ಜೀವನದಲ್ಲಿ ಹೇಗೋ, ಸಾಹಿತ್ಯದಲ್ಲೂ ಹಾಗೆ, ವ್ಯಕ್ತಿತ್ವದ ಪ್ರಾಮಾಣಿಕತೆಯನ್ನು ಶಂಕಿಸುವಂಥ ಪ್ರಸಂಗಗಳು ಒದಗುತ್ತವೆ. ಪ್ರಾಮಾಣಿಕತೆ ಎನ್ನುವುದು ಅತ್ಯಂತ ಅಪೇಕ್ಷಣೀಯವಾದ, ಆದರೆ ಬಹುಮಟ್ಟಿಗೆ ದುರ್ಲಭವಾದ ಒಂದು ಗುಣವಾದದ್ದರಿಂದ, ಅದನ್ನು ಕಂಡಲ್ಲಿ ಮೆಚ್ಚಿಗೆಯೂ, ಕಾಣದಿದ್ದಲ್ಲಿ ನಿರಾಶೆ, ತಿರಸ್ಕಾರ, ಕನಿಕರವೂ ಉಂಟಾಗುವುದು ಸಹಜ. ಕವಿಕೃತಿಯೊಂದರ ಅಭ್ಯಾಸ ಹಾಗೂ ವಿರ್ಮಶೆಗೆ ತೊಡಗಿದವನಿಗೂ, ಸಾಹಿತ್ಯ ಕ್ಷೇತ್ರದಲ್ಲಿ ಈ ಬಗೆಯ ಅನುಭವವಾಗುವುದುಂಟು. ಯಾವ ಕೃತಿಕಾರ, ತನ್ನ ಕೃತಿಯಲ್ಲಿ ತನ್ನದಲ್ಲದ ಅನುಭವವನ್ನು ತನ್ನದೆಂದು ನಂಬಿಸಲು ಪ್ರಯತ್ನಿಸುವನೋ, ತನ್ನದಲ್ಲದ ಭಾಷೆಯನ್ನು ತನ್ನದೆಂದು ತೋರಿಸಲು ಶ್ರಮಿಸುವನೋ, ತನ್ನ ನೈಜಾನುಭವಗಳನ್ನು ನೇರವಾಗಿ ಹೇಳುವ ಧೈರ್ಯವೋ ಶಕ್ತಿಯೋ ಇಲ್ಲದೆ, ಪರಂಪರೆಯ ಸಿದ್ಧರೂಪಗಳ ಮರೆಹೋಗುತ್ತಾನೋ, ತನ್ನ ಸುತ್ತಣ ಪರಿಸರದ ಬಗೆಗೆ ಕಣ್‌ಮುಚ್ಚಿಕೊಂಡು ತನ್ನದೇ ಆದ ಕಲ್ಪನೆಗಳನ್ನು ತನ್ನ ಪರಿಸರದ ಅನುಭವವೆಂದು ರೂಪಿಸಿ ತೋರಿಸಲು ಹೆಣಗುತ್ತಾನೋ, ತನ್ನ ದೌರ್ಬಲ್ಯಗಳನ್ನು ಆದರ್ಶೀಕರಣದ ಅಥವಾ ದೊಡ್ಡ ದೊಡ್ಡ ಪದಪುಂಜಾದಿಗಳ ಶಬ್ದಜಾಲಗಳ ಮೂಲಕ ಮುಚ್ಚಿಕೊಳ್ಳಲು ಬಯಸುತ್ತಾನೋ, ಅಂಥ ಕಡೆ ಸೂಕ್ಷ್ಮಮತಿಯಾದ ವಿಮರ್ಶಕನಿಗೆ ಕವಿಯ ಅನುಭವದ ಹಾಗೂ ಕೃತಿಯ ಪ್ರಾಮಾಣಿಕತೆಯ ಬಗೆಗೆ ಸಂಶಯ ಬರುವುದುಂಟು. ಆದರೆ ಲೋಕದಲ್ಲಿ ಅವರಿವರನ್ನು ವಂಚಿಸಿ ಲಾಭ ಪಡೆಯಲಾಶಿಸುವ ವ್ಯಕ್ತಿಗಳಂತೆ, ಲೇಖಕನಲ್ಲೂ ಸಹ ಸಾಹಿತ್ಯದ ಮೂಲಕ ಸಹೃದಯರನ್ನು ವಂಚಿಸಿ ಕೀರ್ತಿ-ಗೌರವಾದಿಗಳನ್ನು ಗಳಿಸುವ ಉದ್ದೇಶ ಇರುತ್ತದೆಯೆ ಎಂಬುದರ ಮೇಲಿನಿಂದ ನಾವು ಸಾಹಿತಿಯ ಪ್ರಾಮಾಣಿಕತೆಯ ಪ್ರಶ್ನೆಯನ್ನು ಪರಿಶೀಲಿಸಬೇಕು. ಈ ದೃಷ್ಟಿಯಿಂದ ನೋಡಿದರೆ, ಕೀರ್ತಿ-ಗೌರವಾದಿಗಳ ಬಯಕೆ ಸಾಹಿತಿಗೆ ಇದ್ದರೂ, ಅವನು ಅದಕ್ಕಾಗಿ ಓದುಗರನ್ನು ವಂಚಿಸಿ ಅವುಗಳನ್ನು ಪಡೆಯಬೇಕೆಂಬ ಉದ್ದೇಶವೇನೂ ಅವನ ಸಾಹಿತ್ಯ ನಿರ್ಮಿತಿಯಲ್ಲಿ ಇರುವುದಿಲ್ಲ ; ಅವನಿಗಿರುವುದು ತಾನೂ ಸಾಹಿತಿಯಾಗಬೇಕೆಂಬ ಅಥವಾ ತನ್ನ ಅನುಭವಕ್ಕೊಂದು ಆಕಾರವನ್ನು ಕೊಡಬೇಕೆಂಬ ಉದ್ದೇಶವಷ್ಟೇ. ಹಾಗೆ ಅಭಿವ್ಯಕ್ತಿಯನ್ನು ನೀಡುವಲ್ಲಿ ಬೇರೆ ಬೇರೆಯ ಕಾರಣಗಳಿಂದಾಗಿ, ಅವನ ಅನುಭವದ ಅಭಿವ್ಯಕ್ತಿಯಲ್ಲಿ ಅಪ್ರಾಮಾಣಿಕವೆಂಬಂತೆ ವಿಮರ್ಶಕರಿಗೆ ತೋರುವ ಕೆಲವು ಪ್ರಸಂಗಗಳು ಸಂಭವಿಸುವುದುಂಟು. ಅವು ನಿಜವಾಗಿಯೂ ಸಾಹಿತಿಯಲ್ಲಿನ ಪ್ರಾಮಾಣಿಕತೆಯ  ಅಭಾವದಿಂದ ಉಂಟಾದದ್ದೋ, ಅಥವಾ ಇನ್ನಾವುದಾದರೂ ಕಾರಣಗಳಿಂದ ಸಂಭವಿಸಿದ್ದೋ ಎಂಬುದನ್ನು ಪರೀಕ್ಷಿಸಿ ನೋಡಬೇಕು. ಆದ ಕಾರಣ ಲೋಕದ ಅರ್ಥದಲ್ಲಿ ‘ಅಪ್ರಾಮಾಣಿಕತೆ’ ಎಂಬ ಪದಕ್ಕೆ ಇರುವ ಅರ್ಥವನ್ನು, ಇಲ್ಲಿ ಕವಿ ಅಥವಾ ಸಾಹಿತಿಯನ್ನು ಕುರಿತು ಹೇಳುವಲ್ಲಿ ಇರಿಸಿಕೊಳ್ಳದಿರುವುದು ಒಳ್ಳೆಯದು. ಹಾಗೆಯೇ ಜೀವನದಲ್ಲಿ ವ್ಯಕ್ತಿಯಾದವನು ಅತ್ಯಂತ ಪ್ರಾಮಾಣಿಕನಾಗಿದ್ದಾನೆ ಎಂಬ ಕಾರಣದಿಂದ, ಅವನ ಕಾವ್ಯಾಭಿವ್ಯಕ್ತಿಯೂ ಪ್ರಾಮಾಣಿಕವಾಗಿರುತ್ತದೆಂದು ನಾವು ತಿಳಿಯುವಂತಿಲ್ಲ. ಜೀವನದಲ್ಲಿ ಪ್ರಾಮಾಣಿಕ- ವಾಗಿರುವುದಕ್ಕೂ, ಸಾಹಿತ್ಯಾಭಿವ್ಯಕ್ತಿಯಲ್ಲಿನ ಪ್ರಾಮಾಣಿಕತೆಗೂ ಹೊಂದಿಸಿ ನೋಡುವುದು ಸರಿಹೋಗಲಾರದು. ಏಕೆಂದರೆ ಒಬ್ಬ ಕವಿ, ವ್ಯಕ್ತಿಯಾಗಿ ಜೀವನದಲ್ಲಿ ಅತ್ಯಂತ ಪ್ರಾಮಾಣಿಕನೆ ಆಗಿದ್ದರೂ, ಆತನ ಕಾವ್ಯಾಭಿವ್ಯಕ್ತಿಯಲ್ಲಿ ಅಪ್ರಾಮಾಣಿಕವೆಂದು ತೋರುವ ಅಂಶಗಳಿರಬಹುದು ; ಅಥವಾ ಅವನ ಕೆಟ್ಟ ಅಥವಾ ಸಪ್ಪೆಯಾದ ಕಾವ್ಯಕ್ಕೂ ನಿದರ್ಶನವಾಗಬಹುದು. ಆದುದರಿಂದ ಈ ಎರಡು ‘ಪ್ರಾಮಾಣಿಕತೆ’ಗಳನ್ನೂ ಬೇರೆ ಬೇರೆಯಾಗಿಯೇ ನೋಡಬೇಕು.

ಸಾಹಿತ್ಯ ನಿರ್ಮಿತಿಯಲ್ಲಿ ಇಂಥ ಅಪ್ರಾಮಾಣಿಕವೆಂಬಂತೆ ತೋರುವ ಕೆಲವು ಸಂಗತಿಗಳನ್ನು ಪರಿಶೀಲಿಸೋಣ : ಮೊದಲನೆಯದಾಗಿ ತನ್ನದಲ್ಲದ ಅನುಭವಗಳನ್ನು ತನ್ನದೆಂಬಂತೆ ಹೇಳಿಕೊಳ್ಳುವ ಒಂದು ವಿಧಾನದಲ್ಲಿ ನಾವು ಇದನ್ನು ಗುರುತಿಸಬಹುದು. ಕಾಳಿದಾಸನಿಂದ ಬಂಡಿಗಟ್ಟಲೆ ಸಾಮಗ್ರಿಗಳನ್ನು ಸಂಗ್ರಹಿಸಿ ತನ್ನ ಕಾವ್ಯದಲ್ಲಿ ತುಂಬಿಕೊಂಡು ‘ಕಾಳಿದಾಸಂಗಂ ನೂರ್ಮಡಿ’ ಎಂದು ಕೊಚ್ಚಿಕೊಂಡ ಪೊನ್ನನ ಪ್ರಾಮಾಣಿಕತೆಯನ್ನು ಪ್ರಶ್ನಿಸಬೇಕಾಗಿದೆ; ಪಂಪನ ಕೃತಿಭಂಡಾರದ ಮುದ್ರೆಯನ್ನೊಡೆದು, ಯಾವ ಒಂದು ಕೃತಜ್ಞತೆಯ ಮಾತನ್ನೂ ಹೇಳದೆ ಯಥಾವತ್ತಾಗಿ ಎಷ್ಟೋ ಪದ, ಪದಪುಂಜಾದಿಗಳನ್ನೂ, ಸನ್ನಿವೇಶಗಳನ್ನೂ ತನ್ನ ಕೃತಿಯೊಳಕ್ಕೆ ತುಂಬಿಸಿಕೊಂಡ ರನ್ನನ ಪ್ರಾಮಾಣಿಕತೆಯನ್ನೂ ಪರೀಕ್ಷಿಸಬೇಕಾಗಿದೆ. ಭಾರವಿ, ಬಾಣ, ಕಾಳಿದಾಸಾದ್ಯರಿಂದ ಅಲ್ಲಲ್ಲಿ ಪದ್ಯಗಳನ್ನೆತ್ತಿಕೊಂಡು ತನ್ನ ಕೃತಿಯಲ್ಲಿ ಅಳವಡಿಸಿಕೊಂಡಿರುವ ಪಂಪನ ಜಾಣ್ಮೆಯಲ್ಲಿರುವ ಪ್ರಾಮಾಣಿಕತೆಯನ್ನೂ ಸಹ ಶಂಕಿಸಬೇಕಾಗುತ್ತದೆ. ಇಲ್ಲೆಲ್ಲ  ತನ್ನದಲ್ಲದ್ದನ್ನು ತನ್ನದೆಂದು ನಂಬಿಸುವ ಪ್ರಯತ್ನ ನಡೆದಿಲ್ಲವೆ? ಇದನ್ನು ಅಪ್ರಾಮಾಣಿಕತೆ  ಎನ್ನಬಹುದಲ್ಲವೆ? ಈ ಬಗೆಯ ‘ಅಪ್ರಾಮಾಣಿಕ ಕಾರ್ಯ’ ದೊಡ್ಡವರಿಂದ ಹಿಡಿದು ಸಣ್ಣವರತನಕ, ಪ್ರಾಚೀನರಿಂದ ಹಿಡಿದು ಆಧುನಿಕರ ತನಕ ನಡೆದಿದೆ, ನಡೆಯುತ್ತಲೇ ಇದೆ. ಆದರೆ ಇದನ್ನು ‘ಅಪ್ರಾಮಾಣಿಕತೆ’ ಎಂದು ಕರೆಯಬಾರದು. ಏಕೆಂದರೆ ಪ್ರತಿಯೊಬ್ಬ ಕವಿಯೂ ತನ್ನ ಕೃತಿರಚನೆಯ ಕಾಲದಲ್ಲಿ ಹಿಂದಿನವರಿಗೆ ಋಣಿಯಾಗದಿರಲು ಸಾಧ್ಯವಿಲ್ಲ; ಹಿಂದಿನವರಿಂದ ಪ್ರಭಾವಿತರಾಗದಿರಲು ಸಾಧ್ಯವಿಲ್ಲ. ಎಲ್ಲಾ ಕವಿಗಳೂ ತಾವು ಎಷ್ಟೇ ಸ್ವತಂತ್ರರೆಂದೂ, ನವೀನರೆಂದೂ, ಹೇಳಿಕೊಂಡರೂ, ಅನ್ಯರ ‘ಗುಹಾಧ್ವನಿ’ಯಾಗದೆ,  ‘ಪರರೊಡ್ಡವದ ರೀತಿಯಕೊಳ್ಳದಗ್ಗಳಿಕೆ’ ಗೆ ಪಾತ್ರರಾಗಬೇಕೆಂದು ತಮ್ಮ ಆಶಯವನ್ನು ಘೋಷಿಸಿಕೊಂಡಿದ್ದರೂ, ತಮ್ಮ ಕಾವ್ಯಾನುಭವ ತಮಗಿಂತ ಹಿಂದಿನವರ ಅಥವಾ ಸಮೀಪಕಾಲೀನರ ಕೃತಿಗಳಿಂದ ಪ್ರಭಾವಿತವಾಗಿದೆ ಎಂಬುದನ್ನು ಕೃತಜ್ಞತೆಯಿಂದ ಹೇಳಿಕೊಳ್ಳುವುದು ತಪ್ಪಾಗುವುದಿಲ್ಲ. ತಮ್ಮ ಕಾವ್ಯದ ಪೀಠಿಕಾ ಪ್ರಕರಣಗಳಲ್ಲಿ ನಮ್ಮ ಹಳೆಯ ಕವಿಗಳು, ತಮಗಿಂತ ಹಿಂದಿನ ಕವಿಗಳ ಸ್ಮರಣೆ-ಪ್ರಶಂಸೆ ಮಾಡುವ ಪದ್ಧತಿಯಲ್ಲಿ, ಈ ಕೃತಜ್ಞತೆಯ ಭಾವವನ್ನು ಪ್ರಕಟಿಸಿದ್ದಾರೆಂಬುದು ಗಮನಿಸಬೇಕಾದ ಸಂಗತಿ. ಆದರೆ ಎಷ್ಟೋ ಕವಿಗಳು ಅಷ್ಟನ್ನೂ ಮಾಡದೆ, ಅನ್ಯರ ಅನುಭವಗಳನ್ನು ಸದ್ದಿಲ್ಲದೆ ತಮ್ಮದರೊಳಕ್ಕೆ ಸೇರಿಸಿ ಕೊಂಡಿದ್ದಾರೆಂಬುದೂ ನಿಜ. ತಾವು ಯಾರಿಂದ ಏನನ್ನಾದರೂ ತೆಗೆದುಕೊಳ್ಳುವುದು ತಪ್ಪೇನಲ್ಲ-ತಮ್ಮ ಸಹಜ ಪ್ರತಿಭೆಯಿಂದ ಹಾಗೆ ಎತ್ತಿಕೊಂಡದಕ್ಕೆ ಒಂದು ಹೊಸ ರೂಪವನ್ನೂ, ಅರ್ಥವನ್ನೂ ಕೊಡಬಲ್ಲವರಾದರೆ.  ಇಂಥ ಕಡೆ, ಕವಿ ತಾನು ಯಾರಿಂದ ಏನ್ನನ್ನು ತೆಗೆದುಕೊಂಡಿದ್ದೇನೆಂದು ಹೇಳಿದಿದ್ದರೂ, ಅವನ ಸಹಜ ಸಾಮರ್ಥ್ಯವನ್ನು ಅನುಲಕ್ಷಿಸಿ, ಅವನ ಈ ಕಾರ್ಯವನ್ನು ಅಪ್ರಾಮಾಣಿಕವೆಂದೂ, ಹರಣವೆಂದೂ ಭಾವಿಸದೆ, ಅದನ್ನು ‘ಸ್ವೀಕರಣ’ ಎಂಬ ಗೌರವಯುತವಾದ ಮಾತಿನಿಂದ ಸೂಚಿಸುತ್ತೇವೆ. ಏಕೆಂದರೆ ನಿಜವಾದ, ಶಕ್ತನಾದ ಕವಿ ಯಾರಿಂದ ಏನನ್ನಾದರೂ ತೆಗೆದುಕೊಂಡಿದ್ದರೂ, ಅದು ತನ್ನದೆಂದು ವಂಚಿಸುವ ಉದ್ದೇಶವೇನೂ ಇರುವುದಿಲ್ಲ; ಆದರ ಬದಲು ತಾನು ಓದಿಕೊಂಡ ಪೂರ್ವಿಕರ ಕೃತಿಗಳ ಕೆಲವು ಸೊಗಸಾದ ಸಂದರ್ಭಗಳ ಬಗೆಗೆ ಅವನ ಮನಸ್ಸು ಮಾರುಹೋಗಿ, ಅದನ್ನು ತನ್ನ ಕೃತಿಯ ಕೆಲವು ಸಂದರ್ಭಗಳ ಮೂಲಕ ತನ್ನ ಕಾಲದ ಓದುಗರಿಗೆ ಅವುಗಳನ್ನು ಪರಿಚಯ ಮಾಡಿಕೊಡುವ ಉದ್ದೇಶವಿರಬಹುದೆಂದು ಭಾವಿಸಬೇಕು. ಆದರೆ ಯಾವ ಕವಿ, ಬಹುಮಟ್ಟಿಗೆ ಅನ್ಯರ ಸಾಮಗ್ರಿಗಳಿಂದಲೇ ಪುಷ್ಟನಾಗಿ, ಅದೆಲ್ಲವೂ ತನ್ನದೆಂಬಂತೆ ನಂಬಿಸಲು ಪ್ರಯತ್ನ ಪಡುವುದರಲ್ಲಿಯೇ ತನ್ನ ಕಾವ್ಯಶಕ್ತಿಯನ್ನೆಲ್ಲ ಪ್ರಕಟಿಸುತ್ತಾನೋ, ಅಂಥವನು ಕೃತಿಚೌರ‍್ಯದ ಕನಿಕರಕ್ಕೆ ಪಾತ್ರನಾಗುತ್ತಾನೆ. ಅನ್ಯರದನ್ನು ತನ್ನದೆಂದು ಮರೆಮಾಚಿ ಹೇಳುವ ಈ ಪ್ರಯತ್ನವನ್ನೇ ನಾವು ಅಪ್ರಾಮಾಣಿಕವೆಂದು ಹೇಳಬಹುದು. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಬಗೆಯ ಅಪ್ರಾಮಾಣಿಕತೆಗೆ  ಕಾರಣ ಕವಿಯ ಪ್ರತಿಭೆಯ ಅಸಾಮರ್ಥ್ಯವಲ್ಲದೆ ಬೇರೆ ಇಲ್ಲವೆಂಬುದು ಸ್ಪಷ್ಟವಾಗುತ್ತದೆ.

ಕೃತಿ ರಚನೆಯಲ್ಲಿ ಅಪ್ರಾಮಾಣಿಕವೆಂದು ತೋರುವ ಮತ್ತೊಂದು ನಿದರ್ಶನ ಪರಾನುಕರಣೆಯಲ್ಲಿ. ತನ್ನ ಸಮಕಾಲೀನ ಅಥವಾ ಹಿಂದಿನವರ, ರೀತಿಯನ್ನು ಅನುಕರಿಸುವುದು ಅಪ್ರಾಮಾಣಿಕವೆಂಬಂತೆ ತೋರುವ ಒಂದು ವಿಧಾನ. ಯಾವ ಕಾಲದಲ್ಲಿಯೆ ಆಗಲಿ, ಒಬ್ಬ ಶಕ್ತನಾದ ಕವಿ ವಿರಚಿಸಿದ ಉಕ್ತಿಮಾರ್ಗವನ್ನು ಅನುಸರಿಸುವ, ಅನುಕರಿಸುವ ಇನ್ನೆಷ್ಟೋ ಕವಿಗಳು ಹುಟ್ಟಿಕೊಳ್ಳುವುದು ಸಹಜ. ಕಾಳಿದಾಸನ ‘ಮೇಘದೂತ’ ಬಂದನಂತರ ಅದನ್ನು ಅನುಕರಿಸಿ ಹುಟ್ಟಿಕೊಂಡ ‘ದೂತಕಾವ್ಯ’ಗಳ ಪರಂಪರೆಯೇ ಬೆಳೆದಿದೆ. ಭಗವದ್ಗೀತೆಯ ಅನುಕೃತಿಗಳು ವಿಪುಲವಾಗಿವೆ. ಆ ಅನುಕರಣಗಳನ್ನು ‘ಅಪ್ರಾಮಾಣಿಕ’ವೆಂದು ಹೇಳಬಹುದೇ ಎಂಬುದು ಪ್ರಶ್ನೆ. ಇದಕ್ಕೆ ಉತ್ತರ : ‘ಹೇಳಬಾರದು’ ಎಂಬುದು. ಏಕೆಂದರೆ ಈ ಅನುಕರಣಕವಿಗಳು ತಾವು ಸುಪ್ರಸಿದ್ಧವಾದ ಕೃತಿಗಳನ್ನು ಅನುಕರಿಸುವುದರ ಮೂಲಕ ಅದೆಲ್ಲವೂ ತಮ್ಮದೆ ಎಂದು ನಂಬಿಸುವ ಉದ್ದೇಶದಿಂದ ಹೊರಟವರಲ್ಲ. ಹಾಗೆ ನಂಬಿಸುವ ಪ್ರಯತ್ನ ನಿಷ್ಫಲವೆಂಬುದು ಯಾರಿಗೂ ಸ್ಪಷ್ಟವಾಗುವ ಸಂಗತಿ. ಅವರು ಮೂಲ ಕವಿಕೃತಿಯ ಬಗೆಗೆ ಎಷ್ಟರಮಟ್ಟಿಗೆ ಮನಸೋತಿದ್ದರೆಂಬುದನ್ನು ಅದು ತೋರಿಸುತ್ತದೆ. ಅನುಕರಣ ಕೃತಿಗಳು, ಅನುಕರ್ತರ ಅಪ್ರಾಮಾಣಿಕತೆಗೆ ನಿದರ್ಶನವಲ್ಲ;  ಮೂಲ ಕವಿಗಳ ಪ್ರಭಾವಕ್ಕೆ ನಿದರ್ಶನ. ಈ ಅನುಕೃತಿಗಳ ವಿಷಯವನ್ನು ಬಿಟ್ಟು. ಆರಂಭ ದೆಸೆಯಲ್ಲಿ ಸ್ವಂತ ಕೃತಿನಿರ್ಮಿತಿಗೆ ತೊಡಗುವ ಕವಿಗಳಲ್ಲಿ ಕಂಡು ಬರುವ ಅನುಕರಣದ ವಿಷಯವನ್ನು ಪರಿಶೀಲಿಸಿದರೆ, ಎಷ್ಟೋ ಕವಿಗಳು ತಮ್ಮ ಸಮಕಾಲೀನ ಅಥವಾ ಸಮೀಪಕಾಲೀನ ಕವಿಗಳನ್ನು ಅಭಿವ್ಯಕ್ತಿಯಲ್ಲಿ ಅನುಕರಿಸುವಂತೆ ತೋರಬಹುದು. ಹಾಗೆ ಅನುಕರಿಸಿದ ಮಾತ್ರಕ್ಕೆ ಅದು ಅವರ ‘ಅಪ್ರಾಮಾಣಿಕತೆ’ಯನ್ನು ಪ್ರಕಟಿಸುತ್ತದೆಂದು ಹೇಳಲು ಬರುವುದಿಲ್ಲ. ಕಲೆಯ ಆರಂಭವೇ ಅನುಕರಣೆಯಿಂದ; ಹಾಗೆ ತನ್ನ ಸುತ್ತಣ ಕವಿಗಳನ್ನು ಅನುಕರಿಸುವುದು ಆರಂಭದ ಕವಿಗೆ ತೀರ ಸಹಜ. ನಿಜವಾದ ಕವಿ ಬರುಬರುತ್ತಾ, ತನ್ನ ಸ್ವಂತಿಕೆಯನ್ನು ಕಂಡುಕೊಳ್ಳುತ್ತಾ ಪರಾನುಕರಣದ ಸೆಳೆತದಿಂದ ಪಾರಾಗುತ್ತ, ತನ್ನದೇ ಆದ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳುತ್ತಾ ತನ್ನ ಹಾದಿಯನ್ನು ತಾನು ಕಂಡುಕೊಳ್ಳುತ್ತಾನೆ. ಈ ದಾರಿಯಲ್ಲಿ ಅನುಕರಣ ಆರಂಭದ ಒಂದು ಸ್ಥಿತಿ ಮಾತ್ರ. ಆದರೆ ಯಾರು ಎಷ್ಟು ಕಾಲವಾದರೂ, ಕೇವಲ ಪರಾನುಕರಣದ ನೆಲೆಯಲ್ಲೇ ನಿಂತಂತೆ ತೋರುವನೋ, ತನ್ನ ಸಹಜಾಭಿವ್ಯಕ್ತಿಯನ್ನು ಸಾಧಿಸಿಕೊಳ್ಳಲಾರನೋ ಅವನು ಕವಿಯೇ ಆಗಲಾರ ; ಕಾರಣ, ಅವನಲ್ಲಿ ಸ್ವತಂತ್ರ ನಿರ್ಮಾಣ ಸಾಮರ್ಥ್ಯ ಸಾಲದು. ಎಂದರೆ ಇದೂ ಸಹ ಅವನ ಪ್ರತಿಭೆಯ ಅಸಾಮರ್ಥ್ಯದ ಫಲವೇ. ಹೀಗಾಗಿ ಕೇವಲ ಅನುಕರಣದಿಂದಲೇ ತಾನು ಕವಿಯೆಂದು ತೋರ್ಪಡಿಸಿಕೊಳ್ಳುವ ಪ್ರಯತ್ನದಲ್ಲಿರುವ ಇಲ್ಲಿನ ಅಪ್ರಾಮಾಣಿಕತೆ ಪ್ರತಿಭಾದಾರಿದ್ರ್ಯ ಎನ್ನುವುದಕ್ಕೆ ಬೇರೊಂದು ಮಾತು ಎನ್ನಬೇಕು.

ತನ್ನ ನೈಜಾನುಭವಗಳನ್ನು ನೇರವಾಗಿ ಹೇಳುವ ಧೈರ್ಯವೋ, ಶಕ್ತಿಯೋ ಇಲ್ಲದೆ ಅಥವಾ ನೈಜಾನುಭವವೇ ಇಲ್ಲದೆ, ಪರಂಪರೆಯ ಸಿದ್ಧರೂಪಗಳನ್ನು ಆಶ್ರಯಿಸುವ ಪ್ರವೃತ್ತಿಯೂ ಎಷ್ಟೋವೇಳೆ ಅಪ್ರಾಮಾಣಿಕತೆಯಂತೆ ತೋರುತ್ತದೆ. ನಮ್ಮ ಹಳಗನ್ನಡ ಕಾವ್ಯಸಂಪ್ರದಾಯ ಇದಕ್ಕೆ ಸಮೃದ್ಧವಾದ ನಿದರ್ಶನಗಳನ್ನೊದಗಿಸುತ್ತದೆ. ಅಷ್ಟಾದಶವರ್ಣನೆಯ ನಿರ್ಬಂಧವನ್ನೋ, ಅಶ್ರಯವನ್ನೋ ಒಪ್ಪಿಕೊಂಡು ಕೃತಿರಚನೆ ಮಾಡಿದ ಕವಿಗಳನ್ನು ನೋಡಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ. ಕಾಲಕಾಲಕ್ಕೆ ಕವಿಮನೋಧರ್ಮದಲ್ಲಿ, ಕಾವ್ಯದ ರೂಪಾಂಶಗಳಲ್ಲಿ ಎಷ್ಟೇ ಬದಲಾವಣೆಗಳಾದರೂ ಅಷ್ಟಾದಶವರ್ಣನೆಯ ನಿರ್ಬಂಧದ ನೆರಳು ಹದಿನೆಂಟನೆಯ ಶತಮಾನದವರೆಗೂ ಹರಡಿಕೊಂಡು ಬಂದಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ನಿದರ್ಶನಕ್ಕಾಗಿ ಸಮುದ್ರದ ವರ್ಣನೆಯನ್ನು ನೋಡೋಣ. ಕವಿ ತನ್ನ ಕಾವ್ಯಾರಂಭದಲ್ಲಿ ಸಮುದ್ರದ ವರ್ಣನೆ ಮಾಡಬೇಕು; ಮಾಡುತ್ತಾನೆ. ಆ ವರ್ಣನೆಗೆ ಅವನೇನೂ ಸಮುದ್ರವನ್ನು ನೋಡಿರಬೇಕಾಗಿಲ್ಲ. ಆದರೂ ಸಂಪ್ರದಾಯಕ್ಕೆ ಕಟ್ಟುಬಿದ್ದು ತಾನು ಕಾಣದೆ ಇರುವ ಸಮುದ್ರವನ್ನು ವರ್ಣಿಸಬೇಕು; ಇಂಥ ಸಮುದ್ರವರ್ಣನೆ ಅಪ್ರಾಮಾಣಿಕತೆಗೆ ನಿದರ್ಶನವಲ್ಲವೆ? ಇನ್ನು ಪರ್ವತವರ್ಣನೆ ಋತುವರ್ಣನೆ ಇತ್ಯಾದಿಗಳನ್ನು ನೋಡಿದರೆ, ಎಷ್ಟೋ ವೇಳೆ ಅದನ್ನು ಬರೆದ ಕವಿಗಳಿಗೆ ಆಯಾ ವಸ್ತುಸಂಗತಿಗಳನ್ನು ಕುರಿತು ಅನುಭವವೇ ಇಲ್ಲವೆಂಬಂತೆ ಭಾಸವಾಗುವುದಿಲ್ಲವೆ ? ಇಲ್ಲಿ ಒಂದು ಪ್ರಶ್ನೆ ಏಳುತ್ತದೆ:  ಆಯಾ ಕವಿಗಳಿಗೆ ವಾಸ್ತವವಾದ ಅನುಭವವಿದ್ದೂ, ಅದನ್ನು ಸಮರ್ಪಕವಾಗಿ ಹೇಳಲು, ಅವರು ಆಶ್ರಯಿಸಿದ ಸಂಪ್ರದಾಯದ ಸಿದ್ಧರೂಪಗಳಿಂದ ಅಡ್ಡಿಯಾಗಿದೆಯೆ? ಅಥವಾ ಅವರಿಗೆ ಆಯಾ ಸಂಗತಿಗಳನ್ನು ಕುರಿತು ವಾಸ್ತವವಾದ ಅನುಭವ ಇಲ್ಲದ್ದರಿಂದ ಹೀಗಾಗಿದೆಯೆ? ಈ ಎರಡೂ ಕಾರಣಗಳ ಸಾಧ್ಯತೆಯನ್ನು ಒಪ್ಪಿಕೊಂಡರೂ, ವಾಸ್ತವವಾದ ಅನುಭವವಿದ್ದೂ, ಅದನ್ನು ಹೇಳಲು ತಮ್ಮದೇ ಆದ ಸ್ವಂತ ಅಭಿವ್ಯಕ್ತಿಯನ್ನು ನಿರ್ಮಿಸಿಕೊಳ್ಳಲಾರದ, ಪ್ರತಿಭೆಯ ಅಸಾಮರ್ಥ್ಯದಿಂದ ಸಂಪ್ರದಾಯದ ಸಿದ್ಧರೂಪಗಳನ್ನು ಮರೆಹೊಕ್ಕದ್ದರ ಹಿಂದಿರುವ ಸ್ವಾತ್ಮ ವಂಚನೆಯೂ, ವಾಸ್ತವವಾದ ಅನುಭವವಿಲ್ಲದೆ ಹೋದಾಗಲೂ ತಮಗೆ ಈ ಅನುಭವವಾಗಿದೆ- ಯೆಂಬಂತೆ ಹೇಳಲು ಪ್ರಯತ್ನಿಸುವಲ್ಲಿ ಕಂಡುಬರುವ ತಂತ್ರವೂ ಅಪ್ರಾಮಾಣಿಕತೆಗೆ ನಿದರ್ಶನಗಳಾಗುತ್ತವೆ. ಆದರೆ ಸಂಪ್ರದಾಯವಂತೂ ಇದನ್ನು ಯಾವ ಸಂಕೋಚವೂ ಇಲ್ಲದೆ ‘ಕಾವ್ಯ’ ವೆಂದೇ ಭ್ರಮಿಸಿದೆ. ಇದು ಎಷ್ಟು ದೂರ ಬಂತೆಂದರೆ, ಕವಿಗೆ ಆಯಾ ವರ್ಣನೆಗೆ ಮೂಲವಾದ ಸಂಗತಿಗಳ ಅಥವಾ ವಸ್ತುಗಳನ್ನು ಕುರಿತು ವಾಸ್ತವವಾದ ಅನುಭವ ಇರುವುದು ಅಗತ್ಯವಲ್ಲವೆ ಎಂಬುದನ್ನೆ ಗಣನೆಗೆ ತೆಗೆದುಕೊಳ್ಳದೆ, ಇಂತಿಂಥ ವರ್ಣನೆಗೆ ಇಂತಿಂಥ ಸಂಗತಿಗಳನ್ನು ಒಟ್ಟು ಸೇರಿಸಿ ಹೇಳಿದರೆ ಸಾಕು ಎನ್ನುವ ಅತಿರೇಕಕ್ಕೆ ಒಯ್ದು ಮುಟ್ಟಿಸಿದೆ.[1] ಹೀಗಾಗಿ ನಮ್ಮ ಹಳಗನ್ನಡ ಕವಿಗಳ ಎಷ್ಟೋ ವರ್ಣನೆಗಳು ಏನನ್ನೂ ನೋಡದ ಹಾಗೂ ಏನನ್ನೂಸ್ವಂತವಾಗಿ ಅನುಭವಿಸದ ಅಪ್ರಾಮಾಣಿಕತೆಯಿಂದ ಬಂದವುಗಳಾಗಿವೆ. ಆದರೆ ಒಂದು ಮಾತು: ಕವಿಯ ಪ್ರಾಮಾಣಿಕತೆಯನ್ನು ನಾವು, ಆತ ತನ್ನ ವರ್ಣನೆಯ ವಸ್ತುವನ್ನು ವಾಸ್ತವವಾಗಿ ಕಂಡಿದ್ದಾನೆಯೆ ಅಥವಾ ಇಲ್ಲವೆ ಎಂಬಷ್ಟರ ಮೇಲಿನಿಂದಲೆ ನಿರ್ಣಯಿಸಬಾರದು. ಸಮುದ್ರವನ್ನು ಈ ಕವಿ ನೋಡಿದ್ದಾನೆಯೆ, ಇಲ್ಲವೆ ಎನ್ನುವುದರ ಆಧಾರದ ಮೇಲೆ ಆ ಕವಿಯ ಸಮುದ್ರ ವರ್ಣನೆಯ ಪ್ರಾಮಾಣಿಕತೆಯನ್ನು  ನಿರ್ಧರಿಸುವಂತಿಲ್ಲ. ಆತ ಸಮುದ್ರವನ್ನು ನೋಡಿದ್ದಾನೋ ಇಲ್ಲವೊ ಅದು ನಮಗೆ ಅಪ್ರಕೃತ. ಆದರೆ ಅವನ ಸಮುದ್ರ ವರ್ಣನೆಯನ್ನೋದಿದರೆ ಸಮುದ್ರವನ್ನು ಕುರಿತು ಅನುಭವ ನಮ್ಮಲ್ಲಿ ಆಗುತ್ತದೆಯೇ ಇಲ್ಲವೆ ಎಂಬುದು ಮುಖ್ಯ. ಏಕೆಂದರೆ ಕವಿ ಎಲ್ಲವನ್ನೂ ವಾಸ್ತವವಾಗಿ ನೋಡಿ ಅನುಭವಿಸಿಯೇ ಆನಂತರ ವರ್ಣಿಸಿದ್ದರೆ ಮಾತ್ರ ಅದು ಪ್ರಾಮಾಣಿಕವಾದದ್ದು ಎಂದು ಹೇಳಲು ಹೊರಟರೆ ತಪ್ಪಾಗುತ್ತದೆ. ಕವಿ ಎಲ್ಲವನ್ನೂ ನೋಡಿಯೆ ಇರಬೇಕಿಲ್ಲ; ಅವನು ನೋಡಿದ್ದರ ಯಥಾವತ್ತಾದ ವರದಿಯನ್ನು ನಾವು ಆತನ ಕೃತಿಯಲ್ಲಿ ನಿರೀಕ್ಷಿಸುವುದಿಲ್ಲ. ಅವನು ಅದರ ಅನುಭವವನ್ನು ಎಷ್ಟರ ಮಟ್ಟಿಗೆ ಕಲಾತ್ಮಕವಾಗಿ ಕೊಡಬಲ್ಲವನಾಗಿದ್ದಾನೆ ಎಂಬುದನ್ನು ನೋಡುತ್ತೇವೆ. ಒಬ್ಬ ಕವಿ ಸಮುದ್ರವನ್ನು ನೋಡಿಯೂ ಅದರ ಅನುಭವವನ್ನು ಓದುಗರಿಗೆ ಸಮರ್ಪಕವಾಗಿ ಮಾಡಿಕೊಡದೆ ಹೋಗಬಹುದು ; ಇನ್ನೊಬ್ಬ ಸಮುದ್ರವನ್ನು ನೋಡದೆಯೂ ಅದನ್ನು ಕುರಿತು ಅನುಭವವನ್ನು ಸೊಗಸಾಗಿ ಮಾಡಿಕೊಡಬಹುದು. ಲೋಕಾನುಭವಗಳನ್ನು ತಮ್ಮ ಕಾವ್ಯಾನುಭವಗಳನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯ ಒಬ್ಬೊಬ್ಬ ಕವಿಗೆ ಒಂದೊಂದು ರೀತಿಯಲ್ಲಿ ಇರಬಹುದು; ಅದನ್ನು ಪ್ರಶ್ನಿಸುವುದು ನಮ್ಮ ಕೆಲಸವಲ್ಲ. ಹಾಗೆ ನೋಡಿದರೆ ಸ್ವರ್ಗ ಮರ್ತ್ಯ ಪಾತಾಳಗಳ ಸಂಗತಿಯನ್ನೆಲ್ಲ ರಮ್ಯವಾಗಿ ವರ್ಣಿಸುವ, ವರ್ತಮಾನದಲ್ಲಿದ್ದೂ ಗತಕಾಲದ ಪೌರಾಣಿಕ ಐತಿಹಾಸಿಕ ಸಂಗತಿಗಳನ್ನೆತ್ತಿಕೊಂಡು ಕೃತಿರಚನೆ ಮಾಡುವ ಕವಿಯನ್ನು, ನೀನು ಆಯಾ ಕಾಲಗಳಲ್ಲಿ ಬದುಕಿಯೇ ಇರಲಿಲ್ಲ, ಆದಕಾರಣ ನೀನು ಹೇಳಿರುವುದೆಲ್ಲ ಪ್ರಾಮಾಣಿಕವೆಂದು ಹೇಗೆ ನಂಬಬೇಕು ಎಂದು ಪ್ರಶ್ನಿಸುವುದು ಅವಿವೇಕವಾಗುತ್ತದೆ.[2] ವಾಸ್ತವವಾಗಿ ಇಲ್ಲಿ ಅಪ್ರಾಮಾಣಿಕತೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಕವಿ ಏನೆಲ್ಲ ಅನುಭವಗಳನ್ನು ತನ್ನದನ್ನಾಗಿ ಮಾಡಿಕೊಂಡು, ಅವನ್ನು ಸಾಕ್ಷಾತ್ಕರಿಸಿಕೊಂಡು, ಸಮರ್ಪಕವಾದ ಕಲಾ ಕಲಾವಂತಿಕೆಯನ್ನು ಪ್ರಕಟಿಸಿದ್ದಾನೆಯೆ, ಇಲ್ಲವೆ ಎನ್ನುವುದು ಮುಖ್ಯ. ಆದರೆ ತನ್ನ ನೈಜಾನುಭವಗಳಿಗೆ ಸಹಜವಾದ ಅಭಿವ್ಯಕ್ತಿಯನ್ನು ನಿರ್ಮಿಸಿಕೊಳ್ಳಲಾರದೆ, ಅಥವಾ ಅನುಭವವೆ ಇಲ್ಲದೆ ಸಾಂಪ್ರದಾಯಿಕ ಸಿದ್ಧರೂಪಗಳ ಮರೆಹೋಗುವ ಕವಿಯ ಅಪ್ರಾಮಾಣಿಕತೆ, ವಾಸ್ತವವಾಗಿ ಅವನ ಪ್ರತಿಭೆಯ ದುರ್ಬಲತೆಯಲ್ಲದೆ ಬೇರೆ ಅಲ್ಲ ಎಂದು ಹೇಳಬೇಕಾಗುತ್ತದೆ.

ಅಪ್ರಾಮಾಣಿಕತೆಯೆಂದು ತೋರುವ ಮತ್ತೊಂದು ಅಂಶವೆಂದರೆ, ತನ್ನ ಸುತ್ತಣ ಪರಿಸರದ ಬಗೆಗೆ ತಿಳಿಯದೆಯೊ ಕಣ್ ಮುಚ್ಚಿಕೊಂಡು, ತನ್ನದೇ ಆದ ಕಲ್ಪನಾ ವಿಲಾಸಗಳನ್ನೊ, ಆದರ್ಶೀಕೃತ ಭಾವನೆಗಳನ್ನೊ ಕಾವ್ಯಮಯವಾಗಿ ಹೊಸೆಯುವ ಕವಿಯ ಪ್ರಯತ್ನ. ತನ್ನ ಪರಿಸರದಲ್ಲಿ ಬದಲಾಗುತ್ತಿರುವ ಬದುಕಿನ ಸಂವೇದನೆಗಳಿಗೆ ಸಮರ್ಪಕವಾದ ಅಭಿವ್ಯಕ್ತಿಯನ್ನು ಕೊಡಲಾರದೆ, ಅಥವಾ ಅವುಗಳನ್ನು ಅಲಕ್ಷಿಸಿ ರೂಢಿಯ ಜಾಡನ್ನೆ ಮನೋಧರ್ಮದಲ್ಲಿ ಹಾಗೂ ಅಭಿವ್ಯಕ್ತಿಯಲ್ಲಿ ಅನುಸರಿಸುವ ಕವಿಗಳ ರಚನೆಗೆ ಆ ಮಾತು  ಅನ್ವಯಿಸುತ್ತದೆ. ಒಂದೊಂದು ಸಲ ಆದರ್ಶೀಕೃತ ಭಾವನೆಗಳೋ, ಎರವಲು ತಂದ ಆಧ್ಯಾತ್ಮಿಕ ತತ್ವಗಳೋ ಕವಿಗಳಿಗೆ ಸಲೀಸಾದ ಕಾವ್ಯವಸ್ತುವಾಗುವುದನ್ನು ಕಂಡಾಗಲೂ ಈ ಮಾತು ನಿಜ ಎನ್ನಿಸುತ್ತದೆ. ಎಂದೋ  ಒಮ್ಮೆ ಯಾವುದೋ ಸಂದರ್ಭದಲ್ಲಿ ಸಹಜವಾಗಿಯೆ ಆದ ಪ್ರಾಮಾಣಿಕವಾದ ಅನುಭವವನ್ನು ಮತ್ತೆ ಮತ್ತೆ ಎಲ್ಲ ಸಂದರ್ಭಗಳಲ್ಲಿಯೂ ಆಯಿತೆಂಬಂತೆ ತಾನೇ ಒಂದು ಪರಂಪರೆಯನ್ನು ತನ್ನ ಕಾವ್ಯದ ಒಳಗೇ ನಿರ್ಮಾಣ ಮಾಡಿಕೊಳ್ಳುವ ಪ್ರವೃತ್ತಿಯಲ್ಲೂ ನಮಗೆ ಕವಿಯ ಪ್ರಾಮಾಣಿಕತೆಯ ಬಗೆಗೆ ಶಂಕೆ ಬರುತ್ತದೆ. ಹಾಗೆಯೆ ತನ್ನ ಪರಿಸರದಲ್ಲಿ ಇಲ್ಲದ ಒಂದು ಪರಿಸ್ಥಿತಿಯನ್ನು, ಇದೆಯೆಂದು ಕಲ್ಪಿಸಿಕೊಂಡೋ ಅಥವಾ ಬೇರೊಂದು ದೇಶದ ಪರಿಸ್ಥಿತಿಯನ್ನು ಕಾವ್ಯಾಭಿವ್ಯಕ್ತಿಯ ನಾವೀನ್ಯತೆಗಾಗಿ ಎರವಲು ತಂದೋ, ಆರೋಪಿಸಿಕೊಂಡೋ, ಅದು ನಮ್ಮಲ್ಲೇ ಇದೆಯೆಂಬಂತೆ ನಂಬಿಸುವ ಪ್ರಯತ್ನದಲ್ಲಿಯೂ, ನಮಗೆ ಆಯಾ ಕವಿಯ ಅನುಭವದ ಪ್ರಾಮಾಣಿಕತೆಯ ಬಗ್ಗೆ ಶಂಕೆ ಬರುವುದುಂಟು. ಈ ಎರಡು ಅಂಶಗಳಿಗೆ, ಮೊದಲನೆಯದಕ್ಕೆ ನವೋದಯ ಕಾವ್ಯವೂ ಎರಡನೆಯದಕ್ಕೆ ನವ್ಯಕಾವ್ಯವೂ ಸಾಕಷ್ಟು ಪ್ರಮಾಣಗಳನ್ನು ಒದಗಿಸಬಲ್ಲುದು.

ವಿಮರ್ಶೆಯಲ್ಲಿ ‘ಪ್ರಾಮಾಣಿಕತೆ’ ಎಂಬ ಮಾತಿಗೆ ವಿಶೇಷ ಪ್ರಾಮುಖ್ಯ ಬಂದುದು, ನವ್ಯ ಕವಿಗಳು, ನವೋದಯ ಕವಿಗಳ ದೋಷ ದೌರ್ಬಲ್ಯಗಳನ್ನು ವಿಶೇಷವಾಗಿ ಎತ್ತಿ ತೋರಿಸತೊಡಗಿದಾಗಲೆ. ನವ್ಯ ಕಾವ್ಯದ ಕವಿಗಳೂ ವಿಮರ್ಶಕರೂ ಪ್ರಾಮಾಣಿಕತೆಯನ್ನು ಗುತ್ತಿಗೆ ಹಿಡಿದುಕೊಂಡವರೆಂಬಂತೆ ತಮ್ಮ ಸಮಕಾಲೀನ ಹಾಗೂ ಸಮೀಪಕಾಲೀನ ಕವಿಗಳ ಪ್ರಾಮಾಣಿಕತೆಯನ್ನು ಶಂಕಿಸತೊಡಗಿದರು. ನವ್ಯರಲ್ಲದ ಕವಿಗಳು, ಸೌಂದರ್ಯ, ಆದರ್ಶ, ಆಧ್ಯಾತ್ಮ, ಇತ್ಯಾದಿಗಳ ನೆಪದಲ್ಲಿ ಆತ್ಮವಂಚನೆ ಮಾಡಿಕೊಂಡರೆಂದೂ, ಬದುಕಿನ ಸಮಗ್ರಾನುಭವದ ಪರಿವೆಲ್ಲದೆ ತಮ್ಮ ಅನುಭವವನ್ನು ಪರಿಮಿತಗೊಳಿಸಿಕೊಂಡರೆಂದೂ, ಸರ್ಕಾರವೋ ಮತ್ತಾವುದೋ ಸಂಸ್ಥೆಗಳು ಒಡ್ಡುವ ಸನ್ಮಾನ, ಬಹುಮಾನಗಳ ಆಕರ್ಷಣೆಗೆ ಒಳಗಾಗಿ, ಇರುವ ಇಲ್ಲದ ಸಂಗತಿಗಳನ್ನು ರುಚಿ ರುಚಿಯಾಗಿ, ದೊಡ್ಡ ದೊಡ್ಡ ಮಾತುಗಳಿಂದ ಉತ್ಪ್ರೇಕ್ಷೆ ಮಾಡಿ ಬರೆಯುತ್ತಾರೆಂದೂ ಆಪಾದಿಸಿ, ಆ ಕವಿನಿರ್ಮಿತಿಯ ಪ್ರಾಮಾಣಿಕತೆಯನ್ನು ಪ್ರಶ್ನಿಸತೊಡಗಿದರು. ನವೋದಯಕಾಲದ ಕವಿಗಳು ಕಾವ್ಯವಸ್ತುವಿನ ಬಗೆಗೆ ಸುಂದರಾಸುಂದರಗಳೆಂಬ ವಿಭಾಗಗಳನ್ನು ಮಾಡಿಕೊಂಡಂತೆ ತೋರಿದರೂ, ಅವರು ತಮಗೆ ರುಚಿಸಿದ ಬದುಕಿನ ಮುಖಗಳಿಗೆ ತಮ್ಮ ಕಾವ್ಯದಲ್ಲಿ ಅಭಿವ್ಯಕ್ತಿಯನ್ನು ನೀಡಿದರು; ಬದುಕಿನಲ್ಲಿ ತಾವು ಕಂಡದ್ದಲ್ಲದೆ ಉಳಿದದ್ದು ಇಲ್ಲವೆಂದೇನೂ ಅವರು ಹೇಳಲಿಲ್ಲ. ಬದುಕಿನಲ್ಲಿ ಎಲ್ಲದಕ್ಕೂ ಅಭಿವ್ಯಕ್ತಿಯನ್ನು ನೀಡಲೇಬೇಕೆಂದೇನೂ ಅಂದುಕೊಳ್ಳಲಿಲ್ಲ. ತಮ್ಮ ಅಭಿರುಚಿಗೆ, ತಮ್ಮ ಮನೋಧರ್ಮಕ್ಕೆ ಉಚಿತವಾದ ಅನುಭವ ಕ್ಷೇತ್ರಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡು ತಮ್ಮ ತೀವ್ರವಾದ ಅನುಭವಗಳನ್ನು ಪ್ರಾಮಾಣಿಕವಾಗಿಯೇ ಅನುಭವಿಸಿ ಅಭಿವ್ಯಕ್ತಿಯನ್ನು ನೀಡಿದರು. ಹಾಗೆಂದ ಮಾತ್ರಕ್ಕೆ ಬದುಕಿನ ಬೇರೆ ಬೇರೆಯ  ಮುಖಗಳಿಗೆ ಅವರು ಅಭಿವ್ಯಕ್ತಿಯನ್ನು ನೀಡದೆ ಹೋದರೆಂದು ಅವರನ್ನು ಅಪ್ರಾಮಾಣಿಕರೆಂದು ಕರೆಯಬಾರದು. ಹೀಗೆಯೇ ಆಧ್ಯಾತ್ಮಿಕಾನುಭವಗಳನ್ನು ಕುರಿತ ಕವಿತೆಗಳನ್ನೂ ಬೇರೆಯಾಗಿಯೇ ನೋಡಬೇಕು. ಆಧ್ಯಾತ್ಮಿಕಾನುಭವಗಳ ಬಗೆಗೆ ವೈಯಕ್ತಿಕವಾದ ಆಸಕ್ತಿ, ಶ್ರದ್ಧೆ, ಸಂಸ್ಕಾರಗಳ ಹಿನ್ನೆಲೆ ಇದ್ದವರು, ಅದನ್ನು ತಮ್ಮ ಕಾವ್ಯದ ವಸ್ತುವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಯಿತು. ಆ ಮನೋಧರ್ಮವಿಲ್ಲದ ಅಥವಾ ಒಲ್ಲದ ಕೆಲವರು, ಇನ್ನೊಬ್ಬರ ಶ್ರದ್ಧೆಸಂಸ್ಕಾರಗಳಿಂದ ದೀಪ್ತವಾದ ಅನುಭವದ ಪ್ರಾಮಾಣಿಕತೆಯನ್ನು ಶಂಕಿಸುವ ಕೊಂಕಿಸುವ ಕೆಲಸಕ್ಕೆ ಕೈಹಾಕುವುದಂತೂ ಪ್ರಾಮಾಣಿಕತೆಯ ಲಕ್ಷಣವಲ್ಲವೆಂದೇ ಹೇಳಬೇಕು. ಆದರ್ಶ, ಆಧ್ಯಾತ್ಮ ಎಂದಕೂಡಲೆ ಅವುಗಳ ಬಗ್ಗೆ, ಅಂಥ ವಸ್ತುವನ್ನು ಕುರಿತು ಬರೆಯುವ ಕವಿಗಳ ಹಾಗೂ ಕೃತಿಗಳ ಬಗ್ಗೆ, ‘ಗುಮಾನಿ’ಯಿಂದ ನೋಡುವುದು ವಿಚಾರಶೀಲವೆಂದು ಭ್ರಮಿಸಿದ ಮನಸ್ಸಿನ ಚಟವಾದಂತೆ ತೋರುತ್ತದೆ. ಅಲ್ಲದೆ ಇಂಥ ವಸ್ತುಗಳನ್ನು ಕುರಿತು ಕೃತಿರಚನೆ ಮಾಡಿ, ಆಯಾ ಕವಿಗಳು ತಮ್ಮ ಭಕ್ತಾದಿಗಳನ್ನು ಬುಟ್ಟಿಗೆ ಹಾಕಿಕೊಂಡು ತಮ್ಮದೇ ಆದೊಂದು ಮಠ ಕಟ್ಟುವ ಉದ್ದೇಶವೇನೋ ಅವರಿಗಿದೆಯೆಂಬಂತೆ ನಮಗೆ ತೋರುವುದಿಲ್ಲ. ಇಂಥ ಅನುಭವಗಳನ್ನು ಕುರಿತ ಕವಿತೆ ತಾವು ವಾಸ್ತವವೆಂದು ಭಾವಿಸಿದ ನೆಲೆಯಿಂದ ಬೇರೆಯೋ, ದೂರವೋ ಎಂಬ ಕಾರಣದಿಂದ ಅದು ಅರ್ಥವಿಲ್ಲದ್ದೆಂದೂ, ಅಪ್ರಾಮಾಣಿಕವೆಂದೂ ಹೇಳುವುದು ಬುಡವಿಲ್ಲದ ಮಾತು. ಅಲ್ಲದೆ ಇಂಥ ಅನುಭವಗಳನ್ನು ಕುರಿತ ಕವಿತೆ ನಾವೂ ನೀವೂ ಭಾವಿಸಿದಂತೆ ಎಲ್ಲ ಕವಿತೆಗಳ ಸಾಲಿಗೆ ಸೇರದೆ ಇರಬಹುದು; ಅಥವಾ ಅದನ್ನರ್ಥ ಮಾಡಿಕೊಳ್ಳುವ ಮನೋಧರ್ಮ, ಅದನ್ನಳೆಯುವ ಮಾನದಂಡ ಬೇರೆಯೇ ಇರಬಹುದು-ಎಂಬ ಔದಾರ್ಯ ಬೇಕು. ಹೀಗೆಂದ ಮಾತ್ರಕ್ಕೆ ಇಂಥ ವಸ್ತುಗಳನ್ನೆತ್ತಿಕೊಂಡು ಬರೆದದ್ದೆಲ್ಲ, ಆತ್ಮದ ಶ್ರೇಯಸ್ಸನ್ನು ಗುರಿಯಾಗಿರಿಸಿಕೊಂಡದ್ದೆಂಬ ಉದ್ದೇಶದಿಂದ, ಅಮೋಘವಾಗಿದೆ ಎಂದೇನೂ ನಾವು  ಹೇಳುವುದಿಲ್ಲ ; ಎಷ್ಟೋ ವೇಳೆ ಇಂಥ ವಸ್ತುವನ್ನು ಕುರಿತು ಬರೆಯುವುದೂ ಹಲವು ಕವಿಗಳಿಗೆ ಒಂದು ಸುಲಭವಾದ ಹವ್ಯಾಸವಾಗಿದ್ದು ಕಾವ್ಯಗುಣಕ್ಕೆ ಸೊನ್ನೆಯಾಗಿದೆ ಎಂಬುದನ್ನೂ ನಾವು ಬಲ್ಲೆವು. ಅದು ಸೌಂದರ್ಯವನ್ನೇ ಕುರಿತಿರಲಿ, ಆದರ್ಶವನ್ನೇ ಕುರಿತಿರಲಿ, ಅಧ್ಯಾತ್ಮವನ್ನೇ ಕುರಿತಿರಲಿ, ಅದು ಮೊದಲು ಕವಿತೆಯಾಗಿ ಅನುಭೂತವಾಗಿದೆಯೆ ಎನ್ನುವುದು ಮುಖ್ಯ. ಕಾವ್ಯವಿಮರ್ಶೆಯ ಒರೆಗಲ್ಲಿಗೆ ಉಜ್ಜಿ ನೋಡಿ ಇದು ಒಳ್ಳೆಯ ಕಾವ್ಯವಾಗಿಲ್ಲ ಅಥವಾ ಕಾವ್ಯವಾಗುವುದರಲ್ಲಿ ವಿಫಲವಾಗಿದೆ ಎಂದು ಬೇಕಾದರೆ ಹೇಳಲಿ ; ಆದರೆ ಈ ಬಗೆಯ ಕಾವ್ಯನಿರ್ಮಿತಿಯ ಪ್ರಾಮಾಣಿಕತೆಯನ್ನು ಶಂಕಿಸುವುದು, ಕೇವಲ ಪ್ರಚಾರದ ಮಾತಾದೀತು.

ಕವಿಯಾದವನು ಬಹಿರಂಗದ ನಿರ್ದೇಶನಕ್ಕೋ, ನಿರ್ಬಂಧಕ್ಕೋ, ಆಕರ್ಷಣೆಗೋ ಒಳಗಾಗಿ ಕೃತಿರಚನೆ ಮಾಡುವುದು ಅಪ್ರಾಮಾಣಿಕವಾಗುತ್ತದೆ ಎನ್ನುವ ಮಾತನ್ನು ಪರಿಶೀಲಿಸಬೇಕಾಗಿದೆ. ಸರ್ಕಾರದ ಯೋಜನೆಗಳನ್ನು, ತುರ್ತುಪರಿಸ್ಥಿತಿಗಳನ್ನು ಕುರಿತು ಬರೆಯಬೇಕಾದ ಸಂದರ್ಭಗಳನ್ನೂ, ಸರ್ಕಾರದ ಸಹಾಯಧನದ, ಬಹುಮಾನ, ಸನ್ಮಾನಗಳ ಆಕರ್ಷಣೆಗೆ ಒಳಗಾಗಿ ಬರೆಯಬೇಕಾದ ಪರಿಸ್ಥಿತಿಯನ್ನೂ, ಕುರಿತದ್ದು ಈ ಮಾತು. ನಿಜ, ಅನ್ಯರ ನಿರ್ಬಂಧದಿಂದಾಗಲಿ, ಯಾವುದೇ ಲಾಭದ ಆಸೆಗಾಗಲಿ ತನ್ನ ಸೃಷ್ಟಿಶೀಲತೆಯನ್ನು ಮಾರಿಕೊಳ್ಳುವುದು ಆತ್ಮವಂಚನೆ ಹಾಗೂ ಅಪ್ರಾಮಾಣಿಕತೆ- ಯಾಗುವುದೆಂದೂ, ಅದಕ್ಕಾಗಿ ರಚಿಸಿದ ಕೃತಿಗಳು ಉತ್ಕೃಷ್ಟವಾಗಲಾರವೆಂದೂ ಒಪ್ಪಿಕೊಳ್ಳಬೇಕು. ಯಾವ ನಿಜವಾದ, ಶಕ್ತನಾದ ಲೇಖಕನೂ ಈ ಉದ್ದೇಶಗಳಿಗಾಗಿಯೇ ಬರೆಯಲಾರ ಎಂಬುದನ್ನು ಮರೆಯಬಾರದು. ತಾನು ತನ್ನ ಸ್ವಂತ ತುರ್ತಿಗಾಗಿ ಕೃತಿರಚನೆ ಮಾಡಿದ್ದಕ್ಕೂ, ಆನಂತರ ಅದಕ್ಕೆ ದೊರಕಿದ ರಾಜ್ಯದ ಅಥವಾ ರಾಷ್ಟ್ರದ ಪ್ರಶಸ್ತಿಗೂ ಕಾರ‍್ಯಕಾರಣ ಸಂಬಂಧವನ್ನು ಗಂಟು ಹಾಕಿ, ಪ್ರಶಸ್ತಿಗಳಿಗಾಗಿ ಈ ಕೃತಿ ರಚಿತವಾಯಿತೆಂದು ಕುತರ್ಕ ಮಾಡುವುದು ಒಳ್ಳೆಯದಲ್ಲ.[3] ತನ್ನ ರಾಷ್ಟ್ರದ ಪ್ರತಿಭಾವಂತರನ್ನು  ಸರ್ಕಾರ ಗೌರವಿಸಬಹುದು ; ಆ ಗೌರವದ ಗಳಿಕೆಗಾಗಿ ನಿಜವಾದ ಸಾಹಿತಿ ಸಾಹಿತ್ಯನಿರ್ಮಿತಿಗೆ ತೊಡಗುವುದಿಲ್ಲ. ಆದರೆ ಇಂಥ ಗೌರವ, ಸಹಾಯಧನಗಳ ಆಕರ್ಷಣೆ ಇದ್ದಲ್ಲಿ, ಸಹಜವಾಗಿಯೇ ಅದಕ್ಕಾಗಿ ಬರೆಯುವ ಲೇಖಕವರ್ಗವೂ, ಅದಕ್ಕೆ ಬೆಂಬಲವಾದ ರಾಜಕೀಯತಂತ್ರಾದಿಗಳೂ ಹುಟ್ಟಿಕೊಳ್ಳುವುದು ವಿಷಾದನೀಯವಾದರೂ, ಅದು ಅಪರಿಹಾರ‍್ಯವಾದ ಸಂಗತಿಯೂ ಹೌದು. ಇಂಥ ಸಂದರ್ಭಗಳಲ್ಲಿ ನಿಜವಾದ ಲೇಖಕ ತಾನು ಈ ನಿರ್ಬಂಧ ಆಕರ್ಷಣೆಗಳಿಗೆ ಅತೀತನಾಗಿದ್ದೇನೆಂಬ ಧೈರ್ಯವನ್ನೂ, ಆತ್ಮಗೌರವವನ್ನೂ ಪ್ರಕಟಿಸಿಕೊಳ್ಳಬೇಕಾದದ್ದು ಅತ್ಯಗತ್ಯ. ಆದರೆ ಇದು ಇಂಥ ಪರಂಪರೆಯನ್ನಾಗಲಿ, ಅದರಿಂದ ಗೌರವಿತರಾದ ವ್ಯಕ್ತಿಗಳ ಹಾಗೂ ಕೃತಿಗಳ ಪ್ರಾಮಾಣಿಕತೆಯನ್ನಾಗಲಿ ಕೀಳ್ಗಳೆಯುವ ಪ್ರವೃತ್ತಿಯಲ್ಲಿ ಪ್ರಕಟವಾಗಬಾರದು.

ಇನ್ನು ರಾಷ್ಟ್ರನಿರ್ಮಾಣರೂಪದ ಯೋಜನೆಗಳನ್ನು, ರಾಷ್ಟ್ರದ ಜೀವನದಲ್ಲಿ ಗಂಡಾಂತರ ಒದಗಿದ ತುರ್ತುಪರಿಸ್ಥಿತಿಗಳನ್ನು ಕುರಿತ ಸಾಹಿತ್ಯನಿರ್ಮಿತಿ, ಸರ್ಕಾರದ ಸೂಚನೆಗೋ, ಕೇಳಿಕೆಗೋ ಒಪ್ಪಿಕೊಂಡು ಸಾಹಿತಿ ಬರೆದ ಕಾರಣ ಅದು ಅಪ್ರಾಮಾಣಿಕವಾಗಬಹುದೆಂಬ ವಿಷಯವನ್ನು ಪರಿಶೀಲಿಸೋಣ : ಇವತ್ತು ಸರ್ಕಾರವೆಂದರೆ ನಮ್ಮಿಂದ ಬೇರೆಯೇನಲ್ಲ ; ಅದು ನಮ್ಮ ಪ್ರತಿನಿಧಿ. ಅದು ಜನತೆಯ ಆಶೋತ್ತರಗಳ ಪೂರೈಕೆಗಾಗಿ ಕೈಕೊಂಡ ಇಂಥ ರಾಷ್ಟ್ರನಿರ್ಮಾಣ ಸಮಯದಲ್ಲಿ ಕವಿಗಳಿಂದ ಒಂದಿಷ್ಟು ಪ್ರಸಾರವನ್ನು ನಿರೀಕ್ಷಿಸಬಹುದು. ಇಂಥ ಸಂದರ್ಭದಲ್ಲಿ ಕವಿಯಾದವನು ತನ್ನ ಸುತ್ತಲೂ ನಡೆಯುವ, ಅನೇಕ ಯೋಜನೆಗಳ ಮೂಲಕ ನಾಡನ್ನು ನಿರ್ಮಿಸುವ ಲಕ್ಷಾಂತರ ಜನಗಳ ಆಸೆ, ಆಕಾಂಕ್ಷೆ, ದುಡಿಮೆಗಳ ಬಗೆಗೆ ತಟಸ್ಥನಾಗಿರುವುದು ಸಾಧ್ಯವೆ, ಸಾಧುವೆ ? ‘ಸರ್ಕಾರ’ ಕೇಳಿತೆಂದ ಮಾತ್ರಕ್ಕೆ, ಅದನ್ನು  ಒಂದು ನಿರ್ಬಂಧವೆಂದೂ, ಇಂಥ ನಿರ್ಬಂಧಕ್ಕೆ ಒಪ್ಪಿಕೊಂಡು ಸಾಹಿತ್ಯ ನಿರ್ಮಿಸುವುದು ಅಪ್ರಾಮಾಣಿಕವೆಂದೂ, ಅಂಥ ಕೇಳಿಕೆಯನ್ನು ತಿರಸ್ಕಾರದಿಂದ ಕಾಣುವುದರ ಮೂಲಕವೇ ತನ್ನ ಸ್ವತಂತ್ರ ವ್ಯಕ್ತಿತ್ವವನ್ನು ಕಾಯ್ದುಕೊಳ್ಳುತ್ತಿದ್ದೇನೆಂಬ ಭ್ರಮೆಯಲ್ಲಿ ಹೆಮ್ಮೆ ಪಟ್ಟುಕೊಳ್ಳುವವರಿಗೆ, ‘ವ್ಯಕ್ತಿತ್ವ’ವೆಂದರೇನೆಂಬುದರ ಅರ್ಥ ಸಮರ್ಪಕವಾಗಿ ಗೊತ್ತಿಲ್ಲವೆಂದು ಹೇಳಬೇಕಾಗುತ್ತದೆ. ಕವಿಯಾದವನು ತನ್ನ ಸುತ್ತಣ ಬದುಕಿನ ಸಂವೇದನೆಗಳಿಗೆ ಎದೆ ತೆರೆದು ಬದುಕಬೇಕು ಎನ್ನುವುದಾದರೆ, ಅ ಸುತ್ತಣ ಬದುಕು ಇನ್ನಾವುದು ? ಹಾಗೆಯೆ ರಾಷ್ಟ್ರಜೀವನಕ್ಕೆ ಗಂಡಾಂತರ ಒದಗಿದ ವಿದೇಶೀ ಆಕ್ರಮಣದಂಥ ಪರಿಸ್ಥಿತಿಯಲ್ಲಿ ಎಚ್ಚತ್ತು ಎದ್ದುನಿಂತ, ರಾಷ್ಟ್ರ ಪ್ರಜ್ಞೆಗೆ ಕವಿಯಂಥ ಸೂಕ್ಷ್ಮಸಂವೇದನೆ ಉಳ್ಳ ಯಾರೂ ಕಾವ್ಯ ಮುಖದಲ್ಲಿ ಅಭಿವ್ಯಕ್ತಿಯನ್ನು ನೀಡದೆ ಇರುವುದು ಸಾಧ್ಯವಿಲ್ಲ. ಆದರೆ ಅಕ್ರಮಣಕಾರರನ್ನು ಎದುರಿಸುತ್ತಿರುವುದು, ಎದುರಿಸಬೇಕಾದದ್ದು ಭಾರತ ಸರ್ಕಾರ ಮಾತ್ರ ; ಈ ಸಂದರ್ಭದಲ್ಲಿ ಪದ್ಯ ಬರೆದು ನಾವು ಯಾತಕ್ಕೆ ‘ಸರ್ಕಾರಿ ಕವಿ’ಯಾಗಬೇಕು ಎಂದು ತಟಸ್ಥವಾಗುವುದು ನಿಜವಾದ ಕವಿಯ ಸ್ವತಂತ್ರ ವ್ಯಕ್ತಿತ್ವದ ಪ್ರಾಮಾಣಿಕತೆಯ ನಿದರ್ಶನವಲ್ಲ. ಹಾಗೆಯೆ ಅಂದಿನ ಪರಿಸ್ಥಿತಿಗೆ ಅಭಿವ್ಯಕ್ತಿಯನ್ನು ನೀಡಿದ ಕವನಗಳು (ಅವುಗಳಲ್ಲೂ ಕೆಟ್ಟ ಪದ್ಯಗಳಿದ್ದರೂ) ಅಪ್ರಾಮಾಣಿಕತೆಯ ನಿದರ್ಶನವಲ್ಲ. ಆದರೆ ಸರ್ಕಾರವೋ ಮತ್ತಾವುದೋ ಕೇಳಿ ಕೇಳಿದಾಗೆಲ್ಲಾ ಪದ್ಯ ಬರೆದುಕೊಡುವ ಅಭ್ಯಾಸಕ್ಕೆ ಬದ್ಧರಾಗಿ ಬದುಕುವುದು ಅಪ್ರಾಮಾಣಿಕವೆಂಬುದರಲ್ಲಿ ಸಂಶಯವಿಲ್ಲ. ದಸರಾಕ್ಕೊಂದು ಪದ್ಯ, ದೀಪಾವಳಿಗೊಂದು ಪದ್ಯ, ಪಂಚವಾರ್ಷಿಕ ಯೋಜನೆಗೊಂದು ಪದ್ಯ, ಕುಟುಂಬ ಯೋಜನೆಗೊಂದು ಪದ್ಯ, ಹೀಗೆ ವೇಳಾಪಟ್ಟಿಯನ್ನು ಹಾಕಿಕೊಂಡು ಕವಿಗಳಿಂದ ಪದ್ಯ ಬರೆಯಿಸಬಹುದೆಂಬ ಭ್ರಮೆಯಿಂದ ‘ಅಧಿಕಾರಸ್ಥ’ ಸಂಸ್ಥೆಗಳು ನಡೆದುಕೊಂಡರೆ, ಮತ್ತು ಅಂದಂದಿನುಚಿತಕ್ಕೆ ಹೊಸೆದುಕೊಡುವ ಕವಿಗಳ ಸಂಖ್ಯೆ ಹೆಚ್ಚಿಕೊಂಡರೆ, ಆಗ ಅದು ಸಾಹಿತ್ಯವಾಗದೆ, ಕೇವಲ ಸಾಮಯಿಕವಾದ ಅಪ್ರಾಮಾಣಿಕವಾದ ಒಂದು ಅಭ್ಯಾಸ ಮಾತ್ರವಾದೀತು. ಇಂಥದಕ್ಕೂ ಹೇರಳವಾಗಿ ನಿದರ್ಶನಗಳನ್ನು ಕೊಡಲು ಕಷ್ಟಪಡಬೇಕಾಗಿಲ್ಲ. ಒಂದು ಮಾತು ನಿಜ. ನಿಜವಾದ ಸಾಹಿತಿ, ಬದುಕಿನ ಬಗೆಗೆ ಸದಾ ಎಚ್ಚರವಿರುವ ಸಾಹಿತಿ, ತಾನು ಬದುಕುವ ಪರಿಸರದ ಯಾವ ಅನುಭವವನ್ನೇ ಆಗಲಿ, ಅದು ಕಾವ್ಯಯೋಗ್ಯವೆಂದು ಕಂಡುಬಂದಾಗ, ಅದಕ್ಕೆ ಅಭಿವ್ಯಕ್ತಿಯನ್ನು ನೀಡದಿರಲು ಸಾಧ್ಯವಿಲ್ಲ. ಆ ಅನುಭವವನ್ನು ಅವನು ತೀವ್ರವಾಗಿ ಪಟ್ಟಿದ್ದಾನೆಯೆ ಇಲ್ಲವೆ ಮತ್ತು ಅದಕ್ಕೆ ಸಮರ್ಪಕವಾದ ಅಭಿವ್ಯಕ್ತಿಯನ್ನು ನೀಡುವುದರ ಮೂಲಕ ಕಲಾವಂತಿಕೆಯನ್ನು ತಂದುಕೊಟ್ಟಿದ್ದಾನೆಯೆ ಇಲ್ಲವೆ ಎಂಬುದು ಮುಖ್ಯವೆ ಹೊರತು, ಅದು ಪ್ರಾಮಾಣಿಕವೆ ಅಥವಾ ಅಲ್ಲವೆ ಎಂಬ ಪ್ರಶ್ನೆ ಅಪ್ರಕೃತ. ಅಂಥ ಪ್ರಶ್ನೆ ಏಳುವುದು ಕವಿಯ ಅಭಿವ್ಯಕ್ತಿಯ ಅಸಮರ್ಪಕತೆಯಿಂದ, ಆ ಅನುಭವದ ಸಂಭಾವ್ಯತೆಯ ಬಗ್ಗೆ ಶಂಕೆ ಹುಟ್ಟಿದಾಗ. ಹಾಗೆ ಶಂಕೆ ಹುಟ್ಟುವುದು ಕವಿಯ ಪ್ರತಿಭೆಯ ಅಸಾಮರ್ಥ್ಯದಿಂದ. ಆದಕಾರಣ ಸಾಹಿತ್ಯದಲ್ಲಿ ಅಪ್ರಾಮಾಣಿಕತೆ ಎನ್ನುವುದು, ಆಯಾ ಕವಿಪ್ರತಿಭೆಯ ಅಸಾಮರ್ಥ್ಯದ ಪರಿಣಾಮ. ಆದರೆ ಪ್ರತಿಭೆಯ ಅಸಾಮರ್ಥ್ಯದಿಂದಾದುದೆಲ್ಲ ಅಪ್ರಾಮಾಣಿಕ ನಿರ್ಮಿತಿ ಎಂದು ಅರ್ಥವಲ್ಲ ; ಪ್ರತಿಭೆಯ ಅಸಾಮರ್ಥ್ಯದಿಂದ ದೋಷಮಯವಾದ ಅಥವಾ ಕೆಟ್ಟ ಕಾವ್ಯವೂ ನಿರ್ಮಿತವಾಗಬಹುದು;  ಕೆಟ್ಟ ಕಾವ್ಯವೆಲ್ಲಾ ಅಪ್ರಾಮಾಣಿಕ ಕಾವ್ಯವೆಂದು ಅರ್ಥವಲ್ಲ. ಕವಿಕೃತಿಯಲ್ಲಿ ಕಂಡುಬರುವ ಅಪ್ರಾಮಾಣಿಕತೆ ಎನ್ನುವುದು ಪ್ರತಿಭೆಯ ಅಸಾಮರ್ಥ್ಯದ ಪರಿಣಾಮಗಳಲ್ಲಿ ಒಂದು ಎನ್ನಬಹುದು.

ಗತಿಬಿಂಬ-೧೯೬೯


[1] ತೆರೆನೊರೆಬುದ್ಭು ದಂ ಸುೞಜಲಂ ತೆಗೆಪೆರ್ಚುಗೆ ಗುಣ್ಪು ಘೋಷಣಂ
ವರುಣನಗಂ ವಧೂಟಿಜನನಂ ಮಣಿಗಳ್ ವಡಬಾಗ್ನಿ ವಾಶ್ಚರಂ
ಹರಿಮೞಿಯಾವೆ  ವೇಳೆ ತೊೞಿಯೀಶತೆ ನೀರ್ಮೊಗೆವಭ್ರಮುರ್ವರಾ
ಪರಿವೃತಿ ನಾಗರಿಕ್ಕೆ ಬಗೆಗಾದೊಡೆ ಸೈತು ಸಮುದ್ರವರ್ಣನಂ
ತರುತತಿ ಬಳ್ಳಿ ಪುಲ್ಪೊದಱು ಪಕ್ಕಿ ಮೃಗಂ ಫಣಿಜೇನ್ ಮೃಗವ್ಯಮೊ-
ಜ್ಜರಮೆಸೆವುನ್ನತಿಕ್ಕೆ ಶಿಲೆ ಕೋಡು ಗುಹಾವಳಿ ತಾಪಸಾಶ್ರಮಂ
ದರಿಸರಿಯಾನೆಗಳ್ ಗಱುಕೆ ಮೇವ ಮುಗಿಲ್ ದೊಣೆ ಭಿಲ್ಲಪಳ್ಳಿ ಕಿ-
ನ್ನರ ಮಿಥುನಾಳಿಗಳ್ ವಿಷಯಮಾಗಿರೆ ತೀರ್ವುದು ಶೈಲವರ್ಣನಂ
-ಸೂಕ್ತಿ ಸುಧಾರ್ಣವ : ಪುಟ ೧೫-ಪದ್ಯ ೧ ; ಪುಟ ೨೫-ಪದ್ಯ ೧

[2] ನಮ್ಮ ಆಲಂಕಾರಿಕರು ಈ ಸಂಗತಿಯನ್ನು ‘ಅಸಂಭಾವ್ಯತೆ’ಯನ್ನು ಕುರಿತು ಚರ್ಚಿಸುವಲ್ಲಿ ಎತ್ತಿಕೊಂಡಿದ್ದಾರೆ. ಕವಿ ವರ್ಣಿಸುತ್ತಿರುವುದು ಸತ್ಯವೆ, ಪ್ರಾಮಾಣಿಕವೆ ಎಂಬುದು ಮುಖ್ಯವಲ್ಲ ಅವನ ವರ್ಣನೆಯನ್ನೋದಿದವರಿಗೆ, ಆ ಅನುಭವದ ಸತ್ಯತೆಯ ಬಗೆಗೆ ಶಂಕೆ ಬಾರದ ರೀತಿ ಅದು ಚಿತ್ರಿತವಾಗಿರಬೇಕು ಎಂಬುದು ಅವರ ಮತ.

[3] ಸಾಹಿತ್ಯ ಅಕಾಡೆಮಿಯಿಂದ ಬಹುಮಾನಿತರಾದ ಎಲ್ಲ ಹಿರಿಯ ಸಾಹಿತಿಗಳೂ ಆಗಲೆ ನಲವತ್ತು ವರ್ಷಗಳಿಂದಲೂ-ಎಂದರೆ ಈ ಸಾಹಿತ್ಯ ಅಕ್ಯಾಡೆಮಿ ಹುಟ್ಟಲು ಎಷ್ಟೋ ವರ್ಷಗಳ ಮೊದಲಿನಿಂದಲೇ-ಕೃತಿರಚನೆ ಮಾಡುತ್ತಿದ್ದಾರೆಂಬುದನ್ನು ಮರೆಯಬಾರದು.