ಹೆಸ್ರೋ ಎತ್ತದುಕ್ಕಿನ್ನ ಒಳ್ಳೆ ದಶುವಂತನ ನೆನೆದೆವೋ
ಹೆಸ್ರಿಗೆ ಸನ್ನಾರೆ ಮದ್ನಾರೋ | ಬಂಜಿಗೇರಿ
ದೆಸಿವಂತ ಈರಣ್ಣನ ನೆನೆದೆವೋ

ಸೊಲ್ಲೆ ಎತ್ತದುಕ್ಕಿನ್ನ ಒಳ್ಳೆ ಬಲ್ಲಿದೋನ ನೆನದೆವೊ
ಸೊಲ್ಲಿಗೆ ಸೊಲ್ಲೋರೆ ಮದ್ನಾರೋ | ಬಂಜಿಗೇರಿ

ಎದ್ದು ನೆನೆದೆವೊ ಒಳ್ಳೆ ಮುದ್ದು ಮೂಡುಲಗಿರಿಯಾನ
ಮಗ್ಗೆ ಅರಳ್ಹೊತ್ತಿಲಿ ನೆನೆದೇವೋ

ಸಣ್ಣಕ್ಕಿ ಸಾವಿರ ಒಳ್ಳೆ ಎಣ್ಣೆ ಮೂಗಂಡುದ
ಹಣ್ಣೀನ ಹೆಡಿಗೆ ಹದಿನಾರೊ | ಈರಣ್ಣ
ಸಂಪೂತ್ತಿಲಿ ಇಳುದಾ ಜಲಪಾಕೋ

ಬಾಳೆ ಹಣ್ಣೀನ್ಹಂಗ ಒಳ್ಳೆ ತುಂಬಿರುವ ಗಂಗಮ್ಮ
ಇಂಬೇನೆ ಕೊಡು ನಮ್ಮ ಗುರುವಿಗೋ | ಈರಣ್ಣಾಗೆ
ಬಂಗಾರುದ ಗಂಟೆ ತೊಳಿಯಾಕೋ

ಅರಿಯಾ ಮ್ಯಾಲಂಗೂಡಿ ಗಿರಿಯಾ ಮ್ಯಾಲ ಪರವುತವೊ
ಬಲಭುಜದ ಮ್ಯಾಲೊ ಶಿವಶಂಕೊ | ಗೋವಿಂದ
ಹರನಂದು ಗಿರಿಯ ಇಳಿದವ್ನೋ
ಸಾರಾನೂರ ಗುಡ್ಡದೊಳೆ ಸಾಗಿಗಣ್ಣೀನ ಸತ್ತಿ
ಮಾತುನಾಡ ತಾಯಿ ಮನಬಂದ್ಹಂಗೋ

ದೊಡ್ಡೇರಿ ಸೀಮಿಗೆ ದೊಡ್ಡೋಳೆ ಕಾಣೆ ಬಿದುರಮ್ಮ
ಒಡ್ಡಿದಲ್ಲೆ ತಾಯಿ ಮರುಬಿಲ್ಲೋ ಥಳಿಕೀನ
ಒಬ್ಬೇಲಾಡಿದಳಮ್ಮ ಜಗಬ್ಯಾಟ್ಯೋ

ಕಲ್ಲಿನಾಗ ಹುಟ್ಟ್ಯವಳೆ ಕಲ್ಲಿನಾಗ ಬೆಳೆವಳೆ
ಸೊಲ್ಲೆ ಸೊಲ್ಲಿಗೆ ಸೃತಿ ಕಲಸಮ್ಮೊ

ಪಟ್ಟೀಯದಟ್ಟ್ಯಾರು ದನಗಳು ಕಟ್ಟಿದ ಮರುಬಿಲ್ಲನೇ
ಹುಟ್ಟ ಮಾರುಗದೂರಿಗೆ ಮಯಿಗುದ ಗೌಡವೋ
ಕುರಿಯ್ಹಟ್ಟಿ ಕರ‍್ತಾನೊ ಒಳ್ಳೆ ಹಿರಿಯ್ಹಟ್ಟಿನೇ ಗೌಡವೋ

ಜಂಗಳಿ ಕುದುರ‍್ಯೋನಣ್ಣ ಜಂಪಲು ಮಂಡ್ಯೋನಣ್ಣ
ಗಂಡಿನಿ ಕ್ವಾಟೊನಂತೆ ಗಡಿನಾಮುದ ಚಿತ್ತಯ್ಯ
ಜಡಿಯಾ ಜಂಗಮನ ಬಲಗರ್ದೆವೋ

ತರಿಯದು ಕಳ್ಳೇನು ತರುವ ಜನ್ನಿಗವ್ನೇ
ಅಡ್ಡನ್ನು ಕಳ್ಳೇನು ದೊಡ್ಡವ್ನು ದಯ ಮಾರ‍್ಯೋವ್ನು
ಮಾರಿಕುಲದವ್ನು ಮಯಿಗುದ ಗೌಡಂದಾವೋ

ಲೆಕ್ಕಕೊಂದು ಕರ‍್ಸಿರಿ ಎತ್ತೀನ ಬೋಗಿನ
ಚಿಕ್ಕ ಹುಲಿಕುಂಟೆ ಸಬುಗೀನ ದಾಯಾಕೆ
ಆವೆ ಎತ್ತಯ್ಯ ಬರ‍್ಬೇಕೋ

ಕಲ್ಲೊಂದೇ ಕರಗ ಹೊತ್ತು ಶಿವನು ಬೆಲ್ಲ ಮೇವೊವತ್ತೂ
ಹರ‍್ದೋಗೊ ಗಂಗಿ ಗೌರಿ ನಿಂತು ನಿದ್ರೆ ಮಾಡೊ ಹೊತ್ತು
ಬೆಂಕಿಗೆ ಸೆದಿಲೆನೆ ಬಡಿಯೊ ಹೊತ್ತು ಮಲ್ಲಣ್ಣ
ಅಷ್ಟೆಂಬೊ ಹೊತ್ತಿನಾಗ
ಕಾಲುತುಣದೆ ಕಾರುಣುವೆ ಏನಂದಾ ವೋ

ಕೆಪ್ಪೆ ಕಲುಕುದ ನೀರು ಕುಡಿಸ್ಯಾನೆ ಬಟ್ಟಣ್ಣ
ಕುಲಕೊ ಛಂದಾದ್ಹುಲ್ಲು ಮೇಸೆನೋ ಬಟ್ಟಣ್ಣ
ಕಾಲ್ತುಣದೆ ಕಾರುಣವೆ ಏನಂದಾ ವೋ

ಅಂಜಿ ಬೆನ್ನವ ನಾನು ಮಾಡೆನೋ ಎತ್ತಯ್ಯವೋ
ಅಂಜುತಲೆ ಬೆನ್ನು ಮಾಡಲಿಲ್ಲ ವೋ

ಅಂಜೋದು ಯಾತಾಕೆ ಅಳ್ಕೋದು ಯಾತಾಕೆ
ಉಂಡೂನೆ ಊಟುಗುಳು ಕಂಡೂನೆ ಕನಸುಗಳು
ಮನಸೀಲಿಡಬಾರದು ಮತ್ತೆ ಕಾಣೋ ಬಟ್ಟಣ್ಣ
ಬಂದುದ್ದೆ ಬಂದ್ಹಂಗ ಬೆನ್ನ ಮಾಡಮ್ಮೋ

ವತ್ತಾರಿನ ಬಿರಿಗಾಳಿ ಬಯಿಸಾರಿನ ಮುರಿಮಾಡ
ಬಯಿಸೆರಿನ ಬಿರಿಗಾಳಿ ಒತ್ತಾರಿನ ಮುರಿಮಾಡ
ಒಣಸಿಡುಲಾರೆ ಕಣಸೊ ನಾನು ಕಂಡೆ ಎತ್ತಯ್ಯ
ಹೊಟ್ಟಿಗುಡುಗು ಕಣಸೆ ನಾನು ಕಂಡೆ ನೋಡು
ಎತ್ತಾವಿನ ಶಾಬ್ರುದ ದಿನಮಾನುದ ಕನಸುಗಳೆ
ನಾನೆ ಕಂಡೆ ಕಾಣೊ ಮಯಿಗುದ ಗೌಡ ವೋ

ಮುಂಗಾರಿನ ಮಳೆ ಬಂದು ಮತ್ತೇನೆ ಬಟ್ಟಣ್ಣ
ಮುಂದಲ ಹೊಕ್ಕರು ಕಾಣದಂಗೆ ಬೆಳದೈತೆ
ಹಳ್ಳಾದ ಹುಲ್ಲೊಂದು ಹಳ್ಳಡಿ ಬೆಳದಾವಮ್ಮ
ಕಾಡದಾಗೆ ಹುಲ್ಲಂತೆ ಕರಿ ಎತ್ತೀನುದ್ದಮ್ಮ
ಗುಬ್ಬಿಸಿ ರಾಜಣದ್ಹುಲ್ಲು ಕುತಿಗುದ್ದ ಬೆಳದಾವೊ
ಸೂಸುಗುದ ಹುಲ್ಲೇನೆ ತೆರಿ ಹೊಯ್ತಾತೇ ನೋಡೊ
ಈ ಹುಲ್ಲಿನ ಮ್ಯಾಲೆ ಒಳ್ಳೆ ನೀರಿನ ಮ್ಯಾಲೆನೆ
ಬಂದಂದಿಗೆ ನೋಡಿಕೊಂಬೊನಂದಾ ವೋ

ಏಳೇ ದಿನಂಬೊದೊಂದೂ ಏಳ ತಿಂಗಳೆತ್ತಯ್ಯ
ಎಂಟೇ ದಿನಂಬೊದೂ ಎಂಟ ತಿಂಗಳಾಗೋದು
ಮುಂದ್ಲಾಗೆ ಹೋಗಿ ಒಳ್ಳೆ ಹುಲ್ಲೇನಾ ಮೇಯ್ದಾರೆ
ಅದ್ರಿಂದ ನಾವ್ ನೋಡೊ ಪುಳ್ಳೆನಾಯೋದಣ್ಣ
ಅದ್ರಿಂದ ನಾವ್ ನೋಡೊ ಬುಡಸೆ ತಿಂಬೋದಣ್ಣ
ಮುಂದ್ಲಾಗೆ ಹೋಗಿ ಒಳ್ಳೆ ನೀರನ್ನ ಕುಡ್ದಾರೆ
ಅದ್ರಿಂದ ನಾವ್ ನೋಡೊ ಗೋತಾ ಕುಡಿಯೋದಮ್ಮ
ಅದ್ರಿಂದ್ ರಾವ್ ನೋಡು ಗ್ವಾತ ಹಾಕೋದು

ಅರೆ ಕಂಡ ಕಾಣೊ ಎತ್ತಯ್ಯ
ಮಾಡ್ಯವ್ನೆ ನೋಡೊ
ಬಾರಯ್ಯ ಒಲಿಗ್ಯಾನೆ
ಮತ್ತೇನೆ ಮಲ್ಲಯ್ಯ
ನಾವೆ ಉಳಿಯೊ ಹೊತ್ತೆ ಬರ್ಲಿಲ್ಲಾವೋ
ನಾವೆ ಉಳಿಯೋ ಹೊತ್ತ
ಬರ್ಲಿಲ್ಲ ಮಲ್ಲಯ್ಯ
ನಮ್ಮೆತ್ತು ಉಳಿಯ ಹೊತ್ತೆ ಬರ್ಲಿಲ್ಲಾವೋ

ಎತ್ತೆ ಸತ್ತರು ನಾವೇನೆ
ಎತ್ತು ತಿರುಗಲಾಳೇವು
ಆವು ಸತ್ತರು ನಾವು
ಆವು ತಿರುಗುಲಾಳೇವು
ಹೋರಿ ಸತ್ತರು ನಾವು
ಹೋರಿ ತಿರುಗಲಾಳೇವು
ಹೆಂಡರು ಸತ್ತರು ನಾವು
ಹೆಂಡರುನಾ ಪಡದೆವೋ
ಮಕ್ಕಳು ಸತ್ತರು ನಾವು
ಮಕ್ಕಳೂನ ಪಡದೆವೋ
ಕಾರೆ ಕಣ್ಣೀನ ಕದಪುರುಷ
ಕಾಲಿಲಿ ಗ್ಯಾನುದ್ಧರಿಯೆ
ಬಾಲುದಿಲೆ ಬಲವಂತ
ಬೆನ್ನಿಲಿ ಬಲು ಬೇತಾಳ
ಮುನ್ನೂರು ತಡಿಸಿಗಿನ್ನ
ಮುಂದ್ಹುಟ್ಟಿದವ್ನು ಭಟ್ಟಣ್ಣನ್ನಾ
ಅವ್ನು ಸತ್ರೇ ನಾವೆಲ್ಲಿ ತಿರುಗಾಳೇವೋ

ಬಾರಯ್ಯ ಒಳ್ಳೆ ಒಲಿಗ್ಯಾನೆ ಮತ್ತೆನೆ ಮಲ್ಲಯ್ಯಾ
ಸ್ವಾಮಾರದ್ಹೊತ್ತುಗಳು ಮೀರ‍್ತಾವೆ ಮಲ್ಲಯ್ಯ
ಗೂಡೆ ಕಟ್ಟೇಕಂದ ಮಯಿಗುದ ಗೌಡಾವೋ
ಕಾರೆಕಳ್ಳೆ ಕಡ್ಡು ಕರಿವಿನ ಗೂಡ ಹೊತ್ತಿದರು
ಹುಲಿ ಕಳ್ಳೆ ಕಡ್ಡು ಉದಿಮೋರೊತ್ತಿದ್ರಣ್ಣ
ಅಂದ ಚಂದದ ಕಳ್ಳೆ ಗಂಧಮಾವುದ ಬೆರ್ಗಣ್ಣ
ಹಚ್ಚನ್ನ ಕಳ್ಳಂತೆ ಪಚ್ಚೆದ್ದು ಬೆರ್ಗಣ್ಣ
ಹೂವ್ವಿನುಕ್ಕುಡುದ್ಯಾವರು ಬೆರಗಣ್ಣ

ಉಳವೆ ಕೋಲು ಉಗ್ಗುದ ಗಡಿಗೆ ನೋಡು
ಉಕ್ಕುಡುದ ಕೋಪಿಗೆ ಇಟ್ಟವ್ನೆ ಎತ್ತಯ್ಯ
ಅಡಿಯಾ ಸಿಗಸರ್ದವ್ನೆ ಬೆಂಕಿ ಮಾಡಿದುನಣ್ಣ
ಮೂರೆನೆ ಕಣ್ಣಿನುದು ಕರಿಯಾನೆ ಸಿಪ್ಪಿನುದು
ದ್ರಿಷ್ಠಿಯನ್ನಾಕಾಯಿ ತಕ್ಕಂಡು ನಿನ್ನೆತ್ತಯ್ಯ
ಎತ್ತಿಗಾಗೊ ಹೋಮ ಸುಡ್ತಾನಣ್ಣ ವೋ

ಎತ್ತಾವೆ ಗೂಡೆನೆ ಸೇರಿಕ್ಕಂಬೋದು ನೋಡು
ಮೋವುದಾರಿನ ಕರುವನ್ನು ಬಿಟ್ಟವ್ನೆ ಮಲ್ಲಯ್ಯ
ಒಳಸ್ಯಾರಿ ಹೊರಸ್ಯಾರಿ ಆಲೆನೆ ಕರ‍್ಕಂಡು
ಉಕ್ಕಿರಿಸುಗ್ಗಿಮಾಡಿ ಕಡಿಗಿಟ್ಟ ಮಲ್ಲಯ್ಯ
ಜಾಲಿ ಬಂಡಿ ಎಲಿಯ ಪತ್ತುರುವಳ್ಳೆ ಕಟ್ಟಿ
ಸಣ್ಣಾದೊಂದೂಟ ಮಾಡಿದುರುಣ್ಣಾ ವೋ

ಸೀಗಿರಿ ಸಿಕ್ಕಿಣಿಕ್ಯಂತೆ ಬಾಗೂರು ಬಿಳಿ ಎಲಿಯಣ್ಣ
ತಾವೂರಗಿರಿಯೆಂಬೋದು ಸೊಸಿದು ಕೆನಿ ಸುಣ್ಣವಾ
ಗಟ್ಟಿದನ್ನ ಸೀಮೆ ರಟ್ಟಿ ಎಸಲಿನ ಸೊಪ್ಪು
ಸಣ್ಣದೊಂದಿಳ್ಳೇವು ಮಡಸಿದುಣ್ಣ ವೋ
ಅವೀನ ಹಾಸೀಗಣ್ಣ ಶೇಳಿ ಶೇಳಿನ ಮಂಚಾ
ನಾಗಬೂಷುಣವೆ ತೆಲಿಗಿಂಬು
ಕಲ್ಲಿನಾಸೀಗಂತೆ ಮುಳ್ಳು ಮುಳ್ಳಿನ ಮಂಚ
ಶೆಲ್ಲ್ಯಾರೆ ದಟ್ಟಿ ತೆಲಿಗಿಂಬು
ಹತ್ತು ಸಾವಿರದಂಬು ತಕ್ಕಿಗೆ ಸಾಸಿಕಂಡು
ಹತ್ತು ಸಾವಿರದಂಬು ತೋಳಿಗೆ ಸಾಸಿಕಂಡು

ಬೇವಿನ ಸುರುನರಿ ಬಿಲ್ಲು ಬೆನ್ನಿಗೆ ಕಟ್ಟಿಕೊಂಡು
ಕೈಯಲಿ ಕತ್ತಿರಿ ಬಾಣ ನೆತ್ತಿಲಿ ನೆತ್ತುರು ಬಾಣ
ಸುರ್ನಾರೆ ಮರ್ಬಿಲ್ಲು ಒಳ್ಳೆ ಸೂರಿದುನ ಒದಿಯಂಬು
ಸೂಡಿಕಂಡ ಗನಗುರುವೆ ಮತ್ತೆ ನಿನ್ನೆತ್ತಯ್ಯ
ಶಿವಕೊಟ್ಟ ಚಿಪ್ಪುಗೊಡ್ಲಿ ಪಕ್ಕೆಯಲ್ಲಿಟ್ಟುಕೊಂಡವ್ನೆ
ನಾರಾಯಣ ಕೊಟ್ಟಂತ ನಾರಗಲ್ಲು ನೋಡು
ತಲಿದಿಂಬು ಮಾಡಿದನಣ್ಣ ಮತ್ತೇನ ಎತ್ತಯ್ಯ
ಒಕ್ಲೂವ್ವ ಹಾಸಿಕ್ಯಂಡ ಒಕ್ಲೂವ್ವ ಹೊದ್ದುಕೊಂಡು
ಮನಿಗಿದ್ನೊ ಗೌಡ ಮನಿಗುದ್ನಣ್ಣಾ ವೋ

ಮನ್ಗುವಾಗ ಏನಂದ ಒಳ್ಳೆ ಮತ್ತೇನೆ ಎತ್ತಯ್ಯ
ಹುಲ್ಲನೀರೊ ನೋಡಾಕ ಹೋಗ್ಬೇಕ ಒಲಿಗ್ಯಾನಯ್ಯ
ಮುಂಗಳಿ ಕೂಗೋದಣ್ಣ ಒಳ್ಳೆ ಮೂಡಲು ಕೆಂಪಗಾಗ್ಹೊತ್ತಿಗೆ
ಬೆಳವಿನ ಕಾಯೋಟು ಬುತ್ತಿ ಕಟ್ಟಬೇಕಮ್ಮ ವೋ

ಮುಂಗೋಳು ಕುಗ್ಹೊದಣ್ಣ ಒಳ್ಳೇ ಮೂಡಲು ಕೆಂಪಗಾಗ್ಹೊತ್ತಿಗೆ
ಎದ್ದವ್ನೆ ಒತ್ತುಂಟೆ ಮತ್ತೇನೆ ಮಲ್ಲಯ್ಯ
ಮಕಮಾರಿ ತೊಳ್ಕಂಡು ಕಾಲ್‌ಕೈ ತೊಳ್ಕಂಡು
ಮೋವುದಾರಿನ ಕರುವನ್ನೆ ಬಿಟ್ಟವ್ನೆ ಮಲ್ಲಯ್ಯ
ಒಳಸ್ಯಾರೆ ಹೊರಸ್ಯಾರೆ ಹಾಲೇನೆ ಕರಕಂಡು
ಉಕ್ಕುರಿಸುಗ್ಗಿ ಮಾಡಿ ಕಡಿಗಿಟ್ಟ ಮಲ್ಲಯ್ಯ
ಜಾಲಿ ಜಂಬಿ ಎಲಿ ಪುತ್ತುರುವಳ್ಳಿ ಕಟ್ಟಿ
ಬೆಳುವಿನ ಕಾಯೋಟುಬುತ್ತಿ ಕಟ್ಟಿ ಕಡಿಗಿಟ್ಟವ್ನೆ
ಏಳೇಳಿರಿ ಭಾವಾ ಅಡಿಗಾದಾವೋ

ಎದ್ದು ಕಣೋ ಎತ್ತಯ್ಯ
ಮತ್ತೇನೆ ಘನಗುರುವೆ
ಮಕಮಾರಿ ತೊಳ್ಕಂಡು
ಕಾಲ್‌ಕೈ ತೊಳ್ಕಂಡು
ಅಗ್ಗಣಿಯ ತಕ್ಕಂಡು
ಮಜ್ಜುಣ ನೀಡಿಕಂಡು
ಸಣ್ಣಾದೊಂದೂಟ ಮಾಡಿದ್ರಣ್ಣ ವೋ

ಸಣ್ಣಾದೆ ಒಂದೂಟ ಮಾಡಿದನೆ ಎತ್ತಯ್ಯ
ಸಣ್ಣಾದೊಂದಿಳ್ಳೇವು ಧರಿಸಿದ್ನಣ್ಣ ವೋ

ಮದ್ದಿಗಿರಿ ಕಂಬಾಳಿ ತಿದ್ದಿ ಹೆಗಲಿಗ್ಹಾಕವ್ನೆ

ಬೆಳವಿನ ಕಾಯೋಟು ಬುತ್ತಿ ಮೂಲಿಗಾಕಿದುನಣ್ಣಾ
ಕೈಯಿಲಿ ಕತ್ತಿರಿ ಬಾಣ ನೆತ್ತಿಲಿ ನೆತ್ತುರುಬಾಣ
ಸುರ್ನಾರಿ ಮರ್ಬಿಲ್ಲು ಒಳ್ಳೆ ಸೂರಿದುನ ಹೊದಿಯಂಬು
ಸೂಡಿಕೊಂಡು ಗನಗುರು ಮತ್ತೆ ನಿನ್ನೆತ್ತಯ್ಯ
ಶಿವಕೊಟ್ಟ ಚಿಪ್ಪುಗೊಡ್ಲಿ ಹೆಗಲಿಗಿಟ್ಟುಕಂಡವನೆ

ನಾರಾಯಣ ಕೊಟ್ಟಂತ ನಾರಗಲ್ಲುಯೇ ನೋಡು
ಹೆಗಲಿಗ್ಹಾಕಿದುನಣ್ಣ ಮತ್ತೇ ಮಯಿಗುದ ಗೌಡ ವೋ

ಬಾರಯ್ಯ ಒಲಿಗಾನೆ ಮತ್ತೇನೆ ಮಲ್ಲಯ್ಯ
ಹುಲ್ಲು ನೀರೆ ನೋಡಾಕ ಹೋಗ್ತಿನಲ್ಲಿಗಯ್ಯ
ತಣ್ಣನ್ನವು ಮೂರರಕೆ ಕೊಡ್ಬೇಕಂದಾವೊ

ಹೋಗೊನ್ಹೋಗ್ತಿ ಭಾವ ಮತ್ತೇನೆ ಭಾವಯ್ಯ
ಎತ್ತಾವೇ ಏನು ಕೊಟ್ಟು ಪಾಣಫಡಿಯಾಲೋ

ಒಂದೇನೆ ಗೂಡಿಗೆ ಕಂಬೂಳಿ ಕೊಡಯ್ಯ
ಒಂದೇನೆ ಗೂಡಿಗೆ ಕೈಸಿಕ್ಕ ಕೊಡಯ್ಯ
ಒಂದೇನೆ ಗೂಡಿಗೆ ರೂಮಾಲ ಕೊಡಯ್ಯ
ಒಂದೇನೆ ಗೂಡಿಗೆ ನೀನಿರು ವಲಿಗಾನಯ್ಯ
ಅಷ್ಟೊತ್ತಿಗೆ ನಾನೇ ಬರ‍್ತಿನಂದಾವೋ
ಅರೆ ಎತ್ತಯ್ಯನ ಗೂಡಿನಾ
ಸುತ್ತಾ ಮುತ್ತಾ ನೋಡು
ಈಟೀಟೆ ಕಾಲೋರು
ಈಟೀಟೆ ಕಾಲೋರು
ಹದ್ದುಗಳೇ ಗೆದ್ದುಗಳೇ
ರಣಬಂತುಗಳೇ ಮನಿಯೆ ಕಟೈತಮ್ಮಾವೋ

ಅಗಿಯರ ಕೈ ಅಡಿಯಾಗಿ ನಿಮ್ಮ ಕೈಯೆ ಮೇಲಾಗಿ
ದುಸ್ಮಾನ್ನರು ಕೈ ಅಡಿಯಾಗಿ ಬರ‍್ಲೆಂದ
ನಿಮ್ಮಗಾರೆ ಓ ಭಾವಾ ದೇವಗಾರಾಗಿ ಬರ‍್ಲಂದ
ತಣ್ಣನ್ನವು ಮೂರ‍್ಹರಿಕೆ ಕೊಡ್ತಾನಣ್ಣವೋ

ಹುಲ್ಲುನೀರು ನೋಡಾಕೆ ಹೋಗ್ತಾನೆ ಎತ್ತಯ್ಯ
ಕಾಲು ಗಡಸೊವುನಣ್ಣ ತೋಳು ಬೀಸುವುನಣ್ಣ
ಎಡವಿದ್ದ ಕಲ್ಲೆ ಪುಡಿಪುಡಿಯಮ್ಮಾವೋ

ಮುಗ್ಗುರಿಸಿ ನಡುದರೆ ಒಳ್ಳೆ ಮೂರು ಗಾವುದಲ್ಹೋಗೋವ್ನೆ
ತಗ್ಗಿ ನಡುದರೆ ನಾಕೆ ಗಾವುದ ವೋ

ಸೂರುದು ಒಂದೇ ಭಾಗ ಚಂದುರು ಒಂದೇ ಭಾಗ
ಸ್ವಾಮಿ ಎತ್ತಯ್ಯ ಒಂದೇ ಭಾಗಣ್ಣಾ ವೋ

ಅಡ್ಡೊಂದೇ ಅರುಗಾವುದೆ ಶಿವನ ನೆನದವ್ನೆ ಎತ್ತಯ್ಯ
ಕಣ ಕುಪ್ಪೆ ಸೀಮೇನೆ ಕುಂತು ನೋಡಿದುನೋ ಎತ್ತಯ್ಯ
ಬ್ಯಾಡರು ಸೀಮೇನೇ ಬಗ್ಗಿಉ ನೋಡಿದುನೋ ಎತ್ತಯ್ಯ
ತುರುಕರು ಸೀಮೇನೇ ತೂರಿ ನೋಡಿದುನೋ ಎತ್ತಯ್ಯ

ಅರ್ತಿ ಐ ಮಂಗುಳುವೆ ಗುತ್ತಿ ಗುಡಿಯ ಕ್ವಾಟೆ
ಸುತ್ತೇಳು ರಾಜ್ಯಾವು ಮತ್ತು ಕಟ್ಟಿ ತಿರುಗಿದನೊ
ಎತ್ತಿಗೆ ಹಿಡಿ ಹುಲ್ಲು ಸಿಗಲಿಲ್ಲಾಂದಾ ವೋ

ಆದುವಾನಿ ಸೀಮೆ ನೋಡಿ ಬಂದೆತ್ತಯ್ಯ
ಆವಿಗೆ ಹಿಡಿ ಹುಲ್ಲೇ ಸಿಗಲಿಲ್ಲಾ ವೋ

ಸೊಂಡಲೂರ ಸೀಮೇನೆ ಕಂಡುಬಂದ ಎತ್ತಯ್ಯ
ನಮ್ಮ ಆವಿಗಿ ಹಿಡಿಹುಲ್ಲ ಸಿಗಲಿಲ್ಲಾ ವೋ

ಸುತ್ತೇಳ ರಾಜ್ಯವ ವತ್ತುಕಟ್ಟಿ ತಿರುಗಿದನೊ
ನಮ್ಮ ಆವಿಗಿ ಹಿಡಿಹುಲ್ಲ ಸಿಗಲಿಲ್ಲಾ ವೋ

ಆರೆ ಕಣ್ ಕುಪ್ಪೆ ಸೀಮೆ ನಾನು
ಕುಂತು ನಾನು ನೋಡಿದೆ
ಬ್ಯಾಡರು ಸೀಮೆನಾನು
ಬಗ್ಗಿ ನಾನು ನೋಡಿದೆ
ತುರುಕರು ಸೀಮೆ ನೋಡು
ತೂರಿ ನಾನು ನೋಡಿದೆ
ಅರ್ತಿ ಐ ಮಂಗುಳುದ
ಗುತ್ತಿ ಗುಡಿಯ ಕ್ವಾಟೆ
ಸುತ್ತೇಳ ರಾಜ್ಯವು
ವತ್ತುಕಟ್ಟಿ ತಿರುಗಿದೆ
ನಮ್ಮ ಆವಿಗೆ ಹಿಡಿ ಹುಲ್ಲು ಸಿಗಲಿಲ್ಲಾ ವೋ

ಅರೆ ಹಿರಿಯೋರು ಹೇಳಲಿಕ್ಕೆ
ಕಿರಿಯೋರು ಕೇಳಲಿಕ್ಕೆ
ದೊಡ್ಡವ್ರು ಹೇಳಲಿಕ್ಕೆ
ಸಣ್ಣೋವ್ರು ಕೇಳಲಿಕ್ಕೆ
ಇನ್ನೊಂದೇ ಕಾವಲೈತೆ
ಹೆಚ್ಚಿನ ಕಾವುಲು ನೋಡೊ
ಅದು ಒಂದೇ ನಾನು ನೋಡೋನಂದಾ ವೋ

ಕಾವುಲುಗುಂಟ ನೋಡೊ ಕಂಬಳಿ ಎಳದಾಡೋನು
ಕಂಬುಳಿಗೆ ಒಂದೊಂದು ಊಬತ್ತಿ ಬರುತಾವಣ್ಣ
ಒಂದುಗೂಡಿ ನಾವೇನೆ ಒಂದೀ ನಾಡುತಾವೆ
ಮುಂದ್ಲೊತ್ತು ನಾನೇನು ಮಾಡೆನಂದಾ ವೋ

ಅರೆ ಕೊನೆ ಕೊನಿಯೇ ಕುಂಬಾಕ
ಏರವ್ನೆ ಎತ್ತಯ್ಯ
ಕುರ್ಕೆಗುಡ್ಡದ ನೋಡು
ಮದ್ದಗಿರಿ ಕಂಬಳಿಯ
ತಿದ್ದಿ ಹೊದೈದ್ದಾನೆ
ಶೋಕ ಮಾಡುವನಣ್ಣಾ ಶಿವನಿಗೋ

ಅರೆ ಎತ್ತಯ್ಯನ ಕಣ್ಣೀರು
ಸಣ್ಣ ಸಣ್ಣ ಸರುವಾಗಿ
ದೊಡ್ಡ ದೊಡ್ಡ ಹಳ್ಳಾಗಿ
ಎತ್ತಯ್ಯನ್ನ ಕಣ್ಣೀರು
ಗುಡ್ಡದ ಕೆಳಾಕ ಧುಮುಕೊವಣ್ಣ ವೋ

ಅರೆ ಪಾರ್ವತಿಯೇ ದೇವಿಯಂತೆ
ಪರಮೇಸೂರಾಯಂತೆ
ನಾರಾಯಣ ಮೂರೂತಿ
ಇಂತಿಂಬೋ ಶರಣಾರು
ಆನೆ ಒಂಟೆ ಏರಿಕ್ಯಂಡು
ದೊಡ್ಡ ಬೆಟ್ಟದ ಸಾಲೀಲಿ ಬರ‍್ತಾರಣ್ಣಾ ವೋ

ಅರೆ ರಥವೆನೆ ಮುರ‍್ದೈತೆ
ಮೂಲೀಗೆ ಬಿದೈತೆ
ಇನ್ನೆಂಥಾ ಮಾಯಾದ ಮಳೆ ಸುರ‍್ದೈತಣ್ಣಾ ವೋ

ಆಲಿಸೆ ಲಾಲಿಸೆ ಕೇಳ್ತಾರೆ ಆವಾಗ
ಗುಡ್ಡಾದಾ ಮ್ಯಾಲೆ
ನರಮಾನೋರ ಸಬ್ದಾಗೋದಣ್ಣಾ ವೋ