ಭಾಷೆ ಮತ್ತು ಲಿಪಿ ಒಂದೇ ನಾಣ್ಯದ ಎರಡು ಮುಖಗಳು. ಆದಾಗ್ಯೂ ಸಹ ಭಾಷೆಗೆ ಲಿಪಿ ಮುಖ್ಯ. ಲಿಪಿ ಇಲ್ಲದ ಭಾಷೆ ತಾಯಿ ಇಲ್ದ ತಬ್ಬಲಿ. ಆಂತೆಯೇ ಭಾಷೆ ಮತ್ತು ಲಿಪಿ ಒಂದನ್ನೊಂದು ಪೂರಕ ಮತ್ತು ಪೋಷಕ. ಲಿಪಿ ಇಲ್ಲದ ಭಾಷೆಗೆ ಬದುಕಿಲ್ಲ, ಭವಿಷ್ಯವಿಲ್ಲ.

ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಹಾಗೇ ಹಿಡಿದಿಡದಿದ್ದಲ್ಲಿ ಅದು ನೆನಪಿನಿಂದ ಮರೆಯಾಗಬಲ್ಲದು. ಆದ್ದರಿಂದ ಭಾವನೆಗಳನ್ನು, ಸಂತೋಷದ ಸಂಗತಿಗಳನ್ನು, ಶೌರ್ಯದ ವೀರಗಾಥೆಯನ್ನು ಲಿಪಿಯಲ್ಲಿ ಬರೆದಿಡುವ ಮೂಲಕ ಒಂದು ಪರಂಪರೆಯನ್ನು ಆ ಕಾಲದ ಇತಿಹಾಸವನ್ನು ಭವಿಷ್ಯತ್ತಿಗಾಗಿ ಸುಲಭವಾಗಿ ದಾಖಲಿಸಿಡಬಹುದು.

ವೇದಕಾಲದಿಂದಲೂ ಭಾಷೆಯನ್ನು ಲಿಪಿಯಲ್ಲಿ ಬರೆದಿಡುವ ಪರಂಪರೆ ಇತಿಹಾಸದಿಂದ ಕಾಣುತ್ತೇವೆ. ರಾಜ-ಮಹಾರಾಜರು ತಾವು ರೂಢಿಗೆ ತಂದಿರುವ ಪದ್ಧತಿಯನ್ನು ದಾನ-ದತ್ತಿಗಳನ್ನು ನೀಡಿರುವ ಸಂಗತಿಯನ್ನು ದಾಖಲಿಸಲು ಶಿಲಾಶಾಸನಗಳಲ್ಲಿ ಲಿಪಿಯ ಮೂಲಕ ಬರೆದಿಡುವ ಪರಂಪರೆಯನ್ನು ರೂಢಿಗೆ ತಂದರು. ಕಾಲಕ್ರಮೇಣ ಆ ದಾಖಲೆಗಳು ತಾಡೋಲೆಗಳ ಮೇಲೆ ಮಸಿಯಿಂದ ಲೆಕ್ಕಣಿಕೆಯಿಂದ ಬರೆಯುವುದು ರೂಢಿಗೆ ಬಂದಿತು. ಹೀಗೆ ಭಾಷೆ ಯಾವುದೇ ಇರಲಿ ಅದರ ಲಿಪಿಯನ್ನು ಶಿಲೆಯಲ್ಲಿ, ತಾಡೋಲೆಗಳಲ್ಲಿ ನಂತರ ಆಧುನಿದ ಕಾಲದಲ್ಲಿ ಹಾಳೆಗಳ ಮೇಲೆ ಲೆಕ್ಕಣಿಯ (ಪೆನ್) ಮೂಲಕ ಬರೆಯುವ ಪದ್ಧತಿ ಬೆಳೆದುಬಂದಿತು.

‘ಸಂಗೀತ’ ಪ್ರಾಚೀನ ಕಾಲದ ಕಲಾ ಮಾಧ್ಯಮ. ಅದು ಗುರುಕುಲ ಪದ್ಧತಿಯಿಂದ ಗುರುವಿನ ಸೇವೆ ಮಾಡಿ, ಗುರುಗಳು ಹೇಳಿದ ಕೆಲಸ ಮಾಡಿ, ಅವರಿಗೆ ವಿಧೇಯರಾಗಿ ನಡೆದುಕೊಂಡು ಸಂಗೀತ ವಿದ್ಯೆ ಪ್ರಾಪ್ತಿ ಮಾಡಿಕೊಳ್ಳಲಾಗುತ್ತಿತ್ತು. ಸಂಗೀತ ಗುರು ಮುಖದಿಂದ ಕಲಿಯುವ  ಮಸ್ತಕದ ವಿದ್ಯೆ, ಅದು ಪುಸ್ತಕದ ವಿದ್ಯೆ ಅಲ್ಲ. ಗುರುಗಳು ಹೇಳಿದ ಪಾಠಗಳನ್ನು ಶಿಷ್ಯ ಕಂಠಸ್ತ ಮಾಡಿ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತಿತ್ತು. ಹೇಳಿದ ಸಹಸ್ರಾರು ಪಾಠಗಳೆಲ್ಲ ನೆನಪಿನಲ್ಲಿಟ್ಟುಕೊಳ್ಳುವುದು ಕಾಲಕ್ರಮೇಣ ಶಿಷ್ಯರಿಗೆ ಕಠಿಣವಾಗಲು ಪ್ರಾರಂಭಿಸಿತು. ಸಂಗೀತವನ್ನು ನೆನಪಿನಲ್ಲಿಟ್ಟಿಕೊಳ್ಳಲು ಅನುಕೂಲಗವಾಗಲು ಲಿಪಿಯ ಅವಶ್ಯಕತೆಯ ಅಗತ್ಯತೆಯ ಅರಿವಾಗಹತ್ತಿತ್ತು. ಸಾಹಿತ್ಯವನ್ನು ಶಬ್ದಗಳಲ್ಲಿ, ಚಿತ್ರಕಲೆಯನ್ನು ರೇಖೆಗಳಲ್ಲಿ ಹಾಗೆಯೇ ಸಂಗೀತವನ್ನು ಸ್ವರ ಚಿನ್ಹೆಗಳ ಮೂಲಕ ಲಿಪಿಗೆ ಅಳವಡಿಸುವ ಸಂಗೀತಕ್ಕೆ ತನ್ನದೇ ಆದ ಸ್ವತಂತ್ರ ಲಿಪಿಯ ಅವಶ್ಯಕತೆ ಎನಿಸಿತು. ಗಾಯನದ ಮತ್ತು ವಾದ್ಯದ ಧ್ವನಿಯನ್ನು ಬರಹದಲ್ಲಿ ಹಿಡಿದಿಡುವುದು ಆಗದ ಮಾತೆಂದು ಕೆಲವರ ಅಭಿಪ್ರಾಯ. ಇದು ಕೆಲಮಟ್ಟಿಗೆ ನಿಜವೆನಿಸಿದರೂ ಅದು ಪೂರ್ಣಸತ್ಯವಲ್ಲ. ಅರ್ಧಸತ್ಯ. ಹಾಗೆಂದು ಭ್ರಮಿಸಿ ಸಂಗೀತವನ್ನು ಲಿಪಿಯಲ್ಲಿ ದಾಖಲಿಸುವುದು ಅಸಾಧ್ಯವೇನಲ್ಲ. ಹಾಗೆ ನೋಡಿದರೆ ಸಾಹಿತ್ಯವನ್ನು ಸಹ ಸಂಪೂರ್ಣವಾಗಿ ಲಿಪಿಯಲ್ಲಿ ಹಿಡಿದಿಡುವುದು ಸಾಧ್ಯವಿಲ್ಲವೆಂದೇ ಹೇಳಬೇಕು. ಮಿಂಚಿನ ಹೊಳಪು, ಮೋಡಗಳ ಅಬ್ಬರ, ಮಳೆಯ ಭೋರ್ಗರೆವ ಶಬ್ದಗಳನ್ನು ಶಬ್ದದಲ್ಲಿ ಹಿಡಿದಿಡುವುದು ಕಷ್ಟಸಾಧ್ಯವೆಂದೇ ಹೇಳಬೇಕು.

ಸಂಗೀತ ಲಿಪಿ ಪದ್ಧತಿ ಬಹು ಪ್ರಾಚೀನ ಕಾಲದಿಂದಲೇ ಆರಂಭವಾಗಿದೆ ಎಂದು ಸಂಗೀತ ಸಂಶೋಧಕರು ಹೇಳುತ್ತಾರೆ. ಸುಮಾರು ಏಳನೆಯ ಶತಮಾನದಲ್ಲಿ ಸಂಗೀತ ಲಿಪಿಯಲ್ಲಿ ಶಿಲಾಶಾಸನದಲ್ಲಿ ಕೆತ್ತಿರುವ ದಾಖಲೆಯೊಂದು ಬೆಳಕಿಗೆ ಬಂದಿದೆ. ಆ ತಮಿಳುನಾಡಿನ ಚಿತ್ತೂರಿನ ಜಯಸ್ತೂಪದ ಮೇಲೆ ವಾಸ್ತು ಶಿಲ್ಪ ಶಾಸ್ತ್ರಗಂಥವೊಂದರ ಭಾಗವನ್ನು ಕೆತ್ತಲಾಗಿದೆ. ದೇವಗಡದ ಒಂದು ಶಿಲಾಫಲಕದ ಮೇಲೆ ಹದಿನೆಂಟು ಭಾಷೆಗಣನ್ನು ಅವುಗಳ ಲಿಪಿಮಾದರಿಗಳನ್ನು ಕೆತ್ತಲಾಗಿದೆ. ತಮಿಳುನಾಡಿನ ಪುದುಕೋಟೆಗೆ ಸಮೀಪದಲ್ಲಿರುವ  ’ಕುಡಿಮಿಯಾ ಮಲೈ’ ಎಂದಬ ಬೆಟ್ಟದ ಮೇಲಿನ ಬಂಡೆಯ ಮೇಲ ಸಪ್ತಸ್ವರಗಳ ಲೇಖನ ಶಾಸ್ತ್ರ ಕೆತ್ತಲಾಗಿದೆ. ಇದನ್ನು  ಪ್ರಪಂಚದ ಸ್ವರಪ್ರಸ್ತಾರವಿರುವ ಸಂಗೀತದ ಏಕೈಕ ಸಂಗೀತ ಲಿಪಿ ಶಾಸನವೆಂದು ಹೇಳಲಾಗುತ್ತದೆ.

ಏಳನೇ ಶತಮಾನದಿಂದಲೇ ಆರಂಭಗೊಂಡಿರಬಹುದಾದ ಸಂಗೀತಲಿಪಿ ಪದ್ಧತಿ ಶಾಸನದಲ್ಲಿ ನಾವು ನೋಡುತ್ತೇವೆ. ಆಧುನಿಕ ಕಾಲದಲ್ಲಿ ಬಳಕೆಯಲ್ಲಿ ಬಂದ ಸಂಗೀತ ಲಿಪಿ ಪದ್ಧತಿ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ ಭಾಗದಲ್ಲಿ ಪ್ರಾರಂಭವಾಯಿತೆಂದು ಹೇಳಲಾಗುತ್ತದೆ.

ಭಾರತದಲ್ಲಿ ಬ್ರಿಟೀಷರು ಆಡಳಿತ ಸೂತ್ರವನ್ನು ಹಿಡಿದ ನಂತರ ಸಂಸ್ಥಾನಿಕರು ಅಲ್ಲಲ್ಲಿ ಅರಸೊತ್ತಿಗೆ ಮಾಡಲಾರಂಭಿಸಿದರು. ಅವರು ಸ್ವತಂತ್ರ ಅರಸರಾಗಿದ್ದರೂ ಸಹ ಬ್ರಿಟೀಷರ ಆಧೀನಕ್ಕೊಳಪಟ್ಟಿದ್ದರು. ಬ್ರಿಟೀಷರಿಂದ ಹಾಳಾಗಿ ಬೀದಿ ಪಾಲಾಗಿದ್ದ ಸಂಗೀತಗಾರರನ್ನು ಸಂಸ್ಥಾನಿಕರು ಆಶ್ರಯ ನೀಡಿ ತನ್ಮೂಲಕ ಸಂಗೀತ ಕಲೆಗೆ ಆಶ್ರಯ ನೀಡಿದರು. ಹೀಗೆ ಸಂಗೀತ ಕಲೆ ಹಾಗೂ ಕಲಾವಿದರಿಗೆ ಆಶ್ರಯ ನೀಡಿ ಸಂಗೀತ ಕಲೆಗೆ ಪುನರುಜ್ಜೀವನ ನೀಡಿದ ಅರಸರಲ್ಲಿ ಬಡೋದೆಯ ಮಹಾರಜಾ ಸಯ್ಯಾಜಿರಾವ್ ಗಾಯಕವಾಡರು ಉಲ್ಲೇಖನೀಯರಾಗಿದ್ದಾರೆ. ಅವರು ಬಡೋದೆಯಲ್ಲಿ (ಗುಜರಾತ) ತಮ್ಮ ಅರಮನೆಯಲ್ಲಿ ೧೮೮೬ರಲ್ಲಿ ’ಗಾಯನ ಶಾಲಾ’ವೆಂಬ ಸಂಗೀತ ವಿದ್ಯಾಲಯ ಪ್ರಾರಂಭಿಸಿದರು. ಈ ಸಂಗೀತ ವಿದ್ಯಾಲಯ ’ಭಾರತದ ಮೊದಲ ಸಂಗೀತ ಶಾಲೆ’ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.

ಹಿಂದುಸ್ತಾನಿ ಸಂಗೀತದ ಮಹಾನ್ ಗಾಯಕ ಉಸ್ತಾದ್ ಮೌಲಾಬಕ್ಷ್ ಅವರು ಈ ಸಂಗೀತ ಶಾಲೆಯ ಪ್ರಪ್ರಥಮ ಶಿಕ್ಷಕರು. ಮಹಾರಾಜರು ಅವರಿಗೆ ಸಂಗೀತದ ’ಪ್ರೊಫೆಸರ್’ ಹುದ್ದೆ ನೀಡಿದ್ದರು. ಅವರನ್ನು ಸ್ಥಾಪಕ ಪ್ರಾಚಾರ್ಯರನ್ನಾಗಿಸಿದ್ದರು. ಅಂತೆಯೇ ಉಸ್ತಾದ್ ಮೌಲಾಬಕ್ಷರನ್ನು ‘ಭಾರತದ ಮೊದಲ ಸಂಗೀತದ ಪ್ರೊಫೆಸರ್ ಎಂದು ಕರೆಯಲಾಗುತ್ತದೆ.

ಗುರುಕುಲ ಪದ್ಧತಿಯಲ್ಲಿ ಗುರುಮಖದಿಂದ ಕಂಠಸ್ತ ಮಾಡುತ್ತ ಬಂದಿದ್ದ ಸಂಗೀತ ವಿದ್ಯೆಯನ್ನು ಶಿಕ್ಷಣದ ಮಾಧ್ಯಮದ ಮೂಲಕ ಮೊದಲ ಬಾರಿಗೆ ಸಂಗೀತ ಶಿಕ್ಷಣ ನೀಡಲು ಪ್ರಾರಂಭಿಸಿದ ಉಸ್ತಾದ ಮೌಲಾಬಕ್ಷರು ಸಂಗೀತಕ್ಕೆ ತನ್ನದೇ ಆದ ಲಿಪಿ ಇಲ್ಲದೇ ತುಂಬ ತೊಂದರೆ ಅನುಭವಿಸಿದರು. ಆ ತೊಂದರೆಯನ್ನು ಹೋಗಲಾಡಿಸಲು ಉಸ್ತಾದ ಮೌಲಾಬಕ್ಷರು ತಾವೇ ಒಂದು ಸ್ವತಂತ್ರ ಸಂಗೀತ ಲಿಪಿಯನ್ನು ಕಂಡುಹಿಡಿದರು. ಅದನ್ನು ಅವರು ಮಹಾರಾಜರ ಗಮನಕ್ಕೆ ತಂದರು. ಆ ದಿನಗಳಲ್ಲಿ ಮುಂಬೈಯಲ್ಲಿ ವಾಸವಾಗಿದ್ದು ಸಂಗೀತದಲ್ಲಿ ಪ್ರಗತಿ ಕ್ರಾಂತಿಯ ಕಾರ್ಯದಲ್ಲಿ ತೊಡಗಿದ್ದ ಸಂಗೀತೋದ್ಧಾರಕರೆನಿಸಿದ್ದ ಪಂ. ವಿಷ್ಣುನಾರಾಯಣ ಭಾತಖಂಡೆಯವರನ್ನು ಮಹಾರಾಜರು ತಮ್ಮಲ್ಲಿಗೆ ಆಮಂತ್ರಿಸಿ ಉಸ್ತಾದ ಮೌಲಾಬಕ್ಷರು ಕಂಡುಹಿಡಿದ ಸಂಗೀತ ಲಿಪಿ ಪದ್ಧತಿಯನ್ನು ತೋರಿಸಿದರು. ಈ ಸಂಗೀತ  ಲಿಪಿಯನ್ನು ಮೊದಲ ಬಾರಿಗೆ ಕಂಡು ಹಿಡಿದ ಉಸ್ತಾದ ಮೌಲಾಬಕ್ಷರ ಪಾಂಡಿತ್ಯಕ್ಕೆ ಪಂ. ಭಾತಖಂಡೆ ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತ ಲಿಪಿಯನ್ನು ಮೊದಲ ಬಾರಿಗೆ ಕಂಡು ಹಿಡಿದ ಉಸ್ತಾದ ಮೌಲಾಬಕ್ಷರಿಗೆ ಮಹಾರಾಜರು ‘ಸಂಗೀತ ಲೇಖನ ಪದ್ಧತಿ ಉತ್ಪಾದಕ : ಉಸ್ತಾದ ಮೌಲಾಬಕ್ಷ’ರೆಂದು ಗೌರವಿಸಿದರು. ‘The Late Prof. Mowla Bux Founder of the Musical Notation’ ಎಂಬ ಬರಹ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ನಾವು ಇಂದಿಗೂ ನೋಡುತ್ತೇವೆ.

ಉಸ್ತಾದ ಮೌಲಾಬಕ್ಷರು ಕಂಡುಹಿಡಿದ ಸಂಗೀತ ಲಿಪಿಯನ್ನು ಪಂ. ಭಾತಖಂಡೆಯವರು ಪರಿಶೀಲನೆ ಮಾಡಿ ಅದಕ್ಕೆ ಶಾಸ್ತ್ರೀಯ ರೂಪ ನೀಡಿ ಪ್ರಚಾರಕ್ಕೆ ತಂದರು. ಅದರಲ್ಲಿ ಅನೇಕ ಹೊಸ ಮಾದರಿಗಳನ್ನು ನೀಡಿದ ಪಂ. ಭಾತಖಂಡೆ  ಮತ್ತು ಪಂ. ಪಲುಸ್ಕರರವರು ಸ್ವರಲಿಪಿ ಮತ್ತು ತಾಲಲಿಪಿಗಳಿಗೆ ಚಿನ್ಹೆಗಳನ್ನು ನೀಡಿ ಪ್ರಚಾರಕ್ಕೆ ತಂದರು. ಪಂ. ಭಾತಖಂಡೆ ಹಾಗೂ ಪಂ. ಪಲುಸ್ಕರರು ರೂಢಿಯಲ್ಲಿ ತಂದಿರುವ ಸಂಗೀತ ಲಿಪಿ ಪದ್ಧತಿ ಹಿಂದುಸ್ತಾನಿ ಸಂಗೀತದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಸಂಗೀತ ಲಿಪಿಯ ಸಹಾಯದಿಂದ ಪಂ. ಭಾತಖಂಡೆ  ಮತ್ತು ಪಂ. ಪಲುಸ್ಕರ ಅವರುಗಳು ಖಯಾಲ ಗಾಯನದ ಅನೇಕ ಬಂದಿಶ್‌ಗಳನ್ನು ಸ್ವರಲಿಪಿಯಲ್ಲಿ ದಾಖಲಿಸಿ ಗ್ರಂಥಗಳ ಮೂಲಕ ಅವುಗಳನ್ನು ಪ್ರಕಟಿಸಿದರು. ಸಂಗೀತ ಲಿಪಿಯ ಸಹಾಯದಿಂದ ಪಂ. ಭಾತಖಂಡೆಯವರು ಸಹಸ್ರಾರು ಬಂದಿಶಗಳನ್ನು ಗ್ರಂಥಸ್ಥಗೊಳಿಸಿದ್ದಾರೆ. ಅನೇಕ ಸ್ವರಮಾಲಿಕಾ (ಸರಿಗಮ ಗೀತ) ಮತ್ತು ಲಕ್ಷಣ ಗೀತಗಳನ್ನು ತಾವೇ ಸ್ವತಃ ಅನೇಕ ರಾಗಗಳಲ್ಲಿ ರಚನೆ ಗ್ರಂಥ ರೂಪದಲ್ಲಿ ಪ್ರಕಟಿಸಿದ್ದಾರೆ. ಅಸಂಖ್ಯ ಸಂಗೀತಾಭ್ಯಾಸಗಳು ಇವುಗಳನ್ನು ಇಂದಿಗೂ ಅಭ್ಯಾಸ ಮಾಡುತ್ತ ಬಂದಿದ್ದಾರೆ.