ಕಾರೆಕಳ್ಳೆ ಕಡುದವುರೇ ಕರುವಿನ ಗೋಡತ್ತಿವುರು
ಹುಲೀಕಳ್ಳೇ ಕಡದು ಉದುಮೋರತ್ತಿದುರಣ್ಣ
ಅಂದಾ ಶೆಂದುದ ಕಳ್ಳೆ ಗಂಧ ಮಾವುದು ಬೆರಗಣ್ಣ
ಅಚ್ಚನ್ನ ಕಳ್ಳಂತೆ ಪಚ್ಚೇದು ಬೆರುಗಣ್ಣ
ಹೂವ್ವೀನುಕ್ಕುಡು ದ್ಯಾವುರು ಬೆರಗಣ್ಣಾ ವೋ

ಉಳಿಯೋ ಕೋಲು ನೋಡು ಉಗ್ಗುದು ಗಡಿಗೆ ನೋಡು
ಉಕ್ಕುಡುದ ಕೋಪೀಗೆ ಇಟ್ಟ ನಿನ್ನೆತ್ತಯ್ಯ
ಅಡಿಯಾ ಸಿಗಿಸರುದವನೆ ಬೆಂಕಿ ಮಾಡೀದುರಣ್ಣ

ಮೂರೇನೇ ಕಣ್ಣಿನುದು ಕರಿಯಾನೆ ಸಿಪ್ಪಿನಿಗೆ
ದೃಷ್ಠಿಯನ್ನು ಕಾಯಿ ವಡುದಾನೆ ಎತ್ತಯ್ಯ
ಎತ್ತೇಗೂಡಿಗೆ ತಿರುಗುದವರಮ್ಮ ವೋ

ಎತ್ತೇನೇ ಗೂಡಿಗೆ ಮತ್ತೇನೆ ಎತ್ತಯ್ಯ
ಭಾವಾಸುಡುತಾನಣ್ಣ ಮೈಗುದು ಗವುಡ

ಎತ್ತಾವೆ ಗೂಡಿನೇ ಸೇರಿಕಂಬೋದು ನೋಡು
ಮೋವುದಾರಿಲಿ ಕರುವೇನೆ ಬಿಟ್ಟವುನೆ ಮಲ್ಲಯ್ಯ
ವಳಸಾರೆ ವರುಸಾರಿ ಹಾಲೇನೆ ಕರಕಂಡು
ಉಕ್ಕುರಿ ಸುಗ್ಗೀ ಮಾಡಿ ಕಡಿಗಿಟ್ಟ ಮಲ್ಲಯ್ಯ
ಜಾಲಿ ಜಂಬೀ ಎಲಿಯೇ ಪತ್ತುರುವಿಳ್ಳೇ ಕಟ್ಟಿ
ಆಗ್ಗುಣಿಯೇ ತಕ್ಕಂಡು ಮಜ್ಜುಣ ನೀಡೀಕಂಡು
ಸಣ್ಣಾದೋಂದೂಟ ಮಾಡಿಸಿದುರಣ್ಣಾ ವೋ

ಸೀಗುರಿ ಸಿಕ್ಕಿಣಿಕಂತೆ ಬಾಗುರು ಬಿಳಿ ಎಲಿಯಣ್ಣಾ
ತಾವುರುಗಿರಿ ಯಂಬೋದು ಸೋಸಿದ ಕೆನಿ ಸುಣ್ಣಾವ
ಗಟ್ಟಾದನ್ನ ಸೀಮೆ ರೆಟ್ಟಿಯೆಸಲಿನ ಸೊಪ್ಪು
ಸಣ್ಣಾದೊಂದಿಳ್ಳೇವೆ ಮಡಿಸಿದುರಣ್ಣಾ | ನಿನ್ನೆತ್ತಯ್ಯ
ಕಲ್ಲಿನ ಕಲ್ಲಿನ ಮಂಚ ಸೆಲ್ಲ್ಯಾರದಟ್ಟೆ ತೆಲಿಗಿಂಬೂ
ಹಾವೀನ ಸೀಗಣ್ಣ ಚೇಳಿನ ಮಂಚ ನಾಗಭೂಷಣವೆ ತೆಲಿಗಿಂಬು

ಹತ್ತು ಸಾವಿರದಂಬು ತೆಕ್ಕಿಗೆ ಸಾಸಿಕಂಡ
ಆರು ಸಾವಿರದಂಬು ತೋಳಿಗೆ ಸಾಸೀಕಂಡ
ಬೇವಿನ ಸುರಿನಾರಿ ಬಿಲ್ಲು ಬೆನ್ನಿಗೆ ಕಟ್ಟೀಕಂಡ
ಕಯ್ಯಲಿ ಕತ್ತಿರಿ ಬಾಣ ನೆತ್ತಿಲಿ ನೆತ್ತುರು ಬಾಣ
ಸುರುನಾರಿ ಮರುಬಿಲ್ಲು ಸೂರಿದುನ ವದಿಯಂಬು
ಸೂಡಿಕಂಡ ಗನಗುರುವೆ ಮತ್ತೆ ನಿನ್ನೆತ್ತಯ್ಯ
ಹೊಕ್ಕುಳುವಸೀಕಂಡ ಹೊಕ್ಕಳುವ ವದ್ದುಕಂಡ
ಮನಿಗಿದುರೊ ಗೌಡಾ ಮನಿಗಿದುರಣ್ಣಾ ವೋ

ಮುಂಗಳಿ ಕೂಗೋದಂತೆ ಮೂಡಲು ಕೆಂಪರುವೋದೇ
ಎದ್ದವುಳ್ಳೆ ಬೋರಮ್ಮ ಮತ್ತೇನೆಯೇ ನೋಡು
ತಣ್ಣೀರು ಮುಳಿಗಿದುಳಣ್ಣ ತಡಿಮುಡಿ ಉಟೈದಾಳೆ
ನಿಂತು ತಡಿಮುಡಿ ಮ್ಯಾಲೆ ನಿಂತಗಂಡು ಬೋರಮ್ಮ

ವಡಿಯದ ನಾಗೂರಂತೆ ಹಿಡಿಯದು ಬಿರುದುನಿ ಕಾಳೆ
ನಾಗುಳುನವು ಬೂತೂಳು ತಾಲುಗಳು ಮ್ಯಾಳುಗಳು
ಸಾನೈಬಾ ಜಂತುರುಲೆ ಗಡಿಬಿಡಿ ಮಾಡಿಸಿಕಂಡು
ಪಟ್ಟಾದ ಬಿಳಿಯಾನೇನ ಹತ್ತಿಕಂಡು ಬೋರಮ್ಮಾ
ಹಾಲಂಗುದ ಕ್ವಾಟೆಮ್ಯಾಲೆ ನಿಂತಕಂಡು ಬೋರಮ್ಮ
ಆನೆವಂಟೆ ಕಾವಲು ಮಕ್ಕ ಆಯ ನೋಡಿದುಲೋ

ಅಡ್ಡಂದೇ ಆರು ಗಾವುದ ಸುತ್ತ ಮೂರು ಗಾವುದ
ಬೆಳ್ಳಿ ಗೂಡಾರೊಯ್ದಾಂಗೆ ಬಿಗುದು ನಿಂತೈತೋ

ನೋಡಿದುಳೋ ಬೋರಮ್ಮ ನೋಡಿದುಳೋ
ಆಲೆ ಕಾದಾಲು ಕುಡುದು ಗೊಲ್ಲಾಗೆ ಕಾವುರುವು ಎಷ್ಟಿದ್ದೀತೋ
ಅಸಿಯಾಲು ಕುಡುದು ಗೊಲ್ಲಾಗೆ ಮದುವೆಷ್ಟು ಇದ್ದೀತೋ
ಅವನ್ಹೊಟ್ಟೆಗೆ ಹಣವೇಟೈತೊ ಹಟ್ಟ್ಯಾಗ ಹಣವೇಟೈತೋ
ಅವನ ಹೊಟ್ಟೇ ಮರಿಬೇಕಂದಳು ಬೋರಮ್ಮಾ ವೋ

ಅವನ ಆನೆ ವಂಟೆ ಕಾವೂಲು ಹಾಳು ಮಾಡಿ ಬಿಟ್ಟವನೆ
ಅವುನ ಗೊಲ್ಲಾನ ತಲಿಯೆ ತರಬೇಕಂದುಳು ವೋ

ಗೊಲ್ಲುನ ತಲಿಯೇ ನಾನು ತರದ್ದಿದ್ದುಮ್ಯಾಲೇಯೇ ನೋಡೂ
ಇವು ಮಲಿಯಲ್ಲ ಎಕ್ಕೇ ಕಾಯಿ ಅಂದವಳೆ ಬೋರಮ್ಮ
ಅವುಳೆದಿಯೆ ಅವುಳೇ ತಟ್ಟಿಕಂಬೋಳೂ ವೋ

ಗೊಲ್ಲುನ ತಲಿಯೇ ನೋಡು ತರಬೇಕು ಅಂದವಳೆ
ಊರಾಗೆ ಇದ್ದಂತ ಗಂಡು ಬೀರಿ ಹುಡುಗುರುನ
ಕರಿಸಿದುಳು ಬೋರಮ್ಮ ಮತ್ತೇಯೇನೆ ನೋಡು
ಅನ್ನಾಕಿಲ್ಲದೋರೀಗೆ ಅನ್ನ ನಾನು ಕೊಡುತೀನಿ
ಬಟ್ಟೆ ಇಲ್ಲಂದರಿಗೆ ಬಟ್ಟೆ ನಾನು ಕೊಡುತೀನಿ
ಗೊಲ್ಲುನ ತಲಿಯೆ ನೀವು ತಂದಿದು ನಿಜವಾದಾರೆ
ತಾಯಿ ಮಗಳು ಮಕ್ಕಳನ ಗಂಡುಳ್ಳ ಹೆಂಡರುನ
ಸರಿಯಪ್ಪಣಿ ಬಿಡಿಸಿ ಕೊಡುತೀಂದವುಳೋ ವೋ

ಊಪಿರಿಕಿದ್ದರುನ ನಾವು ಉಪ್ಪಾದರು ಮಾರಿಕಂಡು
ತಿಂಬುತೀವಿ ಬೋರಮ್ಮ ಮತ್ತೇಯೇನೆ ನೋಡು

ಆಸತ್ತೇದಲ್ಲಿ ಸೆರಣ ಉತ್ತುಮುರೇನೇ ಮಗಾ
ಎತ್ತಯ್ಯನ ಗೊಡವಿ ನಮ್ಮಿಗೆ ಬ್ಯಾಡಮ್ಮ ವೋ

ದಂಡೆಲ್ಲ ಹಿಂದಾಕೆ ಸರದು ಹೋಗುವುದಮ್ಮ
ಕಾಲು ಕಡಗದೋನು ಕೊಳ್ಳಿಲಿ ಪದುಕಾದೋನು
ಮುಕ್ಕಣ್ಣ ಬಲ್ಲರಿದೋನು ಮುತ್ತಿನ ತೂರೊಯ್ದೋನು
ಜೋಮಲಿ ಗುಂಡಲಿನೋನು ಒಮಲೆ ಗುಂಡೀನೋನು
ಗುಡ್ಡದ ಬೋರಿ ತಮ್ಮ ಗಂಟಾವುಲು ಶಿನ್ನಯ್ಯ
ನಾನೇ ತರತೀನಿ ಕಾಣೆ ಮತ್ತೇನೆ ಬೋರಮ್ಮ
ನನಿಗೇನು ನೀನು ಕೊಡತೀಯಂದಾ ವೋ

ಗೊಲ್ಲುನ ತಲಿಯೇ ನೀನು ತಂದಿದ್ದು ನಿಜವಾದಾರೆ
ಸಾಲುಗ್ವಾದಾಲೆತ್ತಮ್ಮ ಸರಳೆಮ್ಮೆ ಹಿಂಡಮ್ಮ
ವರಿಯಟ್ಟಿ ಕುರಿಹಿಂಡು ವರಿಗೂಡಿನೆತ್ತಾವು
ಸರಿಪಾಲು ಕೊಡುತಿನಿ ಕಾಣೊ ಶಿನ್ನಯ್ಯ ವೋ

ಅದುಮೋಟು ನಾನೇನು ಮಾಡಾಲಿ ಬೋರಮ್ಮ
ಇನ್ನೇನು ಕೊಡಬೇಕು ಶಿನ್ನಯ್ಯ ವೋ

ಗೊಲ್ಲುನ ತಲಿಯೇ ನೀನು ತಂದಿದ್ದು ನಿಜುವಾದಾರೆ
ರಾಮಸಾಲೆ ಹೊನ್ನುಗುಳು ಭೀಮಸಾಲೆ ಹೊನ್ನುಗುಳು
ಸರಿಪಾಲು ಶಿನ್ನ ಸರಿಪಾಲಯ್ಯ ವೋ

ಅದುಮೋಟು ನಾನೇನು ಮಾಡಾಲಿ ಬೋರಮ್ಮ
ಇನ್ನೇನು ಕೊಡಬೇಕು ಶಿನ್ನಯ್ಯ ವೋ

ಗೊಲ್ಲುವ ತಲೀಯೇ ನೀನು ತಂದಿದ್ದು ನಿಜುವಾದಾರೆ
ಮನಿಯಾಗೆ ಇರುವಂತ ರಾಮಸಾಲೆ ಹೊನ್ನಗುಳು
ಸರಿಪಾಲು ಶಿನ್ನ ಸರಿಪಾಲಯ್ಯ ವೋ

ಅದುವೋಟು ನಾನೇನು ಮಾಡಾಲಿ ಬೋರಮ್ಮ
ಇನ್ನೇನು ಕೊಡಬೇಕು ಶಿನ್ನಯ್ಯ ವೋ

ಗೊಲ್ಲುನ ತಲಿಯೇ ನೀನು ತಂದಿದ್ದು ನಿಜುವಾದಾರೆ
ನನ ಮನಿಯಾಗೆ ಇರುವಂತ ಬಕ್ಕುಸ ಬಂಢಾರವು
ಸರಿಪಾಲು ಶಿನ್ನ ಸರಿಪಾಲಯ್ಯ ವೋ

ಸಾಲುಗ್ವಾದುಲೆತ್ತಮ್ಮ ಸರಳೆಮ್ಮೆ ಹಿಂಡಮ್ಮ
ವರಿಯಟ್ಟಿ ಕುರಿಹಿಂಡು ವರಿಗೂಡಿನೆತ್ತಾವು
ಮನಿಯಾಗೆ ಇರುವಂತ ಬಕ್ಕುಸು ಬಂಢಾರಾವು
ಸರಿಪಾಲು ಕೊಡತೀನಂದ್ರೆ ವಲ್ಲಮ್ಮುತೀ ಶಿನ್ನಯ್ಯ
ಇನ್ನೇನು ಕೊಡಬೇಕ್ಹೇಳು ಶಿನ್ನಾಯ್ಯ ವೋ

ಗೊಲ್ಲುನ ತಲಿಯೇ ನೀನೇ ತಂದಿದ್ದು ನಿಜುವಾದಾರೆ
ನೀನು ಕೇಳಿದ್ದೆ ವರುವೆ ಕೊಡತೀನಯ್ಯ ವೋ

ನೀನೇ ನನ ಮಂಚಕ್ಕೆ ವಪ್ಪತ್ತು ಶೈವಾದಾರೆ
ಈಗ ತರತಿನಿ ಗೊಲ್ಲುನ ತಲಿಯೆಂದ ಶಿನ್ನಾ ತಲಿಯೆಂದ ವೋ

ನೀನು ತಂದ ವಂದೀಗೆ ನಾನು ನೋಡೀದಂದೀಗೆ
ಆದಾರಾಗಲ್ಹೋಗೋ ಶಿನ್ನಯ್ಯ ವೋ

ಇಳ್ಳೆವಿಡುದವನಣ್ಣ ಮತ್ತೇನೆ ಶಿನ್ನಯ್ಯ
ಏಳು ಕಟ್ಟೀ ಬಳ್ಳೀನೆ ತಕ್ಕಂಡ ಎಲು ಶಿನ್ನ
ಏಳು ಬಂದಿರಿ ದೊಣ್ಣೆ ತಕ್ಕಂಡ ಶಿನ್ನಯ್ಯ
ಆವಿನ ಗೂಡೀಗೆ ವದಿಗಿದುನಣ್ಣಾ ವೋ

ಆವಿನ ಗೂಡೀಗೇನೆ ವದಿಗೆನೆ ಶಿನ್ನಯ್ಯ
ಉಕ್ಕುಡುದ ಕೋಪಿನಾಗ ಕುಂತವುನಣ್ಣಾ ವೋ

ಅಗುಸುರು ಬಾಲೆ ಹೋಗೋಳೆ ತಗಸಿ ಹೂವ್ವಿನ ಬೂದ
ಕಾಲು ಕೆದರಿ ಎತ್ತೇ ರಂಗುಳುಸೋದು ವೋ

ಶಾಡೇದೆ ಹುಲ್ಲೇ ಒಂದೀಳ್ಳಡಿಮೆ ಹೋದಣ್ಣ
ಬ್ಯಾಡುರು ಬಂದುರು ಗಾಳಿ ತಗಿಯೋದು | ಕರಿ ಎತ್ತೇ
ಕಾಲು ಕೆದರಿ ಎತ್ತೇ ರಂಗುಳುಸೋದು ವೋ

ಹಳ್ಳಾದ ಹುಲ್ಲೆ ಒಂದಳ್ಳಡಿಮೆ ಹೋದಣ್ಣಾ
ಕಳ್ಳರು ಬಂದುರು ಗಾಳಿ ತಗಿಯೋದು | ಬಿಳಿ ಎತ್ತೇ
ಕಾಲು ಕೆದರಿ ಎತ್ತೇ ರಂಗುಳುಸೋದು ವೋ

ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ಕಡಿಯುಕ್ಕುಡುಕ್ಹೋಗಿ ಆಯ ನೋಡಂದ ವೋ

ಕಡಿ ಉಕ್ಕೂಡಕೇ ಬಂದು ನೋಡುತಾನೆ ಮಲ್ಲಯ್ಯ
ಗುಡ್ಡುದ ಬೋರೀ ತಮ್ಮ ಗಂಟಾವುಲು ಶಿನ್ನಯ್ಯ
ಕಡಿ ಉಕ್ಕುಡುದಾಗೆ ಕುಂತವನಂದಾ ವೋ

ಭಾವಾ ಭಾವ ನೋಡೊ ಮತ್ತೇನೆ ಭಾವಯ್ಯ
ಗುಡ್ಡುದು ಬೋರಿ ತಮ್ಮ ಗಂಟಾವುಲು ಶಿನ್ನಯ್ಯ
ಕಡಿ ಉಕ್ಕುಡುದಾಗೆ ಕುಂತವುನಂದಾ ವೋ

ದುಡುದುಂಬಾಕೆ ಅವುನು ಎತ್ತಿ ಬಂದವನಂದು
ಕರದುಂಬಾಕೆ ನೋಡು ಹಾಲಿಗೆ ಬಂದವನ್ಹೆಂಗೋ
ಹೋಗಯ್ಯ ಕೇಳಿಬಾ ಅಂದವಳೆ ಮಲ್ಲಮ್ಮ ವೋ

ನೀ ದುಡದುಂಬಾಕೆ ಎತ್ತಿಗೆ ಬಂದೀಯೇನೋ
ಕರದುಂಬಾಕೆ ನೋಡು ಆವಿಗೆ ಬಂದೀಯೇನು
ಯಾತಕೆ ಬಂದಿದ್ದಾಲೆ ಶಿನ್ನಯ್ಯ ವೋ

ದುಡುದುಂಬಾಕೆ ನನಿಗೆ ಎತ್ತೆನು ಕಡಿಮ್ಯಾಗಿಲ್ಲ
ಕರದುಂಬಾಕೆ ನೋಡು ಆವೇನು ಕಡಿಮ್ಯಾಗಿಲ್ಲ
ಕಾರೇವುಕ ಬಂದೀವಿನೇ ಎಲೆ ಗೊಲ್ಲಾ ವೋ

ಆ ಮಾತು ಕೇಳುವನೆ ವಲಿಗಾನೆ ಮಲ್ಲಯ್ಯ
ಅವುರ ಭಾವ್ಹುನತಾಕೆ ಅವ್ರನು ಬರುತಾನಣ್ಣ ವೋ

ದುಡುದುಂಬಾಕೆ ಅವನು ಎತ್ತಿಗೆ ಬಂದಿಲ್ಲಂತೆ
ಕರದುಂಬಾಕೆ ನೋಡು ಆವಿಗೆ ಬಂದಿಲ್ಲಂತೆ
ಕಾರೇವುಕೆ ಬಂದವನೆ ಭಾವಯ್ಯ ವೋ

ಮೊದಲಾಡಿದ ಮಾತೇ ಮತ್ತೇ ತೋದಲಾಡಿದೆ ಲಮಡೀಕೆ
ನೀನು ಯಾತಕ ಬಂದಿದ್ದಾಲೆ ಶಿನ್ನಯ್ಯ ವೋ

ಕರಿಮಲೈಗೆ ಬಿಳಿಮಲೈಗೆ ಕಟ್ಟಿಗೆಗೆ ಹೋಗಿದ್ದೇ
ಹೊತ್ತು ಹೋತು ಗವುಡ ಉಳಕಂಡ ಗವುಡ ಉಳಕಂಡೆ ವೋ

ಮೊದಲಾಡಿದ ಮಾತು ಒಳ್ಳೆ ತೊದಲಾಡಿದೆ ಲಮಡೀಕೆ
ಯಾತಕೆ ಬಂದಿದ್ದ್ಯಾಲೆ ಶಿನ್ನಯ್ಯ ವೋ

ಎತ್ತಿನ ಗೂಡಿನಾಗೆ ಬಲು ಎಚ್ಚುಳುವೇಳುತ್ತಿದ್ದರು
ನಿದ್ದೆ ಮಾಡಬೇಕಮುತ ಬಂದಿವಿನಿ ಗೌಡ ಬಂದಿವಿನೇ ವೋ

ಎಷ್ಟು ಪೆಟ್ಟು ಕೇಳಿದುರೆ ಹೇಳದಿಲ್ಲ ಎಲೆ ಶಿನ್ನ
ನಿನ್ನೆ ಮಧ್ಯನದ್ಹೊತ್ತಿನಾಗೆ ನಿಮ್ಮಕ್ಕ ಬೋರಮ್ಮ
ತಣ್ಣೀರು ಮುನಿಗೀ ನೋಡು ತಡಮಾಡಿ ಉಟ್ಟಿಕಂಡು
ನಿಂತು ತಡಿಮುಡಿಮ್ಯಾಲೆ ನಿಂತಗಂಡು ನಿಮ್ಮಕ್ಕ
ವಡಿಯದು ನಾಗೂರಂತೆ ಹಿಡಿಯದು ಬಿರ‍್ಯಾದಿನಿಕಾಳಿ
ನಾಗುರುನವು ಬೂತುಗಳು ತಾಳುಗುಳು ಮ್ಯಾಳುಗಳು
ಶಾನೈವ ಜಂತುರುಲೆ ಗಡಿಬಿಡಿ ಮಾಡಿಸಿಕಂಡು
ಪಟ್ಟದ ಬಿಳಿಯಾನೇನ ಹತ್ತಿಕಂಡು ಬೋರಮ್ಮ
ನಮ್ಮ ಆವಿನ ಗೂಡಿಗೇನೆ ಆರುತಿಯೆ ಬೆಳಗಿದ್ದು
ಬದ್ದ ಗೊಲ್ಲುನು ಗವುಡ ನಿನಮಾತು ವೋ

ಆ ಗೊಲ್ಲುನ ತಲಿಯೇ ನೋಡು ತರದ ಮೇಲೆಯೇ ನೋಡು
ನನಿಗೆ ಮಲಿಯಲ್ಲ ಎಕ್ಕೇಕಾಯಿ ಅಂದುದ್ದು ನಿಮ್ಮಕ್ಕ
ಸುಳ್ಳೊ ಬದ್ದಾವೋ ಶಿನ್ನಯ್ಯ
ಬದ್ದ ಗೊಲ್ಲುನು ಗವುಡ ನಿನಮಾತು ವೋ

ನನ್ನ ಆನೆ ವಂಟೆ ಕಾವೂಲು ಹಾಳುಮಾಡಿ ಬಿಟ್ಟವನೆ
ಊರಾಗೆ ಇದ್ದಂತ ಗಂಡಬೀರಿ ಹುಡುಗರುನ
ಕರಿಸಿದ್ದು ನಿಮ್ಮಕ್ಕ ಮತ್ತೇನೆ ಬೋರಮ್ಮ
ಅನ್ನಾಕಿಲ್ಲದೋರಿಗೆ ಅನ್ನಕ ನಾನು ಕೊಡತೀನಿ
ಬಟ್ಟೆ ಇಲ್ಲಂದರಿಗೆ ಬಟ್ಟೆ ನಾನು ಕೊಡತೀನಿ
ಗೊಲ್ಲುನ ತಲಿಯೇ ನೀವು ತಂದಿದ್ದು ನಿಜುವಾದಾರೆ
ತಾಯಿ ಮ್ಯಾಗಳ ಮಕ್ಕಳುನ ಗಂಡುಳ್ಳ ಹೆಂಡುರುನ
ಸರಿಯಪ್ಪುಣಿ ಬಿಡಿಸಿ ಕೊಡತೀನಿ ಅಂದದ್ದು ನಿಮ್ಮಕ್ಕ
ಸುಳ್ಳೇ ಬದ್ದಾವೊ ಶಿನ್ನಯ್ಯ
ಸುಳ್ಳೆ ಬದ್ದಾವೊ ಶಿನ್ನಯ್ಯ
ಬದ್ದ ಗೊಲ್ಲುನು ಗವುಡ ನಿನಮಾತು ವೋ

ಆ ದಂಡೆಲ್ಲ ಹಿಂದಾಕೆ ಸರದೂನೆ ಹೋಗೋದು
ನಾನೇನೆ ತರುತಿನಿ ಕಾಣೆ ಮತ್ತೇನೆ ಬೋರಮ್ಮ
ನನಿಗೇನು ನೀನೇನು ಕೊಡತೀನಿ ಅಂದುದ್ದು
ಸುಳ್ಳೋ ಬದ್ದಾವೋ ಶಿನ್ನಯ್ಯ ವೋ

ಗೊಲ್ಲುನ ತಲಿಯೆ ನೀನು ತಂದಿದ್ದು ನಿಜುವಾದಾರೆ
ಸಾಲು ಗ್ವಾದುಲೆತ್ತಮ್ಮ ಸರಳೆಮ್ಮೆ ಹಿಂಡಮ್ಮ
ವರಿಯಟ್ಟಿ ಕುರಿಹಿಂಡು ವರಿಗೂಡಿ ನೆತ್ತಾವು
ಸರಿಪಾಲು ಕೊಡತಿನಿ ಅಂದಿದ್ದು ನಿಮ್ಮಕ್ಕ ಬೋರಮ್ಮ
ಸುಳ್ಳೋ ಬದ್ದಾವೋ ಎಲೆ ಶಿನ್ನಾ ವೋ

ಅದು ವೋಟು ನಾನೇನು ಮಾಡಾಲಿ ಬೋರಮ್ಮ
ಇನ್ನೇನು ಕೊಡಬೇಕೋ ಶಿನ್ನಯ್ಯ ಅಂದಾರೆ
ಗೊಲ್ಲುನ ತಲಿಯೆ ನೀನು ತಂದಿದ್ದು ನಿಜುವಾದಾರೆ
ಮನಿಯಾಗೆ ಇರುವಂತ ಬಕ್ಕುಸ ಬಂಢಾರ
ಸರಿಪಾಲು ಶಿನ್ನಾ ಅಂದಿದ್ದು ನಿಮ್ಮಕ್ಕ
ಸುಳ್ಳೋ ಬದ್ದಾವೋ ಶಿನ್ನಯ್ಯ ವೋ

ಅದು ವೋಟು ನಾನೇನು ಮಾಡಾಲಿ ಬೋರಮ್ಮ
ಇನ್ನೇನು ಕೊಡಬೇಕು ಶಿನ್ನಯ್ಯ ವೋ
ಗೊಲ್ಲುವ ತಲಿಯೆ ನೀನು ತಂದಿದ್ದು ನಿಜುವಾದಾರೆ
ರಾಮಸಾಲೆ ಹೊನ್ನುಗುಳು ಭೀಮಸಾಲೆ ಹೊನ್ನುಗುಳು
ಸರಿಪಾಲು ಕೊಡತೀನಂತ ಅಂದಿದ್ದು ನಿಮ್ಮಕ್ಕ
ಸುಳ್ಳೋ ಬದ್ದಾವೋ ಶಿನ್ನಯ್ಯ ವೋ

ಅದವೋಟು ನಾನೇನು ಮಾಡಾಲಿ ಬೋರಮ್ಮ
ಇನ್ನೇನು ಕೊಡುಬೇಕೊ ಶಿನ್ನಯ್ಯ ವೋ

ನೀನೇ ನನ ಮಂಚ್ಚುಕ್ಕೆ ಒಪ್ಪತ್ತು ಶೈವಾದಾರೆ
ಈಗ ತರತೀನಿ ಗೊಲ್ಲುನ ತಲಿಯ ಅಂದಿದ್ದು
ಸುಳ್ಳೊ ಬದ್ದಾವೊ ಶಿನ್ನಯ್ಯ ವೋ

ಬದ್ದ ಗೊಲ್ಲುನು ಗೌಡ ನಿನ ಮಾತು ಅಂದಾರೆ
ಏಳಿಕಟ್ಟು ಬಳ್ಳೀನೆ ಎಡಮುರಿಗೆ ಕಟ್ಟಿದುವು
ಏಳು ಬಂದಿರಿ ದೊಣ್ಣಿಗುಳು ಮತ್ತೇನೆ ಆವಾಗ
ತುಡಗ ದನವೇ ಸದಕಿದಂಗೆ ಸದುಕೋವಮ್ಮಾ ವೋ

ಅಲೆ ಕೋಲು ಇಲ್ಲುದ ಕೋಲಿಯೇನೆ ಕಟ್ಟವನೆ ಎತ್ತಯ್ಯ
ಹಗ್ಗಿಲ್ಲದ ಕಟ್ಟೇನೆ ಕಟ್ಟಿದುನಣ್ಣಾ ವೋ
ಹಿಂದಾಕೆ ನೀನೋಡು ತಿರುಗಿ ಹೋಗೂತಿದ್ದ

ನಿಮ್ಮಕ್ಕ ಬೋರಮ್ಮ ಮತ್ತೇನೆ ಶಿನ್ನಯ್ಯ
ಆ ಸತ್ತೇದಲಿ ಶರಣಾರು ಉತ್ತುಮುರ ಮಕ್ಕಾಳು
ಸತ್ತ್ಯುದ ಮಾತನ್ನ ಹೇಳಲಿಲ್ಲ ಅಂಬುತುಲೆ
ಕೇಳತಾಳೆ ನಿಮ್ಮಕ್ಕ ಮತ್ತೇನೆ ಬೋರಮ್ಮ
ಏನ ಮಾತೇಳಾತೀಯೋ ಶಿನ್ನಯ್ಯ ವೋ

ನಾನೇ ನಮುತ ಹೇಳಲಿ ಗೊಲ್ಲುನು ಗವುಡ
ಅಂದವನೆ ಶಿನ್ನಯ್ಯ ಮತ್ತೇಯೇನೆ ನೋಡು

ಅವರ ಅಸಿವೀಗ್ಹಾಲು ಕೊಡತಾರೆ ಬಸವೂಗೆ ಪತರಿ ಕೊಡುತಾರೆ
ಸಿಸುವಾಗೆ ಬೆಣ್ಣೇನೇ ಕೊಡುವಂತ ಶರಣಾರು
ಅವರ ಗೊಡುವೆ ಬ್ಯಾಡಂತ ಹೇಳಯ್ಯ ವೋ

ಸತ್ತ್ಯುದು ಮಾತು ನೀನು ಹೇಳಿದುರೆ ಶಿನ್ನಯ್ಯ
ಕೋಲಿಲ್ಲದ ಕೊಲಿಯ ಬಿಡತಾವ ನೋಡು
ಅಗ್ಗಿಲ್ಲದ ಕಟ್ಟೆ ಬಿಡುವೋದಿಲ್ಲಂದ ವೋ

ಅಲೆ ಊರಾಗುಂಟಾ ಹೋಗುತಾನೆ
ಮತ್ತೇನೇ ಶಿನ್ನಯ್ಯಾ
ತುಡುಗು ದನುವೇ ಸದುಕಿದಂಗೆ
ಸದಕೋವಮ್ಮ ವೋ

ಅವರರಮನಿಗೆ ಹೋಗ್ಯಾನೆ ಮತ್ತೇನೆ ಶಿನ್ನಯ್ಯ
ಅವರು ಸತ್ತೇದಲಿ ಶರಣಾರು ಉತ್ತುಮುರ ಮಕ್ಕಾಳು
ಅಸಿವಿಗ್ಹಾಲು ಕೊಡುತಾರೆ ಬಸುವುಗೆ ಪತ್ತಿರಿ ಕೊಡುತಾರೆ

ಸಿಸುವಾಗೆ ಬೆಣ್ಣೇನೆ ಕೊಡುವಂತ ಶರಣಾರು
ಅವರ ಗೊಡವೆ ಬ್ಯಾಡಕ್ಕ ಅಂದವನೋ ವೋ

ಅವರ ಗೊಡವೆ ಬ್ಯಾಡಮ್ಮಂತ ಯಾವಾಗ ಹೇಳಿದುರಿ
ಕೋಲಿಲ್ಲುದ ಕೊಲಿಯೋನೆ ಅಗಿಲ್ಲುದ ಕಟ್ಟೇನೆ
ಕೆಳಾಕೆ ಉದುರಿ ಬೀಳುವಮ್ಮಾ ವೋ

ಹಿಂಗ್ಯಾದರೀಗೊಲ್ಲ ಬಗ್ಗೋದಿಲ್ಲಮ್ಮ
ದಂಡೇ ಕಟ್ಟಬೇಕಂದಾ ಶಿನ್ನಯ್ಯ ವೋ

ದಂಡೇ ಕಟ್ಟುಬೇಕಂದ
ದಳವೆ ಕಟ್ಟುಬೇಕಂದ
ಮಂದೀ ಕಟ್ಟಬೇಕಂದ
ಮರ್ಬಲ ಕಟ್ಟಿಬೇಕಂದ
ಆನೆ ಮಕುದರ ದಂಡಂತೆ
ಒಂಟೆ ಮಕುದರ ದಂಡಂತೆ
ಗಂಟು ಮಕುದೋರ ದಂಡಂತೆ
ನೆಮಿಕರುತರ ದಂಡಂತೆ
ಗುಡ್ಡುದು ಬೋರೀದಂಡು
ಹನ್ನೆರಡು ಕೂಮೆ ದಂಡು ಕುಸಿ ಮಾಡಿದುನೋ

ಹನ್ನೆರಡು ಕೂಮೆ ದಂಡು ಕುಸಿಮಾಡಿದ ಕಾಣೆ ಶಿನ್ನಯ್ಯ
ಆವಿನ ಗೂಡಿಗೆ ವದಗಿದುರಣ್ಣಾ ವೋ

ಮುಂಗೊಳಿ ಕೂಗ್ಹೊತ್ತೀಲಿ ಒಳ್ಳೆ ಮೂಡಲ ಕೆಂಪೇರ‍್ಹೊತ್ತೀಗೆ
ಆವಿನ ಗೂಡಿಗೇನ ವದಿಗವನೆ ಶಿನ್ನಯ್ಯ
ಒತ್ತುಂಟೆ ಎದ್ದವನೆ ವಲಿಗಾನೆ ಮಲ್ಲಯ್ಯ
ಮಕಮಾರಿ ತೊಳಕಂಡ ಕಾಲಕೈ ತೊಳಕಂಡು
ಮೊವುದಾರಿ ಕರುವೀನೆ ಬಿಟ್ಟವನೆ ಮಲ್ಲಯ್ಯ
ಎಣಿಕಲ್ಲ ಮಕ್ಕಾಯ ನೋಡಿದುನಣ್ಣಾ ವೋ

ಕಾಲಾಗುಳ ಸುರುವ್ಹಗ್ಗ ಕಾಲಾಗೆ ತುಣಕಂಡು
ತೊಡಿಯಾಗಳ ಬುಡ್ಡಿ ಒಳ್ಳೆ ತೊಡಿಯಾಗಿರಿಸಿಕಂಡ್ಹೆ
ಎಣಿಕಲ್ಲು ಮಕ್ಕಾಯ ನೋಡಿದುನಣ್ಣಾ ವೋ

ಭಾವಾ ಭಾವ ನೋಡೊ ಮತ್ತೇನೆ ಭಾವಯ್ಯ
ನಾವೇ ಉಳಿಯೋ ಹೊತ್ತೆ ಬರಲಿಲ್ಲ
ನಮ್ಮ ಎತ್ತೇ ಉಳಿಯಾ ಹೊತ್ತೇ ರಲಿಲ್ಲ ವೋ

ಗಂಡಾಗ್ಹುಟ್ಟೋ ಬದಲು ಹೆಣ್ಣಾಗ್ಹುಟ್ಟಿದ್ದಾರೆ
ಕರಿಯೆ ಸೀರೆ ಉಡುಸಿ ಕರಿಯ ಬಳಿಯನ್ನಾ ತೊಡಸಿ
ತವರು ತವರು ನಾನು ನೆಡೆಸುತ್ತಿದ್ದೆಂದ ವೋ

ಗಂಡಾಗ್ಹುಟ್ಟೋ ಬದಲು ಹೆಣ್ಣಾಗ್ಹುಟ್ಟಿದ್ದಾರೆ
ಹೆಣ್ಣಾಗ್ಹುಟ್ಟೊ ಬದಲು ಮಣ್ಣಾಗ್ಹುಟ್ಟಿದ್ದಾರೆ
ಮಣ್ಣೇನಲ್ಲೇ ನೋಡು ಮರ‍್ನನ್ನಾಗಿ ಹುಟ್ಟಿದುರೆ
ಮರದ ನೆಳ್ಳಾಗನ್ನಾನೇ ಪುಣ್ಯವುಳ್ಳ ಪುರಸೂರು

ಕುಂತಗಂಡನ್ನಾ ನೋಡು ಬಾಳ್ಳೇವು ಮಾಡತಿದ್ದರು
ಆನೆ ಹೊಟ್ಟ್ಯಾಗೇನೆ ಸೂಲಂಗಿ ಹುಟ್ಟೀದ್ಹಂಗೆ
ಯಾಕೆ ಹುಟ್ಟೀದ್ಯೋ ಮಲ್ಲಯ್ಯ ವೋ