ಡಕ್ಕಲಿಗರಲ್ಲಿ ಬಹುಪಾಲು ಜನ ಕಪ್ಪು ಬಣ್ಣದವರೆ ಕಾಣಸಿಗುವುದುಂಟು. ಇವರು ಆರ್ಥಿಕವಾಗಿ ಹಿಂದುಳಿದವರಾದುದರಿಂದ ಇವರು ಧರಿಸುವ ಉಡುಪುಗಳು ತೀರ ಸರಳವಾದದ್ದು. ಕಟ್ಟಿಒಮನೆ ಯಜಮಾನ ಅಥವಾ ಸಮಾಜದ ಮುಖ್ಯಸ್ಥ ಕುಟುಂಬದ ಯಜಮಾನ, ಹೆಂಗಸರು, ಯುವಕರು, ಯುವತಿಯರು, ಮಕ್ಕಳು ಹೀಗೆ ಈ ಹಂತಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದು.

ಸಾಮಾನ್ಯವಾಗಿ ಕಟ್ಟಿಮನಿ ಯಜಮಾನ ಅಥವಾ ಸಮಾಜದ ಮುಖ್ಯಸ್ಥ ಬಿಳಿ ಅಂಗಿ, ಧೋತರ, ರುಮಾಲು, ಮೈಮೇಲೊಂದು ಕಂಬಳಿ ಅಥವಾ ಶಾಲು ಹೊದ್ದಿರುತ್ತಾನೆ. ಮುಂಗೈಯಲ್ಲಿ ಖಡೆ, ಬೆರಳುಗಳಲ್ಲಿ ಉಂಗುರ ಕೆಲವರು ಹಣೆಗೆ ಕುಂಕುಮ ಹಚ್ಚಿಕೊಂಡು, ಕೈಯಲ್ಲೊಂದು ಉದ್ದನೆಯ ಕೋಲು ಹಿಡಿದಿರುತ್ತಾನೆ. ಕೆಲವರು ಕೋರೆ ಮೀಸೆ ಬಿಟ್ಟು ಠೀವಿಯಿಂದ ಇರುತ್ತಾರೆ.

ಕುಟುಂಬದ ಯಜಮಾನ ಅಂಗಿ ಧೋತರ, ರುಮಾಲು ಅಥವಾ ಟೋಪಿ, ಹೆಗಲ ಮೇಲೊಂದು ಟವಲ್‌, ಬೆರಳಲ್ಲಿ ತಾಮ್ರ ಇಲ್ಲವೆ ಹಿತ್ತಾಳೆಯ ಉಂಗುರ ಧರಿಸಿರುತ್ತಾರೆ.

ಹೆಂಗಸರು ಸೀರೆ, ರವಿಕೆ, ಕೊರಳಲ್ಲಿ ಕರಿಮಣಿಸರ, ಕೈಯಲ್ಲಿ ಬಳೆ, ಕಾಲಲ್ಲಿ ಚೈನು ಬೆರಳುಗಳಲ್ಲಿ ಉಂಗುರ, ಹಣೆಯ ಮೇಲೆ ಕುಂಕುಮ ಹಚ್ಚಿಕೊಂಡು ಮೈಮೇಲೆ ವಿವಿಧ ವಿನ್ಯಾಸದ ಹಚ್ಚೆ ಹುಯ್ಸಿಕೊಂಡಿರುತ್ತಾರೆ.

ಯುವತಿಯರು ಸಾಮಾನ್ಯವಾಗಿ ಲಂಗ, ಕುಪ್ಪಸ ತೊಟ್ಟುಯಲ್ಲಿ ಬಳೆಗಳನ್ನು ಹಾಕಿರುತ್ತಾರೆ. ಯುವಕರು ಅಂಗಿ ಚಲ್ಲಣ ಕೊಟ್ಟಿರುತ್ತಾರೆ.

ಡಕ್ಕಲಿಗರಲ್ಲಿ ಸಾಮಾನ್ಯವಾಗಿ ಸಣ್ಣ ಮಕ್ಕಳಿಗೆ ಅಂಗಿ ಹಾಗೂ ಕುಲಾವಿಯನ್ನು ತೊಡಿಸುತ್ತಾರೆ. ಸಣ್ಣ ಮಕ್ಕಳಿಗೆ ಹಸಿರು ಅಂಗಿಯನ್ನು ತರುತ್ತಾರೆ. ಮಗುವಿಗೆ ಚಳಿಯಾಗದಿರಲಿ ಹಾಗೂ ಕಿವಿಗೆ ಗಾಳಿ ನುಗ್ಗದಿರಲೆಂದು ಕುಲಾಯಿಯನ್ನು ತಲೆಗೆ ಕಟ್ಟುತ್ತಾರೆ. ಕುಲಾಯಿಯ ಸುತ್ತ ಬಣ್ಣ ಬಣ್ಣದ ಗೊಂಡೆಗಳನ್ನು ಕಟ್ಟಿರುತ್ತಾರೆ. ಸಣ್ಣಮಗು ಅಂದರೆ ಒಂದು ತಿಂಗಳ ನಂತರದ ಮಗುವಿಗೆ ಗಂಡು ಮಗುವಾದರೆ ಬಲಗಾಲಿಗೆ, ಹೆಣ್ಣು ಮಗುವಾದರೆ ಎಡಗಾಲಿಗೆ ಕರಿಯ ಕಂಬಳಿಯ ದಾರ ಅಥವಾ ಸಣ್ಣಕರಿಯ ಮಣಿಗಳನ್ನು ದಾರದಲ್ಲಿ ಪೋಣಿಸಿ ಕೈಗೆ ಕಟ್ಟುತ್ತಾರೆ. ಮೂರು ತಿಂಗಳ ನಂತರ ಕಿವಿ ಚುಚ್ಚಿಸಿ ಕುಂಡಲ ಹಾಕಿಸುತ್ತಾರೆ. ಆರ್ಥಿಕ ಬಲವಿದ್ದರು ನಡುವಿಗೆ ಬೆಳ್ಳಿ ಉಡದಾರ ಕಾಲಿಗೆ ಬೆಳ್ಳಿಯ ಕಾಲುಮುರಿಯನ್ನು ಮಾಡಿತೊಡಿಸುತ್ತಾರೆ. ಬಡವರಾದವರು ಕಪ್ಪುದಾರವನ್ನೇ ನಡುವಿಗೆ ಕಟ್ಟುತ್ತಾರೆ. (ಚೆಲುವರಾಜು: ೧೯೯೩:೨೯-೩೦)