ರಾಗ ಸಾರಂಗ ಅಷ್ಟತಾಳ

ನಿರ್ಜರರೆರೆಯ ಕೇಳಯ್ಯ | ಬಲು | ದುರ್ಜನರೊಂದಾಗಿ ನಮ್ಮಯ ಸಿರಿಯ ||
ಊರ್ಜಿತದಿಂದಾಳ್ವೆವೆಂದು ಬಂದಿಲ್ಲಿಗೆ | ಗರ್ಜಿಸಿ ಬಡಿವುದ ಧೂರ್ಜಟಿ ಬಲ್ಲನು ||೬೯||

ನರಕನೆಂಬವನತಿ ಬಲನು | ಒತ್ತಿ | ಗಿರುವ ಸಚಿವ ವೀರ ಮುರನೆಂಬೋರುವನು ||
ಹರಣಮಾತ್ರದಿ ಬಿಟ್ಟು ದೊರೆಗರುಹೆಂಬವ | ದಿರ ಪರಿಕಿಸಲೆದೆ ತರಹರಗೊಳುತಿದೆ ||೭೦||

ರಾಗ ಭೈರವಿ ಅಷ್ಟತಾಳ

ಕೇಳಿ ಚರರ ನುಡಿಯ | ನಿರ್ಜರರೊಳು | ಪೇಳಿದ ಸುರರೆರೆಯ |
ಪಾಳಯದೊಡಗೂಡಿ | ಖೂಳ ಖಳರು ಬಂದು | ಕೋಳುಗೊಂಬರು ಸಿರಿಯ ||೭೧||

ಅರಿತೆ ನಾ ಸುರಪ ನಿನ್ನ | ಕುಮಾರ ತುಂ | ಡರಿಸಲು ಕರಗಳನ್ನ ||
ದುರುಳೆಯ ದೂರಿಂದ | ಧರಿಸಿ ವಿರೋಧವ | ಧುರಕೆ ಬಂದಿಹರು ಮುನ್ನ ||೭೨||

ಒಳ್ಳಿತಾಯ್ತಾ ಹಗೆಗೆ | ಸೇನೆಯ ಕೂಡಿ | ಇಲ್ಲಿಗೈತಂದ ಬಗೆ ||
ಮಲ್ಲಭಟರ ಕೂಡಿ | ಖುಲ್ಲರ ವಧಿಪುದೆಂ | ದೆಲ್ಲರು ಧುರಕೊದಗೆ ||೭೩||

ಕಂದ

ಬರಲೊಂದೆಡೆ ನಿರ್ಜರರೊಳು |
ಮುರ ಹೊದಾಡುತಲಿರಲ್ಕೆ ತ್ರಿದಶರಿಗೆರೆಯಂ ||
ಪರಿಕಿಸಿ ನರಕಾಸುರನಂ |
ಉರಿಮಸಗುತ ತಡೆದು ಪೇಳ್ದನತಿ ಭರದಿಂದಂ ||೭೪||

ರಾಗ ಶಂಕರಾಭರಣ ಮಟ್ಟೆತಾಳ

ನೀನೆ ನರಕನೆಂಬ ಖಳನು ಸೇನೆ ಸಹಿತಲಿ |
ಏನ ನೆನೆದು ಬಂದೆ ಗೀರ್ವಾಣರಿದಿರಲಿ ||
ಪ್ರಾಣ ಕಳೆದುಕೊಂಬ ಬಗೆಯೊ ಮಾಣದುಸುರೆಲ |
ಹೀನತನದಿ ಕೆಡದೆ ನಿನ್ನಾಸ್ಥಾನ ಸೇರೆಲ ||೭೫||

ಸುರರು ನೀತಿವಂತರಾಗೆ ತರುಣಿಯೋರ್ವಳ |
ಕರವ ತುಂಡುಗೈದರಿಂದ ದೊರಕುವುದೆ ಫಲ ||
ಮರೆವುದುಂಟೆ ಮಾನಹಾನಿಯಾದ ಬಗೆಯನು |
ಮರುಳು ತಕ್ಕ ಮದ್ದ ನರೆಯಲೀಗ ಬಂದೆನು ||೭೬||

ತಿಳಿಯೆ ಏನೊ ನಂದನದಲಿ ಲಲನೆಯೋರ್ವಳು |
ಕುಳಿತರಲ್ಲಿ ದುಷ್ಟೆ ಬಂದು ಸೆಳೆಯೆ ಭರದೊಳು ||
ಮುಳಿದು ತಕ್ಕ ಶಾಸ್ತ್ರಿ ಗೈದರವಳ ಬಗೆಯಲಿ |
ಕಲಹವೆಸಗುತುಳಿವೆಯಾ ಬರ್ದಿಲರ ಹಗೆಯಲಿ ||೭೭||

ತರುಣಿಕರವ ಪಿಡಿದರೇನು ಕೊರತೆಯಾದುದು |
ಪೊರೆವ ನಾಥಗುಸುರದಿಂತು ಕರವ ಕಡಿದುದು ||
ಮರೆವುದಲ್ಲ ಪರಿಹರಿಸಲಿಕವಳ ವ್ಯಥೆಯನು |
ಧುರಹಿ ಕೆಡಹಿ ನಿನ್ನ ಸತಿಯ ಭರದೊಳೊಯ್ವೆನು ||೭೮||

ಕೇಳಿ ಕನಲುತಾಗ ತ್ರಿದಶರಾಳುವಾತನು |
ಬಾಳೆಗೊಡೆನೆನುತ್ತ ಕುಲಿಶದಿಂದ ಹೊಡೆದನು ||
ಖೂಳಗಣಿಸದದನು ಸರಳ ಜಾಲ ಸುರಿವುತ |
ಮೇಲುವರಿದು ನಿಂದ ದಿವಿಜ ಪಾಳ್ಯ ಸದೆವುತ ||೭೯||

ವಾರ್ಧಕ

ಪರಿಕಿಸುತ ಸುರಪನದೃಶ್ಯದಿಂ ಸುರರೊಡನೆ |
ತರುಣಿ ಶಚಿದೇವಿ ಸಹ ತೆರಳಿ ವನದೊಳಗಿರಲು |
ಮುರ ನರಕ ಮುಖ್ಯರಾ ಪುರವ ಶೋಧಿಸದಡೆಯು ಕಾಣದಿರಲಿಂದ್ರಾಣಿಯು ||
ಪರಮಪಾವನೆಯದಿತಿ ಕುಂಡಲವ ವಶಗೈದು |
ವರುಣನಿಂ ಮಣಿಶೈಲ ಧನಪನಾಗಾರ ಮ |
ತ್ತುರುತರ ಸುವಸ್ತುಗಳ ಕೈಗೊಳುತ ಬಲದೊಡನೆ ಪುರಕೈದನುತ್ಸವದಲಿ ||೮೦||

ರಾಗ ಸಾಂಗತ್ಯ ರೂಪಕತಾಳ

ಸುತ್ತುತ ದುರುಳಗರಿಯದಂದದಿ ಶಕ್ರ | ಒತ್ತಿನವರಿಗೆಂದ ದಿವದಿ ||
ಪೃಥ್ವಿಯಾತ್ಮಜನಿಂದ ಬಳಲುವರೆಲ್ಲರು | ಬಿತ್ತರಿಸುವೆನಾರಿಗಿದನು ||೮೧||

ನಿರತವು ಕಷ್ಟವ ಬರಿಸುವರಿದಕೇನು | ಪರಿಹಾರವೆನುತ ಚಿಂತೆಯಲಿ ||
ದೊರೆವುದೆ ಶುಭವು ಶ್ರೀವರಗಿದನರುಹಲು | ಸ್ಥಿರಗೊಳಿಸುವನು ಸಂಪದವ ||೮೨||

ಧರೆಗವತರಿಸುತ ಕೃಷ್ಣಾವತಾರದಿ | ಮೆರೆವನು ದ್ವಾರಕಾಪುರದಿ ||
ತೆರಳಿ ಸಂಕಷ್ಟವನೊರೆವೆ ಶೀಘ್ರದೊಳೆಂದು | ಪೊರಮಟ್ಟು ಬಂದನಾ ಕಡೆಗೆ ||೮೩||

ರಾಗ ಕಾಂಭೋಜಿ ಝಂಪೆತಾಳ

ಧಾರಿಣೀಶ್ವರ ಕೇಳು ಶ್ರೀಲೋಲ ಕೃಷ್ಣಾವ |
ತಾರದಲಿ ಜನಿಸಿ ಭೂತಳದಿ ||
ಕ್ರೂರ ಕಂಸಾದಿ ಖಳವಾರವಂ ಸದೆದು ಸುಖ |
ತೋರಿದನು ಯಾದವರ ಕುಲಕೆ ||೮೪||

ಧುರದಿ ಮಾಗಧನೊಡನೆ ವಿರಚಿಸುತ ನಟನೆಯಂ |
ಶರಧಿ ಮಧ್ಯದಲಿ ದ್ವಾರಕೆಯು ||
ಪುರವ ನಿರ್ಮಿಸಿ ಅಷ್ಟಮಾಂಗನೆಯರೊಡಗೂಡಿ |
ಗರುಡವಾಹನನೀರ್ದ ಪುರದಿ ||೮೫||

ಕಂದ

ಒಂದು ದಿವಸ ವೈಭವದಿಂ
ಇಂದಿರೆವರ ಕುಳ್ಳಿರಲ್ಕೆ ನರಕನ ಭಯದಿಂ ||
ಬಂದಲ್ಲಿಗೆ ಸುರಪಾಲಕ |
ವಂದಿಸಿ ತರಹರಿಸುತೀರ್ಪವಗೆ ಹರಿ ನುಡಿದಂ ||೮೬||

ರಾಗ ಕಲ್ಯಾಣಿ ಅಷ್ಟತಾಳ

ಏನು ದುಮ್ಮಾನದಲಿ | ಬಂದಿರುವೆ ಗೀ |
ರ್ವಾಣಪಾಲಕನಿಂದಿಲಿ ||
ಆನಂದಗೊಳಿಪ ನಿನ್ನಾನನ ಕುಂದಲು |
ಊನವಾರಿಂದ ಪೇಳು | ಶೀಘ್ರದೊಳು ||೮೭||

ದಿತಿಜರಿಂದಲಿ ನಾಕಕೆ | ಭೀತಿಯೆ ಸುರ |
ತತಿಯಿಂ ಭೇದವೆ ಮನಕೆ ||
ಹಿತದಿ ವರ್ತಿಸುವ ದಿಕ್ಪತಿಗಳಿಂ ತೊಡರಾಯ್ತೆ |
ವ್ಯಥಿಸಬೇಡೆನಲೆಂದನು | ಬವಣೆಯನ್ನು ||೮೮||

ರಾಗ ಹನುಮತೋಡಿ ಆದಿತಾಳ

ಬಿನ್ನವಿಸುವದೇನು ಚಿನ್ಮಯ ನಿನಗೆ |
ಪನ್ನಗಶಯನ ಕೃಪಾರ್ಣವನೆನಗೆ ||
ದುರ್ನೀತಿವಂತರು ನಿಲಗೊಡರಯ್ಯ |
ಬಣ್ಣಿಸಲರಿಯೆ ನಾ ಒದಗಿದ ವ್ಯಥೆಯ ||೮೯||

ಧರಣಿಯಾತ್ಮಜ ದುಷ್ಟ ನರಕನೆಂಬವನು |
ಮುರನೆಂಬ ಧೂರ್ತನ ಬೆರೆದು ಕೊಂಡಿಹನು ||
ಮರುತ ಅನಲರೊಂದು ಜತೆಗೂಡಿದಂತೆ |
ಸರಸಿಜಭವನಿಂದ ವರವಾಂತರಂತೆ ||೯೦||

ಸುರಪುರಕೈತಂದು ಧುರದೊಳೆಲ್ಲರನು |
ಹರಿಗೈದು ಸದ್ವಸ್ತುಪುರಕೆ ಒಯ್ದಿಹನು ||
ಪರಮಪಾವನೆ ಮಾತೆಯದಿತಿ ಕುಂಡಲವ |
ವರುಣನ ಮಣಿಶೈಲ ಅಪಹರಿಸಿರುವ ||೯೧||

ಭಾಮಿನಿ

ಸತಿಯಳಾಪೇಕ್ಷೆಯಲಿ ಬಂದವ |
ಗತಿಗೆಡಿಸುತದೃಶ್ಯದಲಿ ನಾ |
ನತುಳಯತ್ನದಿ ಕಾಣಿಸದೆ ಕಾನನದಿ ಚರಿಸುವೆನು ||
ಮಥಿಸಿ ತ್ವರಿಯದಿ ದುಷ್ಟ ಸಂಕುಲ |
ಸತತ ನಿನ್ನಾಶ್ರಮದೊಳಿಹ ಸುರ |
ತತಿಯ ಪಾಲಿಪುದೆನುತ ಮಣಿಯಲ್ಕೆಂದ ಶ್ರೀಲೋಲ ||೯೨||

ರಾಗ ಜಂಜೂಟಿ ಏಕತಾಳ

ಇದಕ್ಯಾತಕೆ ನೀ ಬೆದರುವೆ ಮುದದೊಳು |
ತ್ರಿದಶರೊಡನೆ ತೆರಳೈ ದಿವಕೆ ||
ಅಧಮರ ಸಂಕುಲ ಸದೆದು ಶೀಘ್ರದಲಿ |
ಮುದಗೊಳಿಸುವೆ ನಿನ್ನಾಳ್ತತನಕೆ ||೯೩||

ಎಂದು ಕಳುಹಿ ಅಮರೇಂದ್ರನ ಹರಿ ತ್ವರೆ |
ಯಿಂದ ಸನ್ನಾಹದಿ ಪೊರಮಡಲು ||
ಬಂದಾ ಭಾಮೆಯು ವಂದಿಸಿ ವಿಸ್ಮಯ |
ದಿಂದಲಿ ವಲ್ಲಭ ಗುಸುರಿದಳು ||೯೪||

ರಾಗ ಕಾಂಭೋಜಿ ತ್ರಿವುಡೆತಾಳ

ಗಮನವಿದೆಲ್ಲಿಗಯ್ಯ | ಮನೋಹರ | ಗಮನವಿದೆಲ್ಲಿಗಯ್ಯ ||
ಕಮಲಲೋಚನ ಭವವಿಮೋಚನ | ಸುಮನಸಾರ್ಚಿತ ವಿಶ್ವವಂದಿತ ||
ಸಮರ ಸನ್ನಾಹದಲಿ ಪೊರಟಾ | ಗಮನವರಿಯೆನು ವಿಮಲಮೂರುತಿ ||೯೫||

ಆರೊಡನಿನಿತು ಪಂಥ | ಸಂಗ್ರಾಮದ | ಕಾರಣವರಿಯೆ ಕಾಂತ ||
ಸೂರೆಗೈದರೆ ಖಳರು ನಾಕವ | ಧಾರಿಣಿಯ ಸಜ್ಜನರ ಕಷ್ಟವ |
ದೂರಗೈಯ್ಯುವ ಕಾರ್ಯವೋ ತವ | ಸ್ವಾರಿಯರಿಯೆನು ಕಾರಣೀಕನೆ ||೯೬||

ರಾಗ ಸುರುಟಿ ಏಕತಾಳ

ನಾರಿಮಣಿಯೆ ಕೇಳೆ | ಪೊರಟ ವಿ | ಚಾರವ ಗುಣಶೀಲೆ ||
ಧಾರಿಣಿಯಾತ್ಮಜ ನರಕನು ನಾಕವ | ಸೇರಿ ಭಾಗ್ಯ ಅಪಹಾರವ ಗೈದನು ||೯೭||

ಅದಿತಿಯ ಕುಂಡಲವ | ಸೆಳೆವು | ತ್ತಧಮನು ಶೋಭಿಸುವ ||
ವಿಧ ವಿಧ ವಸ್ತುವ ಮಣಿಶೈಲವ ಸಹ | ತ್ರಿದಶರ ಬೆದರಿಸಿ ಸದನಕ್ಕೊಯ್ದನು ||೯೮||

ಬಳಲುತ ಸುರವರನು | ಬಂದೆ | ನ್ನೊಳು ಗೋಳಾಡಿದನು ||
ತಿಳುಹುತ ಧೈರ್ಯವ ಕಳುಹಿದೆನದಕಾ | ಕೊಳುಗುಳಕೈದುವೆ ನಳಿನದಳಾಂಬಕಿ ||೯೯||

ಕಂದ

ತೀರಿಸಿ ದುಷ್ಟರ ಕುಲಮಂ |
ತೋರುತ ಸುಖವಮರರಿಂಗೆ ಬಹೆ ತ್ವರ್ಯದೊಳಂ ||
ಬೇರೆಣಿಕೆಗಳಿಲ್ಲೆನುತಾ |
ಮಾರಜನಕ ಪೊರಮಡಲಾಗ ತಡೆದಿಂತೆಂದಳ್ ||೧೦೦||

ರಾಗ ಬಿಲಹರಿ ಅಷ್ಟತಾಳ

ಸರಿಯಾದುದೀ ಕಾರ್ಯ ಅರಿತೆನಂತರ್ಯ |
ಸುರರ ಪಾಲನೆ ನಿನ್ನ ನಿರತದಚರ್ಯ ||
ತ್ವರಿಯದಿಂದಲ್ಲಿಗೆ ತೆರಳಲು ಬೇಕು |
ಅರುಹುವೆ ಮನ್ಮನದಿರವ ಪರಾಕು ||೧೦೧||

ಅರೆಕ್ಷಣ ಅಗಲಿರಲಾರೆ ನಾ ನಿನ್ನ |
ಕರೆದೊಯ್ಯಬೇಕಲ್ಲಿಗೆನ್ನ ಮೋಹನ್ನ ||
ನರಕನ ವಧಿಸುವ ತೆರಳಿ ನಾಕವನು |
ಪರಿಕಿಸಿ ಬರುವೆ ಆನಂದದೊಳಾನು ||೧೦೨||

ದೈತ್ಯಾರಿ ನೀ ಎನ್ನ ಒತ್ತಿನೊಳಿರಲು |
ಧೂರ್ತರ ಭಯ ಚಿತ್ತಕಹುದೇ ಕೃಪಾಳು ||
ವ್ಯರ್ಥ ಮಾತುಗಳ್ಯಾಕೆ ಬಿಡೆ ನಿನ್ನನೆನುತ |
ಸತ್ಯಭಾಮಾದೇವಿ ಪೊರಟಳುಬ್ಬುತ್ತ ||೧೦೩||

ವಾರ್ಧಕ

ದಾನವಾರಿಯು ತಿಳಿದ ನಮ್ಮುಭಯರಿಂದ ಅವ |
ಸಾನವಲ್ಲದೆ ಖಳಗೆ ವಿಧಿಯಿತ್ತ ವರ ಬಲದಿ |
ತಾನೋರ್ವ ಕಾದಾಡಿ ಜೈಸಲಸದಳವಿದಕೆ ವಾದಿಸುವುದೇಕೆನ್ನುತ ||
ಮಾನಿನಿಯ ಕರಕೊಳುತ ಏರಿ ಗರುಡನ ಕ್ಷಣದಿ |
ಭಾನುಮಂಡಲವಡರಿ ತೆರಳಲ್ಕೆಯಿದಿರಿನೊಳು |
ಕಾಣಿಸಿತು ನರಕನಾಸ್ಥಾನ ಪ್ರಾಗ್ಜೋತೀಷ ಪುರವ ತೋರಿಸುತೆಂದನು ||೧೦೪||

ರಾಗ ಕಾಂಭೋಜಿ ಝಂಪೆತಾಳ

ತರುಣಿಮಣಿ ಕೇಳಿದುವೆ ಧರೆಯಾತ್ಮಭವನಾದ |
ನರಕನಾಳುವ ಮಹಾಪುರವು ||
ಪರಿಕಿಸಲು ಬಲು ಭಯಂಕರಮಾಗಿಹುದು ಒಳಗೆ |
ಸರಿಯಲರಿದಾ ತ್ರಿಪುರಹರಗೆ ||೧೦೫||

ಸುತ್ತೇಳು ಕೋಟೆಕೊತ್ತಳಗಳಾ ಮೇಲೆ ಬಲು |
ಶಸ್ತ್ರ ಸಜ್ಜಿತ ಭಟರ ದುರ್ಗ ||
ಮತ್ತೆ ಜಲಗಿರಿಯ ದುರ್ಗಗಳು ಪ್ರಜ್ವಲಿಸಿ ಉರಿ |
ಯುತ್ತಿರುವ ಅಗ್ನಿದುರ್ಗಗಳು ||೧೦೬||

ಪುಂಡರೀಕಾಸನನ ಕೊಂಡಾಡಿ ಮುರನು ಮುಂ |
ಕೊಂಡು ಪಡೆದಿರುವ ಪಾಶಗಳ ||
ಕುಂಡಲಾಕೃತಿಯಿಂದ ಆರು ಸಾವಿರ ಬಲಿದು |
ಕೊಂಡಿರುವ ಪುರದ ಸುತ್ತಿನಲಿ ||೧೦೭||

ಪತ್ನಿ ಭಾಮೆಗೆ ಸಕಲ ವಿಸ್ತಾರ ತೋರುತಿರೆ |
ಮಿತ್ರನಸ್ತಮಿಸೆ ನಾಲ್ದೆಸೆಯ ||
ಕತ್ತಲೆಯು ಮುಸುಕಲಾ ಶತ್ರುಗಳ ಪುರಕೆ ನು |
ಗ್ಗೊತ್ತುವರೆ ಶುಭಸಮಯವೆಂದು ||೧೦೮||

ಗಿರಿಯ ಪವಿಯಿಂ ತರಿದು ಮರುತನಿಂ ಜಲವ ಪರಿ |
ಹರಿಸಿ ಉರಿಯನು ವರುಣನಿಂದ ||
ಬರಿಗೈದು ಬಲಿದಿರ್ಪ ಮುರ ಪಾಶಗಳನು ತುಂ |
ಡರಿಸಿ ಚಕ್ರದಲಿ ಶ್ರೀವರನು ||೧೦೯||

ಕಂದ

ಊದಿದ ವೈರಿಗಳೆದೆಯಂ |
ಭೇದಿಸುವಂದದೊಳು ಶಂಖನಾದಕೆ ನಡುಗಿತು ||
ಮೇದಿನಿ ಖಳರೆಚ್ಚರಗೊಳೆ |
ಚೋದಿಗವೇನೆನುತಲೆದ್ದು ಮುರ ಕುಳಿತೆಂದಂ ||೧೧೦||

ರಾಗ ಭೈರವಿ ಏಕತಾಳ

ಏನಿದು ವಿಪರೀತಗಳು | ಹೊರ | ಠಾಣದಿ ಬೊಬ್ಬೆ ನಿಶಿಯೊಳು ||
ಕ್ಷೋಣಿಯು ಬಿರಿವ ವಿಧಾನ | ಎಣೆ | ಗಾಣದ ಶಂಖಧ್ವಾನ ||೧೧೧||

ಕಾಲ ಮೃತ್ಯುವಾಗಿರಲಿ | ತ್ರಿ | ಶೂಲಿಯೆ ನಡೆತಂದಿರಲಿ ||
ಭೂಲಲನಾಪತಿ ಬರಲಿ | ಸುರ | ಜಾಲವೆ ಮುನಿದೈತರಲಿ ||೧೧೨||

ಪರಿಕಿಪೆ ತಾನದನೆನುತ | ಮೈ | ಮರೆದು ಮುರನು ಕನಲುತ್ತ ||
ಪೊರಟೈತಂದರಸುತಲಿ | ಶ್ರೀ | ವರಗೆಂದನು ಖಾತಿಯಲಿ ||೧೧೩||

ಮಸಿಬಣ್ಣನೆ ನೀನಾರು | ನಡು | ನಿಶಿ ಬಂದಿಹುದೇಕುಸುರು ||
ಶಶಿಮುಖಿಯೋರ್ವಳ ಕೂಡಿ | ಇಲ್ಲಿ | ನುಸುಳುವುದೇತಕೊ ಖೋಡಿ ||೧೧೪||

ದುಷ್ಟಖಳಾಧಮ ಕೇಳು | ಈ | ಸೃಷ್ಟಿಯ ಭಾರವಿಳುಹಲು ||
ಪುಟ್ಟಿದೆ ಕೃಷ್ಣಾಖ್ಯೆಯೊಳು | ಸತಿ | ಪಟ್ಟಭದ್ರೆ ಎನಗಿವಳು ||೧೧೫||

ಬಲ್ಲೆನು ಗೋವಳ ಪೋರ | ಹೆಂ | ಗಳ್ಳ ಬೆಣ್ಣೆದಧಿ ಚೋರ ||
ಇಲ್ಲಿ ಬಂದು ಅಹಿತದಲಿ | ಪೋಗ | ಬಲ್ಲೆಯೊ ಜೀವದಿ ಮರಳಿ ||೧೧೬||

ತಿಳಿಯೆಯ ಎನ್ನ ಬಾಲ್ಯದಲಿ | ಬಲು | ಖಳರ ಸದೆದೆ ಲೋಕದಲಿ ||
ಉಳಿದಿಹ ನಿಮ್ಮಯ ವಧೆಗೆ | ಈ | ನಿಳಯವ ಸೇರಿದೆ ಕಡೆಗೆ ||೧೧೭||

ಬಲುಹಿರೆ ತೋರೆಂದೆನುತ | ಶರ | ಗಳ ಬಿಡಲದ ಶ್ರೀನಾಥ ||
ಉಳಿಯಗೊಡದೆ ಚಕ್ರದಲಿ | ಕಡಿ | ದಿಳುಹಿನ ಶಿರವವನಿಯಲಿ ||೧೧೮||

ವಾರ್ಧಕ

ಧರಣಿಗುರುಳಿದ ಮುರನ ಪರಿಭವ |
ಪರಿಕಿಸುತಲಾತನ ಕುಮಾರರು |
ಕರಿತುರಗ ರಥ ದಳದೊಡನೆ ಕಾದಲ್ಕೆ ||
ಸುರರು ಬಾಯ್ಬಿಡುವನಿತರೊಳು ಕ |
ತ್ತರಿಸಿ ಬಿಸುಟನು ತಿಳಿದು ವಾರ್ತೆಯ |
ನರಕ ತ್ರಿಪುರಾಂತಕನ ತೆರದಲಿ ಕನಲಿ ತಡೆದೆಂದ ||೧೧೯||

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಮನುಜ ಲಲನೆಯೊಡನೆ ಬಂದು ನಿಶಿಯಲಿ |
ಹಲವರನ್ನು ತರಿದು ಉಬ್ಬಿ ನಲಿವೆ ಮದದಲಿ ||
ಕಳೆದುಕೊಳ್ಳಬೇಡ ಪ್ರಾಣ ಚೆಲುವೆಯಿವಳನು |
ನಲವಿನಿಂದಲಿತ್ತು ಪೋಗು ನಿಳಯಕೆಂದನು ||೧೨೦||

ಕ್ರೂರಮತಿಯೆ ನೃಪರ ಗೆದ್ದು ನಾರಿಮಣಿಯರ |
ಸೇರಿಸುತ್ತ ಸೆರೆಗೆ ಕಷ್ಟಗೊಳಿಸಿ ಸುಜನರ ||
ಘೋರ ಪಾಪಗೈದ ಪಿತ್ಥವೇರಿ ನಲಿವುದು |
ಮಾರಿಗೀಯೆ ಜಗದಿ ಸುಖಕೆ ದಾರಿಯಪ್ಪುದು ||೧೨೧||

ಜಲಜಭವನ ಒಲುಮೆಯಿರಲು ಗೆಲುವನಾವನು |
ಅಳುಕಿ ಪೊಕ್ಕರೆಲ್ಲ ಬರ್ದಿಲರು ವನವನು ||
ತಲೆಯ ಕಡಿದು ಮನುಜ ನಿನ್ನ ಲಲನೆ ಇವಳನು |
ಬಳಿಯೊಳಿರಿಸಲು ತಾಳ್ವೆ ಸುಖದಿ ನಿಳಯವೆಂದನು ||೧೨೨||

ವಿಧಿಯ ಒಲುಮೆ ಪಡೆದ ಬಗೆಯ ಮೊದಲೆ ಬಲ್ಲೆನು |
ಅದಕೆ ತಕ್ಕುಪಾಯವೆಣಿಸಿ ಕದನಕೈದೆನು ||
ತುದಿಯ ಕಾಲವಿಂದು ನಿನಗೆ ಒದಗಿತೆನ್ನುವ |
ಪದುಮನಾಭ ಶರವನೆಸೆಯೆ ಸದೆದು ಕನಲುತ ||೧೨೩||

ಭಾಮಿನಿ

ನರಕ ಶರವಂ ಬಿಡಲು ನಟನೆಯ |
ವಿರಚಿಸುತ ಚೈತನ್ಯ ಕುಂದಿದ |
ತೆರದಿ ಮುರಹರನಿರಲು ಬಳಿಗೈ ತರುವವನ ನೋಡಿ ||
ತರುಣಿ ಭಾಮಾದೇವಿ ರೋಷದಿ |
ಧುರಕೆ ಧನು ಕೈಗೊಳುತಲಿದಿರಿಗೆ |
ಬರಲು ಬಹುಪರಿಯಿಂದ ಜರಿದಿಂತೆಂದನಾಕೆಯೊಳು ||೧೨೪||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತರುಣಿ ನಾಚಿಕೆ ತೊರೆದು ಎನ್ನೊಳು | ಧುರಕೆ ಇದಿರಾಗುವೆಯೊ ನಿನ್ನಯ |
ವರನ ಭಂಗವನರಿತು ಬಾಳಿರು | ಚರಣಕೆರಗಿ ||೧೨೫||

ದೀನ ರಕ್ಷಕನಿಂದ ಮಡಿದರೆ | ತಾನೆ ಸದ್ಗತಿಯಹುದು ನರಕದ |
ಸ್ಥಾನ ತೋರಲು ಎನ್ನ ಕಳುಹಿದ | ದಾನವಾರಿ ||೧೩೬||

ಲಲನೆ ನಿನ್ನಯ ವಧೆಗೆ ಹೇಸುವೆ | ಕಲಹವ್ಯಾತಕೆ ಎನ್ನ ಪುರದೊಳು |
ಹಲವರಿರುವರು ತೊರೆದಿವನ ನೀ | ನೆಲಸು ಸುಖದಿ ||೧೨೭||

ಘೋರಪಾತಕ ಪುರುಷರನು ಸಂ | ಹಾರ ಗೈಯ್ವುದು ಸತಿಯರಿಗೆ ನಾ |
ಸಾರಿ ಪೇಳುವೆ ನೀತಿ ಮುನಿದರೆ | ಮಾರಿ ನಿನಗೆ ||೧೨೮||

ಸೊಕ್ಕ ನಿಲಿಸುವೆನೆನುತ ಶರ ಪೂ | ಡಲ್ಕೆ ಹರಿ ಕಂಡದರ ತುಂಡಿಸಿ |
ಚಕ್ರ ಬಿಡೆ ಒಮ್ಮತದಿ ಖಳನುದ | ರಕ್ಕೆ ಪೊಗಲು ||೧೨೯||

ರಾಗ ಕಾಂಭೋಜಿ ಝಂಪೆತಾಳ

ಅರೆ ನಿಮಿಷ ಮೂರ್ಛೆಯಿಂ ಧರೆಗುರುಳಿ ಎಚ್ಚರಿತು | ಸರಸಿರುಹ ಭವನಿತ್ತ ವರವು ||
ಬರಿದಾದುದೇಕಿದರ ಒಳವರಿವೆ ತಾನೆನುತ | ಪರಿಕಿಸುತ ಸುಜ್ಞಾನದಿಂದ ||೧೩೦||

ಆದಿ ಪುರುಷನು ಈತ ಮೇದಿನಿಯ ಬಾಧಿಸಿದ | ಆ ದಿತಿಜರನು ಸದೆದ ಮೊದಲು ||
ಸಾಧುಗಳ ರಕ್ಷಣೆಗೆ ತಾಳ್ದ ಅವತಾರವಿದು | ಭೂದೇವಿಯಂಶದವಳಿದವಳು ||೧೩೧||

ಘನ ಮಹಿಮರೀರುವರು ಜನನಿ ಜನಕರು ಎನ್ನ | ಜನುಮ ಸಾರ್ಥಕವಾಯಿತಿನ್ನು ||
ವನಿತೆ ಸುತ ಧನಕನಕವೆನುವ ಪಾಶದಿ ಸಿಲುಕಿ | ದಣಿವುದೇಕೆನುತ ಕೈಮುಗಿದ ||೧೩೨||

ಜಯ ಜಗನ್ಮಯ ಸಚ್ಚಿದಾನಂದ ಮೂರ್ತಿ ಅಹಿ | ಶಯನ ನಿಟಿಲಾಕ್ಷ ಸುಪ್ರೀತ ||
ಭಯ ನಿವಾರಣನೆ ನಿರ್ದಯ ವೇತಕೆನಗೆ ಆ | ಶ್ರಯವಿತ್ತು ಪಾಲಿಸನವರತ ||೧೩೩||

ಭಾಮಿನಿ

ಭರಿತ ಭಯ ಭಕ್ತಿಯಲಿ ನುತಿಸುವ ||
ನರಕನನು ಕಾಣುತ್ತ ಶ್ರೀವರ |
ತರುಣಿ ಭಾಮಾದೇವಿ ಸಹಿತೈತಂದು ಹತ್ತಿರಕೆ ||
ಕರುಣದಿಂದಾತನ ತನುವ ತಡ |
ವರಿಸುತೆಂದನು ತವ ಮನೋರಥ |
ಕರುಣಿಸುವೆ ನೀನಂಜದಿರು ಎನೆ ಪೇಳ್ದ ಕೈಮುಗಿದು ||೧೩೪||

ರಾಗ ಸಾಂಗತ್ಯ ರೂಪಕತಾಳ

ಪಾಲಿಸು ಮುಕ್ತಿ ಚಂದ್ರಾರ್ಕರಿಪ್ಪನ್ನೆಗಂ | ಮೂಲೋಕ ಕೊಂಡಾಡುವಂತೆ ||
ಮೇಲಾದ ಕೀರ್ತಿಯು ಮೆರೆಯುವಂದದ ಕಾರ್ಯ | ಪೇಳುವೆ ನಡೆಸಬೇಕದನು ||೧೩೫||

ವನಜಾಕ್ಷನವ ಸುದರ್ಶನವು ಸೋಕಿದುದೆನ್ನ | ತನುವಾಶ್ವೀಜದಸಿತಪಕ್ಷಾ ||
ಇನಿತು ತ್ರಯೋದಶಿ ಕಳೆದ ಚತುರ್ದಶಿ | ಯನು ಎನ್ನ ಪೆಸರಿಂದ ಕರೆದು ||೧೩೬||

ಹಿರಿಯರು ಕಿರಿಯರು ಯತಿಗಳು ಸಹ ಹಿಮ | ಕರನುದಯದಿ ತೈಲಾಭ್ಯಂಗ ||
ವರಸ್ನಾನ ವಿರಚಿಸಿ ಭಕ್ಷ್ಯಭೋಜ್ಯವನುಂಡು | ಮೆರೆವುದು ಜಗತಿಯೊಳೆಲ್ಲ ||೧೩೭||

ಮರೆತವರಿಗೆ ಘೋರ ನರಕವಾಚರಿಪರ್ಗೆ | ಕರುಣಿಸು ಉತ್ತಮಗತಿಯ ||
ಸ್ಥಿರವಾಗಿರಲಿ ಮಮ ಚರಿತೆ ಈ ತೆರ ನೀಡು | ವರಮಹಾಮುಕ್ತಿಯನೆನಗೆ ||೧೩೮||

ಅಸ್ತು ಎಂದಾತನ ಪರಸೆ ಸುದರ್ಶನ | ಕತ್ತರಿಸಲು ಆತ್ಮಜ್ಯೋತಿ ||
ಮತ್ತೆ ಶ್ರೀವರನ ಸೇರ್ದುದು ಪೊಗಳಿದರೆಲ್ಲ | ಭಕ್ತಿಯಿಂದಲಿ ಮುರಹರನ ||೧೩೯||

ವಾರ್ಧಕ

ಪೃಥ್ವಿಯಾತ್ಮಜಗೆಂದ ತೆರದಿ ಮೊದಲಾಗಿ ಹರಿ |
ಪತ್ನಿ ಸಹಿತಾ ವ್ರತವ ಕೈಗೊಂಡು ಸಕಲರಿಗೆ |
ವಿಸ್ತರಿಸುತವರ ಸಂತೈಸಿ ಧರೆಯಂ ನರಕ ಪುತ್ರ ಭಗದತ್ತಗಿತ್ತು ||
ಮತ್ತಕಾಶಿನಿಯರಂ ಸೆರೆ ಬಿಡಿಸುತವರ ದೃಢ |
ಭಕ್ತಿಯನ್ನರಿತು ದ್ವಾರಕೆಗೆ ಕಳುಹುತ್ತ ಖಳ |
ವಸ್ತುಗಳು ಸಹಿತ ಸತಿಯಳನು ಕರಕೊಳುತ ನಾಕಕೆ ತೆರಳಿ ಸರಸದಿಂದ ||೧೪೦||

ರಾಗ ಕೇದಾರಗೌಳ ಅಷ್ಟತಾಳ

ಇಂದ್ರಾದಿ ದಿಕ್ಪಾಲರಿಂದ ಮನ್ನಣೆಗೊಂಡಾ | ನಂದದಿ ಮರಹರನು ||
ಒಂದುಳಿಯದೆ ಅವರವರ ವಸ್ತುವನಿತ್ತು | ವಂದಿಸಿ ಸುರಮಾತೆಗೆ ||೧೪೧||

ಭಕ್ತಿಯಿಂ ಕುಂಡಲವಿತ್ತವರನು ಪರ | ಸುತ್ತ ಅದಿತಿ ಮುದದಿ ||
ಸತ್ಕರಿಸಲು ಪಡೆದಾಜ್ಞೆಯನಾಕದ | ವಿಸ್ತಾರಗಳ ನೋಡುತ ||೧೪೨||

ಪಾಕಶಾಸನನ ಸಂತೋಷಗೊಳಿಸುತ್ತ ಭೂ | ಲೋಕಕೆ ಪೋಪೆನೆಂದು ||
ಶ್ರೀಕಾಂತ ಪೊರಟು ಮುಂದೈತರೆ ಮಣಿಯುತ್ತ | ರಾಕೇಂದುಮುಖಿ ಪೇಳ್ದಳು ||೧೪೩||

ರಾಗ ಘಂಟಾರವ ಏಕತಾಳ

ಧನ್ಯಳಾದೆ ಸಂಪನ್ನ ನಿನ್ನ ದಯದಿ | ಸಂಪೂರ್ಣ ಕೃಪಾವನಧಿ |
ಎನ್ನ ಪೋಲ್ವರಾರಿನ್ನು ಮೂರು ಜಗದಿ ||
ಬಣ್ಣಿಸಲರಿಯೆನು ಪುಣ್ಯದ ಫಲ ಬಿಡು |
ಗಣ್ಯರಿಂದ ನಾ ಮನ್ನಣೆ ಪಡೆದೆನು ||೧೪೪||

ತೋರಿದೆ ದಿವಿಜರ ಊರ ವಿಭವ ಎರೆಯ | ಪರಿಪರಿಯಾದಚ್ಚರಿಯ ||
ತೀರದು ವಿವರಿಸಲಾರಿಗು ಈ ಸಿರಿಯ ||
ವಾರಿಜಾಕ್ಷ ಶುಭಮೂರುತಿ ನಿನ್ನನು |
ಸೇರಿದರಿಂ ಕಣ್ಣಾರೆ ಕಂಡೆನಿದ ||೧೪೫||

ಚಂದದ ನಂದನ ಇಂದ್ರನ ಉದ್ಯಾನ | ಎಂಬುದವ ಕೇಳ್ದಿಹೆನಾ |
ತಂದು ಕೃಪೆಯ ನಲವಿಂದ ತೋರಿ ಎನ್ನ ||
ಒಂದು ಬಾರಿ ಆನಂದಪಡಿಸು ತ್ವರೆ | ಯಿಂದಲ್ಲಿಂದಲೆ ಹೊಂದುವ ಮಂದಿರ ||೧೪೬||

ವಾರ್ಧಕ

ನಾರಿಯಿಂತೆನೆ ಕೇಳ್ದು ಕರಕೊಳುತ ಬಂದಾಗ |
ತೋರಿಸಿದ ಸುರಭಿಹಯ ಗಜಕಲ್ಪತರುಗಳಂ |
ಬೇರೆ ಬೇರೆಲ್ಲವಂ ಬಲಬಂದು ಕೈ ಮುಗಿದು ನಂದನವ ಪರಿಕಿಸುತಲಿ ||
ಸೂರ್ಯ ಚಂದ್ರಮರ ಧಿಕ್ಕರಿಪ ಶೋಭೆಯಲಿ ಮಂ |
ದಾರ ಮಲ್ಲಿಗೆ ಜಾಜಿ ಸುರಗಿ ಮೊದಲಾದ ಸುಮ |
ರಾರಾಜಿಸಲು ಬರುತ ಮುಂದೆ ಕಂಡಳು ಮಹಾ ಪಾರಿಜಾತದ ತರುವನು ||೧೪೭||

ರಾಗ ಯಮುನಾಕಲ್ಯಾಣಿ ಝಂಪೆತಾಳ

ಬೆರಗಾಗಿ ಭಾಮೆ ಹತ್ತಿರಕೈದಿ ತರುವ |
ಪರಿಕಿಸುತಲಾ ಸುಮದ ಪರಿಮಳವು ಮನವ ||
ಮರಳುಗೊಳಿಸುವುದು ನಾನರಿಯೆ ನೀ ತನಕ |
ಪರಮ ಸೌರಭ್ಯದಿಂ ಮೆರೆವುದೀ ನಾಕ ||೧೪೮||

ಮರದ ಬುಡದಲಿ ವಜ್ರ ಹರಡಿದಂದದಲಿ |
ಇರುತಿಹುದು ಸುಮರಾಶಿ ಮೇಲೆ ಗಗನದಲಿ ||
ಮೆರೆವ ಉಡಗಣದಂತೆ ತರು ಶೋಭಿಸುವುದು |
ಜರೆದು ಹವಳವ ತೊಟ್ಟು ಪ್ರಭೆಯ ಬೀರುವುದು ||೧೪೯||

ನೀಲರತ್ನದ ಕಾಂತಿ ಪೋಲ್ವ ಚಿಗುರೆಲೆಯು |
ಮೂಲದಲಿ ಬೇರ್ಗಳು ಸುವರ್ಣದಾ ಕೃತಿಯು ||
ಭೂಲೋಕದೊಳಗೆ ಕಂಡರಿಯೆ ನೀವರೆಗೆ |
ಆಲಯಕ್ಕೊಯ್ದು ಪಾಲಿಸೆ ಕೀರ್ತಿ ಎನಗೆ ||೧೫೦||

ಭಾಮಿನಿ

ಮನವು ನಟ್ಟಲು ತೋರಿಸುತಲದ |
ಚಿನುಮಯನೆ ನಾನರಿಯೆ ಇದಕೇ |
ನೆನುವರೈ ಪೆಸರುಸುರೆನಲು ನಗುತೆಂದ ಪೂರ್ವದಲಿ ||
ಮುನಿಪ ನಾರದ ರುಕ್ಮಿಣಿಗೆ ನೀ |
ಡೆನುತ ಎನ್ನಯ ಕೈಯೊಳಿತ್ತಿರು |
ವನುಪಮದ ಸುಮ ಪಾರಿಜಾತದ ತರುವಿದೆಂದೆನುತ ||೧೫೧||

ರಾಗ ಆರ್ಯುಸವಾಯಿ

ನಡೆಯಲು ಮುಂದಕೆ ತಡೆದೆಂದಳು ನೀ | ಕೊಡುವುದಾಜ್ಞೆ ಶಾಖೆಯದೊಂದು ||
ಪೊಡವಿಗೊಯ್ದು ಯಶ ಪಡೆವೆನೆನಲ್ಕಾ | ಮಡದಿಗೆಂದ ಸುಜನರ ಬಂಧು ||೧೫೨||

ಇಲ್ಲಿಹ ತರುಲತೆ ಸಲ್ಲದು ಜಗತಿಗೆ | ನಿಲ್ಲದೆ ನಡೆ ಎಂದೆನಲಿದನು ||
ವಲ್ಲಭ ನಾ ಬಿಡಲೊಲ್ಲೆ ಎನುತ ಕೈ | ಯಲ್ಲಿ ಪಿಡಿಯೆ ಪೇಳಿದನವನು ||೧೫೩||

ರಾಗ ಶಂಕರಾಭರಣ ಅಷ್ಟತಾಳ

ಬೇಡವೆ | ವೃಕ್ಷದ ತಳ್ಳಿ | ಬೇಡವೆ  || ಪಲ್ಲವಿ ||

ಬೇಡ ವೃಕ್ಷದ ತಳ್ಳಿ ನಿನಗೆ | ಬಲು | ಕೇಡು ಬಂದೊದಗುವುದೆಮಗೆ |
ಚರ | ರೋಡಿ ಪೇಳಿದರೆ ಈ ಬಗೆಗೆ | ಒಂದು | ಗೂಡಿ ನಿರ್ಜರರು ಈ ಕಡೆಗೆ ||
ಬಲು | ಗಾಢದೊಳೈತಂದು ನೋಡಿ ಸೈರಿಸರೆಲ್ಲ |
ಮೋಡಿಯಿಂದಲೆ ಖಾಡಾಖಾಡಿಯ ಮಾಳ್ಪರು || ಬೇಡವೆ ||೧೫೪||

ಶರಧಿಯ ಮಥನದೊಳಂದು | ದೊರ | ಕಿರುವ ವಸ್ತುಗಳೊಳಿದೊಂದು |
ಇಲ್ಲಿ | ಸ್ಥಿರಪಡಿಸಿದ ಮೇಲೆ ಬಂದು | ಅಪ | ಹರಿಸುವದೆಮಗತಿ ಕುಂದು ||
ಪುರ | ಹರವಿಧಿ ಮುಖ್ಯರು ಜರೆದು ನಿಂದಿಪರೆನ್ನ |
ಬಿರುದಿಗೆ ಅಪಕೀರ್ತಿ ಬರುವುದು ನಿನ್ನಿಂದ || ಬೇಡವೆ ||೧೫೫||

ಕಂದ

ಸಂತೈಸಲು ಬಲು ವಿಧದಿಂ |
ದಂತಿಗಮನೆ ಬಿಟ್ಟು ಪೋಗೆ ಪುರಕಿದನೆನುತಂ ||
ನಿಂತಿರೆ ಛಲದಿಂ ಲಕ್ಷ್ಮೀ |
ಕಾಂತನು ಮುಂದ್ವರಿಯಲಾಕೆ ಧೈರ್ಯದೊಳಾಗಳ್ ||೧೫೬||

ರಾಗ ಮಧ್ಯಮಾವತಿ ತ್ರಿವುಡೆತಾಳ

ನೀರಜಾಕ್ಷನ ನುಡಿಯ ಕೇಳದೆ | ಪಾರಿಜಾತದ ತರುವ ಕೊಂಬೆಯ ||
ನಾರಿ ಭಾಮಾದೇವಿ ಮುರಿಯುತ | ಸಾರಿದಳು ಜತೆಗೂಡುತ || ಅರಿಯದಂತೆ ||೧೫೭||

ದೇವನೆಂಬುದ ತಿಳಿಯದಾ ವನ | ಕಾವಲಿಗರದ ಕಂಡು ಹತ್ತಿರೆ ||
ಧಾವಿಸುತ ತಡೆದೀರ್ವರನು ನಾ | ನಾ ವಿಧದಿ ಜರೆವುತ್ತಲಿ || ನುಡಿದರಾಗ ||೧೫೮||

ರಾಗ ಶಂಕರಾಭರಣ ಮಟ್ಟೆತಾಳ

ಆರೊ ಕಪ್ಪು ಮೈಯ್ಯವ ನೀ | ನಾರಿಯೊಡನೆ ಸೇರಿ ಚೆಲುವ |
ಪಾರಿಜಾತ ತರುವ ಮುರಿದೆ | ಚೋರರಂದದಿ ||
ಮೂರುಲೋಕಕಧಿಕ ಸುರರ | ಸಾರತರದುದ್ಯಾನ ಕಾವ |
ಪಾರುಪತ್ಯವೆಮಗೆ ಬಿಟ್ಟು | ಸಾರು ಲೋಕಕೆ ||೧೫೯||

ಕಳ್ಳನಲ್ಲ ನಾಕಪದವಿ | ಒಳ್ಳಿತೆಸಗಲೆಂದು ಬಂದೆ |
ವಲ್ಲಭೆಯು ಸಹಿತ ವನವನೆಲ್ಲ ಸುತ್ತಲು ||
ಫುಲ್ಲನೇತ್ರೆ ಬಯಸಲಿದ ನಾ | ನಲ್ಲಗಳೆವುದೆಂತು ಮುರಿದು |
ದಿಲ್ಲಿ ತರುವ ಶಾಖೆವೊಯ್ದು | ರಿಲ್ಲಿ ಕುಂದೇನು ||೧೬೦||

ಸತಿಯ ಮಾತ ಕೇಳಿ ನಡೆವ | ಮತಿವಿಹೀನ ಬಿಟ್ಟು ತೆರಳು |
ಸತತ ಇಲ್ಲಿ ಸದ್ವಸ್ತುಗಳ | ಜತೆಯೊಳೀರ್ಪುದು ||
ಕ್ಷಿತಿಗೆ ಪೋಗಗೊಡೆವು ನಿನ್ನ | ಗತಿಯ ಗೆಡಿಪೆನೆನುತಲವರು |
ಖತಿಯಿಂ ತುಡುಕೆ ಕಾಣುತಾ ಶ್ರೀ | ಪತಿಯು ಕ್ರೋಧದಿ ||೧೬೧||

ಭಾಮಿನಿ

ಬಂಧಿಸುತ ಕರಗಳನು ಪೇಳಿ ಪು |
ರಂದರಗೆ ಈ ಹದನವೆನುತಲಿ |
ಮುಂದೆ ವನ ವೈಭವವ ಪರಿಕಿಪೆನೆಂದು ಸತಿ ಸಹಿತ ||
ನಂದನದಿ ಸಂಚರಿಸುತಿರೆ ಬಲು |
ನೊಂದು ವನಪಾಲಕರು ಭಯದಲಿ |
ಇಂದ್ರನೆಡೆಗೈದಾಗ ಬಿನ್ನವಿಸಿದರು ಭೀತಿಯಲಿ ||೧೬೨||

ರಾಗ ಸಾರಂಗ ಅಷ್ಟತಾಳ

ನಾಕಾಧಿಪತಿ ಲಾಲಿಸಯ್ಯ | ನರ |
ಲೋಕದವರ ಬಲುಹೇನೆಂಬೆ ಜೀಯ ||
ಸಾಕಾರಮಾದ ನಂದನದಿ ಕಪ್ಪಿನ ಮೈಯ್ಯ |
ಕಾಕುಮಾನವ ಸತಿಯೊಡನೆ ಸಂಚರಿಸುತ್ತ ||೧೬೩||

ಪಾರಿಜಾತದ ಶಾಖೆ ಮುರಿದು | ತನ್ನ |
ಊರಿಗೆ ಒಯ್ದಪನೆಂಬುದ ತಿಳಿದು ||
ಸಾರಗೊಡದೆ ನಾವು ದಾರಿಯಡ್ಡವಿಸಲು |
ಈರುವರೊಂದಾಗಿ ಭಾರಿ ದಂಡಿಸಿದರು ||೧೬೪||

ರಾಗ ಕಾಂಭೋಜಿ ಝಂಪೆತಾಳ

ಲಾಲಿಸುತ ನುಡಿಯ ಸುರಪಾಲ ತಿಳಿದನು ಮನದಿ | ಶ್ರೀಲಲಾಮನುಭಾಮೆ ಸಹಿತ ||
ಬೀಳುಗೊಂಡೆನ್ನ ನಂದನದಿ ಪರಿಕಿಸಿ ತರುವ | ಭೂಲೋಕಕೊವ ಬಗೆಗಾಗಿ ||೧೬೫||

ಮುರಿವುದೇತರ ನ್ಯಾಯ ಚರರು ತಡೆದರೆ ಭಂಗ | ಬರಿಸಿದನು ಹಲವು ವಿಧದಿಂದ ||
ನರಕಾದಿ ದುಷ್ಟರಂ ತರಿದು ಭಾಗ್ಯವನಿತ್ತು | ಮರಳಿ ಅಪಹಾರಗೈವನಲ ||೧೬೬||

ಸಾಧಿಸುತ ವೈರ ದಿತಿಜಾಧಮರು ನಮ್ಮೊಡನೆ | ಕಾದಾಡಿ ವಶಪಡಿಸಲವರ ||
ಛೇದಿಸುತ ಸುಖವಿತ್ತ ಮಾಧವನೆ ಇಂತೆಸಗೆ | ಆಧರಿಪರಾರು ನಿರ್ಜರರ ||೧೬೭||

ವಾರ್ಧಕ

ಸಿಂಧುಮಥನದೊಳುದಿಸಿರುವ ಪಾರಿಜಾತತರು |
ಒಂದಾಗಿ ತ್ರೈಮೂರ್ತಿಗಳು ಕರುಣದಿಂದಿರಿಸಿ |
ನಂದನದಿ ರಕ್ಷಿಸುವ ನಿಯಮವೆನಗಿರಲೋರ್ವ ಬಂದು ಧರೆಗೊವುದೆಂತು ||
ಇಂದಿರೇಶನೊಳು ಧುರವೆಸಗಲಸದಳ ಶೀಘ್ರ |
ದಿಂದಲೀ ವಾರ್ತೆಯಂ ಹರಗೆ ತಿಳುಹುವದೆನುತ |
ಇಂದ್ರ ಸುರರೊಡಗೂಡಿ ಶಿವನ ಸನ್ನಿಧಿಗೈದಿ ಮಣಿಯಲ್ಕೆ ಪರಸುತೆಂದ ||೧೬೮||

ರಾಗ ಕಲ್ಯಾಣಿ ಅಷ್ಟತಾಳ

ಸುರರಧಿಕಾರಿ ನೀನು | ಮೂಲೋಕದಿ | ಸಿರಿವಂತ ಪ್ರಖ್ಯಾತನು ||
ನಿರತವು ನಮ್ಮಯ ಚರಣವ ಸ್ಮರಿಪ ಕಿಂ | ಕರಕುಲಕಧಿನಾಥನು | ಸುಪ್ರೀತನು ||೧೬೯||

ಒಂದುಗೂಡುತ ಸುರರ | ಬಂದಿಹೆ ತ್ವರೆ | ಯಿಂದ ನಾಕಕೆ ಖೂಳರ ||
ವೃಂದದಿಂದುಪಹತಿ ಬಂದಡಚಿದುದೋ ಪೇ | ಳೆಂದಭವನಿಗೆಂದನು | ದೇವೇಂದ್ರನು ||೧೭೦||

ರಾಗ ಮಧ್ಯಮಾವತಿ ಏಕತಾಳ

ನೀಲಕಂಧರ ನಿಟಿಲಾಕ್ಷ ಮಹೇಶ | ಪೇಳಲಂಜುವೆ ನಮಗೊದಗಿದ ಕ್ಲೇಶ ||
ಪಾಲಾಬ್ಧಿ ಮಥನದಿ ಪಡೆದ ಭಾಗ್ಯವನು | ಪಾಲಿಸುತೀರ್ದೆ ನಿಮ್ಮಾಜ್ಞೆಯೊಳಾನು ||೧೭೧||

ದುರುಳ ನರಕನಪಹರಿಸಿದನದಕೆ | ಹರಿಗೆ ದೂರಲು ತರಿದಾತನ ದಿವಕೆ ||
ತರುಣಿ ಭಾಮಾದೇವಿ ಸಹಿತಲಿ ಬಂದು | ಮರುಳುವ ಪಥದಿ ನಂದನ ಪೊಕ್ಕು ಇಂದು ||೧೭೨||

ಪಾರಿಜಾತದ ತರು ಧಾರಿಣಿಗೊಯ್ವ | ಕಾರಣದಿಂ ಶಾಖೆ ಮುರಿಯುತಲ್ಲಿರುವ ||
ಚಾರರ ಬೆದರಿಸಿ ಶ್ರೀರಮಾಧವನು | ನಾರಿಯು ಸಹಿತಲಿ ಮುಂದ್ವರಿಯುವನು ||೧೭೩||

ವಾರ್ಧಕ

ಒಂದಾಗಿ ನೀವಲ್ಲಿ ನೆಲೆಗೊಳಿಸಿದದನು ಹರಿ |
ಬಂದೋರ್ವ ಭೂತಳಕ್ಕೊಯ್ದನಾದರೆ ದಿವದಿ |
ಕುಂದುವುದು ಸೌಭಾಗ್ಯಪಾಲನೆಯ ಕರ್ತ ಅಪಹಾರವೆಸಗಿದರದರನು ||
ಮುಂದೆ ಉತ್ತಮ ಪದವಿ ಬರಿದಾಯ್ತು ಬೇಲಿ ಬೆಳೆ |
ತಿಂದು ಕೆಡಿಸಲು ಕಾವರಾರು ಲತೆ ನೆಟ್ಟು ಕೈ |
ಯಿಂದ ಕೀಳ್ವವರುಂಟೆ ಎನಲಾಗ ತ್ರಿಪುರಾರಿ ಸುರಪತಿಯೊಳಿಂತೆಂದನು ||೧೭೪||

ರಾಗ ಸಾಂಗತ್ಯ ರೂಪಕತಾಳ

ಭೀತಿಯಾತಕೆ ಪಾರಿಜಾತದ ವೃಕ್ಷವ | ಭೂತಳ ಸೇರದಂದದಲಿ ||
ನೀತಿಯ ತಿಳುಹಿ ನಂದನದಲ್ಲಿ ಇರಿಪೆ ಶ್ರೀ | ನಾಥ ಮುಳಿಯ ನಿಮ್ಮಾಳ್ತನಕೆ ||೧೭೫||

ಅರಸಿ ಭಾಮೆಯ ಮನ ಸರಸವಗೊಳಿಸಲು | ಮುರಿದನಾತನ ಕಂಡು ದಿವಕೆ ||
ಕೊರತೆ ಹೊದ್ದದ ತೆರ ವಿರಚಿಪೆನೆನ್ನುತ | ಪೊರಡಲಾ ಗಿರಿಜೆ ಪೇಳಿದಳು ||೧೭೬||

ಒಂದೇ ಸುವರ್ಣದಿ ಬೊಂಬೆಗಳೆರಡು ನಾ | ವೆಂದು ಪೇಳುವಿರೈಸೆ ಹರಿಯ ||
ಸಂದರ್ಶನದಿಮತ ಬೇರಾಗದಿರೆ ಮಹಾ | ನಂದನ ಬರಿದಪ್ಪುದಯ್ಯ ||೧೭೭||

ಕಂದ

ನೀನದಕೊಪ್ಪಂಗೊಟ್ಟರು |
ಮಾನಿನಿಮಣಿ ಸತ್ಯಭಾಮೆಗೆಲ್ಲವ ತಿಳಿಸುತ ||
ತಾ ನಿರಿಸುವೆನದರಂ ಉ |
ದ್ಯಾನದೊಳೆನುತವರ ಕೂಡಿ ಪೊರಟಳು ಜವದಿಂ ||೧೭೮||

ರಾಗ ಕಾಂಭೋಜಿ ಝಂಪೆತಾಳ

ನಂದಿಯನ್ನೇರಿ ಸತಿಸಹಿತ ಮುಂದಕೆ ಗಮಿಪ | ಇಂದು ಶೇಖರನ ಬಳಿ ಪಿಡಿದು ||
ಒಂದಾಗಿ ಗಜವದನ ಸ್ಕಂದ ಭೈರವ ಪ್ರಮಥ | ವೃಂದ ಪೊರಮಟ್ಟು ಬೇಗದಲಿ ||೧೭೯||

ನಡೆತಂದು ನಂದನದ ಬೆಡಗ ಪರಿಕಿಸುತಲಾ | ಮೃಡನು ಇದಿರಿಗೆ ಬರುವ ಬಗೆಯ ||
ಜಡಜನಾಭನು ತಿಳಿದು ಮಡದಿ ಸಹಿತಲಿ ಬಂದು | ನುಡಿದ ಕೈಮುಗಿದು ಸರಸದಲಿ ||೧೮೦||

ರಾಗ ಕಲ್ಯಾಣಿ ತ್ರಿವುಡೆತಾಳ

ಸಂತಸವಾಂತೆನಯ್ಯ | ಏತರ ಕಾರ್ಯ | ದಿಂ ತವ ಗಮನ ಜೀಯ ||
ಅಂತಕಾಂತಕ ರಜತ ಶೈಲದಿ | ನಿಂತು ಶರಣರ ಚಿಂತಿತಾರ್ಥ ನಿ |
ರಂತರವು ಪಾಲಿಸುವ ಗೌರೀ | ಕಾಂತ ಪೇಳೆನಗಂತರಂಗವ ||೧೮೧||

ಎನ್ನನು ಕೇಳಲೇಕೆ | ಸೇವಿಪ ಸ್ತ್ರೀಯ | ರನ್ನಗಲುತ ದಿವಕೆ ||
ಚಿನ್ಮಯನೆ ನೀ ನಡೆತರುತ ಶತ | ಮನ್ಯುವಿಗೆ ನಾವೊಂದುಗೂಡುತ |
ಮನ್ನಿಸಿದ ತರು ಜಗತಿಗೊಯ್ಯುವೆ | ಎನ್ನುವುದನರಿತೈದೆನಿಲ್ಲಿಗೆ ||೧೮೨||

ವಾರ್ಧಕ

ನರಕನಂ ವಧಿಸಲೈತಂದು ಸತಿಸಹಿತ ಅಪ |
ಹರಿಸಿದ ಸುವಸ್ತುಗಳನಿಲ್ಲಿರಿಸಿ ಮರಳುತಿರೆ |
ತರುಣಿ ಕಂಡಾ ಪಾರಿಜಾತತರು ಶಾಖೆಯೊಂದನು ಮುರಿದು ಧರೆಗೊದರೆ ||
ಕೊರತೆ ಬಪ್ಪುದೆ ದಿವಕೆ ದುರುಳರಂ ನಿರ್ಜರರು |
ಪರಿಪರಿಯ ಕಷ್ಟದಿಂ ಮತಿಗೆಟ್ಟು ದೂರಿದರು |
ಅರಿಯೆಯಾ ನೀ ಮೂಲವುಳಿಸಿ ಕೊಂಬೆಯ ಕೊಳುತ ಗಿರಿಜೆ ಸಹ ತೆರಳೆಂದನು ||೧೮೩||

ರಾಗ ಸಾವೇರಿ ಅಷ್ಟತಾಳ

ನುಡಿಯನಾಲಿಸಿ ನಸುನಗುತ | ಒಪ್ಪಿ | ಮೃಡನಿರೆ ಗಿರಿಜೆ ಕಾಣುತ್ತ ||
ಕಡು ಜಾಣ್ಮೆಯಿಂದೊಡಬಡಿಸುತ ತರುವನು |
ಪೊಡವಿಗೊಯ್ಯುವನದ ಬಿಡೆನೆಂದು ಪೇಳ್ದಳು ||೧೮೪||

ಪಾಲನೆಯಧಿಕಾರಗಳನು | ಪೊತ್ತು | ಹಾಳು ಕೃತ್ಯವ ಮಾಳ್ಪುದೇನು ||
ಕೀಳುಮೇಲೆಂಬುದರಿಯದವಳ ನುಡಿ | ಕೇಳಿ ನಾಕದ ವಸ್ತು ಭೂಲೋಕಕೊಯ್ವುದೆ ||೧೮೫||

ಬೋಧಿಸಿ ದುರ್ಮಾರ್ಗಗಳನು | ಕೆಟ್ಟ | ಹಾದಿಗಿಳಿವ ಸತಿಯನ್ನು ||
ಮೋದಗೊಳಿಪೆನೆಂದು ಸಾಧಿಸಿದರೆ ಕಾರ್ಯ | ಮೇದಿನಿಯೊಳು ಅಪವಾದ ಹೊದ್ದುವುದಯ್ಯ |೧೮೬||

ಕಂದ

ಹಲವಂಗದೊಳಾ ಭಾಮೆಯ |
ಹಳಿಯುತ ಶ್ರೀವರನೊಳೆಂದ ವಾಕ್ಯವ ನಾಲಿಸಿ ||
ಮುಳಿಸಂ ತಾಳುತ ಮನದೊಳು |
ಬಳಿ ಸಾರುತಲಾಕೆ ಎಂದಳತಿ ನಿಷ್ಠುರದಿಂ ||೧೮೭||

ರಾಗ ಕೇದಾರ ಏಕತಾಳ

ದೂರುವೆ ಯಾಕೆನ್ನ ನರಕ | ಸೂರೆಗೈಯ್ಯೆ ದಿವವ ಖಳನ |
ತೀರಿಸುತ್ತ ಸಲಹಿದ ವಿ | ಚಾರ ತಿಳಿಯೆಯ ||
ಪಾರಿಜಾತ ವೃಕ್ಷದಿಂದ | ಊರಿಗೊಯ್ಯೆ ಕೊಂಬೆಯೊಂದು |
ಆರು ನಿನಗೆ ಕೇಳ್ವ ಅಧಿಕಾರವಿತ್ತರು ||೧೮೮||

ಗಳಹಬೇಡ ಭಾಮೆ ನಾಕ | ಬೆಳಗಲೆಂದು ತ್ರೈಮೂರ್ತಿಗಳು |
ಒಲಿದು ಸುರರಿಗಿತ್ತರಿದನು | ಇಳೆಗೆ ಒಯ್ವುದೆ ||
ಹಲವು ಸತಿಯರಿದ್ದರವರ | ಬಳಿಗೆ ಸೋಕದಂತೆ ಮರುಳು |
ಗೊಳಿಸಿ ವರನ ಮಾನ ಕಳೆದು | ಹಳಿವೆ ನಮ್ಮನು ||೧೮೯||

ದಾನವಾರಿಯಂತರಂಗ ನೀನೇನರಿವೆ ನಿರತವು ಸ್ಮ |
ಶಾನ ಕಾವನರಸಿಗುಂಟೆ | ಸ್ಥಾನಮಾನವು ||
ಹೀನೆ ನಿನ್ನ ಕರೆದರಾರು | ಜಾಣತನವು ಸಲ್ಲದಿಲ್ಲಿ |
ಪ್ರಾಣದರಸನೊಡನೆ ನಡೆ ಉ | ದ್ಯಾನದಿಂದಲಿ ||೧೯೦||

ಬಲ್ಲುದು ಮೂಲೋಕ ನಿನ್ನ | ವಲ್ಲಭನನು ಪೊಗಳಬೇಡ |
ಗೊಲ್ಲರಾಲಯಾಲಯಂಗಳಲ್ಲಿ ಚರಿಸುತ ||
ಕಳ್ಳತನದಿ ಪಾಲು ಮೊಸರ | ನೆಲ್ಲ ಮೆದ್ದು ಸತಿಯರನ್ನು |
ಲಲ್ಲೆಗೈದು ಕೂಡಿದವ ಗಿ | ನ್ನೆಲ್ಲಿ ಮಾನವು ||೧೯೧||

ಮರುಳುಗಳನು ಕೂಡಿ ಹಗಲು | ಇರುಳು ನಲಿದು ತಿರಿದುಂಬುವನ |
ಅರಸಿ ಎನ್ನ ವರನ ಇನಿತು | ಜರೆದು ನುಡಿವೆಯಾ ||
ವಿರಸವಿಲ್ಲದಂತೆ ಹಲವು | ತರುಣಿಯರನು ವರಿಸಿ ಸುಖವ |
ಕರುಣಿಸುವನು ಧರ್ಮಬೋಧೆ | ಯರುಹಿ ಕರುಣದಿ ||೧೯೨||

ವಾರ್ಧಿಕ್ಯ

ಸತ್ಯಧರ್ಮದಿ ನಡೆಸುವವನು ನಂದನದಿ ತ್ರೈ |
ಮೂರ್ತಿಗಳು ಒಮ್ಮತದಿ ಇರಿಸಿದ ಮಹಾತರುವ |
ಪೃಥ್ವಿಗೊಯ್ಯುವ ನಿನಗೆ ನೆರವಾಗುವನೆ ಪೋಗಗೊಡೆನು ನಾ ದಿಟವೆನುತಲಿ ||
ಹಸ್ತದಿಂ ಪಿಡಿದೆಳೆಯುವನಿತರೊಳು ಕನಲುತ್ತ |
ಸತ್ಯಭಾಮೆಯು ತುಡುಕುತಿರಲಾಕೆಯೊಳು ಮುಳಿದು |
ಸುತ್ತುಮುತ್ತಲು ಕವಿದು ಗಜವದನ ಗುಹಭೈರವಾದಿ ಪ್ರಮಥರು ಮುಸುಕಲು ||೧೯೩||

ರಾಗ ಆರ್ಯುಸವಾಯಿ

ಬಿರುಸಾಗಲು ಸಂಗರ ಮೂಲೋಕವು | ತರಹರಗೊಳುತಿರಲರಿತದನು ||
ಸರಸಿಜಭವ ನಡೆತರುತ ತಡೆವುತೀ | ರ್ವರ ಹರಿಹರರೊಡನರುಹಿದನು ||೧೯೪||

ರಾಗ ಬಿಲಹರಿ ಅಷ್ಟತಾಳ

ಸರಸವೆ ನಿಮಗಿದು ಸತಿಯರೀರುವರು | ಪರಿ ಪರಿ ಪಂಥದಿ ಕಾದಾಡುತಿಹರು ||
ಪರಿಕಿಸಿ ನೀವು ಕುಳ್ಳಿರುವುದೇಕಯ್ಯ | ಸುರಪುರದೊಳು ಇಂತಾಗಿರುವುದಾಶ್ಚರ್ಯ ||೧೯೫||

ಆದಿಯಿಂದಲಿ ನೀವು ಭೇದರಹಿತರು | ಕ್ರೋಧದಿಂದಿವರತಿ ಖೇದ ಪುಟ್ಟಿಪರು ||
ವಾದಕೆ ಮೂಲವೆಂತಾಯ್ತೆನೆ ಕೇಳಿ | ಮಾಧವನೆಂದ ವಿನೋದವ ತಾಳಿ ||೧೯೬||

ರಾಗ ಬೇಗಡೆ ಅಷ್ಟತಾಳ

ಕಮಲಭವ ನಾನೇನ ಬಣ್ಣಿಪೆನು | ಮುರನರಕರಿಂದಲಿ |
ಅಮಿತಸಂಪದ ಸೂರೆಯಾದುದನು ||
ಸುಮನಸಾಧಿಪ ದೂರಲೋರ್ವಗೆ | ಕುಮತಿಯೊಳು ಜಯವಾಗದೆನುತಾ |
ರಮಣಿ ಭಾಮಾದೇವಿ ಸಹಿತಾ | ಗಮಿಸುತವರೊಳು ಸಮರವೆಸಗಿದೆ ||೧೯೭||

ಕ್ರೂರನನು ತೀರಿಸುತ ಸಂಪದವ | ಸುರವಾರಕೀವುತ |
ದಾರಿ ಪಿಡಿದೈತರಲು ನಂದನವ ||
ನಾರಿಮಣಿ ಪರಿಕಿಸುತಲಿಲ್ಲಿಹ | ಪಾರಿಜಾತದ ಮರದ ಶಾಖೆಯ |
ಊರಿಗೊಯ್ಯುವ ಬಗೆಯರಿತು ತ್ರಿಪು | ರಾರಿ ಬಂದು ವಿಚಾರಗೈದನು ||೧೯೮||

ಅರಿತು ಹದನವ ಸರಿಯೆನುತ ಹರನು | ಅದಕೊಪ್ಪಗೊಡಲಾ |
ಗಿರಿಜೆ ಮತ್ಸರಿಸುತ್ತ ಭಾಮೆಯನು ||
ಜರೆದು ನುಡಿಯಲು ಸೈರಿಸದೆ ಉ | ತ್ತರದಿವಾದವು ಬೆಳೆದುದದರಿಂ |
ತರುಣಿಯರು ಹೊದಾಡಿಕೊಂಬರು | ಪರಿಹರಿಸು ನೀನೆನಲಿಕೆಂದನು ||೧೯೯||

ವಾರ್ಧಕ

ಮೂರುಮೂರ್ತಿಗಳಾವು ಇರಿಸಿರುವ ಈ ಮಹಾ |
ಪಾರಿಜಾತದ ತರುವ ಮುರಿದುದನುಚಿತ ನರಕ |
ಸೂರೆಗೈದುದನು ಮಗುಳಿತ್ತ ಉಪಕೃತಿಗೆ ಬಳುವಳಿ ಎಂದು ಭಾವಿಸುವುದು ||
ಧಾರಿಣಿಗೆ ಕೊಂಡು ಪೋಪುದು ಕೊರತೆಯಾದಡೆಯು |
ಶ್ರೀರಮಾಧವನಿರುವ ಪರಿಯಂತರಲ್ಲಿರಲಿ |
ಸಾರಿ ಬಹುದಾಮೇಲೆ ದಿವಕೆ ಒಮ್ಮತದೊಳಿದ ಭಾಮೆಗೀಯುವದೆಂದನು ||೨೦೦||

ರಾಗ ಕೇದಾರಗೌಳ ಅಷ್ಟತಾಳ

ಎಂದು ಸಂತೈಸುತ್ತ ಹರಿಹರರನು ಅರ | ವಿಂದಭವನು ಕರೆದು ||
ಒಂದಾಗಿ ಗಿರಿಜಾತೆ ಸಹಿತ ಶಾಖೆಯ ಮುದ | ದಿಂದಿತ್ತನಾ ಭಾಮೆಗೆ ||೨೦೧||

ಮೃಡನು ತನ್ನವರೊಡಗೂಡಿ ತೆರಳೆ ಸುರ | ಗಡಣವ ಸಂತವಿಸಿ
ಮಡದಿ ಭಾಮೆಯ ಸಹ ಜಡಜಾಕ್ಷ ತ್ವರಿಯದಿ | ನಡೆತಂದ ದ್ವಾರಕಿಗೆ ||೨೦೨||

ಭೂತಳಕಿಳಿಸಿದಳಾ ಭಾಮೆ ಸುರಪಾರಿ | ಜಾತವ ತರುವನೆಂದು ||
ಮಾತಾಡುತದನು ನೋಳ್ಪಾತುರದಲಿ ಜನ | ವ್ರಾತವು ನಡೆತರಲು ||೨೦೩||

ಕಂದ

ಬೆಳೆಸಲ್ಕಾ ತರು ರುಕ್ಮಿಣಿ |
ನಿಳಯಕೆ ಸುಮ ಸುರಿವು | ತೀರ್ದುದತಿ ಪರಿಮಳದಿಂ ||
ಒಳವಂ ತಿಳಿಯದೆ ಗರ್ವದಿ |
ಬಲು ಉಬ್ಬುತ ನುಡಿದಳಾಗ ಹರಿ ಇದಿರಿನೊಳಂ ||೨೦೪||

ರಾಗ ಕಾಂಭೋಜಿ ಝಂಪೆತಾಳ

ತರುಣಿ ರುಕ್ಮಿಣಿ ಹಿರಿಯ ಅರಸಿ ಗುಣಯುತೆಯೆಂದು |
ಸುರ ಮುನಿಪನೆಂದ ನುಡಿಗೇಳಿ ||
ಮರುಳಾಗಿ ಕೊಂಡಾಡಿ ಫಲವೇನು ಎನಗೆ ಸರಿ |
ಇರುವವಳೆ ಅರಿತು ನೋಡಯ್ಯ ||೨೦೫||

ಕ್ರೂರ ನರಕನ ವಧೆಗೆ ಆರು ನೆರವಾದವಳು |
ಏರಿದರೆ ಸುರರ ಮಂದಿರಕೆ ||
ಪಾರಿಜಾತದ ತರುವ ಧಾರಿಣಿಗೆ ಇಳಿಸಿದಳೆ |
ಗೌರಿಯೊಳು ಧುರವನೆಸಗಿದಳೆ ||೨೦೬||

ಹರಬ್ರಹ್ಮ ಸುರಪ ಮುಖ್ಯರ ಬೆರಗುಗೊಳಿಸಿದಳೆ |
ಪರಿಣಯದಿ ಬಂದಿಹಳೆ ಪುರಕೆ ||
ಪರಿಪರಿಯ ಸೌಭಾಗ್ಯಕೊಂಡು ಬಂದವರಾರು |
ಅರಿಯೆಯಾ ಎನ್ನ ಹಿರಿಮೆಗಳ ||೨೦೭||

ಸತಿಯಂತರಂಗವನು ಪತಿಯರಿತು ನಡೆಯಲು |
ನ್ನತ ಕೀರ್ತಿಬಹುದು ಭೂತಳದಿ ||
ಸತತ ನೀ ಎನ್ನ ಅಭಿಮತದಂತೆ ಇಹುದೆಂದು |
ಅತಿ ಗರ್ವದಿಂದಿರಲು ಪುರದಿ ||೨೦೮||

ರಾಗ ಸಾಂಗತ್ಯ ರೂಪಕತಾಳ

ನರಲೀಲೆಗಿದು ಶುಭಕರವೆಂಬ ತೆರದಿ ಶ್ರೀ | ವರ ಅಷ್ಟಮಾಂಗನೆಯರಲಿ ||
ಸರಸವನಾಡುತ್ತ ಚರಣಸೇವೆಯಗೊಂಡು | ಮೆರೆದೀರ್ದ ದ್ವಾರಕಾಪುರದಿ ||೨೦೯||

ವಾರ್ಧಕ

ಧರಣಿಪ ಪರೀಕ್ಷಿತಗೆ ಶುಕ ಮುನಿಪನೊಲಿದು ವಿ |
ಸ್ತರಿಸಿದ ಕಥಾ ಸಮುದ್ರದೊಳಗೊಂದು ಬಿಂದು ವೀ |
ಚರಿತೆಯಂ ಹರಿಯ ಸ್ತುತಿಸುತ ಯಕ್ಷಗಾನದೊಳು ಮನಕೆ ಹೊಳೆದಂದದಿಂದ ||
ವಿರಚಿಸಿದ ಬಲಿಪನಾರಾಯಣಂ ಭಾಗವತ |
ಶರಣ ಜನ ಕಿಂಕರಂ ಪೇಳಿ ಕೇಳ್ವರಿಗೆಲ್ಲ |
ಕರುಣದಿಂ ಮನದಿಷ್ಟವಿತ್ತು ಪಾಲಿಪ ಕಣ್ವ ಪುರದೊಡೆಯ ಶ್ರೀಕೃಷ್ಣನು ||೨೧೦||

ಯಕ್ಷಗಾನ ನರಕಾಸುರ ವಧೆ ಮುಗಿದುದು