ಲಂಬಾಣಿ (ಬಂಜಾರ) ಬುಡಕಟ್ಟನ್ನು ನೆನೆದಾಕ್ಷಣ ಹತ್ತಾರು ಚದುರಿದ ಚಿತ್ರಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಅವರ ತಾಂಡಾದ ಬದುಕು ಮತ್ತು ಲಂಬಾಣಿ ಸ್ತ್ರೀಯರ ರಂಗುರಂಗಿನ ವೇಷಭೂಷಣ ಮೇಲ್ನೋಟಕ್ಕೆ ಜನಮನವನ್ನೇ ಸೆಳೆಯುತ್ತದೆ. ತಮ್ಮ ಸುಖ-ದುಃಖ, ನೋವು-ನಲಿವುಗಳನ್ನು ಪರಸ್ಪರರಲ್ಲಿ ಹಂಚಿಕೊಂಡು ಉಣ್ಣುವ ಬುಡಕಟ್ಟು ಇದು. ಹಬ್ಬಗಳು ಇರಲಿ ಅಥವಾ ಇಲ್ಲದಿರಲಿ ಜೀವನ ಉತ್ಸಾಹ, ಮೋಜು, ಕುಣಿತ ಇತ್ಯಾದಿಗಳು ಲಂಬಾಣಿ ಬುಡಕಟ್ಟಿನ ವೈಶಿಷ್ಟ್ಯಗಳಾಗಿವೆ. ಇವರು ಜೀವನೋಪಾಯಕ್ಕಾಗಿ ಭಾರತದ ಹತ್ತಾರು ಕಡೆಗೆ ಚದುರಿ ಹೋಗಿದ್ದರು. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಒತ್ತಟ್ಟಿಗೆ ಕೂಡುತ್ತಾರೆ. ಇವರಿಗೆ ಬಡತನವಿರಲಿ, ಸಿರಿತನವಿರಲಿ ಸಂತೋಷದಿಂದ ಹಬ್ಬ-ಹರಿದಿನಗಳನ್ನು ಆಚರಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ಸೋಲೊಪ್ಪದ ಸರದಾರರಿವರು. ಏಕೆಂದರೆ, ಲಂಬಾಣಿ ಬುಡಕಟ್ಟು ಶ್ರಮಜೀವನದಲ್ಲಿ ಸಂತೃಪ್ತಿ ಕಂಡವರು. ಆದ್ದರಿಂದಲೇ ಈ ಕೃತಿಗೆ “ಬದುಕೊಂದು ಚಿತ್ತಾರ : ಲಂಬಾಣಿ ಬುಡಕಟ್ಟು” ಎಂದು ಹೆಸರಿಸಲಾಗಿದೆ.

ಕಾರಣ ಈ ಕೃತಿಯೊಂದು ಹತ್ತಾರು ಚಿತ್ರಗಳ ಸರಮಾಲೆಯೆಂದು ಹೇಳಬಹುದು. ಈ ಕೃತಿಗೆ ಹೆಸರಿಡುವಾಗ ನಾನು ತುಂಬ ಗಂಭೀರವಾಗಿ ಆಲೋಚಿಸಿದ್ದೇನೆ ಮತ್ತು ಲಂಬಾಣಿ ಸಮಾಜವನ್ನು ಹಲವಾರು ಭಂಗಿಯಲ್ಲಿ ಹತ್ತಿರದಿಂದ ನೋಡಿದ್ದೇನೆ. ಇದರಿಂದ ಲಂಬಾಣಿ ಸಂಸ್ಕೃತಿಯ ಹಲವಾರು ಮುಖಗಳು ಓದುಗನ ಕಣ್ಣೆದುರು ತೆರೆದು ನಿಲ್ಲುತ್ತದೆ.

ಲಂಬಾಣಿ ಸಂಸ್ಕೃತಿ ಎಂದರೆ ಒಂದು ಸಂಕೀರ್ಣ ಸಮುಚ್ಛಯ ಸ್ವರೂಪದ್ದು. ಆದ್ದರಿಂದ ಅದನ್ನು ಕುರಿತು “ಇದಂ ಇತ್ಥಂ” ಎಂದು ಹೇಳುವುದು ಬಹುಶಃ ದುಸ್ತರ. ಆದರೂ ಕೆಲವು ಮಾತುಗಳನ್ನು ಅನಿವಾರ್ಯವಾಗಿ ಹೇಳಬೇಕಾಯಿತು.

ಸೇವಾಲಾಲರನ್ನು ಕುರಿತು ಪುರಾಣ ರಚನೆ ಹೇಗೆ ಇವರಿಗೆ ಪ್ರಿಯವೋ ಮತ್ತು ಅವರ ಪುರಾಣ ಪ್ರಜ್ಞೆಗೆ ಸಾಕ್ಷಿ ಆಗಿದೆಯೋ ಹಾಗೆಯೇ ಮಹಾತ್ಮಾ ಗಾಂಧೀಜಿಯನ್ನು ಕುರಿತು ಈ ಪದ್ಯ ಅವರ ಸಮಕಾಲೀನ ಪ್ರಜ್ಞೆಗೆ ಸಾಕ್ಷಿಯಾಗಿದೆ.

“ಅವತಾರಿ ಮಹಾತ್ಮಾ ಗಾಂಧೀರೇ
ಭಾರತೇರೋ ಭಾರ ವತಾರೋರ   || ಪಲ್ಲ ||

ಮಾರೇ ಗಾಂಧೀರೆ ಹಾತೇಮ ಚರಕಾರ
ಸಾವುಕಾರೇ ಹಾತೇಮ ಛತರೀರ
ಮಾರೇ ಗರಿಬೇರ ಹಾತೇಮ ಕೋದಾಳಿರ    || ೧ ||

ರಾಮೇರ ಹಾತೇಮ ಧನುಸ್ಯಾರ
ಕೃಷ್ಣೇರ ಹಾತೇಮ ಚಕ್ಕರರ
ಮಾರೇ ಗಾಂಧೀರ ಹಾತೇಮ ಚರಕಾರ       || ೨ ||

ರಾಮೇರ ಜೋಡಾ ಸೀತಾರ
ಕೃಷ್ಣೇರ ಜೋಡಾ ರುಕ್ಮಿಣಿ
ಮಾರ ಭಜನೇರ ಜೋಡಾ ತಬಲಾರ         || ೩ ||

ರಾಮತೋ ಮಾರೋ ರಾವಳೇನ
ಕೃಷ್ಣತೋ ಮಾರೋ ಕಂಸೇನ
ಮಾರೋ ಗಾಂಧೀ ಹಟಾಯೋ ದುಸಮನೇನ”        || ೪ ||

ಅರ್ಥ : “ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಈ ಪದ್ಯದಲ್ಲಿ ಒಬ್ಬ ಅವತಾರಿ ಪುರುಷ ಎಂದು ಬಣ್ಣಿಸಲಾಗಿದೆ. ಶ್ರೀಮಂತನ ಕೈಯಲ್ಲಿ ಕೊಡೆ, ಬಡವನ ಕೈಯಲ್ಲಿ ಗುದ್ದಲಿ ಇರುವ ಹಾಗೇ ಗಾಂಧೀಜಿಯವರ ಕೈಯಲ್ಲಿ ಚರಕ ಇದೆ ಎಂದು ಇಲ್ಲಿ ಹೇಳಲಾಗಿದೆ.

ಪ್ರಜಾರಕ್ಷಣೆಗಾಗಿ ದುಷ್ಟರ ಸಂಹಾರಕ್ಕಾಗಿ ರಾಮನು ಕೈಯಲ್ಲಿ ಧನಸ್ಸು ಹಿಡಿದರೆ, ಕೃಷ್ಣ ತನ್ನ ಕೈಗೆ ಸುದರ್ಶನ ಚಕ್ರವನ್ನು ಧರಿಸಿದ. ಹಾಗೆಯೇ ನಮ್ಮ ಮಹಾತ್ಮಾ ಗಾಂಧೀಜಿಯವರ ಕೈಯಲ್ಲಿ ಸರ್ವೋದಯದ ಸಂಕೇತವಾಗಿ, ಸದಾ ನೂಲು ತೆಗೆಯುವ ಚರಕವಿದೆಯೆಂದು ಈ ಪದ್ಯದಲ್ಲಿ ವರ್ಣಿಸಲಾಗಿದೆ.

ರಾಮನ ಯಶಸ್ವಿ ಬದುಕಿನ ಹಿಂದೆ, ಆತನ ಪತ್ನಿ ಸೀತೆಯ ಪಾತ್ರವೂ ಮಿಗಿಲಾದುದು. ರಾಮನಿಗೆ ಸೀತೆ ಜೊತೆಗಾರ್ತಿಯಾದ ಹಾಗೆ, ಕೃಷ್ಣನಿಗೆ ರುಕ್ಮಿಣಿ ಇದ್ದಾಳೆ. ಇದರಂತೆ ಲಂಬಾಣಿಗಳ ಭಜನೆಯ ಪದಗಳು ತುಂಬಾ ಲಯಬದ್ಧವಾಗಿ ಹೊರಹೊಮ್ಮಲು ಅವರಿಗೆ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿಯವರ ಕುರಿತಾದ ಈ ದೇಶಭಕ್ತಿ ಪದದಲ್ಲಿ ರಾಮ ರಾವಣನನ್ನು ಸಂಹರಿಸಿದ, ಕೃಷ್ಣ ಕಂಸನನ್ನು ಕೊನೆಗೊಳಿಸಿದ ಹಾಗೆ ಬಾಪೂಜಿ ಬ್ರಿಟೀಷರನ್ನು ಹೊರಗೆ ಓಡಿಸಿ ರಾಷ್ಟ್ರಕ್ಕೆ ಬಿಡುಗಡೆ ತಂದುಕೊಟ್ಟರು ಎಂದು ಹೇಳಲಾಗಿದೆ. ಹೀಗೆ ಲಂಬಾಣಿ ಪದಗಳಲ್ಲಿ ನಮ್ಮ ನಾಡಿನ ಪುರುಷರ ರಾಷ್ಟ್ರಭಕ್ತಿಯನ್ನು ಕುರಿತಾಗಿ ಬಹಳಷ್ಟು ಸುಂದರವಾದ ಚಿತ್ರಣಗಳು ನಮಗೆ ಕಾಣಸಿಗುತ್ತವೆ.”

ಈ ಹಾಡು ನಮ್ಮ ಕಿವಿಗೆ ಬಿದ್ದಾಗ ನಮಗೆ ಥಟ್ಟನೆ ನೆನಪಾಗುವುದು ಲಂಬಾಣಿ ಜನಾಂಗ. ಇವರು ಒಂದು ವಿಶಿಷ್ಟ ಸಮುದಾಯವಾಗಿ ತಮ್ಮದೇ ಆದ ಸಂಸ್ಕೃತಿ, ಜೀವನ ವಿಧಾನವನ್ನು ಹೊಂದಿದ್ದಾರೆ. ಇವರು ಭಾರತದ ತುಂಬೆಲ್ಲ ಹಬ್ಬಿ ಹರಡಿಕೊಂಡಿದ್ದಾರೆ.

ಭಾರತದಲ್ಲಿ ಕಂಡುಬರುವ ಅನೇಕ ಬುಡಕಟ್ಟುಗಳಲ್ಲಿ ಅತ್ಯಂತ ಪ್ರಮುಖವಾದ ಬುಡಕಟ್ಟು ಲಂಬಾಣಿಗರದು. ಒಂದು ಕಾಲದಲ್ಲಿ ಅಲೆಮಾರಿ ಗುಂಪಾಗಿದ್ದ ಲಂಬಾಣಿಗರು, ತಮ್ಮ ವ್ಯವಹಾರ, ಆಚಾರ, ವಿಚಾರ ಒಟ್ಟು ಸಂವಹನ ಪ್ರಕ್ರಿಯೆಯನ್ನು ಮೌಖಿಕ ಪರಂಪರೆಯಲ್ಲಿ ಸಾಗಿಸಿಕೊಂಡು ಬಂದವರು. ದೇಶದ ತುಂಬೆಲ್ಲ ವ್ಯಾಪಿಸಿದ್ದರೂ ಎಲ್ಲೆಡೆಯೂ ಒಂದೇ ಬಗೆಯ ಜೀವನಶೈಲಿ ಮತ್ತು ವಿಧಾನವನ್ನು ಹೊಂದಿದಂಥ ಲಂಬಾಣಿಗರು, ಇಂದಿಗೂ ಹಳ್ಳಿ ನಗರಗಳಿಂದ ದೂರದಲ್ಲಿ ತಮ್ಮದೇ ಆಗ ತಾಂಡಾಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ.

ಲಂಬಾಣಿ ಜನಾಂಗದ ಉಗಮವನ್ನು ಸಾರುವ ಮೋಲಾ ದಾದಾ ಕಥೆ ಜನಜನಿತವಾಗಿದೆ. ಮೌಖಿಕ ಪರಂಪರೆಯಲ್ಲಿ ಮುಂದುವರೆದು ಬಂದಿದೆ. ಮೋಲಾ ದಾದಾ ಶ್ರೀಕೃಷ್ಣನ ಗೋವುಗಳನ್ನು ಕಾಯುತ್ತಿದ್ದನು. ಹಲವಾರು ದಿನಗಳಾದ ಮೇಲೆ ಶ್ರೀಕೃಷ್ಣನಿಂದ ರಾಧಿಕಾಳನ್ನು ಪಡೆದುಕೊಂಡು ಬಂದನು. ಮೋಲಾ ರಾಧಿಕಾ ಇಬ್ಬರೂ ಕೂಡಿಕೊಂಡು ರಾಹುಗಡದಿಂದ “ರಾಠೋಡ”, ಪಾವುಗಡದಿಂದ “ಪವಾರ” ಮತ್ತು ಚಾವುಗಡದಿಂದ “ಚವ್ಹಾಣ” ಈ ಮೂವರು ದತ್ತಕ ಪುತ್ರರನ್ನು ಪಡೆದುಕೊಂಡು ಬಂದರು. ಈ ಮೂವರಿಗೆ ಸುಖದೇವ ಬ್ರಾಹ್ಮಣನ ಕನ್ಯೆಯರಾದ ನಾಗರಶಿ, ಕೋಗರಶಿ ಮತ್ತು ಆಶಾವರಿಗೆ ಕೊಟ್ಟು ಮದುವೆ ಮಾಡಿದರು. ಹೀಗೆ ಈ ಗುಂಪಿನವರೇ ಲಂಬಾಣಿಗಳೆಂದು ಪರಂಪರಾಗತವಾಗಿ ನಂಬಲಾಗಿದೆ.

ಭಾರತದಲ್ಲಿ ಲಂಬಾಣಿಗರ ಜನಸಂಖ್ಯೆ ೨೦೦೧ರ ಜನಗಣತಿಯ ಪ್ರಕಾರ ೬ ಕೋಟಿ ೮೪ ಲಕ್ಷ ಎಂದು ದಾಖಲಿಸಲಾಗಿದೆ. ೪೫ ಲಕ್ಷ ಲಂಬಾಣಿ ಜನಸಂಖ್ಯೆ ಹೊಂದಿದ ಕರ್ನಾಟಕವು ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ.

ಹರಿವ ಹೊಳೆಯ ಪಕ್ಕದಲ್ಲಿ, ಹಸಿರು ಹೊದ್ದ ಕಾಡುಗಳಲ್ಲಿ ಸುತ್ತಾಡುವಾಗ, ತಮ್ಮ ರಂಗುರಂಗಿನ ವೇಷಭೂಷಣದಿಂದ ಜನಮನವನ್ನು ಸೆಳೆಯುವ ಲಂಬಾಣಿಗರು ನಿಸರ್ಗಪ್ರಿಯರು. ಕಾಡು, ಕಣಿವೆ, ಬೆಟ್ಟಗಳ ಮಡಿಲಲ್ಲಿ ಹಚ್ಚ ಹಸಿರಿನ ತಾಣ, ಸುತ್ತಲೂ ಗಿಡಮರಗಳು, ಆ ಗಿಡಮರಗಳಲ್ಲಿ ಪಕ್ಷಿಗಳ ಮಧುರವಾದ ಇಂಚರ ಮೈಮನ ಪುಳಕಿಸುವಂತಹ ವಾತಾವರಣ, ನಿಸರ್ಗದ ಮಡಿಲಿಗೆ ದನಕರುಗಳನ್ನು ಬಿಟ್ಟು, ಲಂಬಾಣಿ ಕೋಗಿಲೆಗಳು ತಮ್ಮ ಮಧುರವಾದ ಕಂಠದಿಂದ ನಿಸರ್ಗವನ್ನು ಕುರಿತು ಈ ರೀತಿ ಹಾಡುತ್ತಾರೆ :

“ಏ ಬಾಯಿ ಕಾಳೋತೋ, ಕಾಳೋ ಕೋಟಾ ಉತರೋಚ
ಏ ಬಾಯಿ ಯಮುನಾ ಜಮುನಾರಿ ವಿಜ ಖವರಿಚ
ಏ ಬಾಯಿ ಎಕಲೋ ವೀರೇಣಾ ಸಾಲಿನ ಗೇಜ
ಏ ಬಾಯಿ ಚಡು ಮಾಳಗಿನ ದೆಕು ವೀರೇಣಾನ
ಏ ಬಾಯಿ ಮನ ಡರಲಾಗ ಯಾಡಿನ ಘೋರಲಾಗ”

ಅರ್ಥ : “ನಿಸರ್ಗದ ಮಡಿಲಲ್ಲಿ ಒಂದು ಮನೆ ಇದೆ. ಮಳೆಗಾಲದ ಸಂದರ್ಭ, ಆಕಾಶದಲ್ಲಿ ಕಪ್ಪನೆಯ ಮೋಡಗಳು ಹಿಂಡು ಹಿಂಡಾಗಿ ತೇಲಿಬರುತ್ತಿವೆ. ಒಂದಕ್ಕೊಂದು ಡಿಕ್ಕಿ ಹೊಡೆದು ವಿವಿಧ ದಿಕ್ಕುಗಳಿಂದ ಸಿಡಿಲು ಬೀಳುತ್ತಿವೆ. ಇಂಥ ದಟ್ಟ ಮಳೆಗಾಲದ ಸಂದರ್ಭದಲ್ಲಿ ತನ್ನ ಸಹೋದರ ಶಾಲೆಗೆ ಹೋಗಿದ್ದಾನೆ. ಆತನ ಬರುವಿಕೆಯನ್ನೇ ಎದುರು ನೋಡುತ್ತಿರುವ ಸಹೋದರಿ ತುಂಬ ಭಯಭೀತಳಾಗಿ ದಾರಿ ಕಾಯುತ್ತಿದ್ದಾಳೆ. ಮಾಳಗಿ ಹತ್ತಿ ಅವನನ್ನು ನೋಡುತ್ತಿದ್ದಾಳೆ. ತನ್ನ ಹಾಗೆ ತಾಯಿಗೂ ಸಹೋದರನ ಚಿಂತೆ ಕಾಡುತ್ತಿದೆ ಎಂದು ಈ ಪದ್ಯದಲ್ಲಿ ವರ್ಣಿಸಲಾಗಿದೆ.”

ವಿವಿಧ ಸನ್ನಿವೇಶಗಳನ್ನು ತಮ್ಮ ಪದ್ಯದಲ್ಲಿ ಬಳಸಿಕೊಂಡು ಲಂಬಾಣಿಗಳು ಹಾಡುವುದರಲ್ಲಿ ಬಲು ಜಾಣರು. ಉದಾಹರಣೆಗಾಗಿ ವಿಜಾಪುರದ ಗೋಲಗುಮ್ಮಟದಲ್ಲಿ ಕಟ್ಟಿದೆ ಎನ್ನಲಾದ ಸಿಡಿಲನ್ನು ಕುರಿತು ಹಾಡಿದ ಪದ್ಯ ಹೀಗಿದೆ :

“ದಡಿಯಾತಿ ದಡಿ ರಡಿರೆ ಮನುಜಾ
ದಾನಾರೋ ಮಾತೋ ಫೂಟೋರೆ ಮನುಜಾ
ಮಾತೆರೋ ಕಾಂಯಿ ರಡೋರ ಮನುಜಾ
ಮಾತೆರೋ ಭೇಜೋ ರಡೋರ ಮನುಜಾ
ಭೇಜೇರೋ ಭೇಜೋ ರಡೋರ ಮನುಜಾ
ಸೀಸೇರೋ ಕಾಸೋ ಬಣೋರ ಮನುಜಾ
ಕಾಸೇರಿ ಥಾಳಿ ಬಣಿರ ಮನುಜಾ
ಗೋಬರೇರಿ ಖಾಯಿ ಖೋದೇರ ಮನುಜಾ
ಖಾಯಿಮ ಥಾಳಿ ಗಾಡೇರ ಮನುಜಾ
ಬೇಟಿನ ದಾಜೋ ದಿನೇರ ಮನುಜಾ
ವಿಜೇನ ಸಾಕಳಿ ಲಗಾಡೋ ಮನುಜಾ
ವಿಜಾಪರೇಮ ವಿಜ ಬಂಧಿರ ಮನುಜಾ
ವಿಜೇರೋ ವಾಜಾ ಗಾರಿರೇ ಮನುಜಾ”

ಅರ್ಥ: “ಸಿಡಿಲಿಗೆ ಇಲ್ಲಿ ಒಂದೊ ಚೆಂಡಿನ ಉಪಮೆ ನೀಡಲಾಗಿದೆ. ಒಂದು ಗುಡ್ಡದಿಂದ ಇನ್ನೊಂದು ಗುಡ್ಡಕ್ಕೆ ಚೆಂಡು ಉರುಳಿ ರಾಕ್ಷಸನ ತಲೆ ಒಡೆಯುತ್ತದೆ. ತಲೆಯಿಂದ ಸಿಡಿದ ಮೆದುಳು ಸೀಸವಾಗುತ್ತದೆ. ಸೀಸದಿಂದ ಕಂಚು ತಯಾರಾಗಿ ಕಂಚಿನಿಂದ ಗಂಗಾಳ(ಥಾಳಿ) ಇದನ್ನು ಒಂದು ಗುಂಡಿ ಅಗೆದು ಅದರಲ್ಲಿ ತುಂಬಿದ ಹೆಂಡಿಯಲ್ಲಿ ಬಚ್ಚಿಡುತ್ತಾರೆ. ಮದುವಣಗಿತ್ತಿಗೆ ಮದುವೆಯ ಸಂದರ್ಭದಲ್ಲಿ ಈ ಗಂಗಾಳನ್ನು ಒಡವೆಯ ರೂಪದಲ್ಲಿ ಕೊಡುವ ಸಂಪ್ರದಾಯ ಲಂಬಾಣಿಗರಲ್ಲಿದೆ. ಗಂಗಾಳಿಗೆ ಸಿಡಿಲು ಬಡಿದಾಗ ಅದನ್ನು ನಾಲ್ಕಾರು ಜನ ಸರಪಳಿಯಿಂದ ಕಟ್ಟಿ ಹಾಕಿದರು. ಇದು ವಿಜಾಪುರದ ಗೋಲಗುಮ್ಮಟದ ಎದುರು ಕಟ್ಟಿಹಾಕಿದ ಸಿಡಿಲಿನ ಬಗ್ಗೆ ನಾನು ಹಾಡುತ್ತಿದ್ದೇನೆ ಮನುಜಾ ಎಂದು ಮಹಿಳೆ ಇಲ್ಲಿ ಹೇಳುತ್ತಾಳೆ.”

ಲಂಬಾಣಿ ಜನರನ್ನು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಗುರುತಿಸುವುದು ಅವರ ವೇಷಭೂಷಣದಿಂದ. ಈ ವೇಷಭೂಷಣಗಳು ಜನಮನವನ್ನೇ ಸೆಳೆಯುತ್ತವೆ. ಫೇಟಿಯಾ(ಲಂಗ) ಕಾಂಚಳಿ(ಕುಪ್ಪಸ) ಛಾಂಟಿಯಾ(ಮೇಲುಹೊದಿಕೆ), ಎಲೆ ಅಡಿಕೆ ಹಾಕುವ ಝೋಣ್ಣಾ(ಸಂಚಿ) ಮುಂತಾದವುಗಳು ಅವರ ವಿಶಿಷ್ಟ ಉಡುಪುಗಳು. ಈ ಬಟ್ಟೆಗಳಿಗೆ ಅಲ್ಲಲ್ಲಿ ಕಾಜಿನ ಬಿಲ್ಲೆ, ಗೆಜ್ಜೆ, ಉಣ್ಣೆಯ ಝಾಂಡಿ, ಗೊಂಡೆಗಳನ್ನು ಕಲಾತ್ಮಕ ವಿನ್ಯಾಸದಲ್ಲಿ ಕಸೂತಿ ಹಣಿಕೆಯ ಮೂಲಕ ಪೋಣಿಸಿರುತ್ತಾರೆ. ಕಸ, ಕಡಗಾ, ತೋಡಾ, ಹಾಂಸಲಿ(ಕೊರಳಹಾರ), ಕನಿಯಾ(ಕಿವಿ ಆಭರಣ) ಭೂರಿಯಾ(ನತ್ತು), ಚೂಡಿ(ದಂತದ ಬಳೆಗಳು) ಮುಂತಾದವುಗಳು ಲಂಬಾಣಿ ಹೆಂಗಸರ ಇತರ ದಾಗೀನುಗಳು.

ಇಂಥ ವೇಷಭೂಷಣಗಳು ಈಗ ಕಾಲಕ್ಕೆ ತಕ್ಕಂತೆ ಬದಲಾಗಿವೆ. ಮೊದಲು ಲಂಬಾಣಿ ಸ್ತ್ರೀಯರ ಉಡುಪುಗಳನ್ನು ಸ್ವತಃ ತಾವೇ ಸಿದ್ಧಪಡಿಸುತ್ತಿದ್ದರು. ವಿವಿಧ ವಿನ್ಯಾಸದ ಉಡುಪುಗಳನ್ನು ಸಿದ್ಧಪಡಿಸುವಲ್ಲಿ ಪ್ರತಿ ಲಂಬಾಣಿ ಯುವತಿ ತನ್ನ ತಾಯಿಯಿಂದ ತರಬೇತಿ ಪಡೆದುಕೊಂಡಿರುತ್ತಾಳೆ. ಇಂದಿನ ಆಧುನೀಕರಣದ ರಭಸದಲ್ಲಿಯೂ ಕೂಡ ಲಂಬಾಣಿ ಮಹಿಳೆಯರ ಉಡುಪು ಉಳಿದಿದೆ. ಕೆಲವರು ಕಲಿತು ಸ್ವತಃ ಬಟ್ಟೆಯನ್ನು ಕೈಯಿಂದ ಹೊಲಿಯುತ್ತಾರೆ. ಇನ್ನೂ ಹಲವರು ಕರಕುಶಲ ರಾಟೆಯಿಂದ ಹೊಲಿಯುತ್ತಾರೆ.”

[1]

“ಗುಳೆ” ಹೋಗುವುದರಲ್ಲಿ ಜೀವಮಾನ ಕಳೆಯುತ್ತಿದ್ದ ಲಂಬಾಣಿ ಮಹಿಳೆಯರು ಒಂದೆಡೆ ನೆಲೆನಿಂತು ತಮ್ಮ ಪರಂಪರಾಗತ ಕಲೆಯನ್ನು ಉಳಿಸಿಕೊಳ್ಳುವುದರ ಜೊತೆಗೆ, ಅದನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಂಡು ಹೊಸ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಆ ರಂಗುರಂಗಿನ ಉಡುಪಿನ ಮಹಿಳೆಯರ ಬದುಕು ಮಾತ್ರ ವರ್ಣಮಯವಾಗಿಲ್ಲದಿರುವುದು ಅಷ್ಟೇ ವಾಸ್ತವಿಕ ಸತ್ಯ.

ಲಂಬಾಣಿಗರಲ್ಲಿ ಮಗು ಹುಟ್ಟಿದಾಗ ಅವರದೇ ಆದ ಆಚರಣೆ ಆರಂಭವಾಗುತ್ತದೆ. ತಾಂಡಾದಲ್ಲಿರುವ ಸೇವಾಲಾಲರ ಗುಡಿಗೆ ಹೋಗಿ “ನಗಾರಿ” ಬಾರಿಸುತ್ತಾರೆ. ಇದರ ಉದ್ದೇಶ ಗಂಡುಮಗು ಹುಟ್ಟಿದ್ದು ಎಲ್ಲರಿಗೂ ಗೊತ್ತಾಗಲಿ ಎಂದು ಹರ್ಷ ವ್ಯಕ್ತಪಡಿಸುತ್ತಾರೆ. ಮಗು ಹುಟ್ಟಿದ ಮಾರನೆಯ ದಿವಸಕ್ಕೆ ದಳವಾ ಧೋಕಾಯೇರೋ ಕಾರ್ಯಕ್ರಮ ಮಾಡುತ್ತಾರೆ. ಈ ಸಂದರ್ಭದಲ್ಲಿ ನೆರೆದವರಿಗೆ ಕುಲ್ಲರ ಅನ್ನುವಂಥ (ಗೋದಿ ಹಿಟ್ಟಿನಲ್ಲಿ ಬೆಲ್ಲ ಹಾಕಿ ಕೂಡಿಸಿದ) ಸಿಹಿ ಪದಾರ್ಥ ಹಂಚುತ್ತಾರೆ.

ಹಿಂದಿನ ಕಾಲದಲ್ಲಿ ಲಂಬಾಣಿಗರಲ್ಲಿ ಮದುವೆ ಕಾರ್ಯ ಒಂದು ತಿಂಗಳವರೆಗೆ ನಡೆಯುತ್ತಿತ್ತು. “ಜಾತ” ಮತ್ತು ಭುಕ್ಯಾ” ಗೋತ್ರದವರ ಮಧ್ಯೆ ಮದುವೆ ಸಂಬಂಧ ನಡೆಯುತ್ತದೆ. ಸಗೋತ್ರ ವಿವಾಹ ನಿಷಿದ್ಧ.

ಹವೇಲಿ ಕಾರ್ಯ ಪ್ರತಿಯೊಂದು ಲಂಬಾಣಿ ಯುವತಿಯ ಜೀವನದಲ್ಲಿ ತುಂಬಾ ಮಹತ್ವದ ಘಟ್ಟ. ಮದುಮಗಳನ್ನು ಗಂಡನ ಮನೆಗೆ ಕಳಿಸುವ ಸಂದರ್ಭದಲ್ಲಿ ಹವೇಲಿ ಹಾಡುವ ಪ್ರಸಂಗ ಬಲು ದುಃಖದಿಂದ ಕೂಡಿರುತ್ತದೆ. ಮದುಮಗಳು ಆಕಳ ಮೇಲೆ ನಿಂತುಕೊಂಡು (ಎರಡು ಕೈಗಳನ್ನು ಮೇಲೆತ್ತಿ) ಕುಟುಂಬದವರ, ತಾಂಡಾದ ಗುಣಗಾನ ಮಾಡಿ ಹವೇಲಿ (ಅಳುವ ಸಂಪ್ರದಾಯ) ಹೇಳುತ್ತಾಳೆ.

ಕಾಲಕ್ಕೆ ತಕ್ಕ ಹಾಗೆ ಇಂದು ಲಂಬಾಣಿಗಳ ಮದುವೆಯ ಸಂಪ್ರದಾಯಗಳು ಬದಲಾಗುತ್ತಿವೆ. ಅವರ ಮದುವೆಗಳಲ್ಲಿ ಅವರದೆ ಆದ ವಿಧಿವಿಧಾನಗಳಿವೆ, ವೇಷಭೂಷಣಗಳಿವೆ. ಅವು ಕೂಡ ಇಂದು ಬದಲಾವಣೆಯ ಹಂತದಲ್ಲಿವೆ. ಮದುವೆಯ ಸಂದರ್ಭದಲ್ಲಿ ಪಾಲಿಸಿಕೊಂಡು ಬರುತ್ತಿದ್ದ ಅನೇಕ ವಿಧಿವಿಧಾನ ಬದಲಾಗುತ್ತಿರುವುದನ್ನು ಇಲ್ಲಿ ಒಬ್ಬ ಲಂಬಾಣಿ ಮಹಿಳೆ ತನ್ನ ಹಾಡಿನಲ್ಲಿ ಈ ರೀತಿ ಹೇಳಿಕೊಳ್ಳುತ್ತಿದ್ದಾಳೆ :

“ಗೋಟಾ ಘೋಳೇರೋ ಬುಡಾಯೋ ಗೋರಮಾಟಿ
ಕಾ ಭೂಲಗ ಗೋರೂರಿರೇ ಧಾಟಿ
ಪಾಲ ಭಾಂದೆರೋ ಬುಡಾಯೇ ಗೋರಮಾಟಿ
ಮುಸಳೋ ಗಾಡೇರೋ ಬುಡಾಯೇ ಗೋರಮಾಟಿ
ಆಂಕ ಗಾಡೇರೋ ಬುಡಾಯೇ ಗೋರಮಾಟಿ
ಘುಂಗಟೋ ಓಡೇರೋ ಬುಡಾಯೇ ಗೋರಮಾಟಿ
ತಾಳಿ ಭಾಂದರೋ ಸಿಕಾಯೇ ಗೋರಮಾಟಿ
ಚೊಡೋ ಘಾಲೇರೋ ಬುಡಾಯೇ ಗೋರಮಾಟಿ
ಬಂಗಡಿ ಪೇರೇರೋ ಸಿಕಾಯೇ ಗೋರಮಾಟಿ
ಕಾಂಚಳಿ ಪೇರೇರೋ ಬುಡಾಯೇ ಗೋರಮಾಟಿ
ಸಾಡೋ ವೀಟೆರೋ ಸಿಕಾಯೇ ಗೋರಮಾಟಿ”

ಅರ್ಥ: “ಮದುವೆಯಲ್ಲಿ ನೀಡಲಾಗುತ್ತಿರುವ ಗೋಟಾ(ಬೆಲ್ಲದ ಪಾನಕ) ಬಂದಾಯಿತು. “ಪಾಲ” (ಕಂಬಳಿಯಿಂದ ಕಟ್ಟುವ ಹಂದರ) ಕಟ್ಟುವುದಿಲ್ಲ. ಹಂದರದ ಮಧ್ಯ ಒನಕೆ ನೆಡುವುದಿಲ್ಲ, ಎಕ್ಕೆ ಎಲ್ ಕಟ್ಟುವುದಿಲ್ಲ, ಮಾಂಡ ಕವಡೆ ಆಡುವುದು ಪದ್ಧತಿ ನಿಂತುಹೋಯಿತು. ಮದುಮಗಳು ಘುಂಗಟೋ(ಮೇಲ ಮುಸುಕು) ಹಾಕುತ್ತಿಲ್ಲ, ಮಾಂಗಲ್ಯದ ಸಂಕೇತ ಚುಡೋ, ಘುಗರಿ(ದಂತದ ಬಳೆ ಮತ್ತು ಝುಮಕಿ) ಹಾಕುವ ಬದಲು ತಾಳಿ ಕಟ್ಟುತ್ತಿದ್ದಾಳೆ. ಮುಂಗೈಗೆ ದಂತದ ಬಳೆ ಬದಲು ಕಾಜಿನ ಬಳೆ ತೊಡಿಸುತ್ತಾರೆ. ಕಾಂಚಳಿ(ಕುಪ್ಪಸ ಚೋಲಿ) ಬದಲಾಗಿ ಸೀರೆ ಕುಪ್ಪಸ ತೊಡಿಸುತ್ತಾರೆ-ಎಂದು ಲಂಬಾಣಿ ಮಹಿಳೆ ಈ ಹಾಡಿನಲ್ಲಿ ತನ್ನ ಬಂಧುವಿಗೆ ಹೇಳಿರುವುದನ್ನು ನಾವು ಕಾಣಬಹುದು.”

ಸೇವಾಲಾಲ ಲಂಬಾಣಿಗರ ಕುಲಗುರು. ಇವರ ಸಾಧನೆಗಳನ್ನು ಕುರಿತು ಲಂಬಾಣಿಗರು ಭಜನೆಗಳನ್ನು ಹಾಡುತ್ತಾರೆ. ಲಂಬಾಣಿಗರು ತಮ್ಮ ಇತರ ದೈವ ದೇವತೆಗಳನ್ನು ಆರಾಧಿಸುತ್ತಾರೆ. ಹಾಮು ಭುಕ್ಯಾ, ಮಿಟು ಭುಕ್ಯಾ, ನಾನು ಸಾದ, ಭಜನಿ ಭುಕ್ಯಾ, ಹಾತಿರಾಂ ಬಾವಾ, ಸಾಮಕಿ ಮಾತಾ, ರಾಮರಾವ ಮಹಾರಾಜ ಮುಂತಾದವರ ಕುರಿತಾಗಿ ಅನೇಕ ಹಾಡುಗಳನ್ನು ಕಟ್ಟಿ ಹಾಡುತ್ತಾರೆ. ಸೇವಾಲಾಲರ ಹಿರಿಮೆಯನ್ನು ಬಣ್ಣಿಸುವ ಒಂದು ಹಾಡು ಹೀಗಿದೆ :

“ಜಲದಿ ಆಜೋ ಸೇವಾರೇಲಾಲ
ಗೋರೂಮ ವೇರಿ ಭಾರಿ ಹಾಲ      || ಪಲ್ಲ ||

ಚಾರಿ ಖಂಡೇಮಾಯಿ ಕಾಳ ಆವಗೋ
ಮಾಯೇನ ಬೇಟಾ ಪಾರ ವೇಜಾಯ
ಚಣಾ ವಕಾಜಾಯ ರಪಿಯಾರ ತೇರ || ೧ ||

ಕನ್ನಡ ದೇಶಮ ಚಕಿ ಬಂದವಿಯ
ದೇಶ ಪಾಟಿರೋ ಉಮರ ಜಾಯ
ಘಂವು ಧನ್ನೇರೋ ಪಡಜಾಯ ಡೇರಾ        || ೨ ||

ಬಾಮಣ ಬರಾಡ ಫಾಂಕಿಮ ವಡಜಾಯ
ದಮದಾರ ದೇಶೇನ ಲೂಟ ಲೂಟ ಖಾಯ
ಲಿಂಬಗಾಮೇನ ಚಲೇಜಾಯ ಗೋರ          || ೩ ||

ಬಾರಕೋಸೇಪರ ಏಕದೇವಿ ಬಳಜಾಯ
ತೇರ ತಾಂಡೇರ ಏಕ ನಾಯಕ ರೀಯ
ಪೂಜಾ ವೀಯ ತೇರಸೇ ರಪಿಯಾ   || ೪ ||

ಏಕ ಪಾಲೇಮಾಯಿ ತೀನ ದೇವಿ ರೀಯ
ದಾರು ಶಿಂದಿ ಗೋರೂನ ಛೂಟಜಾಯ
ಪಂಜಾಬ ದೇಶೇಮ ಲಿಂವೂ ಅವತಾರ       || ೫ ||

ಕಸಮಲ್ ಪಾಗಡಿಮ ಪಾಂಚ ವಾನಾರಿಯ
ಗುರು ಗುರು ಕರತಾ ಧನ್ನ ಚಲೇಜಾಯ
ಗೀತನ ಹರಿದಾಸೇರೋ ಆಧಾರ    || ೬ ||

ದಿಲ್ಲಿ ಲಾಹೋರೇಶಿ ದಳ ಮೋಟೋ ಆಯ
ಮೋರಿಯಾ ಮುಂಡೆರೋ ಘೋಡೋ ವರರಿಯ
ಗೀತಸಿಂಗ ಕೇರೋ ಶಾಸ್ತ್ರ ಆಧಾರ”          || ೭ ||

ಅರ್ಥ: “ದೇಶದಲ್ಲಿ ಭೀಕರ ಬರಗಾಲ ಬಿದ್ದಾಗ, ಸೇವಾಲಾಲ ಜನರ ರಕ್ಷಣೆಗಾಗಿ ಭೂಮಿಗೆ ಅವತರಿಸುತ್ತಾನೆ, ಎನ್ನುವ ಭಾವನೆ ಲಂಬಾಣಿಗರಲ್ಲಿದೆ. ಲಂಬಾಣಿಗರು ತಮ್ಮ ಈ ಭಜನೆಯಲ್ಲಿ ಸೇವಾಲಾಲ ಬೇಗನೆ ಅವತರಿಸಿ ಬರಲಿ ಎನ್ನುವ ಭಾವವಿದೆ.

ಭೀಕರ ಬರಗಾಲದಿಂದ ಜನ ತತ್ತರಿಸಿದ್ದಾರೆ. ತಾಯಿ-ಮಗ ಅಗಲುತ್ತಿದ್ದಾರೆ. ದವಸಧಾನ್ಯ ತಿನ್ನಲು ಸಿಗದಂತಾಗಿ ಜನ “ಗುಳೇ” ಹೋಗುತ್ತಿದ್ದಾರೆ. ಬ್ರಾಹ್ಮಣ ಜನ ದಿಕ್ಕಾಪಾಲಾಗುತ್ತಿದ್ದಾರೆ. ಜನ ಲೂಟಿ ಹೊಡೆಯುತ್ತಿದ್ದಾರೆ. ಭೀಕರ ಬರಗಾಲದಿಂದ ದೇವಾನುದೇವತೆಗಳಿಗೂ ಝಳ ತಾಕಿ ಸುಟ್ಟು ಹೋದಾರು. ಹದಿಮೂರು ತಾಂಡಾಗಳಿಗೆ ಒಬ್ಬೊಬ್ಬ ನಾಯಕ ಉಳಿದಾನು. ದುಶ್ಚಟಗಳಿಂದ ಲಂಬಾಣಿಗರು ಮುಕ್ತರಾಗುತ್ತಿದ್ದಾರೆ. ಸೇವಾಲಾಲ ಪಂಜಾಬದಲ್ಲಿ ಅವತರಿಸಿ ಬಂದಾನು. ಆತ ಕಂದು ಬಣ್ಣದ ಕುದುರೆಯ ಮೇಲೆ ಕುಳಿತು, ಐದು ಬಣ್ಣದ ಪಾಗಡಿ (ರುಮಾಲು) ಕಟ್ಟಿಕೊಂಡು ಬಂದಾನು. ಜನರ ರಕ್ಷಣೆ ಮಾಡುವನು-ಎಂದು ಇಲ್ಲಿ ವರ್ಣಿಸಲಾಗಿದೆ. ಇದರಲ್ಲಿ ಪ್ರವಾದಿತ್ವವೂ ಸೂಕ್ಷ್ಮವಾಗಿ ಅಡಕವಾಗಿರುವುದನ್ನು ಕಾಣಬಹುದು.”

ಲಂಬಾಣಿಗರು ಆಡುವ ಭಾಷೆಗೆ “ಗೋರಬೋಲಿ” (ಗೋಡಬೋಲಿ-ಬೆಲ್ಲದಂಥ ಸಿಹಿಯಾದ ಮಾತು) ಎಂದು ಕರೆಯುತ್ತಾರೆ. ಈ ಭಾಷೆಯ ಇಂಡೋ ಆರ್ಯನ್ ಭಾಷಾವರ್ಗಕ್ಕೆ ಸೇರಿದ ಭಾಷೆಯಾಗಿದೆ. ಕಾರಣ ಅವರಾಡುವ ದಿನನಿತ್ಯದ ಬಳಕೆ ಪದಗಳಲ್ಲಿ ಇಂಡೋ ಆರ್ಯನ್ ಪದಗಳೇ ಆಗಿವೆ. ಇಂಡೋ ಆರ್ಯನ್ ಭಾಷಾವರ್ಗಕ್ಕೆ ಸೇರಿದ ಆಸ್ಸಾಮಿ, ಬಂಗಾಲಿ, ಓರಿಯಾ, ಹಿಂದಿ, ಉರ್ದು, ಪಂಜಾಬಿ, ಗುಜರಾತಿ, ಮರಾಠಿ, ಕಾಶ್ಮೀರಿ, ಶಿಂಧಿ-ಮುಂತಾದ ಭಾಷೆಗಳೇ ಇದಕ್ಕೆ ಪ್ರೇರಕವಾಗಿವೆ. ಆದರೂ ಕೆಲವೊಮ್ಮೆ ಕಂಡುಬರುವ ಕನ್ನಡ, ತೆಲುಗು, ದ್ರಾವಿಡ ವರ್ಗಕ್ಕೆ ಸೇರಿದ್ದರೂ ಆ ಭಾಷೆಯ ಕೆಲವು ಶಬ್ದಗಳು “ಗೋರಬಲಿ”ಯಲ್ಲಿ ಕಂಡುಬರುತ್ತದೆ.

ತಮ್ಮ ಶ್ರಮಜೀವನದ ನಡುವೆಯೂ ಹಾಡು ಕುಣಿತಗಳಲ್ಲಿ ಲಂಬಾಣಿಗರು ಮೈಮರೆಯುತ್ತಾರೆ. ಹೆಂಗಸರು ಕುಣಿತಕ್ಕೆ ಇಷ್ಟೇ ಜನರಿರಬೇಕೆಂಬ ನಿಯಮವಿಲ್ಲ. ಮೂರು ನಾಲ್ಕರಿಂದ ಹಿಡಿದು ಮೂವತ್ತು ನಲವತ್ತು ಜನರವರೆಗೂ ಇರಬಹುದು. ಸಾಮಾನ್ಯವಾಗಿ ಕುಣಿತಕ್ಕೆ ಇವರು ನಿಲ್ಲುವುದು ವೃತ್ತಾಕಾರದಲ್ಲಿ. ಹಾಡಿಲ್ಲದೆ ಲಂಬಾಣಿ ಕುಣಿತವೇ ಇಲ್ಲ. ಗಂಡಸರೊಬ್ಬರು ಹಲಿಗೆ ಬಾರಿಸುತ್ತಾರೆ. ಆಮೇಲೆ ಉಳಿದವರು ಪ್ರತಿ ಸೊಲ್ಲಿನ ನಂತರ ಪಲ್ಲವಿಯನ್ನು ಪುನರ್ ಹಾಡುತ್ತಾರೆ.

“ಹಾಂಸಲೋ ದೇಯಾ ನಾಚೇನಾ ಜಾಂವುಚು
ಹಾಂಸಲೇರಿ ತಿತರಿ ಝಾಡಿಯಾಂವುಚು
ಮ ಡಿಗರಿ ಆಂವುಂಚು      || ೧ ||

ಭೂರಿಯಾ ದೇಯಾ ನಾಚೇನ ಜಾಂವುಚು
ಭೂರಿಯಾರೊ ರಮಣಾ ಝಾಡಿಯಾಂವುಚು
ಮ ಡಿಗರಿ ಅಂವುಚು        || ೨ ||

ಮಾಟಲಿ ದೇಯಾ ನಾಚೇನ ಜಾಂವುಚು
ಮಾಟಲಿರ ಘುಗರಾ ಝಾಡಿಯಾಂವುಚು
ಮ ಡಿಗರಿ ಆಂವುಚು”       || ೩ ||

ಅರ್ಥ: “ನಾನು ಕುಣಿತಕ್ಕೆ ಹೋಗುವೆ. ಹಾಂಸಲಿ (ಬೆಳ್ಳಿಯ ಕೊರಳ ಹಾರ) ಕೊಡು ತಾಯಿ, ಹಾಂಸಲಿಯ ಗೆಜ್ಜೆ ಉದುರಿ ಬೀಳುವಂತೆ ಕುಣಿದು ಬರುವೆ. ಭೂರಿಯಾ (ನತ್ತು) ಕೊಡು ತಾಯಿ, ಕುಣಿತಕ್ಕೆ ಹೋಗುವೆ. ಭೂರಿಯಾದ ಗುಂಡುಗಳು ಉದುರಿ ಬೀಳುವ ಹಾಗೆ ಕುಣಿದು ಬರುವೆ. ಮಾಟಲಿ (ನಾಣ್ಯದಿಂದ ಬೆಸುಗೆ ಹಾಕಿದ ಕೈಬೆರಳ ಆಭರಣ) ಕೊಡು ತಾಯಿ, ಕುಣಿತಕ್ಕೆ ಹೋಗುವೆ. ಮಾಟಲಿಯ ಗೆಜ್ಜೆ ಉದುರಿ ಬೀಳುವ ಹಾಗೆ ಕುಣಿದು ಬರುವೆ-ಎಂದು ಮಗಳು ಈ ಪದ್ಯದಲ್ಲಿ ತಾಯಿಯನ್ನು ಕೇಳಿಕೊಳ್ಳುತ್ತಿದ್ದಾಳೆ.”

ಲಂಬಾಣಿಗರಲ್ಲಿ ನಾವು ಸಾಕಷ್ಟು ವಿನೋದ ಪ್ರಸಂಗಗಳನ್ನು ಕಾಣುತ್ತೇವೆ. ಅವರ ದಿನನಿತ್ಯದ ಮಾತುಕತೆಗಳಲ್ಲಿ, ನಾನಾ ಸಂದರ್ಭಗಳಲ್ಲಿ ಅವರ ವಿನೋದ ಪ್ರಜ್ಞೆ ಕಂಡುಬರುತ್ತದೆ. ಇವರ ವಿನೋದ ಪ್ರಕೃತಿ ಹಾಡುಗಳಲ್ಲಿ ಅದೆಷ್ಟು ಸ್ವಾರಸ್ಯಪೂರ್ಣವಾಗಿ ಚಿತ್ರಣವಾಗಿದೆ ಎಂಬುದನ್ನು ನಾವು ಈ ಒಂದು ಪದ್ಯದಲ್ಲಿ ಗಮನಿಸಬಹುದು.

“ಮುಂಬಾಯಿತಿ ಕುಕಡೋ ಲಾಯಿರೇ ನಾನಾಕ್ಯಾ
ಕನ್ನಾ ಕಾಟಿಯಾ ಕುಕಡೇನರ                 || ಪಲ್ಲ ||

ಸೋ ರಪಿಯಾದೇನ ಕುಕಡೇನ ಲಾಯಿ
ಕಂಡಕ್ಟರ ಡಾಯವರೇತಿ ಗಬರಾತಿ ಆಯಿ
ಪಾಟ್ಲಿ ಮಾಯಿ ಗೋಕನ ಕುಕಡೇನ ಲಾಯಿ   || ೧ ||

ಮುಂಬಾಯಿರ ಕುಕಡೋ ಭಾರೀ ಬಲ್ಲಾ ನಾನಕ್ಯಾ
ಪಾಟ್ಲಿಮಾಯಿ ಬೇಟೋ ಬೇಟೋ ಭಾರ ಮುಂಡಿ ಕಾಡ
ಬಾಜು ಬೇಟಿ ಜೇನ ಟಮ್ ಟಮ್ ದೇಕ        || ೨ ||

ಪೌಡರೇವಾಳಿನ ಡೋಡೋ ಡೋಡೋ ದೇಕ
ಪರಕಾರೇವಾಳಿನ ಫರ ಫರ ಫರ ದೇಕ
ಲುಗಡಾ ವಾಳಿರ ಲಾರ ಲಾರ ಜಾವ || ೩ ||

ಮಂಗಳೂರ ಜಾನ ಮಸಾಲೋ ಲಾಯಿ
ಖಾನಾಪುರ ಜಾನ ಖೋಡಿ ಲಾಯಿ
ಚಂದಗಡ ಜಾನ ಛರಿ ಲಾಯಿ                  || ೪ ||

ಪಾಮಣ ಆವಗೇ ಸಾಗಸರ ಘರ
ಸೋಬತೇನ ಲಾಮೇಲೇ ದಾರುನ ಶಿಂಧಿ
ಭಳನ ಕರನಾಕೆ ಕುಕಡೇರ ಶಿಕಾರಿ”           || ೫ ||

ಅರ್ಥ: “ಮುಂಬಯಿಯಿಂದ ಬಂದ ಒಬ್ಬ ಲಂಬಾಣಿ ಮಹಿಳೆ, ತಾನು ಬರುವಾಗ ಒಂದು ನೂರು ರೂಪಾಯಿ ಕೊಟ್ಟು, ಒಂದು ಹುಂಜ ಖರೀದಿಸಿ ತಂದಿರುವುದಾಗಿಯೂ, ಅದನ್ನು ಎಂದು ಕಡಿದು ಊಟ ಮಾಡೋಣ ಓ ಮೈದುನ ಎಂದು ಆಕೆ ವಿನೋದಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದಾಳೆ. ತಾನು ಬಸ್ಸಿನಲ್ಲಿ ಬರುವಾಗ ಡ್ರೈವರ್ ಮತ್ತು ಕಂಡಕ್ಟರರಿಗೆ ಹೆದರುತ್ತ ಹುಂಜವನ್ನು ಉಡಿಯಲ್ಲಿರಿಸಿಕೊಂಡು ಬಂದೆ. ಮುಂಬಯಿಯ ವಾತಾವರಣದಲ್ಲಿ ಬೆಳೆದ ಈ ಹುಂಜ ಉಡಿಯಲ್ಲಿ ಸುಮ್ಮನೆ ಕೂಡದೆ ಬಸ್ಸಿನ ಜನಗಳನ್ನೆಲ್ಲ ಇಣುಕಿ ನೋಡುತ್ತಿತ್ತು. ಹುಡುಗಿಯರನ್ನು ಕಂಡು ಟಮ್ ಟಮ್ ಎಂದು ಕಣ್ಣು ಮಿಟುಕಿಸುತ್ತಿತ್ತು. ಪೌಡರದವಳನ್ನು ವಾರಿಗಣ್ಣಿನಿಂದಲೂ, ಪರಕಾರದವಳನ್ನು ದಿಟ್ಟಿಸುತ್ತ ಸೀರೆಯವಳನ್ನು ಬೆನ್ನಟ್ಟಿ ಹೋಗುತ್ತಿತ್ತು ಎಂದು ಹಾಸ್ಯಮಯವಾಗಿ ಹೇಳುತ್ತಾಳೆ. ಇಂಥ ಚಾಲಾಕಿ ಹುಂಜ ಅಡಿಗೆ ಮಾಡಲು ತಾನು ಮಂಗಳೂರಿನಿಂದ ಮಸಾಲೆ, ಖಾನಾಪೂರದಿಂದ ಖಾರ, ಹಾಗೆಯೇ ಚಂದಗಡದಿಂದ ಅದನ್ನು ಕೊಯ್ಯಲು ಚೂರಿ ತಂದಿರುವುದಾಗಿಯೂ ಹೇಳುತ್ತಾಳೆ. ಈಗಾಗಲೇ ಮನೆಗೆ ಬೀಗರು ಶರಾಯಿ, ಶಿಂಧಿ ತಂದಿದ್ದು, ಹುಂಜದ ಅಡಿಗೆ ಮಾಡಿ ಎಲ್ಲರೂ ಊಟ ಮಾಡೋಣ ಎಂದು ವಿನೋದಪೂರ್ಣವಾಗಿ ಈ ಪದ್ಯದಲ್ಲಿ ಮೂಡಿ ಬಂದಿದೆ.”

ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಲಂಬಾಣಿ ಸಮಾಜದಲ್ಲಿ, ಮಹಿಳೆಯರ ಸ್ಥಿತಿಗತಿ ಕೂಡ ನಿರಾಶದಾಯಕವಾಗಿಯೇ ಇದೆ. ಮೀಸಲಾತಿಯ ಉಪಯೋಗ ಪಡೆದುಕೊಂಡು ಸುಶಿಕ್ಷಿತರಾದವರಲ್ಲಿ ಪುರುಷರೇ ಅಧಿಕ. ಇತರ ಸಮಾಜಗಳಂತೆ ಇದೂ ಕೂಡ ಪುರುಷನ ಪ್ರಧಾನ ಸಮಜವಾಗಿದ್ದು, ಲಂಬಾಣಿ ಸಮಾಜದ ಮುಖ್ಯ ಸ್ಥಾನಗಳಲ್ಲೆಲ್ಲ ಪುರುಷರೇ ಇದ್ದಾರೆ.

* * *

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


*     ದಿನಾಂಕ ೫, ಜುಲೈ ೨೦೦೩ ರಂದು ರಾತ್ರಿ ೯-೩೦ ಗಂಟೆಗೆ ಧಾರವಾಡ ಆಕಾಶವಾಣಿಯಿಂದ ಪ್ರಸಾರವಾದ ಬುಡಕಟ್ಟು ಮಾಲಿಕೆಯ ನುಡಿಚಿತ್ರದ ವಿಸ್ತೃತ ರೂಪ. ನಿರ್ಮಾಣ ಮಾಡಿದ ಡಾ. ಬಸವರಾಜ ಸಾದರ, ನಿರೂಪಣೆ ಮಾಡಿದ ಶ್ರೀ ಶರಣಬಸವ ಚೋಳಿನ ಹಾಗೂ ಶ್ರೀಮತಿ ಸುರೇಖಾ ಸುರೇಶ ಇವರಿಗೆ ಕೃತಜ್ಞತೆಗಳು.

[1]     ವಿಜಾಪುರದ ಸಬಲಾ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮಲ್ಲಮ್ಮಾ ಯಾಳವಾರ ಅವರು ಲಂಬಾಣಿ ಮಹಿಳೆಯರಿಂದಲೇ ವಿವಿಧ ಉಡುಪುಗಳನ್ನು ಸಿದ್ಧಪಡಿಸಿ ದೇಶ ವಿದೇಶಗಳಲ್ಲಿ ಪರಿಚಯಿಸಿರುವುದು ಗಮನಾರ್ಹ. ದೆಹಲಿಯ “ಇಂಟರ್ ನ್ಯಾಷನಲ್ ಟ್ರೇಡ್ ಫೇರ್‌”ನಲ್ಲಿ ಪಾಲ್ಗೊಂಡು ಲಂಬಾಣಿ ಕರಕುಶಲಗಳನ್ನು ಪ್ರದರ್ಶಿಸಿದ್ದಾರೆ.