‘ಡಾಕ್ಟರೇ, ತಲೆಯ ಎಕ್ಸರೇ ತೆಗೆಸಿ ನೋಡಿ. ಅಗತ್ಯ ಬಿದ್ದರೆ ಸ್ಕ್ಯಾನ್ ಮಾಡಿಸಿ. ನನ್ನ ಮಿದುಳಿಗೆ ಹಾನಿಯಾಗಿದೆಯೋ ನೋಡಿ’ ಎಂದು ತಲೆಗೆ ಪೆಟ್ಟು ಬೀಳಿಸಿಕೊಂಡವರು ಕೇಳುತ್ತಾರೆ. ‘ಐದು ವರ್ಷಗಳಿಂದ ಈ ತಲೆನೋವಿನಿಂದ ನರಳಿ ಸಾಕಾಗಿಹೋಗಿದೆ. ಮಾತ್ರ ತಿಂದು ತಿಂದು ಬೇಸರ ಬಂದುಬಿಟ್ಟಿದೆ. ತಲೆಯೊಳಗೆ ಗಡ್ಡೆ ಇದೆಯೋ ಏನೋ. ಸ್ಕ್ಯಾನ್ ಮಾಡಿಸೋಣ ಅಂತ ನಿಮ್ಮಲ್ಲಿಗೆ ಬಂದೆ’ ಎನ್ನುವವರ ಸಂಖ್ಯೆ ಕಡಿಮೆ ಏನಲ್ಲ. ‘ನಮ್ಮ ಮಗುವಿಗೆ ಫಿಟ್ಸ್‌ ಬರ್ತಾ ಇದೆ. ಅದೇನೋ ಮಿದುಳಿನ ಪಟ್ಟಿ ತೆಗೆದು ನೋಡ್ತಾರಂತಲ್ಲ. ಇಇಜಿ ಅಂತ.ಸ ಅದನ್ನು ಮಾಡಿಸಬೇಕೇ’ ಎಂದು ತಂದೆ-ತಾಯಿಗಳು ಕೇಳುತ್ತಾರೆ. ‘ಇವನೊಬ್ಬನೇ ನಮಗಿರೋ ಗಂಡು ಮಗು ಸಾರ್. ಬುದ್ಧಿ ಕಡಿಮೆ. ನಾಲ್ಕು ವರ್ಷದಿಂದ ಒಂದೇ ಕ್ಲಾಸ್‌ನಲ್ಲಿದ್ದಾನೆ. ಡಾಕ್ಟರಿಗೆ ತೋರಿಸಿದರೆ ಏನೂ ಮಾಡೋಕ್ಕಾಗೋಲ್ಲ. ಬೆಳೀತಾ ಬೆಳೀತಾಸ ಸರಿಹೋಗ್ತಾನೆ ಅಂದುಬಿಟ್ರು. ಏನಾದರೂ ಸ್ಪೆಷಲ್ ಎಕ್ಸ್‌ರೇ ಅಥವಾ ಇನ್ಯಾವುದೋ ಪರೀಕ್ಷೆ ಮಾಡಿಸಿ ಬುದ್ದಿಮಾಂದ್ಯಕ್ಕೆ ಕಾರಣ ಕಂಡು ಹಿಡಿದು ಇವನನ್ನು ಸರಿಪಡಿಸೋದಕ್ಕೆ ಸಾಧ್ಯವೇ’ ಎಂದು ಅನೇಕರು ವಿಚಾರಿಸುತ್ತಾರೆ.

ಮಿದುಳಿನ ಆರೋಗ್ಯ ಮತ್ತು ಅನಾರೋಗ್ಯ ಸ್ಥಿತಿಯನ್ನು ನಮಗೆ ತಿಳಿಸಬಲ್ಲ ಪರೀಕ್ಷಾ ವಿಧಾನಗಳು ಯಾವುವು. ಅವುಗಳು ಯಾವ ರೋಗ ಸ್ಥಿತಿಯಲ್ಲಿ ನಮಗೆ ಹೆಚ್ಚು ಮಾಹಿತಿ ನೀಡುತ್ತವೆ. ಅವುಗಳ ಇತಿಮಿತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

. ತಲೆ ಬುರುಡೆಯ ಎಕ್ಸ್ರೇ ಚಿತ್ರ

ತಲೆಬುರುಡೆಯ ಸಾಧಾರಣ ಎಕ್ಸ್‌ರೇ ಚಿತ್ರಗಳು  (ನೇರ ಮತ್ತು ಪಾರ್ಶ್- ಎ.ಪಿ. ಮತ್ತು ಲ್ಯಾಟೆರಲ್ ವ್ಯೂ) ಕೆಲವು ಪ್ರಸಂಗಗಳಲ್ಲಿ ನಮಗೆ ಸ್ವಲ್ಪ ಮಾಹಿತಿ ನೀಡುತ್ತವೆ. ತಲೆಗೆ ಪೆಟ್ಟು ಬಿದ್ದ ಸಂದರ್ಭದಲ್ಲಿ, ತಲೆ ಬರುಡೆಯ ಮೂಳೆಗಳಲ್ಲಿ ಸೀಳು ಬಿಟ್ಟಿದೆಯೇ, ತಗ್ಗಿನ ಮೂಳೆಮುರಿತ (Depressed Fracture) ವಿದೆಯೇ ಎಂಬುದನ್ನು ಎಕ್ಸರೇ ಹೇಳಬಲ್ಲದು. ಆದರೆ ರಕ್ತಸ್ರಾವವಾಗಿಯೇ, ರಕ್ತ ಹೆಪ್ಪುಗಟ್ಟಿದೆಯೇ ಎಂಬುದನ್ನು ಹೇಳಲಾರದು. ದೀರ್ಘಕಾಲ, ತಲೆಬುರುಡೆಯೊಳಗೆ ಒತ್ತಡ ಹೆಚ್ಚುತ್ತಿದ್ದರೆ (ಗಡ್ಡೆ ಇತ್ಯಾದಿ ಕಾರಣಗಳಿಂದ) ತಲೆಬುರುಡೆಯೊಳಗೆ ಒಳ ಮೇಲ್ಮೈ ಸವೆತವನ್ನು ಸೂಚಿಸಬಹುದು (Silver beaten appearance). ಆದರೆ ದಿಢೀರ್ ಒತ್ತಡ ಏರುವಿಕೆಯಲ್ಲಿ ಅಥವಾ ಅಲ್ಪ ಕಾಲದ ಏರು ಒತ್ತಡದಲ್ಲಿ ಯಾವ ನ್ಯೂನತೆಯೂ ಕಾಣಿಸದು. ಪಿಟ್ಯೂಟರಿ ಕುಳಿ (Pituitary Fossa) ಹೆಚ್ಚು ಆಳವಾಗಿ ಅಥವಾ ಅಗಲವಾಗಿದ್ದರೆ, ಪಿಟ್ಯೂಟರಿ ಗ್ರಂಥಿಯಲ್ಲಿ ಗೆಡ್ಡೆ ಬೆಳೆದಿರಬಹುದೆಂದು ಊಹಿಸಬಹುದು. ಮಿದುಳಿನ ಕೆಲವು ಬಗೆಯ ಗಂತಿಗಳಲ್ಲಿ ಅಪರೀಪಕ್ಕೆ ಕ್ಯಾಲ್ಸಿಯಂ ಸಂಗ್ರಹವಾಗಿದ್ದರೆ ಅದರ ನೆರಳು ಎಕ್ಸ್‌ರೇಯಲ್ಲಿ ಕಂಡು ಗಂತಿಯ ಬಗ್ಗೆ ಸೂಚನೆ ನೀಡಬಹುದು. ಬಹುತೇಕ ಮಾನಸಿಕ ರೋಗಗಳಲ್ಲಿ ಮೂರ್ಛೆ ರೋಗಿಗಳಲ್ಲಿ, ಮಿದುಳ ಜ್ವರದ ಕೇಸುಗಳಲ್ಲಿ ತಲೆಬುರುಡೆಯ ಎಕ್ಸ್‌ರೇ ‘ನಾರ್ಮಲ್’ ಆಗಿರುತ್ತದೆ. ಆದ್ದರಿಂದ ಈ ಪ್ರಕರಣಗಳಲ್ಲಿ ಈ ಎಕ್ಸ್‌ರೇ ಚಿತ್ರ ತೆಗೆಸುವ ಅಗತ್ಯ ಬೀಳುವುದಿಲ್ಲ. ಎಕ್ಸ್‌ರೆ ಚಿತ್ರಕ್ಕಾಗಿ ಹಣ ವ್ಯಯ ಮಾಡುವುದು ಸರಿ ಅಲ್ಲ. ಹಾಗೇ ಎಕ್ಸ್‌ರೇ ಚಿತ್ರ ತೆಗೆಸಿ ಎಂದು ವೈದ್ಯರ ಮೇಲೆ ಒತ್ತಡ ತರುವುದು ಬೇಡ.

. ಮಿದುಳಿನ ವಿದ್ಯುತ್ ಬರವಣಿಗೆ (E.E.G. Electro Encephalogram):

ಮಿದುಳಿನ ಪ್ರತಿಯೊಂದು ನರಕೋಶದಲ್ಲೂ ವಿದ್ಯುತ್ ಚಟುವಟಿಕೆ ನಡೆಯುತ್ತದೆ; ಪರಿಧಿಯಿಂದ ಮಿದುಳಿಗೆ, ಮಿದುಳಿನಿಂದ ಪರಿಧಿಗೆ ಯಾವುದೇ ಸಂವೇದನೆ-ಸಂದೇಶ ಸಾಗಾಟವಾಗುವುದು ವಿದ್ಯುತ್ ಚಟುವಟಿಕೆಯ ಮೂಲಕ ಎಂದು ತಿಳಿದಿದ್ದೀರಿ. ಇಡೀ ಮಿದುಳಿನ ವಿದ್ಯುತ್ ಚಟುವಟಿಕೆಗಳನ್ನು ತಲೆಯ ಮೇಲೆ ಇರಿಸಿದ ಇಲೆಕ್ಟ್ರೋಡುಗಳಿಂದ ಸಂಗ್ರಹಿಸಿ, ಅವನ್ನು ದೊಡ್ಡದು ಮಾಡಿ, ಚಲಿಸುವ ಲೇಖನಿಗಳ ಮೂಲಕ ಬಿಳೀ ಹಾಳೆಯ ಮೇಲೆ ಮುದ್ರಿಸಬಹುದು. ಹೇದಯದ ಇ.ಸಿ.ಜಿ. ಪಟ್ಟಿಯಂತೆ (ಅಲ್ಲಿ ಒಂದು ಲೇಖನಿ ಮಾತ್ರ ಬರೆಯುತ್ತದೆ) ಮಿದುಳಿನ ಪಟ್ಟಿಯನ್ನು (ಇಲ್ಲಿ ಎಂಟು ಅಥವಾ ಹದಿನಾರು ಲೇಖನಿಗಳು ಬರೆಯುತ್ತವೆ) ಮುದ್ರಿಸಬಹುದು. ಇದನ್ನು ಎಲೆಕ್ಟ್ರೋ ಎನ್‌ಸೆಫಲೋಗ್ರಾಂ, ಸಂಕ್ಷಿಪ್ರವಾಗಿ ಇ.ಇ.ಜಿ. ಎಂದು ಕರೆಯಲಾಗುತ್ತದೆ. ಇದೊಂದು ನೋವಿಲ್ಲದ, ಮಿದುಳಿನ ಪರೀಕ್ಷಾ ವಿಧಾನ. ಇ.ಇ.ಜಿ. ನಮಗೆ ಮಿದುಳಿನ ಸ್ಥಿತಿಗತಿಗಳು, ಆರೋಗ್ಯ-ಅನಾರೋಗ್ಯದ ವಿಚಾರವಾಗಿ ಬಹು ಸೂಕ್ಷ್ಮವಲ್ಲದಿದ್ದರೂ ನಂಬಲರ್ಹ, ವಿಶಾಲ ಶ್ರೇಣಿಯ ಮಾಹಿತಿಯನ್ನು ನೀಡುತ್ತದೆ. ಇಇಜಿಯ ಅಧ್ಯಯನದಿಂದ ನಿದ್ರೆ ಮತ್ತು ಕನಸುಗಳ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚಿದೆ. ನಿದ್ರೆಯ ಒಂದು ಅವಿಭಾಜ್ಯ ಅಂಗ ಕನಸು; ನಿದ್ರೆಯ ಆರ್.ಇ.ಎಂ. ಹಂತದಲ್ಲಿ (Rapid eye movement stage) ಕನಸುಗಳು ಬೀಳುತ್ತವೆ. ಒಂದು ರಾತ್ರಿಯಲ್ಲಿ ಐದಾರು ಬಾರಿ,ಹತ್ತತ್ತು ನಿಮಿಷಗಳ ಅವಧಿಯ ಕನಸುಗಳನ್ನು ನಾವೆಲ್ಲ ಅವಶ್ಯ ಕಾಣುತ್ತೇವೆ ಎಂಬುದು ಇ.ಇ.ಜಿ. ಯಿಂದ ಸಾಬೀತಾಗಿದೆ. ವ್ಯಕ್ತಿ ಆತಂಕವಿಲ್ಲದೆ ಪ್ರಶಾಂತ ಮನಸ್ಕನಾಗಿದ್ದ ಅವಧಿಯಲ್ಲಿ ಇ.ಇ.ಜಿಯಲ್ಲಿ ಆಲ್ಫ ಅಲೆಗಳು ಮುದ್ರಿತವಾಗುತ್ತದೆ. ಸೆಕೆಂಡಿಗೆ ಆರರಿಂದ ಎಂಟು ಅಲೆಗಳಿರುತ್ತವೆ. ವ್ಯಕ್ತಿ ನಿದ್ರೆಯ ವಿವಿಧ ಹಂತಗಳಿಗೆ ಜಾರುತ್ತಿದ್ದಂತೆ ಅಲೆಗಳ ವೇಗ ತಗ್ಗಿದರೆ ಅವುಗಳ ಎತ್ತರ ಏರುತ್ತದೆ. ಗಾಢ ನಿದ್ರೆಯ ಅವಧಿಯಲ್ಲಿ ಸೆಕೆಂಡಿಗೆ ಎರಡೇ ಅಲೆಗಳು ಮುದ್ರಿತವಾಗಬಹುದು (ಡೆಲ್ಟಾ ಅಲೆ).

 

 

ಇ.ಇ.ಜಿಯ ಪ್ರಮುಖ ಉಪಯುಕ್ತತೆ ‘ಮೂರ್ಛೆ ರೋಗ’ದಲ್ಲಿ ಕಂಡು ಬರುತ್ತದೆ. ಪ್ರತಿಶತ ೩೫ ರಷ್ಟು ರೋಗಿಗಳಲ್ಲಿ ಇ.ಇ.ಜಿ. ಅಸಹಜವಾಗಿದ್ದಿ, ಚೂಪಾದಸ ಆಕಾರದ ಅಲೆಗಳು (ಸ್ಪೈಕ್ಸ್‌) ಕಂಡುಬರುತ್ತವೆ. ಮಿದುಳಿನ ಯಾವ ಭಾಗದಲ್ಲಿ ಮೂರ್ಛೆ ಜನಕ ನರಕೋಶಗಳ ಗುಂಪಿದೆ ಎಂದು (Epileptic Focus) ಕಂಡು ಹಿಡಿಯಬಹುದು. ಇದು ಒಂದೇ ಕಡೆ ಇದ್ದರೆ ಅದಕ್ಕೆ ಕಾರಣವಾದ ಗೆಡ್ಡೆಯೋ ಮತ್ತೊಂಡೋ ಇದೆ ಎಂಬ ಸೂಚನೆ ವೈದ್ಯರಿಗೆ ಸಿಗುತ್ತದೆ. ಹೀಗೆ ಇ.ಇ.ಜಿ. ಮೂರ್ಛೆ ರೋಗದಲ್ಲಿ ರೋಗ ನಿರ್ಣಯಕ್ಕೆ, ರೋಗ ಕಾರಣಕ್ಕೆ ನೆರವಾಗುವುದಾದರೂ, ಅದನ್ನೇ ನಾವು ಪೂರ್ಣವಾಗಿ ನೆಚ್ಚಿಕೊಳ್ಳುವಂತಿಲ್ಲ. ಪ್ರತಿಶತ ೧೫ ರಷ್ಟು ರೋಗಿಗಳಲ್ಲಿ ಇ.ಇ.ಜಿ. ‘ನಾರ್ಮಲ್’ ಇರಬಹುದು. ಆದ್ದರಿಂದ ಪ್ರತಿ ಮೂರ್ಛೆ ರೋಗಿಯಲ್ಲಿ ಇ.ಇ.ಜಿ. ಮಾಡಿಸಲೇಬೇಕಾದ ಅಗತ್ಯ ಬರುವುದಿಲ್ಲ. ಚಿಕಿತ್ಸೆ ಪಡೆದ ರೋಗಿ, ಐದು ವರ್ಷ ಫಿಟ್ಸ್ ಇಲ್ಲದೆ ಚೆನ್ನಾಗಿದ್ದಾಗ, ಆನಂತರ ಆತ ದೊಡ್ಡ ವಾಹನಗಳನ್ನು ನಡೆಸಲು, ಒಂಟಿಯಾಗಿ ಅಪಾಯಕಾರೀ ಸ್ಥಳಗಳಲ್ಲಿ ಕೆಲಸ ಮಾಡಲು ಯೋಗ್ಯನೇ ಎಂಬುದನ್ನು ನಿರ್ಧರಿಸಲು ಇ.ಇ.ಜಿ. ನಮಗೆ ನೆರವಾಗುತ್ತದೆ. ಐದು ವರ್ಷ, ಫಿಟ್ಸ್ ಬಂದಿಲ್ಲ. ಜೊತೆಗೆ ಇ.ಇ.ಜಿ ನಾರ್ಮಲ್ ಎಂದಾದರೆ ಆ ವ್ಯಕ್ತಿ ಇಂತಹ ಕೆಲಸ ಮಾಡಲು ಯೋಗ್ಯ ಎಂದು ಹೇಳಬಹುದು.

ಮಿದುಳಿನ ಒಂದು ಭಾಗ ಹಾನಿಗೀಡಾಗಿದ್ದರೆ, ಗೆಡ್ಡೆ ಇತ್ಯಾದಿ ಬೆಳೆದುಕೊಂಡಿದ್ದರೆ, ಇ.ಇ.ಜಿಯಲ್ಲಿ ನಿಧಾನ ಗತಿಯ ಅಲೆಗಳು ಕಾಣಿಸಿಕೊಂಡು, ವೈದ್ಯರಿಗೆ ಅಸಹಜತೆಯ ಸೂಚನೆ ನೀಡುತ್ತವೆ.

ಹೀಗೆ ಇ.ಇ.ಜಿ. ನೋವಿಲ್ಲದ ಒಂದು ಮಿದುಳಿನ ಪರೀಕ್ಷೆ, ಮೂರ್ಛೆ ರೋಗ, ಮಿದುಳಿನ ಹಾನಿಯ ಪ್ರಕರಣಗಳಲ್ಲಿ ಸಾಧಾರಣ ಮಟ್ಟದ ಖಚಿತತೆಯ ಸೂಚನೆ ನೀಡುವುದರಿಂದ ಇಂದಿಗೂ ಬಳಕೆಯಲ್ಲಿದೆ.

. ಆಂಜಿಯೋಗ್ರಾಮ್:

ಮಿದುಳಿಗೆ ರಕ್ತ ಸರಬರಾಜು ಮಾಡುವ, ಕತ್ತಿನ ಮಟ್ಟದಲ್ಲಿ ಸೂಜಿ ಹಾಕಿ ಬಣ್ಣ ತುಂಬಲು ಸಾಧ್ಯವಾಗುವ, ರಕ್ತನಾಳಕ್ಕೆ ಬಣ್ಣ ತುಂಬಿ ನಿಗದಿತ ವೇಳೆಗೆ ವಶೇಷ ಎಕ್ಸರೇ ಚಿತ್ರಗಳನ್ನು ತೆಗೆಯುವ ಪರೀಕ್ಷಾ ವಿಧಾನ ಚಾಲ್ತಿಯಲ್ಲಿದೆ. ಸಿ.ಟಿ. ಸ್ಕ್ಯಾನ್‌ ವಿಧಾನ ಬಂದ ಮೇಲೆ, ಈ ಆಂಜಿಯೋಗ್ರಾಮ್ ವಿಧಾನವನ್ನು ಹೆಚ್ಚು ಬಳಸಲಾಗುತ್ತಿಲ್ಲವಾದರೂ, ಇಂದಿಗೂ ಇದೊಂದು ಉಪಯುಕ್ತ ಪರೀಕ್ಷೆ.  ರಕ್ತನಾಳಗಳು, ಅವುಗಳ ಶಾಖೋಪಶಾಖೆಗಳು, ಮರಿನಾಳಗಳು ಆಂಜಿಯೋಗ್ರಾಮ್‌ನಲ್ಲಿ ನಿಚ್ಚಳವಾಗಿ ಕಾಣಿಸಿಕೊಳ್ಳುತ್ತವೆ. ಅವುಗಳ ಸ್ಥಾನಪಲ್ಲಟವಾಗಿದ್ದರೆ, ಆ ಕ್ಷೇತ್ರದಲ್ಲಿ ಗೆಡ್ಡೆ ಇರಬಹುದು ಎಂಬ ಪರೋಕ್ಷ ಮಾಹಿತಿ ಸಿಗುತ್ತದೆ. ಕೆಲವು ಗೆಡ್ಡೆಗಳಿಗೆ ಹೆಚ್ಚಿನ ರಕ್ತಪೂರೈಕೆ ಆಗುವುದರಿಂದ, ಆ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತನಾಳಗಳು ಮೈದೋರಿ, ಗೆಡ್ಡೆಯ ಇರವನ್ನು ಜಾಹೀರು ಮಾಡುತ್ತದೆ. ರಕ್ತನಾಳ ಒಂದೆಡೆ ಹಿಗ್ಗಿ, ಗುಡ್ಡೆಯಾಗಿದ್ದರೆ, ಅದು ಒಡೆದು ರಕ್ತಸ್ರಾವವಾಗುತ್ತಿದ್ದರೆ, ಆಂಜಿಯೋಗ್ರಾಮ್ ನೇರವಾಗಿ ಇದನ್ನು ಚಿತ್ರದಲ್ಲಿ ಕಾಣಿಸುತ್ತದೆ. ಆಗ ಆ ಬುಡ್ಡೆ (ಅನ್ಯೂರಿಸಮ್) ಯನ್ನು ‘ಕ್ಲಿಪ್’ ಮಾಡಲು ವೈದ್ಯರಿಗೆ ಸಾಧ್ಯವಾಗುತ್ತದೆ. ಹಾಗೆಯೇ ಶುದ್ಧ ಹಾಗೂ ಅಶುದ್ಧ ರಕ್ತನಾಳಗಳ ವಿಕೃತ ರಚನೆ (ಎ.ವಿ. ಮಾಲ್‌ಫಾರ್ಮೇಶನ್ಸ್‌)ಗಳನ್ನು ಗುರುತಿಸಿ, ಸರಿಪಡಿಸಲೂ ಸಾಧ್ಯವಾಗುತ್ತದೆ.

. ಮೈಲೋಗ್ರಾಮ್:

ಬೆನ್ನು ಮೂಳೆಯ ಕಂಬದೊಳಗಿರುವ ಮಿದುಳು ಬಳ್ಳಿ ಮತ್ತು ಅದರಿಂದ ಹೊರಡುವ ಅಥವಾ ಅದನ್ನು ಸೇರುವ ನರಗಳಿಗೆ ಸಂಬಂಧಿಸಿದಂತೆ ಹಾನಿಯನ್ನು ಪತ್ತೆ ಮಾಡುವ ಸಲುವಾಗಿ, ಬೆನ್ನಿನ ಮೂಳೆ ಸಂದಿಯಲ್ಲಿ ಸೂಜಿ ಹಾಕಿ, ವಿಶಿಷ್ಟ ಬಣ್ಣವನ್ನು ಮಿದುಳ ಬಳ್ಳಿಯ ಸುತ್ತ ಇರುವ ರಸದೊಳಕ್ಕೆ ಬಿಟ್ಟು ಅದು ಇಡೀ ಬೆನ್ನಿನುದ್ದಕ್ಕೂ ಹರಡಿಕೊಂಡಾಗ, ವಿಶೇಷ ಎಕ್ಸ್‌ರೇ ಚಿತ್ರಗಳನ್ನು ತೆಗೆಯಲಾಗುತ್ತದೆ. ಬಣ್ಣ ಒಂದು ಮಟ್ಟದವರೆಗೆ ಹಾನಿ ಅಥವಾ ಗೆಡ್ಡೆ ಇರುವ ಅಥವಾ ಏನೋ ಅಡಚಣೆ ಇರುವ ಸೂಚನೆ ದೊರೆತು, ಚಿಕಿತ್ಸೆಯನ್ನು (ಶಸ್ತ್ರಚಿಕಿತ್ಸೆ ಬೇಕೇ ಬೇಡವೇ) ನಿರ್ಧರಿಸಲು ಸಹಾಯವಾಗುತ್ತದೆ.

. ಮಿದುಳಿನ ಗಾಳಿ ಚಿತ್ರ (ನ್ಯೂಮೋ ಎನ್ಸೆಫೆಲೋಗ್ರಾಮ್):

ಇದರ ಉಪಯೋಗ ಇತ್ತೀಚೆಗೆ ಇಲ್ಲವೇ ಇಲ್ಲವಾಗಿದೆ. ಬೆನ್ನು ಮೂಳೆಯ ಸಂದಿಯಲ್ಲಿ ಸೂಜಿ ಹಾಕಿ, ಸ್ವಲ್ಪ ಗಾಳಿಯನ್ನು ಒಳನೂಕಿ ಆ ಗಾಳಿ ಮೇಲೇರಿ ಮಿದುಳನ್ನು ತಲುಪುವಂತೆ ಮಾಡಿಯಾದ ಮೇಲೆ ಮಿದುಳಿನ ಎಕ್ಸ್‌ರೇ ಚಿತ್ರಗಳನ್ನು ತೆಗೆಯಲಾಗುತ್ತದೆ. ಒಳಹೋದ ಗಾಳಿ ಮಿದುಳಿನ ಕುಳಿಗಳನ್ನು ಇತರ ಖಾಲಿ ಜಾಗಗಳನ್ನು ತುಂಬಿ ಚಿತ್ರದಲ್ಲಿ ಮೂಡುತ್ತದೆ. ಇದರಿಂದ ಕುಳಿಗಳ ಗಾತ್ರವೂ ಗೋಚರವಾಗುತ್ತದೆ. ಮಿದುಳು ನಶಿಸಿ ಹೋಗುವ ಕಾಯಿಲೆಗಳಲ್ಲಿ ಕುಳಿಗಳ ಗಾತ್ರ ಹಿಗ್ಗಿರುವುದು ಮತ್ತು ಸಬ್ ಅರೆಕ್‌ನಾಯ್ಡ್‌ ಜಾಗ ವಿಸ್ತೃತವಾಗಿ ಮಿದುಳಿನ ವಸ್ತು ಕಡಿಮೆಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ ಮಿದುಳು ಕುಳಿಗಳ ಅಕ್ಕಪಕ್ಕದಲ್ಲಿ ಗೆಡ್ಡೆ ಅಥವಾ ಇನ್ಯಾಪುದೇ ಅಡಚಣೆ ಇದ್ದರೆ ಅದೂ ಕಂಡು ಬರುತ್ತದೆ. ಈ ಪರೀಕ್ಷಾ ವಿಧಾನ ನೋವನ್ನುಂಟು ಮಾಡುವುದಾಗಿದ್ದು, ಈಗ ನೋವಿಲ್ಲದ ಸಿಟಿ ಸ್ಕ್ಯಾನ್, ಎನ್.ಎಂ.ಆರ್. ಪರೀಕ್ಷೆಗಳು ಬಂದಿರುವುದು. ಮಿದುಳಿನ ಗಾಳಿ ಚಿತ್ರ ತೆಗೆಯುವ ವಿಧಾನ ನೇಪಥ್ಯಕ್ಕೆ ಸರಿದಿದೆ.

. ಮಿದುಳುಮಿದುಳು ಬಳ್ಳಿಯ ರಸದ ಪರೀಕ್ಷೆ:

ಬೆನ್ನಿನ ಮೂಳೆಯ ಸಂದಿಯಲ್ಲಿ ಸೂಜಿ ಹಾಕಿ, ಮಿದುಳು-ಮಿದುಳು ಬಳ್ಳಿ ರಸವನ್ನು ತೆಗೆದು ಅದರ ಪರೀಕ್ಷೆಯಿಂದ ಮಿದುಳು ಮತ್ತು ಮಿದುಳ ಪೊರೆಗೆ ಸೋಂಕು-ಉರಿತ ಉಂಟಾಗಿದೆಯೋ ಎಂಬುದನ್ನು ಪತ್ತೆ ಮಾಡಬಹುದು. ಮಿದುಳು ಜ್ವರದ ರೋಗ ನಿರ್ಣಯಕ್ಕೆ ಈ ಪರೀಕ್ಷೆ ಬಹಳ ಸಹಾಯಕಾರಿ. ಜೊತೆಗೆ ಮಿದುಳಿನ ಕ್ಯಾನ್ಸರ್‌ ಬಗ್ಗೆಯೂ ಈ ಪರೀಕ್ಷೆ ಸೂಚನೆ ಕೊಡಬಲ್ಲದು.

ಮಿದುಳಿನ ಪರೀಕ್ಷೆಗೆ ಅತ್ಯಾಧುನಿಕ ವಿಧಾನಗಳು

ಇತ್ತೀಚಿನ ವರ್ಷಗಳಲ್ಲಿ ರೋಗ ನಿರ್ಣಯ ಮಾಡುವ ವಿಧಾನಗಳಲ್ಲಿ ಅತ್ಯಂತ ಜನಪ್ರಿಯ ವಿಧಾನವೆಂದರೆ ‘ಸ್ಕ್ಯಾನಿಂಗ್’. ಇಡೀ ಶರೀರವನ್ನು ಸ್ಕ್ಯಾನಿಂಗ್ ಮಾಡುವ ಯಂತ್ರ ಸೌಲಭ್ಯವಿರುವುದು ವೈದ್ಯರಿಗೂ ಬಹಳ ಪ್ರಯೋಜನಕಾರಿಯಾಗಿದೆ. ರೋಗ ಚರಿತ್ರೆಯ ಆಳವಾದ ವಿಶ್ಲೇಷಣೆ ಮತ್ತು ವಿವರವಾದ ದೈಹಿಕ ಪರೀಕ್ಷೆ ಮಾನಸಿಕ ಲೆಕ್ಕಾಚಾರದ ಗೋಜಲಿಲ್ಲದೆ, ಸಂದೇಹಿತ ಭಾಗ ಅಥವಾ ಅಂಗಾಂಗದ ಸ್ಕ್ಯಾನಿಂಗ್ ಮಾಡಿಸಿ ಹೆಚ್ಚು ಕಷ್ಟವಿಲ್ಲದೆ ರೋಗ ನಿರ್ಣಯ ಮಾಡಲು ಅವರಿಗೆ ಅನುಕೂಲವಾಗಿದೆ. ಸ್ಕ್ಯಾನಿಂಗ್ ಮಾಡಲು ಎಕ್ಸ್‌ರೇಗಳನ್ನು ಬಳಸಬಹುದು. ಶ್ರವಣಾತೀತ ಧ್ವನಿ (ಅಲ್‌ಟ್ರಾ ಸೌಂಡ್) ಅನ್ನು ಬಳಸಬಹುದು.

ತಲೆಯ ಸ್ಕ್ಯಾನ್‌ನಲ್ಲಿ ಹೆಚ್ಚು ಸಾಮಾನ್ಯವಾಗಿ ಎಕ್ಸ್‌ರೇಗಳನ್ನು ಬಳಸಲಾಗುತ್ತದೆ. ಇದನ್ನು ಸಂಕ್ಷಿಪ್ರವಾಗಿ ಸಿ.ಟಿ. ಹೆಡ್‌ ಸ್ಕ್ಯಾನ್ ಎನ್ನಲಾಗುತ್ತದೆ. ತೀರ ಸಮೀಪವಾಗಿರುವ ಸಮಾನಾಂತರ ಎಕ್ಸ್‌ರೇಗಳ ಪ್ರಭಾವಕ್ಕೆ ತಲೆಯನ್ನು ಒಳಪಡಿಸಿ ತಲೆಯ ಎಕ್ಸ್‌ರೇ ಚಿತ್ರವನ್ನು ಬೇರೆ ಬೇರೆ ಕೋನಗಳಿಂದ ೧೮೦ ಡಿಗ್ರಿ ಕಮಾನಿನಲ್ಲಿ ತುಂಬಾ ಶೀಘ್ರ ಗತಿಯಲ್ಲಿ ತೆಗೆದು ದೊರೆಯುವ ಮಾಹಿತಿಯನ್ನು ಕಂಪ್ಯೂಟರ್ ಯಂತ್ರಕ್ಕೆ ಉಣಬಡಿಸಿ, ತಲೆಯನ್ನು ಅಡ್ಡ ಕೊಯ್ತದಂತೆ ಮಾಡಿ ತೆಗೆದ ಪ್ರತಿಬಿಂಬವನ್ನು ಟಿ.ವಿ. ಪರದೆಯ ಮೇಲೆ ಮೂಡಿಸಲಾಗುತ್ತದೆ. ತಲೆಯ ಒಂದೊಂದು ಮಿ.ಮೀ. ಹಂತರ ಕಡ್ಡ ಕೊಯ್ತದ ಚಿತ್ರವನ್ನು ಪರದೆಯ ಮೇಲೆ ನೋಡಿ, ತಲೆಯೊಳಗೆ ಏನು ತೊಂದರೆ ಇದೆ ಎಂಬುದನ್ನು ವಿಶ್ಲೇಷಿಸಬಹುದು. ಈ ನೋಟದಲ್ಲಿ ಹೆಚ್ಚು ಸಾಂದ್ರತೆಯ ಮೂಳೆ ಬೆಳ್ಳಗೆ ಕಂಡರೆ, ಬಹಳ ಕಡಿಮೆ ಸಾಂದ್ರತೆಯುಳ್ಳ ಗಾಳಿ ಮತ್ತು ಕೊಬ್ಬು ಕಪ್ಪಾಗಿ ಕಾಣುತ್ತದೆ. ಮಿದುಳಿನೊಳಗೆ ರಕ್ತ ಸ್ರಾವವಾಗಿದ್ದರೆ ಗೆಡ್ಡೆ ಬೆಳೆದುಕೊಂಡಿದ್ದರೆ, ಇನ್ಯಾವುದಾದರೂ ಸ್ಥಳದಲ್ಲಿ ಆಕ್ರಮಿಸಿದ ಬೆಳವಣಿಗೆ ಇದ್ದರೆ (Space occupying lesions) ಅವನ್ನು ಕಾಣಬಹುದು. ಮಿದುಳಿನೊಳಗಿನ ವಿವಿಧ ವಸ್ತುಗಳಲ್ಲಿನ ಬದಲಾವಣೆಯನ್ನು ಅಯೋಡಿನ್‌ಯುಕ್ತ ಕಾಂತಿ ಭೇದ ವಸ್ತುವನ್ನು ಮೊದಲೇ ಕೊಟ್ಟು, ಹೆಚ್ಚು ಸ್ಪುಟವಾಗಿ ಕಾಣುವಂತೆ ಬಾಡಬಹುದು. ಇದನ್ನು ಕಾಂಟ್ರಾಸ್ಟ್‌ ಚಿತ್ರವೆನ್ನುತ್ತಾರೆ. ಇದರಿಂದ ಮಿದುಳಿನ ಗಂತಿಗಳು, ಕೆಲವು ಗಂಟು (Abscess) ರಕ್ತ ನಾಳದ ಬುಡ್ಡೆಗಳು, ಕೆಲವು ಜನ್ಮದಾರಭ್ಯ ನ್ಯೂನತೆಗಳು, ರಕ್ತಸ್ರಾವ ಮತ್ತು ಹೆಪ್ಪು, ಮಿದುಳಿನ ನಶಿಸುವ ರೋಗಗಳನ್ನು ಗುರ್ತಿಸಲು ಸಹಾಯವಾಗುತ್ತದೆ. ಅಂದರೆ ರೋಗ ಚರಿತ್ರೆ, ರೋಗಿಯ ವಯಸ್ಸು ಮತ್ತು ರೋಗ ಲಕ್ಷಣಗಳಿಂದ ಈ ಮೇಲೆ ಕಾಣಿಸಿದ ಯಾವುದಾದರೂ ತೊಂದರೆ ಇರಬಹುದೆಂದು ವೈದ್ಯರಿಗೆ ಅನುಮಾನ ಬಂದಾಗ, ಸಿ.ಟಿ. ಸ್ಕ್ಯಾನ್ ಮಾಡಿಸಲಾಗುತ್ತದೆ. ಬಹುತೇಕ ಮಾನಸಿಕ ರೋಗಗಳಲ್ಲಿ, ತಲೆನೋವಿನ ಪ್ರಕರಣಗಳಲ್ಲಿ, ಮೂರ್ಛೆರೋಗ ಪ್ರಕರಣಗಳಲ್ಲಿ ಮಿದುಳಿನ ರಚನೆಯಲ್ಲಿ ವ್ಯತ್ಯಾಸವಿರುವುದಿಲ್ಲಾದ್ದರಿಂದ ಹಾಗೆಯೇ ಸಿ.ಟಿ. ಸ್ಕ್ಯಾನ್‌ನಲ್ಲಿ ಕಾಣುವಂತಹ ಅಡಚನೆ ಅಥವಾ ಅಸಹಜತೆ ಇಲ್ಲದಿರುವ ಕಾರಣದಿಂದ ಈ ಎಲ್ಲ ಪ್ರಕರಣಗಳಲ್ಲಿ ಸಿ.ಟಿ. ಸ್ಕ್ಯಾನ್‌ನ ಅಗತ್ಯ ಇರುವುದೇ ಇಲ್ಲ. ಆದ್ದರಿಂದ ಈ ರೋಗಿಗಳು ಅಥವಾ ಮನೆಯವರು ‘ಸಿ.ಟಿ. ಸ್ಕ್ಯಾನ್ ಮಾಡಿಸಿ’ ಎಂದು ವೈದ್ಯರಿಗೆ ದುಂಬಾಲು ಬೀಳಬಾರದು ಅಥವಾ ವೈದ್ಯರು ಈ ಪರೀಕ್ಷೆಯನ್ನು ಮಾಡಿಸಲಿಲ್ಲವಲ್ಲ ಎಂದು ಚಿಂತಿತರಾಗಬಾರದು. ಸಿ.ಟಿ. ಸ್ಕ್ಯಾನ್ ನೋವು ರಹಿತ ಹಾಗೂ ಅಡ್ಡ ಪರಿಣಾಮವಿಲ್ಲದ ಪರೀಕ್ಷಾ ವಿಧಾನವಾದರೂ, ಖರ್ಚು ಹೆಚ್ಚಿನದು. (ಸುಮಾರು ಒಂದೂವರೆ ಸಾವಿರ ರೂಪಾಯಿ) ಆದ್ದರಿಂದ ಅದರ ಅತಿ ಬಳಕೆ ಸಲ್ಲದು.

ಎನ್.ಎಂ.ಆರ್.

ನ್ಯೂಕ್ಲಿಯರ್ ಮಾಗ್ನೆಟಿಕ್ ರೆಸೋನೆನ್ಸ್ ಅಥವಾ ಕೇಂದ್ರಕ ಕಾಂತೀಯ ಅನುವಾದಕ ಪರೀಕ್ಷೆ ಈಗ ಪ್ರಚಲಿತವಾಗುತ್ತಿದೆ. ಸುಮಾರು ಐದರಿಂದ ಹತ್ತು ಸಾವಿರ ರೂಪಾಯಿಗಳಷ್ಟು ಖರ್ಚು ಬರುವ ಈ ಪರೀಕ್ಷಾ ವಿಧಾನದಿಂದ ಅಂಗಾಂಗಗಳಲ್ಲಿ ಆಗುವ ರೋಗಕಾರಕ ಬದಲಾವಣೆಗಳನ್ನು ಜೀವಕೋಶಗಳಲ್ಲಿ ಜರುಗುವ ರಾಸಾಯನಿಕ ಜೀವ ವಸ್ತು ಕರಣವನ್ನು (Metabolism) ಅರಿಯಬಹುದಾಗಿದೆ. ಇದನ್ನು ಎಂ.ಆರ್.ಐ. (ಮ್ಯಾಗ್ನೆಟಿಕ್ ರೆಸೋನೆನ್ಸ್‌ ಇಮೇಜಿಂಗ್) ಎಂದೂ ಕರೆಯುತ್ತಾರೆ.

ಕಂಪ್ಯೂಟರ್ ನಿಯಂತ್ರಣಕ್ಕೆ ಒಳಪಡುವ ರೇಡಿಯೋ ತರಂಗಗಳು ಮತ್ತು ಪ್ರಬಲವಾದ ಕಾಂತ ವಲಯದ ಸಹಾಯದಿಂದ ಈ ಎನ್.ಎಂ.ಆರ್. ಕೆಲಸ ಮಾಡುತ್ತದೆ. ಈ ಪರೀಕ್ಷಾ ಸಾಧನವು ನಮ್ಮ ಶರೀರದಲ್ಲಿ ವಿಫುಲವಾಗಿರುವ ಜಲಜನಕ ಪರಮಾಣುಗಳ, ಅವುಗಳ ಕೇಂದ್ರದಲ್ಲಿರುವ ಪ್ರೋಟಾನುಗಳ ಹರಡುವಿಕೆ ಮತ್ತು ರಾಸಾಯನಿಕ ಬಂಧಕರಗಳನ್ನು ಅಳೆಯುತ್ತದೆ. ಈ ಮಾಪನದಿಂದ ಬರುವ ಮಾಹಿತಿಗಳನ್ನು ಕಂಪ್ಯೂಟರ್ ವಿಶ್ಲೇಷಿಸಿ, ಚಿತ್ರರೂಪಕ್ಕೆ ಮಾರ್ಪಡಿಸುತ್ತದೆ. ಇದು ಸಾಮಾನ್ಯ ಎಕ್ಸ್‌ರೇ ಅಥವಾ ವಿಶೇಷ ಸಿ.ಟಿ. ಸ್ಕ್ಯಾನ್‌ ಮೂಡಿಸುವ ಚಿತ್ರಗಳಿಗಿಂತ ಹೆಚ್ಚು ಸ್ಪಷ್ಟವಾಗಿರುತ್ತದೆ. ಸಿ.ಟಿ. ಸ್ಕ್ಯಾನ್ ಶರೀರ ರಚನೆಯ ವಿವರಗಳನ್ನು ಮತ್ತು ಎರಡು ಮಿ.ಮೀ.ಗೂ ಹೆಚ್ಚಿನ ಗಾತ್ರ ಅಸಾಮಾನ್ಯ ಬೆಳವಣಿಗೆಯನ್ನು ಗುರುತಿಸಲು ನಮಗೆ ನೆರವಾದರೂ ನಿರ್ದಿಷ್ಟ ಅಂಗ ಅಥವಾ ದೇಹದ ಭಾಗಗಳ ಆರೋಗ್ಯ ಸ್ಥಿತಿಯನ್ನು ನೀಡುವುದಿಲ್ಲ. ಎನ್.ಎಂ.ಆರ್. ಈ ಅಂಗ/ ಭಾಗಗಳು ಕೆಲಸ ಮಾಡುವ ಗುಣಮಟ್ಟವನ್ನು ತನ್ಮೂಲಕ ಅನಾರೋಗ್ಯವಿರುವ ಭಾಗದ ಸ್ಪಷ್ಟ ಚಿತ್ರವನ್ನು ನಮ್ಮ ಮುಂದಿಡುತ್ತದೆ. ಉದಾಹರಣೆಗೆ ನರತಂತುವಿನ ಹೊರಪೊರೆ ಆರೋಗ್ಯಕರವಾಗಿದೆಯೇ ಅಥವಾ ಅನಾರೋಗ್ಯ ಪೀಡಿತವಾಗಿದೆಯೇ ಎಂದು ತಿಳಿಸಿಕೊಡುತ್ತದೆ. ಹೀಗೆ ಎನ್.ಎಂ.ಆರ್. ಮಿದುಳು ಮತ್ತು ನರರೋಗ ಪ್ರಕರಣಗಳಲ್ಲಿ ನರ ವೈದ್ಯರಿಗೆ ಒಂದು ಪರಿಣಾಮಕಾರಿ ರೋಗ ನಿರ್ಣಯ ಸಾಧನವಾಗಿದೆ.

ಪೆಟ್ ಸ್ಕ್ಯಾನರ್ (PET Scanner)

ಸ್ಪೆಕ್ಟ್‌ (Spect) (ಸಿಂಗಲ್ ಪ್ರೋಟಾನ್ ಎಮಿಶನ್ ಕಂಪ್ಯೂಟರೈಜ್ಡ ಟೋಮೊಗ್ರಫಿ)

ಆಧುನಿಕ ಆವಿಷ್ಕಾರಗಳಲ್ಲಿ ಒಂದಾದ ಪೆಟ್ ಸ್ಕ್ಯಾನರ್ ನರಕೋಶಗಳು ಸಾಮಾನ್ಯ ಸ್ಥಿತಿಯಲ್ಲಿ ಮತ್ತು ಅನಾರೋಗ್ಯ ಸ್ಥಿತಿಯಲ್ಲಿ ಹೇಗೆ ಮತ್ತು ಎಷ್ಟು ಕೆಲಸ ಮಾಡುತ್ತವೆ. ಅವುಗಳ ಜೀವವಸ್ತುಕರಣದಲ್ಲಿ ಉಂಟಾಗುವ ವ್ಯತ್ಯಾಸಗಳೇನು ಎಂಬುದನ್ನು ಪರದೆಯ ಮೇಲೆ ನೇರವಾಗಿ ನೋಡಬಹುದು.

ಮಿದುಳಿನ ನರಕೋಶಗಳ ಜೀವವಸ್ತು ಕರಣವು (Metabolic activities) ಆ ಜೀವಕೋಶಗಳು ವಿಶ್ರಾಂತ ಸ್ಥಿತಿಯಲ್ಲಿವೆಯೇ ಅಥವಾ ಎಚ್ಚರ ಅಥವಾ ಚಟುವಟಿಕೆ ಸ್ಥಿತಿಯಲ್ಲಿವೆಯೇ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಅಂದರೆ, ಜೀವ ವಸ್ತುಕರಣ ಪ್ರಕ್ರಿಯೆಯನ್ನು ನಾವು ನೇರವಾಗಿ ನೋಡಬಲ್ಲೆವಾದರೆ ಅಥವಾ ಪ್ರಕ್ರಿಯೆಯನ್ನು ಮಾಪನ ಮಾಡಬಲ್ಲೆವಾದರೆ ನಮಗೆ ಆರೋಗ್ಯ ಮತ್ತು ಅನಾರೋಗ್ಯ ಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ದೊರೆಯುವಂತಾಗುತ್ತದೆ. ಆರೋಗ್ಯದಿಂದ ಕೆಲಸ ಮಾಡುವ ಮಿದುಳಿನಲ್ಲಿ ವ್ಯಕ್ತಿ ಆಲೋಚನೆ ಮಾಡಿದಾಗ ಭಾವನೆಯನ್ನು ತೋರಿಸಿದಾಗ, ಯಾವ ಯಾವ ಜೀವಕೋಶಗಳಲ್ಲಿ ಎಂತಹ ಜೀವವಸ್ತು ಕರಣವಾಗುತ್ತದೆ. ಅನಾರೋಗ್ಯದಿಂದ ಅಸ್ತವ್ಯಸ್ತವಾಗಿರುವ ಮಿದುಳಿನಲ್ಲಿ ರೋಗಿ ಆಲೋಚನೆ ಮಾಡಿದಾಗ ಭಾವನೆಗಳನ್ನು ತೋರಿದಾಗ (ಅವು ಸಾಮಾನ್ಯವಾಗಿ, ಅಸಹಜವಾಗಿರುತ್ತವೆ) ಯಾವ ಯಾವ ಜೀವಕೋಶಗಳ ಜೀವವಸ್ತು ಕರಣದಲ್ಲಿ ಏನೇನು ಬದಲಾವಣೆ ಆಗಿದೆ ಎಂಬುದನ್ನು ಪೆಟ್ ಸ್ಕ್ಯಾನರ್‌ನಿಂದ ತಿಳಿಯಬಹುದಾಗಿದೆ.

ರೇಡಿಯೋ ಆಕ್ಟಿವ್ ಐಸೋಟೋಪ್‌ಗಳ ಆವಿಷ್ಕಾರದಿಂದ ಜೀವವಸ್ತು ಕರಣ ಮಾಪನ ಸಾಧ್ಯವಾಗಿದೆ. ಎಫ್‌ಡಿಜಿ ಎನ್ನುವ, ಪಾಸಿಟ್ರಾನ್ ಹೊರಸೂಸುವ ಸಂಯುಕ್ತವನ್ನು (Positron emitting compound) ರಕ್ತನಾಳದೊಳಕ್ಕೆ ಸೇರಿಸಿದಾಗ ಅದು ಮಿದುಳಿನಲ್ಲಿ ಯಾವ ಜೀವಕೋಶಗಳು ಹೆಚ್ಚು ಸಕ್ರಿಯವಾಗಿರುತ್ತವೆಯೋ, ಅವುಗಳಲ್ಲಿ ಈ ವಸ್ತು ನೋಡುತ್ತಾ ಅದರ ವಿಶ್ಲೇಷಣೆಯಲ್ಲಿ ತೊಡಗಿಸಿಕೊಂಡರೆ ಮಿದುಳಿನ ಹಿಂಭಾಗ (ಆಕ್ಸಿಪಿಟಲ್ ಲೋಬ್) ಮತ್ತು ಮುಂಭಾಗದಲ್ಲಿ (ಫ್ರಾಂಟಲ್‌ ಲೋಬ್) ಈ ಸಂಯುಕ್ತವು ಸಂಗ್ರಹಗೊಳ್ಳುತ್ತದೆ. ಈ ವಸ್ತು ಗಾಮಾ ಕಿರಣಗಳನ್ನು ಹೊರ ಸೂಸುವುದರಿಂದ ಅವನ್ನು ಕಂಪ್ಯೂಟರೊಳಗೆ ಹೊಗಿಸಿ ಪರಿವರ್ತಿಸಿ ಯಂತ್ರದ ಪರದೆಯ ಮೇಲೆ ಚಿತ್ರ ರೂಪದಲ್ಲಿ ಮೂಡಿಸಬಹುದು. ಹೀಗೆ ಮಿದುಳಿನ ನರಕೋಶಗಳ ಚಟುವಟಿಕೆಗಳ ಸ್ಪಷ್ಟ ನಕ್ಷೆಯನ್ನು ಈ ಪೆಟ್ ಸ್ಕ್ಯಾನರ್‌ನಿಂದ ನೇರವಾಗಿ ಪಡೆಯಬಹುದು.

ಮಾನಸಿಕ ರೋಗಗಳಾದ ಸ್ಕಿಜೋಫ್ರೀನಿಯಾ, ಮೇನಿಯಾ, ಖಿನ್ನತೆ, ಆತಂಕ, ಗೀಳು ಮನೋಬೇನೆ, ಅತಿಭಯ ಸ್ಥಿತಿಗಳನ್ನು ಅಧ್ಯಯನ ಮಾಡಲು ಪೆಟ್ ಸ್ಕ್ಯಾನರ್ ನೆರವಾಗುತ್ತಿದೆ. ಖರ್ಚು ಕಡಿಮೆಯಾದರೆ ಈ ಸ್ಕ್ಯಾನರ್ಅನ್ನು ರೋಗ ನಿರ್ಣಯಕ್ಕೂ ಬಳಸುವ ದಿನಗಳು ಬರಲಿವೆ.

ಫಂಕ್ಷನಲ್ ಎಂ.ಆರ್.. fMRI (1990), ಬಹು ಇತ್ತೀಚಿನ ಟಿ.ಎಂ.ಎಸ್.

ಎಂ.ಆರ್.ಐ. ಮತ್ತು ಟ್ರೌನ್ಸ್‌ ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮುಲೇಶನ್- ಈ ಎರಡನ್ನೂ ಸೇರಿಸಿ ಜೀವಂತ ಮಿದುಳಿನ ಕಾರ್ಯ ವೈಖರಿ ವಿವರಗಳನ್ನು ಕಣ್ಣಾರೆ ನೋಡಿ ಅಧ್ಯಯನ ಮಾಡಲಾಗುತ್ತಿದೆ. ಇದರಿಂದ ಯಾವ ಚಟುವಟಿಕೆಗೆ ಮಿದುಳಿನ ಯಾವ ಭಾಗ ಮುಖ್ಯ ಎಂದು ಕರಾರುವಕ್ಕಾಗಿ ತಿಳಿಯಬಹುದಾಗಿದೆ. ಹೀಗೆಯೇ PET ಮತ್ತು TMS ಜೋಡಿ ಕೂಡ ಬಹಳ ಉಪಯುಕ್ತ ಎಂದು ತಿಳಿದುಬಂದಿದೆ. ಈ TMS ಖಿನ್ನತೆಯ ಚಿಕಿತ್ಸೆಗೆ ಕೂಡ ಸಹಾಯಕಾರಿಯಾಗಬಹುದು. ಇದರಲ್ಲಿ ತಲೆಯ ಮೇಲೆ ವಿದ್ಯುತ್ ಸುರುಳಿಯೊಂದನ್ನು ಇಡಲಾಗುತ್ತದೆ. ಇದು ಕಾಂತೀಯ ಕ್ಷೇತ್ರವನ್ನು ನಿರ್ಮಿಸುತ್ತದೆ. ಈ ಕಾಂತೀಯ ಕ್ಷೇತ್ರ, ಖಿನ್ನತೆಯಿಂದಾಗಿ ತೊಂದರೆಗೀಡಾಗಿರುವ ನರಕೋಶಗಳ ವಿದ್ಯುತ್ ಚಟುವಟಿಕೆಗಳನ್ನು ಸುಧಾರಿಸಿ, ಖಿನ್ನತೆಯ ಲಕ್ಷಣಗಳನ್ನು ನಿವಾರಿಸಬಲ್ಲದು ಎಂದು ತಿಳಿದುಬಂದಿದೆ.

ಮಿದುಳಿನ ಜೀವುಂಡಿಗೆ ಪರೀಕ್ಷೆ

ತಲೆ ಬುರುಡೆಯನ್ನು ಸ್ವಲ್ಪ ತೆರೆದು ಅಥವಾ ಕಿಂಡಿ ಮಾಡಿ ರೋಗಗ್ರಸ್ತ ಭಾಗವನ್ನು ಸ್ವಲ್ಪ ತೆಗೆದು ಪರೀಕ್ಷೆ ಮಾಡಲಾಗುತ್ತದೆ. ಬಯಾಪ್ಸಿ ಎಂದು ಹೇಳಲಾಗುವ ಈ ಪರೀಕ್ಷಾ ವಿಧಾನದಿಂದ ಮಿದುಳಿನ ಗೆಡ್ಡೆ ಕ್ಯಾನ್ಸರಿಗೆ ಸಂಬಂಧಿಸಿದ್ದೇ ಅಥವಾ ಇನ್ನಿತರ ಕಾರಣಗಳಿಗೆ ಸಂಬಂಧಿಸಿದ್ದೇ (ಉದಾ: ಕ್ಷಯ, ಸಿಫಿಲಿಸ್, ಸಿಸ್ಪಿಸರ್ಕೋಸಿಸ್‌ ಇತ್ಯಾದಿ) ಎಂಬುದನ್ನು ಪತ್ತೆ ಮಾಡಬಹುದು. ಬಯಾಪ್ಸಿ ಪರೀಕ್ಷಾ ವಿಧಾನ ಕೆಲವೇ ಆಯ್ದ ಕೇಸುಗಳಲ್ಲಿ ಮಾತ್ರ ಮಾಡಲಾಗುತ್ತದೆ.

ನರತಂತುಗಳಲ್ಲಿ ಸಂದೇಶ ಸಾಗಾಟದ ವೇಗ ಪರೀಕ್ಷೆ

(Nerve conduction study) (EMG = Electromyography): ಪರಿಧಿಯ ಯಾವುದೇ ನರತಂತು ಹಾನಿಗೊಳಗಾಗಿದೆಯೇ, ಆ ಭಾಗದ ನಿಷ್ಕ್ರಿಯತೆಗೆ ಕಾರಣ ಈ ನರ ಹಾನಿಯೇ ಅಥವಾ ಸ್ನಾಯುವಿನ ದುರ್ಬಲತೆಯೇ ಎಂಬುದನ್ನು ಪತ್ತೆ ಮಾಡಲು, ನರತಂತುಗಳಲ್ಲಿ ಸಂದೇಶ ಸಾಗಾಟದ ವೇಗವನ್ನು ಮಾಪನ ಮಾಡುವ ಪರೀಕ್ಷೆಯನ್ನು ಮಾಡುತ್ತಾರೆ. ಪರಿಧಿಯ ನರವನ್ನು ವಿದ್ಯುತ್-ಪ್ರಚೋದನೆಗೆ ಒಳಪಡಿಸಿ, ಆ ನರದ ವಿವಿಧ ಭಾಗಗಳಲ್ಲಿ ವಿದ್ಯುತ್ ಚಟುವಟಿಕೆಯನ್ನು ಅಳೆಯಲಾಗುವುದು. ವಿದ್ಯುತ್ ಚಟುವಟಿಕೆಯ ತೀವ್ರತೆ (ಸಾಮಾನ್ಯವಾಗಿ ೫ ರಿಂದ ೩೦ ಮೈಕ್ರೋವೋಲ್ಟುಗಳು) ಮತ್ತು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುವ ವೇಗವನ್ನು ಅಳೆದಾಗ ನರತಂತು ಆರೋಗ್ಯ ಸ್ಥಿತಿಯಲ್ಲಿದೆಯೇ ಅಥವಾ ಸವೆದು ಹಾನಿಗೊಳಗಾಗಿದೆಯೇ ಎಂಬುದನ್ನು ತಿಳಿಯಬಹುದು. ಪರಿಧಿಯ ನರದ ಮೈಲಿನ್ ಪೊರೆ ಹಾಳಾಗುವ ಕಾಯಿಲೆಯಲ್ಲಿ ಸಾಗಾಟದ ವೇಗ ತಗ್ಗಿರುತ್ತದೆ.