“ಇಂದಿನ ಕರುವೇ ನಾಳಿನ ಹಸು”ಎಂಬ ಮಾತು ಸತ್ಯ. ಕರು ಬೇಗನೆ ಉತ್ತಮ ಹೋರಿ, ಎತ್ತು ಅಥವಾ ಮಣಕವಾಗಿ, ಹಸುವಾಗುವಂತೆ ಕರುವಿನ ಪಾಲನೆ ಪೋಷಣೆಯನ್ನು ಮಾಡಬೇಕು. ಆಧುನಿಕ ವೈಜ್ಞಾನಿಕ ಹೈನುಗಾರಿಕೆಯಲ್ಲಿ ಕರುವಿನ ಪಾಲನೆ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಕರುವಿನ ಆರೈಕೆ, ಪೋಷಣೆ ಗರ್ಭಾವಸ್ಥೆಯಲ್ಲಿಯೇ ಪ್ರಾರಂಭವಾಗುತ್ತದೆ. ಅಂದರೆ, ಮುಂದೆ ಶಕ್ತಿ ಮತ್ತು ಹಾಲು ಕೊಡುವ ಸಾಮರ್ಥ್ಯಕ್ಕೆ ಬುನಾದಿಯಾಗುತ್ತದೆ.

ಕರು ಹುಟ್ಟಿದ ನಂತರ ಅನುಸರಿಸಬೇಕಾದ ಕ್ರಮಗಳ

ಕರು ಜನಿಸಿದ ನಂತರ ಮೂಗು, ಕಿವಿ, ಬಾಯಿ ಮತ್ತು ಮೈಮೇಲಿನ ಕೊಳೆಯನ್ನು ಬಟ್ಟೆಯಿಂದ ಒರೆಸಿ ಸ್ವಚ್ಚಗೊಳಿಸಬೇಕು. ಇಲ್ಲವೇ ಹಸುವನ್ನು ನೆಕ್ಕಲು ಬಿಡಬೇಕು. ಕರು ಗರ್ಭದಲ್ಲಿ ಇರುವಾಗ ಉಸಿರಾಟ ಮಾಡುವುದಿಲ್ಲ. ಕರು ಭೂಮಿಗೆ ಬಂದ ತಕ್ಷಣವೇ ಉಸಿರಾಟ ಪ್ರಾರಂಭ ಮಾಡುವುದು. ಇದನ್ನು ಮೂಗಿನ ಮುಂದೆ ಕೈಯನ್ನು ಇಟ್ಟು ಅಥವಾ ಎದೆಗೂಡಿನ ಏರಿಳಿತವನ್ನು ನೋಡಿ ತಿಳಿದುಕೊಳ್ಳಬಹುದು. ಒಂದು ವೇಳೆ ಉಸಿರಾಡಲು ತೊಂದರೆ ಅಥವಾ ಉಸಿರಾಟವೇ ಇಲ್ಲದಿದ್ದರೆ ಕೋಳಿಯ ಗರಿಯನ್ನು ತೆಗೆದುಕೊಂಡು ಮೂಗಿನ ಹೊಳ್ಳೆಯೊಳಗೆ ನಾಜೂಕಾಗಿ ಆಡಿಸಿ ಸೀನು ಬರುವಂತೆ ಮಾಡುವುದು, ಎದೆಗೂಡಿನ ಭಾಗವನ್ನು ಹೆಚ್ಚು ಭಾರ ಹಾಕದೇ ಒತ್ತುವುದು ಮತ್ತು ಬಿಡುವುದು ಮಾಡಿದರೆ ಕೃತಕ ಉಸಿರಾಟ ನೀಡಿದಂತಾಗುತ್ತದೆ.

ಹುಟ್ಟಿದ ಕರುವಿಗೆ ಚೂಪಾದ ಹಳದಿ ಕೊಳಗ/ಗೊರಸುಗಳಿರುತ್ತವೆ. ಇವುಗಳನ್ನು ತೆಗೆಯಬೇಕು. ಸ್ವಚ್ಛವಾದ ಬ್ಲೇಡು ಅಥವಾ ಚಾಕುವಿನಿಂದ ಕತ್ತರಿಸಿಬೇಕು. ಇಲ್ಲವಾದರೆ ವಕ್ರವಾಗಿ ಬೆಳೆಯುತ್ತವೆ. ಇದರಿಂದ ನಡೆಯುವಾಗ ತೊಂದರೆಯಾಗುತ್ತದೆ. ಅಲ್ಲದೇ ಇಲಿ, ಹೆಗ್ಗಣ ಮುಂತಾದ ಪ್ರಾಣಿಗಲು ಅವುಗಳನ್ನು ಕಚ್ಚಲೂಬಹುದು. ಇದರಿಂದ ಜ್ವರ ಮುಂತಾದ ತೊಂದರೆ ಬರಬಹುದು.

ಹುಟ್ಟುವಾಗಲೇ ಹೊಕ್ಕಳು ಬಳ್ಳಿ ತಾಯಿಯಿಂದ ಬೇರ್ಪಟ್ಟಿರಬಹುದು. ಹೀಗಿದ್ದರೂ ಸಹ ಕರುವಿನ ದೇಹದ ಭಾಗದಿಂದ ೪-೫ ಸೆಂ. ಮೀ. ಉದ್ದ ಬಿಟ್ಟು ಕತ್ತರಿಸುವ ಮೊದಲು ಹೊಕ್ಕಳು ಬಳ್ಳಿಗೆ ದಾರವನ್ನು ಕಟ್ಟಲು ಮರೆಯಬೇಡಿ. ನಂತರ ಟಿಂಚರ್ ಅಯೋಡಿನ್ ಅಥವಾ ಮನೆಯಲ್ಲಿ ಸುಲಭವಾಗಿ ಸಿಗುವ ಅರಿಶಿಣ ಪುಡಿಯನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕತ್ತರಿಸಿದ ಭಾಗಕ್ಕೆ ಹಚ್ಚಬೇಕು. ಈರೀತಿಯಾಗಿ ೩-೪ ದಿನ ಮಾಡಿದರೆ ಹೊಕ್ಕಳು ಬಳ್ಳಿ ಪೂರ್ಣ ಒಣಗಿ ಬಿದ್ದುಹೋಗುತ್ತದೆ. ಇಲ್ಲವಾದರೆ ಹೊಕ್ಕಳ ಬಾವು ಮುಂತಾದ ತೊಂದರೆ ಬರುವ ಸಂಭವವುಂಟು.

ಕರು ಹುಟ್ಟಿದೊಡನೆ ಬರುವ ಮೊದಲ ಹಾಲನ್ನು “ಗಿಣ್ಣುಹಾಲು”ಎಂದು ಕರೆಯುತ್ತಾರೆ ಗಿಣ್ಣು ಹಾಲು ಅಮೃತಕ್ಕೆ ಸಮಾನ. ಇದೊಂದು ಪ್ರಕೃತಿ ನೀಡಿರುವ ಉತ್ತಮ ಕೊಡುಗೆ. ಇದರಲ್ಲಿ ಹಾಲಿಗಿಂತ ಅಧಿಕ ಪ್ರಮಾಣದಲ್ಲಿ ಸಸಾರಜನಕ, ಜೀವಸತ್ವ ಖನಿಜಗಳು ಮತ್ತು ಶಕ್ತಿ ಆಹಾರ ರೂಪದಲ್ಲಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಅಂಟಿಬಾಡೀಸ್ ಗಿಣ್ಣು ಹಾಲಿನಲ್ಲಿ ಮಾತ್ರ ಇರುತ್ತದೆ. ಗಿಣ್ಣು ಹಾಲಿನ ಬಗ್ಗೆ ರೈತರಲ್ಲಿ ಅನೇಕ ಮೂಢನಂಬಿಕೆಗಳಿವೆ. ಹೆಚ್ಚು ನೀಡಿದರೆ ಭೇದಿಯಾಗುವುದು, ಸಾಯಲೂಬಹುದು ಮತ್ತು ಸತ್ತೆ ಬೀಳದೆ ಹಾಲನ್ನು ಕರೆಯಬಾರದು ಮುಂತಾಗಿ, ಹಾಲನ್ನು ಕೆಚ್ಚಲಿನಿಂದ ಕರೆದರೂ ಅದನ್ನು ನೈವೇದ್ಯ ಮಾಡಿ ನಂತರ ಯಾರಿಗಾದರೂ ಕೊಟ್ಟು ಬಿಡುತ್ತಾರೆ. ಸ್ವಲ್ಪ ಹಾಲನ್ನು ಕರುವಿಗೆ ನೀಡುತ್ತಾರೆ. ಇದು ಖಂಡಿತ ಸರಿಯಲ್ಲ.

ಹಸು ಎಮ್ಮೆಗಳ ರೈತನ ಆಸ್ತಿ. ಅವನದೇ ಜವಾಬ್ದಾರಿ ಜಾಸ್ತಿ. ಈ ರಾಸುಗಳ ಪ್ರಜನನ ಮತ್ತು ಕೃತಕ ಗರ್ಭಧಾರಣೆಗೆ ಸಂಬಂದಪಟ್ಟ ಮಾಹಿತಿಯನ್ನು ಅವನು ಅರಿತಿರಬೇಕು. ಕೃತಕ ಗರ್ಭಧಾರಣೆ ಒಂದು ನಾಜೂಕು ಮತ್ತು ಚತುರ ಪ್ರಯೋಗ, ಕೃತಕ ಗರ್ಭಧಾರಣೆ ತಂತ್ರಜ್ಞಾನ ಅಂದರೆ ಏನು, ಘನೀಕೃತ ವೀರ್ಯವನ್ನು ಹೇಗೆ ಉಪಯೋಗಿಸುತ್ತಾರೆ. ಬಿಸಿನೀರು ಏಕೆ, ಎಷ್ಟು ಉಷ್ಣತಾಮಾನ ಎಷ್ಟಿರಬೇಕು, ಪ್ರಯೋಗದ ಪ್ರತಿಹಂತದಲ್ಲಿ ತನ್ನ ಮತ್ತು ತಾಂತ್ರಿಕ ಸಿಬ್ಬಂದಿಯ ಹೆಜ್ಜೆ ಹೇಗಿಡಬೇಕು ಮುಂತಾದುವನ್ನು ತಿಳಿದುಕೊಂಡರೆ ನಿಗದಿತ ಗುರಿ ಮುಟ್ಟುವುದು ಸುಲಭಸಾಧ್ಯ.

ಕರುಗಳಿಗೆ ಹಾಲುಣಿಸುವ ಕ್ರಮ

ತಾಯಿ ಕೆಚ್ಚಲಿನಿಂದ ಹಾಲನ್ನು ಕರೆಯುವ/ಕುಡಿಸುವ ಮೊದಲು ಕೆಚ್ಚಲನ್ನು ಸ್ವಚ್ಛವಾಗಿ ಉಗುರು ಬೆಚ್ಚಗಿನ ಬಿಸಿನೀರಿನಿಂದ ತೊಳೆದು ಶುಭ್ರವಾದ ಬಟ್ಟೆಯಿಂದ ಒರೆಸಬೇಕು. ಪ್ರತಿ ಮೊಲೆಯಿಂದ ೨-೩ ಸಾರಿ ಹಿಂಡಿ ಚೆಲ್ಲಿದ ಬಳಿಕ ಹಾಲನ್ನು ಕರೆಯಬಹುದು ಇಲ್ಲವೇ ಕುಡಿಯಲು ಕರುವನ್ನು ಬಿಡಬೇಕು. ಸಾಧ್ಯವಿದ್ದಷ್ಟು ಗಿಣ್ಣುಹಾಲನ್ನು ೧೫ ರಿಂದ ೩೦ ನಿಮಿಷದೊಳಗೆ ಕುಡಿಸಬೇಕು. ಏಕೆಂದರೆ, ರೋಗ ನಿರೋಧಕ ಶಕ್ತಿಯನ್ನು ಕರುಗಳಿಗೆ ತನ್ನ ಕರುಳಿನ ಮೂಲಕ ಕೆಲವು ಗಂಟೆಗಳವರೆಗೆ ಮಾತ್ರ ನೇರವಾಗಿ ಹೀರಿಕೊಳ್ಳುವ ಶಕ್ತಿ ಇರುತ್ತದೆ. ಜೊತೆಗೆ ಓಡಾಡಲು ಶಕ್ತಿ ದೊರೆಯುತ್ತದೆ. ಅಲ್ಲದೇ ಗರ್ಭದ ಅವದಿಯಲ್ಲಿ ಹೊಟ್ಟೆಯೊಳಗೆ ಶೇಖರಣೆಯಾದ ಮಲವು (ಸಗಣಿ) ಗಟ್ಟಿ, ಅಂಟು, ಜಿಗುಟು ಇದ್ದು ಸುಲಭವಾಗಿ ಹೊರಗೆ ಹೋಗಲು ಸಾಧ್ಯವಾಗುತ್ತದೆ. ಒಂದು ವೇಳೆ ಗಿಣ್ಣದ ಹಾಲು ದೊರಕದೇ ಇದ್ದಾಗ ಅಂದರೆ ಕೆಚ್ಚಲು ಬಾವು ಗರ್ಭದ ಅವದಿಯಲ್ಲಿ, ಸರಿಯಾಗಿ ಹಾಲು ಕೊಡದೇ ಇದ್ದ ಸಂದರ್ಭದಲ್ಲಿ ಕೋಳಿ ಮೊಟ್ಟೆಯ ಬಿಳಿಭಾಗವನ್ನು (ಎರಡು) ತೆಗೆದುಕೊಂಡು ಅದಕ್ಕೆ ಎರಡು ಚಮಚ ಔಡಲು ಎಣ್ಣೆ/ಹರಳೆಣ್ಣೆ, ಎರಡು ಚಮಚ ಜೇನುತುಪ್ಪ ಸೇರಿಸಿ ಒಂದು ಲೋಟ ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಕುಡಿಸಬೇಕು, ಗೊಟ್ಟಹಾಕಬಾರದು.

ಆಧುನಿಕ ಮತ್ತು ವೈಜ್ಞಾನಿಕ ಹೈನುಗಾರಿಕೆಯಲ್ಲಿ ಕರುವನ್ನು ತಾಯಿಯಿಂದ ಬೇರ್ಪಡಿಸುವುದನ್ನು ಮೊದಲು ದಿನದಿಂದ ಅಥವಾ ಮೂರು ದಿನಗಳು ಬಿಟ್ಟು ಈ ಪದ್ದತಿಯನ್ನು ಮೊದಲು ಸೂಲದಲ್ಲಿ ಅಭ್ಯಾಸ ಮಾಡಿದರೆ ಉತ್ತಮ. ಇದರಿಂದ ಅನೇಕ ಲಾಭ ಗಳಿರುವುದರಿಂದ ಈ ಪದ್ದತಿಯನ್ನು ಅನುಸರಿಸುವುದು ಉತ್ತಮ.

ಲಾಭಗಳು

೧. ಆಕಳಿನ ಹಾಲಿನ ಇಳುವರಿ ಎಷ್ಟು ಎಂದು ನಿಖರವಾಗಿ ತಿಳಿಯಬಹುದು ಮತ್ತು ಆಕಳಿಗೆ ಸಮತೋಲನ ಆಹಾರ ಎಷ್ಟು ಕೊಡಬೇಕು ಎಂಬುದು ತಿಳಿಯುತ್ತದೆ.

೨. ಕರುವಿನ ದೇಹದ ತೂಕಕ್ಕೆ ಅನುಗುಣವಾಗಿ ಹಾಲನ್ನು ನೀಡಬಹುದು. ಕರುವಿನ ತೂಕದ ಅಂದಾಜು ತಿಳಿದುಕೊಳ್ಳಬಹುದು. ಅಂದರೆ ನಾಡತಳಿಯ ಕರುವಿನ ತೂಕ ಸುಮಾರು ೧೫-೨೦ ಕಿ, ಗ್ರಾಂ. ಮಿಶ್ರತಳಿ ಕರುವಿನ ತೂಕ ಸುಮಾರು ೩೦-೩೫ ಕಿ. ಗ್ರಾಂ. ಕರುವನ್ನು ಬೇರ್ಪಡಿಸಿ ಅದರ ದೇಹದ ತೂಕದಲ್ಲಿ ೧೦:೧ ಭಾಗ ಹಾಲನ್ನು ಕುಡಿಸಬೇಕು ಈ ಹಾಲನ್ನು ಒಂದು ದಿನಕ್ಕೆ ೩ ರಿಂದ ೪ ಸಾರಿ ಭಾಗ ಮಾಡಿ ಕುಡಿಸಬೇಕು.

೩. ಒಂದು ವೇಳೆ ಆಕಸ್ಮಿಕವಾಗಿ ತಾಯಿ ಹಸು/ ಎಮ್ಮೆ ಸತ್ತರೆ, ಯಾವುದೇ ತೊಂದರೆ ಇಲ್ಲದೆ ಹಾಲನ್ನು ಕುಡಿಸಬಹುದು.

೪. ಕೆಚ್ಚಲಿಗೆ ಬಿಟ್ಟು ಕುಡಿಸುವುದರಿಂದ, ಹಾಲು ಕುಡಿಯುವ ಸಂದರ್ಭದಲ್ಲಿ ಕರು ಮೊಲೆಗೆ ಕಚ್ಚಿ ಅಥವಾ ಗುದ್ದುವುದರಿಂದ ಗಾಯ ಆಗಬಹುದು. ಇದರಿಂದ ಕೆಚ್ಚಲು ಬಾವು ಬರಬಹುದು.

೫. ಹಾಲು ಕರೆಯುವ ಕೊನೆಯ ಹಂತದಲ್ಲಿ ಬರುವ ಹೆಚ್ಚು ಕೊಬ್ಬಿನ ಅಂಶ ಇರುವ ಹಾಲು ಕರುವಿನ ಹೊಟ್ಟೆಗೆ ಹೋಗುವುದರಿಂದ, ಜೀರ್ಣವಾಗದೇ ಭೇದಿಯಾಗುವ ಸಾಧ್ಯತೆ ಇದೆ. ಅದರ ಬದಲು ಸಂಘಕ್ಕೆ /ಮಾರಾಟದಿಂದ ಹಾಲಿಗೆ ಹೆಚ್ಚಿನ ಬೆಲೆ ಪಡೆಯಬಹುದು. ನಾಟಿ/ಜವಾರಿ ತಳಿ ಆಕಳು ಮತ್ತು ಎಮ್ಮೆಗಳಿಗೆ ತಮ್ಮ ಕರುವಿನ ಮೇಲೆ ಮಮತೆ ಹೆಚ್ಚು. ಇದಕ್ಕೆ ಹಾಲು ಕರೆಯುವುದಕ್ಕೆ ಮೊದಲು ಅದರ ಕರುವನ್ನು ಹಾಲು ಕುಡಿಯಲು ಬಿಡುವುದು ಸಾಮಾನ್ಯ ಪದ್ದತಿ. ಇದರಿಂದ ತೊರೆ/ ಸೊರೆ ಬಿಡುವುದು ಸುಲಭವಾಗುತ್ತದೆ. ತೊರೆ/ಸೊರೆ ಬಿಟ್ಟ ನಂತರ ಕರುವನ್ನು ತಾಯಿಯ ಮುಂದೆ ಕಟ್ಟಿ ನೆಕ್ಕಲು ಬಿಟ್ಟು ಹಾಲು ಕರೆಯುವುದು ಸಾಮಾನ್ಯ. ನಂತರ ಉಳಿದ ಹಾಲು ಕುಡಿಯಲು ಬಿಡುವುದು. ಆದರೆ ಇದರಿಂದ ಕರು ಹಾಲು ಎಷ್ಟು ಕುಡಿಯಿತು, ಆಕಳು/ಎಮ್ಮೆಯಿಂದ ಹಾಲು ಎಷ್ಟು ಬಂದಿತು ಎಂದು ತಿಳಿಯಲು ಸಾಧ್ಯವಿಲ್ಲ. ಆದುದರಿಂದ ಕರು ಬೇರ್ಪಡಿಸಿ ಕೈ ಹಾಲು ಕೊಟ್ಟು ಸಾಕುವುದು ಉತ್ತಮ.

ಪ್ರಾರಂಭದಲ್ಲಿ ಕರುವಿಗೆ ಪಾತ್ರೆಯಿಂದ ಹಾಲನ್ನು ಕುಡಿಯುವುದು ಗೊತ್ತಿರುವುದಿಲ್ಲ. ಹಾಲನ್ನು ಕರುವಿಗೆ ಪಾತ್ರೆಯ ಮುಖಾಂತರ ಕುಡಿಸುವ ಮೊದಲು ಹಾಲಿನಲ್ಲಿ ಬೆರಳನ್ನು (ಸ್ವಚ್ಛವಾದ) ಅದ್ದಿ ಕರುವಿಗೆ ನೆಕ್ಕಲು ನೀಡಬೇಕು. ಇದೇ ರೀತಿಯಾ‌ಗಿ ಕೆಲವು ಸಾರಿ ಮಾಡಬೇಕು. ಅನಂತರ ನಿಧಾನವಾಗಿ ಬೆರಳು ಪಾತ್ರೆಯ ಹತ್ತಿರ ಎಳೆದುಕೊಳ್ಳುತ್ತಾ ಹಾಲಿನಲ್ಲಿ ಬೆರಳುಗಳು ಮುಳುಗುವಂತೆಯೇ ಕರು ಚೀಪಲು ಬಿಡಬೇಕು. ಕರುವು ಚೀಪುತ್ತಿರುವಂಯೇ ಬೆರಳನ್ನು ನಿಧಾನವಾಗಿ ಹಿಂದೆಳೆದುಕೊಂಡು ಬಿಡಬೇಕು. ನಂತರ ಯಾವುದೇ ತೊಂದರೆ ಇಲ್ಲದೇ ಕರುವು ಹಾಲನ್ನು ಕುಡಿಯುತ್ತದೆ. ಮೊದಲ ೨-೩ ದಿನ ತೊಂದರೆ ಆಗಬಹುದು ಆದರೆ ಇದೊಂದು ಉತ್ತಮ ಪದ್ಧತಿ. ನಂತರದ ದಿನಗಳಲ್ಲಿ ಹಾಲಿನ ಪಾತ್ರೆಯ ಸಪ್ಪಳ ಕೇಳುತ್ತಿದ್ದಂತೆ ಕರು ಎದ್ದು ನಿಲ್ಲುತ್ತದೆ. ಕರುವಿಗೆ ಹಾಲು ಕುಡಿಯಲು ಕೊಡುವ ಹಾಲಿನ ಪಾತ್ರೆಯ ಬಾಯಿ ಅಗಲವಿರಬೇಕು. ಮೊಲೆ ಹಾಲು ಕುಡಿಯುವ ಮಕ್ಕಳಿಗೆ ಬಾಟಲಿನಿಂದ ಹಾಲು ಕುಡಿಸುವ ಹಾಗೇ ಕರುವಿಗೆ ಸಹ ಕುಡಿಸಬಹುದು. ಹಾಲನ್ನು ದಿನಕ್ಕೆ ಎರಡು ಬಾರಿ ನೀಡದೇ ಮೂರು/ ನಾಲ್ಕು ಕಂತುಗಳಲ್ಲಿ ನೀಡುವುದು ಉತ್ತಮ ಮತ್ತು ಹಾಲನ್ನು ಪ್ರತೀ ಸಲವೂ ಸ್ವಲ್ಪ ಬಿಸಿ ಮಾಡಿ (ದೇಹದ ಉಷ್ಣತೆಯಷ್ಟು) ನೀಡಬೇಕು. ಇದರಿಂದ ಮಲಬದ್ಧತೆ ಬರುವುದಿಲ್ಲ. ಒಮ್ಮೆ ಅಥವಾ ಒಂದೇ ಸಾರಿ ಹೆಚ್ಚು ಹಾಲನ್ನು ನೀಡಿದರೆ ಇನ್ನೂ ಬೆಳವಣಿಗೆ ಹೊಂದದ ಜೀರ್ಣಾಂಗಗಳ ಭಾಗವಾದ ಮೆಲುಕು ಚೀಲದಲ್ಲಿ ಹಾಲು ಹುಳಿಯಾಗಿ ಹೊಟ್ಟೆ ಉಬ್ಬರ ಬರಬಹುದು. ಅಲ್ಲದೆ ಅದರಲ್ಲಿರುವ ಪೌಷ್ಟಿಕಾಂಶಗಳು ಲಭ್ಯವಾಗದೇ ಹೋಗಬಹುದು. ಅಲ್ಲದೆ, ಹೆಚ್ಚು ಕೊಬ್ಬಿನಂಶವಿರುವ ಹಾಲನ್ನು ನೇರವಾಗಿ ನೀಡದೇ ವಿಶೇಷವಾಗಿ ಎಮ್ಮೆ ಕರುಗಳಿಗೆ ಕೊಡುವ ಹಾಲಿಗೆ ಶುದ್ಧವಾದ ನೀರನ್ನು ಬೆರೆಸಿ ಕೊಡುವುದು ಉತ್ತಮ. ಹಾಲು ಕುಡಿದ ಬಳಿಕ ಕರುವಿನ ನಾಲಿಗೆಯ ಮೇಲೆ ಒಂದು ಹರಳು ಉಪ್ಪನ್ನು ನಾಲಿಗೆ ಮೇಲೆ ತಿಕ್ಕಬೇಕು. ಇದರಿಂದ ಬೇರೆ ವಸ್ತುವನ್ನಾಗಲಿ, ನೇಲವನ್ನಾಗಲಿ ನೆಕ್ಕುವುದಿಲ್ಲ. ಇದರಿಂದ ಉಳಿದ ತೊಂದರೆಗಳನ್ನು ಬರುವುದಿಲ್ಲ.

ಒಂದು ತಿಂಗಳವರೆಗೆ ದೇಹ ತೂಕದ ೧೦. ೧ ಭಾಗದಷ್ಟು ಹಾಲನ್ನು ನೀಡಬೇಕು. ಅನಂತರ ಕರುವಿಗೆ ನೀಡುವ ಹಾಲಿನ ಪ್ರಮಾಣವನ್ನು ಕ್ರಮೇಣ ಕಡಿಮೆಗೊಳಿಸಿ ಮೂರು ತಿಂಗಳಾಗುವ ವೇಳೆಗೆ ಪೂರ್ಣವಾಗಿ ಹಾಲು ಕೊಡುವುದನ್ನು ನಿಲ್ಲಿಸಿ ಕರುವಿಗೆ ಒಂದು ತಿಂಗಳ ಸಮತೋಲನ ಪಶು ಆಹಾರ ಅಥವಾ ಕರುಗಳ ವಿಶೇಷ ಪಶು ಆಹಾರವನ್ನು ನೀಡಲು ಪ್ರಾರಂಬಿಸಬೇಕು. ಮೊದಮೊದಲು ಕರು ತಿನ್ನಲು ನಿರಾಕರಿಸಬಹುದು. ಹಾಲಿನ ಪಾತ್ರೆಯಲ್ಲಿ ಸ್ವಲ್ಪ ಪಶು ಆಹಾರವನ್ನು ಮಿಶ್ರಣ ಮಾಡಿ ಹಾಲು ಕುಡಿಯಲು ಕೊಡಿ. ಹಾಲು ಕುಡಿದು ಮುಗಿದ ನಂತರ ಉಳಿದ ಹಾಲು ಮತ್ತು ಪಶು ಆಹಾರವನ್ನು ನೆಕ್ಕುತ್ತಾ ನೆಕ್ಕುತ್ತಾ ಅದರ ವಾಸನೆ ಮತ್ತು ರುಚಿಗೆ ಕ್ರಮೇಣ ಒಗ್ಗಿಕೊಂಡು ಕರು ಬೇಗನೆ ಪಶು ಆಹಾರವನ್ನು ತಿನ್ನಲು ಪ್ರಾರಂಭಿಸುತ್ತದೆ. ನಂತರ ಕ್ರಮೇಣ ಆಹಾರ ಪ್ರಮಾಣವನ್ನು ಹೆಚ್ಚಿಸಬೇಕು. ಆಹಾರ ಜೀರ್ಣಕ್ರಿಯೆಯ ಹಂತದಲ್ಲಿ ಹಲವಾರು ರಾಸಾಯನಿಕ  ಪದಾರ್ಥಗಳ  ಫಲವಾಗಿ ಜೀರ್ಣಂಗಗಳ ಮುಖ್ಯಭಾಗವಾದ ಮೆಲುಕು ಚೀಲದ ಬೆಳವಣಿಗೆ ತ್ವರಿತಗೊಳ್ಳುವುದು. ಒಂದು ವೇಳೆ ಬರೀ ಹಾಲನ್ನೇ ನೀಡಿದಲ್ಲಿ ಕರುವಿನ ಹಸಿವು ಇಂಗಿ ಹೋಗುವುದರಿಂದ ಅವುಗಳ ಪಶು ಆಹಾರವನ್ನು ತಿನ್ನಲಾರವು. ಅಲ್ಲದೆ, ಮೆಲುಕು ಚೀಲದ ಬೆಳವಣಿಗೆ ಕುಂಠಿತವಾಗಿ, ಕರುವಿನ ಸಾಕಾಣಿಕೆಗೆ ಅಧಿಕ ವೆಚ್ಚ ಆಗಬಹುದು. ಇದೇ ವೇಳೆಗೆ ಕರುವಿಗೆ ಸ್ವಲ್ಪ ಒಣಗಿದ ಉತ್ತಮ ಹಸಿರು ಹುಲ್ಲು ತಿನ್ನಲು ನೀಡಬೇಕು. ಇದರಿಂದಲೂ ಜೀರ್ಣ ಕ್ರಿಯೆಯು ಸರಿಯಾಗಿ ನಡೆದು ತ್ವರಿತವಾಗಿ ಬೆಳವಣಿಗೆ ಹೊಂದಲು ಸಹಾಯವಾಗುತ್ತದೆ. ಅವುಗಳ ಆಹಾರ ಕ್ರಮದಲ್ಲಿ ಪಶು ಆಹಾರ ಮತ್ತು ಒಣಗಿಸಿದ ಹಸಿರು ಹುಲ್ಲು ಇರಬೇಕಾದದ್ದು ಅತೀ ಅವಶ್ಯ.

ಆಧುನಿಕ ಹೈನುಗಾರಿಕೆ ಪದ್ಧತಿಯಲ್ಲಿ ಮಿಶ್ರ ತಳಿ ಹಸುಗಳನ್ನು ಮನೆಯಲ್ಲಿ ಕಟ್ಟಿ ಹಾಕಿ ಸಾಕುವುದು ಉತ್ತಮ. ಇದರಿಂದ ರಕ್ಷಣೆ, ಶಕ್ತಿ ಉಳಿತಾಯ ಮತ್ತು ಒಳ ಮತ್ತು ಹೊರಪರೋಪ ಜೀವಿಗಳಿಂದ ಬರಬಹುದಾದ ಕಾಯಿಲೆ ಸಮಸ್ಯೆ ನಿವಾರಿಸಬಹುದು. ಕರು ಹುಟ್ಟಿದ ಒಂದು ವಾರದೊಳಗೆ ಜಂತು ನಿವಾರಕ ಔಷಧಿಯನ್ನು ನೀಡಬೇಕು. ಗರ್ಭಾವಸ್ಥೆಯಲ್ಲಿ ತಾಯಿಗೆ ಅಂದರೆ ೫ನೇ ತಿಂಗಳಲ್ಲಿ ಜಂತು ನಿವಾರಕ ಔಷಧಿಯನ್ನು ನೀಡಿದ್ದೇ ಆದರೆ ಗರ್ಭದಲ್ಲಿ ಬೆಳೆಯುವ ಕರುವಿಗೆ ಮತ್ತು ತಾಯಿಗೆ ಎರಡಕ್ಕೂ ಅನುಕೂಲ. ಅದರಲ್ಲಿ ಎಮ್ಮೆಗೆ ನೀಡಬೇಕಾದದ್ದು ಅತೀ ಅವಶ್ಯಕ. ನಂತರ ಪ್ರತಿ ತಿಂಗಳಿಗೊಮ್ಮೆ ಕನಿಷ್ಟ ೬ ರಿಂದ ಒಂದು ವರ್ಷದ ಅವಧಿಯವರೆಗೆ ಜಂತು ನಿವಾರಕ ಔಷಧಿಯನ್ನು ನೀಡಿದ್ದೇ ಆದರೆ ಕರು ಉತ್ತಮ ಬೆಳವಣಿಗೆ ಹೊಂದುವುದರಲ್ಲಿ ಸಂಶಯವಿಲ್ಲ.

ಕರುವಿನ ಕೊಂಬು/ಕೋಡು ಸುಡಿಸುವುದು ಉತ್ತಮ. ಇದನ್ನು ೧೦-೧೫ ದಿನಗಳ ಒಳಗೆ ಪಶುವೈದ್ಯರಿಂದ ರಾಸಾಯನಿಕ ವಸ್ತುಗಳಿಂದಾಗಲೀ, ಇಲ್ಲವೇ ವಿದ್ಯುಚ್ಛಕ್ತಿಯ ಉಪಕರಣದ ಸಹಾಯದಿಂದಾಗಲೀ ಸುಡಿಸುವುದು ಉತ್ತಮ. ಸುಟ್ಟ ನಂತರ ಗಾಯವಾಗದಂತೆ, ಹುಳು ಬೀಳುದಂತೆ ಎಚ್ಚರಿಕೆ ವಹಿಸಬೇಕು. ಕೊಂಬು/ಕೋಡು ಸುಡಿಸುವುದರಿಂದ ಅನೇಕ ಲಾಭಗಳಿವೆ.

೧. ಕೊಂಬು/. ಕೋಡೂ ಇದ್ದರೆ ಕಟ್ಟಲು ಸ್ಥಳಾವಕಾಶ ಜಾಸ್ತಿ ಬೇಕು.

೨. ಪಕ್ಕದಲ್ಲಿರುವ ಬೇರೆ ಪ್ರಾಣಿಗೆ ಅಥವಾ ಮನುಷ್ಯರಿಗೆ ಹಾಯ್ದಯ ಗಾಯ ಅಥವಾ ಇತರೇ ತೊಂದರೆಯಾಗಬಹುದು.

೩. ಕಾದಾಟದಿಂದ ಮುರಿದು ಹೋಗಬಹುದು/ಗಾಯವಾಗಬಹುದು.

೪. ಕೂಡಹುಣ್ಣು/ ಕ್ಯಾನ್ಸರ್ ಬರಬಹುದು.

೫. ಮಿಶ್ರತಳಿಗಳಗೆ(ಹೆಣ್ಣು ಕರು) ಕೊಂಬು ಇಲ್ಲದಿದ್ದರೆ ನೋಡಲು ಚೆಂದ.

೬. ಕೊಂಬು/ಕೋಡಿನ ಬೆಳವಣಿಗೆಗೆ ಬೇಕಾಗುವ ಶಕ್ತಿ, ಕರುವಿನ ಬೆಳವಣಿಗೆ ಕಡಿಮೆ ಮಾಡಬಹುದು.

ಕರುವಿನ ಬೆಳವಣಿಗೆಯನ್ನು ಪ್ರತಿ ವಾರಕ್ಕೊಮ್ಮೆ ಅಥವಾ ಹದಿನೈದು ದಿಗಳಿಗೊಮ್ಮೆ ತೂಕವನ್ನು ನೋಡುವುದರಿಂದ ತಿಳಿಯುತ್ತದೆ. ಮಿಶ್ರತಳಿ ಕರುಗಳ ಪ್ರತಿ ದಿನಕ್ಕೆ ೩೦೦-೪೦೦ ಕಿ. ಗ್ರಾಂ. ಬೆಳೆಯುತ್ತವೆ. ತೂಕಕ್ಕೆ ಅನುಗುಣವಾಗಿ ಕರುವಿಗೆ ಹಾಲು, ಸಮತೋಲನ ಪಶು ಆಹಾರ ಮತ್ತು ಸ್ವಲ್ಪ ಒಣಗಿಸಿದ ಹಸಿರು ಹುಲ್ಲು ನೀಡಿ ಉತ್ತಮ ಮಣಕ ಹಸುವನ್ನಾಗಿ ಮಾಡಬಹುದು. ಮೂರು ತಿಂಗಳು ಮುಗಿದ ನಂತರ ಕರುವನ್ನು ಪೂರ್ಣವಾಗಿ ಹಸಿರು ಹುಲ್ಲು ಮತ್ತು ಪಶು ಆಹಾರದ ಮೇಲೆ ಸಾಕಬೇಕು. ಕರುವಿಗೆ ನೀರಿನ ಅವಶ್ಯಕತೆ ಇಲ್ಲ. ಎಂಬುದು ರೈತರ ಭಾವನೆ. ಆದರೆ ಅದು ತಪ್ಪು. ಹಾಲನ್ನು ಕುಡಿಯುವ ವೇಳೆಯಲ್ಲಿ ನೀರನ್ನು ಕುಡಿಸುವುದು ರೂಢಿ ಮಾಡಬೇಕು. ಅಂದರೆ ಮುಂದೆ ಪ್ರತ್ಯೇಕ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಸಬೇಕು. ಮಣಕಗಳಿಗೆ ಪ್ರತಿನಿತ್ಯ ೧-೨ ಕಿ. ಗ್ರಾಂ ಸಮತೋಲನ ಪಶುಆಹಾರ, ಖನಿಜ ಮಿಶ್ರಣದ (೩೦ ಗ್ರಾಂ) ಪುಡಿ ಹಾಗೂ ಸಾಕಷ್ಟು ಹಸಿರು ಮತ್ತು ಒಣಗಿದ ಹುಲ್ಲನ್ನು /ಮೇವನ್ನು ಜೊತೆಗೆ ನೀರನ್ನು ಕುಡಿಸಬೇಕು.

ಆಹಾರ ನೀಡುವುದರ ಜೊತೆಗೆ ಅವುಗಳಿಗೆ ವ್ಯಾಯಾಮ ಅಷ್ಟೇ ಮುಖ್ಯ. ಕರುಗಳಿಗೆ ದಿನಕ್ಕೆ ಕೆಲವು ಗಂಟೆಗಳಾದರೂ ಉದ್ದವಾದ ಹಗ್ಗವನ್ನು ಕಟ್ಟಿ ಓಡಾಡಲು ಬಿಡಬೇಕು. ಕರುಗಳನ್ನು ಸ್ವಚ್ಛವಾದ. ಒಣಗಿದ ನೆಲದ ಮೇಲೆ ಕಟ್ಟಬೇಕು. ಮನೆಯಲ್ಲಿ ಗಾಳಿ, ಬೆಳಕು ಬರುವಂತೆ ಇರಬೇಕು. ಕಿಟಕಿ ಬಾಗಿಲು ಬಳಿ ಕಟ್ಟದೇ ಸ್ವಲ್ಪ ಬೆಚ್ಚಗೆ ಇರುವ ಜಾಗದಲ್ಲಿ ಕಟ್ಟುವುದು ಉತ್ತಮ

ಚೆನ್ನಾಗಿ ಸಾಕಿದ ಮಣಕ(ಪಡ್ಡೆ) ೧೨ ರಿಂದ ೧೬ ತಿಂಗಳ ಒಳಗಾಗಿ ಬೆದೆಗೆ ಬರಬಹುದು. ಮೊದಲಿನ ೨-೩ ಬೆದೆಯನ್ನು ಬಿಟ್ಟು ಪಶುವೈದ್ಯರಿಂದ ಗರ್ಭ ಪರೀಕ್ಷೆ ಮಾಡಿಸಬೇಕು. ಗರ್ಭಧಾರಣೆಮಾಡಲು ಸೂಕ್ತವಂದು ವೈದ್ಯರು ಹೇಳಿದ ನಂತರ ಕೃತಕ ಗರ್ಭಧಾರಣೆ ಮಾಡಿಸಬೇಕು. ಇನ್ನು ಮಣಕದ ತೂಕ ಹಾಗೂ ಎತ್ತರದ ಆಧಾರದ ಮೇಲೂ ಸಹ ಗರ್ಭ ಕಟ್ಟಿಸಬಹು‌ದು. ಅಂದರೆ ಮಿಶ್ರತಳಿ ಕರುವಿನ ತೂಕ ಸುಮಾರ ೨೦೦-೨೫೦ ಕಿ. ಗ್ರಾಂ. ಹಾಗೂ ೮ ಅಥವಾ ೧೦ ಅಡಿ ಎತ್ತರವಿರಬೇಕು. ಅಂತಹ ಮಣಕಗಳಿಗೆ ಗರ್ಭಧಾರಣೆ ಮಾಡಿಸಬಹುದು. ಇದಕ್ಕೂ ಕಡಿಮೆ ತೂಕವಿರುವ ಅಥವಾ ಕಡಿಮೆ ತೂಕವಿದ್ದರೆ ಕರು ಹುಟ್ಟಿದ ಮತ್ತು ತಾಯಿ ಸರಿಯಾಗಿ ಬೆಳವಣಿಗೆ ಹೊಂದದೆ ಕರು ಹಾಕುವ ಸಮಯದಲ್ಲಿ ತೊಂದರೆಯಾಗುತ್ತದೆ. ಇದರಿಂದ ಎರಡೂ ಜೀವಿಗಳಿಗೆ ನಷ್ಟ, ಅಲ್ಲದೆ, ಹಾಲಿನ ಇಳುವರಿಯೂ ಕಡಿಮೆ. ಒಟ್ಟಾರೆ ಹೈನುಗಾರಿಕೆ ಲಾಭದಾಯಕವಾಗದೆ ಹೋಗಬಹುದು.

ಕರುಗಳಿಗೆ ಬರುವ ಸಾಮಾನ್ಯ ರೋಗ ಮತ್ತು ಔಷಧೋಪಚಾರ

೧. ಅಜೀರ್ಣ: ಸಾಮಾನ್ಯವಾಗಿ ಕಂಡು ಬರುವ ರೋಗ, ಕರುಳು ತೆಗೆದುಕೊಂಡ ಆಹಾರವು ಸರಿಯಾಗಿ, ಪೂರ್ಣವಾ ಜೀರ್ಣವಾಗದಿದ್ದರೆ ಅದಕ್ಕೆ ಅಜೀರ್ಣವೆಂದು ಕರೆಯುತ್ತಾರೆ. ಇವುಗಳ ಜೀರ್ಣಾಂಗವ್ಯೂಹವು ಬಹಳ ಸೂಕ್ಷ್ಮವಾಗಿರುತ್ತದೆ ಹೆಚ್ಚಾಗಿ, ಅನಿಯಮಿತವಾಗಿ ತಿಂದ ಮೇವು, ಹಾಲು ಕರುವಿನ ಹೊಟ್ಟೆಯಲ್ಲಿ ರಾಸಾಯನಿಕ ಕ್ರಿಯೆ ಹೊಂದಿ ಮೊದಲು ಮೊಸರಿನ ತರಹ ಬದಲಾವಣೆ ಹೊಂದುತ್ತದೆ. ಅನಂತರ ಹಾಲಿನಲ್ಲಿ ಹೆಚ್ಚಿನಾಂಶ ಕೊಬ್ಬು ಇದ್ದರೆ ಅದು ಹೊಟ್ಟೆಯಲ್ಲಿ ಗಟ್ಟಿಯಾಗಿ, ಮೊಸರಿನ ಗಡ್ಡೆಯಂತಾಗುತ್ತದೆ. ಹೊಟ್ಟೆಯ ಒಳಗೆ ಇರುವ ಪಚನ ರಸಗಳು ಸರಿಯಾಗಿ ಆಹಾರವನ್ನು ಜೀರ್ಣಗೊಳಿಸದೆ ಇದ್ದಾಗ ಆಹಾರ ರಕ್ತಗತವಾಗುವಂತೆ ಮಾಡಲು ಅಸಮರ್ಥವಾಗುತ್ತದೆ. ಅಂತಹ ಆಹಾರ ಹೊಟ್ಟೆಯಲ್ಲಿ ಕೊಳೆತು ಕರುವಿಗೆ ಅಜೀರ್ಣವಾಗುತ್ತದೆ. ಭೇದಿಯಾಗುತ್ತದೆ ಹಾಗೂ ಕರು ನಿಶ್ಯಕ್ತಿ ಹೊಂದುತ್ತದೆ.

೨. ಬಿಳಿ ಭೇದಿ: ಕರುಗಳಲ್ಲಿ ಕಂಡುಬರುವ ಇನ್ನೋಂದು ಭಯಂಕರ ಕಾಯಿಲೆ ಬಿಳಿಭೇದಿ. ಕರು ಹಾಕುವ ಸಾಮಾನ್ಯ ಸಗಣಿಗಿಂತ ತೆಳ್ಳಗೆ ನೀರು ನೀರಾಗಿ ಬೆಳ್ಳಗೆ ಉಬ್ಬಿಕೊಳ್ಳುತ್ತದೆ. ಇದಕ್ಕೆ ಬಿಳಿ ಭೇದಿ ಎನ್ನುತ್ತಾರೆ. ಕರು ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಪಚನವಾಗದೆ  ಆಹಾರವು ಕರುಳಿನಲ್ಲಿ ನಿಂತು ಕೊಳೆಯಲಾರಂಭಿಸುವುದರಿಂದ ಭೇದಿಯಾಗುತ್ತದೆ. ಇದಕ್ಕೆ ಕಾರಣ ನೀರು ಅಥವಾ ಮೇವಿನಲ್ಲಿ ಸೇರಿರಬಹುದಾದ ರೋಗಾಣು. ಇದರಿಂದ ಕರುವಿನ ಶರೀರದಲ್ಲಿ ನೀರಿನ ಅಂಶವು ಕಡಿಮೆಯಾಗುತ್ತದೆ. ಇದಕ್ಕೆ ನಿರ್ಜಲೀಕರಣ (dehydration) ಎಂದು ಕರೆಯುತ್ತಾರೆ. ಇದು ತುಂಬಾ ಅಪಾಯಕಾರಿ. ಕಣ್ಣುಗಳು ಕಾಂತೀಹೀನ ಮತ್ತು ಗುಳಿ ಬಿದ್ದಂತೆ ಕಾಣುತ್ತವೆ. ಮೈ ಚರ್ಮ ಒಣಗಿ ಅದರ ಮೈಮೇಲಿನ ಕೂದಲು ಒರಟಾಗಿ ನಿಂತಿರುತ್ತವೆ. ಕರು ಬಹಳ ಅಶಕ್ತವಾಗಿ, ನಿಲ್ಲಲು ಶಕ್ತಿಯಲ್ಲದಂತಾಗಿ ಮಲಗಿರುತ್ತದೆ. ಕೊನೆಗೆ ಸಾಯಲೂಬಹುದು. ತಕ್ಷಣ ಪಶುವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಬೇಕು. ಜೊತೆಗೆ ನೀರಿಗೆ ಉಪ್ಪು, ಸಕ್ಕರೆ ಬೆರೆಸಿ ಸಾಕಷ್ಟು ಕುಡಿಸಬೇಕು. ಗೊಟ್ಟ ಹಾಕಬಾರದು.

೩. ರಕ್ತ ಭೇದಿ ಇಲ್ಲವೇ ಆಮಶಂಕೆ. :ಕರುಗಳಲ್ಲಿ ಆಹಾರ ಇಲ್ಲವೇ ನೀರಿನ ದೋಷದಿಂದ ಕರುವಿನ ಕರುಳಿನಲ್ಲಿ ಹುಣ್ಣುಗಳಾಗಿ ಆಮು ಮತ್ತು ರಕ್ತ ಮಿಶ್ರಿತವಾಗಿ ಭೇದಿ ಆಗುತ್ತದೆ. ಕರು ತಿಂದ ಆಹಾರ ಜೀರ್ಣವಾಗುವುದಿಲ್ಲ. ಸಣ್ಣ ಕರುಳಿನಲ್ಲಿ ಪೌಷ್ಟಿಕಾಂಶಗಳು ಹೀರಿಕೆಯಾಗುವುದಿಲ್ಲ. ಆದುದರಿಂದ ಸೇವಿಸಿಮ ಆಹಾರ ದ್ರವರೂಪದಲ್ಲಿ ಹೊರಬರುತ್ತದೆ. ಭೇದಿ ಜಾಸ್ತಿ ಆಗುತ್ತಿದ್ದಂತೆ ದೇಹದಲ್ಲಿ ನೀರಿನಂಶವೇ ಕಡಿಮೆಯಾಗಿ ಪ್ರಾಣಾಪಾಯವಾಗುವ ಸಾಧ್ಯತೆ ಉಂಟು. ಕ್ರಿಮಿಗಳ ಸೋಂಕಿನಿಂದಾಗಿ ಕರುವಿಗೆ ಜ್ವರ ಬರುತ್ತದೆ. ಕರುಗಳ ರಕ್ತ ಕ್ಷೀಣವಾಗಿ ಬಹಳ ದುರ್ಬಲವಾಗುತ್ತದೆ. ಕರುಗಳು ಸಾಯಲೂಬಹುದು. ತಕ್ಷಣ ಪಶುವೈದ್ಯರಿಗೆ ತೋರಿಸಿ ಚಿಕಿತ್ಸೆ ಮಾಡಿಸಬೇಕು.

ಕರುಗಳ ಕೀಲುಬಾವು: ಕೆಲವು ಸಂದರ್ಭಗಳಲ್ಲಿ ಸೂಕ್ಷ್ಮ ರೋಗಾಣುಗಳು ಮೊಣಕಾಲು ಕೀಲುಗಳಲ್ಲಿ ಜೀವಕೋಶಗಳಲ್ಲಿ ಸೇರಿ ಅಲ್ಲಿ ಬಾವು ನೋವು ಉಂಟು ಮಾಡುತ್ತವೆ. ಕೀಲುಗಳ ಒಳಪದರು ಸೋಂಕು ತಗುಲಿ ಊದಿಕೊಳ್ಳುತ್ತದೆ. ಕರುಗಳ ಚಲನೆಗೆ ಕಷ್ಟವಾಗುತ್ತದೆ. ಇದಕ್ಕೆ ಕೀಲುಬಾವು ರೋಗ ಎನ್ನುತ್ತಾರೆ. ಇದರಲ್ಲಿ ವಿಪರೀತ ಜ್ವರ ಬಂದು ಕೀಲುಗಳ ಹತ್ತಿರ ಬಾವು ಕಾಣಿಸಿಕೊಳ್ಳುತ್ತದೆ. ಕರುಗಳು ಸರಿಯಾಗಿ ನಡೆಯಲು ಮತ್ತು ಕಾಲುಗಳನ್ನು ಮೆಡಿಚಲು ಆಗುವುದಿಲ್ಲ. ಕುಂಟುತ್ತಾ ನಡೆಯುತ್ತವೆ. ಅಲಕ್ಷ್ಯ ಮಾಡದೇ ಪಶುವೈದ್ಯರಿಂದ ಚಿಕಿತ್ಸೆ ಮಾಡಿಸಬೇಕು. ಬಾವು ಬಂದ ಜಾಗಕ್ಕೆ ಅಯೋಡಿನ್ ಮುಲಾಮು ಇಲ್ಲವೇ ಟರ್ಪಂಟೈನ್ ಆಯಿಂಟ್ ಮೆಂಟ್ (ಮುಲಾಮು) ಹಚ್ಚಿ ತಿಕ್ಕಬೇಕು.

ರೋಗ ನಿಯಂತ್ರಣ ಕ್ರಮಗಳು

೧. ಕರುವಿಗೆ ೩ ತಿಂಗಳ ಒಳಗಾಗಿ ಕಾಲುಬಾಯಿ ಲಸಿಕೆ ಕೊಡಿಸಬೇಕು. ನಾಲ್ಕು ತಿಂಗಳ ನಂತರ ಮತ್ತೊಮ್ಮೆ, ಅದಾದ ನಂತರ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು.

೨. ಇತರ ರೋಗಗಳಾದ ಗಂಟಲು ಬೇನೆ, ಚಪ್ಪೆರೋಗದ ಲಸಿಕೆಗಳನ್ನು ಕರು ಆರು ತಿಂಗಳಾಗಿದ್ದಾಗ ಪ್ರಾರಂಭಿಸಿ ನಂತರ ತಪ್ಪದೇ ಪ್ರತಿ ವರ್ಷಕ್ಕೊಮ್ಮೆ ಮಳೆಗಾಲ ಪ್ರಾರಂಭವಾಗುವ ಮುಂಚೆ ಕೊಡಿಸಬೇಕು.

೩. ಹೊರ ಪರಾವಲಂಬಿ ಜೀವಿಗಳಾದ ಹೇನು, ಉಣ್ಣೆ ಚಿಕ್ಕಾಡು ಇತ್ಯಾದಿಗಳ ಬಗ್ಗೆ ನಿಯಂತ್ರಣ ಕ್ರಮಗಳನ್ನು ಕಾಲ ಕಾಲಕ್ಕೆ ತೆಗೆದುಕೊಳ್ಳಬೇಕು. ಕೊಟ್ಟಿಗೆಯನ್ನು ಸ್ವಚ್ಛವಾಗಿ ಇಟ್ಟು ಗಾಳಿ ಬೆಳಕು ಬರುವಂತೆ ಇರಬೇಕು.

೪. ಕರುಗಳ  ಹೊಟ್ಟೆಯಲ್ಲಿ ಸಾಮಾನ್ಯವಾಗಿ ವಿವಿಧ ರೀತಿಯ ಜಂತು ಹುಳುಗಳು ಇರುತ್ತವೆ. ಆದ್ದರಿಂದ ಕಾಲ ಕಾಲಕ್ಕೆ ಜಂತುಗಳ ವಿರುದ್ಧ ಔಷಧಿ ನೀಡಬೇಕು.

ಕರುಗಳನ್ನು ಮಕ್ಕಳ ರೀತಿ ಪಾಲನೆ ಪೋಷಣೆ ಮಾಡಿದಲ್ಲಿ ಇಂದಿನ ಕರು ನಾಳಿನ ಹಸುವಾಗಿ ಹೈನುಗಾರಿಕೆಯಲ್ಲಿ ಹಾಲಿನ ವೃದ್ಧಿಯಾಗಿ ರೈತನ ಆರ್ಥಿಕ ಮಟ್ಟ ಸುಧಾರಣೆ ಆಗುವುದು. ಅಲ್ಲದೇ ದೇಶದ ಉನ್ನತಿಗೆ ಹಾಗೂ ಆರೋಗ್ಯವಂತ ಮಕ್ಕಳನ್ನು ಬೆಳೆಸುವುದರಲ್ಲಿ ಸಹಾಯವಾಗುವುದು.