ವಾರ್ಧಿಕ

ಗುರುಗಣಪ ಹರಿಹರಬ್ರಹ್ಮ ಸಿರಿವಾಗ್ದೇವಿ |
ಗಿರಿಜೆ ಗುಹಸುರಪ ಮುಖ್ಯರ ಸ್ಮರಿಸಿ ಭಕ್ತಿಯಿಂ |
ಹಿರಿಯರಿಗೆ ಮುನಿಗಳಿಗೆ ಕವಿಗಳಿಗೆ ಪೊಡಮಟ್ಟು ಸಜ್ಜನರ ಕೊಂಡಾಡುತ ||
ತರುಣಿ ಭಾಮಾದೇವಿ ಸಹಿತಲಾ ಶ್ರೀವರಂ |
ಮುರನರಕರಂ ಸದೆದು ತೆರಳಿದಿವದಿಂದಿಳೆಗೆ |
ವರಮಹಾ ಪಾರಿಜಾತವ ತರುವ ತಂದ ಕಥೆ ಯಕ್ಷಗಾನದಿ ಪೇಳ್ವೆನು ||೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭೂಮಿಪಾಲ ಪರೀಕ್ಷಿತಗೆ ಸು |
ಪ್ರೇಮದಿಂ ಭಾಗವತ ಚರಿತೆಯ |
ಆ ಮಹಾಶುಕಯೋಗಿ ವಿವರಿಸ | ಲಾ ಮಹೀಶ ||೨||

ಕೇಳಿದನು ಕೈಮುಗಿದು ನರಕನ |
ಶ್ರೀಲಲಾಮನು ಭಾಮೆ ಸಹಿತಲಿ |
ಕಾಳಗದಿ ಹತಗೆಯ್ದು ಮುಕ್ತಿಯ | ಪಾಲಿಸುತಲಿ ||೩||

ಸಾರಿ ನಾಕಕೆ ವನದಿ ಶೋಭಿಪ |
ಪಾರಿಜಾತ ಮಹಾತರುವ ಈ |
ಧಾರಿಣಿಗೆ ಯಿಳಿಸಿರುವ ಕಥೆ ವಿ | ಸ್ತಾರಮಾಗಿ ||೪||

ಎನಗರುಹ ಬೇಕೆನುತ ಎರಗಿದ |
ಜನಪನನು ತಕ್ಕೈಸಿ ಸತ್ಕಥೆ |
ವನಜನಾಭನ ನೆನೆದು ಪೇಳಿದ | ವಿನಯದಿಂದ ||೫||

ವಾರ್ಧಕ

ಧರಣೀಶ ಕೇಳು ತ್ರೈಮೂರ್ತಿಗಳ ಒಲುಮೆಯಿಂ |
ಸುರಪ ದಿವವಾಳುತಿರಲತ್ರಿಜನ ಶಾಪದಿಂ |
ಶರಧಿ ಪಾಲಾಗಲಾ ಸೌಭಾಗ್ಯ ಸುರರಸುರರೊಂದಾಗಿ ಜಲಧಿ ಮಥಿಸೆ ||
ದೊರಕಿದುದು ಸಕಲಸಂಪದ ಸುರಭಿ ಕಲ್ಪತರು |
ತುರಗ ಗಜ ಮಂದಾರ ಪಾರಿಜಾತಾದ್ಯಖಿಳ |
ಪರಿಪರಿಯ ವಸ್ತುಗಳ ವಶಗೈದು ಸುಧೆಯುಂಡು ಸುರಪ ಸುಖದಿಂದಿರ್ದನು ||೬||

ರಾಗ ಭೈರವಿ ಝಂಪೆತಾಳ

ವಿಸ್ತರಿಸಲಳವಲ್ಲ | ವೃತ್ರವೈರಿಯ ವಿಭವ
ಸಪ್ತದಿಕ್ಪಾಲಕರು| ಒತ್ತಿನಲಿ ಮೆರೆಯೆ ||೭||

ಗರುಡ ಗಂಧರ್ವ ಯ | ಕ್ಷರು ಮಹಾತಾಪಸರು
ಪರಮ ಧಾರ್ಮಿಕರು ನೆರೆ | ದಿರಲು ಸಂತಸದಿ ||೮||

ರಂಭಾದಿ ಸತಿಯರ ಕ | ದಂಬ ನರ್ತಿಸುತಿರಲು
ಸಂಭ್ರಮದಿ ದಿವಿಜರಿಗೆ | ಜಂಭಾರಿ ಪೇಳ್ದ ||೯||

ಆದಿಯಿಂದಲೆ ವೈರ | ಸಾಧಿಸುತ ದಿತಿಸುತರು
ಹೊದಾಡಿ ಧುರದಿ ಹತ | ವಾದರೆಯು ಜಗದಿ ||೧೦||

ಮುರನರಕರೆಂಬುವರು | ಸರಸಿರುಹಭವನಿಂದ
ವರ ಪಡೆದು ಪೀಡಿಪರು | ಧರೆಯ ಸಜ್ಜನರ ||೧೧||

ಬಾರದುಳಿಯರು ನಾಕ | ಸೂರೆಗೈಯ್ಯಲು ಗೆಲುವ
ದಾರಿಯೇ ನೆನಲು ಸುರ | ವೀರರುಸುರಿದರು ||೧೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧರೆಯಧಿಪರಂ ಗೆಲಿದು ಲೋಕದಿ |
ತರುಣಿಯರ ಸೆರೆಪಿಡಿದು ಬಾಳುವ |
ದುರುಳರಿಗೆ ಸುಖವೆಂದಿಗಾದರು | ದೊರೆಯದಯ್ಯ ||೧೩||

ಏಕೆ ನಾವಳುಕುವುದು ಖಳರಿಗೆ |
ನಾಕ ಪದವಿಯ ಬಯಕೆಯಂತ್ಯಕೆ |
ಸೋಕುವುದು ಹೊರತುಳಿಯುವರೆ ಅವಿ | ವೇಕದಿಂದ ||೧೪||

ಮರಣಬಾರದ ತೆರದಿ ಮೊದಲಿಗೆ |
ಪರಿಪರಿಯ ವರದಿಂದ ಕೊಬ್ಬಿದ |
ದುರುಳರಾರುಳಿದಿಹರು ನೀನದ | ನರಿಯೆ ಏನೈ ||೧೫||

ರಾಗ ಭೈರವಿ ಅಷ್ಟತಾಳ

ಶರಧಿಯ ಮಥನದಲಿ | ರಾಕ್ಷಸರೆಲ್ಲ | ಪರಿಪರಿ ಯತ್ನದಲಿ ||
ಸುರರಿಗೆ ಭಂಗವ ಬರಿಸಿದರೀ ಭಾಗ್ಯ | ದೊರಕಿದುದೆಮಗಂದಿಲಿ ||೧೬||

ನಿರತವು ಹರಿಹರ | ಕೃಪಾರಸ | ವಿರುತಿರೆ ನಿರ್ಜರರ ||
ಧುರದಿ ಗೆಲ್ಲುವರುಂಟೆ | ಬರಲು ನಾಕಕೆ ಯಮ | ಪುರಕಟ್ಟುವೆವು ಖಳರ ||೧೭||

ಅನಿಮಿಷರೆಂಬುದನು | ಕೇಳುತ ತೋಷ | ವನು ತಾಳಿ ಸುರನಾಥನು ||
ವಿನಯದಿ ಮನ್ನಿಸಿ | ಮನದೊಳು ಹರಿಹರ | ರನು ಧ್ಯಾನಿಸುತಿರ್ದನು ||೧೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಪೃಥ್ವಿಯಾತ್ಮಜ ನರಕನೆಂಬವ |
ನಿತ್ತನೋಲಗವಖಿಳ ವಿಭವದಿ |
ಸುತ್ತ ನೆರೆದಿಹ ಭಟರ ಪರಿಕಿಸಿ | ಬಿತ್ತರಿಸಿದ ||೧೯||

ಜನನಿ ಜನಕರು ಹೊರತುಳಿದರಿಂ |
ದೆನಗೆ ಮೃತಿ ಇಲ್ಲೆನುತ ಮೊದಲಿಗೆ |
ವನಜಭವ ವರವಿತ್ತ ಮೇಲತಿ | ಘನತೆಯಿಂದ ||೨೦||

ಧರೆಯಧಿಪರಂ ಗೆಲಿದು ಸೆರೆಯೊಳ |
ಗಿರಿಸಿಹೆನು ಹದಿನಾರು ಸಾವಿರ |
ತರುಣಿಯರ ಒಂದೇ ಮುಹೂರ್ತದಿ | ವರಿಪೆನೆನುತ ||೨೧||

ಭಾಮಿನಿ

ಇಂದು ಪರಿಯಂತರವು ಸತಿಯರ |
ಹೊಂದಿಕೆಗೆ ಶುಭಲಗ್ನ ದೊರೆಯದೆ |
ನಿಂದುದಾ ಘನಕಾರ್ಯವೆನಲಾ ಸಭೆಗೆ ನಾರದನು ||
ಇಂದುಶೇಖರ ಪರಮ ಕರುಣಾ |
ಸಿಂಧು ಸರ್ವೇಶ್ವರ ಸದಾಶಿವ |
ನೆಂದು ವೀಣೆಯ ನುಡಿಸುತಲಿ ನಡೆತಂದ ನಲವಿನಲಿ ||೨೨||

ರಾಗ ಕೇತಾರಗೌಳ ಅಷ್ಟತಾಳ

ಪರಿಕಿಸಿ ಮುನಿಪನ ಕರೆತಂದಾಸನದಿ ಕು |
ಳ್ಳಿರಿಸಿ ಸದ್ಭಕ್ತಿಯಿಂದ ||
ಚರಣಪೂಜೆಯ ಗೈದು ಕರ ಮುಗಿವುತ ಮನ |
ದಿರವಾತಗಿಂತೆಂದನು ||೨೩||

ಪಾವನನಾದೆ ನಿನ್ನಯ ದರ್ಶನದಿ ಗೆದ್ದು |
ಭೂವರರೆಲ್ಲರನು ||
ಭಾವಕಿಯರನು ತಂದಿರಿಸಿದೆ ಶೋಡಷ |
ಸಾವಿರ ಪರಿಣಯಕೆ ||೨೪||

ಒಂದೇ ಮುಹೂರ್ತವು ದೊರೆಯದರಿಂ ಬಲು |
ನೊಂದುಕೊಂಡಿಹೆ ಮನದಿ ||
ಮುಂದಿದರಂ ಪೇಳಿ ನಡೆಸು ನೀನೆನಲಾತ |
ಗೆಂದನಾ ಮುನಿನಾಥನು ||೨೫||

ರಾಗ ಶಂಕರಾಭರಣ ಏಕತಾಳ

ಧಿರುರೇ ಶಾಭಾಸು ನಿನ್ನ | ವೀರತನಕೆ ಎಣೆಯ ಕಾಣೆ |
ಮೂರು ಲೋಕಗಧಿಕ ಭಾಗ್ಯವೇರಿ ನಲಿವುದು ||
ನಾರಿಯರನು ವರಿಪ ದಿನ ವಿ | ಚಾರಿಸುತಲಿ ಪೇಳ್ವೆನದಕೆ |
ತೋರಿ ಬರುವ ಕೊರತೆಯೊಂದೆ ಕಾರಣೀಕನೆ ||೩೬||

ಸೃಷ್ಟಿಗಧಿಕ ನಿನ್ನಾಳ್ತನಕೆ | ಪಟ್ಟದ ರಾಣಿತ್ವಕಾಹ |
ಬಟ್ಟಕುಚೆಯರಿಲ್ಲ ಪೇಳ್ವೆ ಗುಟ್ಟನೊಂದನು ||
ಅಟ್ಟಿ ಸುರಪ ಮುಖ್ಯಾಮರರ | ಥಟ್ಟನೇ ನೀ ಶಚಿಯ ತರಲು |
ಅಷ್ಟಭಾಗ್ಯ ಶೋಭಿಸುವುದು ಕಷ್ಟವಲ್ಲದು ||೨೭||

ರಾಗ ಭೈರವಿ ಏಕತಾಳ

ಅರಿಯೆ ಇನಿತು ದಿನ ಜೀಯ | ನೀ |
ನರುಹಿದೆ ಲೋಕದ ನ್ಯಾಯ ||
ಸುರಪ ಷಂಡನಾಕೆಯನು | ಆ |
ಳಿರುವುದರಿಂ ಫಲವೇನು ||೨೮||

ಧರಣಿಯೊಳಿಹ ಚೆಲುವೆಯರ | ತಂ |
ದಿರಿಸಿಹೆ ಬಡ ನಿರ್ಜರರ ||
ತರುಣಿಯ ತಹೆ ಲಗ್ನವನು | ಬಂ |
ದರುಹು ಎನುತ ಕಳುಹಿದನು ||೨೯||

ಕಂದ

ನೆರಹುತ ಸೇನಾ ಶರಧಿಯ |
ತೆರಳುವೆನತಿ ತ್ವರಿಯದಿಂದ ನಾಕಕೆನುತ ನಿಂ ||
ದಿರಲನುಜೆಯು ನಡೆತರುತಲಿ |
ಹಿರಿಯಂಗಭಿವಂದಿಸುತ್ತ ಬಳಿಕಿಂತೆಂದಳ್ ||೩೦||

ರಾಗ ಕೇದಾರಗೌಳ ಝಂಪೆತಾಳ

ಏನಿದಾಶ್ಚರ್ಯವಯ್ಯ | ಮನದೊಳ | ತ್ಯಾನಂದದಲಿ ಸೇನೆಯ ||
ನೀ ನೆರಹಿ ಪೊರಡಲೇನು | ಹದನವಿದ | ನಾನರಿಯೆ ಎನಲೆಂದನು ||೩೧||

ತಂದಿರ್ಪ ಸತಿಯರಲ್ಲಿ | ಪಟ್ಟಕೆಣೆ | ಹೊಂದಿಹಳ ಕಾಣೆ ತೆರಳಿ ||
ಇಂದ್ರನರಸಿಯಳ ತರಲು | ಶುಭಲಗ್ನ | ಬಂದೊರೆವನೆನುತೆನ್ನೊಳು ||೩೨||

ಸುರಮುನಿಪ ಪೇಳ್ದನದಕೆ | ತೆರಳುವೆನು | ತ್ವರಿಯದಿಂದಲಿ ನಾಕಕೆ ||
ಪೊರಡುವಾನಂದವೆನಲು | ಉಬ್ಬುತಲಿ | ದುರುಳೆ ಪೇಳಿದಳವನೊಳು ||೩೩||

ರಾಗ ಮುಖಾರಿ ಏಕತಾಳ

ಸುಲಭದಿಂದಲಿ ಸಾಗದಯ್ಯ | ನೀ ಪೋದಡೀ ಕಾರ‍್ಯ |
ಸುಲಭದಿಂದಲಿ ಸಾಗದಯ್ಯ ||
ತಿಳಿದಿದರನು ಬರ್ದಿಲರು ಮುಳಿದು ಕೊಳು |
ಗುಳ ಗೈದರೆ ಬಲು ಬಳಲಿಕೆಯಪ್ಪುದು ||೩೪||

ಕಡು ತವಕದಿ ಉಗುರಿಂದ | ಚಿಗುಟುವಂಥಾದಕ್ಕೆ |
ಕೊಡಲಿ ಕೊಳ್ಳುವುದೇನಾನಂದ ||
ಕೊಡು ಎನಗಾಜ್ಞೆಯ ಬಿಡುಗಣ್ಣರ ದೃಢ |
ಕೆಡಿಸಿ ಮಾಯೆಯಿಂ ಪಿಡಿದೊಪ್ಪಿಪೆ ನಾ ||೩೫||

ಭಾಮಿನಿ

ಕೇಳುತಾಲೋಚಿಸಿದ ತಾನೇ |
ಮೇಲುವರಿದರೆ ಮುನಿದು ನಿರ್ಜರ |
ಪಾಳಯವು ಧುರವೆಸಗಿದರೆ ದೆಸೆಗೆಡಿಸುತೆಲ್ಲರನು ||
ಲೋಲನೇತ್ರೆಯ ವಶಪಡಿಸೆಬಲು |
ಕಾಲವಪ್ಪುದು ಮಾಯೆಯಿಂ ತಹ |
ಊಳಿಗವು ಸೊಗಸೆನುತಲಾಜ್ಞೆಯನಿತ್ತು ಬೀಳ್ಗೊಟ್ಟ ||೩೬||

ರಾಗ ದೇಶಿ ಅಷ್ಟತಾಳ

ಪೊರಟಳಾಕ್ಷಣ ಶಚಿಯ ಯತ್ನದಿ ತಂದು |
ಹಿರಿಯಗೊಪ್ಪಿಸೆ ಮುಂದೆ ತನ್ನನು | ಸರಸಗೊಳಿಸುವನೆನುತಲಿ ||೩೭||

ಸಾರಿ ಬೇಗದೊಳೋರ್ವರರಿಯದಂತೆ |
ಏರಿ ನಾಕಕೆ ಗುಪ್ತದಿಂದಲಿ | ಕೇರಿಯೊಳು ನಡೆತಂದಳು ||೩೮||

ವಾರ್ಧಕ

ಭೂತಳಾಧಿಪ ಲಾಲಿಸಂದು ಬೇಸರದಿ ಸುರ |
ನಾಥನರಸಿಯು ನಂದನವ ಚರಿಪೆನೆನುತ ಸತಿ |
ವ್ರಾತದೊಡನೈತಂದು ಜಲಕೇಳಿಯಾಡಿ ಉದ್ಯಾನವನು ಸಂಚರಿಸುತ ||
ಜಾತಿ ಜಾತಿಯ ಸುಮಗಳರಸಿ ಕೊಯ್ಯುವದೆಂದು |
ದೂತಿಯರ ಕಳುಹುತ್ತಲೋರ್ವಳೊಂದೆಡೆ ಕುಳಿತು |
ನೂತನದೊಳೆಸೆವ ಸೊಬಗುಗಳ ನೋಡುತ ಸರಸ ಪಡುತೀರ್ದಳೇನೆಂಬೆನು ||೩೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತಲಾ ದಾನವಿಯು ಹಲವೆಡೆ |
ಸುತ್ತಿ ಶಚಿಯನ್ನರಸಿ ಕಾಣದೆ |
ಮತ್ತೆ ಅಂತಃಪುರವ ಶೋಧಿಸೆ | ಕೃತ್ರಿಮದಲಿ ||೪೦||

ಕುರುಹ ತಿಳಿಯದೆ ಮನದೊಳರಿತಳು |
ತೆರಳಿಹಳೊ ನಂದನಕೆನುತ್ತಲಿ |
ತ್ವರಿತದಿಂ ನಡೆತಂದು ದೂರದಿ | ಪರಿಕಿಸುತಲಿ ||೪೧||

ತೂಗಿದಳು ಮಸ್ತಕವ ಮತ್ತೀ |
ನಾಗವೇಣಿಯ ವರಸುವಡೆ ಶತ |
ಯಾಗನೇತರ ಸುಕೃತ ಪೂರ್ವದಿ | ಸಾಗಿಸಿದನೊ ||೪೨||

ಜಾಲ ಮಾತುಗಳಲ್ಲ ಸುರಮುನಿ |
ಪಾಲ ಪೇಳ್ದುದು ಅಗ್ರಜಂಗನು |
ಕೂಲೆಯಾದರೆ ವೈಭವಂಗಳ | ಪೇಳಲರಿದು ||೪೩||

ಭಾಮಿನಿ

ನಿಶಿಯೊಳಗಣಿತ ತಾರಕಿಗಳಿಂ |
ವಸುಧೆ ಶೋಭಿಪುದುಂಟೆ ಕಾಂತಿಯ |
ಪಸರಿಸುವ ಚಂದ್ರೋದಯದಿ ಸಂತೋಷ ಸಕಲರಿಗೆ |
ಬಿಸಜನೇತ್ರೆಯರೀರ್ಪರಗಣಿತ |
ರೊಸಗೆಯಿಂ ಫಲವಿಲ್ಲ ಈಕೆಯ |
ಕುಶಲದಿಂದೊಪ್ಪಿಸುವೆನೆನುತುಬ್ಬಿದಳು ಮನದೊಳಗೆ ||೪೪||

ಕಂದ

ನುಡಿಸಿದರೀಕೆಯ ಸತಿಯರ |
ಗಡಣವು ನಡೆತಂದರೆನ್ನ ತಡೆವರು ಜವದಿಂ ||
ಪಿಡಿದೊಯ್ಯುವೆನೆನ್ನುತ ಮು |
ನ್ನಡೆಯುತ ಕರವಿಕ್ಕಲಾಗ ರೋದಿಸುತೆಂದಳ್ ||೪೫||

ರಾಗ ನೀಲಾಂಬರಿ ರೂಪಕತಾಳ

ಹರನೇ ಇದೇತರ ಕಷ್ಟವೊ | ತ್ವರಿಯದಿ ನಡೆತಂದೋರ್ವಳು |
ಕರಪಿಡಿದೆಳೆವುತ ಭಂಗವ | ಬರಿಸುವಳಕಟಕಟ ||
ಸುರರುದ್ಯಾನದೊಳೀಪರಿ | ಪರಿಭವವೆಂತಾದುದೊ ಇದ |
ನರಿಯದೆ ಪೋದಿರೆ ಬಿಡಿಸಿರಿ | ತರುಣಿಮಣಿಯರೆಲ್ಲ ||೪೬||

ವೃಂದಾರಕರೇ ಗರುಡರೆ | ಗಂಧರ್ವರೆ ದಿಕ್ಪಾಲರೆ |
ಬಂದೆನ್ನನು ಬಿಡಿಸಿರಿ ತ್ವರೆ | ಯಿಂದಲಿ ದಯವಿರಿಸಿ ||
ಇಂದಿರೆಯರಸನೆ ಕರುಣಾ | ಸಿಂಧು ಮಹೇಶ್ವರನೆನುತಲಿ |
ಇಂದ್ರಾಣಿಯು ಮೊರೆಯಿಟ್ಟಳು | ನಂದನ ವನದೊಳಗೆ ||೪೭||

ಭಾಮಿನಿ

ಮೇಳವಸಿ ಗೆಳೆಯರ ವಿನೋದದ |
ಕಾಲಕಳೆಯುತ್ತಿರೆ ಜಯಂತಗೆ |
ಕೇಳೆ ರೋದನ ನಂದನದಿ ವಿಪರೀತವೇನೆನುತ ||
ಗಾಳಿಯನು ಹಿಂದಿಡುವ ಗಮನದಿ |
ತೋಳಬಲ್ಪಿನ ಸುಭಟ ಬಂದಾ |
ಖೂಳೆಯನು ಜರೆವುತ್ತ ನುಡಿದನು ಸಿಂಹನಾದದಲಿ ||೪೮||

ರಾಗ ನಾದನಾಮಕ್ರಿಯೆ ಅಷ್ಟತಾಳ

ಎಲೆ ಖೂಳೆ ನೀನೇನ ಗೈಯ್ಯುವೆ | ಮಾತೆ | ಯಳ ಸೆಳೆದಿನ್ನೆಲ್ಲಿ ಗೊಯ್ಯುವೆ ||
ಕಳೆದುಕೊಂಬೆಯ ಪ್ರಾಣ ಸುಮ್ಮನೆ | ಬಿಟ್ಟು | ತೊಲಗು ಬಂದಂದದಿ ಗಮ್ಮನೆ ||೪೯||

ಸಾರೆಲೋ ಬಾಲಕನಿಲ್ಲಿಗೆ | ನಿನ್ನ | ನಾರಟ್ಟಿದರು ಮಾರಿಬಾಯಿಗೆ ||
ಸೇರಿದ ಕುರಿಮರಿಯಂದದಿ | ಹುಲು | ಪೋರ ಸಾಯುವೆಯಹಂಕಾರದಿ ||೫೦||

ಕೇಳುವರಿಲ್ಲೆಂಬುದರಿಯೆಯ | ಕಡೆ | ಗಾಲದಕೃತ್ಯವ ಗೈಯ್ವೆಯ ||
ಬಾಳುವೆಯುಂಟೆ ಅನ್ಯಾಯಕೆ | ನಡೆ | ಹಾಳಾಗಬೇಡ ಸಾರಿದೆ ಜೋಕೆ ||೫೧||

ಶಿಶುವಧೆ ಸಲ್ಲದೆಂಬುದರಿಂದ | ನಿನ | ಗುಸುರುವೆ ನಾ ಬಲು ಬಗೆಯಿಂದ ||
ತುಸುಮಾತ್ರದಯವಿಲ್ಲವೆನಗಿಂದು | ನಿನ್ನ | ಅಸುಗೊಂಬೆ ಕೇಳುವರಾರ್ಬಂದು ||೫೨||

ಬೇಡ ಸ್ತ್ರೀಹತ್ಯವೆಂದೆನು ತಲಿ | ಮಾಪು | ಮಾಡಿದೆ ಮುನಿದತೀ ಕ್ಷಣದಲೀ ||
ತೋಡಿ ಕರುಳ ರಕ್ತ ಮಾಂಸದಿ | ಹಬ್ಬ | ಮಾಡುವ ಗಣಗಳ್ಗೆನಿಮುಷದಿ ||೫೩||

ಪರಿಕಿಪೆ ಪೌರುಷವೆನ್ನುತ್ತ | ಮುಂದು | ವರಿಯುವ ದುರುಳೆಯ ಕಾಣುತ್ತ ||
ಕರವೆರಡರನು ತುಂಡರಿಸಿದ | ನಿಜ | ಪುರಕೆ ಶಚಿಯ ಕೂಡಿ ಮರಳಿದ ||೫೪||

ಭಾಮಿನಿ

ಕತ್ತರಿಸಲಾ ಕರವೆರಡರಿಂ |
ರಕ್ತದೋಕುಳಿಯಾಗಲರೆಕ್ಷಣ |
ಪೃಥ್ವಿಗುರುಳುತಲೆದ್ದು ಬಲು ಬಸವಳಿದು ಗೋಳಿಡುತ ||
ವ್ಯರ್ಥವಾದುದೆ ಬಾಳ್ವೆ ಹಾ ಎ |
ನ್ನುತ್ತ ಬೈವುತ ಸುರಸಮೂಹವ |
ಮೃತ್ಯುವಿನ ವೋಲ್ ಬಾಬಿಡುತಲೋಡಿದಳು ಪುರದೆಡೆಗೆ ||೫೫||

ರಾಗ ಕೇತಾರಗೌಳ ಝಂಪೆತಾಳ

ಕಂಡು ನರಕನು ಭ್ರಮೆಯಲಿ | ಕರೆದು ಬೆಸ | ಗೊಂಡ ಕರವಾರಿಂದಲಿ ||
ತುಂಡೆಸಗಿದರು ವೈರದಿ | ಬಾಳಗೊಡೆ | ಪುಂಡರಂ ಮೂರ್ಲೋಕದಿ ||೫೬||

ಹರನೊ ಕಮಲಜನೊ ಸುರರೊ | ಯಕ್ಷಕಿ | ನ್ನರ ಗರುಡ ಗಂಧರ್ವರೊ ||
ನರರು ಈ ತೆರಗೈದರೆ | ಇಕ್ಕೆಲದಿ | ಸುರಿವುತಿದೆ ರುಧಿರಧಾರೆ ||೫೭||

ಪೃಥ್ವಿ ಮೂರಕೆ ಒಡೆಯನು | ತಾನೆಂಬ | ಕೀರ್ತಿಯಿಂ ಫಲಗಳೇನು ||
ಉತ್ತಮದ ಕುಲದ ಮಾನ | ಕಳೆದಿರುವ | ಧೂರ್ತರಂ ಬಾಳಗೊಡೆ ನಾ ||೫೮||

ರಾಗ ಕಾಂಭೋಜಿ ಝಂಪೆತಾಳ

ಬಿತ್ತರಿಸಲೇನಣ್ಣ ನಿನ್ನಾಜ್ಞೆಯಿಂ ನಾಕ |
ಹತ್ತಿ ಶೋಧಿಸಲು ಬಲು ಕಡೆಯ ||
ಮತ್ತಕಾಶಿನಿಯ ಕಾಣದೆ ತೆರಳೆ ನಂದನದಿ |
ನಿತ್ತಿರ್ಪಳಾಕೆಯಂ ನೋಡಿ ||೫೯||

ಒತ್ತಿನೊಳಗಾರಿಲ್ಲದಿರಲು ಕರವಿಕ್ಕಿ ನಾ |
ನಿತ್ತ ಸೆಳೆಯುತ ಬರಲು ಪಥದಿ ||
ಎತ್ತಣಿಂದನೆಂಬುದರಿಯದು ಮನಕೆ |
ಕೃತ್ತಿವಾಸನ ತೆರದಿ ಕನಲಿ ||೬೦||

ತಡೆದೆನ್ನ ಮೂದಲಿಸಿ ನುಡಿದು ಬಾಲಕನೋರ್ವ |
ಕಡಿದಿಕ್ಕಿ ಕರವನಾಕೆಯನು ||
ಬಿಡಿಸಿ ಕೊಂಡೊದ ಬಂದಡಚಿದೀಕಷ್ಟದೊಳು |
ಪೊಡವಿಯೊಳು ಮೊಗ ತೋರ್ಪುದೆಂತು ||೬೧||