ಇಡ್ದೂರ ಬಂದಲ್ಲಿ ಈರಾನ ನೆನೆದೇನು
ವಡ್ಡುವಾಲಗದ ವಡಿಯಾನ
ವಡ್ಡುವಾಲಗದ ವಡಿಯಾನ ಎತ್ತಯ್ನ
ಇಡ್ಡುರ ಬಂದಲ್ಲಿ ನೆನದೇನ

ನ್ಯಾಯ ಬಂದಲ್ಲಿ ದ್ಯಾವಾರ ನೆನದೇವ
ಜ್ಯೋಡಿ ವಾಲಗದ ವಡಿಯಾನ
ಜ್ಯೋಡಿ ವಾಲಗದ ವಡಿಯಾನ ಎತ್ತಯ್ನ
ನ್ಯಾಯ ಬಂದಲ್ಲಿ ನೆನದೇನ

ಅಂತರದಲ್ಲಿ ಆದೋವು ಅರಿವಾಣದ ಬಿಂದೀಗೆ
ಚಿಂತಮಣಿ ನನ್ನ ತವರೂರು
ಚಿಂತಮಣಿ ನನ್ನ ತವರೂರು ದ್ಯಾವರ
ಚಿಂತೆ ಬಂದಲ್ಲಿ ನೆನದೇನ

ಆರನ್ನ ಅಡವ್ಯಾಗ ದ್ಯಾವಾರ ನೆನದೇನ
ಓಯೆನ್ನೋ ನನ್ನ ಮುನಿಸ್ವಾಮಿ
ಓಯೆನ್ನೋ ನನ್ನ ಮುನಿಸ್ವಾಮಿ ಎತ್ತಯ್ಯ
ಆದೊಡಿಯ ಬಂದ ಬವಣೀಯ

ಎತ್ತಯ್ಯವುಟ್ಟವನೆ ಎತ್ತು ತುಪ್ಪದಾಗೆ
ಎತ್ತಿನಿಂಡಿನಾಗ ಬ್ಯೆಳದಾನೆ
ಎತ್ತಿನಿಂಡಿನಾಗ ಬ್ಯೆಳದಾನೆ ಬೆಳೆದಾನು
ಮಾರಗಾನಿ ಎತ್ತೀನ ಕೀರುತಿಯ ಪಡೆದಾನು

ಈರಣ್ಣವುಟ್ಟ್ಯಾನೆ ಜೇನುತುಪ್ಪದಾಗ
ಆವಿನಾಡಿನಾಗ ಬೆಳದಾನೆ
ಆವಿನಾಡಿನಾಗ ಬೆಳದಾನೆ ಮಾರಗಾನಿ
ಗೇನಿ ಕೀರುತಿಯ ಪಡೆದಾನು

ಅಕ್ಕೀಯಾರದ ಗುಡ್ಡ ಪಕ್ಸಿತೂರದ ಗುಡ್ಡ
ವೊಕ್ಕುಮಾನ್ಯಾರು ಸುಳಿಯಾರು
ವೊಕ್ಕುಮಾನ್ಯಾರು ಸುಳಿಯಾರು
ಗುಡ್ಡದಮ್ಯಾಲೆ ಪಟ್ಟದಟ್ಟಿಯೋರ ಅರುಮಾನೆ

ಕಾಗೆ ಆರದಗುಡ್ಡ ಗೂಬೇಯು ತೂರದ ಗುಡ್ಡ
ವೋಗಿ ಮಾನವರು ಸುಳಿಯಾರು
ವೋಗಿ ಮಾನವರು ಸುಳಿಯಾರು ಗುಡ್ಡದಮ್ಯಾಲೆ
ಸಾಲ್ಯಾದಟ್ಟಿಯೋರ ಅರುಮನೆ

ವೊತ್ತದೆಲಿಯ ಕೊಯಿದು ಅಕ್ಕಿಬುತ್ತಿಯ ಕಟ್ಟಿ
ಎತ್ತೀನಾತ ಈರಣ್ಣ ಪಯುಣಾವೆ
ಎತ್ತೀನಾತ ಈರಣ್ಣ ಪಯುಣಾವೆ ವೋಗಲುವಾಗ
ಅತ್ತಾಳು ಬನ್ನಿಗೆಳಿಯಾರು

ಅತ್ತಾಳು ಬಂದರೆ ಜೊತ್ತೀಲಿ ಬನ್ನಿರೋ
ಅತ್ತಾಳುಗೊಬ್ಬ ಅಗಲೀರಾ
ಅತ್ತಾಳುಗೊಬ್ಬ ಅಗಲೀರಾ ಗೊಲ್ಲಾರೀರ
ಕಟ್ಟ್ಯವನೆ ಕಾಣೆ ಮರಬಿಲ್ಲು

ಅಗಲೆಲೆಯ ಕೊಯ್ಸಿ ಬ್ಯಾಗಾನೆ ಬುತ್ತಿಕಟ್ಟಿ
ಆವುನ ಕ್ಯಾತಯ್ಯ ಪಯುಣಾವೆ
ಆವುನ ಕ್ಯಾತಯ್ಯ ಪಯುಣಾವೆ ವೋಗಲುವಾಗ
ಆರಾಳು ಬನ್ನಿರಿ ಗೆಳಿಯಾರು

ಆರಾಳು ಬಂದಾರೆ ಜೋಡ್ಯಾಗಿ ಬನ್ನೀರೋ
ಆರಾಳುಗೊಬ್ಬ ಅಗಲೀರಾ
ಆರಾಳುಗೊಬ್ಬ ಅಗಲೀರಾ ಗೊಲ್ಲಾರೀರ
ವೂಡ್ಯವನೆ ಕವಣೇಯ ಮರಬಿಲ್ಲು

ವೊತ್ತದೆಲೆಯ ಕೊಯಿದು ಅಕ್ಕಿಬುತ್ತಿ ಕಟ್ಟಿ
ನೀಡಮ್ಮ ನಿಂಬೇ ತನಿಯಣ್ಣ
ನೀಡಮ್ಮ ನಿಂಬೇ ತನಿಯಣ್ಣ ಗೌಡಾನ
ಆವೋಗುತಾವೆ ವುಲಿದುರುಗ

ಮಾರಮದ್ದಿನದಾಗ ಏನಡಿಗೆ ಮಲ್ಲಮ್ಮ
ವಾವುರಿಗೆ ಎಲ್ಲವೊಗೆಗರೆದು
ವಾವುರಿಗೆ ಎಲ್ಲವೊಗೆಗರೆದು ಮಾಡ್ಯಾಳೆ
ಆವಿನ ಗೌವುಡಾಗೆ ಅವತಾಣ

ಮಟ್ಟಮದ್ಯನದಾಗ ಏನಡಿಗೆ ಮಲ್ಲಮ್ಮ
ಉಪ್ಪುರಿಗೆ ಎಲ್ಲ ವೊಗೆಗರೆದು
ಉಪ್ಪುರಿಗೆ ಎಲ್ಲ ವೊಗೆಗರೆದು ಮಾಡ್ಯಾಳೆ
ಎತ್ತೀನ ಗೌವುಡಾಗ ಅವುತಾಣ

ತುಪ್ಪಸಕ್ಕರನ್ನ ಮತ್ತೋಟು ಎಳ್ಳೆಣ್ಣೆ
ಮತ್ತ್ಯಾರು ಕೂಟೆ ಕಳುವಾಲಿ
ಮತ್ತ್ಯಾರು ಕೂಟೆ ಕಳುವಾಲಿ ತಳುಕೀನ
ಕಟ್ಟಿಮ್ಯಾಲುಂಬ ಗವುಡಾಗೆ

ಆಲುಸಕ್ಕರಿ ಮ್ಯಾಲೋಟು ಎಳ್ಳೆಣ್ಣೆ
ನಾನ್ಯಾರುಕೂಟೆ ಕಳುವಾಲಿ
ನಾನ್ಯಾರುಕೂಟೆ ಕಳುವಾಲಿ ತಳುಕೀನ
ಏರಿಮ್ಯಾಲುಂಬ ಗವುಡಾಗೆ

ಎತ್ತು ಕಂಬಕಾಕಿ ಅಟ್ಟಿ ಬಿಟ್ಟೋಗುವಾಗ
ಉಪ್ಪರಿಗೆ ಸೂಳೆ ಗೆಲಿದಾಳೆ
ಉಪ್ಪರಿಗೆ ಸೂಳೆ ಗೆಲಿದಾಳೆ ಎತ್ತಯ್ನ
ದಟ್ಟೀಯ ಸೆರಗ ಇಡಿದಾಳೆ

ದಟ್ಟೀಯ ಸೆರಗ ನೀನ್ಯಾಕ ಇಡದೀಯೆ
ಎತ್ತುಕೊಟ್ಟೇನು ಬುಡುಸೆರಗ
……………..
…………….

ಎತ್ತುಗಳು ನಮಗವೆ ಎಮ್ಮೆಗಳು ನಮಗವೆ
ಲಕ್ಸಕ್ಕೆ ಬೆಲಿಯಾದ ರತುನಾವೆ
ಲಕ್ಸಕ್ಕ ಬೆಲಿಯಾದ ರತುನಾವೆ ಮಂಚಕ
ವೊಪ್ಪತ್ತೇ ಗೌಡ ಬರಬೇಕು

ವೋರಿ ಕಂಬಕಾಕಿ ಊರು ಬಿಟ್ಟೋಗುವಾಗ
ವಾವುರಿಗೆ ಸೂಳೆ ಗೆಲಿದಾಳೆ
ವಾವುರಿಗೆ ಸೂಳೆ ಗೆಲಿದಾಳೆ ಎತ್ತಯ್ನ
ಪಾವುಡದ ಸೆರಗಾ ಇಡುದಾಳೆ

ಪಾವುಡದ ಸೆರಗಾ ನೀನ್ಯಾಕ ಇಡಿದೀಯ
ಆವುಕೊಟ್ಟೇನು ಬುಡು ಸೆರಗ
……………
……………..

ಆವುಗಳು ನಮಗವೆ ಗೋವುಗಳು ನಮಗವೆ
ಸಾವುರಕ ಬೆಲಿಯಾದ ರತುನಾವೆ
ಸಾವುರಕ ಬೆಲಿಯಾದ ರತುನಾವೆ ಮಂಚಾಕೆ
ಜ್ಯಾವೊತ್ತು ಗವುಡಾ ಬರಬೇಕು

ಗುತ್ತೀಯ ಸೀಮೇಗೆ ಎತ್ತೆದ್ದು ವೋಗುತಾವೆ
ಜೊತ್ತು ಬಾಳೆತಾರೆ ಮಲ್ಲಮ್ಮ
ಜೊತ್ತು ಬಾಳೆತಾರೆ ಮಲ್ಲಮ್ಮ ಈರನೆತ್ತು
ಗುತ್ತಿ ಸಾಗ್ರಾವ ಇಳುದಾವೆ

ಗ್ವಾವೀಯ ಸೀಮೀಗೆ ಆವೆದ್ದು ವೊಗುತಾವೆ
ಜ್ಯೋಡು ಬಾಳೆತಾರೆ ಮಲ್ಲಮ್ಮ
ಜ್ಯೋಡು ಬಾಳೆತಾರೆ ಮಲ್ಲಮ್ಮ ಈರಾನಾವು
ಗ್ವಾವೆ ಸಾಗ್ರಾವ ಇಳುದಾವೆ

ಮಂಗಾರೆ ಬುರುಡ್ಯಾಗ ತುಂಬಮ್ಮ ಪನ್ನೀರು
ರೆಂಬೆಕಣ್ಣೀರು ತೋರಾದೀರೆ
ರೆಂಬೆ ಕಣ್ಣೀರು ತೋರಾದೀರೆ ಎತ್ತಯ್ನ
ಇಂಡೋಗುತಾವೆ ವುಲಿದುರುಗ

ಕಾರೀಯ ಬುರುಡ್ಯಾಗ ತೋರಮ್ಮ ಪನ್ನೀರು
ನಾರಿ ಕಣ್ಣೀರು ತರದೀರೆ
ನಾರಿ ಕಣ್ಣೀರು ತರದೀರೆ ಎತ್ತಯ್ನ
ಆವೋಗುತಾವೆ ವುಲಿದುರುಗ

ದುರುಗದ ಸೀಮೀಗೆ ದೊರಿಮಗನ ಇಂಡೋಗುವಾಗ
ತಿರುಗಾಲಾಕ್ಯಾಳೆ ಪಗಡೀಯ
ತಿರುಗಾಲಾಕ್ಯಾಳೆ ಪಗಡೀಯ ಗುಡ್ಡದ ಬೋರಿ
ದೊರಿಮಗನ ಇಂಡಾ ತಡುದಾಳೆ

ಆವುಗಳಾ ಇಂಡಾನ್ಯಾಕೆ ತಡದೀಯೆ
ಆವುಕೊಟ್ಟೇನು ನೀಡುದುಣ್ಣೆ

ಎತ್ತುಗಳು ನಮಗವೆ ಎಮ್ಮೆಗಳು ನಮಗವೆ
ಮತ್ತೆ ಬಾಗ್ಯಾವು ನಮಗವೆ
ಮತ್ತೆ ಬಾಗ್ಯಾವು ನಮಗವೆ ಏಗವುಡ
ಗೊಡ್ಡುಗಾಳೀಯ ಕೊಡಬೇಕು

ನಾಕು ಕೊಡುವುದಕ ನಲವತ್ತು ಕೊಟ್ಟೇನು
ವಾವುರಿಗೇ ಮುಂದೆ ಕರದುಣ್ಣೆ
ವಾವುರಿಗೇ ಮುಂದೆ ಕರದುಣ್ಣೆ ನಾಯಕದನಡಿಯ
ಆವುಗಳ ಕಡಿಯ ಕೊಡಲಾರೆ

ಗುಡ್ಡಾದ ಸೀಮೀಗೆ ದೊಡ್ಡೋನಿಂದೊಗುವಾಗ
ಅಡ್ಡಾವಾಕ್ಯಾಳೆ ಪಗಡೀಯ
ಅಡ್ಡಾವಾಕ್ಯಾಳೆ ಪಗಡೀಯ ಗುಡ್ಡದ ಬೋರಿ
ದೊಡ್ಡೋನ ತಡುದಾಳೆ

ದೊಡ್ಡೋನ ತಡದು ಕೇಳ್ಯಾಳೆ
ಗೊಡ್ಡುಗಾಳೀಯ ಕೊಡುರಾಯ

ಒಂದು ಕೊಡುವುದಕ ಒಂಬತ್ತು ಕೊಟ್ಟೇನು
ಉಪ್ಪರಿಗೆ ಮುಂದೆ ಕರದುಣ್ಣೆ
ಉಪ್ಪರಿಗೆ ಮುಂದೆ ಕರದುಣ್ಣೆ ನಾಯಕದಗಡಿಯ
ಎತ್ತುಗಳ ಕಡಿಯೂ ಕೊಡಲಾರೆ

ಉಗ್ಗಾದ ಗಡಿಗೆ ಬಗ್ಗಿ ಎಗಲಿಗಾಕಿ
ರುದ್ರಣ್ಣೊರುಟಾನೆ ವುಲಿದುರುಗ
ರುದ್ರಣ್ಣೊರುಟಾನೆ ವುಲಿದುರುಗ ತಳುಕೀನ
ಏಬ್ಬೀಲಿ ಗೂಡಾ ವಡೆದಾನೆ

ಆವೀನ ಗೆಡಿಗೆ ತೂಗಿ ಎಗಲೀಗಾಕಿ
ಈರಣ್ಣ ವೊರಟಾನೆ ವುಲಿದುರುಗ
ಈರಣ್ಣ ವೊರಟಾನೆ ವುಲಿದುರುಗ ತಳುಕೀನ
ವಾರೀಲಿ ವೊಡೆದಾನೆ ವೊರಗೂಡ

ತೆಕ್ಕೀಯ ಗಡಿಗೆ ಎತ್ತಿ ಎಗಲೀಗಾಕಿ
ಎತ್ತ ವೊರಟಾನೆ ವುಲಿದುರುಗ
ಎತ್ತ ವೊರಟಾನೆ ವುಲಿದುರುಗ ತಳುಕೀನ
ಎತ್ತೀಲೊಡೆದಾನೆ ವೊರಗೂಡು

ತುರುಕರನಾ ವಡಿಯಾದು ಸ್ರಬಕೀನ ಮರಬಿಲ್ಲು
ದನಿಕ ಎತ್ತಯ್ಯ ವುಲಿದುರುಗ
ದನಿಕ ಎತ್ತಯ್ಯ ವುಲಿದುರುಗ ವೊಂಟಾಸುದ್ದಿ
ತುರುಕರ ನಾಡೀಗೆ ಅರುದಾವೆ

ಕಳ್ಳರನ ವಡಿಯೋದು ಬೆಳ್ಳೀಯ ಮರಬಿಲ್ಲು
ಬಲ್ಲಿದನನೆತ್ತಯ್ಯ ಮರಬಿಲ್ಲು
ಬಲ್ಲಿದನನೆತ್ತಯ್ಯ ವುಲಿದುರುಗ ವೊಂಟಾಸುದ್ದಿ
ಕಳ್ಳದನಾಡೀಗೆ ಅರುದಾವೆ

ತರಿಯದ ಕಳ್ಳಿಕಡುದು ತಿರುವಿಗೂಡಾನಾಕಿ
ಎಬ್ಬೆಳ್ಳೀಲಿ ಆಲಕರುವಾನೆ
ಎಬ್ಬೆಳ್ಳೀಲಿ ಆಲಕರುವಾನೆ ಎತ್ತಯ್ಯಾನ
ಬುದ್ದಿಬ್ಯಾಡರಿಗೇ ತಿಳಿಯಾವು

ತಗ್ಗುಲಿ ಕಳ್ಳ ಕಡಿದು ಬಗ್ಗಿಸಿಗೂಡನ್ನಾಕಿ
ಎಬ್ಬೆಳ್ಳೀಲಿ ಆಲ ಕರೆವಾನೆ
ಎಬ್ಬೆಳ್ಳೀಲಿ ಆಲ ಕರೆವಾನೆ ಎತ್ತಯ್ಯಾನ
ಬುದ್ದಿಬ್ಯಾಡರಿಗೆ ತಿಳಿಯಾವು

ಆಸೀದ ಕಳ್ಳೆಕಡುದು ಬೀಸಿಗೂಡನ್ನಾಕಿ
ದೇಸದ ಮ್ಯಾಲೆ ಆಲಕರವೋನೆ
ದೇಸದ ಮ್ಯಾಲೆ ಆಲಕರವೋನೆ ಎತ್ತಯ್ನ
ಮೋಸಾ ಬ್ಯಾಡರಿಗೆ ತಿಳಿಯಾವು

ಕಳ್ಳರು ಬಂದು ಕಳ್ಳೇ ಕೀಳಲುವಾಗ
ಬೆಳ್ಳೀಯ ಕವಣೆ ಬೆರಳಾಗ
ಬೆಳ್ಳೀಯ ಕವಣೆ ಬೆರಳಾಗ ಎತ್ತಯ್ಯ
ಕಳ್ಳರ ನೀಡಾಡಿವಡೆದಾನೆ

ಬ್ಯಾಡರು ಬಂದು ಕಳ್ಳೇಕೀಳಲುವಾಗ
ಕಾಗೂಡಿ ಕವಣೆ ಬೆರಳಾಗ
ಕಾಗೂಡಿ ಕವಣೆ ಬೆರಳಾಗ ಎತ್ತಯ್ಯ
ಬ್ಯಾಡಾರ ನೀಡಾಡಿ ವಡೆದಾನೆ

ಆಲುಕಾಸ್ಯಾಳೆ ಆಲುನೆಲುವಿಗಿಟ್ಟಾಳೆ
ವೋದಾಳೆತ್ತಯ್ನ ಬೆರಗೀಗೆ
ವೋದಾಳೆತ್ತಯ್ನ ಬೆರಗೀಗೆ ವುಲಿಗಾಗಿ
ಆಡೆತ್ತಳಾವಿ ನುದಿಯಾಗೆ

ಆಡೆತ್ತಳಾವಿನುದಿಯಾಗ ವುಲಿಗಾನಿ
ತೋಳಿಡಿದುದಬ್ಬುವರಿಯಾಕ
……….
……….

ತುಪ್ಪಾಕಸ್ಯಾಳೆ ತುಪ್ಪಾನೆಲುವಿಗಿಟ್ಟಾಳೆ
ವೋದಾಳೆತ್ತಯ್ನ ಬೆರಗೀಗೆ
ವೋದಾಳೆತ್ತಯ್ನ ಬೆರಗೀಗೆ ನಾಯಕದಗಡಿ
ಆಡೆತ್ತಾಳಾವೀನ ವುದಿಯಾಗ

ಗುಡ್ಡ ಅತ್ತ್ಯಾನೆ ಕೆಂಗಣ್ಣು ಬಿಟ್ಟಾನೆ
ದೊಡ್ಡಟ್ಟಿ ಅರಸು ಎತ್ತಯ್ಯ
ದೊಡ್ಡಟ್ಟಿ ಅರಸು ಎತ್ತಯ್ಯಗುಡ್ಡ
ಅತ್ತಿ ಆವಾ ಕರೆದಾನೆ

ದುರುಗವ ಅತ್ತ್ಯಾನೆ ಕಿಡಿಗಣ್ಣು ಬಿಟ್ಟ್ಯಾನೆ
ಇರಿಯಟ್ಟಿ ಅರಸ ಎತ್ತಯ್ಯ
ಇರಿಯಟ್ಟಿ ಅರಸ ಎತ್ತಯ್ಯ ತಳುಕೀನ
ದುರುಗ ಅತ್ತಿ ಕರೆದಾನೆ

ಆವೀಗೆ ವೋರೀಗೆ ಮೋವಿಗಾದ ಒಂದು
ತಾವು ಸರಣಾರು ಇಳಿದಾರೆ
ಎತ್ತೀನಾ ಗೂಡಿನಾಗ ಮುತ್ತಿನ ಗದ್ದುಗೆ ಮಾಡಿ
ಸಕ್ಕಬೂಸುರನ ತೆಲೆಗಿಂಬು

ಆವೀನ ಗೂಡಿನಾಗ ವೂವಿನ ಗದ್ದುಗೆಮಾಡಿ
ನಾಗಬೂಸುರನ ತಲೆಗಿಂಬು
ನಾಗಬೂಸುರನ ತಲೆಗಿಂಬು ಎತ್ತಯ್ಯಾನ
ಈದಾವಿಗೆ ದಾರೆ ಯೆರುದಾರೆ

ಉತ್ತೀಗೆ ಎತ್ತಯ್ಗೆ ವೊಪ್ಪೀಗಾದಾವೆಂದು
ಮತ್ತೆ ಸರಣಾರು ಇಳುದಾರೆ
ಮತ್ತೆ ಸರಣಾರು ಇಳುದಾರೆ ಎತ್ತಯ್ನ
ಎತ್ತಾವಿಗೆ ದಾರೆಯೆರುದಾರೆ

ಆವು ಬಂದಾವೆ ಬಾರೆ ಮರಿಮಲ್ಲಮ್ಮ
ವೂವಿನರಿವಾಣಾದಾಗದವನಾವೆ
ವೂವಿನರಿವಾಣಾದಾಗದವನಾವೆ ಧೂಪನಾಕಿ
ಆವಿಗೆ ಸೇಸವನಿಡುಬಾರೆ

ಎತ್ತು ಬಂದಾವೆ ಬಾರೆ ಮುತ್ತಿನ ಮಣೆಮಲ್ಲಮ್ಮ
ಮುತ್ತಿನರಿವಾಣಾದಾಗ ದವನಾವೆ
ಮುತ್ತಿನರಿವಾಣಾದಾಗ ದವನಾವೆ ಧೂಪನಾಕಿ
ಎತ್ತಿಗೆ ಸೇಸವನಿಡುಬಾರೆ

ಸೇಸವನಿಟ್ಟಾಳೆ ರೂಪವನಾಕ್ಯಾಳೆ
ಕೋಪದಲಿ ಆವಡುದಾಳೆ
ಕೋಪದಲಿ ಆವಡುದಾಳೆ ಬುದ್ದಿವಳಿ
ಅವಸಾರ ಮನಿಗೆ ಕಳುವ್ಯಾಳೆ

ಎತ್ತು ಬಂದಾವು ಬಾರೆ ಮುತ್ತೈದೆ ಮಲ್ಲಮ್ಮ
ವುತ್ತಿತ್ತಿ ಅಣ್ಣು ಮಡಲಾಗೆ
ವುತ್ತಿತ್ತಿ ಅಣ್ಣು ಮಡಲಾಗೆ ಎತ್ತೀಗೆ
ಸೂರೆಯ ಬುಡುಬಾರೆ

ಆವುಬಂದಾವೆ ದೇವೈದೆ ಮಲ್ಲಮ್ಮ
ಬಾಳೀಯ ಅಣ್ಣು ಮಡಿಲಾಗ
ಬಾಳೀಯ ಅಣ್ಣು ಮಡಿಲಾಗ ಎತ್ತಯ್ಯಾನ
ಆವೀಗೆ ಸೂರೇಯ ಬಿಡುಬಾರೆ

ಬೆಳ್ಳೀಕೋಲಿಗೆ ತೆರಳ್ಯಾವು ಅಣ್ಣಾನಾವು
ತೆಳ್ಳುಗರಿಯೆಂದ ದೈಮಾರಿ
ತೆಳ್ಳುಗರಿಯೆಂದ ದೈಮಾರಿ ಎತ್ತಯ್ಯಾನ
ಬೆಳ್ಳಿಮಿಂಚ್ಯಾವು ಮಿಂಚೀಗೆ

ವುಡಿವೆ ಕೋಲೀಗೆ ಅಡಗ್ಯಾವು ಅಣ್ಣನಾವು
ವುಡಿಗೆಗರಿಯೆಂದ ದೈಮಾರಿ
ವುಡಿಗೆಗರಿಯೆಂದ ದೈಮಾರಿ ಎತ್ತಯ್ಯಾನ
ಬೆಡಗು ಮಿಂಚೀನ ಬೆರಗೀಗೆ

ಕಂಚೀನ ಕೋಲಿಗೆ ಮಿಂಚ್ಯಾವು ಅಣ್ಣಾವು
ಸಿಂಚಗರಿಯೆಂದ ದೈಮಾರಿ
ಸಿಂಚಗರಿಯೆಂದ ದೈಮಾರಿ ಎತ್ತಯ್ನ
ಸಂಚುಮಿಂಚ್ಯಾವೆ ಬೆರಗೀಗೆ

ಕಂಚೀನ ಕೋಲಿಗೆ ಮಿಂಚ್ಯಾವು ಅಣ್ಣಾವು
ಸಿಂಚಗರಿಯೆಂದ ದೈಮಾರಿ
ಸಿಂಚಗರಿಯೆಂದು ದೈಮಾರಿ ಎತ್ತಯ್ನ
ಸಂಚುಮಿಂಚ್ಯಾವೆ ಬೆರಗೀಗೆ

ಏರಲಾರದ ಗುಡ್ಡ ಅತ್ತೇವಣ್ಣ ನಾವು
ಸಿಕ್ಕೇ ಬಣ್ಣದ ವುಲಿಬಂದು
ಸಿಕ್ಕೇ ಬಣ್ಣದ ವುಲಿಬಂದು ಎತ್ತಯ್ನ
ಎತ್ತಾವಿಗೆ ಕಯ್ಯ ಮುಗದೇವು

ಎತ್ತಿನಾಗೆ ಎತ್ತಯ್ಯ ಬಟ್ಟಲುದುರುಬಾನಿಟ್ಟು
ಸಿಕ್ಕುತ್ತದ ಮ್ಯಾಲ ಕೊರಳೂಡಿ
ಸಿಕ್ಕುತ್ತದ ಮ್ಯಾಲ ಕೊರಳೂಡಿ ಮೇಸ್ಯಾನೆ
ಆದ್ರಿಮಳೆವೊಯ್ದ ವಡಿವುಲ್ಲು

ಅಪ್ಪ ಎತ್ತಯ್ಯ ಸಿಕ್ಕು ಎಗಲೀಗಾಕಿ
ಸಿಕ್ಕುತ್ತದ ಮ್ಯಾಲೆ ಕೊರಳೂಡಿ
ಸಿಕ್ಕುತ್ತದ ಮ್ಯಾಲೆ ಕೊರಳೂಡಿ ಮೇಸ್ಯಾನೆ
ಉತ್ತರೆ ಮಳೆವೊಯ್ದು ವಡಿವುಲ್ಲು

ದೊರೆಯ ಎತ್ತಯ್ಯ ಕೊಡಲಿ ಎಗಲಿಗಿಟ್ಟು
ವೋರಿಯುತ್ತಮ್ಯಾಲೆ ಕೊರಳೂಡಿ
ವೋರಿಯುತ್ತಮ್ಯಾಲೆ ಕೊರಳೂಡಿ ಮೇಸ್ಯಾನೆ
ಆದ್ರಿಮಳೆವೊಯ್ದು ವಡಿವುಲ್ಲು

ಗುಡ್ಡಾದ ಅರುಗೀಲಿ ಗುಡುಗುಟ್ಟುತೀನಮ್ಮ
ದೊಡ್ಡೋನೆತ್ತಯ್ನ ಮೈಜೋಡು
ದೊಡ್ಡೋನೆತ್ತಯ್ನ ಮೈಜೋಡು ಬೆಳ್ಳಿಗೋವು
ಎದ್ದಾವೆ ಮೂಡಾಮೊಕನಾಗಿ

ತಳುಕೀನ ಕೆರಿಯಾಗ ತಣಕಂಬವೇನಮ್ಮ
ದನಿಕ ಉತ್ತಯ್ನ ಮನಿಜೋಡು
ದನಿಕ ಉತ್ತಯ್ನ ಮನಿಜೋಡು ಪಟ್ಟೇದಟ್ಟಿ
ಒಳವಾರೆ ಕಣ್ಣುಕಮರ‍್ಯಾವೆ

ಬನ್ನೀಯ ಮರದಡಿಯ ವೊನ್ನು ರಾಸಿವೊಯ್ದು
ವೊನ್ನೀಗೆ ಸೂಳೆಸುಳಿಯಾರು
ವೊನ್ನೀಗೆ ಸೂಳೆಸುಳಿಯಾರು ಎತ್ತಯ್ಯಾನ
ದಟ್ಟೀಗೆ ಸೂಳೆ ಸುಳಿಯಾಳು

ಆಳುವ ನೂರು ಬ್ಯಾಡಾರು ನಮ್ಮಿಗಳಿಮಕ್ಕಳು
ನೀನು ನಮ್ಮಿಗೆ ಕಿರುದಂಗಿ
ನೀನು ನಮ್ಮಿಗೆ ಕಿರುದಂಗಿ ಬೋರಮ್ಮ
ನೀನೋಗೆ ನಿನ್ನರುಮನಿಗೆ

ಕಾಡನೂರು ಬ್ಯಾಡಾರು ನನಗಣ್ಣ ತಮ್ಮಗಳು
ನೀನು ನಮ್ಮೀಗೆ ಕಿರುದಂಗಿ
ನೀನು ನಮ್ಮೀಗೆ ಕಿರುದಂಗಿ ಬೋರಮ್ಮ
ನೀನೋಗೆ ನಿನ್ನರುಮನಿಗೆ

ಕಾಡನೂರು ಬ್ಯಾಡಾರು ನನಗಣ್ಣತಮ್ಮಗಳು
ನೀನು ನಮ್ಮೀಗೆ ಕಿರುದಂಗಿ
ನೀನು ನಮ್ಮೀಗೆ ಕಿರುದಂಗಿ ಬೋರಮ್ಮ
ನೀನೋಗೆ ನಿನ್ನರುಮನಿಗೆ

ಕಂಕನಲ್ಲಿ ಸೊಪ್ಪು ಅಂಚಿಕ್ಕಿವುರಿವೆಂಬ
ಕಂಕಬ್ಯಾಡರಿಗೆಲ್ಲ ಕುಲವಯ್ಯ
ಕಂಕ ಬ್ಯಾಡರಿಗೆಲ್ಲಿ ಕುಲವಯ್ಯ ಗೊಲ್ಲಗವುಡ
ಕಂಕದ ನೀಡಾಡಿ ವಡೆದಾನೆ

ಕಾಡಿನಲ್ಲಿ ಸೊಪ್ಪು ಕೋಡಿಕ್ಕಿ ಉರಿವೆಂಬ
ಕಾಡಬ್ಯಾಡರಿಗೆಲ್ಲಿ ಕುಲವಯ್ಯ
ಕಾಡಬ್ಯಾಡರಿಗೆಲ್ಲಿ ಕುಲವಯ್ಯ ಗೊಲ್ಲಗವುಡ
ಬ್ಯಾಡರನೀಡಾಡಿ ವಡೆದಾನೆ

ಸುಕ್ಕೆವುಟ್ಟೋವತ್ತಿಗೆ ವುಟ್ಟ್ಯಾವೆ ಬಸುಮಂಗಿ
ಉತ್ತೀನಗವುಡ ಎತ್ತಯ್ಯ
ಉತ್ತೀನಗವುಡ ಎತ್ತಯ್ಯ ನೆತ್ತಿಮ್ಯಾಲೆ
ಮುತ್ತೀನ ಅರಳು ಉರಿದಾವೆ

ಸುರಿದ ಮೂಡೊತ್ತಿಗೆ ಆದಾವೆ ಬಸಮಂಗಿ
ಆವಿನ ಗೌಡ ಎತ್ತಯ್ಯ
ಆವಿನ ಗೌಡ ಎತ್ತಯ್ಯ ನೆತ್ತಿಮ್ಯಾಲೆ
ವೂವಿನ ಅರಳೆ ಉರಿದಾವೆ

ಆರು ಕಾಲೇಣೆ ವೂವಿನ ತೂರಾಯ
ಏರುಬಾರಾದೆ ಬಸುಮಂಗಿ
ಏರುಬಾರದೆ ಬಸುಮಂಗಿ ಗುಡ್ಡದಮ್ಯಾಲೆ
ಸಾಲುದಗಟ್ಟ್ಯೋನ ಅರುಮಾನೆ

ಅರುಮನಿ ಯಾತಕೊ ಅಡವಿ ಗೊಲ್ಲಾಗ
ಆವಿನಿಂಡಿನಾಗ ಸವುಲಾವೆ
ಆವಿನಿಂಡಿನಾಗ ಸವುಲಾವೆ ಆಕಸಿಕಂಬ
ಅಲೆಯೆತ್ತಯ್ಯ ಸಲುವೋದು

ಅತ್ತು ಕಾಲೇಣೆ ಮುತ್ತೀನ ತೂರಾಯ
ಅತ್ತುಬಾರಾದ ಬಸುಮಂಗಿ
ಅತ್ತುಬಾರಾದ ಬಸುಮಂಗಿ ಗುಡ್ಡದಮ್ಯಾಲೆ
ಪಟ್ಟದಟ್ಟ್ಯೋನ ಅರುಮನೆ

ಅರುಮನಿಯಾತಾಕೊ ಅಡವೀಯ ಗೊಲ್ಲಾಗ
ಎತ್ತಿನಿಂಡಿನಾಗ ಸವುಲಾವೆ
ಎತ್ತಿನಿಂಡಿನಾಗ ಸವುಲಾವೆ ಆಕಸಿಕಂಬ
ಎಚ್ಚುಎತ್ತಯ್ಗೆ ಸಲುವೋದು

ಗ್ವಾವೀಯ ಕಡಿಸಿ ಮ್ಯಾಲೆ ಸಾಸನ ನಡಿಸ್ಯಾನೆ
ದೂರಲು ಬಸುಮಂಗಿ ತಿರುವ್ಯಾನೆ
ದೂರಲು ಬಸುಮಂಗಿ ತಿರುವ್ಯಾನೆ ಎತ್ತಯ್ಯ
ದೂರಲ ರಾಜ್ಯಕ್ಕ ಎಸರಾದ

ಗುತ್ತಿ ಎಂಬ ಗುತ್ತಿಗುತ್ತಿ ಚಂದ್ರಗುತ್ತಿ
ಎತ್ತೀನ ಗವುಡ ಕಟಿಸ್ಯಾನೆ
ಎತ್ತೀನ ಗವುಡ ಕಟಿಸ್ಯಾನೆ ಎತ್ತಯ್ಯ ಕಡಿಸಿ
ಗುತ್ತಿಗೆ ಸಾಸನ ವಡಿಸ್ಯಾನೆ

ಗ್ವಾವಿಯೆಂಬ ಗ್ವಾವಿ ಚಂದ್ರಗ್ವಾವಿ
ಆವೀನ ಗವುಡ ಕಡಿಸ್ಯಾನೆ
ಆವೀನ ಗವುಡ ಕಡಿಸ್ಯಾನೆ ಎತ್ತಯ್ಯಕಡಿಸಿ
ಗ್ವಾವೀಗೆ ಸಾಸನ ಇಡಿಸ್ಯಾನೆ

ಅದ್ದಿನಗರಿಯಂಗವೆದ್ದಾವುಬ್ಯಾಡರದಂಡು
ಉದ್ದಕ್ಕ ಕ್ಯಾರೆ ತಳುಕೀನ
ಉದ್ದಕ್ಕ ಕ್ಯಾರೆ ತಳುಕೀನ ಏರಿಮ್ಯಾಲೆ
ಉದ್ದವೆತ್ತಯ್ನ ಮರಬಿಲ್ಲು

ಜ್ವಾಳಾದ ಗರಿಯಂಗ ವೋದವು ಬ್ಯಾಡರದಗಂಡು
ನ್ಯಾರಾಕಾಕ್ಯಾರೆ ತಳುಕೀನ
ನ್ಯಾರಾಕಾಕ್ಯಾರೆ ತಳುಕೀನ ಏರಿಮ್ಯಾಲೆ
ವೋದಾವು ಎತ್ತಯ್ನ ಮರಬಿಲ್ಲು

ಚಿಕ್ಕಾಮುತ್ತೋಡಿಗಚ್ಚಿನ ಚಾವುಡಿಯಾಗ
ಕೆತ್ತಿಸಿದ ಮಂಚ ವೊರಗ ಮೂಡಿ
ಕೆತ್ತಿಸಿದ ಮಂಚ ವೊರಗ ಮೂಡಿ ಬಿಟ್ಟು
ಲೆತ್ತಕತ್ತಯ್ನ ಕರಿಸ್ಯಾರೆ

ರಾಯ ಮುತ್ತೋಡಿಗಾರೆ ಚಾವುಡಿಯಾಗ
ಮಾಡಿಸಿದ ಮಂಚವೊರಗಮೂಡಿ
ಮಾಡಿಸಿದ ಮಂಚವೊರಗಮೂಡಿ ಬಿಟ್ಟು
ದಾಯಕೆತ್ತಯ್ನ ಕರಿಸ್ಯಾರೆ

ಎತ್ತೆಲ್ಲಿ ಮೇದಾವೆ ಎತ್ತೆಲ್ಲಿಗೆಲಿದಾವೆ
ಸಿಕ್ಕಾ ಮತ್ತೋಡಿ ಸ್ರೊಬಗೀನ
ಸಿಕ್ಕಾ ಮತ್ತೋಡಿ ಸ್ರೊಬಗೀನ ಕಾವಲುಮೇದು
ಉತ್ತು ಎತ್ತಯ್ಗೆ ಗೆಲಿದಾವೆ

ಅಪ್ಪ ಎತ್ತಯ್ಯ ಎತ್ತು ಜೂಜಿಗ ಬುಟ್ಟು
ಚಿಕ್ಕುಲಿಕುಂಟೆ ಕೆರಿಗೋಗಿ
ಚಿಕ್ಕುಲಿಕುಂಟೆ ಕೆರಿಗೋಗಿ ಎತ್ತಯ್ಯ
ಎತ್ತು ಜೂಜಿಗ ಬುಟ್ಟು ನಗುತಾನೆ

ಸ್ವಾಮಿ ಎತ್ತಯ್ಯ ಆವು ಜೂಜಿಗ ಬುಟ್ಟು
ರಾಯ ವುಲಿಕುಂಟೆ ಕೆರಿಯಾಗ
ರಾಯ ವುಲಿಕುಂಟೆ ಕೆರಿಯಾಗ ಅಂಗಳದಾಗ
ಆವು ಜೂಜಿಗ ಬುಟ್ಟು ನಗುತಾನೆ

ಚಿಕ್ಕಮತ್ತೋಡಿ ಗಚ್ಚಿನ ಚಾವುಡಿಯಾಗ
ಅತ್ತಂದಲದೋರು ಪಗಡೀಯ
ಅತ್ತಂದಲದೋರು ಪಗಡೀಯ ಜೂಜಿನಮರಕ
ದಾಯಕೆತ್ತಯ್ನ ಕರೆಸ್ಯಾರೆ

ಎತ್ತೀನ ಜೂಜುಗಳು ಅತ್ತಬೇಕು ಬಾವಯ್ಯ
ಚಿಕ್ಕುಲಿಕುಂಟೆ ಕೆರೆಗೋಗಿ
ಚಿಕ್ಕುಲಿಕುಂಟೆ ಕೆರೆಗೋಗಿ ನನ್ನಾವು ಸೋತಾರೆ
ಇಪ್ಪತ್ತು ಕಡಸ ವಡಕೊಡುವೆ

ಆವೀನ ಜೂಜುಗಳು ಆಡಲುಬೇಕು ಬಾವಯ್ಯ
ರಾಯ ವುಲಿಕುಂಟೆ ಕೆರೆಗೋಗಿ
ರಾಯ ವುಲಿಕುಂಟೆ ಕೆರೆಗೋಗಿ ನನ್ನಾವು ಸೋತಾರೆ
ನಲವತ್ತು ಕಡಸ ವಡಕೊಡುವೆ
ಆವೀನ ಜೂಜುಗಳು ಆಡಬ್ಯಾಡ ಬಾವಯ್ಯ
ರಾಯ ವುಲಿಕುಂಟೆ ಕೆರೆಗೋಗಿ
ರಾಯ ವುಲಿಕುಂಟೆ ಕೆರೆಗೋಗಿ ನಿನ್ನಾವು
ಸೋತಾರೆ ರಾಯದಜ್ಜುಕಾರಿ ಕಳಕಂಬೆ

ದೊರೆಯ ಎತ್ತಯ್ಯ ಕರಿಯ ಕಂಬಳಾಸಿ
ದೊರಿಯೆ ಮೈಗಾದ ಮನಗವನೆ
ದೊರಿಯೆ ಮೈಗಾದ ಮನಗವನೆ ಉತ್ತಯ್ಯ
ಪರುಮಳದ ಸಿಂಬೀಯ ಎಡಿಯಡಿಗೆ

ದೊಡ್ಡೋನೆತ್ತಯ್ಯ ಮಬ್ಬುಗಂಬಳಿಯಾಸಿ
ದೊಡ್ಡ ಮೈಗಾದ ಅರುಗೀಲಿ
ದೊಡ್ಡ ಮೈಗಾದ ಅರುಗೀಲಿ ಎತ್ತಯ್ಯ
ವಜ್ಜರದ ಸಿಂಬೇಯಡಿಗಡಿಗೆ

ಅಪ್ಪ ಎತ್ತಯ್ಯ ಎತ್ತುಜೂಜಿಗೆ ಬುಟ್ಟು
ಚಿಕ್ಕಾರೇವುಂಡೆ ತಿರಳಾಗೆ
ಚಿಕ್ಕಾರೇವುಂಡೆ  ತಿರಳಾಗೆ ತಳುಕೀನ
ಎತ್ತು ಜೂಜಿಗೆ ಬಿಟ್ಟು ನಗುತಾನೆ

ದೊರೆಯ ಎತ್ತಯ್ಯ ಆವಿನ ಜೂಜಿಗೆ ಬುಟ್ಟು
ರಾಯರೇವುಂಡೆ ನೆರಳಾಗೆ
ರಾಯರೇವುಂಡೆ ನೆರಳಾಗೆ ಎತ್ತಯ್ಯ
ಆವು ಜೂಜಿಗೆ ಬಿಟ್ಟು ನಗುವಾನೆ

ಎತ್ತೆಲ್ಲಿ ಕಾದ್ಯಣ್ಣ ಮುತ್ತೆಲ್ಲಿ ಮುಡಿದಣ್ಣ
ಎತ್ತಿಗೆ ನೀರೆಲ್ಲಿ ಕುಡಿಸೀದೆ
ಎತ್ತಿಗೆ ನೀರೆಲ್ಲಿ ಕುಡಿಸೀದೆ ತಳುಕೀನ
ಮುತ್ತೀನ ಸಾಗ್ರದ ವಳಿಯಾಗ

ಆವೆಲ್ಲಿ ಕಾದ್ಯಣ್ಣ ವೂವೆಲ್ಲಿ ಮುಡಿದ್ಯಣ್ಣ
ಆವೀಗೆ ನೀರೆಲ್ಲಿ ಕುಡಿಸೀದೆ
ಆವೀಗೆ ನೀರೆಲ್ಲಿ ಕುಡಿಸೀದೆ ತಳುಕೀನ
ವೂವಿನ ಸಾಗ್ರದ ವಳಿಯಾಗ

ಆವೆಲ್ಲಿ ಕಾದ್ಯಣ್ಣ ಮಾವೆಲ್ಲಿ ಮುಡಿದ್ಯಣ್ಣ
ರೂವಾರದ ಸಣ್ಣ ದನಿಯೋನೆ
ರೂವಾರದ ಸಣ್ಣ ದನಿಯೋನೆ ಎತ್ತಯ್ಯ
ಆವೀಗೆ ನಿನ್ನದನಿ ತೋರೋ

ಎತ್ತೆಲ್ಲಿ ಕಾದ್ಯಣ್ಣ ಮುತ್ತೆಲ್ಲಿ ಮುಡಿದ್ಯಣ್ಣ
ಚಿತ್ತಾರಿ ಸಣ್ಣ ದನಿಯೋನೆ
ಚಿತ್ತಾರೆ ಸಣ್ಣ ದನಿಯೋನೆ ಎತ್ತಯ್ಯ
ಎತ್ತೀಗೆ ನಿನ್ನಾ ದನಿತೋರೋ

ಸಾವಿರದೆತ್ತುತರುವ ಸರದಾರ ನಿನಬೆನ್ನಾಮ್ಯಾಲೆ
ನಗರೀಯ ಮುಳ್ಳು ಸೆಳದಾವೆ
ನಗರೀಯ ಮುಳ್ಳು ಸೆಳದಾವೆ ವೊರಗೂಡಿನ
ಉಗುರುಳ್ಳ ಜ್ಯಾಣ ತಗುದಾನೆ

ಇಂಡೆತ್ತುತರುವ ಗಂಬೀರ ನಿನಮ್ಯಾಲೆ
ನಿಂಬೀಯ ಮುಳ್ಳು ಸೆಳದಾವೆ
ನಿಂಬೀಯ ಮುಳ್ಳು ಸೆಳದಾವೆ ನಿನಬೆನ್ನಮ್ಯಾಲೆ
ಇಂಬುಳ್ಳ ಜ್ಯಾಣ ತಗುದಾನೆ

ಕರಿಯ ಕಂಬಳಿಯೋನು ಸುರನಾರಿ ಬಿಲ್ಲೋನು
ತುರಿವಿಗಲ್ಲಡ್ಡಬರುವೋನು
ತುರಿವಿಗಲ್ಲಡ್ಡಬರುವೋನು ಉತ್ತಯ್ಯಾನ
ತುರುವೇಳು ಸುತ್ತು ಅರುದಾವೆ

ಅಂಡಗಂಬಳಿಯೋನು ದುಂಡೊಡೆದ ಕೋಲೋನು
ಇಂಡಿಗಲ್ಲಿಗಡ್ಡ ಬರುವೋನು
ಇಂಡಿಗಲ್ಲಿಗಡ್ಡ ಬರುವೋನು ಎತ್ತಯ್ಯಾನ
ಎತ್ತು ಇಂಡೇಳು ಸುತ್ತು ಅರುದಾವೆ

ಎತ್ತು ತರುವಣ್ಣಾನ ವಪ್ಪಾದಿಂದ ತರಏಳಿ
ಮುತ್ತೀನರಳೀನವನ ಕಿವಿಯಾಗ
ಮುತ್ತೀನರಳೀನವನ ಕಿವಿಯಾಗ ಮಾರನೋರ
ಪುತ್ರಮ್ಮನೆತ್ತತರವಳೇ

ಆವು ತರುವಣ್ಣಾನ ವಾರಣದಿಂದ ತರಏಳಿ
ವೂವಿನರಳವನ ಕಿವಿಯಾಗ
ವೂವಿನರಳವನ ಕಿವಿಯಾಗ ಮಾರನೋರ
ಬಾಲಮ್ಮನಾದ ತರವಳೇ

ಆವು ತರುವಣ್ಣಾಗ ಏನೇನು ಉಡುಗೊರೆ
ಬಾಲಮ್ಮ ಓದೂವವದಕೀಯ
ಬಾಲಮ್ಮ ಓದೂವವದಕೀಯ  ರುಮಾಲಾವು
ಆವು ತರುವಣ್ಣಾಗ ಉಡುಗೊರೆ

ಬಗ್ಗುತ ಬಂದಾವೆ ಬಗ್ಗುಗಂಬಿನ ಬೆಳ್ಳಿ
ನುಗ್ಗು ಬಂದಾವೆ ಎಳಿವೋರಿ
ನುಗ್ಗು ಬಂದಾವೆ ಎಳಿವೋರಿ ಎತ್ತಯ್ಯಾನ
ಅಬ್ಬಕ ಬಂದಾವೆ ಸಲಗೆತ್ತು

ಬಾಗುತ ಬಂದಾವೆ ಬಾಗುಗಂಬಿನಬೆಳ್ಳಿ
ತೂಗುತ ಬಂದಾವೆ ಎಳಿವೋರಿ
ತೂಗುತ ಬಂದಾವೆ ಎಳಿವೋರಿ ಎತ್ತಯ್ಯಾನ
ನೇಮಿಗೆ ಬಂದಾವೆ ಸಲಗೆತ್ತು

ಅಂಡನೆಂಬ ಎತ್ತು ಚೆಂಡನ್ನಾಡುತ ಬಂತು
ಕಂಡಿದೆತ್ತಯ್ನ ಮುನಿಯೆತ್ತು
ಕಂಡಿದೆತ್ತಯ್ನ ಮುನಿಯೆತ್ತು ಮಂದಲದಾರ
ಕಂಬಲದ ರನ್ನ ರವರತ್ನ

ಕಾರನಂಬ ಎತ್ತು ಜೂಜನಾಡುತ ಬಂತು
ನೋಡೀರೆತ್ತಯ್ನ ಮನಿಯೆತ್ತು
ನೋಡೀರೆತ್ತಯ್ನ ಮನಿಯೆತ್ತು ಮಂದಲವಾರ
ಕೋಡೆಲ್ಲವು ರವರತ್ನ

ಕಾರ ಬರುವಾಗ ಗೋರಿಕಲ್ಲದುರಾವೆ
ಗೋರಿಕಲ್ಲದುರಿ ಮರಳದಲಿ
ಗೋರಿಕಲ್ಲದುರಿ ಮರಳದಲಿ ಉತ್ತಯ್ನ
ಕಾರ ಬರುವ ದೆಸನಾಗಿ

ಅಂಡ ಬರುವಾಗ ಗುಂಡುಕಲ್ಲದಿರ‍್ಯಾವೆ
ಗೋರಿ ಕಲ್ಲದುರಿ ಮರಳದಲಿ
ಗೋರಿ ಕಲ್ಲದುರಿ ಮರಳದಲಿ ಎತ್ತಯ್ನ
ಅಂಡ ಬರುವಾರಿ ಅಸನಾಗಿ

ಸೂಜೀಯ ಇಂಬಾರ ಸೂಜೀಯ ಮುಂಬಾರ
ರಾಯ ದೇವರಟ್ಟಿಮನಿಗಾರ
ರಾಯ ದೇವರಟ್ಟಿಮನಿಗಾರ ಗಂಡುಗೊಡಲಿ
ದೀರಾನಿನಗೊಬ್ಬಾರಿದಿರೇನೋ

ಕತ್ತೀಯ ಇಂಬಾರ ಕತ್ತೀಯ ಮುಂಬಾರ
ಸಿಕ್ಕಾದ್ಯಾವರಟ್ಟಿ ಮನಿಗಾರ
ಸಿಕ್ಕಾದ್ಯಾವರಟ್ಟಿ ಮನಿಗಾರ ಗಂಡುಗೊಡಲಿ
ದಿಟ್ಟಾನಿನಗೊಬ್ಬಾರಿದಿರೇನೋ

ಆವಿನಿಂಡಿನಾಗಳ ವೋರೀಯ ವಡತನ್ನಿ
ರಾಮ ಸಿಲುಕನೆಂಬ ಕರಿವುರಗ
ರಾಮ ಸಿಲುಕನೆಂಬ ಕರಿವುರಗ ಕ್ಯಾಸರಿಬಟ್ಟ
ಮಾವು ಮಾರೋವಳ ತುಳುದಾವೆ

ಮಾವು ಮಾರೋವಳ ಯಾಕೆ ತುಳಿದ ಬುಟ್ಟಣ್ಣ
ಗ್ಯಾನವಿಲ್ಲವಳ ಮನದಾಗೆ
ಗ್ಯಾನವಿಲ್ಲವಳ ಮನದಾಗೆ ಸ್ರೀಪಾದಾಕೆ
ವೂವು ಅರಡೋದಾ ಮರೆತಾಳೆ

ಆವಿನಿಂಡಿನಾಗಳ ಬಟ್ಟನ್ನವಡತನ್ನಿ
ಚಿಕ್ಕಾಸಿಲುಕನೆಂಬ ಕರಿವುರುಗ
ಚಿಕ್ಕಾಸಿಲುಕನೆಂಬ ಕರಿವುರುಗ ಕ್ಯಾಸರಿಬಟ್ಟಿ
ಮುತ್ತು ಮಾರೋವಳ ತುಳುದಾನೆ

ಮತ್ತುಮಾರೋವಳ ಯಾಕೆ ತುಳಿದ ಬಟ್ಟಣ್ಣ
ಚಿತ್ತಾವಿಲ್ಲವಳಾ ಮನದಾಗೆ
ಚಿತ್ತಾವಿಲ್ಲವಳಾ ಮನದಾಗೆ ಸ್ರೀಪಾದಾಕೆ
ಮುತ್ತು ಅರಡೋದ ಮರುತಾಳೆ

ಆವಿನ ಮುಂದೆ ಬರುವಗೀರುಗಂದದ ಚೆಲುವ
ದೇವರು ಉತ್ತಯ್ನ ಮಗನೇನೇ
ದೇವರು ಉತ್ತಯ್ನ ಮಗನೇನೇ ಕೊರಳಾಗಳ
ವೂವಿನ ವಲೆಮಾಲೆ ನಿಮದೇನೋ

ಎತ್ತೀನ ಮುಂದೆ ಬರುವ ಚುಕ್ಕೆಬಟ್ಟಿನ ಚೆಲುವ
ಅಪ್ಪ ಎತ್ತಯ್ನ ಮಗನೇನೋ
ಅಪ್ಪ ಎತ್ತಯ್ನ ಮಗನೇನೋ ಕೊರಳಾಗಳ
ಮುತ್ತೀನೊಲ ಮಾಲೆ ನಿಮದೇನೋ

ಎತ್ತುಗಳು ಬಂದಾವೆ ಎತ್ತಯ್ಯ ಬರಲಿಲ್ಲ
ಗುತ್ತೀಯ ಸೀಮೆ ವಳಿಕಟ್ಟಿ
ಗುತ್ತೀಯ ಸೀಮೆ ವಳಿಕಟ್ಟಿ ಸೊಂಡೂರ
ವೆತ್ತಬಿದ್ದ ಗೌಡಾ ಬರಲಿಲ್ಲ

ಆವುಗಳು ಬಂದಾವೆ ದೇವಾರು ಬರಲಿಲ್ಲ
ಗ್ವಾವೀಯ ಸೀಮೆವಳಿಕಟ್ಟಿ
ಗ್ವಾವೀಯ ಸೀಮೆವಳಿಕಟ್ಟಿ ಸೊಂಡೂರ
ನ್ಯಾಯಬಿದ್ದ ಗೌಡಾ ಬರಲಿಲ್ಲ

ಆರು ಕಂಡುಗ ನಸರಿವೋದವು ಕುರಿಯಟ್ಟಿಗೆ
ಕೌವಾಳ ಮೋಡಾ ಕವುದಾವೆ
ಕೌವಾಳ ಮೋಡ ಕವುದಾವೆ ಗುಡ್ಡದೀರಣ್ಣಗ
ಕರಿ ನೊರಿಯಾ ಆಲು

ಅತ್ತು ಕಂಡುಗ ಸರಿವೊಕ್ಕವು ಕುರಿಯಟ್ಟಿಗೆ
ಕತ್ತಾಲಮ್ವಾಡ ಕವುದಾಪೆ
ಕತ್ತಾಲಮ್ವಾಡ ಕವುದಾವೆ ತಳುಕೀನ
ಎತ್ತಯ್ಗೆ ಕರಿನೊರೆಯಾಲು

ವೊತ್ತಲುಂಟಿ ಎದ್ದುರಟ್ಟೆಮೊಕವ ತೊಳಿದು
ವುಟ್ಟಿ ಬರುವ ಸೂರಿದನ ಸರಣೆಂದು
ವುಟ್ಟಿ ಬರುವ ಸೂರಿದನ ಸರಣೆಂದು ತಳುಕೀನ
ಎತ್ತಯ್ಗೆ ಕರಿನೊರೆಯಾಲು

ಏಳುತಲಿ ಎದ್ದು ಕಾಲು ಮುಕವಾ ತೊಳಿದು
ಮೂಡಿ ಬರುವ ಸೂರಿದನ ಸರಣೆಂದು
ಮೂಡಿ ಬರುವ ಸೂರಿದನ ಸರಣೆಂದು ತಳುಕೀನ
ಈರಣ್ಣ ಕರಿನೊರೆಯಾಲು

ಮೊಬ್ಬು ಗಂಬಳಿ ತಿದ್ದಿಕೊಪ್ಪಳಿಟ್ಟು
ಎಬ್ಬುರಿಸಿ ಆಲ ಕರಿವಾನೆ
ಎಬ್ಬುರಿಸಿ ಆಲ ಕರಿವಾನೆ ದೊಡ್ಡೋನೆತ್ತಯ್ನ
ಕರಿಯೀರಿ ನೊರೆಯಾಲು

ಕರಿಯಾ ಕಂಬಳಿ ತಿರುವೀ ಕೊಪ್ಪಳಿಟ್ಟು
ತಿರುಗೊಡದೆ ಆಲಕರೆದಾನೆ
ತಿರುಗೊಡದೆ ಆಲಕರೆದಾನೆ ತಳುಕೀನ
ದೊರೆಯ ಉತ್ತಯ್ಗೆ ನೊರೆಯಾಲು

ವೊತ್ತಲುಂಟೆ ಎದ್ದು ರಟ್ಟೆಮುಕವ ತೊಳೆದು
ಕೆಚ್ಚಲು ತಟ್ಟಿ ಆಲ ಕರೆವಾನೆ
ಕೆಚ್ಚಲು ತಟ್ಟಿ ಆಲ ಕರೆವಾನೆ ತಳುಕೀನ
ಅಪ್ಪ ಎತ್ತಯ್ಗೆ ನೊರೆವಾಲು

ಏಳುತಲಿ ಎದ್ದು ಕಾಲು ಮುಕವಾ ತೊಳಿದು
ಬೆನ್ನುತಟ್ಟಿ ಆಲ ಕರೆದಾನೆ
ಬೆನ್ನುತಟ್ಟಿ ಆಲ ಕರೆದಾನೆ ತಳುಕೀನ
ಸ್ವಾಮಿ ಎತ್ತಯ್ಗೆ ನೊರೆವಾಲು

ಬುಡ್ಡೀ ಬಾಯಿಗೆ ಕಡ್ಡಿವಸ್ತ್ರವನಾಕಿ
ಎಬ್ಬುರಿಸಿ ಆಲ ಕರೆವಾನೆ ತಳುಕೀನ ದೊರೆಯ
ಎತ್ತಯ್ಗೆ ನೊರೆವಾಲು

ಅತ್ತು ಕಂಬಿಯಾಲು ಉಕ್ಕೂತ ಮರಳೂತ
ಅಟ್ಟಿಗವುಡರ ಮಗತಂದ
ಅಟ್ಟಿಗವುಡರ ಮಗತಂದ ನೊರಿಯಾಲು
ಅಪ್ಪ ಎತ್ತಯ್ಯನ ತಳಿಗೆಯಾಗಿ

ಆರು ಕಂಬಿಯಾಲು ತೂಗುತ ಮರಳೂತ
ನಾಡ ಗವುಡರ ಮಗತಂದ
ನಾಡ ಗವುಡರ ಮಗತಂದ ನೊರಿಯಾಲು
ಸ್ವಾಮಿ ಎತ್ತಯ್ಗೆ ತಳಿಗೆಯಾಗಿ

ಸುತ್ತಬ್ಯೇವಿನ ಮರ ಅತ್ತುವುಣೆಸೆಮರ
ಸುತ್ತಬ್ಯೇವಿನ ಮರವೇ ಕುರಿಯಟ್ಟಿ
ಸುತ್ತಬ್ಯೇವಿನ ಮರವೇ ಕುರಿಯಟ್ಟಿ ವುದಿಯಾಗ
ಸ್ವಾಮಿ ಎತ್ತಯ್ಗೆ ತಳಿಗೆಯಾಗಿ

ಕಡಲೆ ಕಾಳಂಗ ಕಡದ ಕೋಡಿನ ಬಸವ
ಇಡಿದರು ಬಸವಾನ ಬಯಲೀಗೆ
ಇಡಿದರು ಬಸವಾನ ಬಯಲೀಗೆ ತಳುಕೀನ
ದೊರಿಯ ಎತ್ತಯ್ಗೆ ಸಿವಪೂಜೆ

ಉದ್ದೀನ ಕಾಳಂಗ ತಿದ್ದಿದ ಕೋಡಿನ ಬಸವ
ತಿದ್ದ್ಯಾರು ಬಸವಾನು ಬಯಲೀಗೆ
ತಿದ್ದ್ಯಾರು ಬಸವಾನು ಬಯಲೀಗೆ ತಳುಕೀನ
ದೊಡ್ಡೋನೆತ್ತಯ್ಯಗ ಸಿವಪೂಜೆ

ವಡೆಗಾಯಿ ವಡೆದಾರೆ ಇಡುಗಾಯಿ ಆದಾವೆ
ಪರುಮಳದ ಕೋಡಿ ಅರುದಾವೆ
ಪರುಮಳದ ಕೋಡಿ ಅರುದಾವೆ ತಳುಕೀನ
ದೊರಿಮಗನ ಪೂಜೆ ಮುಗುದಾವೆ

ಎಗ್ಗಾಯಿ ವಡೆದಾರೆ ಮುಗ್ಗಾಯಿ ಆದಾವೆ
ಮಜ್ಜಣದ ಕೋಡಿ ಅರುದಾವೆ
ಮಜ್ಜಣದ ಕೋಡಿ ಅರುದಾವೆ ತಳುಕೀನ
ದುಡ್ಡೋನ ಪೂಜೆ ಮುಗುದಾವೆ

ಗಲ್ಲುಮೆಲ್ಲೆಂಬ ವಲ್ಲಿ ಕೊಡವಾಸ್ಯಾನೆ
ಮಲ್ಲೀಗೆವೂವ ಅರಡೇನೆ
ಮಲ್ಲೀಗೆವೂವ ಅರಡೇನೆ ತಳುಕೀನ
ಬಲ್ಲದ ದೊರೆಯ ಪ್ರವುಡೀಸೋ

ಕಂಚು ಮಿಂಚೆಂಬ ಮಂಚಕೊಡುಸೇನೆ
ಸಂಪೀಗೆ ವೂವ ಅರಡೇನೆ
ಸಂಪೀಗೆ ವೂವ ಅರಡೇನೆ ತಳುಕೀನ
ಸಂಪತ್ತಿನ ದೊರೆಯೇ ಪ್ರವಡೀಸೋ

ಅಣ್ಣು ತೆಂಗಿನಕಾಯಿ ಆದಿನಾರು ಈಡಾಡಿ
ತಣ್ಣೀರಿನ ಸೆಳೆಯ ಕೊಡಿರಣ್ಣ
ತಣ್ಣೀರಿನ ಸೆಳೆಯ ಕೊಡಿರಣ್ಣ ತಳುಕೀನ
ಅಣ್ಣಯ್ಯ ವೊರವೋಗುತಾನೆ

ಅಸಿಯ ತೆಂಗಿನಕಾಯಿ ಅದಿನಾರು ಈಡಾಡಿ
ಮಸರೀಲಿ ಸೆಳಿಯ ಕೊಡಿರಣ್ಣ
ಮಸರೀಲಿ ಸೆಳಿಯ ಕೊಡಿರಣ್ಣ ತಳುಕೀನ
ದೆಸೆವಂತ ಊರ ವೊಗುತಾನೆ

ಊರುವೊಗುವಾಗ ಏನಂದ ಎತ್ತಯ್ಯ
ಗೇಣು ಗೇಣುದ್ದ ಗಜನಿಂಬೆ
ಗೇಣು ಗೇಣುದ್ದ ಗಜನಿಂಬೆ ತೆಂಗಿನಕಾಯಿ
ಈಡಾಡಿರಣ್ಣ ಗುಡಿತಂಕ

ಅಟ್ಟಿವೋಗುವಾಗ ಏನಂದ ಎತ್ತಯ್ಯ
ಬೆಟ್ಟುಬೆಟ್ಟಿಗೆ ಗಜನಿಂಬೆ
ಬೆಟ್ಟುಬೆಟ್ಟಿಗೆ ಗಜನಿಂಬೆ ತೆಂಗಿನಕಾಯಿ
ಇಟ್ಟಾಡಿರಣ್ಣಗುಡಿತಂಕ

ಅಪ್ಪ ನಿನ್ನ ಆಡೇವೆ ಅಪ್ಪ ನಿನ್ನ ಪಾಡೇವೆ
ಅಪ್ಪ ನಿನ್ನ  ನಿದ್ದೆವಡದೇವ
ಅಪ್ಪ ನಿನ್ನ ನಿದ್ದೆವಡದೇವೆ ತಳುಕೀನ
ಪಟ್ಟೆಮಂಚದಲಿ ನೀ ಪ್ರವಡೀಸೋ

ಸ್ವಾಮಿ ನಿನ್ನ ಆಡೇವು ಸ್ವಾಮಿ ನಿನ್ನ ಪಾಡೇವು
ಸ್ವಾಮಿ ನಿನ್ನ ನಿದ್ದೆ ತಡೆದೇವು
ಸ್ವಾಮಿ ನಿನ್ನ ನಿದ್ದೆ ತಡೆದೇವು ತಳುಕೀನ
ತೂಗುಮಂಚದ ದೊರೆಯ ನೀ ಪ್ರವಡೀಸೋ

ಅಲ್ಲವನೆ ಇಲ್ಲವನೆ ಎಲ್ಲವನೇ ಮನಿಸ್ವಾಮಿ
ನರಸಿಮ್ಮ ಪಲ್ಲಕ್ಕಿವಳಗಾ ಸುಕನಿದ್ದೆ
ಮಂಗಳ ಜಯಮಂಗಳಾ ರಾಮಾಸುಬಮಂಗಳಾ
ಸ್ರೀ ಚನ್ನಬಸವಾಗೆ ಮಂಗಳ ಜಯಮಂಗಳಾ