ಹಿಂದುಸ್ತಾನಿ ಸಂಗೀತದಲ್ಲಿ ಧ್ರುಪದ-ಧಮಾರ, ಟಪ್ಪಾ, ಖ್ಯಾಲ, ಠುಮರಿ ಇತ್ಯಾದಿ. ಈ ಎಲ್ಲ ಸಂಗೀತ ಶೈಲಿಗಳಲ್ಲೂ ಗಾಯಕ-ವಾದಕರ ವಿಭಿನ್ನ ಘರಾನೆಗಳು ಕಂಡುಬರುತ್ತವೆ. ಆದರೆ ಇಲ್ಲಿ ಖ್ಯಾಲ ಗಾಯನದಲ್ಲಿ ಕಂಠ ಸಂಗೀತಕ್ಕೆ ಸಂಬಂಧಿಸಿದಂತೆ ಘರಾನೆ ಎಂದರೇನು ? ಅದರ ಅರ್ಥ ಘರನೆಗಳ ಮಹತ್ವ ಇಂದು ಅದರ ಅಗತ್ಯತೆಯ ಕುರಿತು ವಿವೇಚಿಸಲಾಗಿದೆ.

ಭಾರತದ ಪ್ರಾಚೀನ ಕಾಲದ ಗೇಯ ಪ್ರಕಾರವಾದ ಪ್ರಬಂಧ ಗಾಯನವೇ ಖ್ಯಾಲದ ತತ್ವಗಳ ಮೂಲ ಸೆಲೆಯಾಗಿದೆ. ಭಾರತೀಯ ಇತಿಹಾಸದ ಮಧ್ಯಯುಗದಲ್ಲಿ ಎಲ್ಲ ಶೈಲಿಗಳ, ಕಲೆಗಳ ಸರಳೀಕರಣ ಹಾಗೂ ಸಂಕ್ಷಿಪ್ತೀಕರಣ ಪ್ರವೃತ್ತಿಯಿಂದಾಗಿ ಪ್ರಬಂಧ ಗಾಯನವೇ ಧ್ರುಪದ ಆಕಾರದಲ್ಲಿ ಉಧ್ಭವಿಸಿ ಧ್ರುಪದ ಗಾಯನವನ್ನೇ ಸರಳೀಕರಣ ಹಾಗೂ ಸಂಕ್ಷಿಪ್ತೀಕರಣಗೊಳಿಸಿ ಖ್ಯಾಲ ಅಂದಾಜಿನಲ್ಲಿ ಹಾಡಲಾರಂಭಿಸಿದರು. ಖ್ಯಾಲ ಪೂರ್ಣ ರೂಪದಲ್ಲಿ ಭಾರತೀಯ ಗಾಯನ ಶೈಲಿಯಾಗಿದೆ.

ಹಿಂದುಸ್ತಾನಿ ಸಂಗೀತದಲ್ಲಿ ಖ್ಯಾಲ ಗಾಯನವು ಆಧುನಿಕ ಯುಗದ ಅತ್ಯಂತ ಜನಪ್ರಿಯ ಗಾಯನ ಪ್ರಕಾರವಾಗಿದೆ. ಇದರ ಸ್ವರೂಪ  ಅತ್ಯಂತ ವಿಸ್ತಾರಪೂರ್ಣವಾಗಿದ್ದು, ಅನನ್ಯವಾಗಿದೆ. ಪ್ರತಿಯೊಂದು ಕಾಲದ ಪ್ರತಿಯೊಬ್ಬ ಪ್ರಚಾರಕನ ಮೂಲಕ ಖ್ಯಾಲ ನವೀನಗೊಳಿಸುವ ಪ್ರಯತ್ನದ ಫಲ ಸ್ವರೂಪವಾಗಿ ವರ್ತಮಾನ ಖ್ಯಾಲದ ಸ್ವರೂಪ ನಮ್ಮೆದುರಿಗಿದೆ.

ಹಿಂದುಸ್ತಾನಿ ಸಂಗೀತದಲ್ಲಿ ಖ್ಯಾಲ ಗಾಯವದ ಘರಾನೆಗಳು ಮಹತ್ವಪೂರ್ಣ ಕೊಡುಗೆ ನೀಡಿವೆ. ಘರಾನಾ ಶಬ್ದದ ಮೂಲ ‘ಘರ’ ಶಬ್ದದಲ್ಲಿದೆ. ಅದನ್ನು ಸಂಸ್ಕೃತದ ‘ಗೃಹ’ ಶಬ್ಷದಿಂದ ತೆಗೆದುಕೊಳ್ಳಲಾಗಿದೆ. ‘ಘರಾನಾ’ ಶಬ್ದದ ಅರ್ಥ ವಂಶ, ಕುಲ, ಸಂಪ್ರದಾಯ, ಮನೆತನ, ಪರಿವಾರ, ಕುಟುಂಬ, ಪರಂಪರೆ ಎಂದಾಗುತ್ತದೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಘರಾನಾ ಶಬ್ದದ ತಾತ್ಪರ್ಯ ಖ್ಯಾಲ ಗಾಯನದ ವಿಭಿನ್ನ ಶೈಲಿಯಲ್ಲಿ ಪರಂಪರೆಯೊಂದಿಗೆ ಪಾಲನೆ ಮಾಡುವುದೇ ಆಗಿದೆ. ವಿಭಿನ್ನ ಘರಾನೆಗಳಿಂದ ಭಿನ್ನಭಿನ್ನಶೈಲಿಯನ್ನು ಪಡೆದು ಸಂಗೀತದ ಮಹತ್ವ ಹೆಚ್ಚಿದೆ ಮತ್ತು ‘ಘರಾನಾ’ ಪರಂಪರೆ ಪ್ರಾಚೀನ ಕಾಲದಿಂದ ಹಿಡಿದು ಇಂದಿಗೂ ರೂಢಿಯಲ್ಲಿದೆ. ಘರಾನಾ ಶಬ್ದದ ಹಿಂದೆ ‘ಶೈಲಿ’ ಶಬ್ದದ ಜೊತೆ ಜೊತೆಗೆ ಗುರು ಶಿಷ್ಯ ಪರಂಪರೆಯ ಹಾಗೂ ವಿಶಿಷ್ಟ ಅಂಗದಿಂದ ಹಾಡಬಹುದಾದ ಗಾಯನ ಶೈಲಿಗೆ ‘ಗಾಯಕಿ’ ಎಂದು ಕರೆಯುತ್ತಾರೆ. ಆದ್ದರಿಂದ ಯಾವುದೇ ಪ್ರತಿಭಾಶಾಲಿ ಗಾಯಕ ಕಲಾಕಾರರಿಂದ ಪ್ರಚಾರಕ್ಕೆ ಬಂದ ವಿಶಿಷ್ಟ ಗಾಯಕಿಗೆ ಗುರು-ಶಿಷ್ಯ ಪರಂಪರೆಯ ಮೂಲಕ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಸಂರಕ್ಷಿಸಿ ಇಡುವುದು ಇದನ್ನೇ ಘರಾನೆ ಎನ್ನುತ್ತಾರೆ.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಯಾವುದೇ ಕಲೆ ಅಥವಾ ವಿದ್ಯೆಯನ್ನು ಸುರಕ್ಷಿತವಾಗಿಡಲು ಗುರು-ಶಿಷ್ಯ ಪರಂಪರೆಯ ಶಿಕ್ಷಣ ಪದ್ಧತಿ ಪ್ರಚಾರದಲ್ಲಿದೆ. ಇದರಲ್ಲಿ ಗುರು ಶಿಷ್ಯನನ್ನು ತನ್ನ ಎದುರಿಗೆ ಕುಳ್ಳಿರಿಸಿಕೊಂಡು ಸಂಗೀತ ಶಿಕ್ಷಣ ನೀಡುತ್ತಿದ್ದನು. ಯಾವುದೇ ಲಿಖಿತ ಸಾಮಗ್ರಿ ಆಧಾರವಿಲ್ಲದೇ ಪಾಠಾಂತರ ಮೂಲಕ ಹಾಗೂ ಪ್ರತ್ಯಕ್ಷ ಮೌಖಿಕ ಶಿಕ್ಷಣ ನೀಡುವುದರ ಮೂಲಕ ಕೇವಲ ಸ್ಮರಣ ಶಕ್ತಿಯಿಂದ ಸಂಗೀತ ವಿದ್ಯೆ ಕಲಿಸುವ/ಕಲಿಯುವ ಕ್ರಮ ಇರುತ್ತಿತ್ತು. ಘರಾನೆಗೆ ಆಧಾರ ಕೇವಲ ಗುರುಶಿಷ್ಯ ಪರಂಪರೆ ಅಷ್ಟೇ ಅಲ್ಲ, ಅದರಲ್ಲಿ ವಿಶಿಷ್ಟ ಸೌಂದರ್ಯ ತತ್ವವೂ ಅಡಗಿದೆ. ಆ ಸೌಂದರ್ಯ ತತ್ವದಿಂದ ಕೂಡಿದ  ಗಾಯಕಿಯನ್ನು ಕಲಿಯಲು ಗುರುಶಿಷ್ಯ ಪರಂಪರೆಯ ನಿಯಮಗಳನ್ನು ಕಠೋರವಾಗಿ ಪಾಲಿಸಲಾಗುತ್ತದೆ.

ಸಂಗೀತ ಕಲೆ ಸಂಪೂರ್ಣ ಪ್ರಾಯೋಗಿಕ ಹಾಗೂ ಕ್ರಿಯಾತ್ಮಕವಾಗಿರುವುದರಿಂದ ಹಾಗೂ ಅದರ ಮಾಧ್ಯಮ ಸ್ವರವಾಗಿರುವದರಿಂದ ಸಂಗೀತ ಶಿಕ್ಷಣದಲ್ಲಿ ಪ್ರತ್ಯಕ್ಷ ಗುರುವಿನ ಮೂಲಕ ಗಾಯನ ವಿದ್ಯೆ ಮತ್ತು ಶಿಷ್ಯನಿಂದ ಅದರ ಪ್ರತ್ಯಕ್ಷ ಶ್ರವಣವಾಗಿ ಪುನಃ ಶಿಷ್ಯ ಅದರ ಅನುಕರಣೆ ಮಾಡುವುದೇ ನಿಜವಾದ ಶಿಕ್ಷಣ ವಿಧಾನವಾಗಿದೆ. ಸಂಗೀತ ಶಿಕ್ಷಣ ಪದ್ಧತಿಯಲ್ಲಿ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಇದೇ ‘ಗಾಯನ-ಶ್ರವಣ-ಅನುಕರಣೆ-ಗಾಯನ’ ಚಕ್ರ ಪ್ರಚಾರದಲ್ಲದೆ. ಗುರು ಸಂಗೀತವನ್ನು ತನ್ನ ಶಿಷ್ಯರಿಗೆ ನೀಡಿ ಯೋಗ್ಯ ಕಲಾಕಾರರಾಗುವಂತೆ ತಯಾರು ಮಾಡುತ್ತಿದ್ದರು. ಶಿಷ್ಯ ತನ್ನ ಹೆಸರು ಅಮರವಾಗಿಡುತ್ತಾನೆ, ತನ್ನಿಂದ ಪ್ರಚಾರಕ್ಕೆ ಬಂದ ‘ಗಾಯಕಿ’ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿಡುತ್ತಾನೆ ಎಂಬ ಭಾವನೆಯಿಂದ ಗುರು ಜನರು ವ್ಯಕ್ತಿಗರ ರೂಪದಿಂದ, ಸಂಗೀತ ಶಿಕ್ಷಣ ಶಿಷ್ಯರಿಗೆ ನೀಡುತ್ತಿದ್ದರು. ಶಿಷ್ಯರ ಕಡೆಗೆ ಪೂರ್ಣ ಗಮನ ನೀಡುತ್ತಿದ್ದರು. ಪರಿಣಾಮವಾಗಿ ಆವಾಜು ಹಚ್ಚುವಿಕೆ, ಕಂಠ ತಿರುಗುವಿಕೆ, ರಾಗದ ಬಢತ (ವಿಸ್ತಾರ) ಆಲಾಪ ಮಾಡುವ  ರೀತಿ, ತಾನ ಪ್ರಕಾರ ಮುಂತಾದ ಎಲ್ಲಾ ಅಂಶಗಳಿಂದ ಗುರುವಿನ ಗಾಯಕಿಯ ಪ್ರಭಾವ ಸ್ವಾಭಾವಿಕ ರೂಪದಿಂದ ಶಿಷ್ಯನ ಮೇಲೆ ಆಗುತ್ತಿತ್ತು. ಗುರು ಶಿಷ್ಯನನ್ನು ತನ್ನೊಂದಿಗೆ ಇಟ್ಟುಕೊಂಡು ಶಿಷ್ಯನಿಂದ ಕಠೋರ ಅಭ್ಯಾಸ ಮಾಡಿಸುತ್ತಿದ್ದರು. ಹೀಗೆ ಒಂದೇ ಪ್ರಕಾರದ ಗಾಯಕಿಯನ್ನು ಕಲಿಯುವ ಹಾಗೂ ಕೇಳುವ ಮತ್ತು ಅದರಲ್ಲೇ ತರಬೇತಿ ಹೊಂದುವುದರಿಂದ ಶಿಷ್ಯ ಪರಿಶ್ರಮ ಪಟ್ಟು ಆ ವಿಶಿಷ್ಟ ಘರಾನೆಯ ಗಾಯಕಿ ಹಾಡುವ ಕಲಾಕಾರರ ರೂಪದಲ್ಲಿ ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದನು. ಶಿಕ್ಷಣದ ಈ ವಿಧಾನದಿಂದ ಘರಾನಾ ಗಾಯಕಿ ಪರಂಪರೆಯ ಸಂರಕ್ಷಣೆಯಾಗುತ್ತಿತ್ತು. ಸಂಗೀತದ ಕ್ರಿಯಾತ್ಮಕ ಪಕ್ಷ ಮತ್ತು ಅದರ ಸೂಕ್ಷ್ಮತೆ ಆಳವಾದ ಅಧ್ಯಯನದ ವಿಷಯವಾಗಿದೆ. ಸಂಗೀತ ಒಂದು ಪ್ರಾಯೋಗಿಕ ಕಲೆಯಾಗಿದೆ. ಅದಕ್ಕೆ ಕಲಾಕಾರ ತನ್ನ ಘರಾನೆಯ ಮೂಲ ಪ್ರವರ್ತಕರ ಬಗ್ಗೆ ಶ್ರದ್ಧೆ, ಪ್ರೇಮ ಮತ್ತು ಶಿಷ್ಟತೆಯ ಭಾವನೆ, ಅವರ ಘರಾನೆಯ ನಿಯಮಗಳನ್ನು ಅಕ್ಷರಶಃ ಪಾಲಿಸಿಕೊಂಡು ಹೋಗುವ ಯೋಗ್ಯತೆ ಹಾಗೂ ಅದರ ಬಗ್ಗೆ ಗೌರವ, ಅಭಿಮಾನದ ಮನೋಭಾವನೆಯನ್ನು ಹೊಂದಿ ಸತತ ಪರಿಶ್ರಮದಿಂದ ಸಂಗೀತ ಸಾಧನೆ ಮಾಡಬೇಕಾಗುತ್ತದೆ. ಆದ್ದರಿಂದ ಖ್ಯಾಲ ಗಾಯನದಲ್ಲಿ ಶ್ರೇಷ್ಠಮಟ್ಟದ ಕಲಾಕಾರರನ್ನು ನಿರ್ಮಾಣ ಮಾಡುವುದಿದ್ದರೆ ಗುರುಶಿಷ್ಯ ಪರಂಪರೆಯ ವಿಶೇಷತೆಗಳನ್ನು ಸಮಾವೇಶಗೊಳಿಸುವುದು ಅತೀ ಅವಶ್ಯವಾಗಿದೆ. ಸಂಗೀತ ಗುರುಮುಖಿ ವಿದ್ಯೆಯಾಗಿದ್ದು ಅದರಲ್ಲಿ ಹೆಜ್ಜೆ ಹೆಜ್ಜೆಗೂ ಗುರುವಿನ ಮಾರ್ಗದರ್ಶನ ಬಹಳ ಅವಶ್ಯವಾಗಿದೆ.

ಘರಾನೆ ನಿರ್ಮಾಣ

ಘರಾನೆಗಳ ನಿರ್ಮಾಣವಾಗಲು ಹಲವು ಕಾರಣಗಳಿವೆ. ಘರಾನೆಗಳ ಅಡಿಪಾಯ ೮ ರಿಂದ ೧೨ನೇ ಶತಮಾನದ ಮಧ್ಯದಲ್ಲಿ ರಜಪೂತರ ಕಾಲದಲ್ಲಿ ಆಯಿತು ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ. ಈ ಸಂಗೀತಗಾರರಲ್ಲಿ ಹೆಚ್ಚಿನ ಪಕ್ಷ ಸಂಗೀತಗಾರರು ತಮ್ಮ ಸಂಗೀತ ವಿದ್ಯೆಯನ್ನು ಎಷ್ಟೊಂದು ಮುಚ್ಚಿಡುತ್ತಿದ್ದರೆಂದರೆ ತಮ್ಮ ಅತೀ ಸಮೀಪದ ಬಂಧುಗಳಿಗೆ ಮಾತ್ರ ಕಲಿಸುತ್ತಿದ್ದರು. ಉಳಿದವರ‍್ಯಾರಿಗೂ ಕಲಿಸುತ್ತಿರಲಿಲ್ಲ. ಈ ಸಂಕುಚಿತ ಮನೋಭಾವನೆಯ ಕಾರಣದಿಂದ ಸಂಗೀತ ಕ್ಷೇತ್ರದಲ್ಲಿ ಘರಾನೆಗಳು ಹುಟ್ಟಿಕೊಂಡವು. ರಜಪೂತರ ಕಾಲದಲ್ಲಿ ಘರಾನೆಗಳ ಹಿನ್ನೆಲೆಗೆ ಒತ್ತು ಸಿಕ್ಕಿ ಆಧುನಿಕ ಘರಾನೆಗಳ ಪೂರ್ಣ ವಿಕಾಸ ಆಂಗಲರ ಕಾಲದಲ್ಲಾಯಿತು. ಮುಸಲ್ಮಾನರ ಆಳ್ವಿಕೆಯ ನಂತರ ಶುದ್ಧ ರೂಪದಿಂದ ಹಿಂದೂ ಎನಿಸಿಕೊಂಡ ಎಲ್ಲ ಭಾರತೀಯ ಕಲೆಗಳ ಮೇಲೆ ಯವನರ ಸಂಸ್ಕೃತಿಯ ಪ್ರಭಾವ ಬೀಳಲಾರಂಭಿಸಿತು. ಮೊಗಲ ಯುಗದ ಕೆಲವು ವ್ಯವಸಾಯಿ ಕಲಾಕಾರರ ಒಂದು ಸಮುದಾಯ ಅಸ್ತಿತ್ವಕ್ಕೆ ಬಂದಿತು. ಅವರು ತಮ್ಮ ಕಲಾತ್ಮಕ ಸಂಗೀತದ ಪ್ರಸ್ತುತೀಕರಣದ ಜೊತೆಗೆ ಕೆಲವೊಂದು ತಮ್ಮದನ್ನು ಸೇರಿಸಿದರು. ಪ್ರತಿಯೊಂದು ಸಮುದಾಯದ ಪ್ರಮುಖ ಕಲಾಕಾರರ ಪ್ರಸ್ತುತೀಕರಣದಲ್ಲಿ ಅವರದೇ ಆದ ನೈಜ ಕೊಡುಗೆ ಇರುತ್ತಿತ್ತು. ಈ ರೀತಿ ಘರಾನಾ ಹಾಗೂ ಘರಾನಾದಾರ ಕಲಾಕಾರರು ಅಸ್ತಿತ್ವಕ್ಕೆ ಬಂದರು. ಅಕ್ಬರನ ಕಾಲದಲ್ಲಿ ಧ್ರುಪದದ ನಾಲ್ಕು ಬಾನಿಗಳು ಪ್ರಸಿದ್ಧವಾಗಿದ್ದವು. ಅದೇ ವ್ಯವಸಾಯೀ ಕಲಾಕಾರರಿಂದ ಮೊಗಲ ಬಾದಷಾಹರ ಕಾಲದಲ್ಲಿ ಹಾಗೂ ಅದರ ನಂತರ ಖ್ಯಾಲ ಗಾಯಕಿಯ ಘರಾನೆಗಳ ಅಡಿಪಾಯ ಬೀಳಲಾರಂಭಿಸಿತು. ಅದು ಮೊಗಲ ಯುಗದ ನತರ ಹೆಚ್ಚು ಸಮೃದ್ಧ ಹಾಗೂ ವಿಸ್ತೃತವಾಗಿ ಬೆಳೆಯಿತು. ಹೀಗೆ ಕಳೆದ ೨೫೦-೩೦೦ ವರ್ಷಗಳಿಂದ ಅರ್ಥಾರ್ ೧೮ನೆಯ ಶತಮಾನದ ನಂತರ ಆಧುನಿಕ ಖ್ಯಾಲ ಘರಾನೆ ಪ್ರಚಾರಕ್ಕೆ ಬಂದಿತು.

ಘರಾನೆಗಳ ನಿಯಮ

ಸಂಗೀತ ವಿದ್ವಾಂಸರು ಘರಾನೆಗಳಲ್ಲಿನ ಪರಸ್ಪರ ಭಿನ್ನತೆಯನ್ನು ಕಂಡು ಕೆಲವು ನಿಯಮಗಳನ್ನು ಮಾಡಿದರು. ಅವು ಘರಾನೆಯನ್ನು ನಿರ್ವಹಿಸಿಕೊಂಡು ಹೋಗಲು ಅವಶ್ಯಕವೆಂದು ತಿಳಿಯಲಾಯಿತು.

೧. ಯಾವುದೇ ಒಂದು ಘರಾನೆಗಾಗಿ ಕಡಿಮೆ ಎಂದರೆ ಮೂರು ತಲೆಮಾರಿನ ಅವಶ್ಯಕತೆ ಇರುತ್ತದೆ. ಘರಾನೆಯ ಅಂತರ್ಗತ ಗುರುಶಿಷ್ಯ ಪರಂಪರೆಯ ಅನುಸಾರ ಯಾವುದೇ ಯೋಗ್ಯ ಶಿಷ್ಯನಿಗೆ ಅವನ ಯೋಗ್ಯತೆಯ ಅನುಸಾರವಾಗಿ ತನ್ನ ಘರಾನೆಗೆ ಸೇರಿಸಿಕೊಳ್ಳುವ ಹಾಗೂ ತನ್ನದೇ ಮಗ ಮೊಮ್ಮಕ್ಕಳಾದಿ ಕುಟುಂಬದವರಿಗೆ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಸಂಗೀತ ಶಿಕ್ಷಣ ನೀಡುವುದು ಮತ್ತು ತಮ್ಮ ಪರಂಪರೆಗನುಸಾರವಾಗಿ ಅದನ್ನು ಬೆಳೆಸುವ ಈ ಎರಡೂ ಅಂಶಗಳಿವೆ.

೨. ಪ್ರತಿಯೊಂದು ಘರಾನೆಯ ಶಿಷ್ಯ ತನ್ನ ಗುರುವಿನ ಗಾಯನ ಶೈಲಿಯ ಅನುಕರಣೆ ಮಾಡುವುದು ಅವಶ್ಯವಾಗಿದೆ.

೩. ಪ್ರತಿಯೊಂದು ಘರಾನೆಯ ಕೆಲವು ಮುಖ್ಯ ರಾಗಗಳು ಮತ್ತು ಬಂದಿಶಗಳು ಇರುತ್ತವೆ. ಅದನ್ನು ಘರಾನೆಯ ಗಾಯಕ ಪ್ರಚಲಿತಗೊಳಿಸುತ್ತಾನೆ.

೪. ಘರಾನೆಗಳ ಗಾಯಕಿಯ ಮುಖ್ಯ ಸಿದ್ಧಾಂತ (ತತ್ವ)ಗಳನ್ನು ಪಾಲನೆ ಮಾಡುವುದು ಅವಶ್ಯಕವಾಗಿದೆ.

ಪ್ರತಿಯೊಂದು ಘರಾನೆಯ ಗಾಯಕಿ (ಶೈಲಿ) ಭಿನ್ನವಾಗಿರುತ್ತವೆ.

ಖ್ಯಾಲ ಘರಾನೆಯ ಗಾಯಕಿ ವಿಶೇಷತೆಗಳು :

೧. ಸ್ವರೋಚ್ಛಾರ ಅಂಗ (ಸ್ವರ-ಲಗಾವ)

೨. ಬಂದಿಶ ಪ್ರಯೋಗ

೩. ರಾಗ ವಿಸ್ತಾರ ಅಂಗ (ಆಲಾಪ)

೪. ತಾನ ಯೋಜನೆಯ ಅಂಗ

೫. ಲಯ ತಾಲ ಅಂಗ

೬. ರಾಗಗಳ ಆಯ್ಕ

೭. ನಿಯಮ ಪಾಲನೆ

ಮೇಲೆ ಹೇಳಿದ ಅಂಗಗಳ ರಾಗವಿಸ್ತಾರ ಬೇರೆ ಬೇರೆ ಘರಾನೆಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತದೆ ಮತ್ತು ಅದೇ ಘರಾನೆಯ ವಿಶೇಷತೆಯಾಗಿರುತ್ತದೆ.

ಖ್ಯಾಲ ಗಾಯನದ ಪ್ರಮುಖ ಘರಾನೆಗಳು:

ಘರಾನೆಯ ಮೂಲ ಪ್ರವರ್ತಕನ ಹೆಸರಿನಿಂದ ಅಥವಾ ಅವನು ವಾಸಿಸಿದ ಸ್ಥಳದಿಂದ ಘರಾನೆಯ ನಾಮಕರಣವಾಯಿತು. ಖ್ಯಾಲ ಗಾಯನದ ಘರಾನೆಗಳು ಈ ಕೆಳಗಿನಂತಿವೆ.

೧) ಗ್ವಾಲಿಯರ ಘರಾನೆ, ೨) ಆಗ್ರಾ ಘರಾನೆ, ೩) ಜಯಪುರ ಘರಾನೆ, ೪) ಕಿರಾನಾ ಘರಾನೆ, ೫) ಪಟಿಯಾಲಾ ಘರಾನೆ.

ಇಷ್ಟೇ ಅಲ್ಲದೇ ಎಲ್ಲಕ್ಕಿಂತ ಮೊದಲು ಖ್ಯಾಲದಲ್ಲಿ ಕವ್ವಾಲ ಬಚ್ಚಾಗಳ ಘರಾನೆ ಪ್ರಚಲಿತವಿತ್ತು ಮತ್ತು ನಂತರ ಉಳಿದ ಘರಾನೆಗಳು ಬೆಳಕಿಗೆ ಬಂದವು. ಅವುಗಳಲ್ಲಿ ಕೆಲವು ಕಾಲಾಂತರದಲ್ಲಿ ಅಪ್ರಚಲಿತವಾದವು. ಆ ಘರಾನೆಗಳು ಈ ಕೆಳಗಿನಂತಿವೆ.

೧) ರಾಮಪುರ ಘರಾನೆ, ೨) ಭೆಂಡಿ ಬಜಾರ ಘರಾನೆ, ೩) ಇಂದೌರ ಘರಾನೆ, ೪) ಮೇವಾತಿ ಘರಾನೆ, ೫) ಸಹಸವಾನ ಘರಾನೆ, ೬) ಖುರ್ಜಾ ಘರಾನೆ, ೭) ಸಹಾರನಪುರ ಘರಾನೆ, ೮) ಮಥುರಾ ಘರಾನೆ, ೯) ಗೋಖಲೆ ಘರಾನೆ, ೧೦) ಫತೇಪುರ ಸಿಕ್ರಿ ಘರಾನೆ, ೧೧) ಸಿಕಂದರಾಬಾದ ಘರಾನೆ ಇತ್ಯಾದಿ.

ಧ್ರುಪದದಿಂದ ಖ್ಯಾಲದ ಕಡೆಗೆ ಘರಾನೆಗಳ ಪಾರಸ್ಪರಿಕ ಸಂಬಂಧ

ಅಗ್ರಾ ಘರಾನೆಯ ಮೂಲ ಪುರುಷರಾದ ಹಾಜಿ ಸುಜಾನ ಖಾನ ಅಕ್ಬರನ ದರಬಾರಿನಲ್ಲಿ ಪ್ರಸಿದ್ಧ ಧ್ರುಪದ ಗಾಯಕರಾಗಿದ್ದರು. ನಂತರ ಧರ್ಮ ಪರಿವರ್ತನೆಗೊಂಡು ಮುಸಲ್ಮಾನರಾಗಿ ಹಾಜಿ ಸುಜಾನ ಖಾನರಾದರು. ಅವರ ಮಗ ದಾಯಮ ಖಾನ. ಇದೇ ಕುಟುಂಬದ ಹುಡುಗಿಯನ್ನು ತಾನಸೇನನ ಪರಿವಾರದಲ್ಲಿ ಮದುವೆ ಮಾಡಿಕೊಡಲಾಯಿತು. ಮತ್ತು ಇಲ್ಲಿನ ಗಂಡು ಮಕ್ಕಳ ಮದುವೆ ಅತ್ರೌಲಿ ಅಲಿಘಡದಲ್ಲಾಯಿತು. ಅಲ್ಲಿನ ಸಂಗೀತ ‘ರಂಗೀಲಾ ಘರಾನಾ’ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಆಗ್ರಾ ಘರಾನೆಯ ಉಸ್ತಾದ ಫಯಾಜ ಖಾನ ಸಫದರ ಹುಸೇನ ಖಾನರ ಪುತ್ರ ಮಹಮ್ಮದಲಿ ಖಾನರ ಮೊಮ್ಮಗ. ಇವರು ರಂಜಾನ ಖಾನ ರಂಗೀಲೆ ಪರಂಪರೆಯವರು.

ಆಗ್ರಾ ಘರಾನೆಯ ಘಘ್ಗೆ ಖುದಾಬಕ್ಷರು ಗ್ವಾಲಿಯರ ಘರಾನೆಯ ನಥ್ತನ ಪೀರ ಬಕ್ಷರಿಂದ ಸಂಗೀತ ಶಿಕ್ಷಣ ಪಡೆದರು. ನಥ್ತರ ಪೀರ ಬಕ್ಷರು ಆಗ್ರಾ ಘರಾನೆಯ ಖುದಾಬಕ್ಷರ ಪೂರ್ವಜರಾದ ಶ್ಯಾಮರಂಗರಿಂದ ಧ್ರುಪದ ಧಮಾರ ಶಿಕ್ಷಣ ಪಡೆದರು. ಈ ಪ್ರಕಾರ ಎರಡೂ ಘರಾನೆಗಳಲ್ಲಿ ಪಾರಸ್ಪರಿಕ ಸಂಬಂದ ಏರ್ಪಟ್ಟಿತು. ಬಡೇ ಮಹಮ್ಮದ ಖಾನ ಕವ್ವಾಲ ಬಚ್ಚಾ ಘರಾನೆಯವರು ಅದನ್ನು ಲಖನೌ ಘರಾನೆ ಎಂದು ಹೇಳುತ್ತಾರೆ. ಅವರು ಗ್ವಾಲಿಯರ ದರಬಾರಿಗೆ ಬಂದರು. ಅವರ ಗಾಯನದ ಪ್ರಭಾವ ಹದ್ದುಖಾನ ಹಸ್ಸುಖಾನ ಮೇಲೆ ಆಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಬಡೇ ಮಹಮ್ಮದ ಖಾನರಿಗೆ ೪ ಜನ ಮಕ್ಕಳು. ಅವರಲ್ಲಿ ಮುಬಾರಕ ಅಲಿ (ಗ್ವಾಲಿಯರ ಘರಾನೆ) ಪ್ರಸಿದ್ಧರಾಗಿದ್ದರು.

ಅಲ್ಲಾದಿಯಾ ಘರಾನೆ (ಜೈಪುರ ಘರಾನೆಯಿಂದ ಕವಲೊಡೆದಿದ್ದು); ಉಸ್ತಾದ ಅಲ್ಲಾದಿ ಖಾನರು ತಮ್ಮ ಗಾಯನವನ್ನು ಜನರು ಪ್ರಶಂಸೆ ಮಾಡಿದರೆ ಅದಕ್ಕೆ ಕಾರಣ ತಾವು ಮುಬಾರಕ ಅಲಿಖಾನರ (ಗ್ವಾಲಿಯರ ಘರಾನೆ) ಗಾಯಕಿಯನ್ನು ನೆನಪಿಸುತ್ತಾ ಹಾಡುತ್ತೇನೆ ಎಂದು ಸ್ವತಃ ಉಸ್ತಾದ ಅಲ್ಲಾದಿಯಾ ಖಾನರು ಹೇಳಿದ್ದಾರೆ. ಮುಂದೆ ಉಸ್ತಾದ ಅಲ್ಲಾದಿಯಾ ಖಾನರು ಜೈಪುರ ಘರಾನೆಯ ಉಪಶಾಖೆಯಾಗಿ ಅಲ್ಲಾದಿಯಾ ಘರಾನೆ (ಅತ್ರೌಲಿ ಘರಾನೆ) ಸ್ಥಾಪಿಸಿದರು. ಉಸ್ತಾದ ಅಲ್ಲಾದಿಯಾ ಖಾನರ ಪೂರ್ವಜರು ಹಿಂದುಗಳಾಗಿದ್ದು ಗೌಡ ಅಥವಾ ಶಾಂಡಿಲ್ಯ ಬ್ರಾಹ್ಮಣರಾಗಿದ್ದರು. ಇವರ ವಂಶದ ಮೂಲ ಪುರುಷ ವಿಶ್ವಂಬರ, ತಾನಸೇನನ ಗುರು ಸ್ವಾಮಿ ಹರಿದಾಸರು ಇವರ ಪೂರ್ವಜರಲ್ಲೊಬ್ಬರು. ದಿಲ್ಲಿಯಲ್ಲಿ ತಾನಸೇನನ ಯಾವ ಪರಂಪರೆ ಉಳಿದುಕೊಂಡಿತ್ತೊ ಅದರೊಂದಿಗೆ ಸಹರಾನಪುರ ಘರಾನೆ (ಧ್ರುಪದ) ಸೇರಿಕೊಂಡಿತು ಎಂದೆನಿಸುತ್ತದೆರ. ಈ ಘರಾನೆಯಲ್ಲಿ ಗುಲಾಮ ಝಾಕಿರ, ಬಹರಾಂ ಖಾನ ಮುಂತಾದವರು ಪ್ರಸಿದ್ಧ ಸಂಗೀತಜ್ಞರು, ಬಹರಾಂ ಖಾನ ಧ್ರುಪದ, ಖ್ಯಾಲ, ತಂತುವಾದ್ಯದಲ್ಲೂ ನಿಸ್ಸೀಮರು. ಇವರ ಶಿಷ್ಯರಲ್ಲಿ ಅವರ ಮಗ ಅಕ್ಬರ ಖಾನ, ಗಾಯಕಿ ಗೌಕೀಬಾಯಿ, ಅಲ್ಲಾ ಬಂದೇ ಖಾನ, ಬಂದೇ ಅಲಿ ಖಾನ ಮತ್ತು ಮಿಯಾಕಾಲೂ (ಪಟಿಯಾಲಾ ಘರಾನಾ) ಪ್ರಮುಖರು. ಬಹರಾಂ ಖಾನರ ಶಿಷ್ಯ ಬಂದೇ ಅಲಿ ಖಾನ ಇವರು ಗುಲಾಮ ಜಾಕೀರರ ಪುತ್ರರು. ಇವರು ತಮ್ಮ ತಂದೆಯಿಂದ ಹಾಗೂ ಚಿಕ್ಕಪ್ಪನಿಂದ ಸಂಗೀತ ಶಿಕ್ಷಣ ಪಡೆದರು. ಇವರು ಹಾಡುಗಾರಿಕೆ ಬಿಟ್ಟು ಬೀನವಾದನ ಕಲಿತು ಭಾರತದ ಶ್ರೇಷ್ಠ ಮಟ್ಟದ ಬೀನವಾದಕರಾಗಿ ಹೆಸರು ಪಡೆದರು. ಇದೇ ಬಂದೇ ಅಲಿ ಖಾನರಿಂದ ಮುಂದೆ ಕಿರಾನಾ ಘರಾನ ಉತ್ಪನ್ನವಾಯಿತು. ಬಹರಾಂ ಖಾನರ ಇನ್ನೊಬ್ಬ ಶಿಷ್ಯ ಮಿಯಾ ಕಾಲೂ ಪ್ರಸಿದ್ಧ ಸಾರಂಗಿ ವಾದಕರಲ್ಲೊಬ್ಬರು. ಇವರ ಇಬ್ಬರು ಪುತ್ರರು ಅಲಿಬಕ್ಷ ಹಾಗೂ ಫತಃ ಅಲಿ (ಅಲಿಯಾ ಫತ್ತೂ ಜೋಡಿ), ಈ ಈರ್ವರು ಸಹೋದರರು ಮೊದಲು ಗೋಕೀಬಾಯಿಯಿಂದ ನಂತಯರ ದಿಲ್ಲಿ ಘರಾನೆಯ ತಾನರಸ ಖಾನರಿಂದ ಮುಂದೆ ಪಟಿಯಾಲಾ ಘರಾನೆ ಸ್ಥಾಪನೆಯಾಯಿತು. ಗ್ವಾಲಿಯರ ಘರಾನೆಯ ಹದ್ದೂ ಖಾನರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಗೆ ಮಹಮ್ಮದ ಖಾನ ಹಾಗೂ ರೆಹಮತ ಖಾನ ಎಂದು ಇಬ್ಬರು ಪುತ್ರರು. ಎರಡನೆ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳ ವಿವಾಹ ಇನಾಯತ ಖಾನ (ಖ್ಯಾಲ ಗಾಯಕ)ರೊಂದಿಗೆ, ಎರಡನೆಯವಳು ಬಂದೇ ಅಲಿಖಾನ (ಬೀನಕಾರ) ರಿಗೆ ವಿವಾಹ ಮಾಡಿಕೊಡಲಾಯಿತು. ಉಲ್ಲೇಖನೀಯವೆಂದರೆ ಇನಾಯತ ಖಾನ ಮುಂದೆ ಸಹಸವಾನ ಘರಾನೆಯ ಆಧಾರಸ್ತಂಭವಾದರು.

ಹೀಗೆ ಹಲವಾರು ಘರಾನೆಗಳು ಪಾರಸ್ಪರಿಕ ಸಂಬಂಧ ಹೊಂದಿ ಕವಲೊಡೆದು ಬಂದು ಹಿಂದುಸ್ತಾನಿ ಸಂಗೀತದಲ್ಲಿ ಖ್ಯಾಲನ್ನು ಸಮೃದ್ಧಿಗೊಳಿಸಿವೆ. ಪ್ರತಿಯೊಂದು ಘರಾನೆಗೂ ತನ್ನದೇ ಆದ ವೈಶಿಷ್ಟ್ಯತೆ ಇದ್ದು ಘರಾನಾ ಗಾಯಕಿ ತತ್ವಗಳಾದ ಸ್ವರ ಹಚ್ಚುವಿಕೆ (ಸ್ವರ ಲಗಾವ), ಗಾಯಕಿ ಶುದ್ಧತೆ, ರಾಗದ ಬಢತ (ಅಲಾಪ ವಿಸ್ತಾರ), ಬದಿಶ ವಿಶೇಷತೆ – ಸ್ವರ ತಾಲ ಸಂಯೋಜನೆಯೊಂದಿಗೆ ಲಯತಾಲ ಅಂಗ, ತಾನ ಪ್ರಸ್ತಾರ ಅಂಗ, ರಾಗ ಮತ್ತು ತಾಲ ಚಯನ (ಆಯ್ಕೆ) ನಿಯಮಪಾಲನೆಯನ್ನು ಅಳವಡಿಸಿಕೊಂಡು ಘರಾನೆಗಳು ತಮ್ಮತನವನ್ನು ಉಳಿಸಿಕೊಂಡಿವೆ. ಹಲವಾರು ನದಿಗಳು ಸೇರಿ ಮಹಾಸಾಗರದಲ್ಲಿ ಒಂದಾಗುವಂತೆ, ಹಲವಾರು ಘರಾನಾ ಗಾಯಕಿ ಸೇರಿ ಹಿಂದುಸ್ತಾನಿ ಸಂಗೀತವನ್ನು ಸಮೃದ್ಧಗೊಳಿಸಿವೆ.

ಜಾಗತೀಕರಣದಿಂದಾಗಿ ಇಂದಿನ ಜನಜೀವನ ತುಂಬ ಸಂಕೀರ್ಣವಾಗಿರುವುದರಿಂದ, ಜನರಿಗೆ ಯಾವುದೇ ವಿದ್ಯೆ ಮುಖ್ಯವಾಗಿ ಸಂಗೀತವನ್ನು ತಾಳ್ಮೆಯಿಂದ ಕಲಿಯುವ ಅವಕಾಶ ಕಡಿಮೆಯಾಗಿದೆ. ಇಂದಿನ ಜೀವನ ಶೈಲಿ ಧಾವಂತವಾಗಿರುವುದರಿಂದ ಜನರು ಸಂಗೀತವನ್ನು ಕಲಿತರೆ ಕೇವಲ ಸಂಗೀತದಿಂದಲೇ ಜೀವನ ಸಾಗಿಸುವುದು ಕಷ್ಟವಾದ್ದರಿಂದ ಸಂಗೀತ ಈ ಹಿಂದಿನಂತೆ ಜೀವನಾಧಾರವಾಗುತ್ತಿಲ್ಲ. ಆದ್ದರಿಂದ ಘರಾನಾ ಪದ್ಧತಿ ಹಿಂದೆಂದಿಗಿಂತಲೂ ಈಗ ಅತೀ ಅವಶ್ಯವಾಗಿದೆ. ಇಂದು ಆಕಾಶವಾಣಿ, ದೂರದರ್ಶನ, ಟೇಪರೆಕಾರ್ಡರ್, ಕ್ಯಾಸೆಟ್. ಸಿ.ಡಿ. ಮಾಧ್ಯಮಗಳಿಂದ ಸಂಗೀತ ಕೇಳುವ, ಕಲಿಯುವ ಅವಕಾಶ ಇರುವುದರಿಂದ ಸಂಗೀತ ಕಲಿಯುವವರ ಮನ ಮಸ್ತಿಷ್ಕದಲ್ಲಿ ಸತತ ಒಂದಲ್ಲ ಒಂದು ಗಾಯಕಿಯ ಪ್ರಭಾವ ಬೀಳುತ್ತಿರುತ್ತದೆ. ಸಂಗೀತ ಕಲಿಯುವ ವಿದ್ಯಾರ್ಥಿ ಪ್ರತ್ಯಕ್ಷ ರೂಪದಲ್ಲಿ ಗುರುವಿನಿಂದ ಕಲಿಯುವುದಕ್ಕಿಂತ ಹೆಚ್ಚು ಕ್ಯಾಸೆಟ್, ಸಿ. ಡಿ. ಮಾಧ್ಯಮದಿಂದ ತಾನು ಇಷ್ಟ ಪಡುವ ಕಲಾಕಾರರ ಸಂಗೀತದ ನಕಲು ಮಾಡುವ ಪ್ರಯತ್ನದಲ್ಲಿ ನಿರತನಾಗಿರುತ್ತಾನೆ. ಈ ಒಂದು ಸ್ಥಿತಿಯಲ್ಲಿ ನಕಲು ಮಾಡುವುದಂತೂ ಜಾರಿಯಲ್ಲಿರುತ್ತದೆ. ಅಷ್ಟೇ ಅಲ್ಲ ಮುಂದಿನ ಪೀಳಿಗೆಯ ಗಾಯಕ ಯಾವುದೇ ಒಂದು ಘರಾನಾ ಗಾಯಕಿಯ ನಿಯಮಕ್ಕೊಳಪಟ್ಟು ಶ್ರೇಷ್ಠ ದರ್ಜೆಯ ಗಾಯಕನಾಗಲು ಸಾಧ್ಯವಿಲ್ಲ.

ಹಿಂದಿನಂತೆ ಇಂದು ಸಂಗೀತಕ್ಕೆ ರಾಜಾಶ್ರಯವಿಲ್ಲದ ಕಾರಣ ಗಾಯಕ ಶ್ರೋತೃಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಹಲವು ವರ್ಷಗಳವರೆಗೆ ಒಂದು ಘರಾನೆಯ ಸಂಗೀತವನ್ನು ಸತತವಾಗಿ ಅಭ್ಯಸಿಸಿ ಆ ಒಂದು ಘರಾನೆಯ ಚೌಕಟ್ಟಿನ ನಿಯಮಪಾಲನೆ ಮಾಡುತ್ತ ನಮ್ಮತನವನ್ನು ಕಾಯ್ದುಕೊಂಡು, ಉಳಿದ ಘರಾನೆಗಳ ಒಳ್ಳೆಯ ಅಂಶವನ್ನು ಸ್ವೀಕರಿಸಿದರೆ ತಪ್ಪೇನಿಲ್ಲ. ಪ್ರತಿಯೊಬ್ಬ ಸಂಗೀತ ಕಲಾವಿದನನ್ನು ಅವನ ಘರಾನೆ ಮೂಲಕ ಗುರುತಿಸುವ ಹಾಗೂ ಗೌರವಿಸುವ ಪರಿಪಾಠ ನಮ್ಮಲ್ಲಿದೆ. ಘರಾನೆದಾರ ಗಾಯಕಿಗೆ ಘರಾನೆ ಗುರುತಿಸುವಿಕೆಯಿಂದ ಹೆಚ್ಚಿನ ಗೌರವ ಅವನಿಗೆ ಸಂಗೀತ ಜಗತ್ತಿನಲ್ಲಿ ಪ್ರಾಪ್ತಿಯಾಗುತ್ತದೆ. ಯಾವುದೇ ಒಂದು ಘರಾನೆಗೆ ಬದ್ಧನಾಗದಿದ್ದಲ್ಲಿ ಆ ಗಾಯಕನಿಗೆ ಹೆಚ್ಚಿನ ಗೌರವ ಪ್ರಾಪ್ತಿಯಾಗುವುದಿಲ್ಲ. ಶಿಷ್ಯರನ್ನು ತಯಾರು ಮಾಡುವ ಯೋಗ್ಯತೆ ಒಳ್ಳೆಯ ಗುರುಗಳೂ ಹೊಂದಿರಬೇಕಾಗುತ್ತದೆ. ಒಳ್ಳೆಯ ಗುರುವಿನಂತೆ ಒಳ್ಳೆಯ ಶಿಷ್ಯನ ಮಹತ್ವವಿರುತ್ತದೆ. ಒಳ್ಳೆಯ ಶಿಷ್ಯನಿಂದ ಮಾತ್ರ ಗುರುಪರಂಪರೆಯನ್ನು ವಾಸ್ತವಿಕ ರೂಪದಲ್ಲಿ ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ. ‘ಗುರುಬಿನ ಜ್ಞಾನ ನಹೀಂ’ ಎಂದು ಗುರುವಿನಿಂದ ಪಡೆದ ವಿದ್ಯೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಗುರುವಿನ ಎದುರಿಗೆ ಕುಳಿತು ಯಾವುದೇ ಒಂದು ಘರಾನಾ ಪದ್ಧತಿಯಲ್ಲಿ ಸಂಗೀತ ಕಲಿಯುವಷ್ಟು ಸುಲಭವಾಗಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕಲಿಯಲು ಸಾಧ್ಯವಿಲ್ಲ. ಹಾಗೆ ಮಾಡಿದಲ್ಲಿ ಘರಾನಾ ಸಂಗೀತಕ್ಕೆ ಅಪಚಾರ ಮಾಡಿದಂತಾಗುತ್ತದೆ.

ಆಧುನಿಕ ಕಾಲದ ಶ್ರೋತ್ರಗಳ ಅಭಿರುಚಿಯಲ್ಲಿ ಬದಲಾವಣೆ ಆಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ತ್ವರಿತ ಗತಿಯ ಜೀವನದ ಮಧ್ಯೆ ಸಮಯದ ಅಭಾವದಿಂದಾಗಿ, ಹಿಂದೆ ದಿನವಿಡೀ ಕೇಳುತ್ತಿದ್ದ ಸಂಗೀತವನ್ನು ಇಂದು ನಿಗದಿತ ಸಮಯದಲ್ಲಿ, ಅದೂ ಒಂದೇ ಸಮಯದಲ್ಲಿ ಸರ್ವಾಂಗ ಸುಂದರ, ಪರಿಪೂರ್ಣ ಗಾಯನ ಕೇಳಲು ಉತ್ಸುಕರಾಗಿರುತ್ತಾರೆ.

ಇತ್ತೀಚೆಗೆ ಖ್ಯಾಲ ಗಾಯಕರು ಘರಾನಾ ಗಾಯಕಿಯನ್ನು ಸರಿಯಾಗಿ ಅಭ್ಯಸಿಸಿ, ಅದನ್ನು ಸರಿಯಾಗಿ ಅರಗಿಸಿಕೊಂಡು, ಆ ಪರಂಪರೆಯ ಹಿನ್ನೆಲೆಯಲ್ಲಿ ತಮ್ಮದೇ ಆದ ಸ್ವಂತಿಕೆಯನ್ನು ಹೊರ ಹೊಮ್ಮಿಸುವ ಗಾಯನವನ್ನು ಪ್ರಸ್ತುತಪಡಿಸುವುದು ಕಂಡು ಬರುತ್ತಿದೆ. ಖ್ಯಾಲ ಗಾಯನ ಗಾಯಕಿಯಲ್ಲಿ ಉಚ್ಚ ಮಟ್ಟದ ಸಂಶೋಧನೆ ಹಾಗೂ ಹೊಸದನ್ನು ತೋರಿಸುವಲ್ಲಿ  ಕ್ರಿಯಾಶೀಲರಾಗಿರುತ್ತಾರೆ. ಇಂತಹ ಕಲಾಕಾರರು ಅನೇಕ ಘರಾನೆದಾರ ಗಾಯಕಿ ಕೇಳಿ ನಂತರ ತಮ್ಮ ಸ್ವಂತ ಅವಿರತ ಸಾಧನೆ (ರಿಯಾಜ) ಯಿಂದ ಅವುಗಳ ಸುಂದರ ಸಮ್ಮಿಶ್ರಣ ಮಾಡಿ ಹಾಡಿ, ತಮ್ಮದೇ ಆದ ಪ್ರತ್ಯೇಕತೆಯ ಸುಂದರ ಗಾಯನ ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉದಾ: ದಿ. ಪಂ. ಕುಮಾರ ಗಂಧರ್ವರರು ಮೊದಲು ತಮ್ಮ ತಂದೆಯಿಂದ ನಂತರ ಗ್ವಾಲಿಯರ ಘರಾನೆಯ ಪ್ರೊ. ಬಿ. ಆರ್. ದೇವಧರರಿಂದ ಸಂಗೀತ ಕಲಿತರು. ಕೆಲವು ಶ್ರೇಷ್ಠ ಖ್ಯಾಲ ಗಾಯಕರ ಪ್ರಭಾವವೂ ಅವರ ಮೇಲೆ ಅಯಿತು. ಹಲವು ಘರಾನಾ ಗಾಯಕಿಗಳ ಸಮ್ಮಿಶ್ರಣ ಅವರ ಗಾಯಕಿಯಲ್ಲಿ ಇದ್ದು ಅದು ಸಂಪೂರ್ಣ ಭಿನ್ನ ರೀತಿಯದ್ದಾಗಿದೆ. ಯಾವುದೇ ಒಂದು ಗಾಯಕಿಯ ಚಿನ್ಹೆ ಅವರ ಗಾಯನದಲ್ಲಿ ಕಂಡುಬರುವುದಿಲ್ಲ. ಒಂದು ಸ್ವತಂತ್ರ ಗಾಯಕಿಯ ರೂಪದಲ್ಲಿ ಹೊಸ ಆಕಾರ, ಹೊಸ ಕಲ್ಪನೆಗಳು, ಒಂದು ರೀತಿಯ ತಾಜಾತನ ಅವರ ಹಾಡುಗಾರಿಕೆಯಲ್ಲಿದೆ.

ದಿ. ಪಂ. ಜಿತೇಂದ್ರ ಅಭಿಷೇಕಿಯವರು ಪಂ. ಜಗನ್ನಾಥ ಬುವಾ ಪುರೋಹಿತ (ಗುಣೀದಾಸ), ಪಂ. ನಿವೃತ್ತಿ ಬುವಾ ಸರನಾಯಕ, ಉಸ್ತಾದ್ ಅಜಮತ ಹುಸೇನರಿಂದ ಜಯಪುರ ಹಾಗೂ ಆಗ್ರಾ ಘರಾನೆಯ ಗಾಯಕಿ ಕಲಿತರು. ಈ ಎಲ್ಲ ಘರಾನಾ ಗಾಯಕಿಯ ಸೌಂದರ್ಯ ತತ್ವಗಳನ್ನು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡಿದ್ದಾರೆ. ಆದ್ದರಿಂದ ಅವರ ಗಾಯನ ಸ್ವತಂತ್ರ ರೂಪ ಪಡೆದುಕೊಂಡಿದ್ದು, ಅವರು ತಮ್ಮದೇ ಆದ ರೀತಿಯಲ್ಲಿ ಗಾಯನವನ್ನು ಪ್ರಸ್ತುತಪಡಿಸಿದ್ದಾರೆ. ಇಂದೋರ ಘರಾನೆಯ ಪ್ರವರ್ತಕ ಉಸ್ತಾದ್ ಅಮೀರಖಾನರು ತಮ್ಮ ತಂದೆ ಉಸ್ತಾದ್ ಶಾಹಮೀರ ಖಾನರಿಂದ ಭೆಂಡಿ ಬಜಾರ ಘರಾನೆಯ ಮೇರುಖಂಡ ಗಾಯಕಿ ಕಲಿತರು. ಕಿರಾನಾ ಘರಾನೆಯ ಉಸ್ತಾದ್ ಅಬ್ದುಲ್ ವಹೀದ ಖಾನರ ಗಾಯನದ ಪ್ರಭಾವ ಅಮೀರ ಖಾನರ ಮೇಲಾಯಿತು. ಕಿರಾನಾ ಘರಾನೆಯ ಸ್ವರದ ತನ್ಮಯತೆ, ಶಾಂತತೆ, ನೆಮ್ಮದಿಯಿಂದ ಕೂಡಿದ ಆಲಾಪ, ಘರಾನೆಯ ಸ್ವರದ ತನ್ಮಯತೆ, ಶಾಂತತೆ, ನೆಮ್ಮದಿಯಿಂದ ಕೂಡಿದ ಆಲಾಪ, ತಾವು ಪರಂಪರಾಗತವಾಗಿ ತಮ್ಮ ತಂದೆಯಿಂದ ಪಡೆದ ಮೇರು ಖಂಡ ಗಾಯಕಿ ಈ ಎರಡರ ಸಮ್ಮಿಶ್ರಣ ಮಾಡಿದ್ದು ಉಸ್ತಾದ್ ಅಮೀರಖಾನರ ಗಾಯಕಿಯಲ್ಲಿ ಸಿಗುತ್ತದೆ.

ಸುಪ್ರಸಿದ್ಧ ಸಿತಾರ ವಾದಕ ಉಸ್ತಾದ್ ವಿಲಾಯತ ಖಾನರು ಸಮಕಾಲೀನ ಎಲ್ಲ ಖ್ಯಾಲ ಗಾಯಕ ವಿದ್ವಜ್ಜನರ ಸಂಗೀತ ಕೇಳಿ ಅವುಗಳಿಂದ ಪ್ರಭಾವ ಹೊಂದಿ, ತಮ್ಮದೇ ಆದ ಸ್ವಂತ ಪ್ರತಿಭೆಯಿಂದ ‘ಗಾಯಕಿ ಅಂಗದ ಅಥವಾ ಖ್ಯಾಲ ಅಂಗ’ದಲ್ಲಿ ಸಿತಾರ ನುಡಿಸುವಲ್ಲಿ ಪ್ರಸಿದ್ಧರಾಗಿದ್ದಾರೆ.

ಉಸ್ತಾದ್ ಅಬ್ದುಲ ಹಲೀಮ ಜಾಫರ ಖಾನರು ಶ್ರೇಷ್ಠ ಮಟ್ಟದ ಸಿತಾರವಾದಕರು. ಅವರು ಉಸ್ತಾದ್ ಬಾಬು ಹಾಗೂ ಬಂದೇ ಅಲಿಖಾನರ ವಂಶದ ಮೆಹಬೂಬ ಖಾನರಿಂದ ಸಂಗೀತ ಶಿಕ್ಷಣ ಪಡೆದರು. ಅಬ್ದುಲ ಹಲೀಮ ಜಾಫರ ಖಾನರು ಸಿತಾರ ವಾದನದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿ, ಅದರಲ್ಲಿ ಪೂರ್ಣರೂಪದಲ್ಲಿ ಸಫಲರಾಗಿದ್ದಾರೆ. ಅದನ್ನು ‘ಜಾಫರ ಖಾನಿ’ ಬಾಜ ಎನ್ನಲಾಗುತ್ತದೆ. ಚಕ್ರಧುನ, ಮಾಧ್ಯಮಿ, ಕಲ್ಪನಾ, ಖುಸರೊವಾಣಿ, ಫುಲವನ ಮುಂತಾದ ಸ್ವತಃ ತಾವೇ ರಚಿಸಿದ ರಾಗಗಳ ಮೂಲಕ ಜಾಫರ ಖಾನಿ ಬಾಜನ್ನು ಬೆಳಕಿಗೆ ತಂದಿದ್ದಾರೆ.

ಹೀಗೆ ಆಧುನಿಕ ಕಾಲದಲ್ಲಿ ಯಾವುದೇ ಒಂದು ಘರಾನೆ ಸಂಗೀತ ಕಲಿತು, ಆ ಘರಾನೆಯಿಂದಲೇ ಪ್ರಸಿದ್ಧಿ ಪಡೆದು, ಗುರುತಿಸಲ್ಪಡುವ ಕಲಾವಿದರು ಸಿಗುವುದು ವಿರಳವಾಗಿದೆ. ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ರೂಪುಗೊಳ್ಳಲು ಸಂಗೀತ ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದ, ಇಂದು ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಬೇರೆ ಬೇರೆ ಘರಾನೆಗಳ ಸಂಗೀತ ಕಲಾವಿದರು ಸಂಗೀತ ಶಿಕ್ಷಣ ನೀಡುವುದರಿಂದ ಕೇವಲ ಗಾಯನ / ವಾದನ ಕಲಿಕೆಗೆ ಮಾತ್ರ ಒತ್ತು ನೀಡುವ ಪಠ್ಯಕ್ರಮವಿದೆ.

ಇಂದು ಭಾರತೀಯ ಸಂಗೀತದಲ್ಲಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಸಂಗೀತದ ಸಂಯೋಗದ ಹೆಚ್ಚು ಹೆಚ್ಚು ಪ್ರಯೋಗ ನಡೆಯುತ್ತಿರುವ ಕಾರಣ ಉದಾ: ಮೆಂಡೊಲಿನ, ವಾಯಲಿನ, ಗಿಟಾರ, ಝಾಂಝ್, ಮೃದಂಗ ಮುಂತಾದವುಗಳ ದ್ವಂದ್ವ ವಾದನ, ಈ ರೀತಿ ಘರಾನೆಯ ಮೂಲ ಸ್ವರೂಪವೇ ಗುರುತಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಎಲ್ಲಾ ದೃಷ್ಟಿಯಿಂದ ಖ್ಯಾಲ ಗಾಯನ ಪ್ರಣಾಳಿಯ ಪ್ರವರ್ತಕರಿಂದ ರೂಪಗೊಂಡು ಪ್ರಸಿದ್ಧಿ ಪಡೆದ ಸಂಗೀತವನ್ನು ಉಳಿಸಿ, ಬೆಳೆಸು ಸಂರಕ್ಷಿಸಿಕೊಂಡು ಹೋಗಬೇಕಾದರೆ ‘ಹಿಂದುಸ್ಥಾನಿ ಸಂಗೀತದಲ್ಲಿ ಘರಾನೆಗಳ ಮಹತ್ವ ಹಾಗೂ ಇಂದು ಅದರ ಅಗತ್ಯತೆ’ ಇದೆ.