ತಾಯಿ ಮುದ್ದಮ್ಮಗೆ ಏಳುಜನ ಗಂಡುಮಕ್ಕಳು
ಚಿಕ್ಕೋನು ಬಿಲ್ಲಾಳರಾಯ ಮಠಕೆ ಹೋಗುವನಾಗ
ಆರುಜನ ಮಕ್ಕಳು ಏನೆಂದು ಹೇಳುತಾರೆ

ಹಿಂಗಾಲದ ಮಳೆಹೂದು ಹಿಂದಾದೊ ಆರಂಬ
ಮಠಕ್ಹೋಗೊ ಮಗನಿನ್ನ ಆರಿಗೆ ಕಳುವಮ್ಮ
ಏನಪ್ಪ ಮಕ್ಕಳಿರ ಇಂಥ ಮಾತಾಡುತೀರ
ಹಿಂದಕವನುಳಲಿಲ್ಲ ಮುಂದಕವನುಳಲಿಲ್ಲ
ಈಗ್ಹೆಂಗೆ ಉಳುತಾನೊ ನನಕಂದ ಮಕ್ಕಳಿರ
ನಮ್ಮಾರ ಅರಿನ ನಡುವೆ ಉಳುತಾನೆ ಕಳುವಮ್ಮ

ಮಠಕ್ಹೋಗೊ ಮಗನನ್ನು ಕೂಗಾಳೆ ಮುದ್ದವ್ವ
ಕೇಳಪ್ಪ ನನಮಗನೆ ಅರಿಗಂತೆ ಹೋಗಪ್ಪ
ಆರುಮಂದಿ ಅಣ್ಣದೀರು ಆರಾನೆ ಹೂಡಿಕೊಂಡು
ಆಗಾಲೆ ಅವರಿನ್ನ ಉಳುವುದಕೆ ಹೋದಾರೊ

ಕಂದ ಬಿಲ್ಲಾಳರಾಯ್ಗೆ ಕುಂಟಿತ್ತು ಕುರುಡೆತ್ತು
ಕಿತ್ತೋದ ಮಿಣಿಹಗ್ಗ ಮರುದ್ಹೋದ ಮುಳಗೋಲು
ಮುರುದ್ಹೋದ ಮುಳಗೋಲು ಮುರುದ್ಹೋದ ನೇಗಿಲು ಬುಟ್ಟು
ಅರುಜನ ಅಣ್ಣದೀರು ಆಗಾಲೆ ಬಿಟ್ಟಾರೆ
ಕಂದನ ಬಿಲ್ಲಳರಾಯನ ಆರಾನೆ ಹೂಡಿಕಂಡು
ಬ್ಯಾಗಾನೆ ಕಳುವವ್ವ ನಮ್ಮವ್ವ ಮುದ್ದಮ್ಮ

ಕುಂಟೆತ್ತು ಕುರುಡೆತ್ತು ಹೂಡಿಕೊಂಡ ಕಂದಯ್ಯ
ಆರುಜನ ಅಣ್ಣದೀರ ಜೊತೆಗೆ ಹೋಗಲ್ಹೋದ
ಆರುಮಂದಿ ಅಣ್ಣದೀರು ಏನೆಂದೆ ಹೇಳುತಾರೆ
ನಮ್ಮ ಜತೆಗೆ ನೀನು ಬರಬ್ಯಾಡಕಾಣಯ್ಯ
ಅಡ್ಡಗುಡ್ಡದ ತಾವು ಒಬ್ಬೋನೆ ಉಳುಹೋಗೊ

ಅಡ್ಡ ಗುಡ್ಡದ ತಾಕೆ ಒಬ್ಬೋನೆ ಹೋದಾನೊ
ಎಲ್ಲಿಲ್ಲದ ಸಿಂತೆ ಬಂದಾವೊ ಅವನೀಗೆ
ಎಲ್ಲಿಲ್ಲದ ಸಿಂತೆ ಬಂದಾವೊ ಕಂದ ಬಿಲ್ಲಾಳರಾಯ್ಗೆ
ಆರಲ್ಲಿ ನಿಲಸಾನೆ ಕಲ್ಲುಮ್ಯಾಲೆ ಮನಗ್ಯಾನೆ
ಕಂದ ಬಿಲ್ಲಾಳರಾಯ ಕಲ್ಲುಮ್ಯಾಲೆ ಮನಗ್ಯಾನೆ

ಶಿವನು ಪಾರ್ವತಿದೇವಿ ಎಲ್ಲಿಗೋ ರಥಹೂಡಿ
ಇವನ್ಯಾರು ಮನುಷಾಗೆ ಏನು ಕಷ್ಟ ಇರಬೋದು
ಹೋಗುತ್ತಿದ್ದ ರಥವ ನಿಲ್ಲಿಸಾರೆ ಅವರಿನ್ನ
ಕಂದ ಬಿಲ್ಲಾಳರಾಯನ ಎಬ್ಬರಸಿ ಕೇಳುತಾರೆ
ಏನಪ್ಪ ನಿನಗೀಗ ಕಷ್ಟಾವು ಅಂದಾರು

ಏಳು ಮಂದಿ ಅಣ್ಣದೀರು ನಾವೀಗ ಕೇಳೀರಿ
ನಾನು ಆಗಲಿನ್ನ ಮಠಕೆ ಹೋಗಲಿದ್ದೆ
ನಮ್ಮ ಆರು ಮಂದಿ ಅಣ್ಣದೀರು ಏನು ಹೇಳ್ಯಾರಾಗ
ಹಿಂಗಾಲದ ಮಳೆಹೂದು ಹಿಂದಾದೊ ಆರಂಬ
ನಿನ್ನ ಚಿಕ್ಕೋನು ಬಿಲ್ಲಳಿರಾಯ್ಗೆ ಆರಿಗೆ ಕಳುವಮ್ಮ
ಆರಿಗೆ ಕಳುವೆಂದು ಹೇಳ್ಯಾರೆ ಅಣ್ಣದೀರು
ಆರು ಮಂದಿ ಅಣ್ಣದೀರು ಆರನ್ನೆ ಹೂಡಿಕೊಂಡು
ಬಂದಾರು ಆಗಿನ್ನ

ಕುಂಟೆತ್ತು ಕುರುಡೆತ್ತು ಬಿಟ್ಟಾರು ನನಗೀಗ
ಮುರುದ್ಹೋದ  ನೇಗಾಲು ಕಿತ್ತೋದ ಮಿಣಿಹಗ್ಗ
ಮುರುದ್ಹೋದ ಮುಳುಗೋಲ ನನಗೆ ಕೊಟ್ಟಾರಾಗ
ಆರಾರ ಹೂಡಿಕೊಂಡು ಬಂದೇನು ಭಗವಂತ
ಎರಡೆತ್ತು ಎರಡು ಕಡೆ ಮಲಗಾವೊ ಆಗಿನ್ನ
ಆರಾನೆ ಬಿಟ್ಟು ಬಿಟ್ಟು ಕಲ್ಲುಮ್ಯಾಲೆ ಮಲಗೇನು
ಈವ ಕಷ್ಟಾವೆ ನನಗೆ ಬಂದಾವೊ ಭಗವಂತ
ಶಿವನು ಪಾರ್ವತಿದೇವಿ ಹೇಳ್ಯಾರೆ ಕಂದಯ್ಗೆ
ಆರಾನ ಹೂಡಿಕೊಂಡು ಉಳು ಹೋಗೊ ಕಂದಯ್ಯ
ಕುಂಟಿತ್ತು ಕುರುಡೆತ್ತು ವಯಸಾದ ಹೋರಿಯಾದೊ
ಕಿತ್ತೋದ ಮಿಣಿಹಗ್ಗ ಬೆಳ್ಳಿಯ ಹಗ್ಗವಾದೊ

ಮುರುದ್ಹೋದ ನೇಗಲು ಚಿನ್ನದ ನೇಗಲಾದೊ
ಮುರುದ್ಹೋದ ಮುಳುಗೋಲು ಬೆಳ್ಳೀಯ ಮುಳುಗೋಲಾದೊ
ಕಂದ ಬಿಲ್ಲಳಿರಾಯ ನನಕಷ್ಟ ಅರುದೆಂದು
ನನಕಷ್ಟ ಅರುದೆಂದು ಆರಾನೆ ಹೂಡಾನೊ
ಆರು ಮಂದಿ ಅಣ್ಣದೀರು ಆರುಮಾರ ಹೊಡದಾರೊ
ಕಂದ ಬಿಲ್ಲಾಳರಾಯ ಒಬ್ಬನಾರು ಮಾರ ಹೊಡದಾನೊ

ತಾಯಿ ಮುದ್ದವ್ವ ಅಡುಗೇಯ ಹೊತ್ತುಕೊಂಡು
ತಗ್ಗಲುಳ್ಳಿಯ ಕಾಳು ಮುಗ್ಗಲ ರಾಗಿಯ ಅಡಿಗೆ
ಅಡಿಗೇಯ ಹೊತ್ತುಕೊಂಡು ಆಗಲೆ ಬಂದಾಳೊ
ಆರು ಮಂದಿ ಅಣ್ಣದೀರು ಆರಾನೆ ನಿಲಿಸಾರೊ
ಆರಾನ ನಿಲಿಸಾರೊ ಗೂಡೇಯ ಇಳಿಸಾರೊ
ಗೋಡೆಯ ಇಳಿಸಿನ್ನ ಊಟಾವ ಮಾಡುವಾಗ್ಗೆ
ನಮ್ಮ ಚಿಕ್ಕೋನು ಬಿಲ್ಲಾಳರಾಯ ಎಲ್ಲಿಗ್ಹೋದನಯ್ಯ
ಅಂಗಂತ ಕೇಳುತಾಳೆ ಹಡದೋಳು ಮುದ್ದಮ್ಮ

ಅಮ್ಮಮ್ಮ ಕೇಳೆ ಹಡದೋಳೆ ಮುದ್ದವ್ವ
ನಮ್ಮ ಜೊತೆಗವನು ಬರಲಿಲ್ಲ ನಮ್ಮಮ್ಮ
ಅಡ್ಡ ಗುಡ್ಡದ ತಾವ ಒಬ್ಬೋನೆ ಉಳುತಾನೆ
ಆರು ಮಂದಿ ತಾವ ಒಬ್ಬೋನೆ ಉಳುತಾನೆ
ಆರು ಮಂದಿ ಅಣ್ಣದೀರು ಊಟಾವ ಮಾಡ್ಯಾರೊ
ಕಂದ ಬಿಲ್ಲಾಳರಾಯ್ಗೆ ಹೊತುಕೊಂಡೆ ಬರುತಾಳೆ

ತಗ್ಗಲುಳ್ಳೀಕಾಳು ಮುಗ್ಗಲುರಾಗಿಯ ಅಡಿಗೆ
ಪಾಲು ಪಂಚಾಮೋರ‍್ತದಡಿಗೇಯು ಆದಾವೊ
ಬಾರಪ್ಪ ನನಕಂದ ಊಟ ಮಾಡಲು ಬಾರೊ
ಆರಾನ ನಿಲಿಸ್ಯಾನೆ ಕೈಕಾಲು ಮುಖ ತೊಳದು
ಆರು ಮಂದಿ ಅಣ್ಣದೀರ ಊಟ ಮಾಡಾನ ಬನ್ನಿ
ನಾವು ಆಗಲೆ ಉಂಡೇವು ಊಟ ಮಾಡಯ್ಯ

ಅವರಮ್ಮ ಮುದ್ದಮ್ಮ ಊಟಾಕೆ ಇಟ್ಟಾಳೊ
ಆರು ಮಂದಿ ಅಣ್ಣದೀರ‍್ಗು ಆರು ಮಿದಕೆ ಮಿದ್ದಿಮಡಗಿ
ಕಂದ ಬಿಲ್ಲಳಿರಾಯ ಊಟಾವ ಮಾಡ್ಯಾನೊ
ಊಟಾವ ಮಾಡಿನ್ನ ಅವರಮ್ಮ ಬಂದಾಳೊ

ಮದ್ದೀನ ವಪ್ಪತ್ತು ಮುಗಿಯಾಲು ಆಗಿನ್ನ
ಏಳಾರೆತ್ತನೆ ಬಿಟುಕೊಂಡು ಬಂದಾರೊ
ಏಳಾರೆತ್ತನೆ ಕಟ್ಟಿ ಹೂವ ಪತ್ರೆಯನ್ಹಾಕಿ
ಬಂದಾನೆ ಆಗಿನ್ನ ಕಂದ ಬಿಲ್ಲಾಳಿರಾಯ

ತಾಯಿ ಮುದ್ದವ್ವ ಬೆಳ್ಳೀಯ ಬಟ್ಟಿಲಾಗೆ
ಅಳ್ಳೆಣ್ಣೆ ಬಿಟ್ಟುಕೊಂಡು ಕಂದ ಬಿಲ್ಲಾಳರಾಯನ
ಏಳು ಮಾರದ್ದ ಮಂಡೇಯ ಗೋಚೂತ ಬಾಚೂತ
ಕೂತಿದ್ದ ಕಂಡುಬಿಟ್ಟು ಆರುಮಂದಿ ಅಣ್ಣದೀರು
ಏನೆಂದು ಹೇಳುತಾರೆ ತಾಯಿ ಮುದ್ದಮ್ಮಾಗೆ
ನಾವು ಏಳುಜನ ಹೋಗಿನ್ನ ಏಳುಹೊರೆ ಸೌದೆ ತಂದು
ಚಿನ್ನಾದ ಚಿಪ್ಪ ಕೊಡಲಿ ರನ್ನಾದ ಕೈಮಚ್ಚು
ತಕ್ಕೊಂಡೆ ಅವರು ಹೊರಟಾರು

ಆರು ಮಂದಿ ಅಣ್ಣದೀರು ಕಾಗೆ ಸೀಯವೆ ಪುಳ್ಳೆ ಗೂಬೆ
ಸೀಯವೆ ಪುಳ್ಳೆ ಕೂಡಾಕೆ ಅವರೀಗ ಹೊರೆಯ ಕಟ್ಟಿದರೀಗ
ಕಂದ ಬಿಲ್ಲಾಳಿರಾಯ ಹತ್ತನಾಲದ ಮರವ
ಆರಿಸಿ ಕಡಿದಾನೆ ಏಳುಹೊರೆ ಸೌದೇಯ
ಮರಬಿಟ್ಟಿ ಇಳುದಾನೊ ಕಂದ ಬಿಲ್ಲಳಿರಾಯ
ಹುತ್ತಾಕೆ ಕೈಯಿಕ್ಕಿ ಏಳ್ಹೆಡೆ ಸರ್ಪವ
ಈಚೀಗೆ ಎಳಕೊಂಡು ಆಗಿನ್ನ ಅವನು
ಏಳೇಯ ಪಾಲಿಗೆ ಸಿಗದಾನೆ ಬಿಲ್ಲಾಳರಾಯ
ಏಳೇಯ ಹೊರೆ ಸೌದೆ ಕಟ್ಟ್ಯಾನೆ ಆಗ
ಏನೆಂದು ಹೇಳುತಾನೆ ಕಂದ ಬಿಲ್ಲಾಳಿರಾಯ

ಆರು ಮಂದಿ ಅಣ್ಣದೀರ ಬಾಳ ಬಾಯಾರಿದೊ
ನೀರ ಕುಡಿಬೇಕು ಹೋಗೂನ ಬನ್ನರಪ್ಪ
ಕಲ್ಯಾಣಿಗೆ ಆಗ ಹೋದಾರು ಏಲು ಜನವು
ಆರು ಮಂದಿ ಅಣ್ಣದೀರು ನೀರನ್ನು ಕುಡುದಾರೊ
ಕಂದ ಬಿಲ್ಲಾಳರಾಯನ ಎತ್ತಿ ಬಾವಿಗ್ಹಾಕಬೇಕು
ಅಂಗಂತ ಮಾತಾಡುತ್ತಾರೆ ಆರು ಜನ ಅಣ್ಣದೀರು

ಹಾಕೂರು ಹಾಕತೀರ ಮೂರು ಮಾತನ್ಹೇಳುತೀನಿ
ನಮ್ಮಮ್ಮ ಮುದ್ದವ್ವ ಮೂಗ್ಹುತ್ತವಾಗಲೆಂದ
ಏಳಾರಿನೆತ್ತೆಲ್ಲ ಕರುವುದಲ್ಲಾಗಲೆಂದ
ನಮ್ಮ ಬತ್ತಾದ ಕಣಜೆಲ್ಲ ಮುತ್ತಾಗಿ ಹೋಗಲೆಂದ
ನಮ್ಮ ಹೊನ್ನೀನ ಕಣಜೆಲ್ಲ ಬೋಕಿ ಹಂಚಾಗಲೆಂದ
ನಮ್ಮ ರಾಗೀಯ ಕಣಜೆಲ್ಲ ಮಣ್ಣಾಗಿ ಹೋಗಲೆಂದ
ಆರು ಮಂದಿ ಅಣ್ಣದೀರು ದೇಶಬಂಟರಾಗಾಲಿ
ನನ್ನ ಆರು ಮಂದಿ ಅತ್ತಿಗೆದೀರು ಅವರೆಲ್ಲ ಈಗ
ದೇವಿಂದ್ರನ ಪಟ್ಟಣಕ್ಕೆ ಸೌದೇಯ ಹೊರಲೆಂದ
ಬಿಲ್ಲಾಳರಾಯನ ಪಟ್ಟಣ ಹಾಳಬಿದ್ದೆ ಹೋಗಲೆಂದ

ಎಲ್ಲ ಮಾತ್ಹೇಳ್ಯಾನೊ ಕಂದ ಬಿಲ್ಲಾಳಿರಾಯ
ಎತ್ತಿ ಬಾವಿಗಾಕ್ಯಾರೊ ಆಗಿನ್ನ ಅಣ್ಣದೀರು
ಸೌದೇಯ ಹೂತುಕೊಂಡು ಓಡೋಡಿ ಬಂದಾರೊ

* * *

ದೇವೇಂದ್ರ ಪಟ್ಟಣದ ಗೌಡರು ಅವರಿನ್ನ
ಒಂದಾರಿನೆತ್ತನ್ನ ಹೊಡಕೊಂಡು ಬಂದಾರು
ನೀರಾನ ಕುಡುಸಾಕೆ ಹೋದಾರೊ ಅವರಿನ್ನ
ನೀರ ಕುಡುದು ಸಾಕಾಗಿ ನಿಂತುಕೊಂಡೆ ನೋಡ್ಯಾರೊ
ಯಾವ ಸೀಮೊ ದೊರೆಮಗನೊ ಏನುಕಷ್ಟವು ಇದ್ದಾವೊ
ಆವ ಬಸವಣ್ಣ ನೀರನ್ನು ಕುಡುದಾವೊ

ಇದು ಏನು ಚೋಜಿಗವೆಂದು ಎತ್ತಾನ ಬಿಟ್ಟುಬಿಟ್ಟು
ಕಲ್ಲಮ್ಯಾಲೆ ನಿಂತುಕಂಡು ನೋಡತಾರೆ ಗೌಡರು
ಎಲ್ಡು ಬಸವಣ್ಣ ನೀರನ್ನು ಕುಡುದಾವು
ಈ ಕಂದಾಗೇನು ಕಷ್ಟ ಇರಬೋದು ಎಂದಿನ್ನ
ಏಳು ಮಾರುದ್ದ ಮಂಡೆ ಒಂದೆತ್ತೆ ಕಚ್ಚಿಕೊಂಡು
ಎರಡು ಕಾಲನ್ನು ಒಂದೆತ್ತೆ ಕಚ್ಚಿಕೊಂಡು
ಕಂದ ಬಿಲ್ಲಳಿರಾಯನ ಎತ್ತಿಕೊಂಡು ಬಂದಿನ್ನ
ಕಲ್ಲುಮ್ಯಾಲೆ ಮಡಗ್ಯಾವೊ ಆ ಎರಡು ಬಸವಣ್ಣ

ನೊಣವೆ ಕುಂಡರದಂಗೆ ಎರಡೆತ್ತು ಎರಡುಕಡೆ ಮನಗ್ಯಾವೊ
ದೇವಿಂದ್ರನ ಪಟ್ಟಣದ ಗೌಡಾರೆ ಆಗಿನ್ನ
ನಮ್ಮೆತ್ತು ಮನಗಿಬಿಟ್ಟೊ ಏನುಮಾಡಲಿ ಶಿವನೆ
ಊರಿಗೋಗೋನೆಂದು ಬಂದಾರೆ ಗೌಡಗಳು
ಸಿಂತೇಯ ಮಾಡುತ ಕುಂತುಕೊಂಡರಾಗ

ಕುಂತುಕುಂತಿದ್ದೋರು ಎದ್ದಾರೆ ಆಗಿನ್ನ
ಗೌಡಾರು ಬರುವಾಗ್ಗೆ ಕಂದ ಬಿಲ್ಲಳಿರಾಯ
ದೇವಿಂದ್ರ ರಥ ಹೊಡದು ಹೋಗುತಾರೆ ಅವರಿನ್ನ
ಈವ ನರಮನುಷಾಗೆ ಏನುಕಷ್ಟ ಇರಬೋದು
ಹೋಗುವ ರಥವನ್ನು ನಿಲ್ಲಿಸಾರೆ ಅಲ್ಲೇಯ
ಕಂದ ಬಿಲ್ಲಳಿರಾಯನ ಎಬ್ಬರಿಸಿ ಕುಂಡರಿಸಿ
ಯಾವ ಪಟ್ಟಣಕ್ಹೋಗಿ ಬರುವಯ್ಯ ಅಂದಾರು
ದೇವಿಂದ್ರನ ರಥವನ್ನು ಹೊಡಕೊಂಡೆ ಹೋದಾರೊ
ದೇವಿಂದ್ರನ ಪಟ್ಟಣದ ಗೌಡಾರೆ ಆಗಿನ್ನ

ಏನಪ್ಪ ನರಮನುಷ ನಿನಗೆ ಈ ಕಷ್ಟವು
ನನಗೇನು ಕಷ್ಟವು ಎಲ್ಲಾನ ಹೋಗುತೀನಿ ಬಿಡಿರಣ್ಣ
ನನ್ನ ಆರು ಮಂದಿ ಅಣ್ಣದೀರು ಎತ್ತಿಬಾವಿಗೆ ಹಾಕ್ಯಾರೊ
ನಿಮ್ಮ ಬಸವಣ್ಣ ಬಂದು ನಮ್ಮ ಉಳಿಸ್ಯಾವೊ
ಯಾವ ಪಟ್ಣಕ್ಕೆ ಹೋಗಿ ಉಸಿರ ಉಳಿಸೇನು ನಾನು

ನನಗೊಬ್ಬ ಅಣ್ಣತಮ್ಮ ಕಾಣಯ್ಯ ಅಂದಾನು
ನಾನು ಹೊದಿಯೊ ದಿರಸು ನೀನೇಯ ಹೊದಿಯಂದ
ನಾ ಮಾಡು ಗೌಡಿಕೆ ನೀನೂವೆ ಮಾಡಯ್ಯ
ಈವ ಬಸವಣ್ಣಗೆ ಕಡ್ಡೀಯ ಮೇವುಕೊಟ್ಟು
ಮೇವಾನ ಕೊಟ್ಟುಕಂಡು ಊರುಮುಂದೆ ಕುಂತುಕೊಳ್ಳೊ
ಎಲ್ಲ ಬುದ್ಧಿಯ ಹೇಳಿ ಕರಕೊಂಡೆ ಬಂದಾನೊ
ಅರಮನೆಗೆ ಕರಕೊಂಡೆ ಬಂದಾರೆ ಆ ಗೌಡ
ಹಂಡೇಯ ನೀರೆರೆದು ತಾನಾವ ಮಾಡಿಸಾರೊ
ಅವರು ಹೊದ್ದ ದಿರುಸ ಅವನೀಗೆ ಧರಿಸಾರೊ
ಆ ಗೌಡರ ಮನೆಯಾಗೆ ನಿಂತಾನೆ ಕಂದಯ್ಯ

*  *  *

ಆರೇಳೆ ವರುಷಾದೊ ಆ ಗೌಡರ ಮನೆಸೇರಿ
ಒಂದಾರಿನ ಬಸವಣ್ಣಗೆ ಮೇವಕೊಟ್ಟುಕಂಡು
ಊರುಮುಂದೆ ಜಗುತಿ ಅಳ್ಳೀಮರವೆ
ಸ್ತಾನಾವೆ ಮಾಡಿಕೊಂಡು ಕುಂತುಕೊಂಡ ಬಿಲ್ಲಳಿರಾಯ
ಆರುಮಂದತ್ತಿಗೆದೀರು ಅವರಿಲ್ಲ ಆಗಿನ್ನ
ದೇವಿಂದ್ರನ ಪಟ್ಟಣಕ್ಕೆ ಸೌದೇಯ ಹೊರುತಾರೆ

ಆರೆ ವರ್ಷದಿಂದ ಅಲ್ಲೆ ಕುಂತಿರುವಾನು
ಯಾವ ಅತ್ತಿಗಮ್ಮ ಗುರುತು ಹಿಡಿಯಲಿಲ್ಲ
ಆರೆ ವರುಷಾಕೆ ಆರು ಮಂದಿ ಅತ್ತಿಗೆದೀರು
ಸೌದೇಯ ಹೊತುಕಂಡು ಬುಳುಬುಳನೆ ಬಂದಾರೊ
ಅಕ್ಕಯ್ಯ ಅಕ್ಕಯ್ಯ ನೋಡವ್ವ ನೀನಲ್ಲಿ
ನನ್ನ ಮೈದ ಬಿಲ್ಲಳಿರಾಯ ಇದ್ದಂಗೆ ಇರುವಾನು
ಅಮ್ಮ ಅಮ್ಮಯ್ಯ ಬಾರೆ ಸೌದೆ ಮಾರಲು ಬೇಕು
ನೀನ್ಹೋಗವ್ವ ಅಕ್ಕಯ್ಯ ನಾಕೇಳೆ ಬಂದೇನು ಈಗ

ಕಂದ ಬಿಲ್ಲಳಿರಾಯನ ಹತ್ತಿರಕೆ ಹೋದಾಳೆ
ಮೈದ ಬಿಲ್ಲಳಿರಾಯನ ಮೊಕವೆ ನೋಡಿದಂಗೆ
ಯಾವುರೊ ತಾಯಮ್ಮ ಸೌದೆ ಮಾರ‍್ಹೋಗಮ್ಮ
ನನ ಸುದ್ಧಿ ನಿನಗಿನ್ನ ಯಾಕವ್ವ ಹೋಗವ್ವ
ಯಾರು ಅಲ್ಲಪ್ಪ ನೀನು ಮೈದ ಬಿಲ್ಲಳಿರಾಯ
ತಲೆಯ ಮ್ಯಾಗಳ ಸೌದೇಯ ಕೆಳಗಡೆಗೆ ಹಾಕ್ಯಾಳು
ನಮಗೇನು ಕಷ್ಟಾವ ಕೊಟ್ಟು ಅರಮನೆ ಬಿಟ್ಟು ಬಂದೆಂದು
ಮೈದ ಬಿಲ್ಲಳಿರಾಯ್ಗೆ ತರ‍್ಯೆ ಮಾಡುವಳಾಗ

ಎಷ್ಟು ಹೇಳಿದರು ಕೇಳಲಿಲ್ಲ ಅತ್ತಿಗಮ್ಮ
ಕಯ್ಯ ಹಿಡಿಯುತಾಳಲ್ಲ ಕಾಲಿಗೆ ಬೀಳುವಳಲ್ಲ
ನಿಮ್ಮಾರು ಮಂದಿ ಅಣ್ಣದೀರು
ದೇಶಬಂಟರಾಗಿ ಹೋದರು ಮೈದಯ್ಯ
ನಮ್ಮ ಮಕ್ಕಳಿಗೆ ಅನ್ನವಿಲ್ಲ ನೀರಿಲ್ಲ
ನೀವು ದಯವಿಟ್ಟು ಬರಬೇಕು ಅಂದಾಗ
ದೇವಿಂದ್ರನ ಪಟ್ಟಣದ ಗೌಡಾರೆ ಬಂದಾರು

ಬಂದಂತ ಗೌಡಾರು ಏನೆಂದು ಹೇಳುತಾರೆ
ಅವರ ಸುದ್ಧಿನ್ನು ನಿಮಗ್ಯಾಕೆ ಹೋಗಮ್ಮ
ನನ್ನ ಮಗನಾಗಿ ಸಾಕೇನು ಹೋಗವ್ವ
ನಾನು ಹೊದಿಯೋ ದಿರಸ ಅವನಿಗಿಟ್ಟೇನಮ್ಮ
ನಾ ಮಾಡು ಗೌಡಿಕೆ ಆವಯ್ಗೆ ಕೊಟ್ಟೇನು
ಅವರ ಸುದ್ಧಿನ್ನ ನಿನಗ್ಯಾಕೆ ಹೋಗಮ್ಮ

ಆ ಗೌಡರ ಆಗಿನ್ನ ಎರಡುಕಾಲು ಕಟ್ಟಾಳೊ
ನನ್ನ ಮಕ್ಕಳು ಕುಡಿಯಾಕೆ ನೀರಿಲ್ಲ
ಉಣ್ಣಾಕನ್ನವಿಲ್ಲ ತಿನ್ನಾಕೆ ಕೂಳಿಲ್ಲ
ನನ್ನ ಮೈದ ಬಿಲ್ಲಳಿರಾಯನ ಕಳುಹಬೇಕು ನೀವಿನ್ನ
ಎರಡೆ ಕಯ್ಯ ಜೋಡಿಸಿ ಮುಗುದಾಳೊ ಅವಳಿನ್ನ
ಗೌಡಗೆ ಏನು ಮನಸಿಗೆ ತಿಳಿದು
ಅರಮನೆಗೆ ಹೊದಪಚ್ಚಿ ಉಣ್ಣಾಕ್ಹೂಟವನಿಕ್ಕಿ
ಹೋಗಯ್ಯ ಕಂದ ನಿನ್ನ ಅರಮನೆಗೀಗ
ಅಂದಿನ್ನ ಆ ಗೌಡ ಕಳುವ್ಯಾಕಿ ಬಿಲ್ಲಾಳಿರಾಯನ

ಮೈದ ಬಿಲ್ಲಳಿರಾಯನ ಕರಕೊಂಡು ಅತಿಗಮ್ಮ
ಬಂದಾಳೆ ತಮ್ಮ ಅರಮನೆಗೆ ಅವಳೀಗ
ಬಿಲ್ಲಾಳರಾಯನ ಪಟ್ಣ ಹಾಳುಬಿದ್ದೆ ಹೋಗ್ಯಾವೆ
ಬಂದಾನೆ ಕಂದಯ್ಯ ಬಾಕುಲಾಗೆ ನಿಂತಾನೆ
ನಮ್ಮಮ್ಮ ಮೂಗುತ್ತವಾಗಿ ಇದ್ದೋಳು ಈಗಿನ್ನ
ಎರಡು ಭಾಗಕ್ಕೆ ಹೊಡಿಲೆಂದ ಅವನೀಗ
ನಮ್ಮೇಳಾರೆತ್ತೆಲ್ಲ ಎತ್ತಾಗಿ ನಿಲಲೆಂದ
ನಮ್ಮ ಬತ್ತಾದ ಕಣಜೆಲ್ಲ ಬತ್ತಾಗಿ ನಿಲಲೆಂದ
ನಮ್ಮ ರಾಗಿಯ ಕಣಜೆಲ್ಲ ರಾಗ್ಯಾಗಿ ನಿಲಲೆಂದ
ನಮ್ಮ ಹೊನ್ನೀನ ಕಣಜೆಲ್ಲ ಹೊನ್ನಾಗಿ ಬೆಳಿಲಂದ
ನಮ್ಮ ಆರು ಮಂದಿ ಅಣ್ಣದೀರು ಅರಮನೆಗೆ ಬರಲಂದ

ಆರುಮಂದಣ್ಣದೀರು ಆಗಾಲೆ ಬಂದಾರೊ
ಕಂದ ಬಿಲ್ಲಳಿರಾಯ ನಿನಗೆ ಕಷ್ಟವು ಕೊಟ್ಟೊ
ಅನ್ನ ನೀರಿಗೆಲ್ಲ ದೇಶಬಂಟರಾದೊ
ಮಠಕಿನ್ನ ಹೋಗಪ್ಪ ನೀನೆಂದು ಕಳುವ್ಯಾರೆ
ಆ ಪಟ್ಣ ಅವರಿನ್ನ ಆಳ್ಯಾರೊ ಆಗಿನ್ನ
ಕಂದ ಬಿಲ್ಲಳಿರಾಯನ ಮಠಕಿನ್ನ ಕಳುವ್ಯಾರೊ
ಅವರಾರು ಮಂದಿ ಅಣ್ಣದೀರು ಆ ರಾಜ್ಯ ಆಳ್ಯಾರೊ