ಕಾಜಿನುಂಡೆ ಬಾರೇ ಕಡಗಲ ಮಚ್ಚೆ ಬಾರೆ
ನಾಗ ಚಿಕ್ಕವನ ಸೊಸೆ ಬಾರೆ-ಸುವ್ವಿ
ನಾಗ ಚಿಕ್ಕವನ ಸೊಸೆ ಬಾರೆಯೆಂದ್ಹೇಳಿ
ಬಾರೆಂದು ವಚನ ನುಡಿದಳೆ-ಸುವ್ವಿ

ಬಣ್ಣದುಂಡೆ ಬಾರೇ ಚಿನ್ನದ ಮೊಗ್ಗೆ ಬಾರೇ
ನಾಗ ಚಿಕ್ಕವನ ಸೊಸೆಬಾರೆ-ಸುವ್ವಿ
ನಾಗ ಚಿಕ್ಕವನ ಸೊಸೆಬಾರೆಯೆಂದ್ದೇಳಿ
ಬಾರೆಂದು ವಚನ ನುಡಿದಳೆ-ಸುವ್ವಿ

ಒಂದೆಂಬ ತಿಂಗಳು ತುಂಬಿತು ಕವುಲವ್ವಗೆ
ಒಂದೆಲಗುಂದೇ ಮನೆಮಾರೆ-ಸುವ್ವಿ
ಎರಡೆಂಬ ತಿಂಗಳು ತುಂಬಿತು ಕವುಲವ್ವನೆ
ಎರಡೆಲಗುಂಡೇ ಮನೆಮಾರೆ-ಸುವ್ವಿ

ಮೂರೆಂಬ ತಿಂಗಳು ತುಂಬಿತು ಕವುಲವ್ವಗೆ
ಮೂರೆಲಗುಂಡೇ ಮನೆಮಾರೆ-ಸುವ್ವಿ
ನಾಕೆಂಬ ತಿಂಗಳು ತುಂಬಿತು ಕವುಲವ್ವಗೆ
ನಾಕೆಲಗುಂಡೇ ಮನೆಮಾರೆ-ಸುವ್ವಿ

ಐದೆಂಬಾ ತಿಂಗಳು ತುಂಬಿತು ಕವುಲವ್ವಗೆ
ಐದೆಲಗುಂಡೇ ಮನೆಯಮಾರೆ-ಸುವ್ವಿ
ಆರೆಂಬ ತಿಂಗಳು ತುಂಬಿತು ಕವುಲವ್ವಗೆ
ಅರೆಲಗುಂಡೇ ಮನೆಮಾರೆ-ಸುವ್ವಿ
ಏಳೆಂಬಾ ತಿಂಗಳು ತುಂಬಿತು ಕವುಲವ್ವಗೆ
ಏಳಲಗುಂಡೇ ಮನೆಮಾರೆ-ಸುವ್ವಿ
ಎಂಟೆಂಬ ತಿಂಗಳು ತುಂಬಿತು ಕವುಲವ್ವಗೆ
ಎಂಟೆಲಗುಂಡೇ ಮನೆಮಾರೆ-ಸುವ್ವಿ

ಒಂಬತ್ತೆಂಬ ತಿಂಗಳು ತುಂಬಿತು ಕವುಲವ್ವಗೆ
ಜನಿಸ್ಯಾಳೆ ಗಂಡ ಕೊಮರನ-ಸುವ್ವಿ

ಕುರುವನೇ ಬಿಟ್ಟಳು ಮುರುವನೇ ಹಾಕ್ಯಾಳು
ಚಿಟಿ ಚಿಟಿ ಈಗ ಒದಿತಾಳೆ-ಸುವ್ವಿ

ಒಟ್ಟು ಒಂದೇ ಮಾತ ಕೇಳಲು ಮನೆವೊಡತಿ
ಹಿಡಿದ ಚೆಂಬಲ್ಲೇ ಕುಟ್ಯಾಳು-ಸುವ್ವಿ
ಹೋದಲ್ಲಿ ಹವಳೆತ್ತಿ ಬಂದಲ್ಲಿ ಬೂತ್ಹೊಡೆಲಿ
ಹೋದಲ್ಲಿ ನಿನ್ನ ಹುಲಿ ತಿನ್ಲಿ-ಸುವ್ವಿ

ಆರು ಸುತ್ತಿನ ಕೋಟೆ ಏಳು ಸುತ್ತಿನ ಬೇಲಿ
ಒಂದೇ ಜಿಗಿತಕ್ಕೆ ಜಿಗಿದಳು-ಸುವ್ವಿ
ಉದ್ದುದ್ದ ಹುಲ್ಲಿನಾಗ ಬಗ್ಗಿ-ಬಗ್ಗಿ ಮೇಯ್ವಾಗ
ಕಿಗ್ಗಣ್ಣಲ್ಲಿ ಕಂಡ ಹುಲಿರಾಯ-ಸುವ್ವಿ

ಯಾರಲ್ಲಿ ಸಿರಿಕವುಲಿ ಕೇಳಿಲ್ಲಿ ನನ್ನ ಮಾತ
ನಿನ್ನ ನಾನೀಗ ತಿನಬೇಕು-ಸುವ್ವಿ
ತಿನ್ನೋದಾದರೆ ತಿನಬಹುದು ಉಣ್ಣೋದಾದರೆ ಉಣಬಹುದು
ಕಂದಗೆ ಮೊಲೆಯ ಕೊಡಲಿಲ್ಲ-ಸುವ್ವಿ

ನಿನ್ನಾವ ಮಾತೇನು ನನಗೆ ಬರ್ವಾಸಿಲ್ಲ
ಈಗ ಕೊಡಬೇಕೇ ಜಾಮೀನು-ಸುವ್ವಿ
ಅಡವಿ ಹುಲ್ಲೆ ಸಾಕಿ ಗಿಡವೆ ಮರವೇ ಸಾಕಿ
ನಾ ಸಾಕಿ ನಿನ್ನ ಮನಸಾಕಿ-ಸುವ್ವಿ

ನಿನ್ನಾದ ಮಾತೇನು ನನಗೆ ಬರ್ವಾಸಿಲ್ಲ
ಈಗ ಕೊಡಬೇಕೇ ಜಾಮೀನು-ಸುವ್ವಿ
ಅಡವಿ ಹುಲ್ಲೇ ಸಾಕಿ ಗಿಡವೆ ಮರವೇ ಸಾಕಿ
ನಾ ಸಾಕಿ ನನ್ನ ಮನಸಾಕಿ-ಸುವ್ವಿ

ಕಂದಾಗೆ ಮೊಲೆಕೊಟ್ಟು ನಿಲ್ಲದೆ ಬರುವೇನೂ
ಸತ್ಯವೇ ಶಿವನು ಶಿವನಾಣೆ-ಸುವ್ವಿ
ಒಟ್ಟು ಒಂದೇ ಮಾತ ಹೇಳಲು ಸಿರಿಕವುಲಿ
ಹೋಗಿ ಬಾರೆಂದಾ ಹುಲಿರಾಯ-ಸುವ್ವಿ

ಆರು ಸುತ್ತಿನ ಕೋಟೆ ಏಳು ಸುತ್ತಿನ ಬೇಲಿ
ಒಂದೇ ಜಿಗಿತಕ್ಕೆ ಜಿಗಿದಾಳೆ-ಸುವ್ವಿ
ಒಂದೇ ಜಿಗಿತಕ್ಕೆ ಜಿಗಿದಾಳೆ ಸಿರಿಕವುಲಿ
ತನ್ನರಮನೆಗೇ ನಡೆದಳೆ-ಸುವ್ವಿ

ಯಾರಲ್ಲೋ ಬಸವಯ್ಯ ಕೇಳಲೋ ನನ್ನ ಮಾತ
ಇಂದಿನ ಪಾಲ ಕುಡಿಮಗನೆ-ಸುವ್ವಿ
ಇಂದಿನ ಹಾಲ ಬೇಗನೀ ಕುಡಿ ಮಗನೆ
ನಾಳೆ ನನ್ನಾಸೆ ಮರೆಮಗನೆ-ಸುವ್ವಿ

ನನ್ನ ಬಿಟ್ಟೆಲ್ಲಿಗೂ ನೀನೀಗ ಹೋಗ್ಬೇಡ
ನಿನ್ನ ಬಿಟ್ಟೀಗ ಗತಿಯಾರು-ಸುವ್ವಿ
ನಿನ್ನ ಬಿಟ್ಟೆನಗೆ ಗತಿಯಿಲ್ಲವದರಿಂದ
ನಿನ್ನ ಹಿಂಬಾಲ ಬರತೀನೊ-ಸುವ್ವಿ

ಮಾತು ತಪ್ಪಲುಬಾರ್ದು ನಾನು ಹೋಗಲೇಬೇಕು
ಹುಲಿಗೆ ನಾ ತಪ್ಪಿ ಇರಬಾರ್ದು-ಸುವ್ವಿ
ಇಂದಿನ ಹಾಲ ಬೇಗನೆ ಕುಡಿಮಗನೆ
ನಾಳೆ ನನ್ನಾಸೆ ಮರಿ ಮಗನೆ-ಸುವ್ವಿ

ಬೆಟ್ಟದ ಹುಲ್ಲಿಗೆ ಮುಂದೆ ಮುಂದೆ ಹೋಗ್ಬೇಡ
ಹಿಂದ ನೀನೀಗ ಇರಬೇಡ-ಸುವ್ವಿ
ಹಿಂದೆ ನೀನೀಗ ಇರಬೇಡ ಎಲೊ ಮಗನೆ
ನಡು ಮಧ್ಯದಲ್ಲಿ ಮೇಯೊ ಮಗನೆ-ಸುವ್ವಿ

ಒಟ್ಟು ಒಂದೇ ಮಾತ ಹೇಳಿತು ಸಿರಿಕವುಲಿ
ಮಗನೆ ನಾನೀಗ ಬರುತೀನೊ-ಸುವ್ವಿ
ಈಗ ನಾ ಬರ್ತೇನೆ ಎಂದ್ದೇಳಿ ಸಿರಿಕವುಲಿ
ಮೇಯೊ ತಾವಾಗ ನಡೆದಳೊ-ಸುವ್ವಿ

ಆರು ಸುತ್ತಿನ ಕೋಟೆ ಏಳು ಸುತ್ತಿನ ಬೇಲಿ
ಒಂದೇ ಜಿಗಿತಕ್ಕೆ ಜಿಗಿದಳು-ಸುವ್ವಿ
ಕೊಟ್ಟಿರ್ವ ಮಾತಿಗೆ ತಪ್ಪಲಿಲ್ಲ ಎನ್ನುತ್ತ
ಹುಲಿಯ ಹತ್ತಿರಕೆ ಬಂದಳೆ-ಸುವ್ವಿ

ಕೊಟ್ಟಿದ್ದ ಮಾತಿಗೆ ತಪ್ದಾಂಗೆ ಬಂದಿದಿ
ನಿನ್ನಾ ನಾನೀಗ ತಿನ್ನೋದಿಲ್ಲ-ಸುವ್ವಿ
ನಿನ್ನ ನಾನೀಗ ತಿನ್ನೋದಿಲ್ಲವೆನ್ನಲು
ತನ್ನರಮನೆಗೆ ನಡೆದಳು-ಸುವ್ವಿ

 

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು

೧) ಗೋಪ್ಯಮ್ಮ; ಕರಾ.ಕೃ, ಹಣತಿ ಉರಿಯುತಿದೆ, ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು ೧೯೬೩.

೨) ಆಕಳ ಹಾಡು, ಕಾಪಸೆ ರೇವಪ್ಪ, ಮಲ್ಲಿಗೆ ದಂಡೆ ಸಮಾಜ ಪುಸ್ತಕಾಲಯ, ಧಾರವಾಡ, ೧೯೭೦ ಪು.ಸಂ. ೩೪-೩೮.

೩) ಗೋವಿನಹಾಡು; ಐತಾಳ ಶಿವರಾಮ ಕೆ. ದಕ್ಷಿಣ ಕನ್ನಡದ ಜನಪದ ಸಾಹಿತ್ಯ, ಶಾರದಾಮಂದಿರ ಮೈಸೂರು, ೧೯೭೧ ಪು.ಸಂ. ೧೮-೨೭.

೪) ಕೌವಲಿದನ; ಕೆದ್ಲಾಯ ಸುಬ್ರಹ್ಮಣ್ಯ ಕುಂಜಿಬೆಟ್ಟು, ಹಾಡಿಗೆ ಹನ್ನೆರಡು ಕಬರು. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩ ಪು.ಸಂ. ೩೨-೪೨.

೫) ಆಕಳಪದ; ಖಾಡೆ ಜಿ.ಬಿ. ಕಾಡು ಹೂಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩.

೬) ಗೋಪ್ಯಮ್ಮ; ಮತಿಘಟ್ಟ ಕೃಷ್ಣಮೂರ್ತಿ, ಕನ್ನಡ ಜನಪದ ಸಾಹಿತ್ಯ ಭಂಡಾರ. ಗುರುಮೂರ್ತಿ ಪ್ರಕಾಶನ, ಬೆಂಗಳೂರು, ೧೯೭೫ ಪು.ಸಂ. ೨೨೫-೨೨೬.

೭) ಸಿರಿಕವುಲಿ; ಹಿರಿಯಣ್ಣ ಅಂಬಳಿಕೆ, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೬ ಪು.ಸಂ. ೯೧-೯೩.

೮) ಆಕಳಲೀಲಾ; ಹೆಗಡೆ ಎಲ್.ಆರ್. ಮುಕರಿ ಮತ್ತು ಹೊಲೆಯರ ಪದಗಳು, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೯ ಪು.ಸಂ. ೧೫೨-೧೫೩.

೯) ಗೋಪವ್ವನ ಪದ; ಕೃಷ್ಣಯ್ಯ ಎಸ್.ಎ. ಬಾಚಿಗೊಂಡನಹಳ್ಳಿ ಮತ್ತು ಏಣಗಿ ಬಸಾಪುರದ ಜನಪದ ಗೀತೆಗಳು, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ ೧೯೯೨, ಪು.ಸಂ. ೧೫೩-೧೫೫.

೧೦) ಚಿರ‍್ಕವ್ಲಿ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭ ಪು.ಸಂ. ೧೭೧-೧೭೪.

೧೧) ಸಿರ‍್ಕವ್ಲಿ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭, ಪು.ಸಂ. ೧೭೫-೧೭೯.

೧೨) ಹುಲಿಕವ್ಲಿ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭ ಪು.ಸಂ. ೧೮೦-೧೮೩.

೧೩) ಹುಲಿಕವ್ಲಿ ಹಾಡು; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭ ಪು.ಸಂ. ೧೮೪-೧೮೭.

೧೪) ಗೋವಿನಹಾಡು; ಹನೂರು ಕೃಷ್ಣಮೂರ್ತಿ, ಜನಪದ ಮತ್ತು ಬುಡಕಟ್ಟು ಗೀತೆಗಳು, ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೮, ಪು.ಸಂ. ೧೬೦-೧೭೭.

೧೫) ಗೋಪಿತಾಯಿ ಹಾಡು; ನಾವಲಗಿ ಸಿ. ಕೆ. ಮತ್ತು ಶಕುಂತಲ ಚನ್ನಬಸವ, ಕಥನಗೀತ ಸಂಚಯ ಕನಕ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು ೨೦೦೨ ಪು.ಸಂ. ೨೬-೨೭.*      ಕವುಲಿಹಾಡು; ಕೇಶವಭಟ್ ಟಿ. ಹಾಡಿನ ಚೂಡಾಮಣಿ, ಚಿರ ಪ್ರಕಾಶನ, ಬೆಂಗಳೂರು, ೧೯೭೧ ಪು.ಸಂ. ೧೯೫-೧೯೮.