ರಾಗ ಭೈರವಿ ಏಕತಾಳ

ಬಿಡು ಭಗಿನಿಯೆ ದುಗುಡವನು | ಬಡ | ಹುಡುಗನಿಂದ ಭಂಗವನು ||
ಪಡಿಸಿದ ನಿರ್ಜರ ಕುಲವ | ಸದೆ | ಬಡಿದಾಳುವೆ ಸುರಪುರವ ||೬೨||

ಹರಿಹರ ಬ್ರಹ್ಮಾದಿಗಳ | ತ | ನ್ನರಸಿ ಸಹಿತ ಸುರಪಾಲ ||
ಮರೆಹೊಕ್ಕರು ಎಳೆತಂದು | ನಾ | ವರಿಸದೆ ಬಿಡೆನೆಂದೆಂದು ||೬೩||

ವಿರಚಿಸಿ ಮಂತ್ರೌಷಧವ | ನೀ | ನಿರು ಎಂದಟ್ಟುತ ಬಲವ ||
ನೆರಹಿಸುತಿರೆ ಮುರ ಬಂದು | ಪದ | ಕೆರಗುತ ಪೇಳಿದನಂದು ||೬೪||

ರಾಗ ಭೈರವಿ ಅಷ್ಟತಾಳ

ವಿಪರೀತವೇನೆಮಗೆ | ಬಂತಿಂದು ನೀ | ಕುಪಿತನಾಗುತ್ತ ಹೀಗೆ ||
ಅಪರಿಮಿತದ ಸೇವೆ ನೆರಹಲೇತರ ಕಾರ್ಯ | ಕೃಪೆಯಿಂದ ಪೇಳೆನಗೆ ||೬೫||

ಸುರಮುನಿ ಪೇಳ್ದಂದದಿ | ಶಚಿಯ ಕರೆ | ತರಲು ಭಗಿನಿ ಶೀಘ್ರದಿ ||
ತೆರಳುತ್ತ ಕರವಿಕ್ಕೆ ತುಂಡರಿಸಿದ ನಿರ್ಜ | ರರ ನಿಲಗೊಡೆಕ್ಷಣದಿ ||೬೬||

ಇನಿತಾಯ್ತೆ ಕಾರ್ಯಗಳು | ದಿವಿಜರೆಮ | ಗನುಚರರಾಗಿರಲು ||
ಬಿನುಗರ ದಂಡಿಸದುಳಿವುಡೆ ಬಿಡೆ ನಾನು | ರಣಕೆ ನಿನ್ನೊತ್ತಿನೊಳು ||೬೭||

ಕಂದ

ನುಡಿಯಿಂದುಬ್ಬುತ ನರಕಂ |
ಪೊಡವಿಯು ನಡನಡುಗುವಂತೆ ಮಾರ್ಬಲ ಸಹಿತಂ ||
ನಡೆತರೆ ನಾಕಕೆ ಪರಿಕಿಸಿ |
ಕಡು ತವಕದಿ ಸುರವರಂಗೆ ಚರರಿಂತೆಂದರ್ ||೬೮||