ಗುಡ್ಡುದ ಬೋರೆ ತಮ್ಮ ಗಂಟಾವುಲು ಸಿನ್ನಯ್ಯ
ಹನ್ನೆರಡು ಕೂಮೆ ದಂಡೆ ತಂದವನಂದಾ ವೋ

ಬಂದರು ಬರಲ್ಹೊಗಾಲೊ ಕರಿಯಂದಾ
ಹಾಲು ಕರದು ಕಡಿಯಾಕೆ ಇಟ್ಟವನೆ ಮಲ್ಲಯ್ಯ
ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ಒಂದಗಲ್ಲ ಬಡಿದಾರೆ ಹಾಲನ್ನ ವಲಿಯಾನೆ
ಒಂದಗಲ್ಲ ಬಡಿದಾರೆ ನೀರನ್ನ ವಲಿಯಾನೆ
ಹೆದರಿಯೋ ತಮ್ಮ ಬೆದರೀಯಂದಾ ವೋ

ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ದುಡುದುಂಬಾಕೆ ಅವರು ಎತ್ತಿಗೆ ಬಂದವರಂಗೊ
ಕರದುಂಬಾಕೆ ನೋಡು ಆವಿಗೆ ಬಂದವನ್ಹೆಂಗೊ
ಯಾತಕೆ ಬಂದಿದ್ದ್ಯಾಲೆ ಶಿನ್ನಯ್ಯ ವೋ

ಅಸುಮಗ ವಲಿಗಾನಯ್ಯ ಹೆದರೀಯ ಬೆದರೀಯ
ಬಟ್ಟಣ್ಣು ವಡಕಂಡು ಹೋಗಪ್ಪ ವೋ

ಮುಂದಮುಂದೆ ಬಟ್ಟಣ್ಣ ಹಿಂದ್ಹಿಂದೆ ಮಲ್ಲಯ್ಯ
ಬಟ್ಟಣ್ಣನ ಬಾಲಾನೆ ಹಿಡಕಂಡು ಮಲ್ಲಯ್ಯ
ಗುಡ್ಡುದ ಬೋರೀ ತಮ್ಮ ಗಂಟಾವುಲು ಶಿನ್ನಯ್ಯ
ಅವನು ತಾಕೆ ಬಟ್ಟಣ್ಣ ಬರತಾನಣ್ಣಾ ವೋ

ದುಡುದುಂಬಾಕೆ ನೀನು ಎತ್ತಿಗೆ ಬಂದಿಯೇನೋ
ಕರದುಂಬಾಕೆ ನೋಡು ಆವಿಗೆ ಬಂದಿಯೇನೋ
ಯಾತಕ ಬಂದಿದ್ದ್ಯಾಲೆ ಶಿನ್ನಯ್ಯ ವೋ

ದುಡುದುಂಬಾಕೆ ನನಿಗೆ ಎತ್ತೇನು ಕಡಿಮ್ಯಾಗಿಲ್ಲ
ಕರದುಂಬಾಕೆ ನನಿಗೆ ಆವೆನುಕಡಿಮ್ಯಾಗಿಲ್ಲ
ಕಾರ‍್ಯಾವುಕೆ ಬಂದೀನೋ ಎಲೆ ಗೊಲ್ಲಾ ವೋ

ಆ ಮಾತು ಕೇಳವನೆ ವಲಿಗಾನೆ ಮಲ್ಲಯ್ಯ
ಹಿಂದಾಕೆ ತಿರಗಿ ಬರುತಾನಣ್ಣಾ ವೋ

ದುಡುದುಂಬಾಕೆ ಅವನು ಎತ್ತೂ ವಲ್ಲಾನಂತೆ
ಕರದುಂಬಾಕೆ ನೋಡು ಅವು ವಲ್ಲಾನಂತೆ
ಕಾರ‍್ಯಾವುಕೆ ಬಂದವನೆ ಭಾವಯ್ಯ ವೋ

ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ಮೂರು ಕೂತೆ ಕೂಗಮ್ಮ ಮೂರು ಕ್ಯಾಕೆ ಹೊಡಿಯಮ್ಮ
ನಿಮ್ಮಕೈ ಮೇಲಾಗಾಲಿ ನಮ್ಮ ಕೈ ಅಡಿಯಾಗಾಲಿ
ಮೂರು ಕೂತೆ ಕೂಗಮ್ಮ ಮೂರು ಕ್ಯಾಕೆ ಹೊಡಿಯಯ್ಯ
ಬಾರಯ್ಯ ಮಲ್ಲಯ್ಯ ಮನಗಂದಾ ವೋ

ನಿಮ್ಮ ಕಯ ಮೇಲಾಗಾಲಿ ನಮ್ಮ ಕೈ ಅಡಿಯಾಗಾಲಿ
ಮೂರು ಕೂತೆ ಕೂಗ್ಯವನೆ ಮೂರು ಕ್ಯಾಕೆ ಹೊಡದವನೆ
ಬಂದವನೆ ಮಲ್ಲಯ್ಯ ಮನಿಗಿದುನಣ್ಣಾ ವೋ

ಗುಡ್ಡುದ ಭೋರಿ ತಮ್ಮ ಗಂಟಾವುಲು ಶಿನ್ನಯ್ಯ
ಅವರು ಕತ್ತೀಲಿ ಕಡದಾರೆ ಕೊಂಬಡ್ಡ ಕೊಡುತಾವೆ
ಬಿಲ್ಲೀಲಿ ಹೊಡುದಾರೆ ಬಾಲಡ್ಡ ಕೇಡುತಾವೆ
ಬಂದುಕುದಲಿ ಹೊಡೆದಾರೆ ಹಣಿಯಡ್ಡ ಕೊಡುತಾವೆ

ಏಳೆಂಬೇಳ ದಿನಕೆ ಗುಡ್ಡದ ಬೋರೀ ತಮ್ಮಾ
ಮದ್ದೆಗುಂಡೆಲ್ಲ ಕಳಕಂಡ ವೋ

ಅವನ ಮದ್ದೆಗುಂಡೆಲ್ಲ ಕಳಕಂಡ ಶಿನ್ನಯ್ಯ
ಇಂಗ್ಯನ್ನ ಈ ಗೊಲ್ಲ ಬಯಿಲಿಗಿ ಬರಲಂದವನೆ
ನಮ್ಮ ಕೈ ಮೇಲಾಗಿತ್ತು ನಿಮ್ಮ ಕೈ ಅಡಿಯಾಗಿತ್ತು
ನಿಮ್ಮ ಕೈ ಮೇಲಾಗಾಲಿ ನಮ್ಮ ಕೈ ಅಡಿಯಾಗಲಿ
ಅಂದವನೆ ಶಿನ್ನಾ ಕೂಗಿದುನಣ್ಣಾ ವೋ

ನಿಮ್ಮ ಕೈ ಮೇಲಾಗಲಿ ನಮ್ಮ ಕೈ ಅಡಿಯಾಗಾಲಿ
ಮೂರು ಕೂತೆ ಯಾವಾಗ ಕೂಗ್ಯಾವನೆ ಶಿನ್ನಯ್ಯ
ಹೇಳಯ್ಯ ವಲಿಗಾನೆ ಮಲ್ಲಯ್ಯ ವೋ

ಆನಿಗೇಯೇ ನೋಡು ಅವು ವಾರಿಮಾಡಮ್ಮ
ಒಂಟೀಗೆಯೇ ನೋಡು ಎತ್ತು ವಾರಿಮಾಡಮ್ಮ

ಕಾಲೂರಿ ಮನಿಷರಿಗೆ ಮತ್ತೇನೆ ಮಲ್ಲಯ್ಯ
ಮೂಗಿಮಣಕ ವಾರಿ ಮಾಡಂದಾ ವೋ

ಕುದರೀಗೆಯೇ ನೋಡು ಮತ್ತೇನೆ ಮಲ್ಲಯ್ಯ
ಮುದಿಯಾವು ನೋಡು ವಾರೀನೆ ಮಾಡಂದ
ನಾಲಕ್ಕೆ ತೊಟ್ಟೇನೆ ಮಾಡವನೆ ಮಲ್ಲಯ್ಯ
ನಮ್ಮ ಕೈ ಅಡಿಯಾಗಿತ್ತು ನಿಮ್ಮ ಕೈ ಮೇಲಾಗಿತ್ತು
ನಮ್ಮ ಕೈ ಮೇಲಾಗಿತ್ತು ನಿಮ್ಮ ಕೈ ಅಡಿಯಾಗಿತ್ತು
ಮೂರು ಕೂತೆ ಕೂಗವನೆ ವಲಿಗಾನೆ ಮಲ್ಲಯ್ಯ
ಬಂದವನೆ ಮಲ್ಲಯ್ಯ ಮನಿಗ್ಯಾನಣ್ಣಾ ವೋ

ಕಾರಣಿಕದ ಪುರಸ ಕಾಲಿಲಿ ಗ್ಯಾನುದ್ದರಿಯೆ
ಬಾಲುದುಲೆ ಬಲವಂತ ಬೆನ್ನಿಲಿ ಬಲು ಬೇತಾಳ
ಮುನ್ನೂರು ತಡಿಸಿಗಿನ್ನ ಮುಂದುದಿಟ್ಟಿದನು ಬಟ್ಟಣ್ಣ
ಕಾಲುಕೆದರಿಯೇ ನೋಡು ರಂಕೇನೆ ಹೊಡದಾರೆ
ಗುಡ್ಡಾದ ಬೋರಮ್ಮನ ಅರಮನಿಯಾಗಿರುವಂತ
ಕಂಚನ ಕರಬಾನುಗಳೆ ಗದಗದನೆ ನಡಿಗಿ
ನೆಲಕೆ ಬೀಳೂವಮ್ಮಾ ವೋ

ಕಾಲಿಲಿ ತುಣಿಯೋವಣ್ಣ ಕೊಂಬಿಲಿ ಸಿಮ್ಮೋವಣ್ಣೊ
ಅವುರಿಗೆ ಹನ್ನೆರಡು ಕೋಮೇದಂಡೆ ಮತ್ತೇನೆ ಆವಾಗ
ಅವುರು ಕರುಳು ತಗದೆ ಬೆನ್ನಿಗೆ ಜನ್ನಿವಾರ ಹಾಕಿಕಂಬೋವಣ್ಣಾ ವೋ

ಗುಡ್ಡಾದ ಬೋರಮ್ಮ ಒಳ್ಳೆ ಮತ್ತೇನೆ ಆವಾಗ
ನಮ್ಮೂರೆ ಉಳಿಯೋ ಹೊತ್ತೆ ಬರಲಿಲ್ಲ ವೋ

ತಣ್ಣೀರು ಮುಣಿಗಿದುಳಣ್ಣ ತಡಿಮುಡಿ ಉಟ್ಟೈದಾಳೆ
ನಿಂತು ತಡಿಮುಡಿ ಮ್ಯಾಲೆ ಮತ್ತೇನೆ ಬೋರಮ್ಮ
ಮಳಿ ಬಂದಾರ‍್ಹುಟ್ಟುಕೆ ಹುಲ್ಲು ಬೀಜ ಅಲ್ಲಮ್ಮ
ಗುಡ್ಡಾದ ಬೋರಮ್ಮನ ಹೆಸರನ್ನ ಹೇಳಾಕೆ
ಒಬ್ಬರಿಬ್ಬುರನ್ನಾನೆ ಉಳಕಂಬಲಿ ಮಲ್ಲಯ್ಯ
ನಮ್ಮೆತ್ತಾವೆ ಹಿಂದಾಕೆ ಕೂಗಂದ ವೋ

ಹನ್ನೆರಡೆ ಲಕ್ಕೂಸದ ದಂಡೀನ ಪೈಕಾಗಿ
ಗುಡ್ಡುದ ಬೋರಿ ತಮ್ಮ ಗಂಟಾವುಲು ಶಿನ್ನಯ್ಯ

ಒಬ್ಬಾನೆ ಶಿನ್ನ ಉಳಕಂಡ ವೋ

ಎತ್ತಾವೆ ಯಾವಾಗ ಕೂಗ್ಯಾವೇನೆಯೇ ನೋಡು
ಒಬ್ಬಾನೆ ಶಿನ್ನ ಉಳಕಂಡಾ ವೋ

ಇಂಗ್ಯಾದಾರೀಗೊಲ್ಲ ಬಗ್ಗೋದಿಲ್ಲಂದವನೆ
ಒಂದಕಿವಿ ಆಸೊರದು ಒಂದು ಕಿವಿ ವದಿಯರದು
ಆವರಿಬ್ಬರ ದಂಡೆ ತರಬೇಕಂದ ವೋ

ಅವರಿಬ್ಬರ ದಂಡೆ ಒಳ್ಳೆ ತಂದವನೆ ಶಿನ್ನಯ್ಯ
ಒಂದುರು ಮ್ಯಾಲೆ ಒಂದು ಹೆಣಗುಳು ಬಿದ್ದೈದಾವೆ
ಒಂದುರು ಮ್ಯಾಲೆ ಒಂದು ದಟ್ಟುಗುಳು ನೋಡಿದರು
ಅವರಿಗಾದ ಪೂಜೇನೆ ನಮಿಗಾಗುತೈತಂದ್ರು
ಹೇಳದುಲೆ ದಂಡೆ ಹೋಗುವುದಮ್ಮ ವೋ

ಆವಾಗ ಶಿನ್ನಯ್ಯ
ಬಾರೆಬಾರೇ ಬೋರಮ್ಮ
ನಾನು ಬೀಳೊ ಪಾಟೆಲ್ಲ

ಬಿದ್ದ ಕಾಣೆ ಬೋರಮ್ಮ
ನಮ್ಮಿಗೆ ಸಿಕ್ಕೋರಲ್ಲ
ನಮ್ಮಿಗೆ ದಕ್ಕೋರಲ್ಲ
ನಿನಗೆ ಬೇಕಾದಾರೆ ನೀನು ಹೋಗಮ್ಮ ವೋ

ಬಾರೆಬಾರೇ ಬೋರಮ್ಮ
ನಾನು ಬೀಳೋ ಪಾಟೆಲ್ಲ
ಬಿದ್ದೆ ಕಾಣೆ ಬೋರಮ್ಮ
ನಿನಗೆ ಬೇಕಾದಾರೆ ನೀನು ಹೋಗಮ್ಮ ವೋ

ಅಂಗ್ಯಂಬ ಸಬುದ ಒಳ್ಳೆ ಕೇಳಿದುಳೊ ಬೋರಮ್ಮ
ತಣ್ಣೀರು ಮುಣಿಗಿದುಳಣ್ಣ ತಡಿಮುಡಿ ಉಟೈದಾಳೆ
ನಿಂತೆ ತಡಿಮುಡಿ ಮ್ಯಾಲೆ ನಿಂತಕಂಡೆ ಬೋರಮ್ಮ
ವಡಿಯದು ನಾಗೂರಂತೆ ಹಿಡಿಯದು ಬಿರ‍್ಯಾದಿನಿಕಾಳಿ
ನಾಗುರು ನವಬೂತುಗಳು ತಾಳುಗುಳು ಮ್ಯಾಳುಗುಳು
ಶಾನೈ ಬಜಂತುರುಲೆ ಗಡಿಬಿಡಿ ಮಾಡಿಸಿಕಂಡು
ಪಟ್ಟದ ಬಿಳಿಯಾನೇನ ಹತ್ತಿಕಂಡು ಬೋರಮ್ಮ
ಆವಿನ ಗೂಡೀಗೆ ತಿರುಗಿದುಳಣ್ಣಾ ವೋ

ಎತ್ತಯ್ಯನ ಎತ್ತಾವು
ಏಳೆಂಬೇಳು ದೀನ
ಮೇವು ಮೇದಿರುಲಿಲ್ಲ
ನೀರು ಕುಡುದಿರುಲಿಲ್ಲ
ತೆಪ್ಪೆಯಾಕಿರುಲಿಲ್ಲ
ಗ್ವಾತ ವಯ್ದಿರುಲಿಲ್ಲ
ಅವ್ರು ಮಕ್ಕಳಿಗೇ ನೋಡು
ಆಲೇ ಕುಡಿಸಿರಲಿಲ್ಲ
ಗುಡ್ಡುದು ಬೋರೀ ತಮ್ಮ
ಗಂಟಾವುಲು ಶಿನ್ನಾಯ್ಯಗೆ
ವಾದೇ ಪಂತಕ್ಕೆ ಬಂದು ನಿಂತೈದಾವಣ್ಣ ವೋ

ಎತ್ತಿನ ಗೂಡೀನಾಗೊಳ್ಳೆ ಸೊಪ್ಪಿನ ಬೆರಿಗೀನಾಗೆ
ಅಪ್ಪಾ ಎತ್ತಯ್ಯ ಮನಿಗವುನೋ

ಆವಿನ ಗೂಡೀನಾಗೊಳ್ಳೆ ಬೇವಿನ ಬೆರಿಗೀನಾಗೆ
ಸ್ವಾಮಿ ಎತ್ತಯ್ಯ ಮನಿಗವುನೋ

ಆವಿನ್ಹಿಂದೆ ವಲಿಗಾನೆ ಮಲ್ಲಯ್ಯ ಹೋಗ್ಯಾನೆ
ಗೂಡಿನಾಗೆ ಎತ್ತಯ್ಯ ಮನಿಗವುನಣ್ಣಾ ವೋ

ಪಟ್ಟದ ಬಿಳಿಯಾನೆ ಒಳ್ಳೆ ಬಾಗುಲಿಗೆ ಕಟ್ಟಿದಳು
ಒಕ್ಕವಳೆ ಬೋರಮ್ಮ ವಳಿಯಾಕೋ

ಆವಿನ ಗೂಡೀನಾಕೆ ಹೋದಾಳೆ ಬ್ಯಾಡೂತಿ
ಸಾದಾ ಕಿನ್ನೂರಿ ನುಡುಸೂತಾ | ಬೋರಮ್ಮಾ
ಆವೀಗೆ ನಮಿಗೆ ಇನುವಂದ್ಲು

ಎತ್ತೀನ ಗೂಡೀನಾಕೆ ಒಕ್ಕವಳೆ ಬ್ಯಾಡೂತಿ
ಜೊತ್ತೆ ಕಿನ್ನೂರಿ ನುಡಿಸೂತ | ಬೋರಮ್ಮ
ಎತ್ತೀಗೆ ನನಿಗೆ ಇನುವಂದ್ಲು

ಸಿಕ್ಕಾ ವೋಡಿಕಲ್ಲು ಸಿತ್ತಾರದರು ಮನಿಯಾಗೆ
ಕೆತ್ತೀ ಮಂಚ ವರುಮೂಡಿ | ಊರಿನ ಗವುಡ
ಒಪ್ಪುತ್ತಾಡನು ಬಾರೊ ಪಗಡೀಯ ಗೌಡ ಪಗಡೀಯೇ

ರಾಯ ಎಣಿಕಲ್ಲು ರುವ್ವಾರದ ಅರಮನಿಯಾಗೆ
ಮಾಡಿಸಿದನೇ ಮಂಚ ವರಮೂಡಿ | ಊರಿನ ಗವುಡ
ಜಾವೊತ್ತಾಡನು ಬಾರೋ ಪಗಡೀಯ ಗವುಡ ಪಗಡೀಯೋ

ಬ್ಯಾಡ ಕಾಣೆ ಬೋರಮ್ಮ
ಕಂಕನಲಿ ಬ್ಯಾಡಾರು
ನಮ್ಮಿಗಳಿ ಮಕ್ಕಾಳು
ನಂಬಿಸಿ ಕಲಿ ಬ್ಯಾಡಾರು
ನಿಮ್ಮಿಗೆ ಅಳಿಮಕ್ಕಾಳು
ನೀನೆ ಕಾಣೆ ಬೋರಮ್ಮ

ನಮಿಗೆ ಕಿರುತಂಗಿ ಬೋರಮ್ಮಾ
ಹೋಗಮ್ಮ ತಾಯಿ ನಿಮ್ಮ ಅರಮನಿಗೋ

ಕಾಡಿನಲ್ಲಿ ಸೊಪ್ಪು ಓಡಿಲಿ ಉರುಕಂಡು ತಿಂಬೋ
ಕಾಡುಬ್ಯಾಡುರಿಗೆ ಎಲ್ಲಿ ಕುಲವಯ್ಯ | ಗೊಲ್ಲುನ ಗೌಡ
ಜಾವತ್ತಾಡನು ಬಾರೊ ಪಗಡೀಯ ಗವುಡ ಪಗಡೀಯಾ

ಬೆಟ್ಟದ ನೆಲ್ಲಿ ಸೊಪ್ಪು ಬೆಟ್ಟಿಲಿ ಮುರಕಂಡು ತಿಂಬೊ
ಹಟ್ಟೀ ಬ್ಯಾಡುರುಗೆಲ್ಲಿ ಕುಲವಯ್ಯ | ಗೊಲ್ಲನ ಗೌಡ
ಒಪ್ಪತ್ತಾಡನು ಬಾರೋ ಪಗಡೀಯ ಗವುಡ ಪಗಡೀಯೋ

ಬ್ಯಾಡ ಕಣೆ ಬೋರಮ್ಮ
ನಮ್ಮ ಮಂಡಿಗುಳು ಮುಟ್ಟಿದುರೆ
ದಂಡಿಗುಳು ಎದ್ದಾವು
ಜಡಿಗಾಳು ಮುಟ್ಟಿದುರೆ
ದಾಳುಗಳು ಎದ್ದಾವು
ಉರಿಗಣ್ಣು ಬಿಟ್ಟಾರೆ
ಉರುದು ಹೋಗೂತೀ ನೀನು
ಸಿಡಿಗಣ್ಣು ಬಿಟ್ಟಾರೆ
ಸಿಡದು ಬೀಳುತಿ ನೀನು
ನನ್ನಗೊಡವೆ ಬ್ಯಡಕಾಣೆ ಬೋರಮ್ಮ ವೋ

ಅಂಚಿನ ಸೀರೆ ಉಡುತಿನಿ ಕಂಚಿನ ಕಡಗಿಡುತೀನಿ
ನಿಮ್ಮಾನೆಡತೆ ನಾವು ನೆಡತೀನಿ | ಊರಿನ ಗೌಡ
ಒಪ್ಪುತ್ತಾಡನು ಬಾರೊ ಪಗಡೀಯ ಗೌಡ ಪಗಡೀಯೋ

ಕಟ್ಟೆ ತಪ್ಪುಕೊಡತೀನಿ ಹಟ್ಟಿ ತಪ್ಪು ಕೊಡತೀನಿ
ನಿಮ್ಮ ಬಟ್ಟಣ್ಣಾಗೆ ತಪ್ಪೇ ಕೊಡತೀನಿ | ಊರಿನ ಗೌಡ
ಜಾವೊತ್ತಾಡನು ಬಾರೊ ಪಗಡಿಯೇ ಗೌಡ ಪಗಡೀಯೇ

ಬ್ಯಾಡ ಕಣೇ ಬೋರಮ್ಮ
ನಮ್ಮ ಸತ್ತೇವು ಕೆಡುತಾವು
ಹೋಗಮ್ಮ ತಾಯಿ ನಿಮ್ಮ ಅರಮನಿಗೇ ವೋ

ನಾನು ಉರಿಗಣ್ಣು ಬಿಟ್ಟಾರೆ
ಉರುದು ಹೋಗೂತೀ ನೀನು
ಕಿಡಿಗಣ್ಣು ಬಿಟ್ಟಾರೆ
ಸಿಡದು ಬೀಳೂತೀ ನೀನು
ನನ್ನ ಗೊಡವೆ ಬ್ಯಾಡಕಾಣೆ ಬೋರಮ್ಮ ವೋ

ಪಾರ್ವತಿಯೇ ದೇವಿಯಂತೆ
ಪರಮೀಸುರಾಯಂತೆ
ನಾರಾಯಣ ಮೂರೂತಿ
ಇಂತೆಂಬೊ ಶೆರಣಾರು
ಆಕಸಕ ಹಂದುರುನ್ಹಾಕಿ
ಭೂಮಿಗರಿಣೇ ಇಟ್ಟವರೆ
ಎತ್ತೀಗೆ ಎತ್ತಯ್ಯಾಗೆ
ಎತ್ತಿಗಾರೆ ವಯ್ದವರೆ
ನಮ್ಮ ಸತ್ತೇವು ಕೆಡತವು ಕಾಣೆ ಬೋರಮ್ಮ ವೋ

ಆಗಾಲೇಯೇ ನೋಡು ಮತ್ತೇನೆ ಬೋರಮ್ಮ
ಕೈ ಮೈಯಿ ಮುಟ್ಟಾಕೆ ಒದಗಿದುಳಣ್ಣ ವೋ

ನಮ್ಮ ಸತ್ತೇವು ಕೆಡುತಾವೆ ಮತ್ತೇನೆ ಬೋರಮ್ಮ
ಮುಟ್ಟಬ್ಯಾಡೆ ತಾಯಿ ನನ್ನ ಮುಟ್ಟುಬ್ಯಾಡಂದ ವೋ

ಅತ್ತಿತ್ತ ಜರಗನಂತೆ ಮತ್ತೇನೆ ಎತ್ತಯ್ಯ
ನನ್ಹತ್ತುರಿಕೆ ಬೋರಮ್ಮ ಒದುಗುವುಳು
ನಮ್ಮ ಸತ್ತೇವೆ ಕೆಡುತಾವೆ ಮತ್ತೇನೆ ಬೋರಮ್ಮ
ಮುಟ್ಟು ಬ್ಯಾಡೆ ತಾಯಿ ನನ್ನ ಮುಟ್ಟುಬ್ಯಾಡಂದಾ ವೋ

ಎದ್ದೇನೆ ನೋಡತಾನೆ ಮತ್ತೇನೆ ಎತ್ತಯ್ಯ
ಎತ್ತಾವೀನ ಸಬುದು ಮೊದಲಿಲ್ಲ ವೋ

ಪಟ್ಟದ ಬಿಳಿಯಾನೇನ ಬಾಗಿಲುಗೆ ಕಟ್ಟವಳೆ
ನೋಡವನೆ ಎತ್ತಯ್ಯ ನೋಡಿದುನಣ್ಣಾ ವೋ

ಕರಿಯಾ ಓಬೇನ್ಹಳ್ಳಿ ಕರದರೆ ಓ ಅಂಬೋಳೆ
ಕಳ್ಳಾನೇ ಬ್ಯಾಡುರಿಗೆ ಕೈಸೆರಿಯೋ ಕೊಟ್ಟ್ಯಮ್ಮ
ಎಲ್ಹೋದೆ ತಾಯಿ ನೀನು ಎಲ್ಹೋದೆಂದ ವೋ

ಸುತ್ತೇಳ ರಾಜ್ಯಾವು ವತ್ತಗಟ್ಟಿ ಮೇದಮ್ಮ
ಕಳ್ಳಾನೆ ಬ್ಯಾಡುರಿಗೆ ಕೈಸೆರಿಯೇ ಕೊಟ್ಟ್ಯಮ್ಮ
ಎಲ್ಹೋದೆ ತಾಯಿ ನೀನು ಎಲ್ಹೋದೆಂದ ವೋ

ಆದೂವಾನಿ ಸೀಮೆ ಹೋಗಿ ಬಂದಕ್ಕಯ್ಯ
ಕಳ್ಳಾನೆ ಬ್ಯಾಡುರಿಗೆ ಕೈಸೆರಿಯೇ ಕೊಟ್ಯಮ್ಮ
ಸೊಂಡಾಲೂರು ಕೆರಿಯಾಗೆ ದುಂಡಾಪು ಮೇದೋಳೆ
ಗಂಡುರು ಗೂಳಿ ಗರತಿ ಎಲ್ಹೋದೆ ತಾಯಿ ನೀನು ಎಲ್ಹೋದೆಂದ ವೋ

ಅಲೆ ಗೊಡ್ಡುಗಾಳಿ ಕಿವು ಕರುಣುಕೆ
ಆಮಾತು ಕೇಳಿದಣ್ಣ
ನಮ್ಮ ನಾಳಿದಂತ ವಡಿಯಾನ
ಕೈ ಸೆರಿಯೇ ಕೊಟ್ಟ ಮ್ಯಾಲೆ
ನಾವು ಬದುಕಿದ್ದಿರಾಗೆ ಫಲವಿಲ್ಲಾ ವೋ

ಆಕಸಗಡ ಗುಟ್ಟಾದಣ್ಣ
ಭೂಮಿ ತಳ್ಳುನಿಸೋದು
ಆವೀನ ಗೂಡಿಗೆ ಬಂದೈತೆ ಗೊಡ್ಡಗಾಳಿ
ಪಟ್ಟಿದ ಬಿಳಿಯಾನೇನ ಕಾಲು ತಳುದೇನಾ ನೋಡು
ಕಳ್ಳು ತಗದು ಆವಾಗ ಎಣಿಕಲ್ಲು ಪಟ್ಟಣುಕೆ
ಎಣಿಕಲ್ಲು ಪಟ್ಟುಣುಕೆ ಸೂರಿ ಮಾಡೈತೇ
ನೋಡಿದುಳೇ ಬೋರಮ್ಮ ನೋಡಿದುಳೋ

ನೀನು ಬರುದಿದ್ರೆ ವಸ್ಟೆವೋತು ಮತ್ತೇಯೇ ಏ ಗೌಡ
ನಿನ್ನಾವಿನಾಗೆ ಇರುವಂತ ಗೊಡ್ಡಗಾಳೀನ ಮಾತ್ರ
ನಮ್ಮ ಏಳಜಿಟ್ಟಿ ಪಾಲೀಗೆ ಮುಚ್ಚುಲುದನ್ನ ಉಳಿಗೆ
ಕಡಿಯೇನೇ ಕೊಟ್ಟಾರೆ ಮತ್ತೇನೆ ಎತ್ತಯ್ಯ
ನೀನೇ ಅಣ್ಣಾ ನಾನೇ ತಂಗ್ಯಂದುಳು ವೋ

ಕೊಟ್ಟೊಂದೇ ಮಾತೀಗೆ ಕೊಟ್ಟರ‍್ಯಾರೆ ಬೋರಮ್ಮ
ಬಿಟ್ಟೊಂದೇ ಮಾತೀಗೆ ಬಿಟ್ಟರ‍್ಯಾರೆ ಬೋರಮ್ಮ
ಮೊದಲಾಡಿದ ಮಾತು ನಾನು ತೊದುಲಾಡೋದಿಲ್ಲ ಕಾಣೆ
ಕೊಟ್ಟು ಹೋಗೋ ತಾಯಿ ನಿಮ್ಮ ಅರಮನಿಗೆ ವೋ

ಮಾತುಕೊಟ್ಟ ಎತ್ತಯ್ಯ ಮುತ್ತೂನೇ ವಡುದಂಗೆ
ಗೊಡ್ಡು ಗಾಳಿ ಮಾತು ಕೊಟ್ಟು ಮೈಗುದುಗೌಡಾ ವೋ

ತುರುಕುರು ಸೀಮ್ಹೀಗೋಗಿ ನಿನ್ನ ಕಡಿಯೆ ಕೊಡುತಾನೆ
ಬ್ಯಾಡುರ ಸೀಮಿಗೆ ಬಂದು ನನ್ನ ಕಡಿಯೆ ಕೊಟ್ಟವನೆ
ಮಲ್ಲಮ್ಮೇಳಿದ ಮಾತು ತಪ್ಪುಲಿಲ್ಲ ಹಿರಿಯಣ್ಣ
ನೆಲವೈದೆ ನೆತ್ತುರುವೆ ಕಕ್ಕುತಾವೆ ನೋಡು ವೋ

ಗೊಡ್ಡ ಗಾಳಿ ಮಾತೂನೇ ಮಾಡಿಕಂಡು ಬೋರಮ್ಮ
ಅವರರಮನಿಗೆ ಬೋರಮ್ಮ ತಿರಗಿದುಳೇ ವೋ

ಬಾರಯ್ಯ ವಲಿಗಾನೇ ಮತ್ತೇನೆ ಮಲ್ಲಯ್ಯ
ನಮ್ಮ ಸತ್ತೇವು ಕೆಟ್ಟಾವು ನಿತ್ತೇವು ಕೆಟ್ಟಾವು
ನಿರ್ದುಣ ದುರ್ಬದುಕು ಕೆಡತಾವೆ ಮಲ್ಲಯ್ಯ
ಗೊಡೇ ಕಟ್ಟ ಬೇಕಂದ ಮೈಗುದು ಗೌಡವೋ

ಕಾರೆಕಳ್ಳೆ ಕಡುದವರೆ ಕರಿವಿನ ಗೂಡೊತ್ತಿದುರು
ಊಲಿ ಕಳ್ಳೇಕಡದು ಉದಿಮೋರೊತ್ತಿದುರಣ
ಅಂದಾ ಶೆಂದುದ ಕಳ್ಳೆ ಗಂಧ ಮಾವುದ ಬೆರಗಣ್ಣ
ಅಚ್ಯನ್ನು ಕಳ್ಳ್ಯೆಂತ ಪಚ್ಯೇದು ಬೆರಗುಣ್ಣ
ಹೂವ್ವಿನುಕ್ಕುಡು ದ್ಯಾವುರು ಬೆರಗಣ್ಣಾ ವೋ

ಉಳುವೇನೇ ಕೋಲಣ್ಣ ಉಗ್ಗುದಾನೇ ಗಡಿಗಣ್ಣ
ಉಕ್ಕುಡುದ ಕೋಪೀಗೆ ಇಟ್ಟವನೆ ಎತ್ತಯ್ಯ
ಅಡಿಯಾ ಸೀಗೆ ಸರುದವನೆ ಬೆಂಕಿ ಮಾಡಿದುನಣ್ಣ
ಮೂರೇನೆ ಕಣ್ಣಿನುದು ಕರಿಯಾನೆ ಸಿಪ್ಪಿನುದು
ದೃಷ್ಟಿಯನ್ನ ಕಾಯಿ ವಡುದವನೆ ಎತ್ತಯ್ಯ
ಎತ್ತಯ್ಯ ಗೂಡೆ ತಿರಗಿ ಗರುದವನಣ್ಣಾ ವೋ

ನೆಲವೈದೆ ನೆತ್ತೂರುನೆ ಕಕ್ಕೂವಮ್ಮಾ
ಬೆಳ್ಳಿಗಾವಿನ ಸೋಕ ಬಲುಸೋಕಾ ವೋ

ಬಂಡಾಟಕೇ ನೋಡು ಬದಲಾಟಾಕೇ ನೋಡು
ಕುತ್ತಾವಾಸುಕೆ ಗೂಡು ಸೇರಿದುವಮ್ಮಾ ವೋ

ಗೂಡೇನೆ ಸೇರೊಂದೆ ಯಾವಾಗ ಏ ನೋಡು
ಮೋವುದಾರಿನ ಕರುವೇನೆ ಬಿಟ್ಟವನೆ ಮಲ್ಲಯ್ಯ
ಒಳುಸಾರೆ ವರುಸಾರೆ ಹಾಲೇನೆ ಕರಕಂಡು
ಉಕ್ಕುರಿ ಸುಗ್ಗಿ ಮಾಡಿ ಕಡಿಗಿಟಟ ಮಲ್ಲಯ್ಯ
ಜಾಲೀ ಜಂಬೀ ಎಲೆಯೇ ಪತ್ತುರುವಿಳ್ಳೇವು ಕಟ್ಟಿ
ಅಗ್ಗಿಣಿಯೆ ತಕ್ಕಂಡು ಮಜ್ಜುಣ್ಣ ನೀಡಿಕೊಂಡು
ಸಣ್ಣಾದೊಂದೂಟ ಮಾಡಿದುನಣ್ಣಾ ವೋ