ಕಂದನ ತಾಯಿ ಬಂದು ನಿಂತಳವ್ವ ಸಿರಿಬಾಗುಲಾಗ
ಕಂದಗ ಬೆಣ್ಣೆ ಕೊಡಿರವ್ವ
ಕಂದಗ ಬೆಣ್ಣೆ ಕೊಡಿರವ್ವ ಬಾಲನ ತಾಯಿಬಂದು
ನಿಂತಳವ್ವ ತಲೆಬಾಗುಲಾಗ

ಎಣ್ಣೆ ವೊಯ್ಯಿರಿ ಕನ್ನೆವುಳ್ಳ ಕೊಮಾರಾಗೆ
ವೊನ್ನೆಮಾಳೀಗೆ ಮನೆಯೋಳೆ
ವೊನ್ನೆಮಾಳೀಗೆ ಮನೆಯೋಳೆ ತಾಯಿ ನೀನು
ಉಪ್ಪು ನೀರು ನನ್ನ ಕೊಮರಾಗೆ

ಉಪ್ಪ ನೀಡೆ ನನ್ನ ವಪ್ಪವುಳ್ಳ ಕೊಮಾರಾಗೆ
ಚಿಕ್ಕಮಾಳೀಗೆ ಮನೆಯೋಳೆ
ಚಿಕ್ಕಮಾಳೀಗೆ ಮನೆಯೋಳೆ ತಾಯಿ ನೀನು
ಉಪ್ಪು ನೀರು ನನ್ನ ಕೊಮರಾಗೆ

ಅಂಜಿ ನೀಡೆ ನನ್ನ ಕೊಮರಾಗೆ
ವೊನ್ನ ಮಾಳೀಗೆ ಮನೆಯೋಳೆ
ವೊನ್ನ ಮಾಳೀಗೆ ಮನೆಯೋಳೆ ತಾಯಿ ನೀನು
ಅಂಜಿ ನೀಡೆ ನನ್ನ ಕೊಮರಾಗೆ

ವುಟ್ಟಿದೇಳು ದಿನಕೆ ಪಟ್ಟ ತಿರುಗ್ಯಾನೆ
ದ್ರುಷ್ಟಕಾಣೆ ದೇವಿ ನನ್ನಮಗ
ದ್ರುಷ್ಟಕಾಣೆ ದೇವಿ ನನ್ನಮಗ ಆರುವಯ್ಯ
ಕಲ್ಯಾಣವನೀಗೆ ಏಳುದಿನಗಾಳ

ಇಂದೇಳುದಿನದಲ್ಲಿ ಮುಂದೇಳು ದಿನದಲ್ಲಿ
ಗಂಬೀರವಾಗಿ ತಿರುಗ್ಯಾನೆ
ಇಂದೇಳು ದಿನದಲ್ಲಿ ಮುಂದೇಳು ದಿನದಲ್ಲಿ
ತಳವರನಾಗಿ ತಿರುಗ್ಯಾನೆ

ಕಾಯೀನೆ ಕತ್ತರಿಸಿ ತೂಗಿ ತೂಗಿ ಮಾರ‍್ಯಾನೆ
ದ್ರುಷ್ಟಕಾಣೆ ದೇವಿ ನಿನಮಗ
ದ್ರುಷ್ಟಕಾಣೆ ದೇವಿ ನಿನಮಗ ಆರುವಯ್ಯ
ಕಟ್ಟಾರೆ ಏಳುದಿನಗಾಳ

ಮುತ್ತೈದೆ ಕೊಳ್ಳಾಗಳ ಅತ್ತೊನಿನ್ನ ತಾಳೀಸರ
ಮುಟ್ಟಿದರೆ ಗಮ್ಮಗಣಿಎಂದೆ
ಮುಟ್ಟಿದರೆ ಗಮ್ಮಗಣಿ ಎಂದೇ ನಮದೇವಿ
ಬಟ್ಟಬದ್ರನ ಪಡೆದಾಳೆ

ಬಾಣಾತಿ ಕೊಳ್ಳಾಗಳ ಆರುವೊನ್ನಿನ ತಾಳಿಸರ
ಮುಟ್ಟಿದರೆ ಗಮ್ಮಗಣಲಂದೆ
ಮುಟ್ಟಿದರೆ ಗಮ್ಮಗಣಲಂದೆ ನಮದೇವಿ
ಬಾಲಬದ್ರನ ಪಡೆದಾಳೆ

ಅಡೆದಾಳೆ ಅಡೆದಾಳೆ ಕುಡುದಾಳೆ ಕಾಣವ
ಕಡೆಬಿದ್ದೇನಂದು ಕುಡುಗೋಲು
ಕಡೆಬಿದ್ದೇನೆಂದು ಕುಡುಗೋಲು ಬೇವು ಇಡಿದಾಳೆ
ಸೂರಿದಗೆ ಕಡೆ ಬಿದ್ದನಂದು ಕೈಮುಗುದಾಳೆ

ಜ್ವೋಳದನ್ನವಲಕ ವೋದಾನೆ ಕೊಮಾರ
ಜೋಡ ಸೆತ್ತರಿಕೆ ನೆರಳಾಗಿ
ಜೋಡ ಸೆತ್ತರಿಕೆ ನೆರಳಾಗಿ ಕುಂತುಕಂಡು
ದೂರಾಲ ಮಳೆಯ ಕರೆದಾನೆ

ಅತ್ತಿಯನ್ನವಲಕ ವೋದಾನೆ ನನಕೊಮಾರ
ಅತ್ತು ಚತ್ರಿಕೆ ನೆರಳಾಗಿ
ಅತ್ತು ಚತ್ರಿಕೆ ನೆರಳಾಗಿ ಕುಂತುಕಂಡು
ಸುತ್ತಾಲ ಮಳೆಯ ಕರೆದಾನೆ

ಆದಿವಾಸಿ ಕಡಿಗೆ ಆದಾವೆ ಮಳಿಮ್ವಾಡ
ಜೋಡಾದವೆರಡ ಸಿಡಿಮಿಂಚು
ಜೋಡಾದವೆರಡ ಸಿಡಿಮಿಂಚು ಕಂದ ನಿನಗೆ
ಮುತ್ತಿನಂದಲವೆ ನ್ಯನದೇವೆ

ಗುತ್ತಿಯನ್ನ ಕಡೆಗೆ ಅತ್ತಿದಾವೆ ಮಳಿಮ್ವಾಡ
ಜೊತ್ತಾದವೆರಡೆ ಸಿಡಿಲಮಿಂಚು
ಜೊತ್ತಾದವೆರಡೆ ಸಿಡಿಲಮಿಂಚು ಕಂಡ ನಿನಗೆ
ರಾಯರಂದಲವೆ ನ್ಯನದೇವೆ