್ತದೆ. ಜೊತೆಗೆ ಸ್ವಯಂಚಾಲಿತ ರೀತಿ ಸರಿಪರಿಸಿಕೊಂಡು ಜೋಡಿಸಬಹುದಾದ ಲೋಹದ ಕೋನಾಕೃತಿಯ ಮತ್ತೊಂದು ಭಾಗವಿರುತ್ತದೆ. ನಿಂಬೆಜಾತಿಯ ಅರ್ಧ ಹೋಳನ್ನು ಈ ಬಟ್ಟಲಿಗೆ ಹಿಂಡಿದಾಗ, ಅದು ಕೋನಾಕೃತಿಯ ಒತ್ತಡಕ್ಕೆ ಒಳಗಾಗುತ್ತದೆ. ಇದರಿಂದ ರಸ ಹೊರಬೀಳುತ್ತದೆ. ಬಟ್ಟಲಿಗೂ ಮತ್ತು ಕೋನಾಕೃತಿ ಒಂದುಗೂಡುವ ಮಧ್ಯದಲ್ಲಿನ ಖಾಲಿ ಪ್ರದೇಶ ಸಾಮಾನ್ಯವಾಗಿ ಹಣ್ಣಿನ ಸಿಪ್ಪೆಯ ದಪ್ಪಕ್ಕಿಂತ ಸ್ವಲ್ಪ ಅಧಿಕವಾಗಿರುತ್ತದೆ. ಇದರ ಪರಿಣಾಮವಾಗಿ ತಿರುಳಿನಿಂದ ರಸ ಬರುವುದೇ ವಿನಹ ಸಿಪ್ಪೆಯಲ್ಲಿನ ತೈಲ ಹೊರಬರುವುದಿಲ್ಲ. ಈ ಬಗೆಯ ಒತ್ತು ಯಂತ್ರವನ್ನು ನಮ್ಮ ದೇಶದಲ್ಲಿ ಕೇವಲ ಒಂದು ಕಾರ್ಖಾನೆಯಲ್ಲಿ ಮಾತ್ರ ಬಳಸಲಾಗುತ್ತಿದೆ.

. ಉರುಳೆ ಬಗೆಯ ಒತ್ತು ಯಂತ್ರ: ಗಟ್ಟಿಯಾದ ಮರ ಅಥವಾ ಗ್ರಾನೈಟ್‌ನಿಂದ ವಿಶೇಷ ರೀತಿ ತಯಾರಿಸಿದ ಈ ಒತ್ತು ಯಂತ್ರದಲ್ಲಿ ಹುಳಿನಿಂಬೆ (ಸಿಟ್ರಿಸ್ ಮೆಡಿಕ ತಳಿ ಆಸಿಡ್) ಅಥವಾ ಕಾಗ್ಜಿ ನಿಂಬೂ ಅಥವಾ ನಿಂಬೂ ಹಣ್ಣುಗಳಿಂದ ರಸ ತೆಗೆಯಬಹುದು. ಇಡೀ ಹಣ್ಣುಗಳಿಂದ ರಸ ತೆಗೆಯಬಹುದು. ವೆಸ್ಟ್ ಇಂಡೀಸ್ ಮತ್ತು ಜಮೈಕಾಗಳಲ್ಲಿ ವ್ಯಾಪಕವಾಗಿ ಇವು ಬಳಕೆಯಲ್ಲಿವೆ. ನಮ್ಮ ದೇಶದ ಕೆಲವು ಕಾರ್ಖಾನೆಗಳಲ್ಲಿ ಉಪಯೋಗವಿದೆ.

ಎರಡು ಹಂತಗಳಲ್ಲಿ ರಸ ಪಡೆಯುವುದು

ಸೇಬು, ದ್ರಾಕ್ಷಿ, ಬೆರ್ರ ಜಾತಿ ಹಣ್ಣುಗಳು ಮುಂತಾದವುಗಳನ್ನು ಮೊದಲು ಒಂದು ತುರಿಯುವ ಮಣಿಯಂತಹ ಯಂತ್ರ ಅಥವಾ ಜಜ್ಜುವ ಯಂತ್ರದಲ್ಲಿ ಜಜ್ಜಿ, ಅನಂತರ ಹೈಡ್ರಾಲಿಕ್ ಒತ್ತು ಯಂತ್ರದ ನೆರವಿನಿಂದ ರಸ ಪಡೆಯಬಹುದು. ಭಾರಿ ಪ್ರಮಾಣದಲ್ಲಿ ರಸ ತೆಗೆಯಲು ಈ ರೀತಿಯ ಜಜ್ಜುವ ಸಾಧನವು ಯಂತ್ರದ ಪ್ರಮುಖ ಭಾಗವಾಗಿರುತ್ತದೆ.

. ಜಜ್ಜುವುದು

ಸೇಬು ಹಣ್ಣಿನ ತುಜ್ ತಯಾರಿಸುವ ಯಂತ್ರ: ಸೇಬು ಹಣ್ಣಿನ ಸಿಪ್ಪೆ ಹಾಗೂ ಅದರ ಊತಕಗಳಲ್ಲಿ, ನಿಂಬೆ ಹಣ್ಣಿನಲ್ಲಿರುವಂತೆ ರಸದ ವಾಸನೆಯನ್ನು ಕೆಡಿಸುವ ಅಂಶಗಳಿರುವುದಿಲ್ಲ. ಆದುದರಿಂದ ಇಡಿಯ ಹಣ್ಣನ್ನು ಪೂರ್ತಿಯಾಗಿ ಜಜ್ಜಿ ರಸ ಹಿಂಡಬಹುದು. ಈ ಯಂತ್ರಕ್ಕೆ ಸೇಬು ಹಣ್ಣನ್ನು ತುರಿಯುವ ಯಂತ್ರವೆನ್ನಬಹುದು. ಭಾರೀ ಪ್ರಮಾಣದಲ್ಲಿ ಈ ರೀತಿ ತುರಿ ತೆಗೆಯಲು ಇಂತಹ ಹಲವು ಯಂತ್ರಗಳನ್ನು ಬಳಸಬೇಕು. ತೂಕವಾಗಿರುವ ಉಕ್ಕಿನ ಕೊಳವೆಯೊಂದಿರುತ್ತದೆ. ಅದರ ಹೊರಮೈಮೇಲೆ ಮೋಟಾಗಿರುವ ಮತ್ತು ಒಂದೆಡೆ ಸ್ಥಿರವಾಗಿರುವ ಹಲವು ಚಾಕುಗಳಿರುತ್ತವೆ. ಒತ್ತುಕದ ಚೌಕಟ್ಟಿಗೆ ಒಂದು ಪಕ್ಕದಿಂದ ಜೋಡಿಸಲಾಗಿರುವ ಉಬ್ಬು ತಗ್ಗುಗಳಿರುತ್ತವೆ. ಒತ್ತುಕದ ಚೌಕಟ್ಟಿಗೆ ಒಂದು ಪಕ್ಕದಿಂದ ಜೋಡಿಸಲಾಗಿರುವ ಉಬ್ಬು ತಗ್ಗುಗಳಿರುವ ಒಂದು ತಟ್ಟೆಯಂತಹ ಸಾಧನವಿರುತ್ತದೆ. ಚಾಕುಗಳು ಈ ತಟ್ಟೆಯ ವಿರುದ್ಧ ಚಲಿಸುತ್ತವೆ. ತಟ್ಟೆ ಹಾಗೂ ಕೊಳವೆಯನ್ನು ಹಲವಾರು ಉಕ್ಕಿನ ಸ್ಪ್ರಿಂಗ್‌ಗಳು ಬಂಧಿಸಿರುತ್ತವೆ. ಆದರೂ ಈ ಸ್ಪ್ರಿಂಗ್‌ಗಳು ಈ ತುರಿಯುವ ಯಂತ್ರಕ್ಕೆ ಸ್ವಲ್ಪ ಮಟ್ಟಿಗೆ ಚಲಿಸುವ ಅವಕಾಶ ಮಾಡಿಕೊಡುತ್ತವೆ. ಇದರಿಂದ ಮರ ಅಥವಾ ಕಲ್ಲುಗಳು ಹಣ್ಣಿನ ಜೊತೆ ಸೇರಿದಾಗ ಈ ಯಂತ್ರಕ್ಕೆ ಅಪಾಯವಾಗದಿರಲು ಸಾಧ್ಯವಾಗುತ್ತದೆ. ಉರುಳೆಗಳು ಹೆಚ್ಚಿನ ವೇಗದಲ್ಲಿ ಚಲಿಸಲು ಗೇರ್‌ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಇಡಿಯ ಸೇಬುಗಳನ್ನು ಹಾಪರ್‌ಗೆ ಹಾಕಿದಾಗ ಅವು ಕೊಳವೆ ಹಾಗೂ ತಟ್ಟೆಗಳ ನಡುವೆ ಬಂದಾಗ ತುರಿದಂತೆ ಅಥವಾ ಜಜ್ಜಿದಂತಾಗುತ್ತದೆ. ಕೆಳಗಿಟ್ಟಿರುವ ಧಾರಕವೊಂದಕ್ಕೆ ಜಜ್ಜಿದ ಹಣ್ಣು ಅಥವಾ ತುರಿ ಬೀಳುತ್ತದೆ. ಅಪೇಕ್ಷಿತ ಮಟ್ಟದ ಸೂಕ್ಷ್ಮ ಕಣಗಳಿರುವಂತೆ ಹಣ್ಣನ್ನು ಜಜ್ಜಬಹುದು. ರಸ ಹಿಂಡಲು ೧/೮ ದಿಂದ ೧/೨ ಅಂಗುಲ ದಪ್ಪವಿರುವ ಚೂರುಗಳು ಅನುಕೂಲವಾಗಿರುತ್ತವೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಸುತ್ತಿಗೆ ಬಗೆಯ ತಿರುಳು ಮಾಡುವ ಯಂತ್ರ ಬಳಕೆಗೆ ಬಂದಿದೆ.

ದ್ರಾಕ್ಷಿ ಮತ್ತು ಬೆರ್ರಿ ಹಣ್ಣುಗಳನ್ನು ಜಜ್ಜುವ ಯಂತ್ರ: ದ್ರಾಕ್ಷಿ ಜಜ್ಜುವ ಯಂತ್ರದಲ್ಲಿ (ಚಿತ್ರ ೧೮) ಲೋಹ ಅಥವಾ ಮರದಿಂದ ರಚಿತವಾದ ಎರಡು ಉರುಳೆಗಳಿರುತ್ತವೆ. ಈ ಉರುಳೆಗಳಲ್ಲಿ ಕೊರೆದಿರುವ ಉದ್ದನೆಯ ಹಳ್ಳಗಳಿರುತ್ತವೆ. ಇವು ಸಮತಲದಲ್ಲಿ ಜೋಡಣೆಗೊಂಡಿರುತ್ತವೆ. ಉರುಳೆಗಳು ಒಂದರ ಕಡೆ ಒಂದು ತೀರ ಹತ್ತಿರದಲ್ಲಿ ಸುತ್ತುತ್ತಿರುತ್ತವೆ. ಹಣ್ಣುಗಳನ್ನು ಯಂತ್ರದ ಮೇಲಿನ ಭಾಗ ಹಾಪರ್ ಮೂಲಕ ಹಾಕಿದಾಗ, ಅವು ಉರುಳೆಗಳ ಮಧ್ಯೆ ಹಾಯುವಾಗ, ಜಜ್ಜಿದಂತಾಗುತ್ತವೆ. ಸ್ಟ್ರಾಬೆರ್ರಿಯಂತಹ ಬೆರ್ರಿಗಳಲ್ಲಿ ಅಟಿಂನ ವಸ್ತುಗಳಿರುತ್ತವೆ. ಆದುದರಿಂದ ಅವುಗಳನ್ನು ಜಜ್ಜುವ ಮುನ್ನು ಸ್ವಲ್ಪ ಹೊತ್ತು ಕಾಯಿಸಬೇಕು. ಟೊಮೆಟೊ ಹಣ್ಣನ್ನು ಜಜ್ಜಲು ಈ ಯಂತ್ರವನ್ನು ಉಪಯೋಗಿಸಬಹುದು.

 . ಹಿಂಡುವುದು

 

ಬಾಸ್ಕೆಟ್ ಒತ್ತು ಯಂತ್ರ (ಪ್ರೆಸ್) : ಜಜ್ಜಿದ ಹಣ್ಣಿನಿಂದ ರಸ ಪಡೆಯಲು ಕಾರ್ಖಾನೆಗಳಲ್ಲಿ ಎರಡು ಬಗೆಯ ಒತ್ತು ಸಾಧನಗಳನ್ನು ಉಪಯೋಗಿಸಬಹುದು. ಅವು ಬಾಸ್ಕೆಟ್ ಒತ್ತುಕ (ಚಿತ್ರ ೨೦) ಚೌಕಟ್ಟು ಮತ್ತು ಬಟ್ಟೆಯ ಒತ್ತುಕ. ಕೈಗಳಿಂದ ಅಥವಾ ಹೈಡ್ರಾಲಿಕ್ ಒತ್ತಡದಿಂದ ಕೆಲಸ ಮಾಡಬಹುದಾದ ಈ ಒತ್ತು ಯಂತ್ರಗಳನ್ನು ಹಲವು ವಿನ್ಯಾಸ ಮತ್ತು ಉತ್ಪಾದನಾ ಶಕ್ತಿಯಿರುವಂತೆ ತಯಾರಿಸಬಹುದು (ಚಿತ್ರ ೧೯). ಕೈಗಳಿಂದ ಕೆಲಸ ಮಾಡುವ ಒತ್ತು ಹಂತ್ರಗಳಲ್ಲಿ ಮರದ ಪೆಟ್ಟಿಗೆಗಳಿಂದ ರಚಿತವಾದ ಕೊಳವೆಯಾಕಾರದ ಗಟ್ಟಿ ಬುಟ್ಟಿ ಇರುತ್ತದೆ. ಯಂತ್ರವನ್ನು ಮರ ಅಥವಾ ಲೋಹದ ಪೀಠದ ಮೇಲೆ ಸ್ಥಾಪಿಸಲಾಗಿರುತ್ತದೆ. ಚೌಕಟ್ಟಿನ ಮೇಲ್ಭಾಗದಲ್ಲಿ ಒಂದು ಸ್ಕ್ರೂ ಇರುತ್ತದೆ. ಜಜ್ಜಿದ ಹಣ್ಣನ್ನು ಒಂದು ಮಂದವಾದ ಬಟ್ಟೆಯಲ್ಲಿ ಸುತ್ತಿ ಬಾಸ್ಕೆಟ್ ಒತ್ತು ಯಂತ್ರದಲ್ಲಿಟ್ಟು ಕೈಯಿಂದ ಅಥವಾ ಹೈಡ್ರಾಲಿಕ್ ಒತ್ತಡದಿಂದ ಒತ್ತು ಯಂತ್ರ ಕಾರ್ಯಪ್ರವೃತ್ತವಾದಾಗ ರಸ ಹೊರಹೊಮ್ಮಿ ಕೆಳಗಿರುವ ಪಾತ್ರೆಗೆ ಬೀಳುತ್ತದೆ. ಈ ರೀತಿ ಹಣ್ಣಿನ ರಸ ಸಂಗ್ರಹಿಸಬಹುದು. ಈ ಯಂತ್ರದ ನೆರವಿನಿಂದ ಸೇಬು, ದ್ರಾಕ್ಷಿ, ದಾಳಿಂಬೆ, ಫಾಲ್ಸ (ಗ್ರೂಯಿಯ ಅಸಿಟಿಕ್) ಮುಂತಾದ ಹಣ್ಣುಗಳಿಂದ ರಸ ತೆಗೆಯಬಹುದು.

ಚೌಕಟ್ಟು ಮತ್ತು ಬಟ್ಟೆ ಒತ್ತು ಯಂತ್ರ (ಪ್ರೆಸ್) : ಮರದ ಪಟ್ಟಿಗಳಿಂದ ರಚಿತವಾಗಿರುವ ಚೌಕಟ್ಟಿನಲ್ಲಿ ಒಂದು ಬಿಟ್ಟು ಒಂದು ಪದರದಂತೆ ಜಜ್ಜಿದ ಹಣ್ಣನ್ನು ಮಂದವಾದ ಬಟ್ಟೆಯಲ್ಲಿ ಸುತ್ತಿಡಬೇಕು. ಹೈಡ್ರಾಲಿಕ್ ಒತ್ತಡದಿಂದ ಈ ಯಂತ್ರ ಕೆಲಸ ಮಾಡಿದಾಗ ಯಂತ್ರದ ತಳಭಾಗದಲ್ಲಿರುವ ಪಾತ್ರೆಗೆ ರಸ ಬಂದು ಬೀಳುತ್ತದೆ. ವಿದೇಶಗಳಲ್ಲಿ ಹಲವು ಬಗೆಯ ಬಗೆಯ ಯಂತ್ರಗಳು ಬಳಕೆಯಲ್ಲಿವೆ. ಬಾಸ್ಕೆಟ್ ಒತ್ತು ಯಂತ್ರ ಬಳಸುವ ಬದಲು ಈ ಯಂತ್ರ ಬಳಸಿದಾಗ ಹಣ್ಣಿನ ತಿರುಳಿನಿಂದ ಹೆಚ್ಚಿನ ಪ್ರಮಾಣದಲ್ಲಿ ರಸಪಡೆಯಲು ಸಾಧ್ಯವಿರುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ದ್ರಾಕ್ಷಿಯಿಂದ ರಸ ಹಿಂಡಲು ಈ ಯಂತ್ರ ಹೆಚ್ಚು ಅನುಕೂಲವೆಂದು ಭಾವಿಸಲಾಗಿದೆ. ನಮ್ಮ ದೇಶದಲ್ಲಿ ಈ ಯಂತ್ರ ಬಳಕೆಯಲ್ಲಿಲ್ಲ.

ಇತರ ಬಗೆಯ ರಸಹಿಮಡುವ ಯಂತ್ರಗಳು: ದಾಳಿಂಬೆ, ಪ್ಯಾಷನ್‌ಹಣ್ಣು ಮುಂತಾದ ಹಣ್ಣುಗಳ ರಸಹಿಂಡಲು ವಿಶೇಷ ಬಗೆಯ ಯಾಂತ್ರಿಕ ಸಾಧನಗಳನ್ನು ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ತಯಾರಿಸಲಾಗಿದೆ. ಚಾರ್ಲ್ಸ್ ಮತ್ತು ಇತರರು ಇಡೀ ದಾಳಿಂಬೆ ಹಣ್ಣಿನಿಂದ ರಸಹಿಂಡಲು ಅನುಕೂಲವಾಗುವ ಯಂತ್ರವೊಂದನ್ನು ವಿವರಿಸಿದ್ದಾರೆ. ಹಿಂದೆ ಕ್ವೆಟಾದಲ್ಲಿದ್ದ ಫಲ ಸಂರಕ್ಷಣಾ ಪ್ರಯೋಗ ಶಾಲೆಯಲ್ಲಿ ಇಡೀ ದಾಳಿಂಬೆ ಹಣ್ಣಿನಿಂದ ಉತ್ತಮರೀತಿ ರಸಹಿಂಡಲು ಬಾಸ್ಕೆಟ್ ಒತ್ತು ಯಂತ್ರವನ್ನು ಬಳಸಲಾಗುತ್ತಿತ್ತು. ಪೊರೆ ಎಂಬುವವರು ಪ್ಯಾಷನ್ ಹಣ್ಣಿನ ಅರ್ಧಭಾಗವನ್ನು ಮತ್ತಷ್ಟು ಅಗಲವಾಗುವಂತೆ ಮಾಡಿ, ರಸಹಿಂಡುವ ವಿಶೇಷ ಬಗೆಯ ಪಲ್ಪರ್ ವಿವರಿಸಿದ್ದಾರೆ.

ತಿರುಳು ಬೇರ್ಪಡಿಸುವ ಯಂತ್ರೋಪಕರಣ: ಇದುವರೆಗೆ ವಿವರಿಸಿದ ವಿಧಾನಗಳಿಂದ ದೊರೆತ ಹಣ್ಣಿನ ರಸದಲ್ಲಿ ಹಣ್ಣಿನ ಒರಟಾದ ಊತಕಗಳು, ಸಿಪ್ಪೆಯ ಚೂರುಗಳು, ಬೀಜಗಳು ಮತ್ತು ಅತಿ ಸೂಕ್ಷ್ಮವಾದ ತಿರುಳಿನ ಕಣಗಳು ತೇಲುತ್ತಿರುತ್ತವೆ. ಯಾವ ಬಗೆಯ ಹಣ್ಣಿನ ಉತ್ಪನ್ನ ಬೇಕೆನ್ನುವುದಕ್ಕನುಗುಣವಾಗಿ ಇವುಗಳನ್ನು ಬೇರ‍್ಪಡಿಸಬೇಕು. ಅಲ್ಲದೆ ಇಂತಹ ಉತ್ಪನ್ನಗಳು ಮಸುಕಾಗಿರಬಹುದು. ಈ ದೃಷ್ಟಿಯಿಂದ ರಸವು ತಿಳಿಯಾಗುವಂತೆ ಮಾಡಲು ಸಾಮಾನ್ಯವಾಗಿ ಮೂರು ವಿಧಾನಗಳು ಬಳಕೆಯಲ್ಲಿವೆ; (೧) ಬಸಿಯುವುದು, (೨) ತೇಲುವ ಕಣಗಳನ್ನು ತಳದಲ್ಲಿ ನಿಲ್ಲಿಸುವುದು, (೩)ಶೋಧಿಸುವುದು.

ಬಸಿಯುವುದಕ್ಕಾಗಿ ಬಳಸುವ ಯಂತ್ರೋಪಕರಣ: ಹಣ್ಣಿನ ರಸಗಳನ್ನು ಬಸಿಯಲು ವಿವಿಧ ವಿನ್ಯಾಸ ಹಾಗೂ ಪ್ರಮಾಣಗಳ ಯಂತ್ರಗಳಿವೆ. ಅವುಗಳಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಪಲ್ಪರ್ ಒಂದು. ಇದರ ಒಳಭಾಗದಲ್ಲಿ ಕೊಳವೆಯಾಕಾರದ ರಂಧ್ರಗಳ ಜರಡಿಯಿರುತ್ತದೆ. ಇದನ್ನು ಆವರಿಸಿ ಕವಚವಿರುತ್ತದೆ. ಮರ, ಲೋಹ ಅಥವಾ ಮೋಟಾಗಿರುವ ದೋಣಿ ನಡೆಸುವ ಹುಟ್ಟು ಇರುವಂತಿರುವ ಕುಂಚವಿರುತ್ತದೆ. ಇದು ತಿರುಗುತ್ತಿರುತ್ತದೆ. ವಿದ್ಯುತ್ ಚಲನೆಯಿಂದ ಕೆಲಸ ಮಾಡುವ ಕೊಳವೆಯಲ್ಲಿರುವ ಈ ಸಾಧನದ ನೆರವಿನಿಂದ ನಿಂಬೆ ಜಾತಿಯ ಹಣ್ಣುಗಳು, ಟೊಮೆಟೋ ಮತ್ತು ಮಾವಿನ ಹಣ್ಣುಗಳಿಂದ ಲಾಭದಾಯಕವಾಗಿ ರಸ ಪಡೆಯಬಹುದು. ಯಂತ್ರದ ಮೇಲ್ಭಾಗದಲ್ಲಿ ಬಾಯಿಯಂತಿರುವ ಹಾಪರ್ ಮೂಲಕ ಹಣ್ಣುಗಳನ್ನು ಹಾಕಿದಾಗ, ಅವು ಕೊಳವೆಯನ್ನು ಪ್ರವೇಶಿಸುತ್ತವೆ. ಅಲ್ಲಿನ ಮರ, ಲೋಹ ಅಥವಾ ಕುಂಚದಂತಹ ಸಾಧನ ಹಣ್ಣನ್ನು ಜಜ್ಜಿ ರಸಹಿಂಡುತ್ತದೆ. ಜರಡಿಯ ಮೂಲಕ ರಸ ತಿರುಳು ಮಿಶ್ರಣ ಹಾದು ಬರುವಾಗ ಒಂದು ರಂಧ್ರದಿಂದ ರಸ ಹೊರಬೀಳುತ್ತದೆ; ರಸ ಹಿಂಡಿದ ತಿರುಳು ಬೇರೊಂದು ಕಡೆಯಿಂದ ನಿರ್ಗಮಿಸುತ್ತದೆ.

ತೇಲುವ ಕಣಗಳನ್ನು ತಳದಲ್ಲಿ ತಂಗಿಸಲು ಬಳಸುವ ಯಂತ್ರೋಪಕರಣ: ಉದ್ದವಾದ ಮರದ ಪೀಪಾಯಿಗಳು ಈ ಕೆಲಸಕ್ಕೆ ಅನುಕೂಲವಾಗಿವೆ. ತುಂಬಿದ ರಸದಲ್ಲಿರುವ ತೇಲುವ ಕಣಗಳು ಸ್ವಲ್ಪ ಕಾಲದ ನಂತರ ತಳದಲ್ಲಿ ತಂಗುತ್ತವೆ. ಇದರಿಂದ ರಸ ತಿಳಿಯಾಗುತ್ತದೆ.

ಶೋಧಿಸುವ ಯಂತ್ರೋಪಕರಣಗಳು: ರಸದಲ್ಲಿ ತೇಲುವ ಅತಿ ಸೂಕ್ಷ್ಮವಾದ ಕಣಗಳನ್ನು ಬೇರ್ಪಡಿಸಲು ವಿಶೇಷ ಬಗೆಯ ಶೋಧಕ ಒತ್ತುಯಂತ್ರ (ಫಿಲ್ಟರ್ ಪ್ರೆಸ್) ಉಪಯೋಗಿಸುತ್ತಾರೆ. ಈ ಬಗೆಯ ಯಂತ್ರಗಳು ಹಲವು ವಿನ್ಯಾಸ ಹಾಗೂ ಗಾತ್ರದವುಗಳಾಗಿರುತ್ತವೆ. ಶೋಧಿಸಲು ಬಳಸುವ ವಸ್ತು ಅತಿ ಸೂಕ್ಷ್ಮವಾಗಿ ಹೆಣೆದ ಬಟ್ಟೆ, ಕ್ಯಾನ್‌ವಾಸ್, ನಾರು, ಕಲ್ನಾರು, ಪದರಗಳು, ಹತ್ತಿ ಅಥವಾ ಮರದ ತಿರುಳಿನ ದಪ್ಪ ಪದರ ಮತ್ತು ಸಚ್ಛಿದ್ರವಾದ ಪಿಂಗಾಣಿಯಾಗಿರಬಹುದು. ನಮ್ಮ ದೇಶದಲ್ಲಿ ನಿಂಬೆಹಣ್ಣಿನ ರಸವನ್ನು ತಿಳಿಯಾಗುವಂತೆ ಮಾಡಿ, ಕಾರ್ಡಿಯಲ್ ತಯಾರಿಸಲು ಸಕ್ಕರೆ ಕಾರ್ಖಾನೆಗಳಲ್ಲಿ ಉಪಯೋಗಿಸುವ ‘ಫ್ರೇಮ್ ಮತ್ತು ಫಿಲ್ಟರ್’ ಒತ್ತುಯಂತ್ರ ಬಳಸುವುದುಂಟು. ಹಲವು ವಿನ್ಯಾಸ ಹಾಗೂ ಪ್ರಮಾಣಗಳಲ್ಲಿ ದೊರೆಯುವ ಸೀಟ್‌ಶೋಧಕ (ಫಿಲ್ಟರ್‌ಗಳು, ವೈನ್, ಸ್ಪಿರಿಟ್, ಹಣ್ಣಿನರಸಗಳು, ಕಾಡಿಯಲ್‌ಗಳು, ಸಕ್ಕರೆಪಾಕ ಮುಂತಾದುವನ್ನು ಶೋಧಿಸಲು) ಹೆಚ್ಚು ಅನುಕೂಲವಾಗಿವೆ.

ಸುಲಭವಾಗಿ ಹಣ್ಣಿನರಸ ಶೋಧಿಸುವ ವಿಧಾನವೊಂದಿದೆ. ಇದರಲ್ಲಿ ದೊಡ್ಡದಾಗಿರುವ ಕೋನಾಕೃತಿ ಡ್ರಿಲ್ ಬಟ್ಟೆ ಅಥವಾ ‘ಫೆಲ್ಟ್’ ಚೀಲ ಬಳಸಲಾಗುತ್ತದೆ. ಜೆಲ್ಲಿ ಚೀಲಗಳಂತಹ ಈ ಚೀಲಗಳಲ್ಲಿ ಶೋಧಿಸುವ ಸಹಾಯಕ ವಸ್ತುಗಳೊಡನೆ ಕಾಯಿಸಿದ ರಸವನ್ನು ಹಾಕಿಡಬೇಕು. ಈ ವಿಧಾನ ಬಹುನಿಧಾನವಾದುದು. ಆದರೆ ಶೋಧಿಸುವ ಕಾರ್ಯವನ್ನು ತ್ವರಿತಗೊಳಿಸಲು ಇಂತಹ ಹಲವು ಚೀಲಗಳನ್ನು ಏಕಕಾಲದಲ್ಲಿ ಉಪಯೋಗಿಸಬಹುದು.

ಗಾಳಿ ಹೊರದೂಡಿಸುವ ಮತ್ತು ಫ್ಲಾಷ್ ಪಾಶ್ಚೀಕರಣ ಯಂತ್ರ: ಆಗ ತಾನೆ ಹಿಂಡಿದ ಹಣ್ಣಿನ ರಸಗಳಲ್ಲಿ ಗಮನಾರ್ಹವಾದ ಪ್ರಮಾಣದಲ್ಲಿ ಆಮ್ಲಜನಕವಿರುತ್ತದೆ. ಹಣ್ಣಿನ ರಸವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಅಥವಾ ಸಂಸ್ಕರಿಸುವ ಮುನ್ನ ಈ ಅನಿಲವನ್ನು ಹೊರಪಡಿಸಬೇಕು. ವಿಶೇಷ ಬಗೆಯ ಗಾಳಿ ಹೊರದೂಡುವ ಯಂತ್ರವನ್ನು ಈ ಕೆಲಸಕ್ಕೆ ಬಳಸಬಹುದು. ಅನಂತರ ಈ ರಸವನ್ನು ಫ್ಲಾಷ್ ಪಾಶ್ಚೀಕರಣ ಯಂತ್ರದಲ್ಲಿ ಕಾಯಿಸಬೇಕು. (ಚಿತ್ರ ೨೧, ೨೪ ಮತ್ತು ೨೫)

ಅಮೇರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಇಂತಹ ಯಂತ್ರಗಳು ವಿವಿಧ ವಿನ್ಯಾಸ ಹಾಗೂ ಪ್ರಮಾಣಗಳಲ್ಲಿ ರೂಪುಗೊಂಡಿವೆ. ೧೯೩೭ ರಲ್ಲಿ ಏಯರ‍್ಸ್ ಕಂಡುಹಿಡಿದ ಸ್ಟಿರೋವೇಕ್ ವಿಧಾನವನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಉದಾಹರಿಸಬಹುದು. ಗಾಳಿ ಹೊರದೂಡಿಸಿ, ರಸವನ್ನು ಫ್ಲಾಷ್ ಪಾಶ್ಚೀಕರಣ ಮಾಡುವ ಈ ವಿಧಾನವನ್ನು ನಿಂಬೆ ಜಾತಿಯ ಹಣ್ಣುಗಳು, ಟೊಮ್ಯಾಟೊ, ಅನಾನಸ್ ಹಣ್ಣುಗಳ ರಸ ಶೋಧಿಸಲು ಉಪಯೋಗಿಸಬಹುದು. ಇಂತಹ ಆಧುನಿಕ ವಿಧಾನಗಳು ಮತ್ತು ಯಂತ್ರಗಳು ನಮ್ಮ ದೇಶದಲ್ಲಿ ಬಳಕೆಯಲ್ಲಿಲ್ಲ. ಆದರೆ ಹಣ್ಣಿನ ರಸಗಳ ಗುಣಮಟ್ಟ ಉತ್ತಮಗೊಳಿಸಲು ಇವು ಅಗತ್ಯವಾಗಿವೆ.

ಹಣ್ಣಿನ ಪಾನೀಯಗಳು: ಶುದ್ಧವಾದ ಹಣ್ಣಿನ ರಸ, ಸ್ಕ್ವಾಷ್, ಕಾರ್ಡಿಯಲ್ ಮತ್ತು ಹುದುಗಿಸಿದ ರಸ ಎಂದು ಹಲವು ರೂಪಗಳಲ್ಲಿ ಹಣ್ಣಿನ ರಸವನ್ನು ಸಂಸ್ಕರಿಸಬಹುದು. ಸಾಮಾನ್ಯವಾಗಿ ಇವುಗಳನ್ನು ಈ ರೀತಿ ವಿವರಿಸಬಹುದು.

. ಹುದುಗಿಸದ ಅಥವಾ ಶುದ್ಧ ಹಣ್ಣಿನರಸ: ಹಣ್ಣಿನಿಂದ ಹಿಂಡಿದ ಶುದ್ಧರಸವು ತಯಾರಿಸುವ ಮತ್ತು ಸಂಗ್ರಹಿಸುವ ಅವಧಿಯಲ್ಲಿ ಯಾವ ರೀತಿಯಲ್ಲೂ ಬದಲಾಯಿಸುವುದಿಲ್ಲ.

. ಹಣ್ಣಿನ ರಸವಿರುವ ಪಾನೀಯ : ಇಂತಹ ಪಾನೀಯ ಬಳಸುವ ಮುನ್ನ, ಶುದ್ಧರಸಕ್ಕಿಂತ ಬಹುಪಾಲು ಬದಲಾಯಿಸಿರಬಹುದು. ಸೇವನೆಗೆ ಮುನ್ನ ಇಂತಹ ಪಾನೀಯಕ್ಕೆ ನೀರು ಸೇರಿಸಬೇಕು.

. ಹುದುಗಿಸಿದ ಹಣ್ಣಿನ ರಸ : ಯೀಸ್ಟ್ ಜೀವಾಣುಗಳಿಂದ ಹುದುಗಿಸಿದ ಇಂತಹ ರಸದಲ್ಲಿ ವಿವಿಧ ಪ್ರಮಾಣದಲ್ಲಿ ಆಲ್ಕೋಹಾಲ್ ಇರುತ್ತದೆ. ಉದಾಹರಣೆಗೆ : ವೈನ್, ಸೇಬಿನ ಸೈಡರ್ ಇತ್ಯಾದಿ.

. ಹಣ್ಣಿನ ರಸವಿರುವ ಸ್ಕ್ವಾಷ್ : ಹಣ್ಣಿನ ಸೂಕ್ಷ್ಮವಾದ ಕಣಗಳು ಅಷ್ಟಾಗಿರದ ಶೋಧಿಸಿದ ಹಣ್ಣಿನ ರಸಕ್ಕೆ ಸಿಹಿಗಾಗಿ ಸಕ್ಕರೆ ಸೇರಿಸಿದಾಗ, ಈ ಪಾನೀಯ ಸಿದ್ಧವಾಗಿರುತ್ತದೆ. ಉದಾಹರಣೆಗೆ : ಕಿತ್ತಳೆ ಸ್ಕ್ವಾಷ್, ಲೆಮನ್ ಸ್ಕ್ವಾಷ್ ಮತ್ತು ಮಾವಿನ ಹಣ್ಣಿನ ಸ್ಕ್ವಾಷ್ ಇತ್ಯಾದಿಗಳು.

. ಹಣ್ಣಿನ ರಸದ ಕಾರ್ಡಿಯಲ್ : ಪ್ರಕಾಶಮಾನವಾಗಿರುವ ಮತ್ತು ತಿಳಿಯಾಗಿರುವ ರಸವಿರುವ ಈ ಪಾನೀಯದಲ್ಲಿ ಸಾಮಾನ್ಯವಾಗಿ ರಸದಲ್ಲಿ ತೇಲುವ ಯಾವ ಅಂಶವೂ ಇರುವುದಿಲ್ಲ. ಉದಾಹರಣೆಗೆ : ನಿಂಬೆ ಹಣ್ಣಿನ ರಸದ ಕಾಡಿಯಲ್.

. ಷರಬತ್ ಅಥವಾ ಸಿರಪ್ : ತಿಳಿಯಾದ ಸಕ್ಕರೆ ಪಾಕಕ್ಕೆ ಕೃತಕ ರೀತಿ ಸುವಾಸನೆ ನೀಡುವ ರಾಸಾಯನಿಕಗಳನ್ನು ಸೇರಿಸಿದಾಗ ಈ ಪಾನೀಯ ಸಿದ್ಧವಾಗುತ್ತದೆ. ಉದಾಹರಣೆಗೆ : ಸಂಡಾಲ್‌ನ ಕಿತ್ತಳೆ ಮತ್ತು ಬಾದಾಮಿ ಷರಬತ್ತು.

. ಸಾಂದ್ರೀಕರಿಸಿದ ಹಣ್ಣಿನ ರಸ : ಉಷ್ಣದ ನೆರವಿನಿಂದ ಅಥವಾ ಶೀತದಿಂದ ಘನೀಕರಿಸಿ ಹಣ್ಣಿನ ರಸದಲ್ಲಿರುವ ನೀರಿನ ಅಂಶವನ್ನು ಬೇರ್ಪಡಿಸಿದಾಗ ಇದು ಸಿದ್ಧವಾಗುತ್ತದೆ. ಇಂಗಾಲದ ಡೈ ಆಕ್ಸೈಡ್ ಸೇರಿಸಿದ ಸೋಡಾ ಬಗೆಯ ಪಾನೀಯಗಳು ಮತ್ತು ಹಣ್ಣಿನ ಇತರ ಉತ್ಪನ್ನಗಳನ್ನು ತಯಾರಿಸಲು ಸಾಂದ್ರೀಕರಿಸಿದ ಹಣ್ಣಿನ ರಸ ಉಪಯೋಗಿಸಬಹುದು.