ಅನ್ಯಕಾರುರಿಯಾ ನನ ತಮ್ಮನ ಬೈಯಬೇಡ್ರಿ
ಪಡುದವುನಿ ಹೊನ್ನರುಳಿಯಂತೆ | ಒಡಹುಟ್ಟು
ತಮ್ಮಯ್ಯನ ಪಡೆಯಾಕೆ ತಪಸು ಮಾಡಿದ್ದೀ ಹನ್ನೇಡು ವರುಷ
ಅಕ್ಕ ಬರುವಾದೀಲಿ ಹಲಸ್ಯಾಕೋ ತಮ್ಮಯ್ಯ
ವರುಷ ವರುಷಕೆ ಬರುವ | ಅಕ್ಕಯ್ಯಗೆ
ಹಲಸಿನ ಮರವೇ ನೆರಳಾಗಿ
ಕೂತು ಮಾತಾಡೋ ಕೂಪಂ ಜಾಜಿ ಹೂವೆ
ಸೇತ್ಮೇಲಿ ಬೆಳಿವ ಸೈ ಮೊಗ್ಗು | ತಮ್ಮಯ್ಯ
ನೀ ಕೂತು ಮಾತಾಡೋ ಸವೆಯಲ್ಲಿ
ವಾಲೆ ಬಂದಾವೆ ಓದೇಳೊ ತಮ್ಮಯ್ಯ
ದೇವರಟ್ಟೀಯ ಮನೆಯವನೆ | ತಮ್ಮಯ್ಯ
ನ್ಯಾಯ ಬಂದಾವೆ ಗೆಲು ಬಾರೊ
ಮದ್ದೂರು ನ್ಯಾಯ ಬಿದ್ದಾವೋ ತಮ್ಮನ ಮೇಲೆ
ಬುದ್ದಳ್ನ ತಂಗೆ ಬಲದಲ್ಲಿ | ಕುತಗಂದು
ಅವಳು ತಿದ್ದಿಳೋ ಎಲೆಯ ಸಿಗಳನಂಗೆ
ಮಾತು ಬಲ್ಲೋಳ ಮಗ ನ್ಯಾಯ ತಿದ್ದೋನ ಅಳಿಯ
ನೂಪುಳ್ಳಗಾತಿಯ ಒಡಹುಟ್ಟಿ | ನನ ತಮ್ಮ
ಕೂತಲ್ಲೆ ನ್ಯಾಯ ಮುಗಿಯಲ್ಲೊ
ಬಿಲ್ಲ ಇಡಕಂದು ಬೀದೀಲಿ ಬರುವೋನೆ
ನಿನ ಸೊಲ್ಲ ಕೇಳಿಸ್ಕೊಡ್ಲೆ ಸೂಳೆ | ತಡದಾಳೊ
ತಡದ ಸೂಳೆಗೆ ಏನ ಕೊಟ್ಟೂ ತಮ್ಮಯ್ಯ ?
ಕೊಟ್ಟಿ ಕನ ಅಕ್ಕಯ್ಯ ಕುದುರೇಯ
ಕೊಟ್ಟಿ ಕನ ಅಕ್ಕಯ್ಯ | ಕಿಲೀಟುಗಳ
ಕಟ್ಟಿಸಿ ಕೊಟ್ಟಿ ಅರಮನೆಯ
ತೌರೂರು ಹಾದೀಲಿ ಮತ್ತ್ಯಾರ ನೋಡಿದಿ
ಸಾರಂಗವಿಲ್ಲ ಮಿಗವಿಲ್ಲ | ಹಾದೀಲಿ
ಧೀರ ನನ ತಮ್ಮ ಬರುವಾನು
ಏರಿಯ ಕೆಳಗೆ ಏಳದೊರಸಿ ಗಿಡಹುಟ್ಟಿ
ಎಲೆ ಕಿರಿದು ಕಾಯಿಸಣ್ಣ | ಅಣ್ಣಯ್ಯ
ನೀ ಬೇಕು ನಿನ್ನ ಮನೆ ಬ್ಯಾಡ
ಖಂಡುಗ ರಾಗಿ ಬೀಸಿ ಕೈಯೆಲ್ಲಾ ವಪ್ಪಾಳೆ ಎದ್ದೊ
ನೋಡು ಅಣ್ಣಯ್ಯ ನನ ಕೈಯ | ಕೈ
ನೋಡಿ ನಾ ಏನು ಮಾಡೇನು
ಮಲ್ನಾಡಿಗೆ ಹೋಗಿ ಮಡದಿರ ತರುಗಂಟ
ಮೆಲ್ಲಗೆ ಮಾಡ್ ತಂಗಿ ಕೆಲಸಾವ | ನೀ
ನನ್ನೊಂದಿಗುಟ್ಟಿ ನನಗೆ ಬೀಗನಾಗಿ
ರಾಜ್ಯಕ್ಕೆ ನಮ್ಮಣ್ಣದೊರೆಯಾಗಿ ನನಕಂಡು
ಕುದುರೆ ಇಳುಗೀನೋ | ಕೆಮ್ಮುಗುಲೋ
ಎದ್ದೊ ಕೆರೆಗೆ ನೀರು ಬಂದೊ
ನಿನ್ನ ಹೊಲ ಹದ ಬಂದೊ ಅಣ್ಣಯ್ಯ
ಸಾಲು ಕೂರಿಗೆ ಹದ ಮಾಡು | ಸಾಲ
ಸುರಿದಾನೋ ಬಿದಿರ ಸಡ್ಡೆ ಇರಿದಾನೋ
ಉತ್ತಮರ ಮಗಳ ಒಡಗೊಂಡಿ ನಮ್ಮಣ್ಣ
ಬಿತ್ತನ ಚೆಲ್ಲಿನೋ ಬಯಲಿಗೆ | ಮಳೆ
ಬಂದು ಊದರೆ ಬೆಳೆಗೇನು ಅಪರೂಪ
ತೆನೆ ಹೋಗಿ ತೆಂಕ ಒರಗೀವೋ ಅಕ್ಕಯ್ಯ
ಮೆದೆ ಹೋಗಿ ಗಗನ ಮುಡಿಸೀವೊ | ಹತ್ತೇರು
ಕಟ್ಟೀನೋ ಎತ್ತಿನ ಪಾದ ತೊಳೆದೀನೋ
ನಿಶ್ತ್ರೆರ ಅರಬಿ ಎದುರಾದೋ ಅಣ್ಣಯ್ಯ
ನೀ ಹತ್ತೇರು ಕಟ್ಟಿ ಹೊಲಕೆ ಹೊಡೆವಾಗ | ಆರೇರು
ಕಟ್ಟೀನೋ ಹೋರಿ ಪಾದ ತೊಳೆದಾನೋ
ಹಾಲಕ್ಕಿ ಶಕುನ ನುಡಿದಾವೋ ಅಣ್ಣಯ್ಯ
ಆರೇರು ಕಟ್ಟಿ ಹೊಲಕೆ ಹೊಡೆವಾಗ | ಹಲ್ಬೆ
ಹೊಡೆಯೋನ ಹಲ್ಲುನ್ ಭಾಮನೋಡು
ಹೊತ್ತು ಕೂರಿಗೆ ಹೊಡೆಯೊನ ಅಣ್ಣಯ್ಯನ
ಹೊಟ್ಟೆ ತಾರುಂಗ ಎಲಿಯಾದೋ | ಕೂರಿಗೆ
ಹೊಡಿಯೋನ ಕೈಲಿ ಕುಸುಲೆ ಹೂವಿನ ಕೋಲು
ನಾಗರಾವಿನಂಗೆ ನಡುಕಟ್ಟು ಹಾಕ್ಕಂದು
ನಮ್ಮಣ್ಣ ಕೂರಿಗೆ ಹೊಡೆವಾಗ | ಸಮಕಟ್ಟು
ಹೆಸುರು ಭೂಮ್ತಾಯಿ ಏನೇನು ಭಾಮೀಸೀಳೋ
ಭಾಮ್ಸೀಳೋ ಹೊಲದ ಗೌಡನಾ ನಮ್ಮಣ್ಣನ
ಮೊಸರು ಅನ್ನ ತರಹೇಳಿ | ಹಸುರು
ಭೂಮ್ತಾಯಿ ಇನ್ನಾರ ಭಾಮಸೀಳೋ
ಭಾಮ್ಸೀಳೋ ಹೊಲದ ಗೌಡನಾ ನಮ್ಮಣ್ಣನ
ಹಾಲು ಅನ್ನ ತರಹೇಳಿ | ಹಾಲು ಅನ್ನ
ಎಡೆ ಇಕ್ಕಿ ಏನೆಂದು ಕೈಮುಗಿದಾನು
ಸಾಲುಗೆ ಸಾವರವ ಊರೆಲ್ಲಾ ಬೆಳೆದಾರು ನೀನು
ತೆಂಡೆಗೆ ಖಂಡುಗವ ಬೆಳಿಯವ್ವ | ಭೂಮಿತಾಯಿ
ಆಗಂದು ಹಚ್ಚಡವ ಹಾಸಿ ಶರಣೆಂದ
ಮೊಸರು ಅನ್ನ ಎಡೆ ಇಕ್ಕಿ ಏನೆಂದು ಕೈ ಮುಗಿದಾನು
ಸಾಲುಗೆ ಸಾವರವ ಊರೆಲ್ಲಾ ಬೆಳೆದಾರು | ನೀನು
ತೆಂಡಗೆ ಖಂಡುಗವ ಬೆಳಿಯವ್ವ ಭೂಮಿತಾಯಿ
ಆ ಗಂದು ಹಚ್ಚಡವ ಹಾಸಿ ಶರಣೆಂದ
ಚೆಲ್ಲುಕ ಬಂದಣ್ಣ ಚಿನ್ನದ ಗೋಡೆ | ಒರಕಂದು
ಚೆಲ್ಲಿದ ಹೊಲಕ್ಕೆ ಮಳೆಯಿಲ್ಲ ಹಾಗಂದು
ದುಃಖ ಮಾಡಿನೋ ಶಿವನಿಗೆ
ಅರಗಿ ಬಂದಣ್ಣ ಅಡ್ಡಗೋಡೆ | ಒರಿಕಂದು
ಅರಗಿದ ಹೊಲಕೆ ಮಳೆಯಿಲ್ಲ
ಹಾಗಂದು ದುಃಖ ಮಾಡೀನೋ ಶಿವನಿಗೆ
ಅಲ್ಲುಯ್ಯೋ ಮಳೆರಾಯ ಇಲ್ಲುಯ್ಯೋ | ಮಳೆರಾಯ
ನಮ್ಮಪ್ಪನ ಅವರೇಯ ಹೊಲಕೆ
ಚೆಲ್ಲಾಡ್ಕ ಉಯ್ಯೋ ಮಳೆರಾಯ
ಉತ್ಕ ಬಂದೆತ್ತು ದುಂಬೆದ್ದು ಊರಿಗೆ | ಬರುವಾಗ
ಅದ್ನನ್ ಎತ್ತಿನ ದನಿಯೆಂದು
ನನ್ನಣ್ಣ ಅಟ್ಟದಿಂದ ಇರುದ್ನ ಹರಕೋಲ ಪೆಟ್ಟಿಯಿಂದ
ತೆಗುದ್ನ ಜಿಗಣಿ ಪಟ್ಟೆ ವಸ್ತ್ರವ | ನಾ
ಮುಂದಲ ಕಿಚ್ಚಿಗೆ ಹೋಗ್ಬೇಕು ಅಂತ
ಮುಂದಲ ಕಿಚ್ಚಿಗೆ ದಯವಾದ್ನ ಗಂಧದ ಗರುಡೀಲಿ
ಉಂಡು ಮಲಗಿರುವ ರಾಯರಿರ | ಅಣ್ಣಯ್ಯ
ಬಂದವ್ನೆ ಕರುವೋಕೆ ರಾಯರಿರ
ತಿಂಗಳ ರಜವ ಕೊಡುಬನ್ನಿ ತಿಂಗಳನ್ನುವುದು
ವರುಷಗಟ್ಟಲಿಯಲ್ಲವೇ | ತುಂಬಿ
ಕೊಡೆಣ್ಣೆ ತಿಳಿನೀರ
ನೋಡ್ದ ಅಣ್ಣಯ್ಯ ನಿಮ ಭಾವರಾಡಿದ ಮಾತ
ಕರುಚಿಕನಲ್ಲಿ ಕಿಲ್ಕುಣಿ ತೋಪನಾಗೆ | ಕದ್ದು
ಬತ್ತೀನಿ ನಡಿಯಣ್ಣ
ಕದ್ದು ಬಂದರೆ ಕಳ್ಳರೆನ್ನುವರು ತಂಗಮ್ಮ
ನಾಳೆ ಬರುವ ಗೌರಿಯ ಹಬ್ಬಕ್ಕೆ | ಆಳು
ಪಲ್ಲಕ್ಕಿಯ ಕಳುಹೇನು
ಆಳು ಕಳುಹಿದರೆ ಆಡಿಕೊಳ್ಳುವರು ಅಣ್ಣಯ್ಯ
ಆನೆ ಮೇಲೆ ಆನೆ ಮರಿಯಾನೆ | ಹೊಡ್ಕಂದು
ನೀನೆ ಬರಬೇಕು ಕರುವಾಕೆ
ಅಕ್ಕನ ಕರಿಹೋಗು ಚಿಕ್ಕ ತಮ್ಮಯ್ಯ ನೀ ಹೋಗಿ
ಅಕ್ಕನೂರಾದಿ ನೀ ಅರಿಯಲ್ಲೊ | ತಮ್ಮಯ್ಯ
ಬಾರಪ್ಪ ತಮ್ಮ ನಾ ಹೇಳಿ ಕೊಟ್ಟಾನು
ನಲ್ಲವರೆ ಗೊನೆ ಬುಟ್ಟ ಹೊತ್ತಿನಲಿ
ಕುಂಬಳ ನೆಟ್ಟು ಕುಡಿ ಕಡದೋ | ಹಾಗಲ
ನೆಟ್ಟು ಅಳುಗಾರೆ ತಮ್ಮಯ್ಯ
ಸೇರು ಪಟ್ಟಣದಿಂದಾಚೆ ಸಿರಿ ಹೊನ್ನೆ ಮರದಡಿಗೆ
ನಾಲ್ಕು ಪಾದಕೆ ಸಣ ಮಂಚದ ಮೇಲೆ | ನಿಮ್ಮ
ಬಾಣಂತಕ್ಕಯ್ಯ ಒರಗವಳೆ
ಬಾಣಂತಕ್ಕಯ್ಯನ ತೊಡೆಯ ಮೇಲೆ
ಹರಳೆಲೆ ನಾಗಾಯಿ ಮಗನವನೆ | ಅದಿಯೇ
ಕನ ತಮ್ಮಯ್ಯ ನಿನ ಭಾವಾನ ಅರಮನೆ
ಅಕ್ಕರ ಕರಿಯಣ್ಣ ಆಲೂರ ಅರಸ್ತಿಯ
ಬೆಳ್ಳಿ ಗೋಪುರದ ಮನಿಯವಳ | ಅಕ್ಕಯ್ಯನ
ನೀ ಬಲ್ಲೋಮ ಹೋಗಿ ಕರೆಯಣ್ಣ
ಹಬ್ಬ ದಂಡಕ್ ಬಂತು ಹೆಬ್ಬುಲೀಯ ಕಡಕಾಟ
ಕಬ್ಬಿನ ಜಲ್ಲೆ ಕೈಲಿಡಕಂದು | ಒಬ್ಬ
ಅಣ್ಣನ ಬರುಹೇಳು
ಕೂತು ಮಾತಾಡೊ ಕುಂಕುಮ ಜಾಜಿಹೂವೇ
ಸೇತುಮೇಲಿ ಬೆಳುವ ಸೈ ಮೊಗ್ಗು | ತಮ್ಮಯ್ಯ
ನೀ ಕೂತು ಮಾತಾಡೋ ಸಭೆಯಲ್ಲಿ
ಏಲಕ್ಕಿ ಗಮ್ಮೆಂದೊ ಎದೆಯ ಮೇಗಳ ಜೇಬಲ್ಲಿ
ಗಂಧ ಗಮ್ಮೆಂದೋ ಗರುಡೀಲಿ | ನನ್ನ ತಮ್ಮನ
ಅಂಗಿ ಗಮ್ಮೆಂದೊ ಸಭೆಯಲ್ಲಿ
ಆರ್ಸದಕ್ಕಿಯ ಯಾರ್ಗಾಕಿ ಇಕ್ಕಾಲೀ
ಮಾಗಾಯಿ ಕುಲದ ನಮ್ಮಣ್ಣ | ಬಂದರೆ
ಹಾಲು ಚಕ್ಕರೆ ಬೆರಸಿನೋ
ಅಂತರಗೌಳಿ ನಂಟರು ಬರುವುದ ಹೇಳು
ಅಂತರಸಾಲಿನ ಹೊಸಗಾಳಿ | ಹೊನ್ನೆ ಗೌಳಿ
ನಮ್ಮಣ್ಣಯ್ಯ ಬರುವ ದಿನವೇಳು
ಬಾಗಲಗೌಳಿ ಬರುವ ನೆಂಟರೇಳೋ
ಅಂತರ ಸಾಲಿನ ಹೊಸಗೌಳಿ | ಹೊನ್ನೆ ಗೌಳಿ
ನಮ್ಮಣ್ಣಯ್ಯ ಬರುವ ದಿನವೇಳು
ಅಣ್ಣ ಬತ್ತಾನೆಂದು ಸಣ್ಣಕ್ಕಿ ನಾನ್ಹಾಕಿ
ನಮ್ಮಣ್ಣಯ್ಯ ಉಂಡು | ಗಿಣಿ ಉಂಡು
ಮಿಕ್ಕನ್ನ ವಾರ್ ವಾರ್ಗಿತ್ತೀರಿಗೆ ಹಗಲೂಟ
ಊರ ಮುಂದಲ ತೋಟ ಬ್ಯಾಡ ಕನಣ್ಣ
ಕೇಡಾಡುಗಾತಿ ನಿನ ಮಡದಿ | ನೀರಿಗೋಗಿ
ಏಲಕ್ಕಿ ಗೊನೆಯ ಮುರಿದಾಳೊ
ಒಟ್ಟುವ ಸೌದೆ ಮೊದಲಿಲ್ಲ ರಾಯರಿರ
ಇಂದಿದ್ದು ನಾಳೆ ಬರಹೇಳು | ಕೋಟೆ
ನೋಡಿದರೆ ಊಟ ಉಂಡಂಗಾತಣ್ಣ
ಕಟ್ಟಿದ ಬುತ್ತಿ ಅದೆ ಕಟ್ಟೇಲಿ ನೀರವೆ
ನಿಟ್ಟೂರ ಸಂತೆ ನೆರಳದೆ | ಅಣ್ಣಯ್ಯ
ಸುಖವಾಗಿ ನೀನು ಬದುಕಣ್ಣ
ದಂಡಿಗೋದಣ್ಣ ಗೊಂಡೆ ಚೌಲಿ ತಂದ್ನ
ತಂಗೆ ಕೇಳಿದೆ ಕೊಡನಲ್ಲೋ | ಕೋಣೆಲಿರುವ
ಮಡದಿ ಕೇಳುತ್ಕೆ ಮಡಚಿಟ್ನ
ಚೆಂದಿಲ್ಲ ಅಣ್ಣಯ್ಯ ಚೌಲಿ ಚಿನ್ನದ ಕಟ್ಟು
ಮಡದಿ ತಂದಿರುವ ಆ ಸೀರೆ | ಹೂವಿನ ರವಕೆ
ನನಗೊಂದು ಅರಗಳಿಗೆ ಕೊಡುಸಣ್ಣ
ನನ್ನಣ್ಣ ಬಂದ್ನ ನನಗೆ ಬಣ್ಣವ ತಂದ್ನ
ನಿನಗೇನ ತಂದ್ನ ಕಿರಿಯೋಳೆ | ತಂಗ್ಯಮ್ಮ
ಹಡಗಿನಲಿ ತಂದ್ನ ಹವಳಾವ
ಬೆಡಗಿನಲಿ ತಂದ್ನ ಬಿಡಿಮುತ್ತ ನನ್ನಣ್ಣ
ಬಣ್ಣ ದೊಡ್ಡದೆಂದ ಬಳಸಾರ | ಕಿರಿದೆಂದು
ಅಳುತಾ ಹೊಯ್ತಾಳೆ ತಂಗ್ಯಮ್ಮ
Leave A Comment