ಅನ್ನೇ ಬಾರೆಲಗೊ ಬಾಳೆ ದಂಡೇಲಿ ಪಲ್ಲ

ಬಾಳೆ ದಂಡೇಲಿ ಸುತ್ತ ಭೋರಂಬೋದೇನವ್ವ
ಅರ ಸಾವಿರದ ಏ ಚಾವುಂಡಿಕಿ
ನೀ ಬಾರವ್ವೋ ಬಾಳೆ ದಂಡೇಲಿ    ೧

ಬಾಳೆ ಪಟ್ಟಣ ಸೇರಿ ಬಾವ್ಯಾಗ ಇಳಿಯದಲೆ
ಭಾಗ್ಯವಂತಿ ನನ್ನ ಕರಿಯೆಲ್ಲ
ನೀ ಬಾರವ್ರವೋ ಬಾಳೆ ದಂಡೇಲಿ  ೨

ಬಾಳೆಗೆ ಸೇರ್ಯಾಕೆ ಜಾಳಿಗೆ ದಂಡ್ಯಾಕೆ
ಜಾಲದ ಅಳ್ಳ್ಯವರ ಹೆಣ್ಣುಮಗಳೇ
ನೀ ಬಾರೆಲಗೋ ಬಾಳೆ ದಂಡೇಲಿ   ೩

ಜಾಲನ ಅಳ್ಳ್ಯವರ ಹೆಣ್ಣುಮಗಳ ಯಲ್ಲಮ್ಮ
ಜಾಲ ಹಾಕ್ಯಾಳ ಜಗತ್ತೆಲ್ಲ
ನೀ ಬಾರವ್ವೋ ಬಾಳೆ ದಂಡೇಲಿ    ೪

ಹುಟ್ಟಿಗೆ ಉಡುಸ್ಯಾಳೆ ಬತ್ತಲಕೆ ನಡಸ್ಯಾಳೆ
ನಕ್ಕವರ ಹಲ್ಲ ಮುರಿಸ್ಯಾಳೆ
ನೀ ಬಾರೆಲಗೊ ಬಾಳೆ ದಂಡೇಲಿ    ೫

ಅಲ್ಲರ ದುರಗಮ್ಮ ಯ್ಯಾರ್ಯಾರ ಮಗಳಮ್ಮ?
ಗುಡ್ಡದಾಗ ಹೋಗಿ ನೆನೆದಾಳಮ್ಮ
ನೀ ಬಾರೆಲಗೋ ಬಾಳೆ ದಂಡೇಲಿ   ೬

ದೇಶಕಧಿಕವಾದ ವಾಸುಳ್ಳ  ಅಂದರೀಕೆ
ಕೂಸೇ ಮಾಂತಣ್ಣ ಏ ಪದರಾಡಿ
ನೀ ಬಾರೆಲಗೋ ಬಾಳೆ ದಂಡೇಲಿ   ೭

ಶುಕ್ರವಾರ ಸವುಭಾಗ್ಯ ಮಂಗಳವಾರ ನಿನ್ನ ಭೋಗ್ಯ
ಅಂಗಳಕು ಬಾರೇ ಏ ಕರಿಯೆಲ್ಲೋ
ನೀ ಬಾರೆಲಗೋ ಬಾಳೆ ದಂಡೇಲಿ   ೮

ಅಂಗಳಕೆ ನೀ ಬಾರೆ ಮಾಪುರಿ ಕರಿಯೆಲ್ಲ
ಮಂಗಳಾರತಿ ನಾ ಬೆಳಗುವೆ
ನೀ ಬಾರೆಲಗೋ ಬಾಳೆ ದಂಡೇಲಿ   ೯