ಅರೆ ಯಾರನ್ನಾಗಲಿ
ಎಲ್ಲೆನ್ನಾ ಹೋಗಲಿ
ನಡಿಯೆಲೆ ಪಾರವತಿಯೇ
ನಮ್ಮ ಸೀಮೆಗೆ ನಾವೆ ಹೋಗೊನಂದಾ ವೋ

ಅಲ್ಲಿಗಿ ಹೋಗಿ ಬಂದ್ರೆ ಬಂದ್ಹಂಗ
ಬರದ ಮ್ಯಾಲೆ ಎಲೆ ಶಿವನೆ
ನಾಲಿಗೆ ಇರ‍್ಕೊಂಡು
ಪ್ರಾಣನಾದ್ರೆ ಬಿಡ್ತಿನಂದ್ಳು ಪಾರುವತಿಯಮ್ಮಾವೋ

ಎಲಿಗ್ಹೋದೊರನ್ನಾಗ್ಲಿ ಹೆಂಗಸು ರಂಡೆರುನ ಮಾತ್ರ
ಹಿಂದ ಕಟ್ಟಿಕೊಂಡು ಹೋಗಬಾರ‍್ದಂದವ್ನೆ
ಇಲ್ಲಿರಿವೆ ಪಾರುವತಿಯೆ ನಾನ್ಹೋಗಿ ಬರ‍್ತಿನಿ
ಅಂದವ್ನೆ ಶಿವನೆ ನಡ್ದ ವನಣ್ಣಾ ವೋ

ಅರೆ ಗುಡ್ಡದ ಮ್ಯಾಲಾಕ
ನಡ್ದವ್ನೆ ಎಲೆ ಶಿವ್ನೆ
ಎತ್ತಯ್ಯನ ಸಬ್ದ ಕೇಳವ್ನೆ ನೋಡು
ಅವ್ನು ಉರಿಗಣ್ಣು ಬಿಟ್ಟಾರೆ
ಉರಿದು ಹೋಗುತಿನಂದು
ಕಿಡಿಗಣ್ಣು ಬಿಟ್ಟಾರೆ
ಸಿಡಿದು ಬೀಳತಿನಂದು
ಹ್ಯಾಂಗೆ ಹೋಗಲೆಂದ ಎಲೆ ಶಿವ್ನೋ

ಒಂದು ಗುಂಡೀನ ಮರಿಯಲ್ಲೆ
ಕುಂತ್ಕೊಂಡ ಎಲೆ ಶಿವ್ನೆ
ಫಳಫಳ್ನೆ ಮೂರು ಕ್ಯಾಕೆ ಹೊಡ್ದಾನಣ್ಣಾ ವೋ

ಅಲ್ಲಿ ಮದ್ದಿಗಿರಿ ಕಂಬಿಳೀನ ತಿದ್ದಿ ಆರೊಯ್ಯದವ್ನೆ
ಸುತ್ತಾ ಮುತ್ತಾಲಾಯ ನೋಡ್ಯಾನೊ ಎತ್ತಯ್ಯ
ಹುಲ್ಲಂಬ ಮನಸೇರು ಮೊದಲಿಲ್ಲಾ ವೋ

ನಾನ ಸೋಕ ಮಾಡುತಿದ್ದೆ
ಚಿಂತೆ ಮಾಡುತಿದ್ದೆ
ನನ್ ನಿದ್ರೆ ಕೆಡಿಸಿದವ್ರು ಯಾರಂದಾ ವೋ

ಸುತ್ತ ಮುತ್ತಲಾಯ ನೋಡವ್ನೆ ಎತ್ತಯ್ಯ
ಯಾರನ್ನ ಆಗಲಿ ಎಲ್ಲನ್ನ ಹೋಗಲಿ
ತಿರುಗಾ ಒಂದೇ ಸೋಕ ಮಾಡೋನಣ್ಣಾ ವೊ

ಬಾರೋ ಬಾರೋ ಎತ್ತಯ್ಯ
ರಾಜ್ಯೇವುಕೆ ಬಂದೈತೊ
ನಿನ್ನೊಬ್ಬನಿಗೆ ಬಂದೈತೊ
ಲೋಕಂಬ ಲೋಕ
ತಲ್ಲಣಿಸಿ ಬಂದೈತೊ
ಅಳಬ್ಯಾಡ ಎತ್ತಯ್ಯ ಅಳಬ್ಯಾಡಣ್ಣಾ ವೋ

ಅಲೆ ನೀನು ಮಾಡಿದ ಪಾಪವೊ
ಅಲ್ಲೇನೊ ಎಲೆ ಶಿವ್ನೆ
ನೀನು ಮಾಡಿದ ಖರ್ಮವೊ
ಅಂದವ್ನೆ ಎತ್ತಯ್ಯ
ಅಳ್ತಾನೆ ಎತ್ತಯ್ಯ ಅಳ್ತಾನಣ್ಣಾ ವೊ

ಹತ್ತು ಸತ್ತರನ್ನ ಹತ್ತನ್ನ ಉಳಿತಾವೆ
ಐದು ಸತ್ತರನ್ನ ಐದನ್ನ ಉಳಿತಾವೆ
ಉದಿಹೋಗೊದಿಲ್ಲ ಮತ್ತೇನೆ ಎತ್ತಯ್ಯ
ಅದ್ರಿಮ್ಯಾಲೆ ಬೆಳೆಸಿರಿ ಮಾಡ್ಯೋನಣ್ಣ
ಅಳಬ್ಯಾಡ ಎತ್ತಯ್ಯ ಅಳಬ್ಯಾಡಣ್ಣ ವೊ

ಇವೊತ್ತು ಹೊತ್ಮುಣ್ಗೊ ಹೊತ್ತೀಗೆ
ಯಾವ ರಾಜ್ಯಕ್ಕ ನೋಡೊ ಮಳೆಯಾಗತೈತಣ್ಣ
ಆ ರಾಜ್ಯಕ್ಕ ನೀನು ಹೋಗಂದಾ ವೋ

ಬಾಯಿ ಮಾತು ಹೇಳಿದುರೆ ನಮ್ಮಿಗೆ ನಂಬಿಗಿಲ್ಲ
ಬಲಗೈಯ ಭಾಷೆ ಕೊಡ್ಬೇಕಂದಾವೋ

ಬಲಗೈಯ್ಯ ಭಾಷೇಯ ಕೊಡ್ತಾನೆ ಎಲೆ ಶಿವ್ನೆ
ಎಡಗೈಯ ನಂಬಿಗೆ ತೊಕ್ಕಂಡ ಎತ್ತಯ್ಯ
ಇತ್ಲಾಗೇನು ನೋಡ್ತೀ ಅತ್ಲಾಗೆ ನೋಡಂದ
ಮಾಯಿಕಾರ ಶಿವ್ನು ಮಾಯವಾಗವ್ನೋ

ಗುಡ್ಡದ ಮ್ಯಾಲೆ ನೋಡೊ ನಿಂತ್ಕೊಂಡು ಎತ್ತಯ್ಯ
ಯಾವ ರಾಜ್ಯಕ್ಕೆ ನೋಡೊ ಮಳೆ ಆಗತ್ಯೆತಂದ
ಯಾವ ಸೀಮಿಗೆ ನೋಡೊ ಮಳೆ ಆಗುತೈತಂದ
ಸುತ್ತ ಮುತ್ತಲಾಯ ನೋಡವುನಣ್ಣಾ ವೋ

ಹಗಲ್ಹುಟೊತ್ತಿಗೆ ಒಳ್ಳೆ ಸೊಪ್ಪು ಮಾರೊ ಹೊತ್ತಿಗೆ
ಅಂಗೈಯೋಟು ಮಾಡ ಮುಂಗೈಯೋಟು ಮಿಂಚು
ಎಣೆಕಲ್ಲು ಮಕ್ಕೆ ಮಳೆ ಆಗೋದೋ
ಎಣಿಕಲ್ಲಂಬೋದು ಒಂದು ಹೆಂಗಸಿನ ದೊರಿತಾನ
ಗುಡ್ಡಾದ ಬೊರಮ್ಮನ ದೊರೆತನ ವೋ

ದನಕರುವೆಲ್ಲ ನೋಡೊ ಊರು ಹೊಕ್ಕಂಬೋದು
ಗುಡ್ಡದ ಮ್ಯಾಲೆ ನೋಡು ನಿಂತ್ಕಂಡ ಎತ್ತಯ್ಯ
ದನಕರು ಎಲ್ಲ ನೋಡೊ ಊರು ಸೇರಿಕ್ಕಂಬೋದು
ಮಕ್ಕತ್ತಾಲಾಗಿ ಬರುತೈತಣ್ಣಾವೊ

ಆದ್ಯೇವು ಮುತ್ತೈದೆ ತನಗಾಳೆ ಎತ್ತಯ್ಯ
ಇಳುದೇ ಬಂದಾನೋ ಮಯಿಗೂದ ಗೌಡ ವೋ

ಇಳುದೇ ಬರ‍್ತಾನಣ್ಣ ಮತ್ತೆ ನಿನ್ನೆತ್ತಯ್ಯ
ಕಾಲುಗಟ್ಟುಸೋನಣ್ಣ ತೋಳೆ ಬೀಸೋನಣ್ಣ
ಎಡವಿದ ಕಲ್ಲೆ ಪುಡಿ ಪುಡಿಯಣ್ಣಾ ವೋ

ಮುಗ್ಗುರ‍್ಸಿ ನಡೆದರೆ ಒಳ್ಳೆ ಮೂರು ಗಾವುದ ಹೋಗವ್ನೆ
ತಗ್ಗೀಸಿ ನಡುದಾರೆ ನಾಕೆ ಗಾವುದ ಹೋಗೋನು
ಸೂರುದ ಒಂದೇ ಭಾಗ ಚಂದುರು ಒಂದೇ ಭಾಗ
ಸ್ವಾಮಿ ಎತ್ತಯ್ಯ ಒಂದೇ ಭಾಗಣ್ಣಾ ವೋ

ಎಣೆಕಲ್ಲ ಕಾವಿಲಿಗೆ ನಡದವ್ನೆ ಎತ್ತಯ್ಯ
ಸೆಂಜೇಲಿ ಮಳಿ ಬಂದಾರೆ ಮುಂಜ್ಯಾಲೆ ಹುಲ್ಲಮ್ಮ

ಯಾ ಹುಲ್ಲು ಕೆಳಿತಿಯೆಂದ ಯಾ ಹುಲ್ಲು ಬಿಡ್ತಿಯಾಂದ
ಹುಲ್ಲಿನ ಮ್ಯಾಲೆ ಹುಲ್ಲೆ ಹೊಯ್ದಾಡೋದು
ಮುಂಗಾರುದ ಮಳೆ ಬಂದು ಮತ್ತೇ ಕಣೊ ಬಟ್ಟಣ್ಣ
ಮುಂದ್ಲಾ ಹೊಕ್ಕರು ಕಾಣೊ ಭರದಂಗೆ ಬೆಳೆದೈತೆ
ಹಳ್ಳಾದ ಹುಲ್ಲೊಂದು ಆಳಡಿ ಬೆಳೆದಾವಣ್ಣ
ಕಾಡ್ದಾಗೆ ಹುಲ್ಲಮ್ಮ ಕರಿ ಎತ್ತೀನುದ್ದಮ್ಮ
ಗುಬ್ಬಿಸಿ ರಾಜುಣದುಲ್ಲು ಕುತ್ತಿಗುದ್ದ ಬೆಳೆದಾವೊ
ಸುಸೂಗದ ಹುಲ್ಲೆ ತೆರಿ ಹೊಯ್ಯೋದೋ

ಹುಲ್ಲು ನೋಡಿ ನಿಧಾನ ಬಿದ್ದಾವ್ನೆ ಎತ್ತಯ್ಯ
ಎಣಿಕಲ್ಲು ಕೆರಿಗೆ ನಡದವ್ನೆ ಏ ನೋಡು
ನೀರಿನ ಮ್ಯಾಲೆ ನೀರು ಹೊಯ್ದಾಡುತಾವಮ್ಮಾ

ನೀರು ನೋಡಿ ನಿದಾನ ಬಿದ್ದವ್ನೆ ಎತ್ತಯ್ಯ
ಸುತ್ತ ಮುತ್ತಲಾಯ ನೋಡಿಕ್ಯಂಡ ಎತ್ತಯ್ಯ
ಪೆಚ್ಚಾನೆ ಮರ‍್ಕ ಕುಂತವ್ನನಣ್ಣಾ ವೋ

ಪಚ್ಚಾನೆ ಮರ‍್ಕೇನೆ ಕುಂತ್ಕೊಂಡು ಎತ್ತಯ್ಯ
ಭಾವಮೈದುನ ಕಟ್ಟಿದ್ದು ಬೆಳವಿನ ಕಾಯೋಟು ಬುತ್ತಿ
ನೆಪ್ಪಿಗೆ ಬರ್ತೈತಣ್ಣ ಎತ್ತಯ್ಯಗೋ

ಎಣಿಕಲ್ಲು ಕೆರಿಗೇನೆ ತಕ್ಕೊಂಡು ಬರ‍್ತಾನಣ್ಣ
ಬುತ್ತಿಗೆ ನೀರನ್ನ ತಟ್ಟವ್ನೆ ಎತ್ತಯ್ಯ
ಮೀನಿಗೊಂದು ಮುರ‍್ಕ ಮಸಳಿಗೊಂದು ಮುರ‍್ಕ
ಬಟ್ಟಣ್ಣಗೊಂದು ಮುರ‍್ಕ ಭಾವಮೈದುನುಗೊಂದು ಮುರ‍್ಕ
ತಾನೊಂದು ಮುರ‍್ಕ ಸಲ್ಲಿಸೋನಮ್ಮಾ ವೋ

ಸಣ್ಣಾದೊಂದೂಟಾನೆ ಮಾಡಿಕೊಂಡು ಎತ್ತಯ್ಯ
ಸಣ್ಣಾದೊಂದಿಳ್ಳೇವು ಧರಿಸಿದುನಣ್ಣಾ ವೋ
ಸಣ್ಣಾದೊಂದು ಈಳ್ಳೇವು ಧರಿಸಿದುನೆ ಎತ್ತಯ್ಯ
ಏಳು ಶಿವುಡೆ ಹುಲ್ಲೇನೆ ಕೊಯ್ದವ್ನೆ ಎತ್ತಯ್ಯ
ಮದ್ದಿಗಿರಿ ಕಂಬಳಿ ಮೂಲಿಗ್ಹಾಕಿದುನಣ್ಣಾ
ಪನ್ನೀರು ಗಿಂಡ್ಯಾಗೆ ನೀರು ತುಂಬಿಕಂಡವ್ನೆ

ಉಡಿದಟ್ಟಾಕಿಟ್ಟಕಂಡು ಮತ್ತೆ ನಿನ್ನೆತ್ತಯ್ಯ
ಎತ್ತೀಗೆ ಗೌಡ ತಿರುಗಿದುನಣ್ಣಾ ವೋ

ಸಂಜೆಲಿ ಮಳಿ ಬಂದಾರೆ ಮುಂಜ್ಯಾಲೆ ಹುಲ್ಲಮ್ಮ
ಗುಡ್ಡಾದ ಬೋರಮ್ಮನ ದೊರಿತಾನ
ಏಳ ಮಂದಿ ಬ್ಯಾಡುರುನ ಕಳಿಸಿದುಳು ಬೋರಮ್ಮ
ಹುಲ್ಲಿನ ಮ್ಯಾಲೆ ನೋಡೊ ನೊಣವನ್ನ ಕುಂತಾರೆ

ಬಿಲ್ಲಿಲಿ ಕೊಲ್ಲಬೇಕಂತ ಹೇಳಿದುಳೊ ಬೋರಮ್ಮ
ಏಳು ಮಂದಿ ಬ್ಯಾಡುರುನ ಕಳುವಿದಳೋ

ಆನೆ ಒಂಟೆ ಕಾವುಲನ ಹಾಳುಮಾಡಿ ಬಿಡ್ತಾರೆ
ಎಣೆಕಲ್ಲು ಕೆರಿಮ್ಯಾಲೆ ನಿಂತಕಂಡು ಬ್ಯಾಡರು
ಮಾತುನಾಡವರಣ್ಣ ಮತ್ತೇ ನೋಡು
ಆ ಮಾತು ಎತ್ತಯ್ಯ ಕೇಳಿದುನೋ ವೋ

ನನ್ನ ಕಂಡರವ್ರು ಒಳ್ಳೆ ಸುಮ್ಮನೆ ಬಿಡ್ತಾರಂದ
ಹ್ಯಾಂಗೆ ಹೋಗೋದಂದ ಮಯಿಗೂದ ಗೌಡಾ ವೋ

ಗಬ್ಬಾದ ಬ್ಯಾಡಾರ ಸಂಗಾತನಾಡಾಕೆ
ನನ್ನಿಗೆ ಹೊತ್ತಿಲ್ಲ ಅಂದವ್ನೆ ಎತ್ತಯ್ಯ
ಮಿಡಿ ನಾಗಾರಾಗಿ ಬರ‍್ತಾನಣ್ಣಾವೋ

ಕಾವುಲು ಬಿಟ್ಟ ನೋಡು
ಬಯ್ಲಿಗಿ ಬಂದೈದ್ದಾನೆ
ಆದ್ದೇವು ಮುತ್ತೈದುತನಗಾಳು
ಮುಚ್ಚಿ ಕಟ್ಟಿದುನೊ ಮಯಿಮದ ಗೌಡಾ ವೋ

ಕಾಲು ಗಟ್ಟುಸೋನಣ್ಣ ತೋಳೆ ಬೀಸೋನಣ್ಣ
ಎಡವಿದ ಕಲ್ಲೆ ಪುಡಿಪುಡಿಯಮ್ಮೊವೋ

ಮುಗ್ಗುರ‍್ಸಿ ನಡದಾರೆ ಒಳ್ಳೆ ಮೂರು ಗಾವುದಲಿ ಹೋಗವ್ನೆ
ತಗ್ಗಿಸಿ ನಡದಾರೆ ನಾಕು ಗಾವುದ ಹೋಗೋನು

ಒಡಿಯಾನೇ ಎಂದ್ಹೋದ ಶಿವನ
ಆವತ್ತೆ ನೆಲ್ಕೆನೆ
ಬಿದ್ದೈತೆ ಬಟ್ಟಣ್ಣ

ದೊಕ್ಕಿ ದೊಕ್ಕಿಗೆ ಶ್ಯಾರೆನೆ
ಉಳವೇನೋ ಬಿದ್ದಾವೊ
ಎತ್ತಿನ ಮ್ಯಾಲೆ ಸೆದಿಲೆ ತೆಲಗೂಡೈತೋ ವೋ

ಅಂತಂಬೋ ಎತ್ತೇನೆ
ಒಡಿಯಾನ ಅರ್ದಾರಿ ಸರ್ದಾರಿ
ಬರುವ ಒಡಿಯಾನ ಗಾಳಿ
ತಗದೈತೆ ಬಟ್ಟಣ್ಣ
ಗಲ್ಲ ಗಲ್ಲ ನೆಲಕ್ಕೂರಿ ಮ್ಯಾಲಕೇಳುವುದೋ

ಅರೆ ಗಲ್ಲ ಗಲ್ಲ ನೆಲಕ್ಕೂರಿ
ಮ್ಯಾಲಕೇಳದ ಬಟ್ಟಣ್ಣ
ಯಾವ ತಗ್ಗಿಗಿ ಬೀಳತೈತೊ
ಯಾವ ಕುಣಿಗೆ ಬೀಳತೈತೊ
ನಮ್ಮ ಭಾವ ಬಂದಾರೆ
ಬೈತಾನೆ ಅಂದವ್ನೆ
ವಲಿಗಾನೆ ಮಲ್ಲಯ್ಯ
ಅಣೆಗೋಲಿನ ಮ್ಯಾಲೆ ತ್ತು ತಡದಾನೋ

ಅರೆ ಒಂದೊಂದೆ ಹೆಜ್ಜೇನೆ
ನೂಕಿಕೊಂಡು ಬಟ್ಟಣ್ಣ
ಸೀಗೆ ಪದಿಯ ತಾಕೆ
ಬರ್ತಾನೆ ಮಲ್ಲಯ್ಯ
ಅವ್ರ ಭಾವಾನಾ ತಲಿಯನ್ನೆ ಕಂಡವ್ನಣ್ಣಾ ವೋ

ಭಾವಾನಾ ತಲಿಯಾನೆ ಕಂಡವ್ನೆ ಮಲ್ಲಯ್ಯಾ
ಎತ್ತೇ ಕೈಬಿಟ್ಟವ್ನೆ ವಲಿಗ್ಯಾನೆ ಮಲ್ಲಯ್ಯ
ಸೀಗೆ ಪದಿಯಾಗೆ ಕುಂತವ್ನಣ್ಣಾ ವೋ

ಎತ್ತಿನ ತಲಿಯ ತಾನ್ ಕಂಡಾನೆ ಎತ್ತಯ್ಯ
ಕಾಲುಗಟ್ಟಿಸಿ ನಡಿಯವ್ನೊ ಮಯಿಗೂದ ಗೌಡಾ ವೋ

ಕಾಡಿನಲ್ಲಿ ಸೊಪ್ಪುಗುಳು ಓಡಿಲಿ ಹುರುಕೊಂಡು ತಿಂಬೊ
ಕಾಡು ಬ್ಯಾಡರ‍್ಹುಡುಗಾನೆ ಕಡುಕೊಂಡು ತಿಂಬಾಕೆ
ನನ್ನೆತ್ತೆ ಹೊಡ್ಕೊಂಡೂನೆ ಹೋಗ್ತಿದ್ದ ನೋಡು
ನನ್ನ ತಲಿಯ ಕಂಡಲ್ಲೆ ಕುಂತಾವ್ನನಂದಾ ವೋ

ಬೆಟ್ಟದಲ್ಲಿ ಸೊಪ್ಪುಗೂಳು ಓಡಿಲಿ ಹುರುಕೊಂಡು ತಿಂಬೊ
ಹಟ್ಟಿ ಬ್ಯಾಡಾರ‍್ಹುಡುಗ ಕಡ್ಕೊಂಡು ತಿಂಬಾಕ
ನನ್ನೆತ್ತೆ ಹೊಡ್ಕೊಂಡೂನೆ ಹೋಗ್ತಿದ್ದಾನೆ ನೋಡು
ನನ್ನ ತಲಿಯ ಕಂಡಲ್ಲೆ ಕುಂತವ್ನನಂದಾ ವೋ

ನನ್ನ ಭಾವ ಮೈದುನ ವಲಿಗ್ಯಾನೆ ಮಲ್ಲಯ್ಯ
ಒಂದ್ ಗಲ್ಲ ಬಡ್ಡಾರೆ ಹಾಲಮ್ಮ ಒಲಿಗಾನೆ
ಒಂದ್ ಗಲ್ಲ ಬಡ್ಡಾರೆ ನೀರಮ್ಮ ಒಲಿಗಾನೆ
ಹಿಂದ್ಲಾವಿನಾಗಿದ್ದುನೊ ಮುಂದ್ಲಾವಿನಾಗಿದ್ದಾನೋ

ಬ್ಯಾಡಾರ‍್ಹುಡುಗ ಕಡ್ಡೊಂಡು ತಿಂಬಾಕ
ನನ್ನೆತ್ತ ಹೊಡ್ಕಂಡು ಹೋಗುತ್ತಿದ್ದಾನೆ ನೋಡು
ನನ್ನ ತಲಿಯೆ ಕಂಡವ್ನೆ ಕುಂತಾನಣ್ಣಾ ವೋ

ಒಡಿಯಾನುತಾಕ ನೋಡು ಎತ್ತೇ ಹೋಗೋದಣ್ಣ
ಮದ್ದುಗಿರಿಯ ಕಂಬಳ್ಯಾಗ ಇದ್ದಂತಾನೆ ಹುಲ್ಲು
ಹಿರ್ಕಂಡು ಮುರ್ಕಂಡು ತಿಂದ್ಕೊಂಡು ಬಟ್ಟಣ್ಣ
ತಾಯಿಕೂಟೆ ಕರುವುನೆ ಚಿನ್ನಾಟಟಾಡಿದ್ಹಂಗ
ಒಡಿಯಾನ ಮುಂದೆತ್ತು ಬರತೈತಣ್ಣಾ ವೋ

ಸೀಗೆ ಪದಿಯತಾಕೆ ಬಂದವ್ನೆ ಎತ್ತಯ್ಯ
ಯಾರಮ್ಮ ಎಲು ಬಾಲು ಯಾರಮ್ಮ ಎಲು ಕಂದ
ಹಾಲು ಬಾನ ಇಕ್ಕಿ ಕೊಲ್ಲೋರು ಕೊಲ್ಲುತ್ತಾರೆ
ಬಾಲಮ್ಮನ ಭಾಷೆ ತಕ್ಕೊಂಡು ಕೊಲ್ಲೋರು ಕೊಲ್ಲುತ್ತಾರೆ
ಮೂರು ಪೆಟ್ಟು ನಾನುವೆ ಮಾತು ನಡ್ಸೈದ್ದಿನಿ
ನನ್ಮ್ಯಾಲೆ ದೋಷವಿಲ್ಲ ಅಂದವ್ನೆ ಎತ್ತಯ್ಯ
ಸುಕ್ಕುದು ಸುರುನರಿ ಬಿಲ್ಲೊ ತಕ್ಕೊಂಡ ಎತ್ತಯ್ಯ
ಹೊಡ್ದೆ ಬಿಡ್ತಿನಂಥ ಮಯಿಗೂದ ಗೌಡಾ ವೋ

ಹೊಡಿಯೋನ್ಹೋಡಿತೀ ಭಾವ ಅರಪೆಟ್ಟು ಮಾಡಬ್ಯಾಡ
ಒಂದೇ ಪೆಟ್ಟಿಗೆ ನೀನು ಹೊಡಿಯಂದಾ ವೋ

ಆ ಮಾತೂ ಕೆಳವ್ನೆ
ಮತ್ತೇನೆ ಎತ್ತಯ್ಯ
ಸುಕ್ಕುನ ಸುರುನಾರಿ ಬಿಲ್ಲು

ಮಣಕಾಲಿಗಿ ಮುರುಕ್ಯಂಡ
ಅಂಗೈಲಿ ಅರಗಿಣಿ ಬಾರೋ
ಪೊಪ್ಪುನಿಂಗ ನೀನ್ ಬಾರೋ

ಮುಂಗೈಮ್ಯಾಲೆ ಆಡೋ
ಗಿಣಿರಾಮ ವಲಿಗಾನಯ್ಯ
ಭಾವ ಮೈದುನ ನೋಡುಬಾರ
ಬಾಯಿಗಿ ಬೆಲ್ಲ ಬಾರೊ
ಬಾರಯ್ಯ ವಲಿಗನೇ ಮಲ್ಲಯ್ಯವೋ

ಹಾಯೊಂಬೋ ಅಡಿವಂತೆ ಶಿವ್ನ
ಜೀ ಎಂಬ ಮಲಿಯಂತೆ
ಕೊಳ್ಳೊಕೊಳ್ಳೊ ಕಟ್ಟಿಕಂಡು
ಬೋರೆ ಸರಿಯೋರಣ್ಣ
ಭಾಮೈದುನ್ನ ನೋಡು
ಭಾವ ಹೊಡದ ಅಂಬುತಲೆ
ತಲಿಯಾಗೆ ನಾಲ್ಗಿಯಿರುವ
ಹೆಸರೇ ಆಗತಿತ್ತು ಒಲಿಗ್ಯಾನಂದಾನೋ
ಅತ್ತುರು ಬರುವುದಿಲ್ಲ
ಕರ‍್ದುರು ಬರುವುದಿಲ್ಲ
ನಮ್ಮುಗ್ಗುರುಕೆ ನಾವೇ ತಾಳಾನಮ್ಮಾ ವೋ

ಬಾರಯ್ಯ ಒಲಿಗ್ಯಾನೆ ಮಲ್ಲಯ್ಯ
ದೊಡ್ಡ ಬೆಟ್ಟ ಸಾಲಿಗೆ ಮತ್ತೆನಮ್ಮೆತ್ತಾವೊ
ಸಿಳ್ಳೆನ ಹೊಡಿಯೊಳೆ ಸಿಟಿಕೇನೆ ಹಾಕಮ್ಮ
ದೊಡ್ಡ ಬೆಟ್ಟದ ಸಾಲಿಗೆ ಎತ್ತ ಕರಿಯೆಂದಾ ವೋ

ದೊಡ್ಡಬೆಟ್ಟದ ಸಾಲಿಗೆ ಎತ್ತೆ ಕರ‍್ದಾನಣ್ಣಾ
ದೊಡ್ಡ ಬೆಟ್ಟ ಏರವ್ನೆ ಮತ್ತೇನೇ ಎತ್ತಯ್ಯ
ಏಳು ಸಿವುಡೆ ಹುಲ್ಲೆನೇ ಪುಚ್ಚಾನೆ ಹಿಡ್ಕೊಂಡು
ಏಳ ದಿಕ್ಕಿಗೆ ಗೌಡ ಚಿಮ್ಮಿದ್ನಣ್ಣ ವೋ

ಗ್ವಾದಿಲ್ಯಾಗ ಹುಲ್ಲೆ ಒಳ್ಳೆ ಮೆಯಿದ್ಹಂಗೆ ಮೆಯೋದು
ಹುಲ್ಲೇ ಹಾಸಿಕೊಂಡು ಹುಲ್ಲೇ ಹೊದ್ದೊಕೊಂಡು
ಹುಲ್ಲಿನ ಮ್ಯಾಲೆತ್ತಾವೊ ಮನಗಿದುವಣ್ಣಾವೋ
ಹೊಸ ಹುಲ್ಲು ಒಳ್ಳೆ ಮೈದು ಹೊಸನೀರು ಕುಡ್ದಾವೋ
ಎಣೆಕಲ್ಲು ಮಕ್ಕ ರಂಗುಳಿಸ್ಯಾ ವೋ

ಬಾರಯ್ಯ ಒಲಿಗಾನ ಮತ್ತೇನೆ ಮಲ್ಲಯ್ಯ
ಹೊಸ ಹುಲ್ಲು ಮೈದಾವೊ ಮತ್ತೇ ನಮ್ಮ ತ್ತಾವುಗಳು
ನೀರ‍್ಹೆಂಗ ಮಾಡೊನೋ ಮಲ್ಲಯ್ಯ ವೋ

ಹಳ್ಳಿಪಳ್ಳಿ ವಡ್ಡುರುನಾ ಬಿಟ್ಟಿ ಸಾರುಂಗ್ಹೊಡಿಸಿದುರೆ
ಬೋರುನ ತಿಪ್ಪೆ ತೊರಿಯೆ ತಿರುವುಕೊಂಡು ಬಂದಾರೆ
ನಮ್ಮೆತ್ತಾವಿಗೆ ಗಾಡಿ ಮುಗ್ದಿತಮ್ಮಾ ವೋ

ಹಂಗೆಲ್ಲ ಒಲಿಗ್ಯಾನಯ್ಯ ಹಿಂಗೆಲ್ಲಾ ಒಲಿಗಾನಯ್ಯ
ನೀನ್ ಆವ್ ಕಾಯೋ ನಾಗವಳ್ಳಿ ಬೆತ್ತವೆ ತಕ್ಕಂಡು
ದೊಡ್ಡಗ್ವಾಡಿ ಹಳ್ಳದ ಒಬ್ಬೇಲಿರಿಯಾನಯ್ಯ
ಗೆರಿಯಾಗೀಸಿಕೊಂಡು ಹಿಂದಕ ನೋಡದ್ಹಂಗ
ಮುಂದಾಕ ಕೂಗ್ಹೇಳೂತ ಹೋಗಮ್ಮಾವೋ

ಗೆರಿಯಾಗಿಸಿಕಂಡು ಹೋಗೋನಂತ ಮಲ್ಲಯ್ಯ
ಪನ್ನೀರಿ ಗಿಂಡ್ಯಾಗ ಇದ್ದಾಂತ ನೀರು
ಮೊದ್ಲೆ ಗಾಡಿಗಿ ನೀರು ಒಯ್ಯೋನಮ್ಮಾ ವೋ

ನೀರು ಕುಡುದೆ ನಿದಾನ ಬಿದ್ದಾವೋ ಎತ್ತಾವು
ನೀರಿನ ಮ್ಯಾಲ ಎತ್ತಾವೆ ಮನಗಿದುವಣ್ಣಾ ವೋ

ಬಾರಯ್ಯ ಒಲಿಗ್ಯಾನೆ ಮತ್ತೇನೆ ಮಲ್ಲಯ್ಯ
ಹಳ್ಳಿಪಳ್ಳಿ ವಡ್ಡುರುನ ಬಿಟ್ಟ ಸಾರಂಗಿಡುಸಿದುರೆ
ಬೊರುನ ತಿಪ್ಪೆ ತೊರಿಯೆ ತಿರುವಿಕೊಂಡೆ ಬಂದಾರೆ
ನಮ್ಮೆತ್ತಾವಿಗೆ ಗಾಡಿ ಮುಗಿದಿತಂದ್ಹೇಳಿದೆ

ನೀವು ಸತ್ಯದಲ್ಲಿ ಶರಣಾರು
ಉತ್ತಮುರ ಮಕ್ಕಾಳು
ನಿಮ್ಮ ಸತ್ತೆವು ಭಾವಾ ನಮ್ಮಿಗೆ ಬಂದೀತೆ

ಅಗುಸುರು ಮ್ಯಾಲೆ ಹೋಗೊ ತಬ್ಬಿ ಹೂವ್ವಿನ ಬೂದ
ಆರೋರ ಮ್ಯಾಲ್ಹೋಗೊ ಆಲು ಮುಸುಕದ್ದಾರಿ ಪುಲ್ಲು
ತುರುಕುರು ಮ್ಯಾಲೆ ಹೋಗೊ ತುಂಬುರು ಬಡ್ಡಿ ಕೇಳೊ

ಇಳ್ಳಿಕಿ ಪಾರಿ ತಿರುಗೊ ಗರ‍್ಡಿನೆ ಹನುಮಂತ
ಹಿಂದ್ಲಾವಿನಾಗೆ ನೆಡಿಯೋ ಕಂದ ಕೊಂಬಿನದೊಂದಂತೆ
ಸೊಂಡಲೂರು ಕೆರಿಯಾಗೆ ದುಂಡಾಪೊಮೇದೋಳೆ

ಹೊಸ ಹುಲ್ಲು ಮೇದಾವೆ ಹೊಸ ನೀರು ಕುಡ್ದಾವೋ
ಎತ್ತ ನಿಲ್ಲದಿಲ್ಲ ಕಣೊ ಮಲ್ಲಯ್ಯ
ಕುರಿಯಾಳಿರಿಯಟ್ಟಿಗೆ ತಾವರಿಗಿರಿ ಬಸವಂಗೆ
ಸೀಮಿಗೆ ನಿನ್ಹೋಗೊ ಮತ್ತೇನೆ ಮಲ್ಲಯ್ಯ

ಅಡ್ಡೆ ಕಾಯಾಗ ನೀರು ಕಾರೆ ಕಾಯಾಗ ಮಜ್ಜೀಗೆ
ತಕ್ಕೊಂಡೆ ವಲಿಗಾನೆ ಮತ್ತೇನೆ ಮಲ್ಲಯ್ಯ
ತಕ್ಕೊಂಡೆ ಬರ‍್ಬೇಕಂದಾ
ಉಗುಳೊಯ್ದು ಉಗುಳು ಆರೋಟ್ಹೋತ್ತಿಗೆ
ಆಗತ್ತು ತಪ್ಪಿದುರೆ ಮತ್ತೇನೆ ಮಲ್ಲಯ್ಯ
ಕೆಟ್ಟಾ ಜ್ಯಾತೆನಂದು ಕರ‍್ದನಂದಾ ವೋ

ಕುರಿಯಾಳ್ಹಿರಿಯ್ಹಟ್ಟಿ ಒಳ್ಳೆ ತಾವುರಗಿರಿ ಬಸವಂಗೆ
ನಾನೇ ಕಾಣೆ ಕಣೊ ಭಾವಯ್ಯ ವೋ

ಹಾಂಗೆಂಬ ಶಬ್ದನೇ ಕೇಳಿದುರೆ ಎತ್ತಯ್ಯ
ಕುರಿಯಾಳ್ಹಿಯ್ಹಟ್ಟಿ ಒಳ್ಳೆ ತಾವುರಗಿರಿ ಬಸವಂಗೆ
ನಾನೇ ಕಾಣೆ ಕಣೋ ಭಾವಯ್ಯ ವೋ